ಸಹಕಾರ ಸಚಿವಾಲಯ
azadi ka amrit mahotsav

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ನವದೆಹಲಿಯಲ್ಲಿ ಶನಿವಾರ, 10ನೇ ಆಗಸ್ಟ್ 2024 ರಂದು ಎನ್‌ ಎಫ್‌ ಸಿ ಎಸ್‌ ಎಫ್‌ ನ ‘ಸಕ್ಕರೆ ಸಮಾವೇಶ ಮತ್ತು ರಾಷ್ಟ್ರೀಯ ದಕ್ಷತಾ ಪ್ರಶಸ್ತಿ 2022-23’ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ


ಶ್ರೀ ಅಮಿತ್ ಶಾ ಅವರು ಸಹಕಾರದ ಎಂಟು ಕ್ಷೇತ್ರಗಳಲ್ಲಿ ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ರಾಷ್ಟ್ರೀಯ ದಕ್ಷತಾ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ “ಸಹಕಾರ್ ಸೇ ಸಮೃದ್ಧಿ”ಯ ದೃಷ್ಟಿಗೆ ಅನುಗುಣವಾಗಿ ಸಹಕಾರ ಸಚಿವಾಲಯವು ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ಬಲಪಡಿಸಲು ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ

ದಕ್ಷತಾ ಪ್ರಶಸ್ತಿ 2022-23 ಸ್ಪರ್ಧೆಯಲ್ಲಿ ದೇಶಾದ್ಯಂತ 92 ಸಹಕಾರಿ ಸಕ್ಕರೆ ಕಾರ್ಖಾನೆಗಳು ಭಾಗವಹಿಸಿದ್ದವು

Posted On: 09 AUG 2024 2:16PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಶನಿವಾರ, 10 ಆಗಸ್ಟ್ 2024 ರಂದು ನವದೆಹಲಿಯಲ್ಲಿ ‘ಸಕ್ಕರೆ ಸಮಾವೇಶ ಮತ್ತು ರಾಷ್ಟ್ರೀಯ ದಕ್ಷತಾ ಪ್ರಶಸ್ತಿ 2022-23’ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ರಾಷ್ಟ್ರೀಯ ಸಹಕಾರಿ ಸಕ್ಕರೆ ಕಾರ್ಖಾನೆಗಳ ಒಕ್ಕೂಟ (ಎನ್‌ ಎಫ್‌ ಸಿ ಎಸ್‌ ಎಫ್) ಲಿಮಿಟೆಡ್‌ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಿದೆ. ಈ ಸಂದರ್ಭದಲ್ಲಿ, ಶ್ರೀ ಅಮಿತ್ ಶಾ ಅವರು ಸಹಕಾರದ ಎಂಟು ಕ್ಷೇತ್ರಗಳಲ್ಲಿ ರಾಷ್ಟ್ರೀಯ ದಕ್ಷತಾ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ.

ಸಹಕಾರಿ ಸಕ್ಕರೆ ಕಾರ್ಖಾನೆಗಳ ರಾಷ್ಟ್ರೀಯ ಒಕ್ಕೂಟ (ಎನ್‌ ಎಫ್‌ ಸಿ ಎಸ್‌ ಎಫ್) ದೇಶದಾದ್ಯಂತ ಎಲ್ಲಾ 260 ಸಹಕಾರಿ ಸಕ್ಕರೆ ಕಾರ್ಖಾನೆಗಳು ಮತ್ತು ಒಂಬತ್ತು ರಾಜ್ಯ ಸಕ್ಕರೆ ಒಕ್ಕೂಟಗಳನ್ನು ಒಳಗೊಂಡಿರುವ ಒಂದು ಉನ್ನತ ಸಂಸ್ಥೆಯಾಗಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ “ಸಹಕಾರ್ ಸೇ ಸಮೃದ್ಧಿ” (ಸಹಕಾರದ ಮೂಲಕ ಸಮೃದ್ಧಿ) ಯ ದೃಷ್ಟಿಗೆ ಅನುಗುಣವಾಗಿ ಸಹಕಾರ ಸಚಿವಾಲಯವು ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ಉತ್ತೇಜಿಸಲು ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ, ಇದರಲ್ಲಿ ಸಹಕಾರಿ ಸಕ್ಕರೆ ಕಾರ್ಖಾನೆಗಳ ಬಲವರ್ಧನೆಗಾಗಿ ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮಕ್ಕೆ (ಎನ್‌ ಸಿ ಡಿ ಸಿ) ಸಹಾಯಧನವೂ ಸೇರಿದೆ.

ಸಹಕಾರಿ ಸಕ್ಕರೆ ಕಾರ್ಖಾನೆಗಳ ದಕ್ಷತೆಯನ್ನು ಮೌಲ್ಯಮಾಪನ ಮಾಡಲು ಎನ್‌ ಎಫ್‌ ಸಿ ಎಸ್‌ ಎಫ್ ಸ್ಥಾಪಿಸಿದ ವಾರ್ಷಿಕವಾಗಿ 'ದಕ್ಷತಾ ಪ್ರಶಸ್ತಿಗಳು' ನೀಡಲಾಗುತ್ತದೆ. ಇದು ಕಬ್ಬು ಅಭಿವೃದ್ಧಿ, ತಾಂತ್ರಿಕ ದಕ್ಷತೆ, ಹಣಕಾಸು ನಿರ್ವಹಣೆ, ಅತ್ಯಧಿಕ ಕಬ್ಬು ಅರೆಯುವಿಕೆ, ಕಬ್ಬಿನ ಅತ್ಯಧಿಕ ಸಕ್ಕರೆ ಪ್ರಮಾಣ ಮತ್ತು ಗರಿಷ್ಠ ಸಕ್ಕರೆ ರಫ್ತು ಮತ್ತು ಒಟ್ಟಾರೆ ಕಾರ್ಯಕ್ಷಮತೆಯಲ್ಲಿ ಸಹಕಾರಿ ಸಕ್ಕರೆ ಕಾರ್ಖಾನೆಗಳ ದಕ್ಷತೆಯನ್ನು ಮೌಲ್ಯಮಾಪನ ಮಾಡುತ್ತದೆ. ತಜ್ಞರ ಸಮಿತಿಯ ಮೂಲಕ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಲಾಯಿತು. ಕಠಿಣವಾದ ಪರಿಶೀಲನೆಯ ನಂತರ, ತಜ್ಞರ ಸಮಿತಿಯು ಗಿರಣಿ-ವಾರು ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಿತು ಮತ್ತು 2022-23 ನೇ ಸಾಲಿಗೆ ಒಟ್ಟು 21 ಪ್ರಶಸ್ತಿಗಳನ್ನು ಅಂತಿಮಗೊಳಿಸಿತು.

2022-23 ರ ದಕ್ಷತಾ ಪ್ರಶಸ್ತಿಗಳ ಸ್ಪರ್ಧೆಯಲ್ಲಿ ದೇಶಾದ್ಯಂತದ 92 ಸಹಕಾರಿ ಸಕ್ಕರೆ ಕಾರ್ಖಾನೆಗಳು ಭಾಗವಹಿಸಿದ್ದವು. ಆ ಪೈಕಿ ಮಹಾರಾಷ್ಟ್ರದಿಂದ 38, ಉತ್ತರ ಪ್ರದೇಶ ಮತ್ತು ಗುಜರಾತ್‌ ನಿಂದ ತಲಾ 11, ತಮಿಳುನಾಡಿನ 10, ಪಂಜಾಬ್ ಮತ್ತು ಹರಿಯಾಣದಿಂದ ತಲಾ 8, ಕರ್ನಾಟಕದಿಂದ 4 ಮತ್ತು ಮಧ್ಯಪ್ರದೇಶ ಮತ್ತು ಉತ್ತರಾಖಂಡದಿಂದ ತಲಾ 1 ಕಾರ್ಖಾನೆಗಳು ಭಾಗವಹಿಸಿದ್ದವು.

ಭಾಗವಹಿಸುವ ಸಕ್ಕರೆ ಕಾರ್ಖಾನೆಗಳಿಗೆ ಸಮಾನ ಅವಕಾಶವನ್ನು ಒದಗಿಸುವ ದೃಷ್ಟಿಯಿಂದ, ದೇಶದ ಸಕ್ಕರೆ ವಲಯವನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಮಹಾರಾಷ್ಟ್ರ, ಗುಜರಾತ್ ಮತ್ತು ಕರ್ನಾಟಕವನ್ನು ಮೊದಲ ಗುಂಪಿನಲ್ಲಿ ಇರಿಸಲಾಗಿದೆ, ಏಕೆಂದರೆ ಇವುಗಳು ಹೆಚ್ಚಿನ ಸಕ್ಕರೆ ಉತ್ಪಾದನೆ (ಶೇ. 10 ಕ್ಕಿಂತ ಹೆಚ್ಚು) ರಾಜ್ಯಗಳಾಗಿವೆ. ಈ ಗುಂಪಿನಿಂದ ದೇಶದ ಒಟ್ಟು 53 ಸಹಕಾರಿ ಸಕ್ಕರೆ ಕಾರ್ಖಾನೆಗಳು ಭಾಗವಹಿಸಿದ್ದವು. ಉಳಿದಿರುವ (ಶೇ. 10 ಕ್ಕಿಂತ ಕಡಿಮೆ ಸಕ್ಕರೆ ಉತ್ಪಾದನೆ) ರಾಜ್ಯಗಳ ಎರಡನೇ ಗುಂಪನ್ನು ರಚಿಸಲಾಗಿದೆ ಮತ್ತು ಈ ಗುಂಪಿನಲ್ಲಿ ಒಟ್ಟು 39 ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ಸೇರಿಸಲಾಗಿದೆ.

ಅಂತಹ ಗುಂಪುಗಳನ್ನು ರಚಿಸುವುದರಿಂದ ಸಕ್ಕರೆ ಉತ್ಪಾದನೆಯಲ್ಲಿ ದಕ್ಷತೆಯನ್ನು ಹೆಚ್ಚಿಸಲು ಮತ್ತು ಅವುಗಳಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ತುಂಬಲು ಕಾರ್ಖಾನೆಗಳಿಗೆ ಪ್ರೋತ್ಸಾಹ ದೊರೆಯುತ್ತದೆ. "ಒಂದು ಕಾರ್ಖಾನೆಗೆ ಒಂದು ಬಹುಮಾನ" ಎಂಬ ನೀತಿಯನ್ನು ಸಹ ಅನುಸರಿಸಲಾಗುತ್ತದೆ.

ನವದೆಹಲಿಯ ಡಾ. ಅಂಬೇಡ್ಕರ್ ಇಂಟರ್‌ನ್ಯಾಶನಲ್ ಸೆಂಟರ್‌ನಲ್ಲಿ ಆಯೋಜಿಸಲಾಗಿರುವ ಸಮಾವೇಶದಲ್ಲಿ ಕೇಂದ್ರ ಸಹಕಾರ ರಾಜ್ಯ ಸಚಿವರಾದ ಶ್ರೀ ಕ್ರಿಶನ್ ಪಾಲ್ ಗುರ್ಜರ್ ಮತ್ತು ಶ್ರೀ ಮುರಳೀಧರ್ ಮೊಹೋಲ್ ಅವರು ಭಾಗವಹಿಸಲಿದ್ದಾರೆ. ದೇಶಾದ್ಯಂತದ ಎಲ್ಲಾ ಸಹಕಾರಿ ಸಕ್ಕರೆ ಕಾರ್ಖಾನೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೆ, ಸಕ್ಕರೆ/ಎಥೆನಾಲ್ ಸಚಿವರ ಗುಂಪಿನ ಭಾಗವಾಗಿರುವ ಸಚಿವರು ಮತ್ತು ಕೇಂದ್ರ ಮತ್ತು ರಾಜ್ಯಗಳ ಸಕ್ಕರೆ ಕ್ಷೇತ್ರಕ್ಕೆ ಸಂಬಂಧಿಸಿದ ಹಿರಿಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

ಈ ಕಾರ್ಯಕ್ರಮದ ಜೊತೆಗೆ, ಎನ್‌ ಎಫ್‌ ಸಿ ಎಸ್‌ ಎಫ್‌ ನ ವಾರ್ಷಿಕ ಸಾಮಾನ್ಯ ಸಭೆ ಮತ್ತು ಸಕ್ಕರೆ ಕ್ಷೇತ್ರದ ಎರಡು ಪ್ರಮುಖ ವಿಷಯಗಳ ಕುರಿತು ತಾಂತ್ರಿಕ ವಿಚಾರ ಸಂಕಿರಣವೂ ನಡೆಯಲಿದೆ. ಪ್ರಖ್ಯಾತ ವಿಷಯ ತಜ್ಞರು ಈ ವಲಯದ ಮೇಲೆ ಪರಿಣಾಮ ಮತ್ತು ಪ್ರಭಾವ ಬೀರುವ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತಾರೆ.

 

*****

 


(Release ID: 2043656) Visitor Counter : 55