ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಖಾತೆ ಸಚಿವರಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅಧಿಕಾರ ಸ್ವೀಕಾರ


ನೇರವಾಗಿ 80 ಕೋಟಿ ಭಾರತೀಯರ ಸೇವಾ ಸಂಬಂಧಿತ ಸಚಿವಾಲಯದಲ್ಲಿ ಸೇವೆ ಸಲ್ಲಿಸಲು ಮಹಾನ್ ಅವಕಾಶ : ಶ್ರೀ ಪ್ರಲ್ಹಾದ್ ಜೋಶಿ

Posted On: 11 JUN 2024 3:22PM by PIB Bengaluru

 

ಕೇಂದ್ರ ಸಚಿವ ಶ್ರೀ ಪ್ರಲ್ಹಾದ್ ಜೋಶಿ, ಇಂದು ದೆಹಲಿಯಲ್ಲಿ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಅಧಿಕಾರವನ್ನು ಅಧಿಕೃತವಾಗಿ ಇಂದು ವಹಿಸಿಕೊಂಡರು. ಗ್ರಾಹಕ ವ್ಯವಹಾರಗಳ, ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಮಾಜಿ ಸಚಿವ ಶ್ರೀ ಪಿಯೂಷ್ ಗೋಯಲ್ ರಾಜ್ಯ ಸಚಿವರುಗಳಾದ ಶ್ರೀ.ಬಿ.ಎಲ್‌.ವರ್ಮಾ ಮತ್ತು ಶ್ರೀಮತಿ ನಿಮುಬೆನ್ ಬಂಭಾನಿಯಾ ಸಮ್ಮುಖದಲ್ಲಿ ಶ್ರೀ ಜೋಶಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು. 

ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಕಾರ್ಯದರ್ಶಿ ಶ್ರೀ ಸಂಜೀವ್ ಛೋಪ್ರಾ ಮತ್ತು ಗ್ರಾಹಕ‌ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಶ್ರೀಮತಿ ನಿಧಿ ಕಾರೇ ಮತ್ತು ಸಚಿವಾಲಯದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಅಧಿಕಾರ ವಹಿಸಿಕೊಂಡು ಮಾತನಾಡಿದ ಶ್ರೀ ಪ್ರಲ್ಹಾದ್ ಜೋಶಿ, ಈ ಅವಕಾಶ ನೀಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದರು. “ನೇರವಾಗಿ 80 ಕೋಟಿ ಭಾರತೀಯರ ಸೇವಾ ಸಂಬಂಧಿತ ಸಚಿವಾಲಯದಲ್ಲಿ ನನಗೆ ಸೇವೆ ಸಲ್ಲಿಸಲು ಅವಕಾಶ ನೀಡಿದ ಪ್ರಧಾನಮಂತ್ರಿಗಳಿಗೆ ನಾನು ಕೃತಜ್ಞನಾಗಿದ್ದೇನೆ” ಎಂದರು. ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆಯು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಜನರಿಗೆ ಉಚಿತವಾಗಿ ಆಹಾರ ಧಾನ್ಯ ಒದಗಿಸುವ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಸರ್ಕಾರದ ಮೊದಲ ನೂರು ದಿನಗಳಲ್ಲಿ ಮಾಜಿ ಕೇಂದ್ರ ಸಚಿವ ಶ್ರೀ ಗೋಯಲ್ ಅವರು ಗುರುತಿಸಿದ್ದ ಚಟುವಟಿಕೆಗಳನ್ನು  ಅನುಷ್ಠಾನಗೊಳಿಸುವುದು ತಮ್ಮ ಆದ್ಯತೆಯಾಗಿದೆ ಎಂದು ಪ್ರಲ್ಹಾದ್ ಜೋಶಿ ಹೇಳಿದರು.

*****



(Release ID: 2024382) Visitor Counter : 24