ರೈಲ್ವೇ ಸಚಿವಾಲಯ
ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಸೀಲ್ದಾಹ್ ನಿಲ್ದಾಣದಲ್ಲಿ ಪ್ಲಾಟ್ ಫಾರ್ಮ್ ಗಳ ವಿಸ್ತರಣೆಯನ್ನು ಲೋಕಾರ್ಪಣೆ ಮಾಡಿದರು, ಹೊಸ ರೈಲು ಸೇವೆಗಳು ಮತ್ತು ನಾಶಿಪುರ್ ರೈಲ್ವೆ ಸೇತುವೆಯನ್ನು ಉದ್ಘಾಟಿಸಿದರು
ಶ್ರೀ ಅಶ್ವಿನಿ ವೈಷ್ಣವ್ ಅವರು ಬ್ರೈತ್ವೈಟ್ & ಕಂ. ಲಿಮಿಟೆಡ್ ಗೆ ಭೇಟಿ ನೀಡಿ, "ಸ್ವಚ್ಛತಾ ಹಿ ಸೇವಾ" ಅಭಿಯಾನದಲ್ಲಿ ಭಾಗವಹಿಸಿರು ಮತ್ತು ಗಾಂಧಿ ಭವನದಲ್ಲಿ ಗಾಂಧಿ ಜಯಂತಿಯನ್ನು ಸ್ಮರಿಸಿದರು
Posted On:
02 OCT 2024 8:46PM by PIB Bengaluru
ಕೇಂದ್ರ ರೈಲ್ವೆ, ವಾರ್ತಾ ಮತ್ತು ಪ್ರಸಾರ, ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಅವರು ಇಂದು ಕೋಲ್ಕತ್ತಾದ ಬ್ರೈಥ್ ವೇಟ್ & ಕಂ. ಲಿಮಿಟೆಡ್ ಗೆ ಭೇಟಿ ನೀಡಿದರು. ಅವರು ಬ್ರೈಥ್ ವೇಟ್ & ಕಂ. ಲಿಮಿಟೆಡ್ ನಲ್ಲಿ ಮಾರ್ಪಡಿಸಲಾದ ಗಾರ್ಡ್ ವ್ಯಾನ್ ಅನ್ನು ಸಹ ಪರಿಶೀಲಿಸಿದರು. ಶ್ರೀ ವೈಷ್ಣವ್ ಅವರು, ಶಿಕ್ಷಣ ಮತ್ತು ಈಶಾನ್ಯ ಪ್ರದೇಶದ ಅಭಿವೃದ್ಧಿ ರಾಜ್ಯ ಸಚಿವ ಶ್ರೀ ಸುಕಾಂತ ಮಜುಂದಾರ್ ಮತ್ತು ಇತರ ಗಣ್ಯರೊಂದಿಗೆ "ಸ್ವಚ್ಛತಾ ಹಿ ಸೇವಾ" ಅಭಿಯಾನದ ಭಾಗವಾಗಿ ಸ್ವಚ್ಛತಾ ಚಟುವಟಿಕೆಗಳಲ್ಲಿ ಭಾಗವಹಿಸಿದರು. ಯಾಂತ್ರಿಕೃತ ಶುಚಿಗೊಳಿಸುವ ಯಂತ್ರವನ್ನು ನಿರ್ವಹಿಸಿದರು ಮತ್ತು ಬ್ರೈತ್ ವೈಟ್ & ಕಂ. ಲಿಮಿಟೆಡ್ ನಲ್ಲಿ ಶ್ರಮದಾನಕ್ಕೆ ಕೊಡುಗೆ ನೀಡಿದರು. ಇದಲ್ಲದೆ, ಶ್ರೀ ವೈಷ್ಣವ್ ಅವರು ಬೆಲೆಘಾಟದ ಗಾಂಧಿ ಭವನಕ್ಕೆ ಭೇಟಿ ನೀಡಿ, ಮಹಾತ್ಮ ಗಾಂಧಿಯವರಿಗೆ ಗೌರವ ಸಲ್ಲಿಸಿದರು ಮತ್ತು ಗಾಂಧಿ ಜಯಂತಿಯ ಸ್ಮರಣಾರ್ಥ ಪ್ರಾರ್ಥನೆಗಳಲ್ಲಿ ಭಾಗವಹಿಸಿದರು.
ಇಂದು ಸೀಲ್ದಾಹ್ ರೈಲ್ವೇ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಶ್ರೀ ಅಶ್ವಿನಿ ವೈಷ್ಣವ್ ಅವರು 12-ಕೋಚ್ ಇಎಂಯು (ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್) ಸ್ಥಳೀಯ ರೈಲುಗಳಿಗೆ ಸ್ಥಳಾವಕಾಶ ಕಲ್ಪಿಸಲು ಐದು ಪ್ಲಾಟ್ ಫಾರ್ಮ್ ಗಳ (ಪ್ಲಾಟ್ ಫಾರ್ಮ್ ನಂ. 1 ರಿಂದ 5) ವಿಸ್ತರಣೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಈ ನವೀಕರಣವು ಪ್ರತಿದಿನ ಹೆಚ್ಚುವರಿ 3 ಲಕ್ಷ ಪ್ರಯಾಣಿಕರಿಗೆ ಪ್ರಯಾಣಿಸಲು ಅನುವು ಮಾಡಿಕೊಡುವ ಮೂಲಕ ನಿಲ್ದಾಣದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ, ಏಕೆಂದರೆ ಹೆಚ್ಚಿನ ಇಎಂಯು ರೈಲುಗಳನ್ನು 9-ಕೋಚ್ಗಳಿಂದ 12-ಕೋಚ್ ರೇಕ್ ಗಳಿಗೆ ಅಪ್ ಗ್ರೇಡ್ ಮಾಡಲಾಗಿದೆ. ಇದು ಉಪನಗರದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವನ್ನು ಒದಗಿಸುತ್ತದೆ. ಸಚಿವರು ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಹೊಸದಾಗಿ ಕಾರ್ಯಾರಂಭ ಮಾಡಿದ ನಾಶಿಪುರ್ ರೈಲ್ವೆ ಸೇತುವೆಯಲ್ಲಿ ಪ್ರಯಾಣಿಕರ ರೈಲು ಸೇವೆಗಳನ್ನು ಸಹ ಉದ್ಘಾಟಿಸಿದರು. ಈ ಸೇತುವೆಯು ಭಾಗೀರಥಿ ನದಿಯ ಎರಡೂ ಬದಿಗಳ ನಡುವೆ ಪ್ರಮುಖ ರೈಲು ಸಂಪರ್ಕವನ್ನು ಒದಗಿಸುತ್ತದೆ. ಇದು ಸ್ಥಳೀಯ ನಿವಾಸಿಗಳ ದೀರ್ಘಕಾಲದ ಬೇಡಿಕೆಯನ್ನು ಈಡೇರಿಸುತ್ತದೆ. ಈ ಸಂದರ್ಭವನ್ನು ಗುರುತಿಸಲು, ಶ್ರೀ ವೈಷ್ಣವ್ ಅವರು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಸೀಲ್ದಾಹ್ -ರಾಣಾಘಾಟ್ ಇಎಂಯು, ಅಜಿಮ್ ಗಂಜ್-ಕೊಸ್ಸಿಂಬಜಾರ್ ಎಂಇಎಂಯು (ಮುಖ್ಯ ಮಾರ್ಗದ ವಿದ್ಯುತ್ ಬಹುಘಟಕ) ರೈಲು ಮತ್ತು ಕೃಷ್ಣನಗರ-ಅಜಿಮ್ ಗಂಜ್ ಪ್ರಯಾಣಿಕರ ರೈಲಿಗೆ ಚಾಲನೆ ನೀಡಿದರು. ಜೊತೆಗೆ, ಅವರು ರಾಧಿಕಪೂರ್-ಆನಂದ್ ವಿಹಾರ್ ಟರ್ಮಿನಲ್ ಎಕ್ಸ್ ಪ್ರೆಸ್ ಅನ್ನು ಕೂಡ ಉದ್ಘಾಟಿಸಿದರು. ಇದು ಉತ್ತರ ದಿನಾಜ್ ಪುರ ಜಿಲ್ಲೆ, ಪಶ್ಚಿಮ ಬಂಗಾಳ ಮತ್ತು ದೆಹಲಿಯ ರಾಧಿಕಾಪುರ ನಡುವೆ ಮೊದಲ ನೇರ ರೈಲು ಸಂಪರ್ಕವನ್ನು ಸ್ಥಾಪಿಸಿತು. ಈ ಹೊಸ ಸೇವೆಯು ಪಶ್ಚಿಮ ಬಂಗಾಳದ ಮಾಲ್ಡಾ ಮತ್ತು ಬಿಹಾರದ ಕತಿಹಾರ್ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳ ವಿದ್ಯಾರ್ಥಿಗಳು, ರೋಗಿಗಳು, ವ್ಯಾಪಾರಿಗಳು ಮತ್ತು ನಿವಾಸಿಗಳಿಗೆ ಗಮನಾರ್ಹವಾಗಿ ಪ್ರಯೋಜನವನ್ನು ನೀಡುತ್ತದೆ.
ನಿಲ್ದಾಣಕ್ಕೆ ವಿಶಿಷ್ಟವಾದ ಭೋಜನದ ಅನುಭವವನ್ನು ಸೇರಿಸುವ ಮೂಲಕ, ಶ್ರೀ ವೈಷ್ಣವ್ ಅವರು ಸೀಲ್ದಾಹ್ ನಲ್ಲಿ ರೈಲು ಬೋಗಿ ರೆಸ್ಟೋರೆಂಟ್ ಉದ್ಘಾಟಿಸಿದರು. ಇದು ಪ್ರಯಾಣಿಕರಿಗೆ ರೈಲ್ವೆ-ಥೀಮ್ ಅಲಂಕಾರದ ಆಕರ್ಷಣೆಯನ್ನು ರುಚಿಕರ ಆಹಾರದೊಂದಿಗೆ ಸಂಯೋಜಿಸುತ್ತದೆ. ಶ್ರೀ ವೈಷ್ಣವ್ ಅವರು ಸೀಲ್ದಾಹ್ ನಲ್ಲಿ ಪ್ರದರ್ಶನಕ್ಕಿಟ್ಟಿರುವ ಹಳೆಯ ಚಲನಚಿತ್ರ ಪೋಸ್ಟರ್ ಗಳ ಪ್ರದರ್ಶನವನ್ನು ಸಹ ವೀಕ್ಷಿಸಿದರು. ಇದು ಭಾರತೀಯ ರೈಲ್ವೆಗಳಲ್ಲಿ ಚಿತ್ರೀಕರಿಸಲಾದ ಪ್ರಸಿದ್ಧ ಭಾರತೀಯ ಚಲನಚಿತ್ರಗಳ ದೃಶ್ಯಗಳನ್ನು ಚಿತ್ರಿಸುತ್ತದೆ. ಅವರು ಸೀಲ್ದಾಹ್ ನಲ್ಲಿರುವ ಒನ್ ಸ್ಟೇಷನ್ ಒನ್ ಪ್ರಾಡಕ್ಟ್ (OSOP) ಸ್ಟಾಲ್ ಗೆ ಭೇಟಿ ನೀಡಿದರು ಮತ್ತು ಸ್ಥಳೀಯ ಉದ್ಯಮಶೀಲತೆಯನ್ನು ಉತ್ತೇಜಿಸುವ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಬಳಸಿಕೊಂಡು ಸ್ಥಳೀಯ ಉತ್ಪನ್ನಗಳನ್ನು ಖರೀದಿಸಿದರು.
ಕೇಂದ್ರ ಸರ್ಕಾರದ ಅಡಿಯಲ್ಲಿ ಕೋಲ್ಕತ್ತಾ ಮೆಟ್ರೋದ ವಿಸ್ತರಣೆಯಲ್ಲಿ ಆಗಿರುವ ಅದ್ಭುತ ಪ್ರಗತಿಯನ್ನು ಒತ್ತಿ ಹೇಳಲು ಸಚಿವರು ಈ ಅವಕಾಶವನ್ನು ಬಳಸಿಕೊಂಡರು. 1972 ರಿಂದ 2014 ರ ನಡುವೆ ಕೇವಲ 28 ಕಿ.ಮೀ. ಕೊಲ್ಕತ್ತಾ ಮೆಟ್ರೋ ಹಳಿ ಉದ್ದವನ್ನು ಅಭಿವೃದ್ಧಿಪಡಿಸಲಾಗಿತ್ತು ಎಂದು ಅವರು ಹೇಳಿದರು. ಆದರೆ, ಕಳೆದ ದಶಕದಲ್ಲಿ, 2014 ರಿಂದ 2024 ರವರೆಗೆ, ಹೆಚ್ಚುವರಿ 38 ಕಿ.ಮೀ. ಹಾಕಲಾಗಿದೆ, ಇದು ರಾಜ್ಯದಲ್ಲಿ ಮೆಟ್ರೋ ಜಾಲವನ್ನು ಹೆಚ್ಚಿಸಲು ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ. ಇದಲ್ಲದೆ, ರಾಜ್ಯದಲ್ಲಿ 9 ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳು ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಉಲ್ಲೇಖಿಸಿದರು. ಇದು ಪಶ್ಚಿಮ ಬಂಗಾಳದ ಜನರಿಗೆ ಹೈಸ್ಪೀಡ್ ರೈಲು ಸಂಪರ್ಕದ ಹೊಸ ಯುಗವನ್ನು ಸೂಚಿಸುತ್ತದೆ ಎಂದು ಹೇಳಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ "ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್, ಸಬ್ಕಾ ಪ್ರಯಾಸ್" ದೃಷ್ಟಿಕೋನವನ್ನು ಪ್ರತಿಬಿಂಬಿಸುವ ಪಶ್ಚಿಮ ಬಂಗಾಳದ ರೈಲ್ವೆ ಅಭಿವೃದ್ಧಿಗೆ ಕೇಂದ್ರ ಸರ್ಕಾರವು ಬಜೆಟ್ ಹಂಚಿಕೆಯನ್ನು ಗಣನೀಯವಾಗಿ ಹೆಚ್ಚಿಸಿರುವುದನ್ನು ಅವರು ಶ್ಲಾಘಿಸಿದರು. ಭೂ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಲು ಸಹಕರಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ ಶ್ರೀ ವೈಷ್ಣವ್, ಭೂಸ್ವಾಧೀನ ಸವಾಲುಗಳಿಂದಾಗಿ ಪಶ್ಚಿಮ ಬಂಗಾಳದಲ್ಲಿ 61 ರೈಲ್ವೆ ಯೋಜನೆಗಳು ಪ್ರಸ್ತುತ ಬಾಕಿ ಉಳಿದಿವೆ ಎಂದು ಹೇಳಿದರು. ಈ ಯೋಜನೆಗಳಲ್ಲಿ ಹೂಡಿಕೆ ಮಾಡಲು ಕೇಂದ್ರ ಸರ್ಕಾರ ಸಿದ್ಧವಿದೆ, ಆದರೆ ಸಕಾಲದಲ್ಲಿ ಪೂರ್ಣಗೊಳಿಸಲು ರಾಜ್ಯ ಸರ್ಕಾರದ ಸಹಕಾರ ಅತ್ಯಗತ್ಯ ಎಂದು ಅವರು ಪುನರುಚ್ಚರಿಸಿದರು.
ಬಾಲೂರ್ಘಾಟ್ ಸಂಸದ ಮತ್ತು ಶಿಕ್ಷಣ ಮತ್ತು ಈಶಾನ್ಯ ಪ್ರದೇಶದ ಅಭಿವೃದ್ಧಿ ರಾಜ್ಯ ಸಚಿವರಾದ ಶ್ರೀ ಸುಕಾಂತ ಮಜುಂದಾರ್, ಬಂದರು, ಸಾಗಣೆ ಮತ್ತು ಜಲಮಾರ್ಗಗಳ ರಾಜ್ಯ ಸಚಿವ ಹಾಗೂ ಬಂಗಾನ್ ನ ಸಂಸದರಾದ ಶ್ರೀ ಶಾಂತನು ಠಾಕುರ್, ಪಶ್ಚಿಮ ಬಂಗಾಳದ ಶಾಸಕರು ಶ್ರೀ ಸಮಿಕ್ ಭಟ್ಟಾಚಾರ್ಯ, ರಾಣಾಘಾಟ್ ನ ಸಂಸದ ಶ್ರೀ ಜಗನ್ನಾಥ್ ಸರ್ಕಾರ್, ರಾಯ್ ಗಂಜ್ ನ ಮಾಜಿ ಸಂಸದೆ ಶ್ರೀಮತಿ ದೇಬಶ್ರೀ ಚೌಧರಿ, ಪದ್ಮಶ್ರೀ ಪ್ರಶಸ್ತಿ ವಿಜೇತ ಶ್ರೀ ಪ್ರಹ್ಲಾದ್ ರಾಯ್ ಅಗರ್ವಾಲ ಮತ್ತು ಪೂರ್ವ ರೈಲ್ವೆಯ ಜನರಲ್ ಮ್ಯಾನೇಜರ್ ಶ್ರೀ ಮಿಲಿಂದ್ ದೇವುಸ್ಕರ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
*****
(Release ID: 2061482)
Visitor Counter : 36