ರಾಷ್ಟ್ರಪತಿಗಳ ಕಾರ್ಯಾಲಯ

ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು ನವದೆಹಲಿಯಲ್ಲಿ ವೈದ್ಯಕೀಯ ವಿಜ್ಞಾನಗಳ ರಾಷ್ಟ್ರೀಯ ಪರೀಕ್ಷಾ ಮಂಡಳಿಯ (NBEMS) 22 ನೇ ಘಟಿಕೋತ್ಸವದಲ್ಲಿ ಭಾಗವಹಿಸಿದರು


ಚಿಕಿತ್ಸೆಯಲ್ಲಿನ ವಿಳಂಬ ರೋಗಿಗಳಿಗೆ ಜೀವ ನಿರಾಕರಿಸಿದಂತೆ: ದ್ರೌಪದಿ‌ ಮುರ್ಮು

Posted On: 10 MAY 2024 7:12PM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ಮೇ 10) ನವದೆಹಲಿಯಲ್ಲಿ ವೈದ್ಯಕೀಯ ವಿಜ್ಞಾನಗಳ ರಾಷ್ಟ್ರೀಯ ಪರೀಕ್ಷಾ ಮಂಡಳಿಯ (NBEMS) 22 ನೇ ಘಟಿಕೋತ್ಸವವನ್ನು ಉದ್ದೇಶಿಸಿ ಮಾತನಾಡಿದರು

ತುರ್ತು ವೈದ್ಯಕೀಯ ಸಂದರ್ಭಗಳಲ್ಲಿ ಗೋಲ್ಡನ್ ಅವರ್ ನ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ರಾಷ್ಟ್ರಪತಿಗಳು, ಈ ಅವಧಿಯಲ್ಲಿ ಸೂಕ್ತ ಚಿಕಿತ್ಸೆ ದೊರೆತರೆ ರೋಗಿಗಳ ಜೀವವನ್ನು ಉಳಿಸಬಹುದು ಎಂದು ಹೇಳಿದರು. ತಜ್ಞ ವೈದ್ಯರು ತುರ್ತು ರೋಗಿಗಳ ಬಗ್ಗೆ ಸಂವೇದನಾಶೀಲರಾಗಿರಬೇಕು ಮತ್ತು ಅವರು ಎಂದಿಗೂ ತುರ್ತು ರೋಗಿಯನ್ನು ಚಿಕಿತ್ಸೆಗಾಗಿ ಬೇರೆಡೆಗೆ ಹೋಗಲು ಹೇಳಬಾರದು ಎಂದು ಅವರು ಹೇಳಿದರು

ನ್ಯಾಯ ನೀಡಿಕೆಯಲ್ಲಿನ ವಿಳಂಬ ನ್ಯಾಯ ನಿರಾಕರಣೆಗೆ ಸಮ ಎಂಬ ಮಾತನ್ನು ಉದಾಹರಿಸಿದ ರಾಷ್ಟ್ರಪತಿಗಳು, ಆರೋಗ್ಯ ಕ್ಷೇತ್ರದಲ್ಲಿ ಸಮಯ‌‌ ಇನ್ನೂ ಮಹತ್ವದ್ದಾಗಿದೆ. ಏಕೆಂದರೆ ಚಿಕಿತ್ಸೆಯಲ್ಲಾಗುವ ವಿಳಂಬ ರೋಗಿಗಳಿಗೆ ಜೀವವನ್ನು ನಿರಾಕರಿಸಿದಂತಾಗಬಹುದು ಎಂದು ಹೇಳಿದರು. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆತಿದ್ದರೆ ಆ ವ್ಯಕ್ತಿಯ ಜೀವ ಉಳಿಯುತ್ತಿತ್ತು ಎಂಬ ಮಾತುಗಳನ್ನು ಹಲವಾರು ಬಾರಿ ಕೇಳುತ್ತಿರಮೇಲಿನವೆ. ಒಂದು ವೇಳೆ‌ ಜೀವ ಉಳಿದರೂ ಬಹುತೇಕ ಸಂದರ್ಭಗಳಲ್ಲಿ ಚಿಕಿತ್ಸೆಯಲ್ಲಾಗುವ ವಿಳಂಬದಿಂದಾಗಿ  ರೋಗಿಗಳಿಗೆ ಆರೋಗ್ಯ ನಿರಾಕರಿಸಿದಂತಾಗುತ್ತದೆ. ಇಂತಹ ಉದಾಹರಣೆಗಳನ್ನು ನಾವು ಪಾಶ್ವ೯ವಾಯು ಪೀಡಿತ ರೋಗಿಗಳ ವಿಷಯದಲ್ಲಿ ಸಾಕಷ್ಟು ಬಾರಿ ಕಾಣುತ್ತೇವೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದ ಕಾರಣ ಅವರು ತಮ್ಮ ಕೈಕಾಲುಗಳ ಮೇಲಿನ ಸ್ವಾಧೀನ ಕಳೆದುಕೊಂಡು ಬೇರೆಯವರ ಮೇಲೆ ಅವಲಂಬಿತರಾಗುವಂತಾಗುತ್ತದೆ. 

ರಾಷ್ಟ್ರಪತಿಗಳು ಇದೇ ಸಂದರ್ಭದಲ್ಲಿ NBEMS ನ ಮಾಜಿ ಹಾಗೂ ಹಾಲಿ ಸದಸ್ಯರನ್ನು ಅಭಿನಂದಿಸಿ ಕಳೆದ ನಾಲ್ಕು ದಶಕಗಳ ಕಾಲ ಅವರು ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಶ್ಲಾಘಿಸಿದರು. ‌NBEMS ನ ಸತತ ಪ್ರಯತ್ನದಿಂದಾಗಿ ಇಂದು ದೇಶದೆಲ್ಲೆಡೆ ತಜ್ಞ ವೈದ್ಯರ ಲಭ್ಯತೆ ಗಣನೀಯ ವಾಗಿ ಹೆಚ್ಚಾಗಿರುವುದನ್ನು ಗಮನಿಸಿದರು.

ಕ್ಷಿಪ್ರ, ಸಹಾನುಭೂತಿಯುಳ್ಳ ಮತ್ತು ದುಬಾರಿ ಯಲ್ಲದ ಆರೋಗ್ಯ ಸೇವೆ ನೀಡುವತ್ತ ಗಮನ ಹರಿಸುವಂತೆ ವೈದ್ಯರುಗಳನ್ನು ರಾಷ್ಟ್ರಪತಿಗಳು ಒತ್ತಾಯಿಸಿದರು. ಬಡ ರೋಗಿಗಳಿಗೆ ತಮ್ಮ ಸಮಯವನ್ನು ಉಚಿತವಾಗಿ ನೀಡುವ ಮೂಲಕ ವೈದ್ಯರು ನಮ್ಮ ದೇಶ ಮತ್ತು ಸಮಾಜಕ್ಕೆ ಅಮೂಲ್ಯ ಸೇವೆ ಸಲ್ಲಿಸಲು ಸಾಧ್ಯ ಎಂದರು. 

ವೈದ್ಯಕೀಯ ವಿದ್ಯಾರ್ಥಿಗಳನ್ನುದ್ದೇಶಿಸಿ, ನೀವು ವೈದ್ಯಕೀಯ ವೃತ್ತಿಯನ್ನು ಆರಿಸಿಕೊಂಡಿದ್ದನ್ನು ನೋಡಿದರೆ ನಿಮ್ಮಲ್ಲಿ ಮಾನವ ಕುಲಕ್ಕೆ ಸೇವೆ ಮಾಡುವ ಉತ್ಕಟ ಇಚ್ಛೆ ಖಂಡಿತವಾಗಿ ಇರುತ್ತದೆ. ಈ ಸೇವಾ ಮನೋಭಾವನೆಯನ್ನು ಉಳಿಸಿ, ಬೆಳೆಸಿ ಮತ್ತು ಹಂಚಿ ಎಂದು ವೈದ್ಯಕೀಯ ವಿದ್ಯಾರ್ಥಿಗಳಿಗೆ ಕರೆ ಅವರು ನೀಡಿದರು.  

ನಮ್ಮ ದೇಶದ ಬಹು ದೊಡ್ಡ ಜನಸಂಖ್ಯೆ ಹೊಂದಿರುವ ಕಾರಣ  ವೈದ್ಯರ ಲಭ್ಯತೆಯನ್ನು ನಿರಂತರವಾಗಿ ಹೆಚ್ಚಿಸುವ ಅವಶ್ಯಕತೆ ಇದೆ ಎಂದು ರಾಷ್ಟ್ರಪತಿ ಗಳು ಹೇಳಿದರು. ‌ಈ ನಿಟ್ಟಿನಲ್ಲಿ ವೈದ್ಯರ ಸಂಖ್ಯೆ ಹೆಚ್ಚಿಸುವುದರ ಜೊತೆಗೆ ಅವರ ಗುಣಮಟ್ಟ ಹೆಚ್ಚಿಸುವ ಬಗ್ಗೆ ಆದ್ಯತೆ ನೀಡುವುದು ಎಲ್ಲರ ಗುರಿಯಾಗಬೇಕು ಎಂದು ಹೇಳಿದರು. 

ಭಾರತೀಯ ವೈದ್ಯರು ಜಗತ್ತಿನಾದ್ಯಂತ ತಮ್ಮ ಛಾಪು ಮೂಡಿಸಿದ್ದಾರೆ ಎಂದು ರಾಷ್ಟ್ರ ಪತಿಗಳು ಹೇಳಿದರು. ಕೈಗೆಟುಕುವ ವೈದ್ಯಕೀಯ ಸೇವೆಯಿಂದಾಗಿ ಭಾರತ ಇಂದು ಮೆಡಿಕಲ್ ಟೂರಿಸಂನ ಪ್ರಮುಖ ಕೇಂದ್ರವಾಗಿದೆ. ವೈದ್ಯರುಗಳು ಭಾರತದ ಆರೋಗ್ಯ ಸೇವೆಗಳ ವ್ಯವಸ್ಥೆಯ ಪ್ರಮುಖ ಭಾಗವಾಗಿದ್ದಾರೆ ಎಂದು ಬಣ್ಣಿಸಿ ಅವರು ದೇಶದ ಆರೋಗ್ಯ ವ್ಯವಸ್ಥೆಯನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಇಂದಿನ ಘಟಿಕೋತ್ಸವದಲ್ಲಿ ಪುರುಷ ವೈದ್ಯರು ಗಳಿಗಿಂತ ಮಹಿಳಾ ವೈದ್ಯರ ಸಂಖ್ಯೆ ಹೆಚ್ಚಿರುವುದನ್ನು ಗಮನಿಸಿದ ರಾಷ್ಟ್ರಪತಿಗಳು ಉನ್ನತ ವೈದ್ಯಕೀಯ ಶಿಕ್ಷಣದಲ್ಲಿ ವಿದ್ಯಾರ್ಥಿನಿಯರು ಮಾಡಿದ ಸಾಧನೆ ನಮ್ಮ ದೇಶದ ಮತ್ತು ಸಮಾಜದ ಅತೀ ಮಹತ್ವದ ಸಾಧನೆಯಾಗಿದೆ ಎಂದರು. ಬಹಳಷ್ಟು ಕುಟುಂಬಗಳಲ್ಲಿ ಹುಡುಗಿಯರು ನಿರ್ಬಂಧ ಮತ್ತು ನಿಬಂಧನೆಗೊಳಗಾದ ಭಾವನೆ ಹೊಂದಿರುತ್ತಾರೆ ಅ‌ಥವಾ ಅವರು ಹಾಗೆ ಭಾವಿಸಲು ಪೂರಕ ವಾತಾವರಣ ಇರುತ್ತದೆ. ಸಮಾಜ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕೂಡ ಹುಡುಗಿಯರು ತಮ್ಮ ಸುರಕ್ಷತೆ ಬಗ್ಗೆ ಮತ್ತು ತಮ್ಮನ್ನು ಸಮಾಜ ಸ್ವೀಕರಿಸುವಂತೆ ಹೆಚ್ಚಿನ ಮುತುವರ್ಜಿ ವಹಿಸಬೇಕಿದೆ. ಇಂತಹ ವಾತಾವರಣದಲ್ಲಿಯೂ ನಮ್ಮ ಹೆಣ್ಣು ಮಕ್ಕಳು ತಮ್ಮ ಶ್ರೇಷ್ಠತೆಯನ್ನು ಸಾರುವ ಮೂಲಕ ಹೊಸ ಭಾರತದ ಹೊಸ ಚಿತ್ರಣವನ್ನು ಜಗತ್ತಿನೆದುರು ತೆರೆದಿಡುತ್ತಿದ್ದಾರೆ.

https://static.pib.gov.in/WriteReadData/specificdocs/documents/2024/may/doc2024510335901.pdf

*****



(Release ID: 2020395) Visitor Counter : 48