ರೈಲ್ವೇ ಸಚಿವಾಲಯ

ಲೋಕೋ-ಪೈಲಟ್ ಗಳಿಗೆ ಹೆಡ್ ಕ್ವಾರ್ಟರ್ ವಿಶ್ರಾಂತಿ, ಔಟ್ ಸ್ಟೇಷನ್ ವಿಶ್ರಾಂತಿ ಮತ್ತು ಆವರ್ತಕ ವಿಶ್ರಾಂತಿ


ಲೋಕೋ ರನ್ನಿಂಗ್ ಸಿಬ್ಬಂದಿಯ ಕೆಲಸದ ಪರಿಸ್ಥಿತಿಗಳನ್ನು ಸುಧಾರಿಸಲು ಭಾರತ ಸರ್ಕಾರ ಕ್ರಮಗಳು ಮತ್ತು ಉಪಕ್ರಮಗಳನ್ನು ಕೈಗೊಳ್ಳುತ್ತಿದೆ

Posted On: 26 JUL 2024 7:15PM by PIB Bengaluru

ಲೋಕೋ ಪೈಲಟ್ ಗಳು (ರೈಲ್ವೆ ಚಾಲಕರು) ಭಾರತೀಯ ರೈಲ್ವೆ ಕುಟುಂಬದ ಪ್ರಮುಖ ಸದಸ್ಯರಾಗಿದ್ದು, ಪ್ರಯಾಣಿಕರು ಮತ್ತು ಸರಕುಗಳನ್ನು ಸುರಕ್ಷಿತ ಮತ್ತು ಪರಿಣಾಮಕಾರಿ ರೀತಿಯಲ್ಲಿ ಸಾಗಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತಾರೆ. ಲೋಕೋ ಪೈಲಟ್ ಗಳಿಗೆ ಸರಿಯಾದ ಕೆಲಸದ ಪರಿಸ್ಥಿತಿಗಳನ್ನು ಖಚಿತಪಡಿಸಿಕೊಳ್ಳಲು ಭಾರತೀಯ ರೈಲ್ವೆ ಬದ್ಧವಾಗಿದೆ.

ಲೋಕೋ ಪೈಲಟ್ ಗಳನ್ನು ನಿರಂತರ ವರ್ಗ ಎಂದು ವರ್ಗೀಕರಿಸಲಾಗಿದೆ. ರೈಲ್ವೆ ಕಾಯ್ದೆ, 1989 ರ ಸೆಕ್ಷನ್ 132 (2) ರ ಪ್ರಕಾರ, ನಿರಂತರ ವಿಭಾಗದಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಹದಿನಾಲ್ಕು ದಿನಗಳ ಎರಡು ವಾರಗಳ ಅವಧಿಯಲ್ಲಿ ಸರಾಸರಿ 54 ಗಂಟೆಗಳ ಕರ್ತವ್ಯದ ಸಮಯವನ್ನು ಸೂಚಿಸಲಾಗಿದೆ. "ಕೆಲಸದ ಸಮಯ ಮತ್ತು ವಿಶ್ರಾಂತಿಯ ಅವಧಿ" (ಎಚ್ಒಇಆರ್), 2005 ರ ನಿಯಮ 8 ರ ಪ್ರಕಾರ, ಲೋಕೋ ಪೈಲಟ್ ಗಳಿಗೆ ವಾರಕ್ಕೆ ಹದಿನಾಲ್ಕು ದಿನಗಳ ಎರಡು ವಾರಗಳ ಅವಧಿಯಲ್ಲಿ ಸರಾಸರಿ 52 ಗಂಟೆಗಳ ಕರ್ತವ್ಯದ ಸಮಯದ ಮಾರ್ಗಸೂಚಿಗಳನ್ನು ನೀಡುತ್ತದೆ, ಅಂದರೆ, ಭಾರತೀಯ ರೈಲ್ವೆಯಲ್ಲಿ ಇತರ "ನಿರಂತರ" ವರ್ಗದ ಉದ್ಯೋಗಿಗಳಿಗೆ ಕರ್ತವ್ಯದ ಸಮಯವು ಗರಿಷ್ಠ 54 ಗಂಟೆಗಳಿಗಿಂತ ಕಡಿಮೆ.  1989 ರ ರೈಲ್ವೇ ಕಾಯ್ದೆ ಸೆಕ್ಷನ್ 132ರಲ್ಲಿ ನಿರ್ದಿಷ್ಟಪಡಿಸಿದ ರೀತಿಯಲ್ಲಿ ಹೆಚ್ಚುವರಿ ಕೆಲಸದ ಅವಧಿಗೆ ಸೂಕ್ತ ಪರಿಹಾರವನ್ನೂ ಲೋಕೋ ಪೈಲೆಟ್ ಗಳಿಗೆ ನೀಡಲಾಗುತ್ತದೆ .

ಲೋಕೋ ಪೈಲಟ್ ಗಳಿಗೆ ಹೆಡ್ ಕ್ವಾರ್ಟರ್ ವಿಶ್ರಾಂತಿ, ಔಟ್ ಸ್ಟೇಷನ್ ರೆಸ್ಟ್ (ಹೊರ ಸ್ಥಳಗಳಲ್ಲಿ ವಿಶ್ರಾಂತಿ) ಮತ್ತು ಆವರ್ತಕ ವಿಶ್ರಾಂತಿಯನ್ನು ಕೆಳಗಿನಂತೆ ನೀಡಲಾಗುತ್ತದೆ:

ಹೆಡ್ ಕ್ವಾರ್ಟರ್ ವಿಶ್ರಾಂತಿ (ಕೇಂದ್ರ ಕಚೇರಿ ವಿಶ್ರಾಂತಿ)

ರೈಲ್ವೆ ಕಾಯ್ದೆ, 1989 ರ ನಿಯಮ 133 ರ ಪ್ರಕಾರ ಚಾಲನಾ ಸಿಬ್ಬಂದಿ ಸದಸ್ಯರು ತಮ್ಮ ಪ್ರಧಾನ ಕಚೇರಿಯನ್ನು ತಲುಪಿದ ನಂತರ 16 ಗಂಟೆಗಳ ಎಚ್ಕ್ಯೂ ವಿಶ್ರಾಂತಿಯನ್ನು ನೀಡಲಾಗುತ್ತದೆ, ಮತ್ತು 30 ಗಂಟೆಗಳು ಅಥವಾ 22 ಗಂಟೆಗಳ ಆವರ್ತಕ ವಿಶ್ರಾಂತಿಯನ್ನು (ಬಾಕಿ ಇರುವಾಗ) ಒದಗಿಸಲಾಗುತ್ತದೆ. ಆವರ್ತಕ ವಿಶ್ರಾಂತಿಯು ಪ್ರಧಾನ ಕಚೇರಿ ವಿಶ್ರಾಂತಿಯೂ ಆಗಿರುವುದರಿಂದ, ಆವರ್ತಕ ವಿಶ್ರಾಂತಿಯ ಸಮಯದಲ್ಲಿ 16 ಗಂಟೆಗಳ ಎಚ್ಕ್ಯೂ ವಿಶ್ರಾಂತಿಯ ಅಗತ್ಯವನ್ನು ಪೂರೈಸಲಾಗುತ್ತದೆ.

ಔಟ್ ಸ್ಟೇಷನ್ ವಿಶ್ರಾಂತಿ (ಹೊರ ಸ್ಥಳಗಳಲ್ಲಿ ವಿಶ್ರಾಂತಿ)

ಚಾಲಕ ತನ್ನ ಹೊರ ಸ್ಥಳಗಳ (ಬಾಹ್ಯ) ಪ್ರಯಾಣವನ್ನು ಪೂರ್ಣಗೊಳಿಸಿದಾಗ ನಿಲ್ದಾಣದ ಹೊರಗೆ ವಿಶ್ರಾಂತಿಯನ್ನು ಸಹ ನೀಡಲಾಗುತ್ತದೆ ಮತ್ತು ಅದು ಕೆಳಗಿನಂತಿದೆ:-

 

ಕರ್ತವ್ಯದ ಗಂಟೆಗಳು

ವಿಶ್ರಾಂತಿ

5  ಗಂಟೆಗಳಿಗಿಂತ   ಕಡಿಮೆ ಕರ್ತವ್ಯಾವಧಿಗಾಗಿ

ಕರ್ತವ್ಯ ನಿರ್ವಹಿಸಿದ ಗಂಟೆಗಳಿಗೆ ಸಮಾನವಾಗಿ + 1ಗಂಟೆ

5- 8  ಗಂಟೆಗಳ ಕರ್ತವ್ಯಾವಧಿಗಾಗಿ

6 ಗಂಟೆಗಳು

 8  ಗಂಟೆಗಳಿಗಿಂತ    ಹೆಚ್ಚಿನ ಕರ್ತವ್ಯಾವಧಿಗಾಗಿ

8 ಗಂಟೆಗಳು

 

ಆವರ್ತಕ ವಿಶ್ರಾಂತಿ

ರೈಲ್ವೆ ಕಾಯ್ದೆ, 1989 ರ ಸೆಕ್ಷನ್ 133 ಮತ್ತು ಎಚ್ಒಇಆರ್, 2005 ರ ನಿಯಮ 12 ಚಾಲನಾ ಸಿಬ್ಬಂದಿಗೆ ನಿಯತಕಾಲಿಕವಾದ ವಿಶ್ರಾಂತಿಗೆ  ಮಾರ್ಗಸೂಚಿಗಳನ್ನು ಒಳಗೊಂಡಿದೆ.  ಇದು ಪ್ರತಿ ತಿಂಗಳು, ಚಾಲನಾ ಸಿಬ್ಬಂದಿಗೆ ಸತತ ತಲಾ ಇಪ್ಪತ್ತೆರಡು ಗಂಟೆಗಳಿಗಿಂತ ಕಡಿಮೆಯಿಲ್ಲದ ಕನಿಷ್ಠ ಐದು ಅವಧಿಗಳ ವಿಶ್ರಾಂತಿಯನ್ನು ನೀಡಬೇಕು ಅಥವಾ ಪೂರ್ಣ ರಾತ್ರಿ ಸೇರಿದಂತೆ ತಲಾ ಸತತ ಮೂವತ್ತು ಗಂಟೆಗಳ ಕನಿಷ್ಠ ನಾಲ್ಕು ಅವಧಿಗಳನ್ನು ನೀಡಬೇಕು ಎಂದು ಹೇಳುತ್ತದೆ.

ಉನ್ನತಾಧಿಕಾರ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ, ಲೋಕೋ ಪೈಲಟ್ಗಳ ಕರ್ತವ್ಯದ ಸಮಯವನ್ನು 2016 ರಲ್ಲಿ ಕಡಿಮೆ ಮಾಡಲಾಯಿತು. ಈ ಶಿಫಾರಸುಗಳ ಪ್ರಕಾರ, ಸೈನ್ ಆನ್ ಟು ಸೈನ್ ಆಫ್ ಡ್ಯೂಟಿಯನ್ನು (ಕರ್ತವ್ಯಕ್ಕೆ ಹಾಜರಾಗುವ ಮತ್ತು ನಿರ್ಗಮಿಸುವ ಅವಧಿಯನ್ನು) 10 ಗಂಟೆಗಳಿಂದ  9 ಗಂಟೆಗಳಿಗೆ ಇಳಿಸಲಾಯಿತು ಮತ್ತು 10 + 2 ಗಂಟೆಗಳ ಕರ್ತವ್ಯಗಳನ್ನು 9 + 2 ಗಂಟೆಗಳಿಗೆ ಇಳಿಸಲಾಯಿತು. ಲೋಕೋ ಪೈಲಟ್ ಗಳ ಚಾಲನೆಯ ಸಮಯವನ್ನು ಸೂಕ್ಷ್ಮವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ. ಅನಿವಾರ್ಯ ಅಗತ್ಯಗಳನ್ನು ಹೊರತುಪಡಿಸಿದರೆ, ಚಾಲನೆಯ  ಸಮಯವನ್ನು ಪಾಲಿಸಲಾಗುತ್ತದೆ.

ಲೋಕೋ ರನ್ನಿಂಗ್ ಸಿಬ್ಬಂದಿಯ ಕೆಲಸದ ಪರಿಸ್ಥಿತಿಗಳನ್ನು ಸುಧಾರಿಸಲು, ರನ್ನಿಂಗ್ ರೂಮ್ ಗಳಿಗೆ ಸಂಬಂಧಿಸಿದಂತೆ ಕೆಳಗಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ:

  • ಸಿಬ್ಬಂದಿಗಳು ವಿಶ್ರಾಂತಿ ಪಡೆಯುವ ಎಲ್ಲಾ 558 ರನ್ನಿಂಗ್ ರೂಮ್ ಗಳನ್ನು ಹವಾನಿಯಂತ್ರಿತ ವ್ಯವಸ್ಥೆಗೆ ಒಳಪಡಿಸಲಾಗಿದೆ.
  • ಚಾಲಕ ಸಿಬ್ಬಂದಿಗೆ ಅವರ ಅಗತ್ಯಗಳಿಗೆ ಅನುಗುಣವಾಗಿ ವಿಶ್ರಾಂತಿ ಪಡೆಯಲು ಯೋಗ ಮತ್ತು ಧ್ಯಾನ ಕೊಠಡಿ, ಪತ್ರಿಕೆ ಮತ್ತು ನಿಯತಕಾಲಿಕೆಗಳೊಂದಿಗೆ ಓದುವ ಕೋಣೆಯನ್ನು ಸಹ ಒದಗಿಸಲಾಗಿದೆ.
  • ವಿಮಾನಗಳು ಮತ್ತು ರಸ್ತೆಯಲ್ಲಿ ಚಲಿಸುವ  ವಾಹನಗಳಿಗಿಂತ ಭಿನ್ನವಾಗಿ ಲೋಕೋ ಪೈಲಟ್ ಗಳು ಲೋಕೋದಲ್ಲಿ ದೀರ್ಘಕಾಲ ನಿಂತುಕೊಂಡಿರಬೇಕಾಗುತ್ತದೆ.   ಟ್ರ್ಯಾಕ್  (ಹಳಿಗಳು) ಮತ್ತು ಸಿಗ್ನಲ್ ಗಳ ಮೇಲೆ ನಿರಂತರ ನಿಗಾ ಇಡಬೇಕಾಗುತ್ತದೆ.  ಆದ್ದರಿಂದ, ಲೋಕೋ ಪೈಲಟ್ ಗಳಿಗೆ ಸರಿಯಾದ ವಿಶ್ರಾಂತಿ ನೀಡಲು ರನ್ನಿಂಗ್ ರೂಮ್ ಗಳಲ್ಲಿ ಪಾದ ಮಸಾಜ್ ಇತ್ಯಾದಿಗಳನ್ನು ಲಭ್ಯವಾಗುವಂತೆ ಮಾಡಲಾಗಿದೆ.
  •  ರನ್ನಿಂಗ್ ರೂಮ್ ಗಳಲ್ಲಿ ಸಬ್ಸಿಡಿ ದರದಲ್ಲಿ ಊಟದ ವ್ಯವಸ್ಥೆ ಇದೆ.
  • ರನ್ನಿಂಗ್ ರೂಮ್ ಗಳಲ್ಲಿ ಆರ್.ಒ.(RO) ವಾಟರ್ ಫಿಲ್ಟರ್ ಗಳನ್ನು ಒದಗಿಸಲಾಗಿದೆ.  

ಇದಲ್ಲದೆ, ಲೋಕೋ ರನ್ನಿಂಗ್ ಸಿಬ್ಬಂದಿಯ ಕೆಲಸದ ಪರಿಸ್ಥಿತಿಗಳನ್ನು ಸುಧಾರಿಸಲು ಕೈಗೊಂಡ ಕ್ರಮಗಳು ಮತ್ತು ಉಪಕ್ರಮಗಳು ಕೆಳಗಿನಂತಿವೆ:

  • ಲೋಕೋ ಪೈಲಟ್ ಗಳಿಗೆ ಉತ್ತಮ ಸೌಕರ್ಯಗಳನ್ನು ಕಲ್ಪಿಸಲು ಉತ್ತಮ ಆಸನ ಮತ್ತು ಡ್ರೈವರ್ ಡೆಸ್ಕ್ ಗಳಂತಹ ದಕ್ಷತಾಶಾಸ್ತ್ರದ ಸಿಬ್ಬಂದಿ ಸ್ನೇಹಿ ವಿನ್ಯಾಸ ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ. 2014 ರಿಂದ ಸೌಲಭ್ಯಗಳೊಂದಿಗೆ 7,286 ತ್ರೀ ಫೇಸ್ ಲೋಕೋಗಳನ್ನು ತಯಾರಿಸಲಾಗಿದ್ದು, 2014 ಕ್ಕಿಂತ ಮೊದಲು ಕೇವಲ 719 ಲೋಕೋಗಳನ್ನು ಮಾತ್ರ ತಯಾರಿಸಲಾಗಿತ್ತು.
  • 2017-18 ರಿಂದ ಎಲ್ಲಾ ಹೊಸ ಲೋಕೋಗಳಿಗೆ ಹವಾನಿಯಂತ್ರಿತ ವ್ಯವಸ್ಥೆ ಗಳನ್ನು ಒದಗಿಸಲಾಗಿದೆ. ಇಲ್ಲಿಯವರೆಗೆ 7,000 ಕ್ಕೂ ಹೆಚ್ಚು ಲೋಕೋಗಳಿಗೆ ಹವಾನಿಯಂತ್ರಣಗಳನ್ನು ಒದಗಿಸಲಾಗಿದೆ.
  • ವಾಹನ ಚಲಾಯಿಸುವಾಗ ಜಾಗರೂಕತೆಯನ್ನು ನಿರ್ಲಕ್ಷ್ಯ ಮಾಡಿದ/ಕಳೆದುಕೊಂಡ ಸಂದರ್ಭದಲ್ಲಿ ಲೋಕೋ ಪೈಲಟ್ ಗಳನ್ನು ಎಚ್ಚರಿಸಲು ತಾಂತ್ರಿಕ ಸಹಾಯವಾಗಿ ವಿಜಿಲೆನ್ಸ್ ಕಂಟ್ರೋಲ್ ಡಿವೈಸಸ್ (ವಿಸಿಡಿ) ಅಳವಡಿಸಲಾಗಿದೆ. 2014 ರಿಂದ, 12,000 ಕ್ಕೂ ಹೆಚ್ಚು (10,521 ಎಲೆಕ್ಟ್ರಿಕ್ + 1,873 ಡೀಸೆಲ್) ಲೋಕೋಗಳಲ್ಲಿ ವಿಸಿಡಿಯನ್ನು ಒದಗಿಸಲಾಗಿದೆ.
  • ಸಮೀಪಿಸುವ ಸಿಗ್ನಲ್ ಗಳು ಮತ್ತು ಪ್ರಮುಖ ಹೆಗ್ಗುರುತುಗಳ/ಸ್ಥಳಗಳ  ಹೆಸರು ಮತ್ತು ದೂರವನ್ನು ಪ್ರದರ್ಶಿಸಲು ಮತ್ತು ಘೋಷಿಸಲು ತಾಂತ್ರಿಕ ನೆರವಾಗಿ ಲೋಕೋ ಪೈಲಟ್ ಗಳಿಗೆ ಜಿಪಿಎಸ್ ಆಧಾರಿತ ಫಾಗ್ ಸೇಫ್ ಡಿವೈಸ್ (ಮಂಜು ಸುರಕ್ಷಾ ಯಂತ್ರ ವ್ಯವಸ್ಥೆ-ಎಫ್ ಎಸ್ ಡಿ) ಅಳವಡಿಸಲಾಗುತ್ತಿದೆ.  2014 ರಿಂದ 21,742 ಇಂಜಿನ್ ಗಳಲ್ಲಿ ಭಾರತೀಯ ರೈಲ್ವೇಯು (ಐಆರ್ ) ಎಫ್ ಎಸ್ ಡಿಗಳನ್ನು ಒದಗಿಸಲಾಗಿದೆ.
  • ಚಾಲನಾ ಕೌಶಲ್ಯಗಳನ್ನು ಸುಧಾರಿಸಲು ಸಿಮ್ಯುಲೇಟರ್ ಆಧಾರಿತ ತರಬೇತಿ ಮತ್ತು ಲೋಕೋ ಪೈಲಟ್ ಗಳ ಪ್ರತಿಕ್ರಿಯಾ ಸಮಯಕ್ಕೆ ಆದ್ಯತೆ ನೀಡಲಾಗುತ್ತಿದೆ ಮತ್ತು ಸಿಮ್ಯುಲೇಟರ್ ತರಬೇತಿ ಸೌಲಭ್ಯವನ್ನು ಗಮನಾರ್ಹವಾಗಿ ಹೆಚ್ಚಿಸಲಾಗಿದೆ.
  • ಸಿಬ್ಬಂದಿಯ ಅನುಕೂಲಕ್ಕಾಗಿ 'ಚಾಲಕ್ ದಳ' ಎಂಬ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಲಾಗಿದೆ.  2023 ರಲ್ಲಿ ಅಪ್ಲಿಕೇಶನ್ ಸುಧಾರಿಸಲಾಗಿದೆ, ಇದು ಸಿಬ್ಬಂದಿಗೆ ಚಾಲನೆಯ ಕರ್ತವ್ಯಗಳಿಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ, ಸೈನ್ ಆನ್ / ಸೈನ್ ಆಫ್, ಲೋಕೋ ಟ್ರಬಲ್ ಶೂಟಿಂಗ್ ಡೈರೆಕ್ಟರಿ ಮತ್ತು ರೈಲು ಕಾರ್ಯಾಚರಣೆಯ ಸಮಯದಲ್ಲಿ ಅಗತ್ಯವಿರುವ ಇತರ ದಾಖಲೆಗಳು ಲಭ್ಯವಾಗುವಂತೆ ಮಾಡುತ್ತದೆ. ಈ ಹಿಂದೆ ಇವುಗಳನ್ನು  ಹಾರ್ಡ್ ಕಾಪಿಯಲ್ಲಿ ಕೊಂಡೊಯ್ಯಬೇಕಾಗಿತ್ತು.
  • ಚಾಲನೆಯಲ್ಲಿರುವ ಸಿಬ್ಬಂದಿಯಲ್ಲಿ ಜಾಗರೂಕತೆ ಮತ್ತು ಸುರಕ್ಷತಾ ಜಾಗೃತಿಯನ್ನು ಪರಿಶೀಲಿಸಲು ವಿವಿಧ ಸುರಕ್ಷತಾ ಡ್ರೈವ್ ಗಳು ಮತ್ತು ವಿಶೇಷ ಸಮಾಲೋಚನೆ ಕಾರ್ಯಕ್ರಮಗಳನ್ನು ನಿಯಮಿತವಾಗಿ ಆಯೋಜಿಸಲಾಗುತ್ತದೆ. ಚಾಲನೆಯಲ್ಲಿರುವ ಸಿಬ್ಬಂದಿಯ ಜೀವನದಲ್ಲಿ ಗುಣಮಟ್ಟದ ವಿಶ್ರಾಂತಿಯ ಪಾತ್ರದ ಬಗ್ಗೆ ಶಿಕ್ಷಣ ನೀಡಲು ರನ್ನಿಂಗ್ ಸಿಬ್ಬಂದಿಯ ಕುಟುಂಬ ಸದಸ್ಯರೊಂದಿಗೆ ಸಂವಹನಕ್ಕಾಗಿ ವಿಶೇಷ ಸುರಕ್ಷತಾ ಸೆಮಿನಾರ್ ಗಳು ಮತ್ತು ಸಭೆಗಳನ್ನು ಸಹ ಆಯೋಜಿಸಲಾಗುತ್ತದೆ.
  • ಚಾಲನಾ ಸಿಬ್ಬಂದಿಯ ನೈತಿಕ ಸ್ಥೈರ್ಯ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಲಹೆ ನೀಡಲು ನಿಯಮಿತವಾಗಿ ವಿಶೇಷ ಡ್ರೈವ್ ಗಳನ್ನು ಆರಂಭಿಸಲಾಗಿದೆ.

ರೈಲ್ವೆ, ವಾರ್ತಾ ಮತ್ತು ಪ್ರಸಾರ ಮತ್ತು ವಿದ್ಯುನ್ಮಾನ ಹಾಗು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಇಂದು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ಮಾಹಿತಿಯನ್ನು ನೀಡಿದರು.

 

*****



(Release ID: 2037833) Visitor Counter : 29


Read this release in: English , Hindi , Hindi_MP , Tamil