ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav

ಜೀವರಾಶಿ ಪೂರೈಕೆ ಸರಪಳಿ ನಿರ್ವಹಣೆಯಲ್ಲಿ ಸವಾಲುಗಳು, ಅವಕಾಶಗಳು ಮತ್ತು ಬೆಳವಣಿಗೆಗಳನ್ನು ಅನ್ವೇಷಿಸಲು ಎಸ್ಎಸ್ಎಸ್-ಎನ್ಐಬಿಇಯ ರಾಷ್ಟ್ರೀಯ ವಿಚಾರ ಸಂಕಿರಣ


ಜೀವರಾಶಿ (ಬಯೋಮಾಸ್) ಬಳಕೆಗಾಗಿ ಮಾರುಕಟ್ಟೆ-ಚಾಲಿತ ಕಾರ್ಯವಿಧಾನಗಳ ಅಭಿವೃದ್ಧಿಗೆ ಅನುಕೂಲವಾಗುವಂತೆ ಬೇಡಿಕೆ ಸೃಷ್ಟಿಯನ್ನು ಸುಧಾರಿಸುವ ಅಗತ್ಯವಿದೆ: ಆಂದೋಲನ  ನಿರ್ದೇಶಕರು, ಸಮರ್ಥ್, ಇಂಧನ ಸಚಿವಾಲಯ

ಆಧುನಿಕ ಜೈವಿಕ ಇಂಧನ ಮಾರ್ಗಗಳ ಮೂಲಕ ಜೀವರಾಶಿ ಸಾಮರ್ಥ್ಯವನ್ನು ಬಳಸಿಕೊಳ್ಳಲು ಸಾಮೂಹಿಕವಾಗಿ ಕೆಲಸ ಮಾಡಬೇಕಾಗಿದೆ: ಪಂಜಾಬ್ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕರು

Posted On: 05 SEP 2024 4:34PM by PIB Bengaluru

ದೇಶದಲ್ಲಿ ಜೀವರಾಶಿ (ಬಯೋಮಾಸ್)  ಪೂರೈಕೆ ಸರಪಳಿಗಳ (ಬಿಎಸ್ಸಿ) ಸಮರ್ಥ ನಿರ್ವಹಣೆಗೆ ಸಂಬಂಧಿಸಿದ ಸವಾಲುಗಳು ಮತ್ತು ಅವಕಾಶಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಪರಿಹರಿಸಲು 2024ರ ಸೆಪ್ಟೆಂಬರ್ 5 ರಂದು ಚಂಡೀಗಢದ ಎಂಜಿಎಸ್ಐಪಿಎ ಸಂಕೀರ್ಣದಲ್ಲಿ  ಒಂದು ದಿನದ "ಬಯೋಮಾಸ್ ಪೂರೈಕೆ ಸರಪಳಿ ನಿರ್ವಹಣೆ: ಸವಾಲುಗಳು, ಅವಕಾಶಗಳು ಮತ್ತು ಬೆಳವಣಿಗೆಗಳು" ಕುರಿತು "ರಾಷ್ಟ್ರೀಯ ವಿಚಾರ ಸಂಕಿರಣ" ವನ್ನು ಆಯೋಜಿಸಲಾಗಿತ್ತು. ಭಾರತ ಸರ್ಕಾರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಸ್ವಾಯತ್ತ ಸಂಸ್ಥೆಯಾದ ಕಪುರ್ಥಾಲಾದ ಸರ್ದಾರ್ ಸ್ವರಣ್ ಸಿಂಗ್ ರಾಷ್ಟ್ರೀಯ ಜೈವಿಕ ಇಂಧನ ತಂತ್ರಜ್ಞಾನ ಸಂಸ್ಥೆ (ಎಸ್ಎಸ್ಎಸ್-ಎನ್ಐಬಿಇ) ಈ ವಿಚಾರ ಸಂಕಿರಣವನ್ನು ಆಯೋಜಿಸಿತ್ತು. ಈ ವಿಚಾರ ಸಂಕಿರಣವು ಭಾರತದ ವೃತ್ತಾಕಾರದ ಜೈವಿಕ ಆರ್ಥಿಕತೆಗೆ ಪರಿವರ್ತನೆಯನ್ನು ಬೆಂಬಲಿಸಲು ವೆಚ್ಚ-ಪರಿಣಾಮಕಾರಿ ಮತ್ತು ಪರಿಣಾಮಕಾರಿ ಜೀವರಾಶಿ ಪೂರೈಕೆ ಸರಪಳಿಗಳ ಅಭಿವೃದ್ಧಿಗೆ ಅನುಕೂಲವಾಗುವಂತೆ ಸಹಯೋಗ ಮತ್ತು ಜ್ಞಾನ ವಿನಿಮಯವನ್ನು ಉತ್ತೇಜಿಸಲು ಪ್ರಯತ್ನಿಸುತ್ತದೆ. ಇದು ಸರ್ಕಾರಿ ಅಧಿಕಾರಿಗಳು, ಉದ್ಯಮ ಪ್ರತಿನಿಧಿಗಳು, ಉದ್ಯಮಿಗಳು, ನೀತಿ ನಿರೂಪಕರು ಮತ್ತು ಸಂಶೋಧಕರನ್ನು ಒಟ್ಟುಗೂಡಿಸಿ ಜೀವರಾಶಿ ಪೂರೈಕೆ ಸರಪಳಿ ನಿರ್ವಹಣೆಯಲ್ಲಿ ಒಳನೋಟಗಳು, ಅನುಭವಗಳು ಮತ್ತು ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲು ನೆರವಾಯಿತು. ವಿಚಾರ ಸಂಕಿರಣವು ದೇಶದ ಜೈವಿಕ ಇಂಧನ ಕಾರ್ಯಕ್ರಮಗಳ ಯಶಸ್ಸಿಗೆ ಜೀವರಾಶಿ ಪೂರೈಕೆ ಸರಪಳಿಯಲ್ಲಿ ದಕ್ಷತೆ  ಅಗತ್ಯ ಮತ್ತು ಪ್ರಸ್ತುತತೆಯನ್ನು  ಎತ್ತಿ ತೋರಿಸುವ ಗುರಿಯನ್ನು ಹೊಂದಿದೆ.

ಕಾರ್ಯಕ್ರಮವನ್ನು ಭಾರತ ಸರ್ಕಾರದ ವಿದ್ಯುತ್ ಸಚಿವಾಲಯದ ಸಮರ್ಥ್ (ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕೃಷಿ-ಅವಶೇಷಗಳ/ತ್ಯಾಜ್ಯದ ಬಳಕೆಯ ಸುಸ್ಥಿರ ಕೃಷಿ ಮಿಷನ್) ನ ನಿರ್ದೇಶಕ ಶ್ರೀ ಸತೀಶ್ ಉಪಾಧ್ಯಾಯ ಉದ್ಘಾಟಿಸಿದರು; ಪಂಜಾಬ್ ಸರ್ಕಾರದ ಪಂಜಾಬ್ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (ಪಿಎಸ್ಸಿಎಸ್ಟಿ)ಯ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ ಪ್ರೀತ್ ಪಾಲ್  ಸಿಂಗ್, ಮತ್ತು ಎಸ್ಎಸ್ಎಸ್-ಎನ್ಐಬಿಇ ಮಹಾನಿರ್ದೇಶಕ ಡಾ. ಜಿ. ಶ್ರೀಧರ್ ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಎಂಜಿಎಸ್ಐಪಿಎ ಮಹಾನಿರ್ದೇಶಕ ಶ್ರೀ ಅನಿರುದ್ಧ್ ತಿವಾರಿ ಅವರು, ಕಸ ನಿರ್ವಹಣೆ ನೀತಿಗಳು ಮತ್ತು ಅಭ್ಯಾಸ/ಪದ್ಧತಿಗಳಲ್ಲಿ ವ್ಯಾಪಕ ಅನುಭವವನ್ನು ಹೊಂದಿದ್ದು, ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರೊಂದಿಗೆ ತಮ್ಮ ಅಮೂಲ್ಯ ಒಳನೋಟಗಳನ್ನು ಹಂಚಿಕೊಂಡರು.

"ಜೀವರಾಶಿ (ಬಯೋಮಾಸ್)  ಪೂರೈಕೆ ಸರಪಳಿ ನಿರ್ವಹಣೆಯನ್ನು ಬೇಡಿಕೆಯ ದೃಷ್ಟಿಯಿಂದ ನೋಡಬೇಕಾಗಿದೆ"

ಸಮರ್ಥ್ ಮಿಷನ್ ನಿರ್ದೇಶಕ ಮತ್ತು ಮುಖ್ಯ ಅತಿಥಿ ಶ್ರೀ ಸತೀಶ್ ಉಪಾಧ್ಯಾಯ ಅವರು ತಮ್ಮ ಭಾಷಣದಲ್ಲಿ, ಪೂರೈಕೆ ಸರಪಳಿ ನಿರ್ವಹಣೆಯನ್ನು ಬೇಡಿಕೆಯ ದೃಷ್ಟಿಯಿಂದ  ನೋಡುವ ಅವಶ್ಯಕತೆಯಿದೆ ಎಂದು ಒತ್ತಿ ಹೇಳಿದರು ಮತ್ತು ಜೀವರಾಶಿಯನ್ನು ಬಳಸಿಕೊಳ್ಳಲು ಮಾರುಕಟ್ಟೆ-ಚಾಲಿತ ಕಾರ್ಯವಿಧಾನಗಳ ಅಭಿವೃದ್ಧಿಗೆ ಬೇಡಿಕೆ ಸೃಷ್ಟಿಯನ್ನು ಹೆಚ್ಚಿಸುವ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದರು. ಜೀವರಾಶಿ (ಬಯೋಮಾಸ್ ) ಬಳಕೆಯು ನಮ್ಮ ದೇಶಕ್ಕೆ ನಿರ್ಣಾಯಕ ಪರಿಸರ ಮತ್ತು ಸಾಮಾಜಿಕ ಪ್ರಯೋಜನಗಳನ್ನು ತರಲಿದೆ  ಎಂದು ಅವರು ಉಲ್ಲೇಖಿಸಿದರು. ಬಯೋಮಾಸ್ ಕೋ-ಫೈರಿಂಗ್ ಗಾಗಿ ಸಮರ್ಥ್ ಮಿಷನ್ ಮಾಡುತ್ತಿರುವ ಯಶಸ್ವಿ ಕೆಲಸದ ಬಗ್ಗೆ ಮತ್ತು ವಿದ್ಯುತ್ ಉತ್ಪಾದನೆಯಲ್ಲಿ ಜೀವರಾಶಿ ಬಳಕೆಯನ್ನು ಅದು ಹೇಗೆ ಹೆಚ್ಚಿಸುತ್ತಿದೆ ಎಂಬುದರ ಬಗ್ಗೆ ಅವರು ಭಾಗವಹಿಸಿದವರಿಗೆ  ಮಾಹಿತಿ ನೀಡಿದರು.

"ಜೀವರಾಶಿಗಳ ಸಾಮರ್ಥ್ಯವನ್ನು ಬಳಸಿಕೊಳ್ಳಲು ಆಧುನಿಕ ಜೈವಿಕ ಇಂಧನ ಮಾರ್ಗಗಳನ್ನು ಬಳಸುವ ಅಗತ್ಯವಿದೆ"

ಗೌರವಾನ್ವಿತ ಅತಿಥಿ ಮತ್ತು ಪಿಎಸ್ ಸಿಎಸ್ ಟಿಯ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ ಪ್ರೀತಪಾಲ್ ಸಿಂಗ್ ಅವರು, ಜೀವರಾಶಿಯನ್ನು ಸಂಗ್ರಹಿಸಲು ಸ್ಥಳಾವಕಾಶದ ಲಭ್ಯತೆ, ಕೈಗಾರಿಕೆಗಳಿಗೆ ಪೂರೈಕೆ ಮತ್ತು ಸೋರಿಕೆಯ ನಿರ್ವಹಣೆಯಂತಹ  ಕೆಲವು ಸವಾಲುಗಳನ್ನು ಎದುರಿಸಬೇಕಾಗಿದೆ ಎಂದು ಒತ್ತಿ ಹೇಳಿದರು. ಜೀವರಾಶಿಗಳ ಸಾಮರ್ಥ್ಯವನ್ನು ಬಳಸಿಕೊಳ್ಳಲು ಮತ್ತು ಅದನ್ನು ವ್ಯರ್ಥ ಮಾಡುವ ಬದಲು ಆಧುನಿಕ ಜೈವಿಕ ಇಂಧನ ಮಾರ್ಗಗಳ ಮೂಲಕ ಬಳಸಿಕೊಳ್ಳಲು ನಾವು ಒಟ್ಟಾಗಿ ಕೆಲಸ ಮಾಡಬೇಕು ಎಂದೂ  ಅವರು ಹೇಳಿದರು. ಉದ್ಯಮಕ್ಕೆ ಆರ್ಥಿಕವಾಗಿ ಅನುಕೂಲಕರವಾಗುವಂತೆ ಜೀವರಾಶಿಯನ್ನು (ಬಯೋಮಾಸ್)  ಸಾಧ್ಯವಾದಷ್ಟು ಕಡಿಮೆ ವೆಚ್ಚದಲ್ಲಿ ಲಭ್ಯವಾಗುವಂತೆ ಮಾಡುವ ಅವಶ್ಯಕತೆಯಿದೆ ಎಂದೂ  ಅವರು ಹೇಳಿದರು.

"ಜೈವಿಕ ಇಂಧನ ಕಾರ್ಯಕ್ರಮಗಳ ಯಶಸ್ಸಿಗೆ ಪೂರೈಕೆ ಸರಪಳಿ ನಿರ್ವಹಣೆ ನಿರ್ಣಾಯಕವಾಗಿದೆ"

ಎಸ್ಎಸ್ಎಸ್-ಎನ್ಐಬಿಇ ಮಹಾನಿರ್ದೇಶಕ ಡಾ.ಜಿ.ಶ್ರೀಧರ್ ಅವರು ದೇಶದಲ್ಲಿ ಜೀವರಾಶಿ (ಬಯೋಮಾಸ್ ) ಪೂರೈಕೆ ಸರಪಳಿಗಳ ಪ್ರಸ್ತುತತೆ ಮತ್ತು ಮಹತ್ವವನ್ನು ಎತ್ತಿ ತೋರಿಸಿದರು. ಜೈವಿಕ ಇಂಧನ ಕ್ಷೇತ್ರದಲ್ಲಿ ಎಸ್ಎಸ್ಎಸ್-ಎನ್ಐಬಿಇ ಮಾಡುತ್ತಿರುವ ಸಂಶೋಧನೆಯ ಬಗ್ಗೆಯೂ ಅವರು ಭಾಗವಹಿಸಿದವರಿಗೆ ವಿವರಿಸಿದರು. ದೇಶದಲ್ಲಿ ಜೈವಿಕ ಇಂಧನ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನಕ್ಕೆ ಪೂರೈಕೆ ಸರಪಳಿ ನಿರ್ವಹಣೆ ಹೇಗೆ ನಿರ್ಣಾಯಕವಾಗಿದೆ ಎಂಬುದರತ್ತ  ಅವರು ಬೆಟ್ಟು ಮಾಡಿದರು.

ಪಿಎಸ್ಸಿಎಸ್ಟಿಯ ಶ್ರೀ ಮಗನ್ಬೀರ್ ಸಿಂಗ್ ಅವರು ಪಂಜಾಬ್ ರಾಜ್ಯದಲ್ಲಿ ಭತ್ತದ ತ್ಯಾಜ್ಯದ ಸವಾಲಿನ ಬಗ್ಗೆ ಉಪನ್ಯಾಸ ನೀಡಿದರು. ಪಿಎಸ್ಸಿಎಸ್ಟಿಯ ಚಟುವಟಿಕೆಗಳು, ಪಂಜಾಬಿನಲ್ಲಿ ಪ್ರಸ್ತುತ ಭತ್ತದ ಬಳಕೆಯ ಮಾರ್ಗಗಳು, ಅದರ ಬಳಕೆಯಲ್ಲಿ ಎದುರಿಸುತ್ತಿರುವ ಸವಾಲುಗಳು ಮತ್ತು ಅದನ್ನು ಸಂಪನ್ಮೂಲವಾಗಿ ಬಳಸಲು ಲಭ್ಯವಿರುವ ಅವಕಾಶಗಳನ್ನು ಅವರು ಪ್ರಸ್ತಾಪಿಸಿದರು.

ಒಂದು ದಿನದ ವಿಚಾರ ಸಂಕಿರಣವು ದೇಶದಲ್ಲಿ ಜೀವರಾಶಿ (ಬಯೋಮಾಸ್)  ಪೂರೈಕೆ ಸರಪಳಿಗಳ ಸಮರ್ಥ ನಿರ್ವಹಣೆಗೆ ಸಂಬಂಧಿಸಿದ ಸವಾಲುಗಳು ಮತ್ತು ಅವಕಾಶಗಳ ವಿವಿಧ ಆಯಾಮಗಳನ್ನು ಅನ್ವೇಷಿಸುವ ಗೋಷ್ಠಿಗಳನ್ನು ಹೊಂದಿತ್ತು.

ಎಸ್.ಎಸ್.ಎಸ್.-ಎನ್.ಐ.ಬಿ.ಇ. ಬಗ್ಗೆ

ಸರ್ದಾರ್ ಸ್ವರಣ್ ಸಿಂಗ್ ರಾಷ್ಟ್ರೀಯ ಜೈವಿಕ ಇಂಧನ ಸಂಸ್ಥೆ (ಎಸ್ಎಸ್ಎಸ್-ಎನ್ಐಬಿಇ) ಭಾರತ ಸರ್ಕಾರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಸ್ವಾಯತ್ತ ಸಂಸ್ಥೆಯಾಗಿದೆ. ಈ ಸಂಸ್ಥೆಯು ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಾಗಿದ್ದು, ಜೈವಿಕ ಇಂಧನದ ಮೇಲೆ ಗಮನ ಕೇಂದ್ರೀಕರಿಸುವ ಮತ್ತು ನವೀನ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಇರಾದೆಯನ್ನು ಹೊಂದಿದೆ.

ಪತ್ರಿಕಾ ಪ್ರಕಟಣೆಯ ಹೆಚ್ಚು ವಿವರವಾದ ಆವೃತ್ತಿಯನ್ನು ಇಲ್ಲಿ ನೋಡಬಹುದು -

https://static.pib.gov.in/WriteReadData/specificdocs/documents/2024/sep/doc202495388101.pdf

 

*****


(Release ID: 2052521) Visitor Counter : 49


Read this release in: English , Urdu , Hindi , Tamil