ರೈಲ್ವೇ ಸಚಿವಾಲಯ
azadi ka amrit mahotsav

ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ಶ್ರೀ ವೀರಣ್ಣ ಸೋಮಣ್ಣ ಅವರು ಯಲಹಂಕದ ರೈಲು ಗಾಲಿ ಕಾರ್ಖಾನೆಯನ್ನು ಪರಿಶೀಲಿಸಿದರು ಮತ್ತು ಬೆಂಗಳೂರು ಉಪನಗರ ರೈಲು ಯೋಜನೆಯ ಪರಿಶೀಲನೆ ನಡೆಸಿದರು

Posted On: 09 SEP 2024 8:58PM by PIB Bengaluru

ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ಶ್ರೀ ವಿ.ಸೋಮಣ್ಣ ಅವರು ಇಂದು ಯಲಹಂಕದ ರೈಲು ಗಾಲಿ ಕಾರ್ಖಾನೆಯನ್ನು (ಆರ್‌ ಡಬ್ಲ್ಯೂ ಎಫ್) ಪರಿಶೀಲಿಸಿದರು ಮತ್ತು ಬೆಂಗಳೂರು ಉಪನಗರ ರೈಲ್ವೆ ಯೋಜನೆ ಕುರಿತು ಪರಿಶೀಲನಾ ಸಭೆ ನಡೆಸಿದರು. ಬೆಂಗಳೂರಿನಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಕರ್ನಾಟಕ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕೆಗಳು ಮತ್ತು ಮೂಲಸೌಕರ್ಯ ಸಚಿವರಾದ ಶ್ರೀ ಎಂ.ಬಿ.ಪಾಟೀಲ್, ಆರ್‌ ಡಬ್ಲ್ಯೂ ಎಫ್‌ ಪ್ರಧಾನ ವ್ಯವಸ್ಥಾಪಕರಾದ ಶ್ರೀ ರಾಜಗೋಪಾಲ್ ಮತ್ತಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಆರ್‌ ಡಬ್ಲ್ಯೂ ಎಫ್ ಗೆ ಬೇಟಿ ನೀಡಿದ ಸಂದರ್ಭದಲ್ಲಿ ಸಚಿವರು ಘಟಕದ ಸಾಮರ್ಥ್ಯ ವೃದ್ಧಿಗೆ ಕೈಗೊಂಡಿರುವ ವಿವಿಧ ಕ್ರಮಗಳ ಕುರಿತು ಮಾಹಿತಿ ಪಡೆದರು. ಫೋರ್ಜಿಂಗ್ ಕಾಂಪ್ಲೆಕ್ಸ್, ಆಕ್ಸಲ್ ಮಶಿನಿಂಗ್ ಘಟಕ ಹಾಗೂ ಗಾಲಿ ಅಚ್ಚು ಘಟಕ ಸೇರಿದಂತೆ ಪ್ರಮುಖ ಘಟಕಗಳನ್ನು ಸಚಿವರು ಪರಿಶೀಲಿಸಿದರು. ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದ ಸಚಿವರು ಅವರ ಸಲಹೆ ಮತ್ತು ಕುಂದುಕೊರತೆಗಳನ್ನು ಆಲಿಸಿದರು. ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ನಡೆಯುತ್ತಿರುವ ಪ್ರಯತ್ನಗಳನ್ನು ಅವರು ಎತ್ತಿ ತೋರಿಸಿದರು, ಮೂರನೇ ಆಕ್ಸಲ್ ಮೆಷಿನಿಂಗ್ ಲೈನ್‌ ನ ಕಾರ್ಯಾರಂಭದ ಬಗ್ಗೆ ಪ್ರಸ್ತಾಪಿಸಿದ ಅವರು, ಇದು ಆಕ್ಸಲ್ ಉತ್ಪಾದನೆಯನ್ನು ವಾರ್ಷಿಕವಾಗಿ 40,000 ಯುನಿಟ್‌ ಗಳಷ್ಟು ಹೆಚ್ಚಿಸುವ ನಿರೀಕ್ಷೆಯಿದೆ ಎಂದು ಹೇಳಿದರು.

ನಂತರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಶ್ರೀ ಸೋಮಣ್ಣ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ‘ಆತ್ಮನಿರ್ಭರ ಭಾರತ’ ದೃಷ್ಟಿಗೆ ಆರ್‌ ಡಬ್ಲ್ಯೂ ಎಫ್ ನ ಮಹತ್ವದ ಕೊಡುಗೆಯನ್ನು ಒತ್ತಿ ಹೇಳಿದರು. ಆರ್‌ ಡಬ್ಲ್ಯೂ ಎಫ್ ಯಶಸ್ವಿಯಾಗಿ 'ಮೇಕ್ ಇನ್ ಇಂಡಿಯಾ - ಮೇಕ್ ಫಾರ್ ದಿ ವರ್ಲ್ಡ್' ಉಪಕ್ರಮದ ಅಡಿಯಲ್ಲಿ ಮೊಜಾಂಬಿಕ್, ಸುಡಾನ್ ಮತ್ತು ಮಲೇಷ್ಯಾದಂತಹ ದೇಶಗಳಿಗೆ ಗಾಲಿಗಳು ಮತ್ತು ಆಕ್ಸಲ್‌ ಗಳನ್ನು ರಫ್ತು ಮಾಡಿದೆ ಎಂದರು. ಸಚಿವರು ಆರ್‌ ಡಬ್ಲ್ಯೂ ಎಫ್ ನ 'ಶೂನ್ಯ ದೋಷ' ಉತ್ಪಾದನಾ ಪ್ರಕ್ರಿಯೆಯನ್ನು ಶ್ಲಾಘಿಸಿದರು, ಇದು ಸುಧಾರಿತ ಕೈಗಾರಿಕಾ ಯಾಂತ್ರೀಕರಣದಿಂದ ಹೆಚ್ಚಾಗಿ ನಡೆಸಲ್ಪಡುತ್ತದೆ. 2023-24ನೇ ಸಾಲಿಗೆ ರೈಲ್ವೇ ಮಂಡಳಿಯು ನಿಗದಿಪಡಿಸಿದ ಉತ್ಪಾದನಾ ಗುರಿಗಳನ್ನು ಮೀರಿದ ಸಾಧನೆ ಮಾಡಿದ್ದಕ್ಕಾಗಿ ಆರ್‌ ಡಬ್ಲ್ಯೂ ಎಫ್  ಅನ್ನು ಅವರು ಶ್ಲಾಘಿಸಿದರು.

ಶ್ರೀ ಸೋಮಣ್ಣ ಅವರು ಬೆಂಗಳೂರು ಉಪನಗರ ರೈಲು ಯೋಜನೆಯನ್ನು ಪರಿಶೀಲಿಸಿದರು, ಬೆಂಗಳೂರಿನ ಪರಿಧಿಯ ಸುತ್ತಲೂ ಜೋಡಿ ಮಾರ್ಗದ ರೈಲು ಸಂಪರ್ಕವನ್ನು ಒದಗಿಸುವ ಗುರಿಯನ್ನು ಹೊಂದಿರುವ ವೃತ್ತಾಕಾರದ ರೈಲ್ವೆ ಯೋಜನೆಗೆ ನಿರ್ದಿಷ್ಟವಾಗಿ ಗಮನಹರಿಸಿದರು. ಯೋಜನೆಯು ದೊಡ್ಡಬಳ್ಳಾಪುರ, ದೇವನಹಳ್ಳಿ, ಮಾಲೂರು, ಆನೇಕಲ್, ಹೆಜ್ಜಾಲ, ಸೋಲೂರು ಮತ್ತು ನಿಡವಂಡ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ನಿರೀಕ್ಷೆಯಿದೆ. ಸಾಮಾನ್ಯ ಜನರಿಗೆ ಕೈಗೆಟುಕುವ ಮತ್ತು ಪ್ರವೇಶಿಸಬಹುದಾದ ರೈಲ್ವೆ ಸಂಪರ್ಕವನ್ನು ಖಚಿತಪಡಿಸಿಕೊಳ್ಳಲು ಜನನಿಬಿಡ ಪ್ರದೇಶಗಳನ್ನು ಸಂಪರ್ಕಿಸಲು ವಿವರವಾದ ಯೋಜನಾ ವರದಿಯು (ಡಿಪಿಆರ್) ಆದ್ಯತೆ ನೀಡಬೇಕು ಎಂದು ಸಚಿವರು ನಿರ್ದೇಶನ ನೀಡಿದರು.

ವಿಧಾನಸೌಧದಲ್ಲಿ ಶ್ರೀ ಎಂ.ಬಿ. ಪಾಟೀಲ್ ಅವರೊಂದಿಗೆ ನಡೆದ ಪ್ರತ್ಯೇಕ ಪರಿಶೀಲನಾ ಸಭೆಯಲ್ಲಿ ಶ್ರೀ ಸೋಮಣ್ಣ ಅವರು, ಬೆಂಗಳೂರು ಉಪನಗರ ರೈಲ್ವೆ ಯೋಜನೆಯ ಚಿಕ್ಕಬಾಣಾವರ-ಬೈಯ್ಯಪ್ಪನಹಳ್ಳಿ (ಕಾರಿಡಾರ್-2, 25 ಕಿಮೀ) ಮತ್ತು ಹೀಲಳಿಗೆ-ರಾಜನುಕುಂಟೆ (ಕಾರಿಡಾರ್-4, 46.88 ಕಿಮೀ) ವಿಭಾಗಗಳನ್ನು ಡಿಸೆಂಬರ್ 2026 ರೊಳಗೆ ಪೂರ್ಣಗೊಳಿಸಿ ರಾಷ್ಟ್ರಕ್ಕೆ ಸಮರ್ಪಿಸಲಾಗುವುದು ಎಂದು ಸಚಿವರು ಘೋಷಿಸಿದರು. ತ್ವರಿತ ಭೂಸ್ವಾಧೀನ ಅಗತ್ಯ ಮತ್ತು ಗಡುವನ್ನು ಪೂರೈಸಲು ಈ ಕಾರಿಡಾರ್‌ ಗಳ ಕೆಲಸವನ್ನು ವೇಗಗೊಳಿಸುವಂತೆ ಇಬ್ಬರೂ ಸಚಿವರು ಅಧಿಕಾರಿಗಳಿಗೆ ಒತ್ತಾಯಿಸಿದರು. ತುಮಕೂರು, ಮೈಸೂರು, ಮಾಗಡಿ, ಗೌರಿಬಿದನೂರು ಮತ್ತು ಕೋಲಾರದಂತಹ ನೆರೆಯ ನಗರಗಳೊಂದಿಗೆ ಬೆಂಗಳೂರನ್ನು ಸಂಪರ್ಕಿಸಲು ಉಪನಗರ ರೈಲುಮಾರ್ಗವನ್ನು ವಿಸ್ತರಿಸುವ ಸಾಧ್ಯತೆಯ ಬಗ್ಗೆ ಅವರು ಚರ್ಚಿಸಿದರು.

ಶ್ರೀ ಸೋಮಣ್ಣ ಅವರು ಬೆಂಗಳೂರು ಮೆಟ್ರೋ, ಉಪನಗರ ರೈಲು ಯೋಜನೆ ಮತ್ತು ಇತರ ಸಂಬಂಧಿತ ಪ್ರಾಧಿಕಾರಗಳ ನಡುವೆ ಸಮನ್ವಯದ ಮಹತ್ವವನ್ನು ಒತ್ತಿ ಹೇಳಿದರು. ತಡೆರಹಿತ ಸಂಯೋಜನೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ವಿಳಂಬವನ್ನು ತಪ್ಪಿಸಲು ನಿಯಮಿತ ಸಮನ್ವಯ ಸಭೆಗಳನ್ನು ನಡೆಸುವಂತೆ ಅವರು ಹೇಳಿದರು. ಅಂದಾಜು 21,000 ಕೋಟಿ ರೂ. ವೆಚ್ಚದಲ್ಲಿ ರೈಲ್ವೆ ಮಂಡಳಿಯಿಂದ ಅನುಮೋದನೆ ಪಡೆದಿರುವ ಬೆಂಗಳೂರು ಸುತ್ತಲಿನ ಉದ್ದೇಶಿತ ವೃತ್ತಾಕಾರದ ರೈಲ್ವೆಯೊಂದಿಗೆ ಉಪನಗರ ರೈಲುಮಾರ್ಗವನ್ನು ಸಂಯೋಜಿಸುವ ಸಾಧ್ಯತೆಯನ್ನು ಸಭೆಯಲ್ಲಿ ಪರಿಸೀಲಿಸಲಾಯಿತು.

ಪರಿಶೀಲನಾ ಸಭೆಯಲ್ಲಿ ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಅರವಿಂದ ಶ್ರೀವಾಸ್ತವ; ಶ್ರೀ ಯೋಗೇಶ್ ಮೋಹನ್, ವಿಭಾಗೀಯ ರೈಲ್ವೆ ವ್ಯವಸ್ಥಾಪಕರು, ಬೆಂಗಳೂರು; ಶ್ರೀ ಮಹೇಶ್ವರ ರಾವ್, ವ್ಯವಸ್ಥಾಪಕ ನಿರ್ದೇಶಕರು, ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿ ಎಂ‌ ಆರ್‌ ಸಿ ಎಲ್); ಶ್ರೀಮತಿ. ಮಂಜುಳಾ, ವ್ಯವಸ್ಥಾಪಕ ನಿರ್ದೇಶಕರು, ಕೆ-ರೈಡ್; ಶ್ರೀ ತುಷಾರ್ ಗಿರಿನಾಥ್, ಮುಖ್ಯ ಆಯುಕ್ತರು, ಬಿಬಿಎಂಪಿ; ಮತ್ತಿತರ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

 

*****

 

 


(Release ID: 2053309) Visitor Counter : 44


Read this release in: English , Urdu , Hindi , Punjabi