ವಾರ್ತಾ ಮತ್ತು ಪ್ರಸಾರ ಸಚಿವಾಲಯ

18 ನೇ ಎಂಐಎಫ್ಎಫ್ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಆಯ್ಕೆ ಪ್ರಕ್ರಿಯೆಯ ಒಳನೋಟಗಳನ್ನು  ಹಂಚಿಕೊಂಡ ತೀರ್ಪುಗಾರ ಸದಸ್ಯರು 


ಸಾಕ್ಷ್ಯ ಚಿತ್ರಗಳನ್ನು ನೋಡುವ ಮೂಲಕ ನಾವು ಹೆಚ್ಚು ಮಾನವೀಯರಾಗುತ್ತೇವೆ: ಜ್ಯೂರಿ ಮಂಡಳಿ ಅಧ್ಯಕ್ಷ ಭರತ್ ಬಾಲಾ

ಸಾಕ್ಷ್ಯ ಚಿತ್ರಗಳು ಎಂದರೆ ಆಂದೋಲನದ ಪ್ರಸಾರ: ಬಾರ್ಥೆಲೆಮಿ ಫೌಜಿಯಾ

ಸಾಕ್ಷ್ಯ ಚಿತ್ರಗಳನ್ನು ದೊಡ್ಡ ಪರದೆಯ ಮೇಲೂ ತೋರಿಸಬೇಕು: ಕೀಕೊ ಬ್ಯಾಂಗ್

ಆಯ್ಕೆ ಪ್ರಕ್ರಿಯೆ ಕಠಿಣ ಮತ್ತು ಸವಾಲಿನದ್ದಾಗಿತ್ತು, ಆದರೆ ಆಸಕ್ತಿದಾಯಕವಾಗಿತ್ತು: ಮಾನಸ್ ಚೌಧರಿ

Posted On: 19 JUN 2024 7:20PM by PIB Bengaluru

18 ನೇ ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (ಎಂಐಎಫ್ಎಫ್) ಅಂತಾರಾಷ್ಟ್ರೀಯ ಸ್ಪರ್ಧೆಯ ತೀರ್ಪುಗಾರರು ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಈ ವರ್ಷದ ಚಲನಚಿತ್ರಗಳ ಸವಾಲಿನ ಆಯ್ಕೆ ಪ್ರಕ್ರಿಯೆಯ ಬಗ್ಗೆ ತಮ್ಮ ಒಳನೋಟಗಳು ಮತ್ತು ಅನುಭವಗಳನ್ನು ಹಂಚಿಕೊಂಡರು.


ಜ್ಯೂರಿ ಅಧ್ಯಕ್ಷ ಮತ್ತು ಪ್ರಶಸ್ತಿ ವಿಜೇತ ಭಾರತೀಯ ಚಲನಚಿತ್ರ ನಿರ್ಮಾಪಕ ಭರತ್ ಬಾಲಾ ಅವರು ಚಲನಚಿತ್ರಗಳ ಬಲವಾದ ಮತ್ತು ಸ್ಪರ್ಧಾತ್ಮಕ ಸ್ವರೂಪವನ್ನು ಶ್ಲಾಘಿಸಿದರು. ವೈವಿಧ್ಯಮಯ ಸಾಂಸ್ಕೃತಿಕ ನಿರೂಪಣೆಗಳ ಹೊರತಾಗಿಯೂ ಮಾನವ ಕಥೆಗಳ ಸಾರ್ವತ್ರಿಕತೆಯನ್ನು ಒತ್ತಿಹೇಳಿದ ಬಾಲಾ, ದೊಡ್ಡ ಪರದೆಗಳಲ್ಲಿ ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸುವ ಮಹತ್ವವನ್ನು  ಒತ್ತಿ  ಹೇಳಿದರು. "ನಾವು ಭಾರತದಲ್ಲಿ ಅದ್ಭುತ ಮೂಲಸೌಕರ್ಯಗಳನ್ನು ಹೊಂದಿದ್ದೇವೆ. ನಾವು ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕು ಮತ್ತು ಸಾಕ್ಷ್ಯಚಿತ್ರಗಳನ್ನು ದೊಡ್ಡ ಪರದೆಯ ಮೇಲೆ ಪ್ರದರ್ಶಿಸಬೇಕು" ಎಂದೂ ಅವರು ಹೇಳಿದರು. ಭಾರತದ ವಿದ್ಯಾರ್ಥಿಗಳು ಸಾಕ್ಷ್ಯಚಿತ್ರಗಳಿಗೆ ಹೆಚ್ಚಿನ ಮಾನ್ಯತೆ ನೀಡುವಂತೆ ಬಾಲಾ ಒತ್ತಾಯಿಸಿದರು, ಇದು ಅವರ ಬುದ್ಧಿಶಕ್ತಿಯನ್ನು ವಿಸ್ತರಿಸುತ್ತದೆ ಮತ್ತು ಕಾಲ್ಪನಿಕವಲ್ಲದ ಚಲನಚಿತ್ರ ನಿರ್ಮಾಣದ ಸಂಸ್ಕೃತಿಯನ್ನು ಬೆಳೆಸುತ್ತದೆ ಎಂದೂ ಹೇಳಿದರು. "ಸಾಕ್ಷ್ಯಚಿತ್ರಗಳನ್ನು ನೋಡುವ ಮೂಲಕ ನಾವು ಹೆಚ್ಚು ಮಾನವೀಯರಾಗುತ್ತೇವೆ" ಎಂದೂ ಬಾಲ ಹೇಳಿದರು.

ಸಾಕ್ಷ್ಯಚಿತ್ರ ನಿರ್ಮಾಣದಲ್ಲಿ ಜಾಗತಿಕ ಶಕ್ತಿಯಂತಿರುವ  ಬಾರ್ಥೆಲೆಮಿ ಫೌಜಿಯಾ, ಆಯ್ಕೆ ಪ್ರಕ್ರಿಯೆಯಲ್ಲಿ ವಿಷಯ ಸಾಮಗ್ರಿ ವಹಿಸುವ  ಪ್ರಾಮುಖ್ಯತೆಯ ಬಗ್ಗೆ ವಿವರಿಸಿದರು.  ಜ್ಞಾನ ಮತ್ತು ಸಂಸ್ಕೃತಿಯ ಪ್ರಗತಿಗೆ ಸಾಕ್ಷ್ಯಚಿತ್ರಗಳನ್ನು ಉತ್ತೇಜಿಸುವುದು ಅತ್ಯಗತ್ಯ ಎಂದು ಅವರು ಒತ್ತಿ ಹೇಳಿದರು. "ಸಾಕ್ಷ್ಯಚಿತ್ರಗಳು ಎಂದರೆ ಆಂದೋಲನದ ಪ್ರಸಾರ" ಎಂದೂ ಫೌಜಿಯಾ ಹೇಳಿದರು. ಶ್ರೀಮಂತ ಸಾಮಾಜಿಕ-ಸಾಂಸ್ಕೃತಿಕ ಪರಂಪರೆ ಮತ್ತು ಅಪಾರ ಪ್ರತಿಭೆಗಳನ್ನು ಹೊಂದಿರುವ ಭಾರತವು ಸಾಕ್ಷ್ಯಚಿತ್ರಗಳ ಉತ್ಪಾದನೆಯನ್ನು ಹೆಚ್ಚಿಸಬೇಕು ಎಂದು ಅವರು ಆಗ್ರಹಿಸಿದರು. "ನಾವು ಹೆಚ್ಚು ಸಹಯೋಗಗಳನ್ನು ಮಾಡಿದಷ್ಟೂ ನಾವು ಹೆಚ್ಚು ವಿಶ್ವವ್ಯಾಪಿಯಾಗುತ್ತೇವೆ" ಎಂದು ಫೌಜಿಯಾ ನುಡಿದರು. ಆ ಮೂಲಕ ಅವರು ಅಂತಾರಾಷ್ಟ್ರೀಯ ಸಹಕಾರದ ಮೌಲ್ಯವನ್ನು ಒತ್ತಿಹೇಳಿದರು.


ಅಂತಾರಾಷ್ಟ್ರೀಯ ಮಟ್ಟದಲ್ಲಿ ಶ್ಲಾಘನೆ  ಪಡೆದ ಸಾಕ್ಷ್ಯಚಿತ್ರ ನಿರ್ಮಾಪಕಿ ಕೀಕೊ ಬ್ಯಾಂಗ್, ಆಯ್ಕೆ ಪ್ರಕ್ರಿಯೆಯ ಸಮಯದಲ್ಲಿ ವೈವಿಧ್ಯಮಯ ದೃಷ್ಟಿಕೋನಗಳ ಬಗ್ಗೆ ತಮ್ಮ ಧೋರಣೆಯನ್ನು ಹಂಚಿಕೊಂಡರು, ಅಂತಿಮ ವಿಶ್ಲೇಷಣೆಯು ಆಕರ್ಷಕ ಮತ್ತು ಸಮೃದ್ಧವಾಗಿತ್ತು ಎಂದು ಹೇಳಿದರು. ಶೈಲಿ ಮತ್ತು ಅಭಿವ್ಯಕ್ತಿಯ ಮಾದರಿಗಳು ಭಿನ್ನವಾಗಿದ್ದರೂ, ಚಲನಚಿತ್ರದ ಭಾಷೆ ಸಾರ್ವತ್ರಿಕವಾದುದು ಎಂಬುದರತ್ತ  ಅವರು ಬೆಟ್ಟು ಮಾಡಿದರು.  ಮಾಧ್ಯಮದ ಮಹತ್ವವನ್ನು ಒತ್ತಿ ಹೇಳಿದ  ಬ್ಯಾಂಗ್, "ಮಾಧ್ಯಮ ಎಂದರೆ ಒಂದು ಸಂದೇಶವಾಗಿದೆ. ಇದು  ಹೆಚ್ಚಿನ ಸಮಯದಲ್ಲಿ ವಿಷಯ ಸಾಮಗ್ರಿಯನ್ನು ಆಕರ್ಷಕವಾಗಿಸುವಂತಹದ್ದಾಗಿರುತ್ತದೆ. ಆದ್ದರಿಂದ ಸಾಕ್ಷ್ಯಚಿತ್ರಗಳನ್ನು ದೊಡ್ಡ ಪರದೆಯ ಮೇಲೆ ತೋರಿಸಬೇಕು ಎಂದೂ ಅವರು ಅಭಿಪ್ರಾಯಪಟ್ಟರು.

ಭಾರತೀಯ ಚಲನಚಿತ್ರೋದ್ಯಮದಲ್ಲಿ  ಬಹಳ ಮೆಚ್ಚುಗೆ ಗಳಿಸಿದ ಧ್ವನಿ ವಿನ್ಯಾಸಕಾರ  (ಸೌಂಡ್ ಡಿಸೈನರ್) ಮಾನಸ್ ಚೌಧರಿ, ಆಯ್ಕೆ ಪ್ರಕ್ರಿಯೆಯನ್ನು ಕಠಿಣ ಮತ್ತು ಸವಾಲಿನದು ಎಂದು ಬಣ್ಣಿಸಿದರು, ಆದರೆ ಚಲನಚಿತ್ರಗಳ ಬಗ್ಗೆ ವೈವಿಧ್ಯಮಯ ದೃಷ್ಟಿಕೋನಗಳು ಮತ್ತು ಧೋರಣೆಗಳಿಂದಾಗಿ ಅದು ಆಸಕ್ತಿದಾಯಕವಾಗಿತ್ತು ಎಂದ ಅವರು ವಿಷಯ ಮತ್ತು ತಾಂತ್ರಿಕ ಅಂಶಗಳಿಗೆ ಸಂಬಂಧಿಸಿ ಭಾರತೀಯ ನಾನ್ ಫಿಕ್ಷನ್ ಚಲನಚಿತ್ರಗಳ ಗುಣಮಟ್ಟದಲ್ಲಿ ಗಮನಾರ್ಹ ಸುಧಾರಣೆಗಳಾಗಿವೆ ಎಂಬುದನ್ನು  ಅವರು ಒಪ್ಪಿಕೊಂಡರು.

ಈ ವರ್ಷದ ನಮೂದುಗಳಲ್ಲಿ ಉನ್ನತ ಮಾನದಂಡಗಳು ಅಳವಡಿಕೆಯಾಗಿರುವುದನ್ನು ಮತ್ತು ವೈವಿಧ್ಯಮಯ ವಿಷಯಗಳು ಒಳಗೊಂಡಿರುವುದರ ಬಗ್ಗೆ ತೀರ್ಪುಗಾರರ ಸದಸ್ಯರು ಒಟ್ಟಾಗಿ ಮೆಚ್ಚುಗೆ ವ್ಯಕ್ತಪಡಿಸಿದರು. ಅವರ ಚರ್ಚೆಗಳು ಮಾನವ ಕಥೆಗಳ ಸಾರ್ವತ್ರಿಕ ಆಕರ್ಷಣೆಯನ್ನು ಮತ್ತು ಜ್ಞಾನ ಹಾಗು ಸಾಂಸ್ಕೃತಿಕ ತಿಳುವಳಿಕೆಯನ್ನು ಉತ್ತೇಜಿಸುವಲ್ಲಿ ಸಾಕ್ಷ್ಯಚಿತ್ರಗಳು ವಹಿಸುವ ನಿರ್ಣಾಯಕ ಪಾತ್ರವನ್ನು ಪ್ರಮುಖವಾಗಿ ಪ್ರಸ್ತಾಪಿಸಿದವು.

 

*****



(Release ID: 2026793) Visitor Counter : 20