ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಎಂಐಎಫ್ಎಫ್ ನಿಂದ "ಸ್ಪೂರ್ತಿದಾಯಕ ನಿರೂಪಣೆಗಳು: ನಾವೀನ್ಯತೆ ಮತ್ತು ಸೃಜನಶೀಲತೆ" ಕುರಿತು ಪ್ಯಾನಲ್ ಚರ್ಚೆ ಆಯೋಜನೆ


ಸ್ಪೂರ್ತಿದಾಯಕ ಎಂಐಎಫ್ಎಫ್ ಪ್ಯಾನೆಲ್ನಲ್ಲಿ ಸಾಮಾಜಿಕ ಅನ್ವೇಷಕರ ಸಾಧನಾ ಪಥದ ಪ್ರಯಾಣವನ್ನು ಸಂಭ್ರಮಿಸಲಾಯಿತು 

'ಆಜಾದಿ ಕಿ ಅಮೃತ್ ಕಹಾನಿಯನ್' ಅಡಿಯಲ್ಲಿ ಸಾಮಾಜಿಕ ಉದ್ಯಮಿಗಳ ಯಶಸ್ಸಿನ ಕಥೆಗಳ ಆಕರ್ಷಕ ಅನಿಮೇಷನ್ ಟ್ರೈಲರ್ ಗಳನ್ನು ಪ್ರದರ್ಶಿಸಲಾಯಿತು

Posted On: 16 JUN 2024 7:40PM by PIB Bengaluru

18 ನೇ ಮುಂಬೈ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (ಎಂಐಎಫ್ಎಫ್)ದಲ್ಲಿ  ಇಂದು "ಸ್ಪೂರ್ತಿದಾಯಕ ನಿರೂಪಣೆಗಳು: ನಾವೀನ್ಯತೆ ಮತ್ತು ಸೃಜನಶೀಲತೆ" ಎಂಬ ಶೀರ್ಷಿಕೆಯಲ್ಲಿ  ಕ್ರಿಯಾಶೀಲ ಪ್ಯಾನಲ್ ಚರ್ಚೆಯನ್ನು ಆಯೋಜಿಸಲಾಗಿತ್ತು. ಈ ಅಧಿವೇಶನದಲ್ಲಿ ಉದಯೋನ್ಮುಖ ಸಾಮಾಜಿಕ ಉದ್ಯಮಿಗಳು ಭಾಗವಹಿಸಿದ್ದರು, ಅವರು ಸಮಾಜದಲ್ಲಿ ಪರಿವರ್ತನಾತ್ಮಕ ಬದಲಾವಣೆಗಳನ್ನು ತರುವ ಗುರಿಯನ್ನು ಹೊಂದಿರುವ ತಮ್ಮ ಉಪಕ್ರಮಗಳನ್ನು ಹಂಚಿಕೊಂಡರು. ಚರ್ಚೆಯು ಈ ಆವಿಷ್ಕಾರಕರ ವೈಯಕ್ತಿಕ ಪ್ರಯಾಣಗಳನ್ನು ಅನ್ವೇಷಿಸಿತು, ಅವರು ಸವಾಲುಗಳನ್ನು ಹೇಗೆ ನಿಭಾಯಿಸಿದರು/ ನ್ಯಾವಿಗೇಟ್ ಮಾಡಿದರು, ಸೃಜನಶೀಲತೆಯನ್ನು ಹೇಗೆ ಅಳವಡಿಸಿಕೊಂಡರು ಮತ್ತು ತಮ್ಮ ಆಲೋಚನೆಗಳಿಗೆ ಜೀವ ತುಂಬಲು ಗಡಿಗಳನ್ನು ಹೇಗೆ ಮೀರಿದರು  ಎಂಬುದನ್ನು ಎತ್ತಿ ತೋರಿಸಿತು. ಲಿಂಗ ಮಾನದಂಡಗಳನ್ನು ಮುರಿಯುವುದರಿಂದ ಹಿಡಿದು ಸಾಮಾಜಿಕ ಅಡೆತಡೆಗಳನ್ನು ನಿವಾರಿಸುವವರೆಗೆ, ಪ್ಯಾನೆಲಿಸ್ಟ್ ಗಳು ಒಳನೋಟಗಳು ಮತ್ತು ಅನುಭವಗಳನ್ನು ಹಂಚಿಕೊಂಡರು, ಇತರರಿಗೆ  ತಮ್ಮ ಆಸಕ್ತಿಗಳನ್ನು  ಮುಂದುವರಿಸಿಕೊಂಡು ಹೋಗಲು  ಮತ್ತು ಶಾಶ್ವತ ಪರಿಣಾಮ ಉಂಟುಮಾಡುವಂತೆ ಕಾರ್ಯನಿರ್ವಹಿಸಲು  ಪ್ರೇರೇಪಿಸಿದರು.

ಈ ಯಶಸ್ಸಿನ ಕಥೆಗಳನ್ನು ಸಂಭ್ರಮಿಸುವ  ಮತ್ತು ಲಕ್ಷಾಂತರ ಜನರನ್ನು ಪ್ರೇರೇಪಿಸುವ ಪ್ರಯತ್ನದಲ್ಲಿ, ಅವರ ಜೀವನ ಪ್ರಯಾಣವನ್ನು ಚಿತ್ರಿಸುವ ಅನಿಮೇಷನ್ ಚಲನಚಿತ್ರಗಳನ್ನು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್ಎಫ್ಡಿಸಿ) ಮತ್ತು ನೆಟ್ ಫ್ಲಿಕ್ಸ್  'ಆಜಾದಿ ಕಾ ಅಮೃತ್ ಕಹಾನಿಯನ್' ಸರಣಿಯ ಭಾಗವಾಗಿ ಸಹಯೋಗದಲ್ಲಿ ನಿರ್ಮಾಣ ಮಾಡುತ್ತಿವೆ. ಚರ್ಚೆಯ ಸಮಯದಲ್ಲಿ ಈ ಚಿತ್ರಗಳ ಟ್ರೈಲರ್ ಗಳನ್ನು ಪ್ರದರ್ಶಿಸಲಾಯಿತು. ಪ್ರಧಾನ ಮಂತ್ರಿ ಕಚೇರಿ ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಪ್ರಧಾನ ವೈಜ್ಞಾನಿಕ ಸಲಹೆಗಾರರಿಂದ ಆಯ್ಕೆ ಮಾಡಲ್ಪಟ್ಟ ಈ ಆವಿಷ್ಕಾರಕರ ಕಥೆಗಳು ಎನ್ಎಫ್ಡಿಸಿ ಮತ್ತು ನೆಟ್ ಫ್ಲಿಕ್ಸ್  ನಡುವಿನ ಸಹಯೋಗದ ಉಪಕ್ರಮದ ಕೇಂದ್ರಬಿಂದುವಾಗಿದೆ. ರಾಜ್ ಕುಮಾರ್ ರಾವ್ ಅವರು ಕೌಶಲ್ಯದಿಂದ ನಿರೂಪಿಸಿದ ಅನಿಮೇಷನ್ ಮತ್ತು ಲೈವ್-ಆಕ್ಷನ್ ಬೆರೆಸುವ ಆಕರ್ಷಕ ಕಥೆ ಹೇಳುವ ತಂತ್ರಗಳ ಮೂಲಕ, ಈ ಪರಿವರ್ತನಶೀಲರ  ಪರಿಣಾಮಕಾರಿ ಪ್ರಯಾಣಗಳನ್ನು ಪ್ರಸ್ತುತಪಡಿಸಲಾಗುತ್ತಿದೆ.

ಈ ಸರಣಿಯ ಬಗ್ಗೆ ವಿವರಿಸಿದ  ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿಯ ಸ್ಟ್ರಾಟೆಜಿಕ್ ಅಲಯನ್ಸ್ ನಿರ್ದೇಶಕಿ ಡಾ.ಸಪ್ನಾ ಪೋಟಿ, ಇವು ಕೇವಲ ಅನಿಮೇಟೆಡ್ ಕಥೆಗಳಲ್ಲ, ಆದರೆ ಅವು ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡುವ ಸಾಮಾಜಿಕ ಆವಿಷ್ಕಾರಗಳ ಕಥೆಗಳು ಎಂದು ಹೇಳಿದರು. ನಾವೀನ್ಯತೆ ಎಂದರೆ ಕೇವಲ ಹೊಸದನ್ನು ಅಭಿವೃದ್ಧಿಪಡಿಸುವುದು ಮಾತ್ರವಲ್ಲ, ಅದು ಸುಸ್ಥಿರವಾಗಿರಬೇಕು ಎಂದು ಅವರು ಒತ್ತಿ ಹೇಳಿದರು. "ಈ ಸರಣಿಯ ಪ್ರತಿಯೊಂದು ಕಥೆಗಳಲ್ಲಿ ಸುಸ್ಥಿರತೆ ಇದೆ, ಇದನ್ನು ಹೆಚ್ಚಿಸಬೇಕಾಗಿದೆ, ಇದರಿಂದ ರಾಷ್ಟ್ರದಾದ್ಯಂತದ ಜನರು ಅವರ ಜೀವನ ಪ್ರಯಾಣ ಕಥೆಯನ್ನು ತಿಳಿದುಕೊಳ್ಳುತ್ತಾರೆ. ಈ ಕಾರಣಕ್ಕಾಗಿಯೇ ಸರ್ಕಾರವು ಅವರ ಕಥೆಗಳನ್ನು ಪ್ರಮುಖವಾಗಿ ತೋರಿಸಲು ಈ ವೇದಿಕೆಯನ್ನು ಆರಿಸಿಕೊಂಡಿದೆ" ಎಂದೂ  ಅವರು ಹೇಳಿದರು.

ಪ್ಯಾನಲ್ ಚರ್ಚೆಯನ್ನುದ್ದೇಶಿಸಿ ಮಾತನಾಡಿದ ಮೈಲಾಬ್ ಡಿಸ್ಕವರಿ ಸೊಲ್ಯೂಷನ್ಸ್ ನ  ವ್ಯವಸ್ಥಾಪಕ ನಿರ್ದೇಶಕ ಮತ್ತು ಸಹ-ಸಂಸ್ಥಾಪಕ ಹಸ್ಮುಖ್ ರಾವಲ್, ನವೀನ ಪರಿಹಾರಗಳನ್ನು ಅಳವಡಿಸಲು ಉತ್ತಮ ಮಾರ್ಗವೆಂದರೆ ಅವುಗಳನ್ನು ಸುಲಭವಾಗಿಸುವುದು, ಎಲ್ಲರೂ ಪ್ರವೇಶಿಸಬಹುದಾದಂತೆ/ಬಳಸಿಕೊಳ್ಳುವಂತೆ  ಲಭ್ಯವಾಗಿಸುವುದು ಮತ್ತು ಬಳಕೆದಾರರಿಗೆ ಅನುಕೂಲಕರವಾಗಿಸುವುದು ಎಂದು ತಮ್ಮ ನಿಲುವನ್ನು ಹಂಚಿಕೊಂಡರು. ಸ್ವಯಂ ಬಳಕೆಗಾಗಿ ರೂಪುಗೊಂಡ ಕೋವಿಡ್ -19 ಪರೀಕ್ಷಾ ಕಿಟ್ ಕೋವಿಸೆಲ್ಫ್  ಹಿಂದಿನ ಯಶೋಗಾಥೆಯನ್ನು ಅವರು ಉದಾಹರಣೆಯಾಗಿ ಉಲ್ಲೇಖಿಸಿದರು.

ಅಂಗೀರಸ್ನ  ಸಹ-ಸಂಸ್ಥಾಪಕ ಮತ್ತು ಸಿಟಿಒ ಲೋಕೇಶ್ ಪಿ ಗೋಸ್ವಾಮಿ ತಮ್ಮ ಸ್ಪೂರ್ತಿದಾಯಕ ನಿರೂಪಣೆಯನ್ನು ಹಂಚಿಕೊಳ್ಳುವಾಗ, ಪ್ರತಿಯೊಬ್ಬ ಸಾಮಾಜಿಕ ಉದ್ಯಮಿಯು ದೊಡ್ಡ ಸಾಮಾಜಿಕ ಸಮಸ್ಯೆಯನ್ನು ವೈಯಕ್ತಿಕ ವಿಷಯವಾಗಿ ಪರಿಗಣಿಸಬೇಕು ಎಂದು ಒತ್ತಿ ಹೇಳಿದರು. ಈ ಜವಾಬ್ದಾರಿಯ ಪ್ರಜ್ಞೆ ನಾವೀನ್ಯತೆಗೆ ಕಾರಣವಾಗುತ್ತದೆ ಎಂದು ತಾವು ನಂಬುವುದಾಗಿ ಅವರು ನುಡಿದರು.

ಈಶಾನ್ಯ ಭಾರತದ ವಿದ್ಯಾರ್ಥಿಗಳಿಗೆ ಸ್ಥಳೀಯ ಭಾಷೆಗಳಲ್ಲಿ ಇ-ಲರ್ನಿಂಗ್ ಸೇವೆಗಳನ್ನು ಒದಗಿಸಲು ಮೀಸಲಾಗಿರುವ ಅಹರಾನ್ ಎಜುಸ್ಮಾರ್ ಪ್ರೈವೇಟ್ ಲಿಮಿಟೆಡ್  ಸಂಸ್ಥಾಪಕ ಅಮಿತ್ ಘೋಷ್ , ದಿ ಗುಡ್ ಸ್ಟಫ್ ಸ್ಟುಡಿಯೋ (ಟಿಜಿಎಸ್) ನ ಸಹ-ಸಂಸ್ಥಾಪಕ ಮತ್ತು ಸೃಜನಶೀಲ ನಿರ್ದೇಶಕಿ ಮೇಘನಾ ರಾಯ್,; ಮತ್ತು ಆಂಗೀರಸ್ ನ ಸಹ-ಸಂಸ್ಥಾಪಕ ಕುಂಜ್ ಪ್ರೀತ್ ಅರೋರಾ ಇದರಲ್ಲಿ ಭಾಗವಹಿಸಿ. ಚರ್ಚೆಯ ಸಮಯದಲ್ಲಿ ತಮ್ಮ ಅನುಭವಗಳು ಮತ್ತು ಒಳನೋಟಗಳನ್ನು ಹಂಚಿಕೊಂಡರು.

ಪ್ರಸ್ತುತ ನೆಟ್ ಫ್ಲಿಕ್ಸ್  ಕಾನೂನು ನಿರ್ದೇಶಕರಾಗಿ ದಾವೆ ಮತ್ತು ನಿಯಂತ್ರಣ ಕಾರ್ಯಚಟುವಟಿಕೆಗಳ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ಆದಿತ್ಯ ಕುಟ್ಟಿ ಈ ಅಧಿವೇಶನವನ್ನು ನಿರ್ವಹಿಸಿದರು.

*****



(Release ID: 2025861) Visitor Counter : 16