ಕೃಷಿ ಸಚಿವಾಲಯ
azadi ka amrit mahotsav

ಹಾಳಾಗುವ ಬೆಳೆಗಳಿಗೆ ಶೀತಲ ಘಟಕ

Posted On: 06 AUG 2024 6:14PM by PIB Bengaluru

ದೇಶಾದ್ಯಂತ ಬೇಗ ಹಾಳಾಗುವ ತೋಟಗಾರಿಕೆ ಉತ್ಪನ್ನಗಳಿಗೆ ಶೀತಲ ಘಟಕ ಸ್ಥಾಪಿಸಲು ಆರ್ಥಿಕ ನೆರವು ಲಭ್ಯವಿರುವ ವಿವಿಧ ಯೋಜನೆಗಳನ್ನು ಸರ್ಕಾರ ಜಾರಿಗೆ ತರುತ್ತಿದೆ.

ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯು ಮಿಷನ್‌ ಫಾರ್‌ ಇಂಟಿಗ್ರೇಟೆಡ್‌ ಡೆವಲಪ್ಮೆಂಟ್‌ ಆಫ್‌ ಹಾರ್ಟಿಕಲ್ಚರ್‌ (ಎಂಐಡಿಎಚ್‌) ಅನ್ನು ಅನುಷ್ಠಾನಗೊಳಿಸುತ್ತಿದೆ, ಇದರ ಅಡಿಯಲ್ಲಿರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಂದ ಪಡೆದ ವಾರ್ಷಿಕ ಕ್ರಿಯಾ ಯೋಜನೆ (ಎಎಪಿ) ಆಧಾರದ ಮೇಲೆ ದೇಶದಲ್ಲಿ5000 ಮೆಟ್ರಿಕ್‌ ಟನ್‌ ಸಾಮರ್ಥ್ಯ‌ದ ಕೋಲ್ಡ್‌ ಸ್ಟೋರೇಜ್‌ಗಳ ನಿರ್ಮಾಣ / ವಿಸ್ತರಣೆ / ಆಧುನೀಕರಣ ಸೇರಿದಂತೆ ವಿವಿಧ ತೋಟಗಾರಿಕೆ ಚಟುವಟಿಕೆಗಳಿಗೆ ಆರ್ಥಿಕ ನೆರವು ನೀಡಲಾಗುತ್ತದೆ. ಎಎಪಿಗಳನ್ನು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಅವುಗಳ ಅವಶ್ಯಕತೆ, ಸಾಮರ್ಥ್ಯ‌ ಮತ್ತು ಸಂಪನ್ಮೂಲಗಳ ಲಭ್ಯತೆಯ ಆಧಾರದ ಮೇಲೆ ಸಿದ್ಧಪಡಿಸುತ್ತವೆ. ಕೋಲ್ಡ್‌ ಸ್ಟೋರೇಜ್‌ನ ಘಟಕವು ಬೇಡಿಕೆ / ಉದ್ಯಮಿ ಚಾಲಿತವಾಗಿದ್ದು, ಇದಕ್ಕಾಗಿ ಕ್ರೆಡಿಟ್‌ ಲಿಂಕ್ಡ್‌ ಬ್ಯಾಕ್‌ ಎಂಡೆಡ್‌ ಸಬ್ಸಿಡಿ ರೂಪದಲ್ಲಿಸರ್ಕಾರದ ನೆರವು ಸಾಮಾನ್ಯ ಪ್ರದೇಶಗಳಲ್ಲಿ ಯೋಜನಾ ವೆಚ್ಚದ ಶೇ.35ರಷ್ಟು ಮತ್ತು ಗುಡ್ಡಗಾಡು ಮತ್ತು ನಿಗದಿತ ಪ್ರದೇಶಗಳಲ್ಲಿ ಯೋಜನಾ ವೆಚ್ಚದ ಶೇ.50ರಷ್ಟು ದರದಲ್ಲಿ ಆಯಾ ರಾಜ್ಯ ತೋಟಗಾರಿಕೆ ಮಿಷನ್‌ಗಳ ಮೂಲಕ ಲಭ್ಯವಿದೆ.

ಈ ಯೋಜನೆಯಡಿ, ವ್ಯಕ್ತಿಗಳು, ರೈತರು / ಬೆಳೆಗಾರರು / ಗ್ರಾಹಕರ ಗುಂಪುಗಳು, ಪಾಲುದಾರಿಕೆ / ಸ್ವಾಮ್ಯದ ಸಂಸ್ಥೆಗಳು, ಸ್ವಸಹಾಯ ಗುಂಪುಗಳು (ಎಸ್‌ಎಚ್‌ಜಿಗಳು), ರೈತ ಉತ್ಪಾದಕ ಸಂಸ್ಥೆ (ಎಫ್‌ಪಿಒ), ಕಂಪನಿಗಳು, ನಿಗಮಗಳು, ಸಹಕಾರಿಗಳು, ಸಹಕಾರಿ ಮಾರುಕಟ್ಟೆ ಒಕ್ಕೂಟಗಳು, ಸ್ಥಳೀಯ ಸಂಸ್ಥೆಗಳು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು (ಎಪಿಎಂಸಿ) ಮತ್ತು ಮಾರುಕಟ್ಟೆ ಮಂಡಳಿಗಳು ಮತ್ತು ರಾಜ್ಯ ಸರ್ಕಾರಗಳಿಗೆ ನೆರವು ಲಭ್ಯವಿದೆ.

ಇದಲ್ಲದೆ, ರಾಷ್ಟ್ರೀಯ ತೋಟಗಾರಿಕೆ ಮಂಡಳಿ (ಎನ್‌ಎಚ್‌ಬಿ) ತೋಟಗಾರಿಕೆ ಉತ್ಪನ್ನಗಳ ಶೀತಲ ಘಟಕಗಳು ಮತ್ತು ಸಂಗ್ರಹಣೆಗಳ ನಿರ್ಮಾಣ / ವಿಸ್ತರಣೆ / ಆಧುನೀಕರಣಕ್ಕಾಗಿ ಬಂಡವಾಳ ಹೂಡಿಕೆ ಸಬ್ಸಿಡಿ ಎಂಬ ಯೋಜನೆಯನ್ನು ಜಾರಿಗೆ ತರುತ್ತಿದೆ. ಈ ಯೋಜನೆಯಡಿ, 5000 ಮೆಟ್ರಿಕ್‌ ಟನ್‌ ಗಿಂತ ಹೆಚ್ಚಿನ ಮತ್ತು 10000 ಮೆಟ್ರಿಕ್‌ ಟನ್‌ ವರೆಗಿನ ಸಾಮರ್ಥ್ಯ‌ದ ಕೋಲ್ಡ್‌ ಸ್ಟೋರೇಜ್‌ ಮತ್ತು ನಿಯಂತ್ರಿತ ವಾತಾವರಣ (ಸಿಎ) ಸಂಗ್ರಹಣೆಗಾಗಿ ಸಾಮಾನ್ಯ ಪ್ರದೇಶಗಳಲ್ಲಿ ಯೋಜನೆಯ ಬಂಡವಾಳ ವೆಚ್ಚದ ಶೇ.35ರಷ್ಟು ಮತ್ತು ಈಶಾನ್ಯ, ಗುಡ್ಡಗಾಡು ಮತ್ತು ನಿಗದಿತ ಪ್ರದೇಶಗಳಲ್ಲಿ ಶೇ.50ರಷ್ಟು ದರದಲ್ಲಿ ಕ್ರೆಡಿಟ್‌ ಲಿಂಕ್ಡ್‌ ಬ್ಯಾಕ್‌-ಎಂಡೆಡ್‌ ಸಬ್ಸಿಡಿ ಲಭ್ಯವಿದೆ. ಈಶಾನ್ಯ ಪ್ರದೇಶದ ಸಂದರ್ಭದಲ್ಲಿ, 1000 ಮೆಟ್ರಿಕ್‌ ಟನ್‌ ಗಿಂತ ಹೆಚ್ಚಿನ ಸಾಮರ್ಥ್ಯ‌ದ ಘಟಕಗಳು ಸಹ ಸಹಾಯಕ್ಕೆ ಅರ್ಹವಾಗಿವೆ.

ತೋಟಗಾರಿಕೆ ಮತ್ತು ತೋಟಗಾರಿಕೆಯೇತರ ಉತ್ಪನ್ನಗಳ ಸುಗ್ಗಿಯ ನಂತರದ ನಷ್ಟವನ್ನು ಕಡಿಮೆ ಮಾಡುವ ಮತ್ತು ರೈತರಿಗೆ ಅವರ ಉತ್ಪನ್ನಗಳಿಗೆ ಲಾಭದಾಯಕ ಬೆಲೆಯನ್ನು ಒದಗಿಸುವ ಉದ್ದೇಶದಿಂದ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ (ಎಂಒಎಫ್‌ಪಿಐ) ಪ್ರಧಾನ ಮಂತ್ರಿ ಕಿಸಾನ್‌ ಸಂಪದ ಯೋಜನೆ (ಪಿಎಂಕೆಎಸ್‌ವೈ) ಯ ಒಂದು ಘಟಕವಾಗಿ ಸಮಗ್ರ ಶೀತಲ ಸರಪಳಿ, ಆಹಾರ ಸಂಸ್ಕರಣೆ ಮತ್ತು ಸಂರಕ್ಷಣಾ ಮೂಲಸೌಕರ್ಯಕ್ಕಾಗಿ ಯೋಜನೆಯನ್ನು ಜಾರಿಗೆ ತರುತ್ತದೆ. ಈ ಯೋಜನೆಯಡಿ, ಸಚಿವಾಲಯವು ಸಾಮಾನ್ಯ ಪ್ರದೇಶಗಳಿಗೆ ಶೇ.35ರಷ್ಟು ಮತ್ತು ಈಶಾನ್ಯ ಮತ್ತು ಹಿಮಾಲಯನ್‌ ರಾಜ್ಯಗಳು, ಐಟಿಡಿಪಿ ಪ್ರದೇಶಗಳು ಮತ್ತು ದ್ವೀಪಗಳಿಗೆ ಸಂಗ್ರಹಣೆ ಮತ್ತು ಸಾರಿಗೆ ಮೂಲಸೌಕರ್ಯಕ್ಕಾಗಿ ಶೇ.50ರಷ್ಟು ದರದಲ್ಲಿಮತ್ತು ಮೌಲ್ಯವರ್ಧನೆ ಮತ್ತು ಸಂಸ್ಕರಣಾ ಮೂಲಸೌಕರ್ಯಕ್ಕಾಗಿ ಕ್ರಮವಾಗಿ ಶೇ. 50ರಷ್ಟು ಮತ್ತು ಶೇ.75ರಷ್ಟು ದರದಲ್ಲಿಆರ್ಥಿಕ ಸಹಾಯವನ್ನು ಒದಗಿಸುತ್ತದೆ. ಸ್ವತಂತ್ರ ಕೋಲ್ಡ್‌ ಸ್ಟೋರೇಜ್‌ಗಳು ಈ ಯೋಜನೆಯ ವ್ಯಾಪ್ತಿಗೆ ಬರುವುದಿಲ್ಲ.

ಮೇಲಿನ ಎಲ್ಲಾ ಯೋಜನೆಗಳು ವಾಣಿಜ್ಯ ಉದ್ಯಮಗಳ ಮೂಲಕ ಬೇಡಿಕೆ / ಉದ್ಯಮಿಗಳಿಂದ ನಡೆಸಲ್ಪಡುತ್ತವೆ, ಇದಕ್ಕಾಗಿ ರಾಜ್ಯಗಳು / ಉದ್ಯಮಿಗಳಿಂದ ಪಡೆದ ಪ್ರಸ್ತಾಪಗಳ ಆಧಾರದ ಮೇಲೆ ಸರ್ಕಾರದ ಸಹಾಯವನ್ನು ಒದಗಿಸಲಾಗುತ್ತದೆ. ಇದಲ್ಲದೆ, ದೇಶದಲ್ಲಿಕೃಷಿ ಮೂಲಸೌಕರ್ಯವನ್ನು ಬಲಪಡಿಸಲು, ಸರ್ಕಾರವು 1.00 ಲಕ್ಷ  ಕೋಟಿ ರೂ.ಗಳ ಕೃಷಿ ಮೂಲಸೌಕರ್ಯ ನಿಧಿಯನ್ನು (ಎಐಎಫ್‌) ಪ್ರಾರಂಭಿಸಿದೆ. ಎಐಎಫ್‌ ಅಡಿಯಲ್ಲಿ, ಶೀತಲ ಘಟಕಗಳ ಸ್ಥಾಪನೆ ಸೇರಿದಂತೆ ಸುಗ್ಗಿಯ ನಂತರದ ಮೂಲಸೌಕರ್ಯಗಳನ್ನು ರಚಿಸಲು ಪಡೆದ ಅವಧಿ ಸಾಲದ ಮೇಲೆ 2.00 ಕೋಟಿ ರೂ.ಗಳವರೆಗೆ ಮೇಲಾಧಾರ ರಹಿತ ಅವಧಿ ಸಾಲ ಮತ್ತು ಶೇ.3ರಷ್ಟು ಬಡ್ಡಿ ಸಹಾಯಧನಕ್ಕೆ ಅವಕಾಶವಿದೆ.

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವರಾದ ಶ್ರೀ ರಾಮನಾಥ್‌ ಠಾಕೂರ್‌ ಅವರು ಇಂದು ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿಈ ಮಾಹಿತಿಯನ್ನು ನೀಡಿದರು.

 

*****
 




(Release ID: 2042425) Visitor Counter : 35