ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ
azadi ka amrit mahotsav

ಸ್ಮಾರ್ಟ್ ಸಿಟಿ ಮಿಷನ್ 2025ರ ಮಾರ್ಚ್ ವರೆಗೆ ವಿಸ್ತರಣೆ

Posted On: 03 JUL 2024 6:49PM by PIB Bengaluru

ಸ್ಮಾರ್ಟ್ ಸಿಟಿ ಮಿಷನ್ ಭಾರತದ ನಗರ ಅಭಿವೃದ್ಧಿಯಲ್ಲಿ ಒಂದು ಹೊಸ ಪ್ರಯೋಗವಾಗಿದೆ. 2015 ರ ಜೂನ್ ತಿಂಗಳಲ್ಲಿ ಪ್ರಾರಂಭವಾದಾಗಿನಿಂದ, ಮಿಷನ್ ಹಲವಾರು ನವೀನ ಆಲೋಚನೆಗಳ ಅನುಷ್ಠಾನಕ್ಕೆ ಪ್ರಯತ್ನಿಸಿದೆ, ಉದಾಹರಣೆಗೆ, 100 ಸ್ಮಾರ್ಟ್ ಸಿಟಿಗಳ ಆಯ್ಕೆಗಾಗಿ ನಗರಗಳ ನಡುವಿನ ಸ್ಪರ್ಧೆ, ಮಧ್ಯಸ್ಥಗಾರ/ ಭಾಗೀದಾರ ಚಾಲಿತ ಯೋಜನಾ ಆಯ್ಕೆ, ಅನುಷ್ಠಾನಕ್ಕಾಗಿ ಸ್ಮಾರ್ಟ್ ಸಿಟಿ ವಿಶೇಷ ಉದ್ದೇಶದ ವಾಹನಗಳ ರಚನೆ, ನಗರ ಆಡಳಿತವನ್ನು ಸುಧಾರಿಸಲು ತಂತ್ರಜ್ಞಾನ ಮತ್ತು ಡಿಜಿಟಲ್ ಪರಿಹಾರಗಳ ನಿಯೋಜನೆ, ಪ್ರಮುಖ ಶೈಕ್ಷಣಿಕ ಮತ್ತು ವೃತ್ತಿಪರ ಸಂಸ್ಥೆಗಳಿಂದ ಮೂರನೇ ತಂಡದ (ಥರ್ಡ್ ಪಾರ್ಟಿ)  ಪರಿಣಾಮ ಮೌಲ್ಯಮಾಪನ ಇತ್ಯಾದಿ.

100 ನಗರಗಳಲ್ಲಿ ಪ್ರತಿಯೊಂದೂ ವೈವಿಧ್ಯಮಯ ಯೋಜನೆಗಳನ್ನು ಅಭಿವೃದ್ಧಿಪಡಿಸಲಾಗಿದೆ, ಅವುಗಳಲ್ಲಿ ಅನೇಕವು ಬಹಳ ವಿಶಿಷ್ಟವಾಗಿವೆ ಮತ್ತು ಮೊದಲ ಬಾರಿಗೆ ಕಾರ್ಯಗತಗೊಳಿಸಲಾಗುತ್ತಿದೆ, ಇದರಿಂದಾಗಿ ನಗರಗಳ ಸಾಮರ್ಥ್ಯ ಮತ್ತು ಅನುಭವವನ್ನು ಸುಧಾರಿಸಲು ಸಾಧ್ಯವಾಗುತ್ತದೆ ಮತ್ತು  ನಗರ ಮಟ್ಟದಲ್ಲಿ ದೊಡ್ಡ ವಿಸ್ತ್ರಾರ ವ್ಯಾಪ್ತಿಯ ಪರಿವರ್ತನೆಯ ಗುರಿಗಳನ್ನು ಇದು ಸಾಧಿಸುತ್ತದೆ. ಸುಮಾರು 1.6 ಲಕ್ಷ ಕೋಟಿ ರೂ.ಗಳ 8,000+ ಬಹು-ವಲಯ ಯೋಜನೆಗಳನ್ನು 100 ನಗರಗಳು ಅಭಿವೃದ್ಧಿಪಡಿಸುತ್ತಿವೆ.

2024ರ  ಜುಲೈ  03ರ ಹೊತ್ತಿಗೆ, 100 ನಗರಗಳು ಈ ಆಂದೋಲನ (ಮಿಷನ್)  ಭಾಗವಾಗಿ 1,44,237 ಕೋಟಿ ರೂ. ಮೌಲ್ಯದ 7,188 ಯೋಜನೆಗಳನ್ನು (ಒಟ್ಟು ಯೋಜನೆಗಳ 90%) ಪೂರ್ಣಗೊಳಿಸಿವೆ. ಬಾಕಿ ಉಳಿದಿರುವ 19,926 ಕೋಟಿ ರೂ.ಗಳ ಮೊತ್ತದ 830 ಯೋಜನೆಗಳು ಸಹ ಪೂರ್ಣಗೊಳ್ಳುವ ಹಂತದಲ್ಲಿವೆ. ಆರ್ಥಿಕ ಪ್ರಗತಿಗೆ ಸಂಬಂಧಿಸಿದಂತೆ, ಮಿಷನ್ 100 ನಗರಗಳಿಗೆ ಭಾರತ ಸರ್ಕಾರದ ಬಜೆಟ್ 48,000 ಕೋಟಿ ರೂ.ಗಳ ಮೊತ್ತವನ್ನು ನಿಗದಿಪಡಿಸಿದೆ. ಇಲ್ಲಿಯವರೆಗೆ, ಭಾರತ ಸರ್ಕಾರವು 100 ನಗರಗಳಿಗೆ 46,585 ಕೋಟಿ ರೂ.ಗಳನ್ನು (ನಿಗದಿಪಡಿಸಿದ ಭಾರತ ಸರ್ಕಾರದ ಬಜೆಟಿನ 97%) ಬಿಡುಗಡೆ ಮಾಡಿದೆ. ನಗರಗಳಿಗೆ ಬಿಡುಗಡೆಯಾದ ಈ ನಿಧಿಯಲ್ಲಿ, 93% ಇಲ್ಲಿಯವರೆಗೆ ಬಳಸಲಾಗಿದೆ. ಮಿಷನ್ ಅಡಿಯಲ್ಲಿ 100 ನಗರಗಳ ಪೈಕಿ 74 ನಗರಗಳಿಗೆ ಭಾರತ ಸರ್ಕಾರದ ಸಂಪೂರ್ಣ ಆರ್ಥಿಕ ಬೆಂಬಲವನ್ನು ಬಿಡುಗಡೆ ಮಾಡಲಾಗಿದೆ.

ಉಳಿದ 10% ಯೋಜನೆಗಳನ್ನು ಪೂರ್ಣಗೊಳಿಸಲು ಇನ್ನೂ ಸ್ವಲ್ಪ ಕಾಲಾವಕಾಶವನ್ನು ನೀಡುವಂತೆ ಕೆಲವು ರಾಜ್ಯಗಳು / ನಗರ ಆಡಳಿತದ ಪ್ರತಿನಿಧಿಗಳಿಂದ ಅನೇಕ ವಿನಂತಿಗಳು ಮಿಷನ್ ಗೆ ಸಲ್ಲಿಸಲ್ಪಟ್ಟಿವೆ.  ಈ ಬಾಕಿ ಉಳಿದಿರುವ ಯೋಜನೆಗಳು ಅನುಷ್ಠಾನದ ಪ್ರಗತಿಯ ಹಂತದಲ್ಲಿವೆ ಮತ್ತು ವಿವಿಧ ಸ್ಥಳೀಯ ಪರಿಸ್ಥಿತಿಗಳಿಂದಾಗಿ ವಿಳಂಬಗೊಂಡಿವೆ. ಜನರ ಹಿತದೃಷ್ಟಿಯಿಂದ, ಈ ಯೋಜನೆಗಳು ಪೂರ್ಣಗೊಳ್ಳಬೇಕಾಗಿದೆ ಮತ್ತು ಇವು ಅವರ ನಗರ ಪ್ರದೇಶಗಳಲ್ಲಿ ಜೀವನವನ್ನು ಸುಲಭಗೊಳಿಸಲು ಕೊಡುಗೆ ನೀಡುವ ಯೋಜನೆಗಳಾಗಿವೆ. ಈ ವಿನಂತಿಗಳನ್ನು ಪರಿಗಣಿಸಿ, ಭಾರತ ಸರ್ಕಾರವು ಉಳಿದ 10% ಯೋಜನೆಗಳನ್ನು ಪೂರ್ಣಗೊಳಿಸಲು ಮಿಷನ್ ಅವಧಿಯನ್ನು 2025 ರ ಮಾರ್ಚ್ 31 ರವರೆಗೆ ವಿಸ್ತರಿಸಿದೆ. ಈ ವಿಸ್ತರಣೆಯನ್ನು ನೀಡುವಾಗ ಮಿಷನ್ ಅಡಿಯಲ್ಲಿ ಈಗಾಗಲೇ ಅನುಮೋದಿಸಲಾದ ಹಣಕಾಸು ಹಂಚಿಕೆಯನ್ನು ಮೀರಿ ಯಾವುದೇ ಹೆಚ್ಚುವರಿ ವೆಚ್ಚವನ್ನು ಭರಿಸಲಾಗದು ಎಂದು ನಗರಗಳಿಗೆ ತಿಳಿಸಲಾಗಿದೆ. ಪ್ರಗತಿಯಲ್ಲಿರುವ ಎಲ್ಲಾ ಯೋಜನೆಗಳು ಈಗ 2025 ರ ಮಾರ್ಚ್ 31ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

 

*****
 


(Release ID: 2030664) Visitor Counter : 61