ಉಪರಾಷ್ಟ್ರಪತಿಗಳ ಕಾರ್ಯಾಲಯ
“ಆರ್ಥಿಕ ರಾಷ್ಟ್ರೀಯತೆಯ ಮನೋಭಾವವನ್ನು ಉತ್ತೇಜಿಸಿ; ಸ್ಥಳೀಯರಿಗೆ ಧ್ವನಿಯಾಗಿರಿ” ಎಂದು ಐ.ಆರ್.ಎಸ್ ಅಧಿಕಾರಿಗಳಿಗೆ ಉಪರಾಷ್ಟ್ರಪತಿಯವರು ಕರೆ ನೀಡಿದರು
ಪಾರದರ್ಶಕತೆಗಾಗಿ ದೇಶದಲ್ಲಿ ತೆರಿಗೆ ಆಡಳಿತದ ಹೆಚ್ಚುತ್ತಿರುವ ಡಿಜಿಟಲೀಕರಣವನ್ನು ಶ್ಲಾಘಿಸಿದ ಉಪರಾಷ್ಟ್ರಪತಿ
ಪ್ರಾಮಾಣಿಕರನ್ನು ಗೌರವಿಸುವ ಮತ್ತು ಅಪ್ರಾಮಾಣಿಕರಿಗೆ ಪ್ರತಿಫಲ ನೀಡದ ಸಮಾಜವು ಶಾಂತಿ, ಸೌಹಾರ್ದತೆ ಮತ್ತು ಬೆಳವಣಿಗೆಗೆ ಸ್ಥಿರವಾದ ಸಮಾಜವಾಗಿ ಬೆಳೆಯುತ್ತದೆ : ಉಪರಾಷ್ಟ್ರಪತಿ
"ತಾವುಗಳು ಸೃಷ್ಟಿಸಿದ ಗುಳ್ಳೆಯಿಂದ ಹೊರಬಂದು ಭರವಸೆ ಮತ್ತು ಸಾಧ್ಯತೆಯ ಪರಿಸರವನ್ನು ಸೃಷ್ಟಿಸಲು ಪ್ರಯತ್ನಿಸಿ" - ಭಾರತದ ಬೆಳವಣಿಗೆಯ ಕುರಿತು ಸಂದೇಹ ಹೊಂದಿರುವವರಿಗೆ ಉಪರಾಷ್ಟ್ರಪತಿಯವರ ಸ್ಪಷ್ಟ ಸಂದೇಶ
ನ್ಯಾಷನಲ್ ಅಕಾಡೆಮಿ ಆಫ್ ಡೈರೆಕ್ಟ್ ಟ್ಯಾಕ್ಸ್ (ಎನ್. ಎ. ಡಿ. ಟಿ.) ನಲ್ಲಿ ಭಾರತೀಯ ಕಂದಾಯ ಸೇವೆಯ 76 ನೇ ಬ್ಯಾಚ್ ನ ಗೌರವಾರ್ಥ ಹಮ್ಮಿಕೊಂಡ ಸಭೆಯನ್ನುದ್ಧೇಶಿಸಿ ಉಪರಾಷ್ಟ್ರಪತಿಯವರು ಭಾಷಣ ಮಾಡಿದರು
Posted On:
15 APR 2024 3:25PM by PIB Bengaluru
ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು ಇಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳನ್ನು ಆರ್ಥಿಕ ರಾಷ್ಟ್ರೀಯತೆಯ ಮನೋಭಾವವನ್ನು ಉತ್ತೇಜಿಸುವಂತೆ ಕರೆ ನೀಡಿದರು. “ಇದು ಭಾರತೀಯ ಆರ್ಥಿಕತೆ ಮತ್ತು ಸಮಾಜವನ್ನು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಬಹಳಷ್ಟು ಪ್ರಯೋಜನ ನೀಡಲಿದೆ” ಎಂದು ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು ಹೇಳಿದರು.
ಇಂದು ನಾಗ್ಪುರದ ನ್ಯಾಷನಲ್ ಅಕಾಡೆಮಿ ಆಫ್ ಡೈರೆಕ್ಟ್ ಟ್ಯಾಕ್ಸ್ (ಎನ್. ಎ. ಡಿ. ಟಿ.) ನಲ್ಲಿ ಭಾರತೀಯ ಕಂದಾಯ ಸೇವೆಯ 76 ನೇ ಬ್ಯಾಚ್ ನ ಸೇವಾ ಸಮರ್ಪಣಾ ದಿನಾಚರಣೆಯನ್ನು ಉದ್ದೇಶಿಸಿ ಭಾಷಣ ಮಾಡಿದ ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು, ಸ್ಥಳೀಯರಿಗೆ ಧ್ವನಿಯಾಗುವಂತೆ ಯುವ ಅಧಿಕಾರಿಗಳಿಗೆ ಕರೆ ನೀಡಿದರು. "ನೀವು ವ್ಯಾಪಾರ ಸಮುದಾಯದೊಂದಿಗೆ ಸಂವಹನ ನಡೆಸುತ್ತೀರಿ. ನೀವು ಅವರಲ್ಲಿ ರಾಷ್ಟ್ರೀಯತೆಯ ಚೈತನ್ಯವನ್ನು ತುಂಬಬಹುದು, ಅದು ದೇಶಕ್ಕೆ ಮೂರು ಪ್ರಮುಖ ಪ್ರಯೋಜನಗಳನ್ನು ತರುತ್ತದೆ” ಎಂದು ಹೇಳಿದರು.
ಮೊದಲನೆಯದಾಗಿ, ಆಮದು ಕಡಿಮೆಗೊಳಿಸುವುದರಿಂದ ವಿದೇಶಿ ವಿನಿಮಯವು ಬರಿದಾಗುವುದಿಲ್ಲ, ಎರಡನೆಯದಾಗಿ, ನಮ್ಮ ಯುವಕರಿಗೆ ಉದ್ಯೋಗ ಸೃಷ್ಟಿಯಾಗುತ್ತದೆ ಮತ್ತು ಮೂರನೆಯದಾಗಿ, ಉದ್ಯಮಶೀಲತೆ ದೇಶದಲ್ಲಿ ದೊಡ್ಡ ಆರ್ಥಿಕ ಜಿಗಿತಕ್ಕೆ ಕಾರಣವಾಗಲಿದೆ – ಎಂದು ಮೂರು ಪ್ರಯೋಜನಗಳನ್ನು ವಿವರಿಸಿದರು
ಭಾರತದಲ್ಲಿ ತೆರಿಗೆ ವ್ಯವಸ್ಥೆಯಲ್ಲಿ ಆಗುತ್ತಿರುವ ಬದಲಾವಣೆಗಳಾದ - ಡಿಜಿಟಲೀಕರಣ ಮತ್ತು ಫೇಸ್‌ಲೆಸ್ ಇ-ಮೌಲ್ಯಮಾಪನ ವ್ಯವಸ್ಥೆಯಂತಹ ಪಾರದರ್ಶಕತೆಯ ಕ್ರಮಗಳನ್ನು ಶ್ಲಾಘಿಸಿದ ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು, “ಇದು ತೆರಿಗೆ ವ್ಯವಸ್ಥೆಯಲ್ಲಿ ಅನಾಮಧೇಯತೆಯನ್ನು ಪರಿಚಯಿಸಿದೆ ಮತ್ತು 'ಪ್ರಾಮಾಣಿಕರನ್ನು ಗೌರವಿಸುವ' ಉದ್ದೇಶವನ್ನು ಪೂರೈಸುತ್ತಿದೆ. ಪ್ರಾಮಾಣಿಕರನ್ನು ಗೌರವಿಸುವ ಮತ್ತು ಅಪ್ರಾಮಾಣಿಕರಿಗೆ ಪ್ರತಿಫಲ ನೀಡದಿರುವ ಸಮಾಜವು ಸದಾ ಶಾಂತಿ, ಸೌಹಾರ್ದತೆ ಮತ್ತು ಬೆಳವಣಿಗೆ ಉತ್ತಮ ಸ್ಥಿರತೆ ಹೊಂದಿರುವ ಸಮಾಜವಾಗಿ ರೂಪಿಸಲ್ಪಡುತ್ತದೆ” ಎಂದು ಹೇಳಿದರು.
ನಗದು ನಿರ್ವಹಣೆಯನ್ನು ಅಪಾಯ ಎಂದು ಬಣ್ಣಿಸಿದ ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು, ನಗದು ನಿರ್ವಹಣೆಯು ಅನೌಪಚಾರಿಕವಾಗಿ ತಂತ್ರಜ್ಞಾನವನ್ನು ವಿರೋಧಿಸುತ್ತದೆ, ಇದು ಸಮಾಜಕ್ಕೆ ಅತ್ಯಂತ ಹಾನಿಕರವಾಗಿದೆ ಎಂದು ಹೇಳಿದರು. ಈಗ ವ್ಯವಸ್ಥೆಯೊಳಗೆ ಅಭೂತಪೂರ್ವ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ತರಲು ಈ ತಂತ್ರಜ್ಞಾನ ಕ್ರಮ-ಪದ್ಧತಿಗಳನ್ನು ಶ್ಲಾಘಿಸಿದ ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು, “ಇದು ಇಂದು ಭ್ರಷ್ಟಾಚಾರಕ್ಕೆ ಶೂನ್ಯ ಸಹಿಷ್ಣುತೆಯ ಭಾರತದ ಹೊಸ ಮಾನದಂಡದೊಂದಿಗೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತದೆ” ಎಂದು ಹೇಳಿದರು. “ಅಧಿಕಾರ ಮತ್ತು ಶಕ್ತಿ ಕಾರಿಡಾರ್ ಗಳನ್ನು ಭ್ರಷ್ಟ ಅಂಶಗಳಿಂದ ತಟಸ್ಥಗೊಳಿಸಲಾಗಿದೆ ಮತ್ತು ಭ್ರಷ್ಟಾಚಾರವು ಇನ್ನು ಮುಂದೆ ಅವಕಾಶದ ಪಾಸ್‌ಪೋರ್ಟ್ ಆಗಿರುವುದಿಲ್ಲ, ಇದು ಜೈಲಿಗೆ ಹೋಗುವುದಕ್ಕಿರುವ ಖಚಿತ ಅವಕಶವಾಗಿರುತ್ತದೆ ಎಂದು ಅವರು ಹೇಳಿದರು
ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ರೂಪುಗೊಂಡ ಭಾರತದ ಏಳಿಗೆಯನ್ನು ಉಲ್ಲೇಖಿಸಿದ ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು, “ಇದು ವಿಭಿನ್ನ ಭಾರತವಾಗಿದೆ ಮತ್ತು ನಾವು ಇಂದು ಜಾಗತಿಕ ವ್ಯವಸ್ಥೆಯನ್ನು ವ್ಯಾಖ್ಯಾನಿಸುತ್ತಿದ್ದೇವೆ” ಎಂದು ಹೇಳಿದರು. ಭಾರತದ ಬೆಳವಣಿಗೆಯ ಪಥದ ಮೇಲೆ ಕೆಲವು ವ್ಯಕ್ತಿಗಳು ಅನುಮಾನಗಳನ್ನು ವ್ಯಕ್ತಪಡಿಸುತ್ತಿರುವುದನ್ನು ಉಲ್ಲೇಖಿಸಿದ ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು,, “ಹೊರಗೆ ಮತ್ತು ಒಳಗೆ ಸಂದೇಹವಾದಿಗಳು ಸಾರ್ವಜನಿಕ ಸ್ಥಳವನ್ನು ಆಕ್ರಮಿಸಲು ಪ್ರಯತ್ನಿಸುತ್ತಿದ್ದಾರೆ. ಅವರಿಗೆ ನನ್ನ ನೇರ ಹಾಗೂ ಸ್ಪಷ್ಟ ಸಂದೇಶ – “ಭರವಸೆ ಮತ್ತು ಸಾಧ್ಯತೆಯ ಪರಿಸರವನ್ನು ಅನುಭವಿಸಲು ತಾವುಗಳು ಸೃಷ್ಟಿಸಿದ ತಮ್ಮ ಗುಳ್ಳೆ("ಬಬಲ್")ಯಿಂದ ಹೊರಬನ್ನಿ." ಅಂತಹ ವ್ಯಕ್ತಿಗಳು ಆ ಗುಳ್ಳೆಯಿಂದ ಹೊರಬಂದ ನಂತರ ಪ್ರಬುದ್ಧರಾಗುತ್ತಾರೆ ಮತ್ತು ಅವರು ತಾವಾಗಿಯೇ ಗುಳ್ಳೆಯನ್ನು ಒಡೆದು ಹೊರಬರುವ ಕೆಲಸ ಮಾಡದಿದ್ದರೆ, "ಗುಳ್ಳೆಯನ್ನು ಒಡೆದುಹಾಕುವುದು" ನಾಗರಿಕರಾದ ನಮ್ಮೆಲ್ಲರ ಕರ್ತವ್ಯವಾಗಿದೆ” ಎಂದು ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು ಹೇಳಿದರು.
"ಯಶಸ್ಸಿಗೆ ಖಚಿತವಾದ ಮಾರ್ಗವೆಂದರೆ ತೆರಿಗೆ ವ್ಯವಸ್ಥೆ-ಪದ್ಧತಿಗಳ ಅನುಸರಣೆ ಮತ್ತು ಸದಾ ಕಾನೂನು ಬದ್ಧವಾಗಿರುವುದು" ಎಂಬ ಅರ್ಥವನ್ನು ಜನರಲ್ಲಿ ಭಾವನೆ ಮೂಡಿಸಲು ಸಲಹೆ ನೀಡಲು ಮತ್ತು ಅವರುಗಳ ಮನವೊಲಿಸಲು ನಿಮಗೆ ಸಿಗುವ ಅವಕಾಶಗಳನ್ನು ಉತ್ತಮವಾಗಿ ಬಳಸಬೇಕೆಂದು, ಹಾಗೂ ಶಾರ್ಟ್‌ಕಟ್ ವ್ಯವಸ್ಥೆಗಳು ನೋವಿನ ಮಾರ್ಗಕ್ಕೆ ಕಾರಣವಾಗುತ್ತವೆ.” ಎಂದು ಯುವ ಅಧಿಕಾರಿಗಳಿಗೆ ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು ಸಲಹೆ ನೀಡಿದರು
ನಮ್ಮ ತೆರಿಗೆ ವ್ಯವಸ್ಥೆಯ ಪರಿಪಾಲಕರಾಗಿ ಭಾರತೀಯ ಕಂದಾಯ ಅಧಿಕಾರಿಗಳು ನಿರ್ವಹಿಸುತ್ತಿರುವ ಪ್ರಮುಖ ಪಾತ್ರವನ್ನು ಶ್ಲಾಘಿಸಿದ ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು, "ತೆರಿಗೆದಾರರಿಗೆ ಮಾಹಿತಿಯೊಂದಿಗೆ ಅಧಿಕಾರ ನೀಡಿ, ಪಾರದರ್ಶಕತೆಯ ಮೂಲಕ ನಂಬಿಕೆಯನ್ನು ಬೆಳೆಸಿಕೊಳ್ಳಿ, ನಿಮ್ಮ ವೃತ್ತಿಪರ ನಡವಳಿಕೆಯಲ್ಲಿ ಸಮಗ್ರತೆಯ ಉನ್ನತ ಗುಣಮಟ್ಟವನ್ನು ಎತ್ತಿಹಿಡಿಯಿರಿ" ಎಂದು ಕರೆ ನೀಡಿದರು. ಉತ್ತಮ ಅಧಿಕಾರಿಗಳು ಯುವಕರಿಗೆ ಸಹಜ ಮಾದರಿಯಾಗಿದ್ದಾರೆ ಎಂದು ಬಣ್ಣಿಸಿದ ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು, “ನೀವು ಶಿಸ್ತು, ಸಮಗ್ರತೆ, ನಮ್ರತೆ, ನೈತಿಕತೆ ಮತ್ತು ಬದ್ಧತೆಯ ಪ್ರಜ್ಞೆಯಿಂದ ಆದರ್ಶಪ್ರಾಯರಾಗಬೇಕು, ದೇಶದಾದ್ಯಂತ ಯುವ ಮನಸ್ಸುಗಳಿಗೆ ನೀವು ಸ್ಫೂರ್ತಿ ಮತ್ತು ಪ್ರೇರಕವಾಗಿರಬೇಕು. ” ಎಂದು ಯುವ ಅಧಿಕಾರಿಗಳಿಗೆ ತಿಳಿಸಿದರು.
ಮಹಾರಾಷ್ಟ್ರದ ರಾಜ್ಯಪಾಲರಾದ ಶ್ರೀ ರಮೇಶ್ ಬೈಸ್, ಸಿಬಿಡಿಟಿ ಅಧ್ಯಕ್ಷರಾದ ಶ್ರೀ ನಿತಿನ್ ಗುಪ್ತಾ, ಪ್ರಧಾನ ನಿರ್ದೇಶಕ (ಜನರಲ್ ತರಬೇತಿ) ಶ್ರೀ ಸೀಮಾಂಚಲ್ ದಾಸ್, ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿ ಶ್ರೀ ಪಿ.ಸಿ. ಮೋದಿ, ಆದಾಯ ತೆರಿಗೆ ತರಬೇತಿ ಮಹಾನಿರ್ದೇಶಕರಾದ ಶ್ರೀ ಆನಂದ್ ಬೈವಾರ್ ಮತ್ತು ಇತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
***
(Release ID: 2018006)
Visitor Counter : 74