ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಯುವಕರ ಶಕ್ತಿ ಮತ್ತು ಸಮರ್ಪಣೆ ವಿಕಸಿತ ಭಾರತ ನ ದೃಷ್ಟಿಯನ್ನು ಸಾಕಾರಗೊಳಿಸಲು ಸಹಾಯ ಮಾಡುತ್ತದೆ: ಡಾ. ಮನ್ಸುಖ್ ಮಾಂಡವಿಯಾ


ಕೇಂದ್ರ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರು ಅಂತರಾಷ್ಟ್ರೀಯ ಯುವ ದಿನದಂದು ಆಯೋಜಿಸಲಾದ ಯುವ ಸಮಾವೇಶ 2024 ರಲ್ಲಿ ಮುಖ್ಯ ಭಾಷಣ ಮಾಡಿದರು

Posted On: 12 AUG 2024 4:34PM by PIB Bengaluru

ಇಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ 'ಇಂಪ್ಯಾಕ್ಟ್ ವಿತ್ ಯೂತ್ ಕಾನ್‌ಕ್ಲೇವ್ 2024' ನಲ್ಲಿ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡೆ ಮತ್ತು ಕಾರ್ಮಿಕ ಮತ್ತು ಉದ್ಯೋಗ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರು ಮುಖ್ಯ ಭಾಷಣ ಮಾಡಿದರು. ವಿಶ್ವಸಂಸ್ಥೆಯ ಭಾರತ ಘಟಕ, UNICEF, UNICEF Yuwaah ಮತ್ತು ಎಲಿಕ್ಸಿರ್ ಫೌಂಡೇಶನ್, ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಸಹಯೋಗದೊಂದಿಗೆ ಜಂಟಿಯಾಗಿ ಈ ಸಮಾವೇಶ ಆಯೋಜಿಸಲಾಗಿತ್ತು. ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ನೂರಾರು ಉತ್ಸಾಹಿ ಯುವಕರಿಗೆ ಇದು ವೇದಿಕೆ ಕಲ್ಪಿಸಿತು.

ಅಭಿವೃದ್ಧಿ ಹೊಂದಿದ ಭಾರತದ (ವಿಕಸಿತ ಭಾರತ) ದೃಷ್ಟಿಕೋನವನ್ನು ಸಾಕಾರಗೊಳಿಸುವಲ್ಲಿ ಯುವಕರ ಪಾತ್ರ ಮುಖ್ಯ. ನಿಮ್ಮ ಶಕ್ತಿ, ನಾವೀನ್ಯತೆ ಮತ್ತು ಸಮರ್ಪಣೆ 2047 ರ ವೇಳೆಗೆ ಗೌರವಾನ್ವಿತ ಪ್ರಧಾನ ಮಂತ್ರಿಯವರ ವಿಕಸಿತ ಭಾರತ ದೃಷ್ಟಿಯನ್ನು ಸಾಕಾರಗೊಳಿಸಲು ಪ್ರಮುಖವಾಗಿದೆ ಎಂದರು.

 

 

ಭಾರತ ಯುವಜನತೆಯ ದೇಶವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಅವರ ಸಾಮರ್ಥ್ಯಗಳಲ್ಲಿ ಅಪಾರ ವಿಶ್ವಾಸವನ್ನು ಹೊಂದಿದೆ ಮತ್ತು ಯುವ ಸಮೂಹವನ್ನು ಸಬಲೀಕರಣಗೊಳಿಸಲು ಮತ್ತು ಉತ್ತಮ ಅವಕಾಶಗಳನ್ನು ಒದಗಿಸಲು ಎಲ್ಲ ರೀತಿಯ ಯೋಜನೆಗಳನ್ನು ಜಾರಿಗೆ ತರುತ್ತಿದೆ ಕೇಂದ್ರ ಸಚಿವರು ಹೇಳಿದರು.

ಡಿಜಿಟಲ್ ತಂತ್ರಜ್ಞಾನಗಳ ಪರಿವರ್ತಕ ಸಾಮರ್ಥ್ಯದ ಕುರಿತು ಸಚಿವರು ಮಾತನಾಡಿದರು. ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ದೇಶದ ಭವಿಷ್ಯವನ್ನು ರೂಪಿಸಲು ಸರ್ಕಾರ ಈ ವೇದಿಕೆಯನ್ನು ಪರಿಚಯಿಸಿದೆ. ಮುಂಬರುವ ದಿನಗಳಲ್ಲಿ ಯುವಜನರ ಎಲ್ಲಾ ಅಗತ್ಯತೆಗಳಿಗೆ ಮೈ ಭಾರತ್ ಏಕಮಾತ್ರ ಪರಿಹಾರವಾಗಿ ಕಾರ್ಯನಿರ್ವಹಿಸಲಿದೆ ಎಂದರು. "ಇದು ಮಾಹಿತಿ, ವೃತ್ತಿ ಅಪ್ಲಿಕೇಶನ್‌ಗಳು ಅಥವಾ ಫಾರ್ಮ್ ಸಲ್ಲಿಕೆಯಾಗಿರಲಿ, ಈ ವೇದಿಕೆಯು ರಾಷ್ಟ್ರೀಯ ಮಟ್ಟದಲ್ಲಿ ಮಾತ್ರವಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಪ್ರವೇಶಕ್ಕೆ ಅವಕಾಶ ಕಲ್ಪಿಸುತ್ತದೆ" ಎಂದು ಹೇಳಿದರು. 

'ಯುವ ಸಂವಾದ' ಎಂಬ ವಿಶೇಷ ವಿಭಾಗದಲ್ಲಿ ಡಾ. ಮಾಂಡವೀಯ ಅವರು ಯುವಕರೊಂದಿಗೆ ಸಂವಾದ ನಡೆಸಿದರು. ತಮ್ಮ ಸಮುದಾಯಗಳಲ್ಲಿ ಸವಾಲುಗಳನ್ನು ಜಯಿಸುವ ಮತ್ತು ಸಕಾರಾತ್ಮಕ ಬದಲಾವಣೆಯನ್ನು ಉಂಟುಮಾಡುವ ಅವರ ಸ್ಪೂರ್ತಿದಾಯಕ ಕಥೆಗಳನ್ನು ಯುವ ಉತ್ಸಾಹಿಗಳು ಹಂಚಿಕೊಂಡರು. ಸಮಾಜಕ್ಕೆ ಅರ್ಥಪೂರ್ಣ ಕೊಡುಗೆಗಳನ್ನು ನೀಡುವ ಅವರ ಸಾಮರ್ಥ್ಯ ಮತ್ತು ಇತರೆ ವಿಷಯಗಳ ಬಗ್ಗೆ ಪ್ರಸ್ತಾಪಿಸಿದರು.

ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭ್ಯಾಸಗಳಲ್ಲಿ ಯುವಜನರ ನಿರ್ಣಾಯಕ ಪಾತ್ರವನ್ನು ಎತ್ತಿ ತೋರಿಸುವ ಗೌರವಾನ್ವಿತ ಪ್ರಧಾನ ಮಂತ್ರಿಯವರ #Plant4Mother ಉಪಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಕೇಂದ್ರ ಸಚಿವರು ಯುವಕರನ್ನು ಪ್ರೋತ್ಸಾಹಿಸಿದರು.

ಭಾರತದಲ್ಲಿ UNICEF ಪ್ರತಿನಿಧಿ ಮತ್ತು UNICEF YuWaah ಮಂಡಳಿಯ ಸಹ-ಅಧ್ಯಕ್ಷರಾದ ಶ್ರೀಮತಿ ಸಿಂಥಿಯಾ ಮೆಕ್‌ಕ್ಯಾಫ್ರಿ, ಜಾಗತಿಕ ಕ್ರಿಯೆಯಲ್ಲಿ ಯುವಕರನ್ನು ತೊಡಗಿಸಿಕೊಳ್ಳುವ ಮಹತ್ವದ ಬಗ್ಗೆ ತಿಳಿ ಹೇಳಿದರು.

ಅಂತರಾಷ್ಟ್ರೀಯ ಯುವ ದಿನ

ವಿಶ್ವಸಂಸ್ಥೆಯ ಅಂತರಾಷ್ಟ್ರೀಯ ಯುವ ದಿನವನ್ನು ಪ್ರತಿ ವರ್ಷ ಆಗಸ್ಟ್ 12 ರಂದು ಆಚರಿಸುತ್ತದೆ. ಭವಿಷ್ಯವನ್ನು ರೂಪಿಸುವಲ್ಲಿ ಯುವ ಸಮುದಾಯದ ಪ್ರಾಮುಖ್ಯತೆಯನ್ನು ಇದು ಎತ್ತಿ ತೋರಿಸುತ್ತದೆ. ಈ ವರ್ಷದ ಥೀಮ್, 'ಕ್ಲಿಕ್‌ ಟು ಪ್ರೊಗ್ರಸ್‌: ಸುಸ್ಥಿರ ಅಭಿವೃದ್ಧಿಗಾಗಿ ಯುವ ಡಿಜಿಟಲ್ ಮಾರ್ಗಗಳು,' ಡಿಜಿಟಲೀಕರಣವು ನಮ್ಮ ಜಗತ್ತನ್ನು ಹೇಗೆ ಪರಿವರ್ತಿಸುತ್ತಿದೆ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ವೇಗಗೊಳಿಸಲು ಅಭೂತಪೂರ್ವ ಅವಕಾಶಗಳನ್ನು ನೀಡುತ್ತದೆ ಎಂಬುದಾಗಿದೆ. ಮೊಬೈಲ್ ಸಾಧನಗಳು, ಸೇವೆಗಳು ಮತ್ತು ಕೃತಕ ಬುದ್ಧಿಮತ್ತೆಯಂತಹ ಡಿಜಿಟಲ್ ತಂತ್ರಜ್ಞಾನಗಳು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (SDGs) ಮುನ್ನಡೆಸುವಲ್ಲಿ ಪ್ರಮುಖವಾಗಿವೆ.

 

*****
 



(Release ID: 2044742) Visitor Counter : 7