ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

ಕಳೆದ ಒಂದು ತಿಂಗಳ ಅವಧಿಯಲ್ಲಿ ಕಡಲೆ ಕಾಳು, ತೊಗರಿ ಮತ್ತು ಉದ್ದು ದರ ಪ್ರಮುಖ ಮಾರುಕಟ್ಟೆಗಳಲ್ಲಿ 4% ರಷ್ಟು ಇಳಿಕೆ : ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ  

Posted On: 16 JUL 2024 3:27PM by PIB Bengaluru

ಗ್ರಾಹಕ ವ್ಯವಹಾರಗಳ ಇಲಾಖೆಯು ಇಂದು ಬೇಳೆಕಾಳುಗಳಿಗೆ ಸಂಬಂಧಿಸಿದಂತೆ ಬೆಲೆ ಪರಿಸ್ಥಿತಿ ಮತ್ತು ಪರವಾನಗಿ ಅಗತ್ಯತೆಗಳು, ತೊಗರಿ ಮತ್ತು ಕಡಲೆಕಾಳು ದಾಸ್ತಾನು ಮಿತಿಗಳು, ಪೂರೈಕೆಯ ನಿರ್ಬಂಧಗಳ ಅನುಸರಣೆಗೆ ಸಂಬಂಧಿಸಿದಂತೆ ಚಿಲ್ಲರೆ ವ್ಯಾಪಾರಿಗಳ ಸಂಘದೊಂದಿಗೆ (ಆರ್.ಎ.ಐ) ಸಭೆ ನಡೆಸಿತು. ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ಶ್ರೀಮತಿ ನಿಧಿ ಖರೆ ಅಧ್ಯಕ್ಷತೆಯಲ್ಲಿ 21.06.2024 ಮತ್ತು 11.07.2024 ರ ನಡುವೆ ನಿರ್ದಿಷ್ಟಪಡಿಸಿದ ಆಹಾರ ಪದಾರ್ಥಗಳ (ಮೊದಲ ಮತ್ತು ಎರಡನೆಯ ತಿದ್ದುಪಡಿಗಳು) ಸ್ಥಿತಿಗತಿ ಕುರಿತು ಚರ್ಚಿಸಲಾಯಿತು. 

ದೇಶದಲ್ಲಿ 2300 ಕ್ಕೂ ಅಧಿಕ ಸದಸ್ಯರು ಚಿಲ್ಲರೆ ವ್ಯಾಪಾರಿಗಳ ಸಂಘದಲ್ಲಿದ್ದಾರೆ ಮತ್ತು 6.00,000 ಕ್ಕೂ ಅಧಿಕ ಮಳಿಗೆಗಳನ್ನು ಇವು ಒಳಗೊಂಡಿವೆ.  

ಕಳೆದ ಒಂದು ತಿಂಗಳ ಅವಧಿಯಲ್ಲಿ ಕಡಲೆ ಕಾಳು, ತೊಗರಿ ಮತ್ತು ಉದ್ದು ದರ ಪ್ರಮುಖ ಮಾರುಕಟ್ಟೆಗಳಲ್ಲಿ 4% ರಷ್ಟು ಇಳಿಕೆಯಾಗಿದೆ. ಆದರೆ ಚಿಲ್ಲರೆ ಮಾರುಕಟ್ಟೆ ವಲಯದಲ್ಲಿ ಇದೇ ರೀತಿಯ ಇಳಿಕೆ ಕಂಡು ಬಂದಿಲ್ಲ. ಸಗಟು ಮಾರಾಟ ವಲಯದಲ್ಲಿನ ದರಗಳು ಮತ್ತು ಚಿಲ್ಲರೆ ಮಾರಾಟ ದರಗಳ ನಡುವೆ ವ್ಯತ್ಯಾಸವಿದೆ. ಚಿಲ್ಲರೆ ಮಾರಾಟ ವಲಯದಲ್ಲಿ ಲಾಭಾಂಶ ಹೆಚ್ಚಾಗಿದೆ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ಶ್ರೀಮತಿ ನಿಧಿ ಖರೆ ಸಭೆಯಲ್ಲಿ ಹೇಳಿದರು. 

ಮುಂಗಾರು ಹಂಗಾಮಿನಲ್ಲಿ ದ್ವಿದಳ ಧಾನ್ಯಗಳ ಬಿತ್ತನೆ ಪ್ರಮಾಣ ದೃಢವಾಗಿದೆ. ಪ್ರಮುಖ ಬೆಳೆಗಳಾದ ತೊಗರಿ ಮತ್ತು ಉದ್ದು ಬೆಳೆಗಳನ್ನು ಸಂಬಂಧಪಟ್ಟ ರಾಜ್ಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಇದಕ್ಕಾಗಿ ರಾಜ್ಯ ಸರ್ಕಾರಗಳ ಕೃಷಿ ಇಲಾಖೆಗಳ ಸಹಯೋಗದಲ್ಲಿ ನಫೆಡ್ ಮತ್ತು ಎನ್.ಸಿ.ಸಿ.ಎಫ್ ಸಂಸ್ಥೆಗಳಿಂದ ರೈತರಿಗೆ ನಿರಂತರವಾಗಿ ಗುಣಮಟ್ಟದ ಬಿತ್ತನೆ ಬೀಜಗಳನ್ನು ಪೂರೈಸಲಾಗುತ್ತಿದೆ. 

ಪ್ರಸ್ತುತ ಬೆಲೆ ಸನ್ನಿವೇಶ ಮತ್ತು ಖಾರಿಫ್ ದೃಷ್ಟಿಕೋನವನ್ನು ಪರಿಗಣಿಸಿ, ಚಿಲ್ಲರೆ ಉದ್ಯಮವು ಗ್ರಾಹಕರಿಗೆ ಬೇಳೆಕಾಳುಗಳ ಬೆಲೆಗಳನ್ನು ಕೈಗೆಟುಕುವಂತೆ ಮಾಡುವ ಪ್ರಯತ್ನಗಳಲ್ಲಿ ಸರ್ಕಾರಕ್ಕೆ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡುವಂತೆ ಕಾರ್ಯದರ್ಶಿ ಅವರು ಮನವಿ ಮಾಡಿದರು. ದೊಡ್ಡಮಟ್ಟದ ಚಿಲ್ಲರೆ ಮಾರಾಟಗಾರರು ದಾಸ್ತಾನು ಮಿತಿಯನ್ನು ಮೀರಿದ್ದಾರೆಯೇ ಎಂಬುದನ್ನು ನಿಕಟವಾಗಿ ನಿಗಾ ವಹಿಸಿ ಪರಿಶೀಲನೆ ಮಾಡಲಾಗುತ್ತಿದೆ. ದಾಸ್ತಾನು ಮಿತಿಗಳ ಉಲ್ಲಂಘನೆ, ಊಹಾಪೋಹಗಳು ಮತ್ತು ಮಾರುಕಟ್ಟೆ ವಲಯದಿಂದ ಲಾಭದಾಯಕತೆ ಪ್ರವೃತ್ತಿಗೆ ಆದ್ಯತೆ ನೀಡಿದರೆ ಸರ್ಕಾರದಿಂದ ಕಠಿಣ ಕ್ರಮಗಳಿಗೆ ಆಹ್ವಾನ ನೀಡಿದಂತಾಗುತ್ತದೆ ಎಂದರು. 

ಚಿಲ್ಲರೆ ವಲಯದ ಗ್ರಾಹಕರಿಗೆ ಅನುಕೂಲ ಮಾಡಿಕೊಡಲು ಸೂಕ್ತ ರೀತಿಯಲ್ಲಿ ದರಗಳಲ್ಲಿ ಅಗತ್ಯ ಹೊಂದಾಣಿಕೆಗಳನ್ನು ಮಾಡಿಕೊಳ್ಳಲಾಗುವುದು ಮತ್ತು ಗ್ರಾಹಕರಿಗೆ ಕೈಗೆಟುವ ದರದಲ್ಲಿ ಪೂರೈಕೆ ಮಾಡುವುದಾಗಿ ಸಭೆಯಲ್ಲಿ ಭಾಗವಹಿಸಿದ್ದವರು ಭರವಸೆ ನೀಡಿದರು. 

ಸಭೆಯಲ್ಲಿ ಭಾರತೀಯ ಚಿಲ್ಲರೆ ಮಾರಾಟಗಾರರ ಸಂಘ – ಆರ್.ಎ.ಐ, ರಿಲಯನ್ಸ್ ರೀಟೈಲ್ಸ್, ಡಿ.ಮಾರ್ಟ್, ಟಾಟಾ ಸ್ಟೋರ್ಸ್, ಸ್ಪೆನ್ಸಾರ್ಸ್, ಆರ್.ಎಸ್.ಪಿ.ಜಿ, ವಿ ಮಾರ್ಟ್ ಮತ್ತಿತರೆ ಸಂಘಗಳ ಪ್ರತಿನಿಧಿಗಳು ಭಾಗವಹಿಸಿದ್ದರು.  

 

*****


(Release ID: 2033670) Visitor Counter : 65