ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav g20-india-2023

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತಿನ ಗಾಂಧಿನಗರದಲ್ಲಿ 4 ನೇ ಜಾಗತಿಕ ನವೀಕರಿಸಬಹುದಾದ ಇಂಧನ ಹೂಡಿಕೆದಾರರ ಸಮಾವೇಶ ಮತ್ತು ಪ್ರದರ್ಶನ (RE-INVEST) ಉದ್ಘಾಟಿಸಿದರು


ಭಾರತದ ವೈವಿಧ್ಯತೆ, ಪ್ರಮಾಣ, ಸಾಮರ್ಥ್ಯ, ಸಾಧ್ಯತೆ ಮತ್ತು ಕಾರ್ಯಕ್ಷಮತೆಯು ಜಾಗತಿಕ ಅಪ್ಲಿಕೇಶನ್‌ ಗಳಿಗೆ ಭಾರತೀಯ ಪರಿಹಾರಗಳಿಗೆ ದಾರಿ ಮಾಡಿಕೊಡುತ್ತವೆ: ಪ್ರಧಾನಮಂತ್ರಿ

ಪ್ರಧಾನಮಂತ್ರಿಯವರ ನೇತೃತ್ವದಲ್ಲಿ ಜಾಗತಿಕ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತವು ಪ್ರಮುಖ ಸ್ಥಾನವನ್ನು ಪಡೆದುಕೊಳ್ಳುತ್ತಿದೆ: ಶ್ರೀ ಪ್ರಹ್ಲಾದ್ ಜೋಶಿ

Posted On: 16 SEP 2024 8:18PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತಿನ ಗಾಂಧಿನಗರದಲ್ಲಿರುವ ಮಹಾತ್ಮ ಮಂದಿರದಲ್ಲಿ 4 ನೇ ಜಾಗತಿಕ ನವೀಕರಿಸಬಹುದಾದ ಇಂಧನ ಹೂಡಿಕೆದಾರರ ಸಮಾವೇಶ ಮತ್ತು ಪ್ರದರ್ಶನವನ್ನು (RE-INVEST) ಉದ್ಘಾಟಿಸಿದರು. ಮೂರು ದಿನಗಳ ಸಮ್ಮೇಳನವು 200 ಗಿ.ವ್ಯಾ.ಗಿಂತಲೂ ಹೆಚ್ಚು ಸ್ಥಾಪಿತ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯದ ಭಾರತದ ಗಮನಾರ್ಹ ಸಾಧನೆಗೆ ಪ್ರಮುಖ ಕೊಡುಗೆ ನೀಡಿದವರನ್ನು ಗೌರವಿಸಿತು. ಸಾರ್ವಜನಿಕ ಮತ್ತು ಖಾಸಗಿ ವಲಯದ ಕಂಪನಿಗಳು, ಸ್ಟಾರ್ಟ್‌ಅಪ್‌ ಗಳು ಮತ್ತು ಪ್ರಮುಖ ಉದ್ಯಮಗಳ ಅತ್ಯಾಧುನಿಕ ಆವಿಷ್ಕಾರಗಳ ಪ್ರದರ್ಶನಕ್ಕೂ ಶ್ರೀ ಮೋದಿ ಭೇಟಿ ನೀಡಿದರು.

ಭಾರತದ ವೈವಿಧ್ಯತೆ, ಪ್ರಮಾಣ, ಸಾಮರ್ಥ್ಯ, ಸಾಧ್ಯತೆ ಮತ್ತು ಕಾರ್ಯಕ್ಷಮತೆ ಎಲ್ಲವೂ ವಿಶಿಷ್ಟವಾಗಿದೆ, ಇದು ಜಾಗತಿಕ ಅಪ್ಲಿಕೇಶನ್‌ ಗಳಿಗೆ ಭಾರತೀಯ ಪರಿಹಾರಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಭಾರತವಷ್ಟೇ ಅಲ್ಲ, ಇಡೀ ವಿಶ್ವವೇ ಭಾರತವು 21ನೇ ಶತಮಾನದ ಅತ್ಯುತ್ತಮ ಆಯ್ಕೆ ಎಂದು ನಂಬುತ್ತದೆ ಎಂದು ಪ್ರಧಾನಿ ಹೇಳಿದರು. ಕಳೆದ ಒಂದು ತಿಂಗಳಲ್ಲಿ ಭಾರತವು ಆಯೋಜಿಸಿದ ಜಾಗತಿಕ ಕಾರ್ಯಕ್ರಮಗಳನ್ನು ವಿವರಿಸಿದ ಶ್ರೀ ಮೋದಿ, ಈ ತಿಂಗಳ ಆರಂಭದಲ್ಲಿ ಜಾಗತಿಕ ಫಿನ್‌ಟೆಕ್ ಉತ್ಸವವನ್ನು ಆಯೋಜಿಸಲಾಗಿತ್ತು, ಮೊದಲ ಅಂತರರಾಷ್ಟ್ರೀಯ ಸೌರ ಉತ್ಸವ,  ಜಾಗತಿಕ ಸೆಮಿಕಂಡಕ್ಟರ್ ಶೃಂಗಸಭೆಯಲ್ಲಿ ಪ್ರಪಂಚದಾದ್ಯಂತದ ಜನರು ಭಾಗವಹಿಸಿದ್ದರು, ಭಾರತವು 2 ನೇ ಏಷ್ಯಾ-ಪೆಸಿಫಿಕ್ ನಾಗರಿಕ ವಿಮಾನಯಾನ ಸಚಿವರ ಸಮ್ಮೇಳನವನ್ನು ನಡೆಸಿತು ಮತ್ತು ಇಂದು ಭಾರತವು ಹಸಿರು ಇಂಧನ ಸಮ್ಮೇಳನವನ್ನು ಆಯೋಜಿಸುತ್ತಿದೆ ಎಂದು ಅವರು ಹೇಳಿದರು.

ಪ್ಯಾರಿಸ್‌ನಲ್ಲಿ ನಿಗದಿಪಡಿಸಿದ ಹವಾಮಾನ ಬದ್ಧತೆಯನ್ನು ಗಡುವಿಗೆ 9 ವರ್ಷಗಳ ಮೊದಲೇ ಸಾಧಿಸಿದ ಮೊದಲ ಜಿ 20 ರಾಷ್ಟ್ರ ಭಾರತವಾಗಿದೆ. 2030 ರ ವೇಳೆಗೆ 500 ಗಿ.ವ್ಯಾ. ನವೀಕರಿಸಬಹುದಾದ ಇಂಧನ ಗುರಿಯನ್ನು ಸಾಧಿಸುವ ದೇಶದ ಗುರಿಗಳನ್ನು ಶ್ರೀ ಮೋದಿ ವಿವರಿಸಿದರು ಮತ್ತು ಸರ್ಕಾರವು ಹಸಿರು ಪರಿವರ್ತನೆಯನ್ನು ಜನಾಂದೋಲನವಾಗಿ ಪರಿವರ್ತಿಸಿದೆ ಎಂದು ಹೇಳಿದರು. ಮೇಲ್ಛಾವಣಿ ಸೌರ ವ್ಯವಸ್ಥೆಗಾಗಿ ಭಾರತದ ವಿಶಿಷ್ಟ ಯೋಜನೆ - ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ ಕುರಿತು ಅಧ್ಯಯನ ಮಾಡುವಂತೆ ಅವರು ಸಲಹೆ ನೀಡಿದರು, ಈ ಯೋಜನೆಯಡಿಯಲ್ಲಿ ಸರ್ಕಾರವು ಪ್ರತಿ ಕುಟುಂಬಕ್ಕೆ ಮೇಲ್ಛಾವಣಿ ಸೌರ ವ್ಯವಸ್ಥೆ ಅಳವಡಿಕೆಗಾಗಿ ಧನಸಹಾಯ ಒದಗಿಸುತ್ತದೆ ಮತ್ತು ಸ್ಥಾಪನೆಗೆ ಸಹಾಯ ಮಾಡುತ್ತದೆ. ಈ ಯೋಜನೆಯ ಮೂಲಕ, ಭಾರತದ ಪ್ರತಿಯೊಂದು ಮನೆಯೂ ವಿದ್ಯುತ್ ಉತ್ಪಾದಕ ಮನೆಯಾಗುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಯೋಜನೆಯಡಿ 1 ಕೋಟಿ 30 ಲಕ್ಷಕ್ಕೂ ಹೆಚ್ಚು ಕುಟುಂಬಗಳು ನೋಂದಣಿ ಮಾಡಿಸಿಕೊಂಡಿದ್ದು, ಇದುವರೆಗೆ 3.25 ಲಕ್ಷ ಮನೆಗಳಲ್ಲಿ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ ಎಂದರು. ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಯು ಉದ್ಯೋಗ ಸೃಷ್ಟಿ ಮತ್ತು ಪರಿಸರ ಸಂರಕ್ಷಣೆಯ ಮಾಧ್ಯಮವಾಗಿ ಸುಮಾರು 20 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತಿದೆ ಎಂದು ಶ್ರೀ ಮೋದಿ ಹೇಳಿದರು. ಈ ಯೋಜನೆಯಡಿಯಲ್ಲಿ 3 ಲಕ್ಷ ಯುವಕರನ್ನು ನುರಿತ ಮಾನವಶಕ್ತಿಯನ್ನಾಗಿ ಸಿದ್ಧಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು. ಇವರಲ್ಲಿ ಒಂದು ಲಕ್ಷ ಯುವಕರು ಸೋಲಾರ್ ಪಿವಿ ತಂತ್ರಜ್ಞರಾಗಿರುತ್ತಾರೆ. ಪ್ರತಿ 3 ಕಿಲೋವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆಯು 50-60 ಟನ್ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ತಡೆಯುತ್ತದೆ ಎಂದು ಅವರು ಹೇಳಿದರು, ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟದಲ್ಲಿ ಪ್ರತಿ ಕುಟುಂಬದ ಕೊಡುಗೆಗಳನ್ನು ಪ್ರಧಾನಿಯವರು ಗಮನಿಸಿದರು.

ಕೇಂದ್ರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಶ್ರೀ ಪ್ರಹ್ಲಾದ್ ಜೋಶಿ ಅವರು ಸಭೆಯನ್ನುದ್ದೇಶಿಸಿ ಉದ್ಘಾಟನಾ ಭಾಷಣ ಮಾಡಿದರು ಮತ್ತು ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು ಜಾಗತಿಕ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಹೇಗೆ ಪ್ರಮುಖ ಸ್ಥಾನವನ್ನು ಪಡೆಯುತ್ತಿದೆ ಎಂಬುದನ್ನು ಒತ್ತಿ ಹೇಳಿದರು. ಭಾರತದ ರೋಮಾಂಚಕ ಮತ್ತು ವೇಗವಾಗಿ ಬೆಳೆಯುತ್ತಿರುವ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಹೂಡಿಕೆ ಮಾಡುವಂತೆ ಅವರು ಎಲ್ಲಾ ಪಾಲುದಾರರಿಗೆ ಮನವಿ ಮಾಡಿದರು. ಭಾರತದಲ್ಲಿ ನವೀಕರಿಸಬಹುದಾದ ಇಂಧನದ ಅಪಾರ ಸಾಮರ್ಥ್ಯವನ್ನು ಬಳಸಿಕೊಳ್ಳುವ ಬದ್ಧತೆಯನ್ನು ಅವರು ಪುನರುಚ್ಚರಿಸಿದರು.

Image

ಶ್ರೀ ಜೋಶಿ ಅವರು RE-INVEST ಸಮಾವೇಶದಲ್ಲಿ ಭಾಗವಹಿಸುವ ರಾಜ್ಯಗಳಿಗೆ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ನಮ್ಮ ರಾಜ್ಯಗಳು ಹಸಿರು ಭವಿಷ್ಯಕ್ಕಾಗಿ ಭಾರತದ ಸಾಮೂಹಿಕ ದೃಷ್ಟಿಯನ್ನು ಎತ್ತಿ ತೋರಿಸುವುದು ಮಾತ್ರವಲ್ಲದೆ ನವೀಕರಿಸಬಹುದಾದ ಇಂಧನ ವಲಯದಲ್ಲಿ ಹೂಡಿಕೆಗಳನ್ನು ಆಕರ್ಷಿಸುವಲ್ಲಿ ಮತ್ತು ಪೋಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅವರು ಹೇಳಿದರು. ಶ್ರೀ ಪ್ರಹ್ಲಾದ್ ಜೋಶಿ ಅವರು ದೇಶದಲ್ಲಿ 200 ಗಿ.ವ್ಯಾ.ಸ್ಥಾಪಿತ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯವನ್ನು ಸಾಧಿಸುವಲ್ಲಿ ಗಮನಾರ್ಹ ಕೊಡುಗೆ ನೀಡಿದ ರಾಜ್ಯಗಳು ಮತ್ತು ಉದ್ಯಮಗಳನ್ನು ಗೌರವಿಸಿದರು. ನವೀಕರಿಸಬಹುದಾದ ವಲಯದಲ್ಲಿನ ಯಶಸ್ಸಿನ ಕಥೆಗಳಿಂದ ಕಲಿಯುವಂತೆ ಮತ್ತು ತಮ್ಮ ಅಗತ್ಯಗಳಿಗೆ ಸರಿಹೊಂದುವಂತೆ ಅವುಗಳನ್ನು ಅಳವಡಿಸಿಕೊಳ್ಳುವಂತೆ ಇತರ ರಾಜ್ಯಗಳನ್ನು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ್, ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್, ಆಂಧ್ರಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಢ ಮತ್ತು ಗೋವಾ ಮುಖ್ಯಮಂತ್ರಿಗಳು ಉಪಸ್ಥಿತರಿದ್ದರು.

ಹಿನ್ನೆಲೆ

4 ನೇ ಜಾಗತಿಕ ನವೀಕರಿಸಬಹುದಾದ ಇಂಧನ ಹೂಡಿಕೆದಾರರ ಸಮಾವೇಶ ಮತ್ತು ಪ್ರದರ್ಶನ (RE-INVEST) ನವೀಕರಿಸಬಹುದಾದ ಇಂಧನ ಉತ್ಪಾದನೆ ಮತ್ತು ನಿಯೋಜನೆಯಲ್ಲಿ ಭಾರತದ ಪ್ರಭಾವಶಾಲಿ ಪ್ರಗತಿಯನ್ನು ಎತ್ತಿ ತೋರಿಸುತ್ತದೆ. ಎರಡೂವರೆ ದಿನ ಸಮ್ಮೇಳನ ನಡೆಯಲಿದ್ದು, ವಿಶ್ವದೆಲ್ಲೆಡೆಯಿಂದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಪಾಲ್ಗೊಳ್ಳುವವರು ಮುಖ್ಯಮಂತ್ರಿಗಳ ಸಭೆ, ಸಿಇಒ ದುಂಡುಮೇಜಿನ ಸಭೆ ಮತ್ತು ನವೀನ ಹಣಕಾಸು, ಹಸಿರು ಜಲಜನಕ ಮತ್ತು ಭವಿಷ್ಯದ ಇಂಧನ ಪರಿಹಾರಗಳ ಕುರಿತು ವಿಶೇಷ ಚರ್ಚೆಗಳು ಒಳಗೊಂಡಂತೆ ಸಮಗ್ರ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಜರ್ಮನಿ, ಆಸ್ಟ್ರೇಲಿಯಾ, ಡೆನ್ಮಾರ್ಕ್ ಮತ್ತು ನಾರ್ವೆ ಕಾರ್ಯಕ್ರಮದಲ್ಲಿ ಪಾಲುದಾರ ರಾಷ್ಟ್ರಗಳಾಗಿ ಭಾಗವಹಿಸುತ್ತಿವೆ. ಗುಜರಾತ್ ಅತಿಥೇಯ ರಾಜ್ಯವಾಗಿದ್ದು, ಆಂಧ್ರಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ತೆಲಂಗಾಣ ಮತ್ತು ಉತ್ತರ ಪ್ರದೇಶ ಪಾಲುದಾರ ರಾಜ್ಯಗಳಾಗಿ ಭಾಗವಹಿಸುತ್ತಿವೆ.

ಸಾರ್ವಜನಿಕ ಮತ್ತು ಖಾಸಗಿ ವಲಯದ ಕಂಪನಿಗಳು, ಸ್ಟಾರ್ಟ್‌ಅಪ್‌ ಗಳು ಮತ್ತು ಪ್ರಮುಖ ಉದ್ಯಮಗಳು ಅತ್ಯಾಧುನಿಕ ಆವಿಷ್ಕಾರಗಳನ್ನು ಪ್ರದರ್ಶಿಸುತ್ತವೆ. ಈ ಪ್ರದರ್ಶನವು ಸುಸ್ಥಿರ ಭವಿಷ್ಯದ ಕಡೆಗೆ ಭಾರತದ ಬದ್ಧತೆಯನ್ನು ಒತ್ತಿಹೇಳುತ್ತದೆ.

 

*****



(Release ID: 2055585) Visitor Counter : 18


Read this release in: English , Urdu , Hindi , Manipuri