ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
azadi ka amrit mahotsav

ರಾಷ್ಟ್ರೀಯ ಶಿಕ್ಷಣ ನೀತಿ 2020 ರ ದೃಷ್ಟಿಯನ್ನು ಪೂರೈಸುವ ಪ್ರಮುಖ ಕ್ರಮದಲ್ಲಿ, ಭಾರತದಲ್ಲಿ ಕ್ಯಾಂಪಸ್ ಸ್ಥಾಪಿಸಲು ಯುಕೆಯ ಸೌತಾಂಪ್ಟನ್ ವಿಶ್ವವಿದ್ಯಾಲಯಕ್ಕೆ ಆಶಯ ಪತ್ರ ನೀಡಿಕೆ; ಕಾರ್ಯಕ್ರಮದಲ್ಲಿ ಡಾ.ಎಸ್.ಜೈಶಂಕರ್ ಉಪಸ್ಥಿತಿ


ಭಾರತವು 'ವಿಶ್ವ-ಬಂಧು' ಆಗಿ ತನ್ನ ಜಾಗತಿಕ ಜವಾಬ್ದಾರಿಗಳನ್ನು ಪೂರೈಸಲು ಮತ್ತು ಶಿಕ್ಷಣ, ನಾವೀನ್ಯತೆ ಮತ್ತು ಪ್ರಗತಿಗೆ ಉಜ್ವಲ ಭವಿಷ್ಯವನ್ನು ನಿರ್ಮಿಸಲು ಬದ್ಧವಾಗಿದೆ - ಶ್ರೀ ಧರ್ಮೇಂದ್ರ ಪ್ರಧಾನ್

Posted On: 29 AUG 2024 6:23PM by PIB Bengaluru

ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ ಇ ಪಿ) 2020 ರಲ್ಲಿ ಕಲ್ಪಿಸಿದಂತೆ ಅಂತರರಾಷ್ಟ್ರೀಕರಣದ ಗುರಿಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಶಿಕ್ಷಣ ಸಚಿವಾಲಯವು ಒಂದು ಪ್ರಮುಖ ಹೆಜ್ಜೆಯನ್ನು ಇಟ್ಟಿದೆ. ಯುಕೆಯ ಸೌತಾಂಪ್ಟನ್ ವಿಶ್ವವಿದ್ಯಾಲಯ (ಯುಒಎಸ್) ಕ್ಕೆ ಭಾರತದಲ್ಲಿ ತಮ್ಮ ಮೊದಲ ಕ್ಯಾಂಪಸ್ ಅನ್ನು ಸ್ಥಾಪಿಸಲು ಆಶಯ ಪತ್ರವನ್ನು (ಎಲ್‌ ಒ ಐ) ನೀಡಲಾಯಿತು. ಯುಕೆಯ ಸೌತಾಂಪ್ಟನ್ ವಿಶ್ವವಿದ್ಯಾಲಯ ಜಾಗತಿಕವಾಗಿ ಉನ್ನತ 100 ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸ್ಥಾನ ಪಡೆದಿದೆ ಮತ್ತು ಭಾರತದಲ್ಲಿ ಅದರ ಉಪಸ್ಥಿತಿಯು ಭಾರತದ ಶೈಕ್ಷಣಿಕ ಸನ್ನವೇಶವನ್ನು ಹೆಚ್ಚಿಸುತ್ತದೆ ಮತ್ತು ಭಾರತೀಯ ಮೌಲ್ಯಗಳಲ್ಲಿ ಬೇರೂರಿರುವ ಶಿಕ್ಷಣವನ್ನು ಪಡೆಯುವಾಗ ವಿದ್ಯಾರ್ಥಿಗಳಿಗೆ ಜಾಗತಿಕ ಮಾನ್ಯತೆಗಾಗಿ ಅನನ್ಯ ಅವಕಾಶವನ್ನು ಒದಗಿಸುತ್ತದೆ. ವಿದೇಶಿ ವಿಶ್ವವಿದ್ಯಾಲಯಗಳು ಭಾರತದಲ್ಲಿ ಕ್ಯಾಂಪಸ್‌ ಗಳನ್ನು ಸ್ಥಾಪಿಸಲು ಯುಜಿಸಿ ನಿಯಮಾವಳಿಗಳ ಅಡಿಯಲ್ಲಿ ಆಶಯ ಪತ್ರ ನೀಡಲಾದ ಮೊದಲ ವಿದೇಶಿ ವಿಶ್ವವಿದ್ಯಾಲಯ ಇದಾಗಿದೆ.‌

ಇಂದು ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎನ್‌ ಇ ಪಿ 2020 ಅಡಿಯಲ್ಲಿ ಶಿಕ್ಷಣದ ಅಂತರರಾಷ್ಟ್ರೀಕರಣ: ಭಾರತದಲ್ಲಿ ವಿದೇಶಿ ವಿಶ್ವವಿದ್ಯಾಲಯ ಸ್ಥಾಪನೆ ಎಂಬ ಶೀರ್ಷಿಕೆಯಡಿಯಲ್ಲಿ ಯುಕೆಯ ಸೌತಾಂಪ್ಟನ್ ವಿಶ್ವವಿದ್ಯಾಲಯಕ್ಕೆ (ಯುಒಎಸ್) ಉದ್ದೇಶ ಪತ್ರವನ್ನು ನೀಡಲಾಯಿತು.

ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಅವರು ಸಮಾರಂಭದಲ್ಲಿ ಭಾಗವಹಿಸಿದರು. ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಶ್ರೀ ಸಂಜಯ್ ಮೂರ್ತಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಿದೇಶಾಂಗ ಕಾರ್ಯದರ್ಶಿ ಶ್ರೀ ವಿಕ್ರಮ್ ಮಿಶ್ರಿ, ಭಾರತದಲ್ಲಿ ಯುಕೆ ಡೆಪ್ಯುಟಿ ಹೈ ಕಮಿಷನರ್ ಶ್ರೀಮತಿ ಕ್ರಿಸ್ಟಿನಾ ಸ್ಕಾಟ್, ಶ್ರೀ ಆಂಡ್ರ್ಯೂ ಅಥರ್ಟನ್, ಅಂತರರಾಷ್ಟ್ರೀಯ ಉಪಾಧ್ಯಕ್ಷರು, ಸೌತಾಂಪ್ಟನ್ ವಿಶ್ವವಿದ್ಯಾಲಯ; ಶ್ರೀ ಎಂ. ಜಗದೇಶ್ ಕುಮಾರ್, ಅಧ್ಯಕ್ಷರು, ಯುಜಿಸಿ; ರಾಷ್ಟ್ರಗಳ ಗೌರವಾನ್ವಿತ ರಾಯಭಾರಿಗಳು; ಖಾಸಗಿ ಮತ್ತು ರಾಜ್ಯ ವಿಶ್ವವಿದ್ಯಾಲಯಗಳ ಪ್ರಖ್ಯಾತ ಶಿಕ್ಷಣ ತಜ್ಞರು; ಉದ್ಯಮದ ಅಧಿಕಾರಿಗಳು ಮತ್ತು ಇತರ ಗಣ್ಯ ಅತಿಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಎನ್‌ ಇ ಪಿ 2020 ರ ಅಡಿಯಲ್ಲಿ ಭಾರತದಲ್ಲಿ ಕ್ಯಾಂಪಸ್ ಸ್ಥಾಪಿಸಲಿರುವ ಸೌತಾಂಪ್ಟನ್ ವಿಶ್ವವಿದ್ಯಾನಿಲಯಕ್ಕೆ ಉದ್ದೇಶ ಪತ್ರ ಹಸ್ತಾಂತರಿಸಿದ್ದಕ್ಕಾಗಿ ಡಾ. ಎಸ್. ಜೈಶಂಕರ್ ಅವರು ಸಂತೋಷ ವ್ಯಕ್ತಪಡಿಸಿದರು. ಇದು ನಮ್ಮ ಶೈಕ್ಷಣಿಕ ಗುಣಮಟ್ಟವನ್ನು ಉನ್ನತೀಕರಿಸುವ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು. ಇಂತಹ ಪ್ರಯತ್ನಗಳು ನಮ್ಮ ಯುವಕರನ್ನು ಮತ್ತಷ್ಟು ಸಿದ್ಧಗೊಳಿಸುತ್ತವೆ ಮತ್ತು ಜಾಗತಿಕ ತಿಳುವಳಿಕೆ ಮತ್ತು ಸಹಕಾರದ ಮನೋಭಾವವನ್ನು ಬೆಳೆಸುತ್ತವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಈ ಉಪಕ್ರಮವು ಶೈಕ್ಷಣಿಕ ಕ್ಷೇತ್ರದಲ್ಲಿ ಬ್ರಾಂಡ್ ಇಂಡಿಯಾದ ಬಲವಾದ ಪರಸ್ಪರ ಹೆಜ್ಜೆಗುರುತನ್ನು ಸ್ಥಾಪಿಸಲು ಸಹಾಯ ಮಾಡುತ್ತದೆ ಎಂದು ಸಚಿವರು ಹೇಳಿದರು. ಹೊಸ ತಂತ್ರಜ್ಞಾನಗಳು ಮತ್ತು ಸೇವಾ ಬೇಡಿಕೆಗಳನ್ನು ಜನಸಂಖ್ಯಾ ಕೊರತೆಗಳೊಂದಿಗೆ ಸಮನ್ವಯಗೊಳಿಸಲು ಪ್ರಯತ್ನಿಸುತ್ತಿರುವುದರಿಂದ ಇದು ಹೆಚ್ಚುತ್ತಿರುವ ವಾಸ್ತವವಾಗಿದೆ ಎಂದು ಸಚಿವರು ಹೇಳಿದರು.

ಭಾರತ-ಯುಕೆ ಮುನ್ನೋಟ 2030 ರ ಭಾಗವಾಗಿರುವ ಕೆಲವು ಪ್ರಮುಖ ಉಪಕ್ರಮಗಳನ್ನು ಡಾ. ಜೈಶಂಕರ್ ಅವರು ಪ್ರಸ್ತಾಪಿಸಿದರು ಮತ್ತು ಶಿಕ್ಷಣದಲ್ಲಿ ಸಹಕಾರವು ಅದರ ಪ್ರಮುಖ ಭಾಗವಾಗಿದೆ ಎಂದು ಹೇಳಿದರು. ಎರಡೂ ದೇಶಗಳ ನಡುವಿನ ಶೈಕ್ಷಣಿಕ ಅರ್ಹತೆಗಳ ಪರಸ್ಪರ ಗುರುತಿಸುವಿಕೆ ಮತ್ತು ಎರಡೂ ದೇಶಗಳ ನಡುವೆ ಜಂಟಿಯಾಗಿ ಘೋಷಿಸಲಾದ ಯುವ ವೃತ್ತಿಪರರ ಯೋಜನೆ (ವೈಪಿಎಸ್) ಕುರಿತು ತಿಳುವಳಿಕೆ ಒಪ್ಪಂದವನ್ನು ಉಲ್ಲೇಖಿಸಿದರು, ಇದು ಯುಕೆ-ಭಾರತ ಶಿಕ್ಷಣ ಮತ್ತು ಸಂಶೋಧನಾ ಉಪಕ್ರಮ (UKIERI) ಮತ್ತು ಶೈಕ್ಷಣಿಕ ಮತ್ತು ಸಂಶೋಧನಾ ಸಹಯೋಗದ ಪ್ರಚಾರಕ್ಕಾಗಿ ಯೋಜನೆ (SPARC) ಯಂತಹ ಕಾರ್ಯಕ್ರಮಗಳಲ್ಲಿ ಎರಡೂ ದೇಶಗಳ ಯುವ ಪದವೀಧರರು ಪರಸ್ಪರರ ಸಂಸ್ಥೆಗಳಲ್ಲಿ ಅಧ್ಯಯನ ಮಾಡಲು ಅನುವು ಮಾಡಿಕೊಡುತ್ತದೆ ಎಂದು ಅವರು ಹೇಳಿದರು.

 

ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಎಕ್ಸ್ ಪ್ಲಾಟ್‌ ಫಾರ್ಮ್‌ ನಲ್ಲಿ ನೀಡಿದ ಸಂದೇಶದಲ್ಲಿ, ಈ ಉಪಕ್ರಮವು ಎನ್‌ ಇ ಪಿ 2020 ರಲ್ಲಿ ಕಲ್ಪಿಸಿದಂತೆ 'ಮನೆಯಲ್ಲಿ ಅಂತರರಾಷ್ಟ್ರೀಕರಣ' ಗುರಿಯನ್ನು ಸಾಕಾರಗೊಳಿಸುವತ್ತ ಒಂದು ಹೆಜ್ಜೆಯಾಗಿದೆ ಎಂದು ಹೇಳಿದರು. ಭಾರತವು 'ವಿಶ್ವ-ಬಂಧು' ಆಗಿ ತನ್ನ ಜಾಗತಿಕ ಜವಾಬ್ದಾರಿಗಳನ್ನು ಪೂರೈಸಲು ಮತ್ತು ಶಿಕ್ಷಣ, ನಾವೀನ್ಯತೆ ಮತ್ತು ಪ್ರಗತಿಗೆ ಉಜ್ವಲ ಭವಿಷ್ಯವನ್ನು ನಿರ್ಮಿಸಲು ಬದ್ಧವಾಗಿದೆ ಅವರು ಹೇಳಿದರು.

ಹೆಚ್ಚು ಹೆಚ್ಚು ಜಾಗತಿಕವಾಗಿ ಪ್ರತಿಷ್ಠಿತ ಉನ್ನತ ಶಿಕ್ಷಣ ಸಂಸ್ಥೆಗಳು ಭಾರತದ ಉನ್ನತ ಸಂಸ್ಥೆಗಳೊಂದಿಗೆ ಬಹುಆಯಾಮದ ಸಹಯೋಗಕ್ಕಾಗಿ ಮತ್ತು ಭವಿಷ್ಯದ ಜಾಗತಿಕ ಶಿಕ್ಷಣ ಮತ್ತು ಪ್ರತಿಭೆಯ ಕೇಂದ್ರವಾಗಿ ಭಾರತದ ಸಾಮರ್ಥ್ಯವನ್ನು ಬಳಸಿಕೊಳ್ಳಲು ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿವೆ ಎಂದು ಅವರು ಸಂತೋಷ ವ್ಯಕ್ತಪಡಿಸಿದರು. ಭಾರತದಲ್ಲಿ ವಿದೇಶಿ ವಿಶ್ವವಿದ್ಯಾಲಯಗಳು ಮತ್ತು ವಿದೇಶಗಳಲ್ಲಿ ಭಾರತೀಯ ಉನ್ನತ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್‌ಗಳನ್ನು ಸ್ಥಾಪಿಸುವ ಉದ್ದೇಶವು ಶೈಕ್ಷಣಿಕ ಅವಕಾಶಗಳನ್ನು ವಿಸ್ತರಿಸುವುದು ಮಾತ್ರವಲ್ಲದೆ ಸಂಶೋಧನೆ, ಜ್ಞಾನ ವಿನಿಮಯ ಮತ್ತು ಜಾಗತಿಕ ಸಹಯೋಗದ ರೋಮಾಂಚಕ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುವುದಾಗಿದೆ ಎಂದು ಅವರು ಹೇಳಿದರು. ಜಾಗತಿಕ ಸವಾಲುಗಳಿಗೆ ಪರಿಹಾರಗಳನ್ನು ಒದಗಿಸುವ ಜಾಗತಿಕ ನೈತಿಕತೆಯನ್ನು ಹೊಂದಿರುವ “ಜಾಗತಿಕ ನಾಗರಿಕರನ್ನು”ಉತ್ಪಾದಿಸುವುದು ವಿವಿಧ ದೇಶಗಳ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.

ಭಾರತದಲ್ಲಿ ತಮ್ಮ ಕ್ಯಾಂಪಸ್ ತೆರೆಯುವ ಮೂಲಕ ಭಾರತ-ಯುಕೆ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವುದಕ್ಕಾಗಿ ಸೌತಾಂಪ್ಟನ್ ವಿಶ್ವವಿದ್ಯಾಲಯದ ಆಡಳಿತಕ್ಕೆ ಕೇಂದ್ರ ಶಿಕ್ಷಣ ಸಚಿವರು ತಮ್ಮ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು. ಅವರು ವಿಶ್ವದ ಇತರ ಉನ್ನತ ಸಂಸ್ಥೆಗಳನ್ನು ಭಾರತಕ್ಕೆ ಬರುವಂತೆ ಆಹ್ವಾನಿಸಿದರು.

ಶ್ರೀ ಕೆ. ಸಂಜಯ್ ಮೂರ್ತಿ ಅವರು ತಮ್ಮ ಭಾಷಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಅನುಷ್ಠಾನದ ನಂತರ ಯುಜಿಸಿ ಮತ್ತು ಎಐಸಿಟಿಇಯಂತಹ ನಿಯಂತ್ರಕ ಸಂಸ್ಥೆಗಳ ಸಹಯೋಗದೊಂದಿಗೆ ಜಾಗತಿಕ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಉದ್ದೇಶದಿಂದ ಎಲ್ಲರಿಗೂ ಶಿಕ್ಷಣ ಮತ್ತು ಆಜೀವ ಕಲಿಕೆಯ ಅವಕಾಶಗಳನ್ನು ಖಚಿತಪಡಿಸಲು ವಿವಿಧ ಸುಧಾರಣಾ ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಒತ್ತಿ ಹೇಳಿದರು. ನಮ್ಮ ಯುವಕರಲ್ಲಿ ಭವಿಷ್ಯಕ್ಕೆ ಸಿದ್ಧವಾಗಿರುವ ಸಾಮರ್ಥ್ಯಗಳನ್ನು ನಿರ್ಮಿಸುವ ಗುರಿಯನ್ನು ಹೊಂದಲಾಗಿದೆ ಎಂದು ಶ್ರೀ ಮೂರ್ತಿ ಹೇಳಿದರು.

ಅಂತರಾಷ್ಟ್ರೀಕರಣವನ್ನು ಉತ್ತೇಜಿಸಲು ಶಿಕ್ಷಣ ಮಂತ್ರಿ ಶ್ರೀ ಧರ್ಮೇಂದ್ರ ಪ್ರಧಾನ್ ಅವರ ನೇತೃತ್ವದಲ್ಲಿ ತೆಗೆದುಕೊಳ್ಳಲಾದ ಕೆಲವು ಪ್ರಮುಖ ಉಪಕ್ರಮಗಳಲ್ಲಿ ಯುಜಿಸಿ ನಿಯಮಗಳು ಭಾರತೀಯ ಮತ್ತು ವಿದೇಶಿ ಉನ್ನತ ಶಿಕ್ಷಣ ಸಂಸ್ಥೆಗಳ ನಡುವೆ ಜಂಟಿ/ದ್ವಿ ಮತ್ತು ಟ್ವಿನಿಂಗ್ ವ್ಯವಸ್ಥೆಗಳನ್ನು ಸಕ್ರಿಯಗೊಳಿಸುತ್ತವೆ; ಸ್ಟಡಿ ಇನ್ ಇಂಡಿಯಾ ಪೋರ್ಟಲ್ ಮೂಲಕ ಭಾರತೀಯ ಸಂಸ್ಥೆಗಳಿಗೆ ವಿದೇಶಿ ವಿದ್ಯಾರ್ಥಿಗಳ ಪ್ರವೇಶವನ್ನು ಸರಳೀಕರಿಸುವುದು ವಿದ್ಯಾರ್ಥಿಗಳ ಪ್ರವೇಶಕ್ಕೆ ಒನ್‌ ಸ್ಟಾಪ್‌ ವಿಂಡೋ ಮತ್ತು ಪ್ರವೇಶ ಪ್ರಕ್ರಿಯೆಯೊಂದಿಗೆ ವೀಸಾ ನೀಡುವಿಕೆಯನ್ನು ಜೋಡಿಸುತ್ತದೆ ಎಂದು ಅವರು ಹೇಳಿದರು.

ಪ್ರೊಫೆಸರ್ ಆಂಡ್ರ್ಯೂ ಅಥರ್ಟನ್ ಅವರು ಮಾತನಾಡಿ, ದೆಹಲಿಯ ಸೌತಾಂಪ್ಟನ್ ವಿಶ್ವವಿದ್ಯಾಲಯವು ಭಾರತದಲ್ಲಿ ಮೊದಲ ಸಮಗ್ರ ಅಂತರರಾಷ್ಟ್ರೀಯ ಕ್ಯಾಂಪಸ್ ಆಗಲಿದೆ ಎಂದು ಹೇಳಿದರು. ಇದು ವಿಶ್ವದರ್ಜೆಯ, ಪರಿಣಿತ ಮತ್ತು ವರ್ಗಾವಣೆ ಮಾಡಬಹುದಾದ ಕೌಶಲ್ಯಗಳನ್ನು ಹೊಂದಿರುವ ಕೆಲಸಕ್ಕೆ ಸಿದ್ಧವಾದ ಪದವೀಧರರನ್ನು ಉತ್ಪಾದಿಸುತ್ತದೆ ಮತ್ತು ಇದು ಭಾರತದ ವೇಗವಾಗಿ ಬೆಳೆಯುತ್ತಿರುವ ಜ್ಞಾನ ಆರ್ಥಿಕತೆಯನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದರು.

ಭಾರತದಲ್ಲಿ ಯುಒಎಸ್ ಕ್ಯಾಂಪಸ್‌‌ ನ ರಚನೆಯು ವಿದ್ಯಾರ್ಥಿಗಳಿಗೆ, ಜಾಗತಿಕ ಪಠ್ಯಕ್ರಮ ಮತ್ತು ಭಾರತದಲ್ಲಿ ಅಧ್ಯಯನ ಅವಕಾಶಗಳನ್ನು ವಿಸ್ತರಿಸಲು ಮತ್ತು ಸಂಶೋಧನೆ, ಜ್ಞಾನ ವಿನಿಮಯ, ಉದ್ಯಮ ಮತ್ತು ಸಹಯೋಗಕ್ಕಾಗಿ ಪ್ರಯೋಜನಕಾರಿಯಾಗಿದೆ. ವ್ಯವಹಾರ ಮತ್ತು ನಿರ್ವಹಣೆ, ಕಂಪ್ಯೂಟಿಂಗ್, ಕಾನೂನು, ಇಂಜಿನಿಯರಿಂಗ್, ಕಲೆ ಮತ್ತು ವಿನ್ಯಾಸ, ಜೈವಿಕ ವಿಜ್ಞಾನ ಮತ್ತು ಜೀವ ವಿಜ್ಞಾನಗಳ ಕುರಿತು ಕೋರ್ಸ್‌ ಗಳನ್ನು ನೀಡಲಾಗುವುದು. ವಿಶ್ವವಿದ್ಯಾನಿಲಯವು 10 ವರ್ಷಗಳ ಯೋಜಿತ ಕೋರ್ಸ್‌ ಆರಂಭವನ್ನು ಪ್ರಸ್ತುತಪಡಿಸಿದೆ. ಮೊದಲ ಮೂರು ವರ್ಷಗಳಲ್ಲಿ ಅವರು ಈ ಕೆಳಗಿನ ಕೋರ್ಸ್‌ ಗಳನ್ನು ನೀಡುತ್ತಾರೆ:

  • ಮೊದಲ ವರ್ಷ: ಬಿಎಸ್‌ಸಿ ಕಂಪ್ಯೂಟರ್ ಸೈನ್ಸ್, ಬಿಎಸ್‌ಸಿ ವ್ಯಾಪಾರ ನಿರ್ವಹಣೆ, ಬಿಎಸ್‌ಸಿ ಲೆಕ್ಕಪತ್ರ ನಿರ್ವಹಣೆ ಮತ್ತು ಹಣಕಾಸು, ಬಿಎಸ್‌ಸಿ ಅರ್ಥಶಾಸ್ತ್ರ ಮತ್ತು ಎಂಎಸ್ಸಿ. ಇಂಟರ್ನ್ಯಾಷನಲ್ ಮ್ಯಾನೇಜ್ಮೆಂಟ್, ಎಂಎಸ್‌ಸಿ ಹಣಕಾಸು.
  • ಎರಡನೇ ವರ್ಷ ಬಿಎಸ್‌ಸಿ ಸಾಫ್ಟ್‌ವೇರ್ ಎಂಜಿನಿಯರಿಂಗ್, ಬಿಎಸ್‌ಸಿ ಕ್ರಿಯೇಟಿವ್ ಕಂಪ್ಯೂಟಿಂಗ್, ಎಂಎಸ್‌ಸಿ ಅರ್ಥಶಾಸ್ತ್ರವನ್ನು ಸೇರಿಸುತ್ತದೆ.
  • ಮೂರನೇ ವರ್ಷ ಎಲ್‌ ಎಲ್‌ ಬಿ ಕಾನೂನು ಮತ್ತು ನಂತರ B.Eng (ಮೆಕ್ಯಾನಿಕಲ್ ಇಂಜಿನಿಯರಿಂಗ್) ಸೇರಿಸುತ್ತದೆ.

ರಾಷ್ಟ್ರೀಯ ಶಿಕ್ಷಣ ನೀತಿ 2020 (ಎನ್‌ ಇ ಪಿ 2020) ಉನ್ನತ ಶಿಕ್ಷಣದ ಗುಣಮಟ್ಟದಲ್ಲಿ ಅತ್ಯುನ್ನತ ಜಾಗತಿಕ ಗುಣಮಟ್ಟವನ್ನು ಸಾಧಿಸಲು ಬಲವಾದ ಒತ್ತು ನೀಡುತ್ತದೆ. ಇದು "ದೇಶದಲ್ಲಿ ಅಂತ ರಾಷ್ಟ್ರೀಕರಣ"ದ ಅಗತ್ಯವನ್ನು ಎತ್ತಿ ತೋರಿಸುತ್ತದೆ ಮತ್ತು ಭಾರತವನ್ನು ಜಾಗತಿಕ ಅಧ್ಯಯನ ತಾಣವಾಗಿ ಉತ್ತೇಜಿಸುತ್ತದೆ, ಕೈಗೆಟುಕುವ ವೆಚ್ಚದಲ್ಲಿ ಉನ್ನತ ಶಿಕ್ಷಣವನ್ನು ನೀಡುತ್ತದೆ. ಭಾರತದಲ್ಲಿ ಸೌತಾಂಪ್ಟನ್ ವಿಶ್ವವಿದ್ಯಾನಿಲಯದ ಕ್ಯಾಂಪಸ್ ಸ್ಥಾಪನೆಯು ಜಾಗತಿಕ ಅಧ್ಯಯನ ತಾಣವಾಗಿ ಭಾರತದ ಆಕರ್ಷಣೆಯನ್ನು ಹೆಚ್ಚಿಸುತ್ತದೆ ಮತ್ತು ಭಾರತ-ಯುಕೆ ಸಂಬಂಧಗಳನ್ನು ಬಲಪಡಿಸುತ್ತದೆ, ಭವಿಷ್ಯದ ಶೈಕ್ಷಣಿಕ ಸಹಯೋಗಗಳಿಗೆ ದಾರಿ ಮಾಡಿಕೊಡುತ್ತದೆ. 

 

*****

 


(Release ID: 2049970) Visitor Counter : 112