ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
2024 ರ ನವೆಂಬರ್ ನಲ್ಲಿ ಯುರೋಪಿಯನ್ ಹೈಡ್ರೋಜನ್ ಸಪ್ತಾಹಕ್ಕೆ ಭಾರತವು ವಿಶೇಷ ಪಾಲುದಾರನಾಗಲಿದೆ
ರಫ್ತು ಹೆಚ್ಚಿಸಲು ಭಾರತವು ಇ.ಯು. ಹಸಿರು ನಿಯಮಗಳನ್ನು ಸೂಕ್ತವಾಗಿ ಬಗೆಹರಿಸಲಿದೆ : ಇಂಧನ ಸಚಿವಾಲಯದ ಕಾರ್ಯದರ್ಶಿ ಪಂಕಜ್ ಅಗರ್ವಾಲ್.
ಅಮೋನಿಯಾ ಆಮದು ಟರ್ಮಿನಲ್ ಗಳಿಗಾಗಿ ನೆದರ್ ಲ್ಯಾಂಡ್ಸ್ ನ ಚಾನೆ ಟರ್ಮಿನಲ್ ಮತ್ತು ಎಸಿಎಂಇ ಕ್ಲೀನ್ ಟೆಕ್ ನಡುವೆ ಉದ್ದೇಶಿತ ಪತ್ರಕ್ಕೆ ಅಂಕಿತ
ಹಸಿರು ಹೈಡ್ರೋಜನ್ ಆಂದೋಲನವನ್ನು ಮುನ್ನಡೆಸುವಲ್ಲಿ ಸಕ್ರಿಯ ಪಾತ್ರ ವಹಿಸುವಂತೆ ಯುವಜನರಿಗೆ ಸೈನಾ ನೆಹ್ವಾಲ್ ಕರೆ
ಉದಯಿಸುತ್ತಿರುವ ಹೈಡ್ರೋಜನ್ ಆರ್ಥಿಕತೆಯಲ್ಲಿ 2050ರ ವೇಳೆಗೆ 4 ಕೋಟಿಗೂ ಅಧಿಕ ಹಸಿರು ಉದ್ಯೋಗ ಸೃಷ್ಟಿ: ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಪ್ರೊ.ಅಜಯ್ ಕೆ.ಸೂದ್
Posted On:
12 SEP 2024 7:40PM by PIB Bengaluru
ಹೊಸದಿಲ್ಲಿಯ ಭಾರತ್ ಮಂಟಪದಲ್ಲಿ ನಡೆದ ಹಸಿರು ಹೈಡ್ರೋಜನ್ ಕುರಿತ ಅಂತರರಾಷ್ಟ್ರೀಯ ಸಮ್ಮೇಳನದ (ಐಸಿಜಿಎಚ್ -2024) ಎರಡನೇ ದಿನ, 2024 ರ ನವೆಂಬರ್ ನಲ್ಲಿ ನಡೆಯಲಿರುವ ಯುರೋಪಿಯನ್ ಹೈಡ್ರೋಜನ್ ಸಪ್ತಾಹಕ್ಕೆ ಭಾರತದ ವಿಶೇಷ ಪಾಲುದಾರಿಕೆಯ ಘೋಷಣೆಗೆ ಸಾಕ್ಷಿಯಾಯಿತು. ರಫ್ತುಗಳನ್ನು ಹೆಚ್ಚಿಸಲು ಇ.ಯು. ವಿನ ಹಸಿರು ನಿಯಮಗಳನ್ನು ಸೂಕ್ತವಾಗಿ ಬಗೆರಿಹರಿಸುವ ಭಾರತದ ಉದ್ದೇಶವನ್ನು ಈ ದಿನ ಎತ್ತಿ ತೋರಿಸಿದೆ. ಇದಲ್ಲದೆ, ಅಮೋನಿಯಾ ಆಮದು ಟರ್ಮಿನಲ್ ಗಳಿಗಾಗಿ ನೆದರ್ಲ್ಯಾಂಡ್ಸ್ನ ಚಾನೆ ಟರ್ಮಿನಲ್ ಮತ್ತು ಭಾರತದ ಎಸಿಎಂಇ ಕ್ಲೀನ್ಟೆಕ್ ನಡುವೆ ಉದ್ದೇಶ ಪತ್ರಕ್ಕೆ (ಎಲ್ಒಐ) ಸಹಿ ಹಾಕಲಾಯಿತು.
ಹಸಿರು ಹೈಡ್ರೋಜನ್ ಕ್ಷೇತ್ರದ ವ್ಯಾಪ್ತಿ ಮತ್ತು ಸವಾಲುಗಳ ಬಗ್ಗೆ ಇಯು, ಆಸ್ಟ್ರೇಲಿಯಾ ಮತ್ತು ನೆದರ್ಲ್ಯಾಂಡ್ ಗಳ ದೃಷ್ಟಿಕೋನಗಳನ್ನು ಹೊರತರುವ ಅಧಿವೇಶನಗಳನ್ನು ಈ ಕಾರ್ಯಕ್ರಮವು ನಡೆಸಿತು. ಭಾರತ ಸರ್ಕಾರದ ಇಂಧನ ಸಚಿವಾಲಯದ ಕಾರ್ಯದರ್ಶಿ ಪಂಕಜ್ ಅಗರ್ವಾಲ್ ಮತ್ತು ಹೈಡ್ರೋಜನ್ ಯುರೋಪ್ ಸಿಇಒ ಜೋರ್ಗೊ ಚಾಟ್ಜಿಮಾರ್ಕಕಿಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಇಯು ಅಧಿವೇಶನವು ಜಾಗತಿಕ ಡಿಕಾರ್ಬನೈಸೇಶನ್ ಪ್ರಯತ್ನಗಳಲ್ಲಿ ಹಸಿರು ಹೈಡ್ರೋಜನ್ ನ ನಿರ್ಣಾಯಕ ಪಾತ್ರವನ್ನು ಪ್ರಮುಖವಾಗಿ ಕೇಂದ್ರೀಕರಿಸಿತು. ಪಳೆಯುಳಿಕೆ ಇಂಧನಗಳಿಗೆ ಪ್ರತಿಸ್ಪರ್ಧಿಯಾಗಿ ಹೈಡ್ರೋಜನ್ ಬಳಕೆಯನ್ನು ಹೆಚ್ಚಿಸಲು ಮತ್ತು ಉತ್ತೇಜಿಸಲು, ಇಂಗಾಲಕ್ಕೆ ಪರಿಣಾಮಕಾರಿಯಾಗಿ ಬೆಲೆ ನಿಗದಿಪಡಿಸಲು ಸಹಾಯ ಮಾಡಲು ಯುರೋಪಿಯನ್ ಯೂನಿಯನ್ (ಇಯು) ತನ್ನ ಹೊರಸೂಸುವಿಕೆ ವ್ಯಾಪಾರ ವ್ಯವಸ್ಥೆಯನ್ನು (ಇಟಿಎಸ್) ಸುಧಾರಿಸುವತ್ತ ಗಮನ ಹರಿಸಿದೆ ಎಂಬುದನ್ನು ಚರ್ಚೆಯು ಎತ್ತಿ ತೋರಿಸಿತು.
ಇದರ ನಂತರ, ಭಾರತ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿ ಪಂಕಜ್ ಜೈನ್ ಅವರು ಸಿಎಸ್ಐಆರ್ಒ ಹೈಡ್ರೋಜನ್ ಇಂಡಸ್ಟ್ರಿ ಮಿಷನ್ನಿನ ನಾಯಕ ಡಾ. ಪ್ಯಾಟ್ರಿಕ್ ಹಾರ್ಟ್ಲೆ ಅವರೊಂದಿಗೆ ಮಾತನಾಡಿದರು.ಅವರು ಅಭಿಪ್ರಾಯಗಳನ್ನು ಹಂಚಿಕೊಂಡರು.
ಉದ್ಯಮದ ಬೆಳವಣಿಗೆ ಪ್ರಮಾಣವನ್ನು ಹೆಚ್ಚಿಸಲು, ತಂತ್ರಜ್ಞಾನದ ಪ್ರಗತಿ ಮತ್ತು ಕಾರ್ಮಿಕ ಪಡೆಯ ಅಭಿವೃದ್ಧಿಯನ್ನು ಹೆಚ್ಚಿಸಲು ದೇಶೀಯವಾಗಿ ಮತ್ತು ಅಂತರರಾಷ್ಟ್ರೀಯವಾಗಿ, ವಿಶೇಷವಾಗಿ ಭಾರತದಂತಹ ದೇಶಗಳೊಂದಿಗೆ ಸಹಯೋಗ ಅತ್ಯಗತ್ಯ. ನಿಯಂತ್ರಕ ಚೌಕಟ್ಟುಗಳು, ಶೇಖರಣಾ ಪರಿಹಾರಗಳು ಮತ್ತು ದೊಡ್ಡ ಪ್ರಮಾಣದ ನವೀಕರಿಸಬಹುದಾದ ಇಂಧನ ಲಭ್ಯತೆ/ಪ್ರವೇಶವು ಹೈಡ್ರೋಜನ್ ವಲಯಕ್ಕೆ ನಿರ್ಣಾಯಕ ಸವಾಲುಗಳಾಗಿ ಉಳಿದಿದೆ ಎಂದವರು ಹೇಳಿದರು.
ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ. ಅಭಯ್ ಕರಂಡಿಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ನೆದರ್ಲ್ಯಾಂಡ್ಸ್ ಅಧಿವೇಶನವು ಜಾಗತಿಕ ಹೈಡ್ರೋಜನ್ ಪ್ರಗತಿಯನ್ನು ಮುನ್ನಡೆಸಲು ನೆದರ್ಲ್ಯಾಂಡಿನ ಸಮಗ್ರ ಕಾರ್ಯತಂತ್ರದ ಆಳವಾದ ಅವಲೋಕನವನ್ನು ನಡೆಸಿತು. ಹೈಡ್ರೋಜನ್ ಇಂಟರ್ನ್ಯಾಷನಲ್ ಪ್ರೋಗ್ರಾಂನ ಸಂಯೋಜಕ ಮತ್ತು ಆರ್ಥಿಕ ವ್ಯವಹಾರಗಳು ಹಾಗು ಹವಾಮಾನ ನೀತಿ ಸಚಿವಾಲಯದ ಹಿರಿಯ ನೀತಿ ಸಲಹೆಗಾರ ಹಾನ್ ಫೀನ್ಸ್ಟ್ರಾ ಈ ಅಧಿವೇಶನದಲ್ಲಿ ಭಾಗವಹಿಸಿದ್ದರು; ಹ್ಯಾವೆನ್ಬೆಡ್ರಿಜ್ಫ್ ರೋಟರ್ಡ್ಯಾಮ್ನ ವ್ಯವಹಾರ ವ್ಯವಸ್ಥಾಪಕ ಮಾರ್ಕ್-ಸೈಮನ್ ಬೆಂಜಮಿನ್ಸ್,; ಮತ್ತು ಭಾರತ, ನೇಪಾಳ ಮತ್ತು ಭೂತಾನ್ ಗೆ ನೆದರ್ ಲ್ಯಾಂಡ್ಸ್ ನ ರಾಯಭಾರಿ ಶ್ರೀಮತಿ ಮಾರಿಸಾ ಗೆರಾರ್ಡ್ಸ್ ಭಾಗವಹಿಸಿದ್ದರು.
ಸಮಗ್ರ ಅಧಿವೇಶನಗಳ ಜೊತೆಗೆ, ಈ ದಿನವು ಹಲವಾರು ಆಕರ್ಷಕ ಚಟುವಟಿಕೆಗಳನ್ನು ಒಳಗೊಂಡಿತ್ತು, ಇದರಲ್ಲಿ ಯುವ ಅಧಿವೇಶನವು ಒಂದು ಪ್ರಮುಖ ಅಂಶವಾಗಿತ್ತು. ಎಂಎನ್ ಆರ್ ಇ ಕಾರ್ಯದರ್ಶಿ ಶ್ರೀ ಅಜಯ್ ಯಾದವ್ ಅವರು ಸ್ವಾಗತ ಭಾಷಣ ಮಾಡಿದರು. ಆರ್ಥಿಕತೆ ಮತ್ತು ಸಮಾಜಗಳನ್ನು ಸಬಲೀಕರಣಗೊಳಿಸುವಲ್ಲಿ ಇಂಧನದ ಪಾತ್ರವನ್ನು ಒತ್ತಿ ಹೇಳಿದರು. ಹಸಿರು ಹೈಡ್ರೋಜನ್ ವಲಯದಲ್ಲಿ ಆವಿಷ್ಕಾರ ಮತ್ತು ನಾಯಕತ್ವದ ಪಾತ್ರಗಳನ್ನು ತೆಗೆದುಕೊಳ್ಳಲು ಅವರು ಯುವಜನರನ್ನು ಪ್ರೋತ್ಸಾಹಿಸಿದರು. ಆ ಮೂಲಕ ಅವರು ಭಾರತದ ಇಂಧನ ಭವಿಷ್ಯವನ್ನು ರೂಪಿಸುವಲ್ಲಿ ಅವರ ಸಾಮರ್ಥ್ಯವನ್ನು ಎತ್ತಿ ತೋರಿಸಿದರು. ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಪ್ರೊಫೆಸರ್ ಅಜಯ್ ಕೆ ಸೂದ್ ಅವರು ವಿಶೇಷ ಪ್ರತಿಕ್ರಿಯೆಯನ್ನು ನೀಡಿ, "ನಾವು ಭವಿಷ್ಯದತ್ತ ನೋಡುತ್ತಿರುವಾಗ, ಹಸಿರು ಹೈಡ್ರೋಜನ್ ವಲಯವು ಪ್ರಗತಿಯ ಪ್ರಮುಖ ಚಾಲಕಶಕ್ತಿಯಾಗಿ ನಿಲ್ಲುತ್ತದೆ, ಇದು 2050 ರ ವೇಳೆಗೆ ನಾಲ್ಕು ಕೋಟಿ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ಅಂದಾಜಿಸಲಾಗಿದೆ. ಈ ಗಮನಾರ್ಹ ಬೆಳವಣಿಗೆಯು ಪರಿಸರ ಸುಸ್ಥಿರತೆಯನ್ನು ಮುನ್ನಡೆಸುವ ಕ್ಷೇತ್ರದ ಸಾಮರ್ಥ್ಯವನ್ನು ಎತ್ತಿ ತೋರಿಸುವುದಲ್ಲದೆ, ಆರ್ಥಿಕ ಅಭಿವೃದ್ಧಿ ಮತ್ತು ನಾವೀನ್ಯತೆಯನ್ನು ಉತ್ತೇಜಿಸುವಲ್ಲಿ ಅದರ ನಿರ್ಣಾಯಕ ಪಾತ್ರವನ್ನು ಒತ್ತಿಹೇಳುತ್ತದೆ” ಎಂದರು.
ಅಧಿವೇಶನದಲ್ಲಿ ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ ಮತ್ತು ಒಲಿಂಪಿಕ್ ಪದಕ ವಿಜೇತೆ ಮತ್ತು ವಿಶ್ವ ಚಾಂಪಿಯನ್ ಶ್ರೀಮತಿ ಸೈನಾ ನೆಹ್ವಾಲ್ ಅವರು ಸ್ಪೂರ್ತಿದಾಯಕ ಭಾಷಣ ಮಾಡುವ ಮೂಲಕ ಚರ್ಚೆಯ ಸಾರವನ್ನು ದಾಖಲಿಸಿದರು. "ಸುಸ್ಥಿರ ಭವಿಷ್ಯದ ಅನ್ವೇಷಣೆಯಲ್ಲಿ, ಮುಂದಿನ ಪೀಳಿಗೆಗಾಗಿ ನಾವು ಬಿಟ್ಟು ಹೋಗುತ್ತಿರುವ ಪ್ರಪಂಚದ ಬಗ್ಗೆ ಯೋಚಿಸುವುದು ಅತ್ಯಗತ್ಯ. ಹವಾಮಾನ ಬದಲಾವಣೆಯ ಪರಿಣಾಮವು ಒಂದು ಬಲು ದೊಡ್ಡ ಒತ್ತಡ ತರುವ ವಾಸ್ತವವಾಗಿದೆ, ಮತ್ತು ಕ್ರೀಡಾಪಟುಗಳು ಹಾಗು ನಾಯಕರಾಗಿ, ಸಕಾರಾತ್ಮಕ ಬದಲಾವಣೆಯನ್ನು ಪ್ರೇರೇಪಿಸುವ ಜವಾಬ್ದಾರಿ ನಮ್ಮ ಮೇಲಿದೆ. ನಮ್ಮ ಕ್ರೀಡೆ ಬೆಳೆದು ಅಭಿವೃದ್ಧಿ ಹೊಂದಿದಂತೆಯೇ, ಆರೋಗ್ಯಕರ ಪರಿಸರದ ಬಗ್ಗೆ ನಮ್ಮ ಬದ್ಧತೆಯೂ ಸಹ ಇರಬೇಕಾಗುತ್ತದೆ “ ಎಂದರು.
ಯುವ ಅಧಿವೇಶನದ ಭಾಗವಾಗಿ, ಶ್ರೀಮತಿ ಶ್ರೇಯಾ ರೈ, ಶ್ರೀ ಶೈಲೇಶ್ ಸಿಂಘಾಲ್, ಶ್ರೀ ಅಭಿರ್ ಭಲ್ಲಾ, ಶ್ರೀಮತಿ ವಿವೇಕಾ ಜಾನಿ, ಶ್ರೀ ಆಶ್ಲೆ ವಿಲ್ಕಿನ್ಸನ್ ಮತ್ತು ಶ್ರೀಮತಿ ಸ್ನೇಹಾ ಶಾಹಿ ಅವರನ್ನೊಳಗೊಂಡ ನಾಯಕರ ಸಮಿತಿಯು ಹವಾಮಾನ ಕ್ರಮ ಮತ್ತು ಸುಸ್ಥಿರತೆಯಲ್ಲಿ ಯುವಜನರ ನಿರ್ಣಾಯಕ ಪಾತ್ರದ ಬಗ್ಗೆ ಗಮನ ಸೆಳೆಯಿತು. ಹಸಿರು ಹೈಡ್ರೋಜನ್, ಡಿಕಾರ್ಬನೈಸೇಶನ್ ಮತ್ತು ನವೀಕರಿಸಬಹುದಾದ ಇಂಧನದ ಮಹತ್ವವನ್ನು ಅವರು ಚರ್ಚಿಸಿದರು, ಈ ಚರ್ಚೆ 2030 ರ ವೇಳೆಗೆ ನವೀಕರಿಸಬಹುದಾದ ಇಂಧನದ ಮೂರನೇ ಅತಿದೊಡ್ಡ ಉತ್ಪಾದಕನಾಗುವ ಭಾರತದ ಗುರಿಯನ್ನು ಹಿನ್ನೆಲೆಯಲ್ಲಿ ಇಟ್ಟುಕೊಂಡಿತ್ತು. ಶ್ರೀಮತಿ ಪ್ರಿಯಾಂಕ ಸಹಸ್ರಬುದ್ದೆ ಅವರು ಅಧಿವೇಶನದ ನಿರ್ವಹಣೆ ಮಾಡಿದರು.
ಎಂ ಎನ್ ಆರ್ ಇ ಕಾರ್ಯದರ್ಶಿ ಶ್ರೀ ಭೂಪಿಂದರ್ ಎಸ್ ಭಲ್ಲಾ ಅವರು ತಮ್ಮ ಭಾಷಣದಲ್ಲಿ, "ಯುವಜನರಲ್ಲಿ ಸುಸ್ಥಿರತೆ ಮತ್ತು ನಾವೀನ್ಯತೆಗಾಗಿ ಉತ್ಸಾಹವನ್ನು ಪ್ರಚೋದಿಸುವುದು ನಮ್ಮ ಗುರಿಯಾಗಿದೆ. ಒಟ್ಟಾಗಿ ಕೆಲಸ ಮಾಡುವ ಮೂಲಕ ಮತ್ತು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ, ನಾವು ಅರ್ಥಪೂರ್ಣ ಬದಲಾವಣೆಗೆ ಚಾಲನೆ ನೀಡಬಹುದು ಮತ್ತು ಎಲ್ಲರಿಗೂ ಪ್ರಕಾಶಮಾನವಾದ, ಹಸಿರು ಭವಿಷ್ಯವನ್ನು ನಿರ್ಮಿಸಬಹುದು ಎಂದರು. ಈ ಬದ್ಧತೆಯನ್ನು ಪುನರುಚ್ಚರಿಸಿದ ಜಿಎಚ್ 2 ಇಂಡಿಯಾದ ನಿರ್ದೇಶಕ ಶ್ರೀ ನಿಶಾಂತ್ ಬಾಲಶಣ್ಮುಗಂ ಅವರು ಹಸಿರು ಹೈಡ್ರೋಜನ್ ನ ಪರಿವರ್ತಕ ಸಾಮರ್ಥ್ಯವನ್ನು ಎತ್ತಿ ತೋರಿಸಿದರು, "ವಿಶ್ವದ ಸುಮಾರು 18 ರಿಂದ 20% ಇಂಗಾಲದ ಹೊರಸೂಸುವಿಕೆಗೆ ಹಸಿರು ಹೈಡ್ರೋಜನ್ ಏಕೈಕ ಪರಿಹಾರವಾಗಿದೆ" ಮತ್ತು "ನಾವೆಲ್ಲರೂ ಒಟ್ಟಾಗಿ, ಸ್ವಚ್ಛ ಭವಿಷ್ಯಕ್ಕಾಗಿ ಕೆಲಸ ಮಾಡಬೇಕು, ಮತ್ತು ಇದರಲ್ಲಿ ನಿಮ್ಮ ಪಾತ್ರವನ್ನು ನಿರ್ವಹಿಸುವ ಮೂಲಕ ನೀವು ಕೊಡುಗೆ ನೀಡಬಹುದು" ಎಂದು ಹೇಳಿದರು. ಈ ಹೇಳಿಕೆಗಳು ಸುಸ್ಥಿರ ಅಭ್ಯಾಸಗಳನ್ನು ಮುನ್ನಡೆಸಲು ಮತ್ತು ಹವಾಮಾನ ಬದಲಾವಣೆಯ ವಿರುದ್ಧದ ಜಾಗತಿಕ ಪ್ರಯತ್ನದಲ್ಲಿ ಯುವಜನರನ್ನು ತೊಡಗಿಸಿಕೊಳ್ಳಲು ಏಕೀಕೃತವಾದಂತಹ ಸಮರ್ಪಣಾ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ. ಎಂಎನ್ ಆರ್ ಇಯ ಎನ್ ಜಿಎಚ್ ಎಂನ ಮಿಷನ್ ನಿರ್ದೇಶಕ ಶ್ರೀ ಅಭಯ್ ಬಕ್ರೆ ಅವರ ಧನ್ಯವಾದಗಳೊಂದಿಗೆ ಅಧಿವೇಶನ ಸಮಾರೋಪಗೊಂಡಿತು.
ಇದಕ್ಕೆ ಸಮಾನಾಂತರವಾಗಿ, ಜಿಎಚ್ 2ಥಾನ್ ಹ್ಯಾಕಥಾನ್ ಆಯೋಜಿಸಲಾಗಿತ್ತು. ಅಲ್ಲಿ ಭಾಗವಹಿಸಿದವರು ಹಸಿರು ಹೈಡ್ರೋಜನ್ ತಂತ್ರಜ್ಞಾನವನ್ನು ಮುನ್ನಡೆಸಲು ತಮ್ಮ ನವೀನ ಪರಿಹಾರಗಳನ್ನು ಪ್ರಸ್ತುತಪಡಿಸಿದರು. ಐಐಟಿ ಬಾಂಬೆಯ ನಂದಲಾಲ್ ಗುಪ್ತಾ ಅವರನ್ನು ವಿಜೇತರನ್ನಾಗಿ ಹೆಸರಿಸಲಾಯಿತು. ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಎಂ ಎನ್ ಆರ್ ಇ ಕಾರ್ಯದರ್ಶಿ ಶ್ರೀ ಅಜಯ್ ಯಾದವ್, " ಜಿಎಚ್ 2ಥಾನ್ (GH2THON) ದೂರದೃಷ್ಟಿಯ ಉಪಕ್ರಮವಾಗಿದ್ದು, ಹೈಡ್ರೋಜನ್ ತಂತ್ರಜ್ಞಾನದ ಭವಿಷ್ಯವನ್ನು ರೂಪಿಸಲು ನವೋದ್ಯಮಗಳನ್ನು (ಸ್ಟಾರ್ಟ್ ಅಪ್ ಗಳು) ಬೆಳೆಸಲು ಸಂಶೋಧಕರು ಮತ್ತು ತಾಂತ್ರಿಕ ತಜ್ಞರ ನಾವೀನ್ಯತೆಯನ್ನು ಬಳಸಿಕೊಳ್ಳುತ್ತದೆ. ಈ ರೀತಿಯ ಮೊದಲ ವ್ಯವಸ್ಥೆಯಾಗಿ , ಇದು ಹಸಿರು ಹೈಡ್ರೋಜನ್ ಮಿಷನ್ಗೆ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ, ಸುಸ್ಥಿರ, ಹಸಿರು ಇಂಧನ ಭವಿಷ್ಯದತ್ತ ಭಾರತದ ಪರಿವರ್ತನೆಯನ್ನು ಮುನ್ನಡೆಸಲು ಮುಂದಿನ ಪೀಳಿಗೆಯನ್ನು ಸಶಕ್ತಗೊಳಿಸುತ್ತದೆ ಎಂದು ಹೇಳಿದರು.
ಉದ್ಯಮದ ಪ್ರಮುಖರು ಮತ್ತು ಸಾರ್ವಜನಿಕ ಕಂಪನಿಗಳ 100 ಕ್ಕೂ ಹೆಚ್ಚು ಮಳಿಗೆಗಳು ಹಸಿರು ಹೈಡ್ರೋಜನ್ ಮೌಲ್ಯ ಸರಪಳಿ ಕ್ಷೇತ್ರದಲ್ಲಿ ಇತ್ತೀಚಿನ ತಂತ್ರಜ್ಞಾನಗಳು ಮತ್ತು ನಾವೀನ್ಯತೆಗಳನ್ನು ಪ್ರದರ್ಶಿಸಿದವು. ಈ ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞರು, ಉದ್ಯಮ ತಜ್ಞರು, ನವೋದ್ಯಮಗಳು, ನೀತಿ ನಿರೂಪಕರು ಮತ್ತು ರಾಜತಾಂತ್ರಿಕರು ಸೇರಿದಂತೆ 2000 ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಪ್ರದರ್ಶನದ ನೇಪಥ್ಯದಲ್ಲಿ ಈ ದಿನವು ರಾಷ್ಟ್ರೀಯ ಪೋಸ್ಟರ್ ಸ್ಪರ್ಧೆಗೆ ಸಾಕ್ಷಿಯಾಯಿತು, ಅಲ್ಲಿ ಭಾಗವಹಿಸುವವರು ಸುಸ್ಥಿರ ಭವಿಷ್ಯವನ್ನು ನಿರ್ಮಿಸುವಲ್ಲಿ ತಮ್ಮ ಆಲೋಚನೆಗಳು ಮತ್ತು ನಾವೀನ್ಯತೆಗಳನ್ನು ಪ್ರದರ್ಶಿಸಿದರು.
ಈ ದಿನದಂದು ಸಿಂಗಾಪುರ ಮತ್ತು ದಕ್ಷಿಣ ಕೊರಿಯಾದ ಬಗ್ಗೆ ಎರಡು ದೇಶಗಳ ದುಂಡುಮೇಜಿನ ಸಭೆಗಳು, ಭಾರತ-ಯುಎಸ್ ಹೈಡ್ರೋಜನ್ ಕಾರ್ಯಪಡೆಗೆ ಉದ್ಯಮ ದುಂಡುಮೇಜಿನ ಸಭೆ ಮತ್ತು ಹೈಡ್ರೋಜನ್ ಕುರಿತ ಮಹತ್ವದ ದುಂಡುಮೇಜಿನ ಸಭೆಗಳು ನಡೆದವು. ಇವೆಲ್ಲವೂ ಆಳವಾದ ಅಂತರರಾಷ್ಟ್ರೀಯ ಸಹಯೋಗ ಮತ್ತು ಕಾರ್ಯತಂತ್ರದ ಸಂವಾದಗಳನ್ನು ಪೋಷಿಸಿದವು.
ಐಸಿಜಿಎಚ್ -2024 ಪ್ರಗತಿ ಸಾಧಿಸುತ್ತಿದ್ದಂತೆ, ಹಸಿರು ಹೈಡ್ರೋಜನ್ ತಂತ್ರಜ್ಞಾನಗಳನ್ನು ಮುಂದಕ್ಕೆ ಕೊಂಡೊಯ್ಯಲು ಮತ್ತು ಸುಸ್ಥಿರ ಭವಿಷ್ಯಕ್ಕಾಗಿ ಪ್ರಮುಖ ಪಾಲುದಾರಿಕೆಯನ್ನು ಸ್ಥಾಪಿಸಲು ಇದು ಮಹತ್ವದ ವೇದಿಕೆಯಾಗಿ ಪರಿಗಣಿಸಲ್ಪಟ್ಟಿದೆ.
ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಮತ್ತು ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಇಲಾಖೆಯ ಸಹಯೋಗದೊಂದಿಗೆ ಹಸಿರು ಹೈಡ್ರೋಜನ್ 2024 (ICGH2024) ನ 2 ನೇ ಅಂತರರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗಿದೆ. ಸೋಲಾರ್ ಎನರ್ಜಿ ಕಾರ್ಪೊರೇಷನ್ ಆಫ್ ಇಂಡಿಯಾ (ಎಸ್ಇಸಿಐ) ಮತ್ತು ಇವೈ ಕ್ರಮವಾಗಿ ಅನುಷ್ಠಾನ ಮತ್ತು ಜ್ಞಾನ ಪಾಲುದಾರರಾಗಿವೆ. ಎಫ್ಐಸಿಸಿಐ ಉದ್ಯಮದ ಪಾಲುದಾರನಾಗಿದೆ
(Release ID: 2054434)
Visitor Counter : 81