ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಪ್ರವಾಹ ಪೀಡಿತ ತ್ರಿಪುರಾದಲ್ಲಿ ಸೇವೆಗಳನ್ನು ಪುನಃಸ್ಥಾಪಿಸುವಲ್ಲಿ ದೂರಸಂಪರ್ಕ ಇಲಾಖೆ ಮತ್ತು ದೂರಸಂಪರ್ಕ ಸೇವಾ ಪೂರೈಕೆದಾರರು ಗಣನೀಯ ಪ್ರಗತಿ ಸಾಧಿಸಿದ್ದಾರೆ
ದೂರಸಂಪರ್ಕ ಇಲಾಖೆ ತ್ರಿಪುರಾದಲ್ಲಿ ಇಂಟ್ರಾ ಸರ್ಕಲ್ ರೋಮಿಂಗ್ ಅನ್ನು ಜಾರಿಗೆ ತಂದಿದೆ
ಸಾಮಾನ್ಯ ಸ್ಥಿತಿ ತರಲು ಅತ್ಯಾವಶ್ಯಕ ಸಂವಹನ ಸೇವೆಗಳನ್ನು ನಿರ್ವಹಿಸಲು ಟಿಸ್‌ಪಿಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ
Posted On:
25 AUG 2024 8:40PM by PIB Bengaluru
ಪ್ರವಾಹ ಪೀಡಿತ ತ್ರಿಪುರಾದಲ್ಲಿ ದೂರಸಂಪರ್ಕ ಸೇವೆಗಳನ್ನು ಮರುಸ್ಥಾಪಿಸಲು ದೂರಸಂಪರ್ಕ ಇಲಾಖೆ (DoT) ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಭೀಕರ ಸವಾಲುಗಳ ನಡುವೆಯೂ, BSNL, ರಿಲಯನ್ಸ್ ಜಿಯೋ, ಏರ್ಟೆಲ್ ಮತ್ತು ವೋಡಾಫೋನ್ ಸೇರಿದಂತೆ ದೂರಸಂಪರ್ಕ ಸೇವಾ ಒದಗಿಸುವವರ (ಟಿಸ್‌ಪಿಗಳು) ಒಗ್ಗಟ್ಟಿನ ಪ್ರಯತ್ನಗಳಿಂದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ 94% ಕ್ಕಿಂತ ಹೆಚ್ಚು ದೂರಸಂಪರ್ಕ ಜಾಲವನ್ನು ಪುನಃ ಸ್ಥಾಪಿಸಲು ಸಾಧ್ಯವಾಗಿದೆ. ಇದು ರಕ್ಷಣಾ ತಂಡಗಳು, ಸರ್ಕಾರಿ ಅಧಿಕಾರಿಗಳು ಮತ್ತು ಸಾರ್ವಜನಿಕರ ಸಂವಹನವನ್ನು ಕಾಪಾಡಲು ಸಹಾಯಕವಾಗಿದೆ.
ಆಗಸ್ಟ್ 19 ರಿಂದ 23 ರವರೆಗೆ ಸಂಭವಿಸಿದ ಭಾರೀ ಮಳೆಯಿಂದಾಗಿ ತ್ರಿಪುರಾ ರಾಜ್ಯವು ತೀವ್ರ ಪ್ರವಾಹವನ್ನು ಅನುಭವಿಸಿದೆ. ಇದರಿಂದಾಗಿ ಗಂಭೀರವಾದ ಹಾನಿ ಉಂಟಾಗಿದೆ. ಈ ಪ್ರವಾಹವು ದೂರಸಂಪರ್ಕ ಮೂಲಸೌಕರ್ಯಕ್ಕೆ ಗಮನಾರ್ಹ ಹಾನಿ ಉಂಟುಮಾಡಿದ್ದು, ವ್ಯಾಪಕವಾದ ಸೇವಾ ವ್ಯತ್ಯಯಗಳಿಗೆ ಕಾರಣವಾಗಿದೆ.
ಸಂಕಷ್ಟದಲ್ಲಿರುವ ಸಮುದಾಯಗಳಿಗೆ ಬೆಂಬಲ ನೀಡಲು ಮತ್ತು ನಿರಂತರ ವ್ಯಾಪ್ತಿಯನ್ನು ಖಚಿತಪಡಿಸಿಕೊಳ್ಳಲು ದೂರಸಂಪರ್ಕ ಇಲಾಖೆ ಮತ್ತು ದೂರಸಂಪರ್ಕ ಕಂಪನಿಗಳು ಈ ಕೆಳಗಿನ ಕ್ರಮಗಳನ್ನು ಕೈಗೊಂಡಿವೆ.
- ಸರ್ಕಾರವು ತನ್ನ ಸ್ಥಳೀಯ ಘಟಕ ಮತ್ತು ದೂರಸಂಪರ್ಕ ಕಂಪನಿಗಳೊಂದಿಗೆ ಪರಿಸ್ಥಿತಿಯನ್ನು ನಿಯಮಿತವಾಗಿ ಪರಿಶೀಲಿಸುತ್ತಿದೆ.
- ತ್ರಿಪುರಾದಲ್ಲಿನ DoT LSA ಘಟಕವು ಸಮಯೋಚಿತವಾಗಿ ಕಾರ್ಯನಿರ್ವಹಿಸಿ, ರಾಜ್ಯ ಆಡಳಿತ, ರಾಜ್ಯ ವಿಪತ್ತು ನಿರ್ವಹಣಾ ಘಟಕ ಮತ್ತು ದೂರಸಂಪರ್ಕ ಸೇವಾ ಒದಗಿಸುವವರೊಂದಿಗೆ ನಿಕಟ ಸಹಯೋಗದಿಂದ ದೂರಸಂಪರ್ಕ ಜಾಲವನ್ನು ಅತ್ಯಂತ ಕಡಿಮೆ ಸಮಯದಲ್ಲಿ ಸ್ಥಾಪಿಸಿತು.
- ಸ್ಥಳೀಯ ಕಚೇರಿಯಿಂದ ಬಂದ ವರದಿಯ ಆಧಾರದ ಮೇಲೆ, ದೂರಸಂಪರ್ಕ ಇಲಾಖೆಯು (DoT) ತ್ರಿಪುರಾ ರಾಜ್ಯದಲ್ಲಿ 22.08.2024 ರಿಂದ 27.08.2024 ರವರೆಗೆ ಇಂಟ್ರಾ ಸರ್ಕಲ್ ರೋಮಿಂಗ್ (ICR) ಅನ್ನು ಜಾರಿಗೊಳಿಸಿದೆ. ಎಲ್ಲಾ ದೂರಸಂಪರ್ಕ ಸೇವಾ ಪೂರೈಕೆದಾರರು (TSP) ತಮ್ಮ ನೆಟ್ ವರ್ಕ್ ನಲ್ಲಿ ICR ಅನ್ನು ತ್ವರಿತವಾಗಿ ಅನುಷ್ಠಾನಗೊಳಿಸಿದ್ದಾರೆ. ಇದರಿಂದಾಗಿ ಗ್ರಾಹಕರು ತಮ್ಮ ಚಂದಾದಾರಿಕೆಯನ್ನು ಲೆಕ್ಕಿಸದೆ, ಲಭ್ಯವಿರುವ ಯಾವುದೇ TSP ನೆಟ್ವರ್ಕ್‌ಗಳ ಸೇವೆಗಳನ್ನು ಪಡೆಯಲು ಸಾಧ್ಯವಾಗುತ್ತದೆ.
- ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಗಳ ವಿನಂತಿಯ ಮೇರೆಗೆ, ದೂರಸಂಪರ್ಕ ಸೇವಾ ಪೂರೈಕೆದಾರರು (TSPs) ಹಾನಿಗೊಳಗಾದ ಪ್ರದೇಶದಲ್ಲಿ ಹಾನಿಗೊಳಗಾದ ದೂರಸಂಪರ್ಕ ಉಪಕರಣಗಳನ್ನು ತಕ್ಷಣವೇ ಬದಲಾಯಿಸಿದ್ದಾರೆ. ಇದು ಸಂಕಷ್ಟದಲ್ಲಿರುವ ನಿವಾಸಿಗಳಿಗೆ ಮತ್ತು ರಕ್ಷಣಾ ಕಾರ್ಯಕರ್ತರು ಹಾಗೂ ವಿಪತ್ತು ನಿರ್ವಹಣಾ ತಂಡಗಳಿಗೆ ನೆರವಾಗಿದೆ.
- ಜೊತೆಗೆ, ಈ ಗಂಭೀರ ಸಮಯದಲ್ಲಿ ಜನರು ಸಂಪರ್ಕದಲ್ಲಿರುವಂತೆ ಟಿಎಸ್ಪಿಗಳು ಇತರ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಈ ಪ್ರದೇಶಗಳಲ್ಲಿ ಇತ್ತೀಚೆಗೆ ಯೋಜನೆಗಳು ಮುಗಿದಿರುವ ಅಥವಾ ಮುಂದಿನ 2 ದಿನಗಳಲ್ಲಿ ಮುಗಿಯಲಿದ್ದ ಎಲ್ಲಾ ಗ್ರಾಹಕರಿಗೆ ಜಿಯೋ ತನ್ನ ಪ್ರೀಪೇಯ್ಡ್ ಯೋಜನೆಗಳ ಮಾನ್ಯತೆಯನ್ನು 4 ದಿನಗಳವರೆಗೆ ವಿಸ್ತರಿಸಿದೆ. ಯೋಜನೆಯ ಮಾನ್ಯತೆ ಮುಗಿದಿರುವ ಮತ್ತು ರೀಚಾರ್ಜ್ ಮಾಡಲು ಸಾಧ್ಯವಾಗದ ಏರ್ಟೆಲ್ ಪ್ರೀಪೇಯ್ಡ್ ಗ್ರಾಹಕರಿಗೆ ಪ್ರತಿದಿನ 1.5 GB ಉಚಿತ ಮೊಬೈಲ್ ಡೇಟಾ ಮತ್ತು 4 ದಿನಗಳ ಮಾನ್ಯತೆಯೊಂದಿಗೆ ಅನಿಯಮಿತ ಕರೆ ಮಾಡುವ ಸೌಲಭ್ಯ ನೀಡಲಾಗುತ್ತಿದೆ. ಅದರ ಜೊತೆಗೆ, ಎಲ್ಲಾ ಪೋಸ್ಟ್-ಪೇಯ್ಡ್ ಗ್ರಾಹಕರ ಬಿಲ್ ಪಾವತಿ ದಿನಾಂಕಗಳನ್ನು 30 ದಿನಗಳವರೆಗೆ ವಿಸ್ತರಿಸಲಾಗಿದೆ.
*****
(Release ID: 2049096)
Visitor Counter : 38