ಸಹಕಾರ ಸಚಿವಾಲಯ
azadi ka amrit mahotsav

ಎನ್. ಎಫ್.ಸಿ.ಎಸ್. ಎಫ್.‌ ಇಂದು ನವದೆಹಲಿಯಲ್ಲಿ ಸಂಯೋಜಿಸಿದ ಸಕ್ಕರೆ ಉದ್ಯಮದ ವಿಚಾರ ಸಂಕಿರಣ ಮತ್ತು ರಾಷ್ಟ್ರೀಯ ದಕ್ಷತಾ ಪ್ರಶಸ್ತಿ 2022-23 ಸಮಾರಂಭದಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು


ಮೋದಿ ಸರಕಾರವು ಸಹಕಾರಿ ಸಂಸ್ಥೆಗಳ ಮೂಲಕ ಆರ್ಥಿಕ ಅಭಿವೃದ್ಧಿ ಹಾಗೂ ಗ್ರಾಮೀಣ ಸಬಲೀಕರಣವನ್ನು ಉತ್ತೇಜಿಸಿದೆ

ರೈತನ ಏಳಿಗೆಯೇ ಮೋದಿ ಸರ್ಕಾರದ ಗುರಿ

ಸಕ್ಕರೆ ಉತ್ಪಾದನೆಯ ಲಾಭವೆಲ್ಲ ರೈತರ ಬ್ಯಾಂಕ್ ಖಾತೆಗೆ ಸೇರಬೇಕು ಎಂಬುದು ನಮ್ಮ ಗುರಿಯಾಗಿದೆ

ಎರಡು ವರ್ಷಗಳಲ್ಲಿ, ದೇಶದ ಎಲ್ಲಾ ಸಹಕಾರಿ ಸಕ್ಕರೆ ಕಾರ್ಖಾನೆಗಳು ಎಥೆನಾಲ್ ಉತ್ಪಾದಿಸಬೇಕು

ಸಕ್ಕರೆ ಉದ್ಯಮದಿಂದ 2013-14ರಲ್ಲಿ ಎಥೆನಾಲ್ ಉತ್ಪಾದನೆ 38 ಕೋಟಿ ಲೀಟರ್‌ ರಷ್ಟಿತ್ತು, ಅದು ಇಂದು 370 ಕೋಟಿ ಲೀಟರ್‌ ಗೆ ಏರಿಕೆಯಾಗಿದೆ.

ಕಳೆದ 10 ವರ್ಷಗಳಲ್ಲಿ ಮೋದಿಯವರ ನೇತೃತ್ವದಲ್ಲಿ ದೇಶವು ಸಕ್ಕರೆ ಉತ್ಪಾದನೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ

ಎಥೆನಾಲ್ ಮಿಶ್ರಣದ ಬಗ್ಗೆ ಮೋದಿ ಸರ್ಕಾರದ ನೀತಿ ನಿರ್ಧಾರವು ಪೆಟ್ರೋಲ್‌ ನ ಆಮದು ಬಿಲ್ ಅನ್ನು ಕಡಿಮೆ ಮಾಡಿತು, ಪರಿಸರವನ್ನು ಸುಧಾರಿಸಿತು, ರೈತರಿಗೆ ಪ್ರಯೋಜನವನ್ನು ನೀಡಿತು ಮತ್ತು ಸಕ್ಕರೆ ಕಾರ್ಖಾನೆಗಳ ಲಾಭವನ್ನು ಹೆಚ್ಚಿಸಿತು

2030 ರ ವೇಳೆಗೆ ಶೇಕಡಾ 20 ರಷ್ಟು ಎಥೆನಾಲ್ ಮಿಶ್ರಣದ ಗುರಿಯನ್ನು ಮೋದಿ ಜಿ ಹೊಂದಿದ್ದರು, ನಾವು 2025-26 ರ ವೇಳೆಗೆ ಈ ಗುರಿಯನ್ನು ಸಾಧಿಸುತ್ತೇವೆ

Posted On: 10 AUG 2024 7:01PM by PIB Bengaluru

ಇಂದು ನವದೆಹಲಿಯಲ್ಲಿ ನಡೆದ ಎನ್. ಎಫ್.ಸಿ.ಎಸ್. ಎಫ್. ನ ಸಕ್ಕರೆ ಉದ್ಯಮದ ವಿಚಾರ ಸಂಕಿರಣ ಮತ್ತು ರಾಷ್ಟ್ರೀಯ ದಕ್ಷತಾ ಪ್ರಶಸ್ತಿ 2022-23 ಸಮಾರಂಭದಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಶ್ರೀ ಅಮಿತ್ ಶಾ ಅವರು ಸಹಕಾರಿ ಸಂಘಗಳ ಎಂಟು ಕ್ಷೇತ್ರಗಳಲ್ಲಿ ಸಕ್ಕರೆ ಕಾರ್ಖಾನೆಗಳಿಗೆ ರಾಷ್ಟ್ರೀಯ ದಕ್ಷತಾ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

ಶ್ರೀ ಅಮಿತ್ ಶಾ ಅವರು ತಮ್ಮ ಭಾಷಣದಲ್ಲಿ, “ನಮ್ಮ ದೇಶವು ಸಹಕಾರ ಚಳುವಳಿಗೆ ಸಾಕ್ಷಿಯಾಗಿದೆ ಮತ್ತು ಸಹಕಾರವು ದೀರ್ಘಕಾಲದವರೆಗೆ ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ” ಎಂದು ಹೇಳಿದರು. “ಗುಜರಾತ್, ಮಹಾರಾಷ್ಟ್ರ, ತಮಿಳುನಾಡು ಮತ್ತು ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳು ಇದರಲ್ಲಿ ನಾಯಕತ್ವದ ಪಾತ್ರವನ್ನು ವಹಿಸಿವೆ. ಸ್ವಾತಂತ್ರ್ಯಾನಂತರ ಸಹಕಾರಿ ಚಳವಳಿ ಅಗತ್ಯ ಬದಲಾವಣೆಗೆ ಒಳಗಾಗದೇ ಈ ಕಾರಣದಿಂದ ಕೆಲವೇ ರಾಜ್ಯಗಳಿಗೆ ಸೀಮಿತವಾಯಿತು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಐತಿಹಾಸಿಕ ನಿರ್ಧಾರ ಕೈಗೊಂಡು ಪ್ರತ್ಯೇಕ ಸಹಕಾರ ಸಚಿವಾಲಯವನ್ನು ಇತ್ತೀಚೆಗೆ ರಚಿಸಿದ ನಂತರ ಸಹಕಾರಿ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಲಾಗಿದೆ” ಎಂದು ಶ್ರೀ ಅಮಿತ್‌ ಶಾ ಅವರು ಹೇಳಿದರು.

“ಕಳೆದ 10 ವರ್ಷಗಳಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶವು ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಗತಿ ಸಾಧಿಸಿದೆ” ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅವರು ಹೇಳಿದರು.“ 2013-14ನೇ ಸಾಲಿನಲ್ಲಿ 5 ಮಿಲಿಯನ್ ಹೆಕ್ಟೇರ್ ಇದ್ದ ಕಬ್ಬು ಉತ್ಪಾದನೆಯ ಪ್ರದೇಶವನ್ನು ಕೇವಲ 10 ವರ್ಷಗಳಲ್ಲಿ 6 ಮಿಲಿಯನ್ ಹೆಕ್ಟೇರ್‌ ಗೆ , ಸುಮಾರು ಶೇ.18 ರಷ್ಟು ಹೆಚ್ಚಿಸುವಲ್ಲಿ ಯಶಸ್ವಿಯಾಗಿದ್ದೇವೆ. 2013-14ರಲ್ಲಿ 352 ದಶಲಕ್ಷ ಟನ್‌ಗಳಷ್ಟಿದ್ದ ಕಬ್ಬು ಉತ್ಪಾದನೆಯು ಇಂದು 491 ದಶಲಕ್ಷ ಟನ್‌ಗಳಿಗೆ ಶೇ.40ರಷ್ಟು ಏರಿಕೆಯಾಗಿದೆ. ಅದೇ ರೀತಿ ಇಳುವರಿ ಶೇ.19 ಮತ್ತು ಸಕ್ಕರೆ ಉತ್ಪಾದನೆ ಶೇ.58ರಷ್ಟು ಹೆಚ್ಚಿದೆ. 2013-14ರಲ್ಲಿ ಸಕ್ಕರೆಯಿಂದ  ವಾರ್ಷಿಕ ಎಥೆನಾಲ್ ಉತ್ಪಾದನೆ ಶೂನ್ಯ ಮಟ್ಟಕ್ಕೆ ಹೋಲಿಸಿದರೆ, ಇಂದು ಎಥೆನಾಲ್ ಉತ್ಪಾದನೆಗೆ 4.5 ಮಿಲಿಯನ್ ಟನ್ ಸಕ್ಕರೆಯನ್ನು ಉಪಯೋಗಿಸಲು ಅನುಮತಿಸಲಾಗುತ್ತಿದೆ. ಸಕ್ಕರೆ ಉದ್ಯಮವು ಮೊದಲು 38 ಕೋಟಿ ಲೀಟರ್ ಎಥೆನಾಲ್ ಉತ್ಪಾದಿಸುತ್ತಿತ್ತು ಮತ್ತು ಅದರ ಬಳಕೆ ಸೀಮಿತವಾಗಿತ್ತು, ಅದು ಇಂದು 370 ಕೋಟಿ ಲೀಟರ್‌ಗೆ ಏರಿದೆ. ಇದೆಲ್ಲದರ ನೇರ ಲಾಭ ರೈತರ ಜೇಬಿಗೆ ಹೋಗಿದೆ” ಎಂದು ಶ್ರೀ ಶಾ ಅವರು ಹೇಳಿದರು.

“ಎಥೆನಾಲ್ ಮಿಶ್ರಣದ ಬಗ್ಗೆ ಮೋದಿ ಸರ್ಕಾರದ ನೀತಿ ನಿರ್ಧಾರವು ಪೆಟ್ರೋಲ್ ಆಮದು ಬಿಲ್ ಅನ್ನು ಕಡಿಮೆ ಮಾಡಿದೆ, ಪರಿಸರವನ್ನು ಸುಧಾರಿಸಿದೆ, ರೈತರಿಗೆ ಲಾಭದಾಯಕವಾಗಿದೆ ಮತ್ತು ಸಕ್ಕರೆ ಕಾರ್ಖಾನೆಗಳ ಲಾಭವನ್ನು ಹೆಚ್ಚಿಸಿದೆ. 20 ರಷ್ಟು ಮಿಶ್ರಣಕ್ಕೆ ಅವಕಾಶ ನೀಡುವ ಮಹತ್ವದ ನಿರ್ಧಾರದಿಂದ ಮೋದಿ ಸರ್ಕಾರವು ನಾಲ್ಕು ಕ್ಷೇತ್ರಗಳಿಗೆ ಬಹುಮುಖಿ ಪ್ರಯೋಜನಗಳನ್ನು ಖಚಿತಪಡಿಸಿದೆ. ಪ್ರತಿ 3 ತಿಂಗಳಿಗೊಮ್ಮೆ ಪರಿಶೀಲಿಸಿ ನಿರ್ಧಾರಗಳನ್ನು ಕೈಗೊಳ್ಳುವ ಸಚಿವರ ತಂಡದ ಮೂಲಕ ಪ್ರಧಾನಮಂತಿಯವರೇ ಇದನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಾರೆ ಮತ್ತು ಅದಕ್ಕಾಗಿಯೇ ನಾವು ಎಥೆನಾಲ್ ಮಿಶ್ರಣದಲ್ಲಿ ಗುರಿಗಳನ್ನು ಸಮಯಕ್ಕಿಂತ ಮುಂಚಿತವಾಗಿ ಸಾಧಿಸಲು ಸಾಧ್ಯವಾಯಿತು” ಎಂದು ಅವರು ಹೇಳಿದರು.

ಜೈವಿಕ ಇಂಧನ ಒಕ್ಕೂಟವು ಎಥೆನಾಲ್ ಮಿಶ್ರಣದ ಪ್ರಯೋಜನಗಳ ಬಗ್ಗೆ ವಿಶ್ವಾದ್ಯಂತ ಜಾಗೃತಿ ಮೂಡಿಸಿದಾಗ, ನಮ್ಮ ಕಬ್ಬಿನ ರೈತರು ಮತ್ತು ಸಕ್ಕರೆ ಕಾರ್ಖಾನೆಗಳು ಅದರ ದೊಡ್ಡ ಫಲಾನುಭವಿಗಳಾದರು. ಸಹಕಾರಿ ಸಂಸ್ಥೆಗಳ ಮೂಲಕ ಆರ್ಥಿಕ ಅಭಿವೃದ್ಧಿ ಜತೆಗೆ ಗ್ರಾಮೀಣ ಸಬಲೀಕರಣಕ್ಕೆ ಮೋದಿ ಸರಕಾರ ಮುಂದಾಗಿದೆ. ಇಂಧನ ಭದ್ರತೆ, ಪರಿಸರ ಸುಧಾರಣೆ ಮತ್ತು ಸಕ್ಕರೆ ಕಾರ್ಖಾನೆಗಳ ಸುಸ್ಥಿರ ಬೆಳವಣಿಗೆಯನ್ನು ಸಾಧಿಸಲು ನಾವು ಕೆಲಸ ಮಾಡಿದ್ದೇವೆ. 2030 ರ ವೇಳೆಗೆ ಮೋದಿ ಜಿ 20 ಪ್ರತಿಶತ ಎಥೆನಾಲ್ ಮಿಶ್ರಣದ ಗುರಿಯನ್ನು ಹೊಂದಿದ್ದರು, ಆದರೆ ನಾವು 2025-26 ರ ವೇಳೆಗೆ ಈ ಗುರಿಯನ್ನು ಸಾಧಿಸುತ್ತೇವೆ. ಮಾರಾಟವಾಗುವ ಸುಮಾರು 5,000 ಕೋಟಿ ಲೀಟರ್ ಪೆಟ್ರೋಲ್‌ ನಲ್ಲಿ ಎಥೆನಾಲ್‌ನ ಅವಶ್ಯಕತೆ ಒಂದು ಸಾವಿರ ಕೋಟಿ ಲೀಟರ್ ಆಗಲಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು  ಹೇಳಿದರು.

ಸಕ್ಕರೆ ಕಾರ್ಖಾನೆಗಳನ್ನು ಕಾರ್ಯಸಾಧ್ಯವಾಗಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕು. ಬಹು ಆಯಾಮದ ಜೈವಿಕ ಇಂಧನ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲು ಸರ್ಕಾರ ಸಿದ್ಧವಿದೆ. 100 ರಷ್ಟು ಮೆಕ್ಕೆಜೋಳ ಮತ್ತು ಬೇಳೆಕಾಳುಗಳನ್ನು ನಾಫೆಡ್ ಎಲ್ಲಾ ರೈತರಿಂದ ಕನಿಷ್ಠ ಬೆಂಬಲ ಬೆಲೆಯಲ್ಲಿ (ಎಂಎಸ್‌ಪಿ) ಖರೀದಿಸುತ್ತದೆ. ರೈತರ ಏಳಿಗೆಯೇ ನಮ್ಮ ಗುರಿ. ಜೋಳ ಮತ್ತು ಬಿದಿರಿನಿಂದ ತಯಾರಿಸಿದ ಎಥೆನಾಲ್‌ಗೆ ಸರ್ಕಾರವು ಪ್ರತಿ ಲೀಟರ್‌ಗೆ 71.86 ರೂಪಾಯಿಗಳ ಅತ್ಯಧಿಕ ದರವನ್ನು ಇರಿಸಿದೆ ಎಂದು ಶ್ರೀ ಶಾ ಹೇಳಿದರು.

2022-23ರಲ್ಲಿ ಸಹಕಾರಿ ಸಕ್ಕರೆ ಕಾರ್ಖಾನೆಗಳು ಎಥೆನಾಲ್ ಪೂರೈಕೆಗೆ ಶೇ 8 ರಷ್ಟು ಕೊಡುಗೆ ನೀಡಿವೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್‌ ಶಾ ಅವರು ಹೇಳಿದರು.

25 ರಷ್ಟು ಸಕ್ಕರೆ ಕಾರ್ಖಾನೆಗಳು ಮತ್ತು ಸರ್ಕಾರ, ತಂತ್ರಜ್ಞಾನ, ನಾವೀನ್ಯತೆ ಮತ್ತು ಮಾರುಕಟ್ಟೆ ಪರಿಸ್ಥಿತಿಗಳ ನಡುವೆ ಎನ್‌.ಎಫ್‌.ಸಿ.ಎಸ್‌.ಎಫ್. ಸೇತುವೆಯಾಗಿ ಕೆಲಸ ಮಾಡಿದೆ. ಇದು 259 ಸಕ್ಕರೆ ಕಾರ್ಖಾನೆಗಳ ಒಕ್ಕೂಟವಾಗಿದೆ ಮತ್ತು ಒಂಬತ್ತು ರಾಜ್ಯ ಒಕ್ಕೂಟಗಳು ಇದರೊಂದಿಗೆ ಸಂಬಂಧ ಹೊಂದಿವೆ ಮತ್ತು ಇದು ವಿಸ್ತರಿಸುವ ಸಾಮರ್ಥ್ಯವನ್ನು ಹೊಂದಿದೆ. 10 ವರ್ಷಗಳ ಮಾರ್ಗಸೂಚಿಯಡಿ, ದೇಶಾದ್ಯಂತ ಕಬ್ಬು ಬಿತ್ತನೆಯ ಪ್ರದೇಶವನ್ನು ನಕ್ಷೆ ಮಾಡುವ ಮೂಲಕ ಸಹಕಾರಿ ಸಕ್ಕರೆ ಕಾರ್ಖಾನೆಗಳ ಸಂಖ್ಯೆಯನ್ನು ಹೆಚ್ಚಿಸಬೇಕು.  ಸಕ್ಕರೆ ಉತ್ಪಾದನೆಯ ಎಲ್ಲ ಲಾಭವೂ ರೈತರ ಬ್ಯಾಂಕ್ ಖಾತೆಗೆ ಸೇರಬೇಕೆಂಬ ಗುರಿ ಹೊಂದಬೇಕು ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್‌ ಶಾ ಅವರು ಹೇಳಿದರು.

ಸಹಕಾರ ಸಚಿವಾಲಯ ರಚನೆಯಾದ ನಂತರ ಕೇಂದ್ರ ಸರ್ಕಾರವು ಸಕ್ಕರೆ ಕಾರ್ಖಾನೆಗಳಿಗೂ ಸಾಕಷ್ಟು ಕೆಲಸ ಮಾಡಿದೆ. ತೆರಿಗೆ ಬಾಧ್ಯತೆಯಿಂದ ಸಕ್ಕರೆ ಕಾರ್ಖಾನೆಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಪರಿಹಾರ ನೀಡಿದ್ದಾರೆ. ಸುಮಾರು 20 ವರ್ಷಗಳಿಂದ ಬಾಕಿ ಉಳಿದಿದ್ದ 15,000 ಕೋಟಿ ರೂ. ಇದರೊಂದಿಗೆ, ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ಕೈಗಾರಿಕೆಗಳಿಗೆ ಸಮನಾಗಿ ತರಲಾಗಿದೆ ಮತ್ತು ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮದ (ಎನ್‌ಸಿಡಿಸಿ) ಸಾಲ ಯೋಜನೆಯಲ್ಲಿ 1,000 ಕೋಟಿ ರೂಪಾಯಿಗಳ ಅನುದಾನವನ್ನು ಅನುಮೋದಿಸಲಾಗಿದೆ, ಮುಂದಿನ 3 ವರ್ಷಗಳಲ್ಲಿ 10,000 ಕೋಟಿ ರೂ. ಸಾಲವನ್ನು ನೀಡಲು ಅನುವು ಮಾಡಿಕೊಡಲಾಗಿದೆ.  ಸಹಕಾರಿ ಸಕ್ಕರೆ ಕಾರ್ಖಾನೆಗಳ ವಿಸ್ತರಣೆಯ ಸಾಧ್ಯತೆಗಳನ್ನು ಮೋದಿಜಿ ಹೆಚ್ಚಿಸಿದ್ದಾರೆ ಮೊಲಾಸಿಸ್ ಮೇಲಿನ ಜಿ.ಎಸ್‌.ಟಿ.ಯನ್ನು ಶೇ.28ರಿಂದ ಶೇ.5ಕ್ಕೆ ಇಳಿಸುವ ಕೆಲಸವನ್ನು ಮೋದಿ ಸರ್ಕಾರ ಮಾಡಿದೆ. ಫ್ಯೂಚರಿಸ್ಟಿಕ್ ವಿಧಾನದಡಿಯಲ್ಲಿ, ಮುಂದಿನ 2 ವರ್ಷಗಳಲ್ಲಿ ನಾಫೆಡ್, ಕ್ರಿಭ್ಕೊ, ಇಫ್ಕೊ ಇತ್ಯಾದಿಗಳು ಸಂಸ್ಥೆಗಳು ತಮ್ಮ ವಹಿವಾಟನ್ನು 25 ಪ್ರತಿಶತದಷ್ಟು ಹೆಚ್ಚಿಸುವ ಗುರಿಯನ್ನು ಹೊಂದಿವೆ ಎಂದು ಅವರು ಹೇಳಿದರು.

"ಮುಂದೆ ಸಾಗುವ ನಂಬಿಕೆ ಇದ್ದಾಗ ಮಾತ್ರ ನಾವು ಇರುವ ಸ್ಥಳದಿಂದ ಮುಂದೆ ಸಾಗಲು ಸಾಧ್ಯ" ಎಂದು ಕೇಂದ್ರ ಸಹಕಾರ ಸಚಿವರು ಹೇಳಿದರು. ಮುಂದಿನ 2 ವರ್ಷಗಳಲ್ಲಿ ಎನ್‌.ಎಫ್‌.ಸಿ.ಎಸ್‌.ಎಫ್. ತನ್ನ ವ್ಯಾಪ್ತಿಯಲ್ಲಿರುವ ಎಲ್ಲಾ ಸಕ್ಕರೆ ಕಾರ್ಖಾನೆಗಳನ್ನು ಎಥೆನಾಲ್ ಉತ್ಪಾದಿಸುವ ಸಕ್ಕರೆ ಕಾರ್ಖಾನೆಗಳಾಗಿ ಪರಿವರ್ತಿಸುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದರು. ಬೇಡಿಕೆಗೆ ಸೀಮಿತವಾಗದೆ ಒಕ್ಕೂಟವನ್ನು ಕ್ರಿಯಾತ್ಮಕಗೊಳಿಸುವ ಕೆಲಸ ನಾವು ಮಾಡಬೇಕು. ಬೇಡಿಕೆ ಆಧಾರಿತ ಒಕ್ಕೂಟದ ಬದಲು ಕ್ರಿಯಾತ್ಮಕ ಒಕ್ಕೂಟ ರಚನೆಯಾಗಬೇಕು ಮತ್ತು ಕಬ್ಬು ಉತ್ಪಾದಕ ರೈತರ ಏಳಿಗೆಯ ಗುರಿಯೊಂದಿಗೆ ಕೆಲಸ ಮಾಡಬೇಕು ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್‌ ಶಾ ಅವರು ಹೇಳಿದರು.

.

*****


(Release ID: 2044255) Visitor Counter : 55