ಉಪರಾಷ್ಟ್ರಪತಿಗಳ ಕಾರ್ಯಾಲಯ

ಮಸ್ಸೂರಿಯ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್‌ನಲ್ಲಿ ನಡೆದ  2023 ರ ಬ್ಯಾಚಿನ ಟ್ರೈನಿ IAS ಅಧಿಕಾರಿಗಳ ಮೊದಲ ಹಂತದ ವೃತ್ತಿಪರ ಕೋರ್ಸ್‌ನ ಮುಕ್ತಾಯ ಸಮಾರಂಭದಲ್ಲಿ ಉಪಾಧ್ಯಕ್ಷ ಜಗದೀಪ್ ದಿನಕರ್ ಅವರು ಮಾಡಿದ ಭಾಷಣದ ಪಠ್ಯ

Posted On: 05 APR 2024 4:17PM by PIB Bengaluru

ಎಲ್ಲರಿಗೂ ಶುಭೋದಯ,

ನನ್ನ ಯುವ ಸ್ನೇಹಿತರೇ, ಭಾರತೀಯ ಆಡಳಿತ ಸೇವೆಯಿಂದ ಕಂಪನಿಯು 2023 ರ ಬ್ಯಾಚ್‌ನ ಮೊದಲ ಹಂತದ ತರಬೇತಿ ಕಾರ್ಯಕ್ರಮದ ಮುಕ್ತಾಯ ಸಮಾರಂಭದಲ್ಲಿ ನಿಮ್ಮೆಲ್ಲರೊಂದಿಗಿರುವುದು ನನಗೆ ಅಪಾರ ಸಂತೋಷವನ್ನು ತಂದುಕೊಟ್ಟಿದೆ. 

ನೀವು ಐಎಎಸ್‌ ಪಾಸ್ ಮಾಡಿ ಸರಕಾರದಲ್ಲಿ ಉನ್ನತ ಹುದ್ದೆಗೇರಿರುವ ಬಗ್ಗೆ ನಿಮ್ಮ ನೆರೆ ಹೊರೆಯವರ ಹೆಮ್ಮೆಯ ಪ್ರತಿಕ್ರಿಯೆಯನ್ನು ಕಂಡು  ನಿಮ್ಮ ಹೆತ್ತವರಲ್ಲಿ ಅಪಾರ ಸಂತೃಪ್ತಿ ಮೂಡಿರುತ್ತದೆ. ಜೊತೆಗೆ ಅವರ ನೈತಿಕ ಸ್ಥೈರ್ಯವೂ ಇಮ್ಮಡಿಯಾಗಿರುವುದನ್ನು ನೀವು ಗಮನಿಸಿರುತ್ತೀರಿ. ಇಂದು ನೀವು ಏನಾಗಿದ್ದೀರಿ, ಅದು ನಿಮ್ಮ ಹೆತ್ತವರಿಂದ ಎಂಬುದನ್ನು ಎಂದಿಗೂ ಮರೆಯಬೇಡಿ. ನಿಮ್ಮ ಉನ್ನತಿಗೆಲ್ಲ ಅವರ ತ್ಯಾಗವೇ  ಕಾರಣ. 

ಯುವ ಮನಸ್ಸುಗಳನ್ನು ಸಂಬೋಧಿಸುವುದು ನನಗೆ ಯಾವಾಗಲೂ ಸಂತೋಷ ಹಾಗೂ ತೃಪ್ತಿ ನೀಡುವ ವಿಷಯ. ಇಲ್ಲಿನ ಕಠಿಣ ತರಬೇತಿಯ ನಂತರ ನೀವು ಮತ್ತಷ್ಟು ಪ್ರಬುದ್ಧರಾಗಿದ್ದೀರಿ. ಇಂಥದೊಂದು ಸಾಧನೆ ಮಾಡುವಲ್ಲಿ ನೀವು ಸಫಲರಾಗಿದ್ದೀರಿ. ಐಎಎಸ್ ಎನ್ನುವುದು ದಾಟಲು ಅತ್ಯಂತ ಕಷ್ಟಕರವಾದ ಸುರಂಗವಾಗಿತ್ತು. ಆದರೂ ಆಯ್ಕೆ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೋಡುವವರೆಗೂ ನೀವು ವಿಶ್ರಮಿಸಲೇ ಇಲ್ಲ.

ನನ್ನ ಭಾಷಣದಲ್ಲಿ ನಾನು ಬುದ್ಧಿವಂತರು ಮತ್ತು ಭರವಸೆಯ ನಾಯಕರ ನಿಮ್ಮ ಗಮನ ಸೆಳೆಯಲಿದ್ದೇನೆ. ಹಾಗಂತ ನಾನು ಕೇವಲ ರಾಜಕೀಯ ನಾಯಕರ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ಅರ್ಥೈಸಬೇಕಿಲ್ಲ.  ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಅಧಿಕಾರಿಗಳು ರಾಜಕೀಯ ಪ್ರವೇಶ ಮಾಡುತ್ತಿರುವ ಮತ್ತು ಉನ್ನತ ರಾಜಕೀಯ ಸ್ಥಾನಗಳನ್ನು ಹೊಂದುತ್ತಿರುವುದನ್ನು ನಾವು ನೋಡುತ್ತಿದ್ದೇವೆ. 

ಅಸಂಖ್ಯಾತ ನಾಗರಿಕ ಸೇವಕರು (ಸಿವಿಲ್ ಸೆರ್ವನ್ಟ್ಸ್) ರನ್ನು ಪೋಷಿಸಿ, ತರಬೇತಿಗೊಳಿಸಿ ಅವರು ನಮ್ಮ ಮಹಾನ್ ರಾಷ್ಟ್ರಕ್ಕೆ ಸೇವೆ ಮಾಡಲು ಅವಕಾಶ ಮಾಡಿಕೊಟ್ಟ ಈ ಗೌರವಾನ್ವಿತ ಸಂಸ್ಥೆಯ ಶ್ರೀಮಂತ ಪರಂಪರೆಯನ್ನು ನನಗೆ ಈಗಷ್ಟೇ ನೆನಪು ಮಾಡಿಕೊಡಲಾಯಿತು. ಇಂದು ಭಾರತ ಪ್ರಗತಿಶೀಲ ರಾಷ್ಟ್ರವಾಗಿ ಹೊರಹೊಮ್ಮಲು ಈ ಸಂಸ್ಥೆ ತಯಾರು ಮಾಡಿದ ಎಲ್ಲ ನಾಗರಿಕ ಸೇವಕರು ಮಹತ್ವದ ಕೊಡುಗೆ ನೀಡಿದ್ದಾರೆ.

ಸ್ನೇಹಿತರೇ, ನಿಮ್ಮಲ್ಲಿ ಪ್ರತಿಯೊಬ್ಬರೂ ನಮ್ಮ ರಾಷ್ಟ್ರದ ಭವಿಷ್ಯವನ್ನು ರೂಪಿಸಲು ಅನಿವಾರ್ಯವಾಗಿ ಇರಲೇಬೇಕಾದ ಶ್ರೇಷ್ಠತೆ, ಸಮಗ್ರತೆ ಮತ್ತು ಸಾರ್ವಜನಿಕ ಸೇವೆಯೆಡೆಗೆ  ಬದ್ಧತೆ ಮುಂತಾದ ಗುಣಗಳನ್ನು ಹೊಂದಿದ್ದೀರಿ. ನಿಮ್ಮದೇ  ಆದ ದೃಷ್ಟಿ ಮತ್ತು ಪರಿಕಲ್ಪನೆಯಲ್ಲಿ ಭಾರತವನ್ನು ವ್ಯಾಖ್ಯಾನಿಸುವ ಸಾಮರ್ಥ್ಯ ನಿಮಗಿರುವುದನ್ನು ನಾನು ಗಮನಿಸಿದ್ದೇನೆ.  ನನ್ನನ್ನು ನಂಬಿರಿ.. ನಮ್ಮ ದೇಶವನ್ನು 2047 ರ ಹೊತ್ತಿಗೆ ವಿಕಸಿತ ಭಾರತ ಮಾಡುವ ನಮ್ಮ ಪಯಣವನ್ನು ನೀವು ಸಮರ್ಥವಾಗಿ ಮುನ್ನಡೆಸುತ್ತೀರಿ.  ಆ ಸಮಯದಲ್ಲಿ, ನೀವೆಲ್ಲರೂ ಕಮಾಂಡಿಂಗ್ ಸ್ಥಾನಗಳಲ್ಲಿರುತ್ತೀರಿ, ಮತ್ತು ನಾನು ಮತ್ತು ನನ್ನಂತಹ ಅನೇಕರು ಸ್ವರ್ಗದಿಂದ ಆ ಅದ್ಭುತ ಕ್ಷಣವನ್ನು ವೀಕ್ಷಿಸುತ್ತೇವೆ.

ಭಾರತವು ಹಿಂದೆಂದಿಗಿಂತಲೂ ವೇಗವಾಗಿ ವಿಕಸಿತಗೊಳ್ಳುತ್ತಿದೆ. ನೀವೆಲ್ಲರೂ ಅಭಿವೃದ್ಧಿಯ ಈ ವೇಗವನ್ನು ಉಳಿಸಿಕೊಳ್ಳುವುದರ ಜೊತೆಗೆ ಇನ್ನೂ ಹೆಚ್ಚಿನ ಕೊಡುಗೆಯನ್ನು ನೀಡುವಿರಿ ಎಂಬ ವಿಶ್ವಾಸವಿದೆ. 

ವಿದ್ಯುತ್ ಮತ್ತು ರಸ್ತೆ ಸಂಪರ್ಕವಿಲ್ಲದ ಹಳ್ಳಿಗಳನ್ನು ಹೊಂದಿದ  ಭಾರತವನ್ನು ನಾನು ಮತ್ತು ನನ್ನ ತಲೆಮಾರಿನವರು ನೋಡಿದ್ದೇವೆ.  ಮನೆಗಳಲ್ಲಿ ನಲ್ಲಿಯ ನೀರು ಮತ್ತು ಶೌಚಾಲಯಗಳಂತಹ ಸೌಲಭ್ಯಗಳನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿರಲಿಲ್ಲ. ಮನೆಯಗಳಿಗೆ ಅಡುಗೆ ಅನಿಲ ಸಂಪರ್ಕವೆಂಬುದು ನಮ್ಮ ಊಹೆಗೂ ನಿಲುಕದ ವಿಷಯವಾಗಿತ್ತು. ಗ್ರಾಮಗಳಲ್ಲಿ  ಶಾಲೆಗಳಿರಲಿಲ್ಲ. ಒಂದು ವೇಳೆ ಇದ್ದರೂ ಅದು ಕೇವಲ ಪ್ರಾಥಮಿಕ ಶಾಲೆಯಾಗಿತ್ತು. ಅಂತಹ ದುಸ್ಥಿತಿಯಿಂದ ಹೊರಬಂದು ನಾವು ಈಗ ಎಲ್ಲಿದ್ದೇವೆ ಎಂಬುದನ್ನು ನೋಡಿ. 

ನಾನು ಇಂದು ಆರ್ಥಿಕ, ರಾಜಕೀಯ, ಸಾಮಾಜಿಕ ಮತ್ತು ಭೌಗೋಳಿಕ ಅಂಶಗಳಿಗೆ ಸಂಬಂಧಿಸಿದಂತೆ ಸಮಕಾಲೀನ ರಾಷ್ಟ್ರೀಯ ಸನ್ನಿವೇಶಗಳ ವಿವಿಧ ಅಂಶಗಳ ಕುರಿತು ನಿಮ್ಮ ಗಮನ ಸೆಳೆಯಲು ಯತ್ನಿಸುತ್ತೇನೆ. 

ದೇಶದ ಆರ್ಥಿಕತೆಯ ಮೂಲಭೂತ ಅಂಶಗಳಿಗೆ ಸಂಬಂಧಿಸಿದಂತೆ ಕಳೆದ ಒಂದು ದಶಕದಲ್ಲಿ ಅಗಾಧ ಗುಣಾತ್ಮಕ ಬದಲಾವಣೆಗಳು ಆಗಿದ್ದು. ಅವು ನಮ್ಮಲ್ಲಿ ಭರವಸೆ ಮತ್ತು ನಾವು ಏನನ್ನಾದರೂ ಸಾಧಿಸಬಹುದು ಎಂಬ ನಂಬಿಕೆಯನ್ನು ಮೂಡಿಸಿವೆ.  ಕಷ್ಟಕರವಾದ ಹಂತವನ್ನು ನಿವಾರಿಸಿಕೊಳ್ಳುವಾಗ ಹತಾಶೆಯ ವಾತಾವರಣ ಲವಲವಿಕೆಯ ಮನಸ್ಥಿತಿಗೆ ಪರಿವರ್ತನೆಯಾಗುತ್ತದೆ. ನೀವು ಅದರ ಲಾಭವನ್ನು ಪಡೆದುಕೊಳ್ಳಬೇಕು ಮತ್ತು ಅದನ್ನು ರಾಷ್ಟ್ರೀಯ ಕಲ್ಯಾಣಕ್ಕಾಗಿ ಬಳಸಿಕೊಳ್ಳಬೇಕು. 

ಈ ಅವಧಿಯಲ್ಲಿ ನಮ್ಮ ಆರ್ಥಿಕತೆಯು ಹಲವಾರು ಸವಾಲುಗಳು ಮತ್ತು ಕಷ್ಟಕರ ಸನ್ನಿವೇಶಗಳನ್ನು ಸಮರ್ಥವಾಗಿ ಎದುರಿಸಿದ್ದಲ್ಲದೇ  ದುರ್ಬಲ ಆರ್ಥಿಕ ಸ್ಥಿತಿ ಹೊಂದಿದ ಜಗತ್ತಿನ ಐದು ರಾಷ್ಟ್ರಗಳಲ್ಲಿ ಒಂದಾಗಿದ್ದ ಭಾರತ ಈ ಹಿಂದೆ ನಮ್ಮನ್ನಾಳಿದ ವಸಾಹತುಶಾಹಿ ದೇಶಗಳಾದ ಯುನೈಟೆಡ್ ಕಿಂಗ್‌ಡಮ್, ಕೆನಡಾ ಮತ್ತು ಫ್ರಾನ್ಸ್‌ ಗಳನ್ನೂ  ಹಿಂದೆ ಹಾಕಿ ಜಗತ್ತಿನ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಇಂದು ಹೊರಹೊಮ್ಮಿದೆ.  ಜಗತ್ತಿನ ಆರನೇ ಒಂದು ಭಾಗದಷ್ಟು ಜನಸಂಖ್ಯೆಯನ್ನು ಹೊಂದಿರುವ ಭಾರತ ಮುಂದಿನ ಎರಡು ವರ್ಷಗಳಲ್ಲಿ ಜಪಾನ್ ಮತ್ತು ಜರ್ಮನಿಯನ್ನು ಹಿಂದಕ್ಕೆ ಹಾಕಿ ಜಗತ್ತಿನ ಮೂರನೇ ಅತಿದೊಡ್ಡ ಜಾಗತಿಕ ಆರ್ಥಿಕತೆಯಾಗಲಿದೆ.

1989ರಲ್ಲಿ ನಾನು ಸಂಸತ್ತಿಗೆ ಪ್ರವೇಶಿಸಿದಾಗ ಕೇಂದ್ರ ಸಚಿವನಾಗುವ ಅವಕಾಶ ದೊರೆಯಿತು. ‘ಸೋನೆ ಕಿ ಚಿಡಿಯಾ’ ಎಂದು ಕರೆಯಲ್ಪಡುವ ಭಾರತವು ಜಗತ್ತಿನೆದುರು ತನ್ನ  ಹಣಕಾಸಿನ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಲು ತನ್ನಲ್ಲಿರುವ ಚಿನ್ನವನ್ನು ಎರಡು ಸ್ವಿಸ್ ಬ್ಯಾಂಕ್‌ಗಳಲ್ಲಿ ಒತ್ತೆ ಇರಿಸಬೇಕಾದ ಪರಿಸ್ಥಿತಿಯನ್ನು ಅತ್ಯಂತ ನೋವಿನಿಂದ ನೋಡಿದ್ದೇನೆ. ಈ ಹಿನ್ನೆಲೆಯಲ್ಲಿ ಇಂದು ನಾನು ನೋಡುತ್ತಿರುವ ಭಾರತವನ್ನು ನಾನು ಊಹಿಸಿರಲೇ ಇಲ್ಲ. ಇದೊಂದು ದೊಡ್ಡ ಬದಲಾವಣೆ.

ನನ್ನ ಯುವ ಸ್ನೇಹಿತರೇ, ನಾವು ಈಗಾಗಲೇ ಜಗತ್ತಿನ ಮೂರನೇ ಅತಿದೊಡ್ಡ ಖರೀದಿ ಶಕ್ತಿಯಾಗಿದ್ದೇವೆ.

ಅಮೃತ್ ಕಾಲ್‌ನಿಂದ ವಿಕಸಿತ ಭಾರತ @ 2047 ರವರೆಗಿನ ನಮ್ಮ ಸುದೀರ್ಘ ನಡೆಯ ರೂಪುರೇಷೆಯು ದೂರದೃಷ್ಟಿಯ ಚಿಂತನೆಯುಳ್ಳ ನಮ್ಮ ಪ್ರಧಾನಮಂತ್ರಿಯವರಿಂದ ಸಿದ್ಧವಾಗಿದೆ. ಇದನ್ನು ಯುದ್ಧೋಪಾದಿಯಲ್ಲಿ ಈಡೇರಿಸಲು ಅವರಿಗಿರುವ ಉತ್ಸಾಹ ಮತ್ತು ಅಪರಿಮಿತ ಬದ್ಧತೆ ಮತ್ತು ಅವರ ಯೋಜನೆಗಳನ್ನು ಸಮರ್ಪಿತ ಭಾವನೆಯಿಂದ ಜಾರಿಗೆ ತರುವ ನೀವು ಒಬ್ಬರಿಗೊಬ್ಬರು ಪೂರಕವಾಗಿದ್ದೀರಿ. ಈ ದೂರದೃಷ್ಟಿಯ ನೀತಿಗಳನ್ನು ನೀವು ಈ ದೇಶದ ಯಶಸ್ಸಾಗಿ ಪರಿವರ್ತಿಸಬೇಕು. ಭಾರತದ ಅಧಿಕಾರಶಾಹಿಯು ಈ ಕಾರ್ಯವನ್ನು ಪ್ರತಿದಿನ ಮಾಡುತ್ತಿದೆ. 

ಮಹಾತ್ಮಾ ಗಾಂಧೀಜಿಯವರು ತಮ್ಮ ಅಂತ್ಯೋದಯ ಪರಿಕಲ್ಪನೆಯಲ್ಲಿ ಉಲ್ಲೇಖಿಸಿರುವಂತೆ ಸಮಾಜದ ಕಟ್ಟ ಕಡೆಯ ಸಾಲಿನಲ್ಲಿರುವವರಿಗೆ ಸುಲಭವಾಗಿ ಬದುಕಲು ಅನುಕೂಲವಾಗುವಂತೆ ಹಲವಾರು ನೀತಿಗಳು ಮತ್ತು ನವೀನ ಸುಧಾರಣೆಗಳನ್ನು ಜಾರಿಗೆ ತರುವ ಮೂಲಕ ನಮ್ಮ ಆರ್ಥಿಕತೆಯ ಬೆನ್ನುಮೂಳೆಯನ್ನು ಬಲಗೊಳಿಸಲಾಗಿದೆ.  ಮಹಾತ್ಮಾ ಗಾಂಧೀಜಿಯವರ ಅಂತ್ಯೋದಯ ಪರಿಕಲ್ಪನೆ ಇದೀಗ ಸಾಕಾರಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಕೆಲಸಗಳು ಪ್ರಗತಿಯಲ್ಲಿದೆ ಎಂಬುದು ವಾಸ್ತವವಾಗಿದೆ.  

ವಿಶ್ವದ ಅತಿದೊಡ್ಡ ತೆರಿಗೆ ಸುಧಾರಣಾ ಕ್ರಮವಾದ - ಸರಕು ಮತ್ತು ಸೇವಾ ತೆರಿಗೆ- ಜಿಎಸ್‌ಟಿಯನ್ನು 2017 ರಲ್ಲಿ ಅಂದಿನ ಗೌರವಾನ್ವಿತ ರಾಷ್ಟ್ರಪತಿಗಳಾದ ಪ್ರಣಬ್ ಮುಖರ್ಜಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಅನಾವರಣಗೊಳಿಸಿದರು.  ನನ್ನ ಯುವ ಸ್ನೇಹಿತರೇ, ಅದೇ ಸೆಂಟ್ರಲ್ ಹಾಲ್‌ನಲ್ಲಿ, 1947 ರ ಆಗಸ್ಟ್ 14 - 15 ರ ಮಧ್ಯರಾತ್ರಿಯಲ್ಲಿ, ಭಾರತವು ಸ್ವಾತಂತ್ರ್ಯವನ್ನು ಗಳಿಸುವ ಮೂಲಕ ತನ್ನ ಭವಿಷ್ಯದೊಂದಿಗೆ ಸಂಧಿಸುವ ಕಾರ್ಯವಾಯಿತು. ಅದೇ ಸೆಂಟ್ರಲ್ ಹಾಲ್ ನಲ್ಲಿ 2017 ರ ಜೂನ್ 30 - ಜುಲೈ 1 ರ ಮಧ್ಯರಾತ್ರಿಯಲ್ಲಿ GST ಯನ್ನು ಜಾರಿಗೊಳಿಸುವ ಮೂಲಕ ಭಾರತ ಆಧುನಿಕತೆಯೊಂದಿಗೆ ಸಂಧಿಸಿತು.  GST ಒಂದು ಕ್ರಾಂತಿಕಾರಿ ಸುಧಾರಣೆಯಾಗಿದ್ದು ದೇಶದ ಆರ್ಥಿಕತೆಯ ಬೆಳವಣಿಗೆಗೆ ಮತ್ತು ಅದನ್ನು ಹೆಚ್ಚು ಪಾರದರ್ಶಕವಾಗಿಸುವಲ್ಲಿ ಪ್ರಮುಖ ಕೊಡುಗೆ ನೀಡಿದೆ. 

ಜಾಗತಿಕ ಸನ್ನಿವೇಶಕ್ಕೆ ವ್ಯತಿರಿಕ್ತವಾಗಿ, ಕೋವಿಡ್ ಸಾಂಕ್ರಾಮಿಕ ಮತ್ತು ಜಾಗತಿಕ ಘರ್ಷಣೆಗಳ ಸವಾಲುಗಳ ಹೊರತಾಗಿಯೂ ಭಾರತದ ಆರ್ಥಿಕತೆಯು ಸ್ಥಿರವಾಗಿ ಮೇಲಕ್ಕೆ ಹೋಗುತ್ತಿದೆ. ಜಾಗತಿಕ ಸರಬರಾಜು ಸರಪಳಿಯನ್ನು (SUPPLY CHAINS)  ಉಳಿಸುವುದರ ಜೊತೆಗೆ ಕಡಲ್ಗಳ್ಳತನದ ಸಂತ್ರಸ್ತರನ್ನು ನಮ್ಮ ನೌಕಾಪಡೆ ರಕ್ಷಿಸಿ ಒಂದು ವಾರವೂ ಕಳೆದಿಲ್ಲ ಎಂಬುದು ನಮಗೆಲ್ಲ ಸಮಾಧಾನದ ವಿಷಯ. ಪ್ರತಿಯೊಬ್ಬ ಭಾರತೀಯನೂ ಅವರ ಸಾಧನೆಯ ಬಗ್ಗೆ ಹೆಮ್ಮೆಪಡುತ್ತಾನೆ.  

ಇತ್ತೀಚಿನ ವರ್ಷಗಳಲ್ಲಿ ನಮ್ಮ ರಾಷ್ಟ್ರವು ಪಿರಮಿಡಿಕಲ್ ಅಲ್ಲದ ಆದರೆ ಸಮಾನ ರೀತಿಯ ಸಾಮಾಜಿಕ ಅಭಿವೃದ್ಧಿಗೆ ಸಾಕ್ಷಿಯಾಗಿದೆ. ನಿರ್ಗತಿಕರು ಮತ್ತು ನೊಂದಿರುವವರ ಅಭಿವೃದ್ಧಿಯು ನಮ್ಮ ಚಿಂತನೆಗೂ ಮೀರಿ ಆಗಿದೆ.  

ದೊಡ್ಡ ಗಾತ್ರ ಮತ್ತು ವೈವಿಧ್ಯತೆಯನ್ನು ಹೊಂದಿದಂತಹ ನಮ್ಮ ದೇಶದಲ್ಲಿ, ಪ್ರತಿ ಮನೆಗೂ ವಿದ್ಯುತ್ ಸಂಪರ್ಕ ಇದೆ ಎಂಬುದು ನಿಜಕ್ಕೂ ಒಂದು ದಿಗ್ಭ್ರಮೆಗೊಳಿಸುವ ವಿಷಯ. ನಮ್ಮ ಪ್ರಧಾನಿಯವರ ಮನಸ್ಸಿನಲ್ಲಿ ಇಂಥದೊಂದು ದಿಗ್ಭ್ರಮೆಗೊಳಿಸುವ ಆಲೋಚನೆ ಬಂದಿದ್ದನ್ನು ಗಮನಿಸಿ. ನೋಡಿ. ಪ್ರತಿ ಮನೆಯೂ ವಿದ್ಯುತ್, ಶೌಚಾಲಯ, ನಲ್ಲಿ ನೀರು ಮತ್ತು ಅನಿಲ ಸಂಪರ್ಕವನ್ನು ಹೊಂದಿರಬೇಕು ಮತ್ತು ಪ್ರತಿಯೊಬ್ಬ ವ್ಯಕ್ತಿಗೂ ಆರೋಗ್ಯ ಮತ್ತು ಶಿಕ್ಷಣ ಸೌಲಭ್ಯಗಳು ದೊರೆಯಬೇಕು ಎಂದು ಅವರು ಯೋಚಿಸಿದ್ದರು. ಮೊದಮೊದಲು ಇದೊಂದು ಅಸಾಧ್ಯ ಕನಸಂತೆ ಭಾಸವಾಗುತ್ತಿತ್ತು. ಆದರೆ ಇಂದು ಏನಾಗಿದೆ?  ಇವುಗಳಲ್ಲಿ ಬಹುತೇಕ ನಿಜವಾಗಿವೆ. ಇನ್ನೂ ಕೆಲವು ಕೆಲಸಗಳು ಪ್ರಗತಿಯಲ್ಲಿವೆ. ನೀವು ಈ ಪ್ರಗತಿಯನ್ನು ಮುಂದುವರೆಸಬೇಕು. 

ಸ್ನೇಹಿತರೇ, ದೇಶದಾದ್ಯಂತ ಲಭ್ಯವಿರುವ ಅತ್ಯುನ್ನತ ಡಿಜಿಟಲ್ ಮತ್ತು ತಾಂತ್ರಿಕ ಸಂಪರ್ಕಗಳು ಇತರ ಯಾವುದೇ ಬೆರಗುಗೊಳಿಸುವ ಸಾಧನೆಗಳಿಗಿಂತ ಕಡಿಮೆಯಿಲ್ಲ. ಒಂದು ಸಮಯವಿತ್ತು, ಜಾಗತಿಕ ತಾಂತ್ರಿಕ ಬೆಳವಣಿಗೆಗೆ ಹೋಲಿಸಿದರೆ ನಮ್ಮ ದೇಶ ದಶಕಗಳಷ್ಟು ಹಿಂದೆ ಇತ್ತು. ಈಗ ನಾವು ಎಲ್ಲಿದ್ದೇವೆ ನೋಡಿ, ತಾಂತ್ರಿಕ ಕ್ಷೇತ್ರದಲ್ಲಿ ನಾಯಕರಾಗಿ ಹೊರಹೊಮ್ಮುತ್ತಿದ್ದೇವೆ.  ಇದರಿಂದಾಗಿ 2023 ರಲ್ಲಿ ಜಗತ್ತಿನ ಒಟ್ಟು ಡಿಜಿಟಲ್ ವಹಿವಾಟುಗಳಲ್ಲಿ ಭಾರತದ ಪಾಲು ಶೇಕಡಾ 50 ರಷ್ಟಿದೆ. ನಾವು ಜಾಗತಿಕ ಜನಸಂಖ್ಯೆಯ ಆರನೇ ಒಂದು ಭಾಗದಷ್ಟಿದ್ದೇವೆ ಆದರೆ ಡಿಜಿಟಲ್ ವಹಿವಾಟುಗಳಲ್ಲಿ ನಮ್ಮ ಪಾಲು ಶೇಕಡಾ 50 ರಷ್ಟಿದೆ. ಇದು ನಾವು ಜಗತ್ತಿನೆದುರು ತಲೆ ಎತ್ತಿ ನಿಲ್ಲುವಂತೆ ಮಾಡಿದೆ. ಈ ಸಾಧನೆಯ ಬಗ್ಗೆ ನಾವು ಎಂದಿಗೂ ಹೆಮ್ಮೆ ಪಡುತ್ತೇವೆ.

ದೃಢವಾದ ಮೂಲಸೌಕರ್ಯ ಹೊಂದಿರುವ ಡಿಜಿಟಲ್ ಕನೆಕ್ಟಿವಿಟಿ ದೇಶಕ್ಕೆ ಅಗಾಧ ಪ್ರಯೋಜನವನ್ನು ನೀಡಿದೆ. ಏಕೆಂದರೆ ಡಿಜಿಟಲ್ connectivity ಈಗ ದೇಶದ ಮೂಲೆ ಮೂಲೆಗೂ ಪಸರಿಸಿದೆ.  ಇದು ನಮ್ಮ ಭೌಗೋಳಿಕ ಪ್ರದೇಶವನ್ನೆಲ್ಲ ಕವರ್ ಮಾಡಿದೆ. ಪ್ರತಿಯೊಂದು ಹಳ್ಳಿಯಲ್ಲೂ ಡಿಜಿಟಲ್ ಕನೆಕ್ಟಿವಿಟಿ ಈಗ ಲಭ್ಯವಿದೆ.  ಇನ್ನು ಮುಂದೆ ನೀವು ಹಳ್ಳಿಯವರಾಗಿದ್ದರೆ ನೀವು ಯಾವುದೇ ಅನಾನುಕೂಲತೆ ಅನುಭವಿಸುವುದಿಲ್ಲ, ನಗರಗಳಲ್ಲಿ ಸಿಗುವ ಈ ಸೌಲಭ್ಯವು ನಿಮ್ಮಲ್ಲೂ ಸಿಗುತ್ತದೆ.

ನಮ್ಮ ತಲಾವಾರು ಇಂಟರ್‌ನೆಟ್ ಬಳಕೆಯು USA ಮತ್ತು ಚೀನಾದ ಒಟ್ಟು ಬಳಕೆಗಿಂತ ಹೆಚ್ಚಾಗಿದೆ ಎಂಬುದು ದೇಶದ ಪ್ರತಿಯೊಂದು ಭಾಗದಲ್ಲೂ ಇಂಟರ್ನೆಟ್ ನ ಲಭ್ಯತೆ ಮತ್ತು ಅದನ್ನು ಜನರು ಉಪಯೋಗಿಸುತ್ತಿರುವ ಬಗ್ಗೆ   ಸಾಕ್ಷಿಯಾಗಿದೆ. ತಂತ್ರಜ್ಞಾನದ ಈ ಅಗಾಧ ಬೆಳವಣಿಗೆ ದೇಶದ ಆಡಳಿತದಲ್ಲಿ ಹೊಣೆಗಾರಿಕೆ ಮತ್ತು ಪಾರದರ್ಶಕತೆ ತರಲು ಬೃಹತ್ ಪ್ರಮಾಣದಲ್ಲಿ ಕೊಡುಗೆ ನೀಡಿದೆ.

ನನ್ನ ಯುವ ಸ್ನೇಹಿತರೇ, 1980 ರ ದಶಕದಲ್ಲಿ ಈ ದೇಶದ ಪ್ರಧಾನಿಯೊಬ್ಬರು ಅಭಿವೃದ್ಧಿಗೆ ಮೀಸಲಾದ ಮೊತ್ತದ ಶೇಕಡಾ 15 ರಷ್ಟೂ ಫಲಾನುಭವಿಗಳಿಗೆ ತಲುಪುವುದಿಲ್ಲ ಎಂದು ವಿಷಾದಿಸಿದ್ದರು. ಶೇಕಡಾ 85 ರಷ್ಟು ಹಣ ಬೇರೆಡೆಗೆ ಸೋರಿಕೆಯಾಗುತ್ತಿದೆ ಎಂಬುದು ಅವರ ಕಾಳಜಿಯಾಗಿತ್ತು. ಆದರೆ ಈಗ?  ಶೇಕಡಾ 100 ರಷ್ಟು ಹಣ ನೇರವಾಗಿ ಉದ್ದೇಶಿತ ಫಲಾನುಭವಿಯ ಬ್ಯಾಂಕ್ ಖಾತೆಗೆ ಹೋಗುತ್ತಿದೆ. ಇಲ್ಲಿ ಯಾವುದೇ ರೀತಿಯ ಸೋರಿಕೆಯಾಗಲೀ, ಮಧ್ಯವರ್ತಿಗಳ ಹಾವಳಿಯಾಗಲಿ ಇಲ್ಲವೇ ಇಲ್ಲ. 500 ಮಿಲಿಯನ್ ಜನರನ್ನು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸೇರಿಸುವ ನಿರ್ಧಾರ ಎಂತಹ ದೂರದೃಷ್ಟಿಯ ಹೆಜ್ಜೆಯಾಗಿತ್ತು ಎಂಬುದನ್ನು ಗಮನಿಸಿ. ದೇಶದ ಬಡವರು ಮೊದಲ ಬಾರಿಗೆ ಬ್ಯಾಂಕ್ ಖಾತೆಗಳನ್ನು ತೆರೆದರು. ಅದರಿಂದಾಗಿ ನಮಗೆ ಈಗ ಸಿಗುತ್ತಿರುವ ಲಾಭವನ್ನು ನೋಡಿ.

ಇದೀಗ ನಾನು ನನ್ನ ಬೇರುಗಳಿಗೆ ಬರುತ್ತೇನೆ. ನಾನೊಬ್ಬ ರೈತನ ಮಗ. ಹಳ್ಳಿಯಿಂದ ಬಂದವನು. ಹಳ್ಳಿಯಿಂದ ಹೊರಗೆ ಬಂದ ನಮ್ಮ ಕುಟುಂಬದ ಮೊದಲ ತಲೆಮಾರಿನವನು ನಾನು. ಇದೀಗ ಸುಮಾರು 100 ಮಿಲಿಯನ್ ರೈತರು  ಪಿಎಂ ಕಿಸಾನ್ ಸಮ್ಮಾನ್‌ ಯೋಜನೆಯಡಿಯಲ್ಲಿ ವರ್ಷಕ್ಕೆ ಮೂರು ಬಾರಿ ತಮ ಬ್ಯಾಂಕ್ ಖಾತೆಗಳಲ್ಲಿ ನೇರವಾಗಿ ಹಣ ಪಡೆಯುತ್ತಿದ್ದಾರೆ. 30 ವರ್ಷಗಳ ಹಿಂದೆ ನಾನು ಕೇಂದ್ರ ಮಂತ್ರಿಯಾಗಿದ್ದಾಗ ಮತ್ತು ಸಂಸತ್ತಿನ ಸದಸ್ಯನಾಗಿದ್ದಾಗ ಇದನ್ನು ನಾನು ಊಹಿಸಲೂ ಸಾಧ್ಯವಾಗದ ಸಂಗತಿಯಾಗಿತ್ತು. 

ಇಂತಹ ಕಾರ್ಯಕ್ರಮಕ್ಕೆ ಸರ್ಕಾರ ಸಿದ್ಧಗೊಂಡಿರಬಹುದು ಮತ್ತು ಇದಕ್ಕೆ ಬೇಕಾದ ಸದೃಢವಾದ ಮೂಲಸೌಕರ್ಯಗಳನ್ನು ಸಿದ್ಧಪಡಿಸಿರಬಹುದು. ಆದರೆ ಇದೆಲ್ಲಕ್ಕಿಂತ ಅಮೋಘ ಸಾಧನೆ ಎಂದರೆ ಇಂತಹ ಕಾರ್ಯಕ್ರಮವನ್ನು ಸ್ವೀಕರಿಸಲು ನಮ್ಮ ದೇಶದ ರೈತ ಸಿದ್ಧನಾಗಿದ್ದಾನೆ ಮತ್ತು ಹಣವನ್ನು ಡಿಜಿಟಲಿ  ಸ್ವೀಕರಿಸುತ್ತಿದ್ದಾನೆ ಎಂಬುದೇ ಒಂದು ಮಹತ್ವದ  ಸಾಧನೆ. ನನ್ನ ಯುವ ಮಿತ್ರರೇ ಈ ಕಾರ್ಯಕ್ರಮಕ್ಕೆ ವಿನಿಯೋಗಿಸುವ ಒಟ್ಟು ಮೊತ್ತ ಸುಮಾರು 3 ಲಕ್ಷ ಕೋಟಿ. ಇದೇನು ಸಣ್ಣ ಮೊತ್ತವಲ್ಲ.

ಎಲ್ಲ ಹಳ್ಳಿಗಳಲ್ಲೂ ಕಂಪ್ಯೂಟರ್ ಸೆಂಟರ್‌ಗಳನ್ನು ತೆರೆಯುವ ಮೂಲಕ ಸಾಮಾನ್ಯ ಜನರಿಗೆ ಸರಕಾರಿ ಸೇವೆಗಳನ್ನು ವಿತರಿಸುವ ವ್ಯವಸ್ಥೆಯನ್ನು ಯಾಂತ್ರಿಕೃತಗೊಳಿಸಲಾಗಿದೆ.  ಹಳ್ಳಿಗಳಲ್ಲಿ ಮತ್ತು ಎರಡನೇ ಶ್ರೇಣಿಯ ನಗರಗಳಲ್ಲಿನ ಯುವಕರನ್ನು ನೋಡಿ.  ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು, ವಿವಿಧ ಹುದ್ದೆಗಳ ಭರ್ತಿಗಾಗಿ ನಡೆಯುವ ಪರೀಕ್ಷೆಗಳ  ಅರ್ಜಿ ಭರ್ತಿ ಮಾಡಲು, ಪಾಸ್‌ಪೋರ್ಟ್‌ ಮಾಡಿಸಿಕೊಳ್ಳಲು ಅವರು ಇನ್ನು ಮುಂದೆ ಹಣ ಮತ್ತು ಸಮಯವನ್ನು ವ್ಯಯಿಸುವ ಅಗತ್ಯವಿಲ್ಲ. ಅವರು ತಮ್ಮ ಸ್ಥಳಗಳಿಂದಲೇ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಈ ಕೆಲಸಗಳನ್ನು ಮಾಡಬಹುದಾಗಿದೆ.  

ಮೂರು ದಶಕಗಳ ನಂತರ ಜಾರಿಗೆ ಬರುತ್ತಿರುವ ಹೊಸ ಶಿಕ್ಷಣ ನೀತಿಯು ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಬಹುವಾಗಿ ಬೇಕಾಗಿದ್ದ ಕ್ರಾಂತಿಕಾರಿ ಬದಲಾವಣೆಯನ್ನು ತರಲು ಸಿದ್ಧವಾಗಿದೆ. ನಮ್ಮ ಅಗತ್ಯಗಳು, ಆಲೋಚನೆಗಳು, ಮತ್ತು ಕನಸುಗಳಿಗೆ ತಕ್ಕಂತೆ ಇದು ರೂಪುಗೊಂಡಿದೆ.  ಇನ್ನು ಮುಂದೆ ನಾವು ಅನ್ಯ ಭಾಷೆಯಲ್ಲಿ ಕನಸು ಕಾಣುವುದಿಲ್ಲ, ನಾವು ನಮ್ಮ ಭಾಷೆಯಲ್ಲಿಯೇ  ಕನಸು ಕಾಣುತ್ತೇವೆ. ಓರಿಯೆಂಟೇಷನ್ (orientation) ನಿಂದ ಕೌಶಲ್ಯ ವಿಕಸನಕ್ಕೆ ಒತ್ತು ನೀಡಲಾಗುತ್ತಿದ್ದು ಈ ಬದಲಾವಣೆಯು ಸಮಯೋಚಿತವಾಗಿದೆ.

ದಿನಂಪ್ರತಿ ಅಭಿವೃದ್ಧಿಯಾಗುತ್ತಿರುವ ರೈಲು, ರಸ್ತೆ ಮತ್ತು ವಿಮಾನ ಸಂಪರ್ಕಗಳನ್ನು ನೀವು ನೋಡುತ್ತಿದ್ದೀರಿ.  ನಿಮ್ಮ ಅಜ್ಜ ಅಜ್ಜಿಯರನ್ನು, ನಿಮ್ಮ ಹೆತ್ತವರನ್ನು ಕೇಳಿ ನೋಡಿ. ಆಗಿನ ಪರಿಸ್ಥಿತಿ ಏನಿತ್ತು? ಈಗಿನ ಪರಿಸ್ಥಿತಿ ಹೇಗಿದೆ ಎಂದು. ಈ ಬದಲಾವಣೆ ಕೇವಲ ಗಾತ್ರದಲ್ಲಿ ಆಗಿಲ್ಲ. ಗುಣಮಟ್ಟದಲ್ಲೂ ಆಗಿದೆ. ನಾವು ವಿಶ್ವ ದರ್ಜೆಯ ರೈಲು ನಿಲ್ದಾಣಗಳು ಮತ್ತು ವಿಮಾನ ನಿಲ್ದಾಣಗಳನ್ನು ಹೊಂದಿದ್ದೇವೆ. ನಮ್ಮ ರಸ್ತೆಗಳ ಗುಣಮಟ್ಟ ನೋಡಿ. ನಿರ್ದಿಷ್ಟ ಸ್ಥಳಗಳ ಸಂಪರ್ಕಕ್ಕಾಗಿ ಇರುವ ಬಹು ಆಯ್ಕೆಗಳನ್ನು ನೋಡಿ.  ನನ್ನ ತವರು ರಾಜ್ಯ ಜೈಪುರದ ಉದಾಹರಣೆಯನ್ನೇ ತೆಗೆದುಕೊಳ್ಳಿ. ದೆಹಲಿ ಮತ್ತು ಜೈಪುರ್ ನಡುವೆ ಅಲ್ವಾರ್ ಮೂಲಕ ಹಾಯ್ದು ಹೋಗುವ ಕೇವಲ ಒಂದು ರಸ್ತೆಯಿತ್ತು. ನಂತರದಲ್ಲಿ ಇದು ನೇರವಾಗಿ ಕೊಟ್‌ಪುಟ್ಲಿಗೆ ಬಂದಿತು. ಇದೀಗ ಇದು ದೆಹಲಿ ಬಾಂಬೆ ನಡುವಿನ ವಿಶ್ವ ದರ್ಜೆಯ ಗ್ರ್ಯಾಂಡ್ ಹೈವೇಯ ಭಾಗವಾಗಿದೆ. ಈ ಮೊದಲು ಜೈಪುರ- ದೆಹಲಿ ನಡುವಿನ ಪ್ರಯಾಣದ ಸಮಯ 8-9 ಗಂಟೆ  ಆಗುತ್ತಿತ್ತು. ಈಗ ಕೇವಲ 5-6 ಗಂಟೆಯಲ್ಲಿ ಈ ದೂರವನ್ನು ಕ್ರಮಿಸಬಹುದು. ಇದೊಂದು ದೊಡ್ಡ ಬದಲಾವಣೆ.  ನಮ್ಮ ದೇಶದ ಮೂಲಸೌಕರ್ಯವು ಗಾತ್ರ ಹಾಗೂ ಗುಣಮಟ್ಟದಲ್ಲಿ ಬಹಳಷ್ಟು ಪ್ರಗತಿ ಸಾಧಿಸಿದ್ದು, ಜಾಗತಿಕ ಗುಣಮಟ್ಟವನ್ನು ಹೊಂದಿವೆ. 

ಅಂತರಾಷ್ಟ್ರೀಯ ಮಟ್ಟದಲ್ಲಿ, ಭಾರತದ ಆತಿಥ್ಯದಲ್ಲಿ ನಡೆದ G-20 ಸಮ್ಮೇಳನ ಅದ್ಭುತ ಯಶಸ್ಸನ್ನು ಕಂಡಿದೆ. ದೇಶದ ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು G20 ಕಾರ್ಯಗಳನ್ನು ಆಯೋಜಿಸಿದ್ದವು. 5000 ವರ್ಷಗಳಷ್ಟು ಹಳೆಯದಾದ ಭಾರತ ನಾಗರಿಕತೆಗೆ ಜಗತ್ತು ಸಾಕ್ಷಿಯಾಗಿತು. ವಿದೇಶಗಳು ನಮ್ಮ ಸಂಸ್ಕೃತಿ ಮತ್ತು ಹರಿತ ಬುದ್ಧಿಶಕ್ತಿಯ ನಮ್ಮ ಮಾನವ ಸಂಪನ್ಮೂಲದ  ಬಗ್ಗೆ ತಿಳಿಯುವಂತಾಯಿತು. G20ಯ ಸಮಾಪಣಾ  ಸಮಾರಂಭವು  ವಿಶ್ವದ ಹತ್ತು 10  ಶ್ರೇಷ್ಠ ಸಮಾವೇಶ ಕೇಂದ್ರಗಳಲ್ಲಿ ಒಂದಾದ ಭಾರತ ಮಂಟಪದಲ್ಲಿ ನಡೆಯಿತು. 

ಪ್ರಧಾನ ಮಂತ್ರಿಗಳು ವಿಶ್ವ ನಾಯಕನನ್ನು ಬರಮಾಡಿಕೊಳ್ಳುವ ಅವಕಾಶ ಪಡೆದಿದ್ದನ್ನು ನಾವು ನೋಡಿದೆವು. ಅವರು ನಮ್ಮ 5,000 ವರ್ಷಗಳ ಇತಿಹಾಸ ಹೊಂದಿದ ನಾಗರಿಕತೆಯ ಸಂಪತ್ತಿನ ಬಗ್ಗೆ ಅರಿಯುವಂತಾಯಿತು. ನಂತರ ನಾವು P-20 ಅನ್ನು ಇನ್ನೊಂದು ಶ್ರೇಷ್ಠ ದರ್ಜೆಯ ಯಶೋಭೂಮಿ ಸಮಾವೇಶ ಕೇಂದ್ರದಲ್ಲಿ ಆಯೋಜಿಸಿದ್ದೆವು. ಈ ಕೇಂದ್ರದ  ಆವರಣದಲ್ಲಿ 3,000 ಕ್ಕೂ ಹೆಚ್ಚು ಕಾರುಗಳನ್ನು ಪಾರ್ಕ್ ಮಾಡಬಹುದಾಗಿದೆ. 

ನಾನು ಎರಡೂ ಸಮಾರಂಭಗಳಲ್ಲಿ ಭಾಗವಹಿಸಿದ್ದೆ. ಅಲ್ಲಿನ ದೃಶ್ಯಗಳನ್ನು ನನ್ನ ಕಣ್ಣುಗಳು ನಂಬಲಾಗಲಿಲ್ಲ. ಎಲ್ಲಕ್ಕಿಂತ ಆಶ್ಚರ್ಯಕರ ಮತ್ತು ತೃಪ್ತಿಯ  ಸಂಗತಿ ಎಂದರೆ ಜಾಗತಿಕ ನಾಯಕರು ನಮ್ಮ ದೇಶವನ್ನು ಶ್ಲಾಘಿಸುತ್ತಿದ್ದುದು. ನಮ್ಮ ಬೆಳವಣಿಗೆ ಕೇವಲ ಮೂಲಸೌಕರ್ಯ ಅಭಿವೃದ್ದಿಯಲ್ಲಿ ಆಗಿಲ್ಲ. ಭಾರತವು ತನ್ನ ಮೃದು ರಾಜತಾಂತ್ರಿಕ ಶಕ್ತಿಯನ್ನು ತೀಕ್ಷ್ಣಗೊಳಿಸುವ ಮೂಲಕ ವಿಶ್ವ ನಾಯಕನಾಗಿ ಹೊರಹೊಮ್ಮುತ್ತಿರುವುದನ್ನು G20 ಐತಿಹಾಸಿಕವಾಗಿ ಅರಿತುಕೊಳ್ಳಲಿದೆ. ಆಫ್ರಿಕನ್ ಯೂನಿಯನ್ ಅನ್ನು ಜಿ 20 ನಲ್ಲಿ ಸೇರಿಸುವ ಮೂಲಕ ನಾವು ಈಗ ಜಾಗತಿಕ ಧ್ವನಿಯಾಗಿದ್ದೇವೆ.

ನಿಮ್ಮ ಕಾಳಜಿಗೆ ಕಾರಣವಾಗುವ ದೇಶದ ಆಡಳಿತವು ಇದೀಗ ಉತ್ತಮವಾದ ತಿರುವು ಪಡೆದುಕೊಂಡಿದೆ. ದೀರ್ಘಕಾಲದಿಂದ ಕನಸಾಗೇ ಉಳಿದಿದ್ದ ಕಾನೂನಿನ ಮುಂದೆ ಎಲ್ಲರೂ  ಸಮಾನರು ಎಂಬ ಭಾವನೆ ಇದೀಗ ನನಸಾಗಿದೆ. ದೇಶದ ಆಡಳಿತದ ರಕ್ತನಾಳಗಳಲ್ಲಿ ರಕ್ತದಂತೆ  ಹರಿದಾಡುತ್ತಿದ್ದ ಭ್ರಷ್ಟಾಚಾರವು ಇದೀಗ ಗತಕಾಲದ ವಿಷಯವಾಗಿದೆ. 

ನನ್ನ ಯುವ ಸ್ನೇಹಿತರೇ, ನೀವು ಮತ್ತು ನಾಗರಿಕ ಸೇವೆಗಳಲ್ಲಿರುವ ನಿಮ್ಮ ಸಹೋದ್ಯೋಗಿಗಳು ಈ ಕ್ರಾಂತಿಗೆ ಮೌನವಾಗಿ ಕೊಡುಗೆ ನೀಡಿದ್ದೀರಿ.  ನೀವು ಪರೋಕ್ಷವಾಗಿ ದೇಶಕ್ಕೆ ಕೊಡುಗೆ ನೀಡುವ ಅನೇಕ ಅವಕಾಶಗಳನ್ನು ನೀವು ಪಡೆಯಲಿದ್ದೀರಿ. ಅದೂ ಮೌನವಾಗಿ.  ಆದರೆ ನನ್ನನ್ನು ನಂಬಿ, ಮೌನದಲ್ಲಿ ಸಾಧನೆ ಮಾಡಿದಾಗ ಅದು ಜನಸಾಮಾನ್ಯರೂ ಸೇರಿದಂತೆ ಎಲ್ಲರ ಕಿವಿಯಲ್ಲಿ ಅನುರಣಿಸುತ್ತದೆ. 

ಪ್ರಭಾವಿ ಜನರು ಮತ್ತು ಕುಟುಂಬಗಳು ಬಹಳಷ್ಟು ಸಮಯ ಕಾನೂನಿನ ಪರೀಧಿ ಮೀರಿದವರಾಗಿ ದೇಶದ ಸಂಪತ್ತನ್ನು ಮತ್ತು ಅವಕಾಶಗಳನ್ನು ಅನುಭವಿಸುತ್ತಿದ್ದರು. ನಿಜವಾದ ಅರ್ಹರು ತೊಂದರೆ ಅನುಭವಿಸುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ.

ಕಾನೂನಿನ ಮುಂದೆ ಸಮಾನತೆ ಎಂಬ ತತ್ವವನ್ನು ಅನುಕರಣೀಯ ರೀತಿಯಲ್ಲಿ ಜಾರಿಗೊಳಿಸುತ್ತಿರುವುದರಿಂದ ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ಸತ್ವವು ದೇಶದಲ್ಲಿ ಇನ್ನಷ್ಟು ಆಳವಾಗಿ ಬೇರೂರಲಿದೆ.  ಭ್ರಷ್ಟಾಚಾರವು ಈಗ ವ್ಯಾಪಾರದ ಸರಕಾಗಿ ಉಳಿದಿಲ್ಲ. ಈ ಮೊದಲು ಸರಕಾರಿ ಗುತ್ತಿಗೆ,  ನೇಮಕಾತಿ ಮತ್ತು ಇತರೆ ಅವಕಾಶಗಳನ್ನು ಪಡೆಯಲು ಭ್ರಷ್ಟಾಚಾರ ಏಕೈಕ ಮಾರ್ಗವಾಗಿತ್ತು. ನೀವು ಈ ಮಾರ್ಗದಲ್ಲಿ ಹೋಗದ ಹೊರತು ಯಾವ ಕೆಲಸಗಳೂ ಆಗುತ್ತಿರಲಿಲ್ಲ. 

ನಮ್ಮ ಅಧಿಕಾರ ಕೇಂದ್ರಗಳನ್ನು ಈಗ ಭ್ರಷ್ಟಾಚಾರದಿಂದ ಮುಕ್ತಗೊಳಿಸಲಾಗಿದೆ. ಅಧಿಕಾರದ ಆಸನಗಳಲ್ಲಿ ಕುಳಿತು ಕಾನೂನು ಬಾಹಿರ ನಿರ್ಧಾರ ತೆಗೆದುಕೊಳ್ಳುತ್ತಿದ್ದವರು ಈಗ ತಲೆಮರೆಸಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ಕಾನೂನಿನ ಬಿಗಿಯಾದ ಹಿಡಿತದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಈಸ್ ಆಫ್ ಡುಯಿಂಗ್ ನಂತಹ ವಿಷಯಗಳು ಈಗ ದೇಶದ ಆಡಳಿತವನ್ನು ವ್ಯಾಖ್ಯಾನಿಸುತ್ತಿವೆ.  
ಈಸ್ ಆಫ್ ಡುಯಿಂಗ್ ಬಿಸಿನೆಸ್ ಕುರಿತಾದ ೧೦ ರಾಜ್ಯಪಾಲರನ್ನೊಳಗೊಂಡ ಸಮಿತಿಯ ಮುಖ್ಯಸ್ಥನಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಇದು ನನ್ನ ಅರಿವಿಗೆ ಬಂತು.  ಇದರಿಂದಾಗಿ ನಾನು ಈ ವಿಷಯದಲ್ಲಿ ವಿದ್ಯಾವಂತನಾದೆ  ಎಂದು ನೀವು ಹೇಳಬಹುದು. ಮೊದಲಿನ ಪರಿಸ್ಥಿತಿ ಹೇಗಿತ್ತು? ಈಗ ದೇಶದ ಪರಿಸ್ಥಿತಿ ಹೇಗಿದೆ? ಬದಲಾವಣೆಯು ಇಂದಿಗಿಂತ ಹೆಚ್ಚು ಪರಿಣಾಮಕಾರಿಯಾಗಿರಲು ಯಾವಾಗಲೂ ಸಾಧ್ಯವಿಲ್ಲ ಎಂಬುದು ನನ್ನ ನಂಬಿಕೆ. 

ಈ ಎಲ್ಲಾ ಬದಲಾವಣೆಗಳ ಸಂಚಿತ ಪರಿಣಾಮವೆಂದರೆ ದೇಶವು ಹತಾಶೆಯಿಂದ ಹೊರಬಂದಿದೆ. ಭಾರತವು ಭರವಸೆ ಮತ್ತು ಹೊಸ ಸಾಧ್ಯತೆಗಳ ಭೂಮಿಯಾಗಿದೆ. ಜಾಗತಿಕ ಅವಕಾಶಗಳ ಹಾಟ್‌ಸ್ಪಾಟ್ ಮತ್ತು ಹೂಡಿಕೆಗೆ ನೆಚ್ಚಿನ ತಾಣವಾಗಿದೆ. ಇಂತಹ ಉತ್ತಮ ಸಮಯದಲ್ಲಿ ನೀವಿದ್ದೀರಿ. ಈ ಪರಿಸ್ಥಿತಿಯ ಲಾಭ ಪಡೆದು ದೇಶದ ಅಭಿವೃದ್ಧಿಯನ್ನು ನೀವು ಇನ್ನಷ್ಟು  ವೇಗಗೊಳಿಸಬೇಕು.

ನಿಮ್ಮ ವಯಸ್ಸಿನಲ್ಲಿ ನಾವಿದ್ದಾಗ ಭಾರತಕ್ಕೆ ಮುಂದುವರೆಯುವ ಸಾಮರ್ಥ್ಯವಿದೆ ಎಂದು  ಹೇಳಿ ನಮ್ಮಷ್ಟಕ್ಕೆ ನಾವೇ ತೃಪ್ತಿಪಟ್ಟುಕೊಳ್ಳುತ್ತಿದ್ದೆವು.  ಆದರೆ ಆ ಪರಿಸ್ಥಿತಿ ಈಗ ಇಲ್ಲ. ದೇಶ ಎಲ್ಲ ರಂಗಗಳಲ್ಲೂ ಅಭಿವೃದ್ಧಿಯಾಗುತ್ತಿದೆ. ಈ ಕಾರಣಕ್ಕಾಗಿ ನೀವು ಅದೃಷ್ಟವಂತರು. 1.4 ಶತಕೋಟಿ ಜನರಿರುವ ದೇಶದಲ್ಲಿ ನೀವು ಅದೃಷ್ಟವಂತರು ಎಂದು ನಾನು ಹೇಳುತ್ತೇನೆ,  ಕಾರಣ, ಇಲ್ಲಿ ನಿಮ್ಮ ಸಂಖ್ಯೆ ಮೂರು ಅಂಕಿಗಳ ಒಳಗೆ ಇದೆ. ಭಾರತ ಈಗ ಕೇವಲ ಮುಂದುವರೆಯುವ ಸಾಮರ್ಥ್ಯವಿರುವ ರಾಷ್ಟ್ರವಾಗಿ ಉಳಿದಿಲ್ಲ ಬದಲಾಗಿ ಮುಂದುವರೆದಿದೆ. ಇದು ನಿಮ್ಮ ಹೆಮ್ಮೆಗೆ ಕಾರಣವಾಗಬೇಕು. 

ಭಾರತ ಈಗ ನಿದ್ರಿಸುತ್ತಿರುವ ದೈತ್ಯನಾಗಿ ಉಳಿದಿಲ್ಲ. ಬದಲಾಗಿ ಚಲಿಸುತ್ತಿದೆ.  ನೀವು ಈ ಚಲನೆಗೆ ಇನ್ನಷ್ಟು ವೇಗ ನೀಡಬೇಕು.

ಪ್ರಸ್ತುತ ಜಾಗತಿಕ ಸಂಸ್ಥೆಗಳು ನಮ್ಮ ನೆರೆಹೊರೆಯ ದೇಶಗಳನ್ನು ಶಿಕ್ಷಿಸುವ ಮನಸ್ಥಿತಿಯಲ್ಲಿವೆ. ಆದರೆ ಈ ಸಂಸ್ಥೆಗಳು ನಮ್ಮ ಬಗ್ಗೆ ಏನು ಹೇಳುತ್ತಾರೆ? ವಿಶ್ವ ಬ್ಯಾಂಕ್, IMF, ಮತ್ತು ವರ್ಲ್ಡ್ ಎಕನಾಮಿಕ್ ಫೋರಮ್ ಗಳು ಡಿಜಿಟಲೀಕರಣ ಮತ್ತು ಇತರ ಹಲವಾರು ಕ್ಷೇತ್ರಗಳಲ್ಲಿ ಭಾರತದ ಗಣನೀಯ ಸಾಧನೆಯನ್ನು ಸಾರ್ವಜನಿಕವಾಗಿ ಪ್ರಶಂಶಿಸುವುದರ ಜೊತೆಗೆ  ಈ ಸಾಧನೆಗಳು ಪ್ರಪಂಚದ ಉಳಿದ ದೇಶಗಳಿಗೆ ಮಾದರಿಯಾಗಿವೆ ಎಂದಿದ್ದಾರೆ.  

ರಾಷ್ಟ್ರವು ಕೆಲವೊಮ್ಮೆ ಕೆಲವು ಸಮಸ್ಯೆಗಳನ್ನು ಎದುರಿಸುತ್ತದೆ.  ನೀವು ಅವುಗಳ ಜೊತೆಗೇ ಬದುಕಬೇಕಾದ ಸ್ಥಿತಿ ಇರುತ್ತದೆ. ಸಂವಿಧಾನದ ಏಕೈಕ ತಾತ್ಕಾಲಿಕ ವಿಧಿಯಾಗಿದ್ಧ 370 ಅನ್ನು ಸಂವಿಧಾನದ ಏಕೈಕ ಹಾಗೂ ಅಂತಿಮ ವಿಧಿ ಎಂದು ನಂಬಲಾಗಿತ್ತು. ಸಂವಿಧಾನದ ಮೇಲೆ ಪ್ರಮಾಣ ವಚನ ಸ್ವೀಕರಿಸಿದ್ದ ಜನರು 370 ನೇ ವಿಧಿಯು ಬದಲಾವಣೆಗೆ ಮೀರಿದ್ದು ಎಂದು ಪ್ರತಿಪಾದಿಸಿದರು. ನಿಮಗೆ ಗೊತ್ತಿರಲಿ ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಡಾ. ಅಂಬೇಡ್ಕರ್ ಅವರು 370 ನೇ ವಿಧಿಯನ್ನು ಹೊರತು ಪಡಿಸಿ ಸಂವಿಧಾನದ ಎಲ್ಲಾ ವಿಧಿಗಳ ಕರಡುಗಳನ್ನು ಅವರೇ ರಚಿಸಿದ್ದಾರೆ.  ಇತಿಹಾಸವನ್ನು ಇಣುಕಿ ನೋಡಿ, ಅವರು ಏಕೆ ನಿರಾಕರಿಸಿದರು ಎಂಬುದನ್ನು ನೀವೇ ಕಂಡುಕೊಳ್ಳುತ್ತೀರಿ. ಈ ಕುರಿತಂತೆ  ಅವರ ಸಂದೇಶವು ತುಂಬಾ ಭಾವನಾತ್ಮಕವಾಗಿತ್ತು. ಆ ಭಾವನೆಗೆ ಈಗ ನಾವು ಸ್ಪಂದಿಸಿದ್ದೇವೆ. 

ಈ ದಶಕದಲ್ಲಿ 370ನೇ ವಿಧಿಯು ಸಂವಿಧಾನದಲ್ಲಿ ಇರುವುದಿಲ್ಲ. ಇದೊಂದು ನಾವು ಊಹಿಸಿರದ ದೊಡ್ಡ ಬದಲಾವಣೆ.

ನಾನು ಈ ಮೂಲಕ ನಿಮಗೆ ಸೂಚಿಸುವುದೇನೆಂದರೆ,  ನೀವು ಇದೀಗ ಹೆಚ್ಚಿನ ಕೊಡುಗೆಯನ್ನು ನೀಡಲು ಸಿದ್ಧರಾಗಬೇಕಿದೆ. ಏಕೆಂದರೆ ನಮಗೆ ನೋವುಂಟು ಮಾಡಿದ್ದ ಕೆಲವು ದೊಡ್ಡ ಅಡೆತಡೆಗಳನ್ನು ನಿವಾರಿಸಲಾಗಿದೆ.  ಸಂವಿಧಾನದಿಂದ  370 ನೇ ವಿಧಿಯನ್ನು ತೆಗೆದು ಹಾಕಿದ್ದರಿಂದ ಏನಾಗಿದೆ ಎಂಬುದನ್ನು ನೋಡಿ. ಜಮ್ಮು ಮತ್ತು ಕಾಶ್ಮೀರವು ಪ್ರಜ್ವಲಿಸುತ್ತಿದೆ. 

ಯಾವ ರಾಜ್ಯದಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸುವುದು ಕಷ್ಟಕರವಾಗಿತ್ತೋ ಅಲ್ಲಿ G20 ಕಾರ್ಯಕ್ರಮಗಳು ನಡೆಯುವುದನ್ನು ನೀವು ಎಂದಾದರೂ ಊಹಿಸಿದ್ದಿರಾ? ವಿಶ್ವ ನಾಯಕರು ಅಲ್ಲಿದ್ದರು. ನಮ್ಮ ಆರ್ಥಿಕತೆ ಮೇಲಕ್ಕೇರುತ್ತಿದೆ. ನಿಮ್ಮ ಪಂಗಡಕ್ಕೆ ಸೇರುವ ಹಲವಾರು IAS, IPS ಅಧಿಕಾರಿಗಳು ಯಾರು ಆ ರಾಜ್ಯವನ್ನು ತಮ್ಮ ಕೇಡರ್ ರಾಜ್ಯವನ್ನಾಗಿ ಆಯ್ಕೆ ಮಾಡಿಕೊಂಡರೋ,  ಯಾರು ಅಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿದರೋ ಅವರಿಗೆ ಸ್ವಂತ ಮನೆ ಕಟ್ಟಿಕೊಳ್ಳಲು ಒಂದು ತುಂಡು ಭೂಮಿಯನ್ನು ಖರೀದಿ ಮಾಡಲು ಅವಕಾಶವಿರಲಿಲ್ಲ. ನಿಮ್ಮ ದೃಷ್ಟಿಕೋನದಿಂದ ಹೇಳುವುದಾದರೆ, ಈಗ ಅಲ್ಲೊಂದು ದೊಡ್ಡ ಬದಲಾವಣೆಯಾಗಿದೆ. ಜಮ್ಮು ಮತ್ತು ಕಾಶ್ಮೀರದ ಬಗ್ಗೆ ದೇಶದ ಜನರಲ್ಲಿ ಭರವಸೆ ಮೂಡಿಸಲಾಗಿದೆ.  ಇದರ ಪರಿಣಾಮವಾಗಿ ಆ ರಾಜ್ಯದ ಆರ್ಥಿಕತೆ ಮತ್ತು ಅಭಿವೃದ್ಧಿಯಲ್ಲಿ ಗಮನಾರ್ಹ ಪ್ರಗತಿಯಾಗಿದೆ. ಈಗ ವರ್ಷದಿಂದ ವರ್ಷಕ್ಕೆ ಲಕ್ಷಾಂತರ ಜನರು ಅಲ್ಲಿಗೆ ಹೋಗುವುದರೊಂದಿಗೆ ಜಮ್ಮು & ಕಾಶ್ಮೀರ ಜನರ ನೆಚ್ಚಿನ ಪ್ರವಾಸಿ ತಾಣವಾಗಿ ಮತ್ತೊಮ್ಮೆ ಹೊರಹೊಮ್ಮಿದೆ. .

ರಾಜಕೀಯದಲ್ಲಿ ಮಹಿಳಾ ಮೀಸಲಾತಿ ಸುಮಾರು ಮೂರು ದಶಕಗಳ ಕಾಲ ನಮ್ಮ ಈಡೇರದ ಬೇಡಿಕೆಯಾಗಿತ್ತು. ಅದಕ್ಕೆ ನಾನು ಯಾರನ್ನೂ ದೂಷಿಸುವುದಿಲ್ಲ. ಆದರೆ ಇವತ್ತು ದೇಶದ ಮಹಿಳೆಯರನ್ನು ನೀತಿ ನಿರೂಪಣೆಯ ಭಾಗವಾಗುವಂತೆ ಮಾಡುವ ದಿಕ್ಕಿನಲ್ಲಿ ಒಂದು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅವರು ಶಾಸಕಾಂಗದ ಭಾಗವಾಗಲಿದ್ದು ಕಾನೂನು ರಚನೆಯಲ್ಲಿ  ಸಕ್ರಿಯ ಪಾತ್ರವಹಿಸಲಿದ್ದಾರೆ.  ಲೋಕಸಭೆಯಲ್ಲಿ ಮೂರನೇ ಒಂದು ಭಾಗದಷ್ಟು ಪ್ರಾತಿನಿಧ್ಯವನ್ನು ಅವರು ಪಡೆಯಲಿದ್ದಾರೆ. ಇದರ ಪ್ರಮಾಣ ರಾಜ್ಯಗಳ ಶಾಸಕಾಂಗದಲ್ಲಿ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಇರುತ್ತದೆ.  ಈ ಮೀಸಲಾತಿಗೆ ಸಾಮಾಜಿಕ ಆಯಾಮಗಳೂ ಇವೆ. ಪರಿಶಿಷ್ಟ ಜಾತಿ, ಪಂಗಡಗಳಿಗೆ ಒಳ ಮೀಸಲಾತಿ ಸಿಗಲಿದೆ.
 
ನನಗೆ ಈ ಬಗ್ಗೆ ಯಾವುದೇ ಸಂದೇಹವಿಲ್ಲ.  ನನಗೆ ಕೇವಲ ಒಬ್ಬ ಮಗಳಿದ್ದಾಳೆ ಎಂಬ ಕಾರಣಕ್ಕೆ ನಾನು ಈ ಮಾತನ್ನು ಹೇಳುತ್ತಿಲ್ಲ. ದೇಶದ ನೀತಿಗಳು ಮಾನವೀಯವಾಗಿರುವಂತೆ ನೋಡಿಕೊಳ್ಳವಲ್ಲಿ ಮಹಿಳೆಯರು ಪರಿಣಾಮಕಾರಿ ಮತ್ತು  ಪ್ರಭಾವಶಾಲಿ ಕೊಡುಗೆ ನೀಡಬಲ್ಲವರಾಗಿದ್ದಾರೆ.  ಅವರು ತಮ್ಮ ದಿನ ನಿತ್ಯದ ಬದುಕಿನಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸುವ ತರಬೇತಿಯನ್ನು ಪಡೆದುಕೊಂಡಿರುತ್ತಾರಾದ್ದರಿಂದ  ಅವರು ನೀತಿ  ನಿರೂಪಣೆಯಲ್ಲಿ ಅವಶ್ಯವಾದ ಇನ್ಪುಟ್ ನೀಡಲು ಶಕ್ತರಾಗಿದ್ದಾರೆ.  ಆದರೆ ಇದನ್ನು ಅವರು ಬಹಿರಂಗವಾಗಿ ಮಾಡಲು ಬಯಸುವುದಿಲ್ಲ. ನೀತಿಗಳ ಕುರಿತು ನಿರ್ಧಾರ ಕೈಗೊಳ್ಳುವ ಕೋಣೆಯೊಳಗಿದ್ದು ಮಾಡಲು ಬಯಸುತ್ತಾರೆ.  ಮಹಿಳಾ ಮೀಸಲಾತಿಯಿಂದ  ಅವರಿಗೆ ಇಂತದೊಂದು ಸಂದರ್ಭ ಒದಗಿ ಬರಲಿದೆ. 

ನನ್ನ ಯುವ ಸ್ನೇಹಿತರೇ,  ಇಷ್ಟೊಂದು ವಿಷಯಗಳ ಬಗ್ಗೆ ನಾನು ನಿಮಗೆ ಸ್ಥೂಲವಾದ ಮಾಹಿತಿ ನೀಡಲು ಕಾರಣವಿಷ್ಟೇ.  ನಿಮ್ಮ ವೃತಿಯನ್ನು ಆರಂಭಿಸುತ್ತಿರುವ ಈ ಸಮಯದಲ್ಲಿ ನಿಮ್ಮ ಪ್ರತಿಭೆ ಮತ್ತು ಸಮರ್ಪಣೆಯನ್ನು ರಾಷ್ಟ್ರ ಹಿತಕ್ಕಾಗಿ ವಿಸ್ತರಿಸಲು ಸಹಾಯ ಮಾಡುವ ಒಂದು ಇಕೋಸಿಸ್ಟಮ್ ನಿಮಗೆ ದೊರೆತಿದೆ ಎಂದು ತಿಳಿಸಲು. ನೀವು ನಂಬಿರುವ ಬದಲಾವಣೆಯನ್ನು ನೀವು ತರಬಹುದು. ಇದೊಂದು ಅಪರೂಪದ ಅವಕಾಶ. ಜನರಿಗೆ ಬದಲಾವಣೆಯಲ್ಲಿ  ನಂಬಿಕೆಯಿದೆ. ಆದರೆ ಆ ಬದಲಾವಣೆ ತರಲು ಬೇಕಾದ ಸಂಪನ್ಮೂಲ, ಅಧಿಕಾರ ಅವರಲ್ಲಿಲ್ಲ. ಆದರೆ ನೀವು ಬದಲಾವಣೆಯನ್ನು ತರುವ ಸ್ಥಾನದಲ್ಲಿದ್ದೀರಿ.

ಇಷ್ಟೆಲ್ಲ ಉತ್ತಮ ಅಂಶಗಳ ಮಧ್ಯೆ,  ನಾವು ಆಂತರಿಕವಾಗಿ ಕೆಲವು ಆತಂಕಕಾರಿ ಸವಾಲುಗಳನ್ನು ಎದುರಿಸಬೇಕಾಗಿದೆ. ನಮ್ಮ ವೈಭವಪೇತ ಮತ್ತು ದೃಢವಾದ ಸಾಂವಿಧಾನಿಕ ಸಂಸ್ಥೆಗಳನ್ನು ಕಳಂಕಗೊಳಿಸುವ ಪ್ರಯತ್ನ ಕೆಲವು ದೇಶ ವಿರೋಧಿ ಶಕ್ತಿಗಳಿಂದ ವ್ಯವಸ್ಥಿತವಾಗಿ ನಡೆಯುತ್ತಿದೆ. ದೇಶದ ಕಾನೂನನ್ನು ಪರಿಪಾಲನೆ ಮಾಡುವ ಬಗ್ಗೆ, ನಮ್ಮ ದೇಶದ ಕ್ರಿಯಾತ್ಮಕ ನ್ಯಾಯ ವ್ಯವಸ್ಥೆ ಬಗ್ಗೆ  ಅಥವಾ ಬಡತನವನ್ನು ಹೋಗಲಾಡಿಸುವ ಮಾರ್ಗದ ಕುರಿತು ನಮಗೆ ಯಾವುದೇ ದೇಶಗಳು ಪಾಠ ಮಾಡುವ ಅವಶ್ಯಕತೆ ಇಲ್ಲ ಎಂದು ನಾನು ಭಾವಿಸಿದ್ದೇನೆ.  ಏಪ್ರಿಲ್ 1, 2020 ರಿಂದ 850 ಮಿಲಿಯನ್ ಜನರಿಗೆ ಉಚಿತ ಆಹಾರ ಧಾನ್ಯಗಳನ್ನು ಲಭ್ಯವಾಗಿಸುತ್ತಿರುವ ನಮ್ಮ ರಾಷ್ಟ್ರಕ್ಕೆ ಜಗತ್ತಿನ ಯಾರಾದರೂ ಹೇಗೆ ಉಪನ್ಯಾಸ ನೀಡಲು ಸಾಧ್ಯ. ಇದು ದೇಶದಲ್ಲಿನ  ಬಡತನವನ್ನು ಸೂಚಿಸುವುದಿಲ್ಲ. ಬದಲಾಗಿ ಇದು ಅವರನ್ನು ಮೇಲಕ್ಕೆತ್ತಲು ಸಹಾಯ ಹಸ್ತ ಚಾಚುವ ನಮ್ಮ ಸರಕಾರದ ಮನಸ್ಥಿತಿ ಯನ್ನು ಸೂಚಿಸುತ್ತದೆ.

ಬೇರೆಯವರು ನಮ್ಮನ್ನು ಮೌಲ್ಯಮಾಪನ ಮಾಡುವುದನ್ನು ನಾವು ಅನುಮತಿಸಲು ಸಾಧ್ಯವಿಲ್ಲ. ಕಾರಣ ಇಷ್ಟೇ, ಅವರಿಗೆ ಐದು ಸಾವಿರ ವರ್ಷಗಳ ಆಶಯಗಳೊಂದಿಗೆ ಈ ದೇಶ ಹೇಗೆ ಕಾರ್ಯ ನಿರ್ವಹಿಸುತ್ತದೆ ಮತ್ತು ಮತ್ತೊಬ್ಬರನ್ನು ಹೇಗೆ ಟ್ರೀಟ್ ಮಾಡುತ್ತದೆ ಎಂದು ಅರಿಯವ ಸಾಮರ್ಥ್ಯವಾಗಲೀ ಅಥವಾ ಸಂಪನ್ನೂಲವಾಗಲಿ ಇಲ್ಲ. ಇತ್ತೀಚಿಗೆ ನಡೆದ G20 ಸಮ್ಮೇಳನದ "ಒಂದು ಭೂಮಿ, ಒಂದು ಕುಟುಂಬ ಒಂದು ಭವಿಷ್ಯ'  ಎಂಬ ಘೋಷವಾಖ್ಯದಲ್ಲಿ ನಮ್ಮ ಆತಿಥ್ಯದ ಅರಿವು ಜಗತ್ತಿಗಾಗಿದೆ. 

ನಾನು ರಾಷ್ಟ್ರವಿರೋಧಿ ನಿರೂಪಣೆಗಳ ಬಗ್ಗೆ ಮಾತನಾಡುವಾಗ ನಾನು ಯಾರು ಮತ್ತು ಯಾವುದರ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ಅರ್ಥಮಾಡಿಕೊಳ್ಳುವಷ್ಟು ತಿಳುವಳಿಕೆ ನಿಮಗೆಲ್ಲ ಇದೆ.  ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಹಾಗೇ  ಊಹಿಸಿಕೊಳ್ಳಿ. ಇದು ಯಾರೊಬ್ಬರ ಪೌರತ್ವವನ್ನೂ ಕಸಿದುಕೊಳ್ಳುವುದಿಲ್ಲ ಎಂಬುದು ಇದನ್ನು ಓದಿದ ಸಾಧಾರಣ ಬುದ್ಧಿಮತ್ತೆಯವರಿಗೂ ಇದು ತಿಳಿದಿರುತ್ತದೆ. ಈ ಕಾಯ್ದೆ ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸುವ ಅವಕಾಶವನ್ನು  ಜಗತ್ತಿನ ಯಾರಿಗೂ ನಿರಾಕರಿಸುವುದಿಲ್ಲ. 

ಹಾಗಾದರೆ ಈ ಕಾಯ್ದೆ ಏನು ಮಾಡುತ್ತದೆ?  ಡಿಸೆಂಬರ್  31,  2014 ರಂದು ಅಥವಾ ಅದಕ್ಕಿಂತ ಮೊದಲು ಭಾರತಕ್ಕೆ ನೆರೆಯ ರಾಷ್ಟ್ರಗಳಾದ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಆಗಮಿಸಿದ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರಿಗೆ ಭಾರತೀಯ ಪೌರತ್ವವನ್ನು ಪಡೆದುಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಹಾಗಂತ ಇದು ಭಾರತಕ್ಕೆ ವಲಸೆ ಬರುವವರಿಗೆ ಆಹ್ವಾನವೆಂದು ಎಂದು ಭಾವಿಸಬೇಕಾಗಿಲ್ಲ.  ನಾವು ಏತಕ್ಕಾಗಿ ಅವರಿಗೆ ಪೌರತ್ವ ನೀಡುತ್ತಿದ್ದೇವೆ. ಅವರು ತಮ್ಮ ಧಾರ್ಮಿಕ ನಂಬಿಕೆಯ ಕಾರಣಗಳಿಗಾಗಿ ಆ ದೇಶಗಳಲ್ಲಿ ಕಿರುಕುಳಕ್ಕೊಳಗಾಗಿದ್ದಾರೆ ಎಂದು. ನಮ್ಮ ರಾಷ್ಟ್ರವು ಸಾವಿರಾರು ವರ್ಷಗಳಿಂದ ಅಂತಹ ಜನರಿಗೆ ಆಶ್ರಯ ನೀಡಿದೆ. ಯಹೂದಿಗಳು ಪಾರ್ಸಿಗಳು, ಝೋರಾಸ್ಟ್ರಿಯನ್ನರು ಅವರು ಶತಮಾನಗಳ ಬೆಳವಣಿಗೆಯನ್ನು ಇಲ್ಲಿ ಕಂಡುಕೊಂಡರು. ಕೆಲವರು ಇದನ್ನು ತಾರತಮ್ಯವೆಂದು ಕರೆಯುತ್ತಾರೆ. ನಾವು ಈ ನಿರೂಪಣೆಗಳನ್ನು ತಟಸ್ಥಗೊಳಿಸಬೇಕಾಗಿದೆ. ಇವು ಅಜ್ಞಾನದಿಂದ ಹೊರಹೊಮ್ಮಿದವುಗಳಲ್ಲ; ಇವುಗಳು ನಮ್ಮ ರಾಷ್ಟ್ರವನ್ನು ನಾಶಮಾಡುವ ತಂತ್ರದ  ಭಾಗವಾಗಿ ಹೊರಹೊಮ್ಮುತ್ತವೆ. ನಮ್ಮ ರಾಷ್ಟ್ರಕ್ಕೆ ಸಮಾನತೆಯ ವಿಷಯದಲ್ಲಿ ಯಾರಿಂದಲೂ ಯಾವುದೇ ಉಪದೇಶದ ಅಗತ್ಯವಿಲ್ಲ. ನಾವು ಸಮಾನತೆಯಲ್ಲಿ ಅಚಲ ನಂಬಿಕೆ ಹೊಂದಿದ್ದೇವೆ.

ಸ್ನೇಹಿತರೇ, ಇಂದು ನಾವು ಲಘುವಾಗಿ ಪರಿಗಣಿಸುವ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವವು ನಮ್ಮ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದ ಅನೇಕ ಅನಾಮಿಕ ವೀರರ ಅಸಾಧಾರಣ ತ್ಯಾಗದ ಫಲಿತಾಂಶವಾಗಿದೆ. ಅದೃಷ್ಟವಶಾತ್ ನಾವು ತಡವಾಗಿಯಾದರೂ ಅವರಿಗೆ ಸಿಗಬೇಕಾದ ಗೌರವ ನೀಡುತ್ತಿದ್ದೇವೆ. ಬಹಳ ಕಾಲದವರೆಗೆ ನಮ್ಮ ಸ್ವಾತಂತ್ರ್ಯ ಚಳವಳಿಯ ಯೋಧರು ಗುರುತಿಸಲ್ಪಡದೇ ಹೋಗಿದ್ದರು. ಆದರೆ ಈಗ ನಾವು ನೇತಾಜಿ ಸುಭಾಷ್ ಬೋಸ್ ಅವರಿಗಾಗಿ ಪರಾಕ್ರಮ್ ದಿವಸ್ ಅನ್ನು ಆಚರಿಸುತ್ತಿದ್ದೇವೆ. ಜೊತೆಗೆ ಅವರ ಪ್ರತಿಮೆಯೂ ಇಂಡಿಯಾ ಗೇಟ್‌ನಲ್ಲಿ ಪ್ರತಿಷ್ಠಾಪಿಸಲ್ಪಟ್ಟಿದೆ. ಅದೇ ರೀತಿ ಬಿರ್ಸಾ ಮುಂಡಾ ಅವರಿಗೆ ಸಮರ್ಪಿತವಾದ ಜನಜಾತಿಯ ಗೌರವ್ ದಿವಸ್ ಅನ್ನು ಆಚರಿಸಲಾಗುತ್ತಿದೆ. 

ಕರ್ಪೂರಿ ಠಾಕೂರ್,  ಪಾರದರ್ಶಕತೆ, ಹೊಣೆಗಾರಿಕೆ ಮತ್ತು ದೇಶದ ಸಮಗ್ರತೆಯ ಸಂಕೇತವಾಗಿದ್ಧ ಚೌಧರಿ ಚರಣ್ ಅವರಿಗೆ,  ರಾಜಕೀಯ ಮುತ್ಸದ್ಧಿ ಪಿವಿ ನರಸಿಂಹ ರಾವ್ ಅವರಿಗೆ ಮತ್ತು ಡಾ ಎಂ ಎಸ್ ಸ್ವಾಮಿನಾಥನ್ ಅವರಿಗೆ  ಮರಣೋತ್ತರವಾಗಿ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ನೀಡಿದ ಕೇಂದ್ರ ಸರಕಾರದ ಕ್ರಮ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಈ ಗೌರವ ಬಹಳ ಹಿಂದೆಯೇ ಈ ಮಹನೀಯರಿಗೆ ಬರಬೇಕಿತ್ತು.

ನನ್ನ ಯುವ ಸ್ನೇಹಿತರೇ-  ನೀವು ವಿವೇಚನಾಶೀಲ ಮನಸ್ಸುಳ್ಳವರು. ನೀವು ಈ ಸಮಾಜದ ಮೇಲೆ ಎಲ್ಲರಿಗಿಂತ ಹೆಚ್ಚು ಪ್ರಭಾವ ಬೀರಬಲ್ಲವರಾಗಿದ್ದೀರಿ. ಜನರು ನಿಮ್ಮನ್ನು ಮಾದರಿಯಾಗಿ ನೋಡುತ್ತಾರೆ. ನಿಮ್ಮನ್ನು ಭೇಟಿಯಾಗುವುದು  ಅವರಿಗೆ ಒಂದು ಸಂತೋಷದ ಕ್ಷಣವಾಗಿರುತ್ತದೆ. ಸಮಾಜದಲ್ಲಿ ನೀವು ನಡೆದುಕೊಳ್ಳುವ ರೀತಿಯನ್ನು ಅನುಕರಣೆಗೆ ಯೋಗ್ಯವೆಂದು ಪರಿಗಣಿಸಲಾಗುತ್ತದೆ. ನೀವು ನಿಮ್ಮ ಕ್ಷೇತ್ರದಲ್ಲಿರುವ ಎಲ್ಲರಿಗೂ ಸ್ಫೂರ್ತಿ ಮತ್ತು ಪ್ರೇರಣೆಯಾಗಲಿದ್ದೀರಿ.  ಅದಕ್ಕೆ ಅನುಗುಣವಾಗಿ ನಿಮ್ಮ ನಡವಳಿಕೆಯನ್ನು ನೀವು ಕಾಪಾಡಿಕೊಳ್ಳಬೇಕು. 

ನೀವು ಹಿರಿಯರ ಮೆಚ್ಚುಗೆಯನ್ನು ಪಡೆಯುವುದರ ಜೊತೆಗೆ ಕಿರಿಯರಿಗೆ ಪ್ರೇರಣೆಯಾಗಬೇಕು. ನಮ್ಮ ನಾಗರಿಕತೆಯಲ್ಲಿ  ಆಳವಾಗಿ ಬೇರೂರಿರುವ ಸೇವಾ ಭಾವ ಮತ್ತು ಸಹಾನುಭೂತಿಗಳೊಂದಿಗೆ ನೀವು ಕೆಲಸ ಮಾಡಿ. ಅದಕ್ಕೆ ಬದ್ಧರಾಗಿರಿ.  ಇದರಿಂದ ನೀವು ಸಮಾಜದಲ್ಲಿ ಬದಲಾವಣೆ ತರಬಹುದು. ನಿಮಗೆ ಆ ಶಕ್ತಿ ಇದೆ. 

ನನ್ನ ಯುವ ಸ್ನೇಹಿತರೇ, ನಿಮ್ಮ ಸಾಮರ್ಥ್ಯದ ಬಗ್ಗೆ ನಮಗೆ ಯಾವುದೇ ಸಂದೇಹಗಳಿಲ್ಲ. ನಿಮ್ಮ ಸಾಮರ್ಥ್ಯವನ್ನು ಈಗಾಗಲೇ ನೀವು ಸಾಬೀತು ಪಡಿಸಿದ್ದೀರಿ. ನಿಮ್ಮ ಅವಕಾಶವನ್ನೂ ಚೆನ್ನಾಗಿ ಗುರುತಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನೀವು ಸಮಾಜದಲ್ಲಿರುವ ಕೆಲವು ಕೊರತೆಗಳನ್ನು ನಿವಾರಿಸಲು ಕಾಳಜಿ ವಹಿಸಬೇಕು. ಉದಾಹರಣೆಗೆ ಹೇಳುವುದಾದರೆ ನಮ್ಮಲ್ಲಿರುವ ಸಾರ್ವಜನಿಕ ಶಿಸ್ತಿನ ಕೊರತೆ. ಇದನ್ನು ನೀವು ಹೋಗಲಾಡಿಸಬಹುದು. . 

ನಮ್ಮ ಪ್ರಜಾಸತ್ತಾತ್ಮಕ ರಾಜಕೀಯಕ್ಕೆ ಸದ್ಯ ದೊಡ್ಡ ಸವಾಲು ಎದುರಾಗುತ್ತಿರುವುದು ದೀರ್ಘ ಕಾಲದವರೆಗೆ ಈ ದೇಶದ ಆಡಳಿತದ  ಭಾಗವಾಗಿಯಾಗಿದ್ದವರು,  ಅಧಿಕಾರದ ಸ್ಥಾನಗಳನ್ನು ಅಲಂಕರಿಸಿದವರು ಮತ್ತು ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡುವ  ಅವಕಾಶ ಹೊಂದಿದ್ದಾಗಲೂ ಏನೂ ಮಾಡದವರಿಂದ. ಅಧಿಕಾರ ಕಳೆದುಕೊಂಡ ತಕ್ಷಣದಿಂದ ಅವರು ದೇಶದಲ್ಲಿ ಗೊಂದಲ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಭಾರತ ಮುಳುಗುತ್ತಿದೆ, ಅದರ ಆರ್ಥಿಕತೆಯು ಒಂದು ಮಟ್ಟವನ್ನು ಮೀರಿ ಬೆಳೆಯಲಾರದು ಎಂಬ ಮಾತಗಳನ್ನಾಡುತ್ತಿದ್ದಾರೆ. ನಾನು ಯಾರನ್ನು ಉಲ್ಲೇಖಿಸುತ್ತಿದ್ದೇನೆಂದು ನಿಮಗೆ ತಿಳಿದಿದೆ.  ಇಲ್ಲಿನ ಭಾಷಣಕಾರರೊಬ್ಬರು ಹೇಳಿದಂತೆ ನಾವು  ಇಂತಹ ಶಕ್ತಿಗಳಿಗೆ ಸವಾಲು ಎಸೆಯಬೇಕಾಗಿದೆ. ಅವರು ಹೇಳಿದ್ದೆ ಅಂತಿಮ ಸತ್ಯ ಎಂದು ತೆಗೆದುಕೊಳ್ಳಲು ಸಾಧ್ಯವಿಲ್ಲ. ಅವರು ಅಧಿಕಾರದಲ್ಲಿದ್ದಾಗ ಏನೂ ಮಾಡಲಿಲ್ಲ. ಏಕೆಂದರೆ ಅವರಲ್ಲಿದ್ದ ಹೆದರಿಕೆ ಮತ್ತು ಪ್ರತಿಯೊಂದು ಕೆಲಸವನ್ನೂ ರಾಜಕೀಯದ ಲಾಭದ ದೃಷ್ಟಿಕೋನದಿಂದ ಮಾಡುವ ಅವರ ಕಾರ್ಯವೈಖರಿ. ಆದರೆ ನಾವು ರಾಷ್ಟ್ರೀಯತೆ ಬೆಳೆಸಬೇಕು ಮತ್ತು ರಾಷ್ಟ್ರೀಯತೆಯನ್ನು ಉತ್ತೇಜಿಸುವ ಪ್ರಿಸ್ಮ್ ನತ್ತ ನೋಡಬೇಕಿದೆ.
ಈ ಜನರಿಗೆ ದೇಶದ ಭಾರತದ ಬೆಳವಣಿಗೆ ಪಥ್ಯವಾಗುತ್ತಿಲ್ಲ. ಅವರಿಗೆ ಅಧಿಕಾರ ಮತ್ತು ಸಾಂವಿಧಾನಿಕ ಬಾಧ್ಯತೆಯ ಸ್ಥಾನಗಳಲ್ಲಿರುವ ಭಾರತದ ಯುವ ಮನಸ್ಸುಗಳಿಂದ ನಿರಾಕರಣೆಯ ಅಗತ್ಯವಿದೆ. 

ಅತ್ಯಂತ ಕಳವಳಕಾರಿ ಮತ್ತು ನೋವಿನ ವಿಷಯವೆಂದರೆ ರಾಷ್ಟ್ರೀಯತೆ ಕುರಿತ ಇವರ ಬದ್ಧತೆ ನೈಜ ಮತ್ತು ವಾಸ್ತವಿಕವಾದುದಲ್ಲ. ಅವರು ತಮ್ಮ ರಾಜಕೀಯ ಅಥವಾ ಸ್ವ ಕಲ್ಯಾಣವನ್ನು ರಾಷ್ಟ್ರೀಯತೆಗಿಂತ ಮೊದಲು ಎಂದು ಭಾವಿಸುತ್ತಾರೆ. ರಾಷ್ಟ್ರೀಯತೆಯೇ ಪ್ರಧಾನ ಕಾಳಜಿ ಎಂಬ ಮನೋಭಾವವನ್ನು ನಾವು ಬೆಳೆಸಿಕೊಳ್ಳಬೇಕಿದೆ. ನಮಗೆ ಯಾವಾಗಲೂ ದೇಶ ಮೊದಲಾಗಬೇಕು ಮತ್ತು ಅದು ಎಲ್ಲಕ್ಕಿಂತ ಉನ್ನತ ಸ್ಥಾನದಲ್ಲಿರಬೇಕು. 

ತಿಳುವಳಿಕೆಯುಳ್ಳ ಜನರು ದೇಶದ ಸಾಮಾನ್ಯ ಜನರ ಅಜ್ಞಾನದ ಲಾಭ ಪಡೆಯಲು ಸತ್ಯವನ್ನು ಮರೆಮಾಚಿ ತಪ್ಪು ಹೇಳಿಕೆ ನೀಡುವುದನ್ನು ತಡೆಯುವುದಕ್ಕಿಂತ ಹೆಚ್ಚಿನ ಸವಾಲು ಪ್ರಜಾಪ್ರಭುತ್ವಕ್ಕೆ ಮತ್ತೊಂದಿಲ್ಲ. ಅಂತಹ ಜನರನ್ನು ದೇಶದ ಮುಂದೆ ಅನಾವರಣಗೊಳಿಸಬೇಕು. ಇಂತಹ ನೀಚ ಪ್ರವೃತ್ತಿಗಳನ್ನು ತಟಸ್ಥಗೊಳಿಸುವ ಮಹತ್ವದ ಸ್ಥಾನದಲ್ಲಿ ಈಗ ನೀವಿದ್ದೀರಿ. ನೀವು ಅದನ್ನು ಯಶಸ್ವಿಯಾಗಿ ಮಾಡುತ್ತೀರಿ ಎಂದು ನನಗೆ ಖಾತ್ರಿಯಿದೆ.

ನಮ್ಮ ರಾಷ್ಟ್ರೀಯ ವ್ಯವಹಾರಗಳು, ಭದ್ರತಾ ಕಾಳಜಿಗಳು ಮತ್ತು ನಮ್ಮ ವಿದೇಶಾಂಗ ನೀತಿಯ ಮೇಲೆ ಯಾವುದೇ ರಾಜಕೀಯ ಸಲ್ಲದು. ಜಾಗತಿಕವಾಗಿ ನಮ್ಮ ದೇಶ ಕಾಣುತ್ತಿರುವ ಪ್ರಗತಿಯ ವೇಗ ತನ್ನ ಗತಿ ಕಳೆದುಕೊಳ್ಳದಂತೆ ನಾವು ಗಮನಹರಿಸಬೇಕಿದೆ. 

ನನ್ನ ಪ್ರೀತಿಯ ಯುವ ಸ್ನೇಹಿತರೇ, ನೀವು ಕನಸು ಕಂಡಿರುವ ರೂಪಾಂತರವನ್ನು ಬದಲಾವಣೆಯನ್ನು ನೀವು ತರಬಹುದು.  ಏಕೆಂದರೆ  ವ್ಯವಸ್ಥೆಯು ನಿಮಗೆ ಆ ದಿಕ್ಕಿನಲ್ಲಿ ಕಾರ್ಯ ನಿರ್ವಹಿಸಲು ಸಾಕಷ್ಟು ಇಕ್ವಿಟಿಯನ್ನು ಸೃಷ್ಟಿಸಿದೆ.
ಸರ್ದಾರ್ ಪಟೇಲ್ ಒಮ್ಮೆ ಹೇಳಿದ್ದರು,  "ಶಕ್ತಿಯ ಅನುಪಸ್ಥಿತಿಯಲ್ಲಿ ನಂಬಿಕೆ ಯಾವುದೇ ಪ್ರಯೋಜನಕ್ಕೆ ಬಾರದು. ಹಾಗಾಗಿ ಯಾವುದೇ ದೊಡ್ಡ ಕೆಲಸವನ್ನು ಸಾಧಿಸಲು ನಂಬಿಕೆ ಮತ್ತು ಶಕ್ತಿ ಎರಡೂ ಅತ್ಯಗತ್ಯ."
ಅವರು ಕಾನ್ಸ್ಟಿಟ್ಯುಯೆಂಟ್ ಅಸೆಂಬ್ಲಿಯಲ್ಲಿ ಈ ಕುರಿತು ಮತ್ತಷ್ಟು ಹೇಳಿದರು. "ಸ್ವತಂತ್ರವಾದ, ಮುಕ್ತವಾಗಿ ತನ್ನ ಅನಿಸಿಕೆ ವ್ಯಕ್ತಪಡಿಸುವ ಅಖಿಲ ಭಾರತ ಸೇವೆ ಇಲ್ಲದೇ  ಹೋದರೆ ನೀವು ಯುನೈಟೆಡ್ ಇಂಡಿಯಾ ಅನ್ನು ಹೊಂದಲು ಸಾಧ್ಯವಿಲ್ಲ."   ಎಂದಿದ್ದರು.  ದೇಶದ ಐರನ್ ಮ್ಯಾನ್ ಗೆ ಪುಷ್ಪ ನಮನ ಸಲ್ಲಿಸುವಾಗ ನಾನು ಇದನ್ನು ಅಲ್ಲಿ ಓದಿದೆ. ಎಂದಿಗೂ ಮರೆಯಬೇಡಿ,  ರಾಜ ಪ್ರಭುತ್ವಗಳ ಏಕೀಕರಣದಂತಹ ಅತ್ಯಂತ ಕಠಿಣ ಮತ್ತು ವಾಸ್ತವಿಕವಾಗಿ ಅಸಾಧ್ಯವೆನ್ನುವಂತಹ  ಕಾರ್ಯವನ್ನು ಅವರು ಸಾಧಿಸಿದರು. ನೀವು ಅಂದು ಏನು ನಡೆಯಿತು ಎಂಬುದರ ಸಂಪೂರ್ಣ ಮಾಹಿತಿ ಅರಿತುಕೊಳ್ಳಬೇಕಿದೆ. ಜಮ್ಮು ಮತ್ತು ಕಾಶ್ಮೀರದ ಏಕೀಕರಣದಿಂದ ಅವರನ್ನು ಏಕೆ ದೂರ ಇಡಲಾಯಿತು. ಈ ಎರಡು ಸನ್ನಿವೇಶಗಳನ್ನು ಗಮನಿಸಿ.  ಆರ್ಟಿಕಲ್ 370 ಅನ್ನು ಸಂವಿಧಾನದಲ್ಲಿ ಸೇರಿಸುವಾಗ ಡಾ. ಅಂಬೇಡ್ಕರ್ ಅವರನ್ನು ದೂರವಿಡಲಾಯಿತು. ಅದೇ ರೀತಿ ಸರ್ದಾರ್ ಪಟೇಲ್ ಅವರ ಖಾತೆಯಿಂದ ಜಮ್ಮು ಮತ್ತು ಕಾಶ್ಮೀರವನ್ನು ತೆಗೆದುಹಾಕಲಾಯಿತು.  ಈ ಎರಡು ಕಾರಣಗಳಿಂದಾಗಿ ಹೇಗೆ  ನಾವು ದಶಕಗಳ ಕಾಲ ಬಳಲಿದೆವೆಂಬುದನ್ನು ಅರಿತುಕೊಳ್ಳಿ.

ಇತರರು ಎದುರಿಸದ ಮತ್ತೊಂದು ಪರಿಸ್ಥಿತಿಯನ್ನು ನೀವು ಎದುರಿಸುತ್ತೀರಿ. ನೀವು ಕಿರಿಯ ಶ್ರೇಣಿಯಲ್ಲಿದ್ದರೂ ನಿಮ್ಮ ಮುಂದಿರುವ ಸವಾಲು ಕಠಿಣವಾಗಿರುತ್ತದೆ. ನಾನು ವಿಚ್ಛಿದ್ರಕಾರಕ ತಂತ್ರಜ್ಞಾನಗಳಾದ  ಕೃತಕ ಬುದ್ಧಿಮತ್ತೆ, ಇಂಟರ್ನೆಟ್ ಆಫ್ ಥಿಂಗ್ಸ್, ಯಂತ್ರ ಕಲಿಕೆ, ಬ್ಲಾಕ್‌ಚೈನ್ ಮತ್ತು ಮುಂತಾದವುಗಳ  ಬಗ್ಗೆ ಉಲ್ಲೇಖಿಸುತ್ತಿದ್ದೇನೆ. ಇದು ನಿಮ್ಮ ಬಾಧ್ಯತೆಯಾಗಿದೆ ಏಕೆಂದರೆ ನಾವು ಮತ್ತೊಂದು ಕೈಗಾರಿಕಾ ಕ್ರಾಂತಿಯಂತಹ ಸನಿಹದಲ್ಲಿದ್ದೇವೆ. ಈ ತಂತ್ರಜ್ಞಾನಗಳು ಸವಾಲು ಮತ್ತು ಅವಕಾಶಗಳೆರಡನ್ನೂ ನೀಡುತ್ತವೆ. ನೀವು ಸವಾಲುಗಳನ್ನು ಸಾರ್ವಜನಿಕ ಒಳಿತಿಗಾಗಿ ಅವಕಾಶಗಳಾಗಿ ಪರಿವರ್ತಿಸಬೇಕು. ನೀವು ಅದನ್ನು ಮಾಡುತ್ತೀರಿ ಎಂದು ನನಗೆ ಖಾತ್ರಿಯಿದೆ.

ಈ ಕಠಿಣ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ ಪ್ರತಿಯೊಬ್ಬರನ್ನೂ ಅಭಿನಂದಿಸುತ್ತೇನೆ. 

ಈ ತರಬೇತಿ ವೇಳೆಯಲ್ಲಿ ನಿರ್ದೇಶಕರು ಮತ್ತು ಅಧ್ಯಾಪಕರು ನಿಮ್ಮೊಂದಿಗೆ ಅಸಮಂಜಸವಾಗಿ  ಅಥವಾ ಕಠೋರವಾಗಿರುವ ನಡೆದುಕೊಂಡರೆಂಬ ಆಲೋಚನೆಗಳು ಒಂದು ವೇಳೆ ಈಗ ನಿಮ್ಮಲ್ಲಿದ್ದರೆ,  ಅವು ಬದಲಾಗಿ, ನೀವು ಅವರನ್ನು  ನಿಮ್ಮ ಜೀವನದುದ್ದಕ್ಕೂ ನೆನೆಯುತ್ತೀರಿ ಮತ್ತು ಅವರಿಗೆ ಕೃತಜ್ಞರಾಗಿರುತ್ತೀರಿ. 

ನೀವು ಇತರರನ್ನು ಪ್ರೇರೇಪಿಸುವುದನ್ನು ಮುಂದುವರಿಸಿ. ನೆನಪಿರಲಿ, ನಿಮ್ಮಲ್ಲಿನ ಪ್ರತಿಯೊಬ್ಬರೂ ನಿಮ್ಮ ಕುಟುಂಬಗಳಿಗೆ, ನಿಮ್ಮ ಸ್ನೇಹಿತರಿಗೆ, ನಿಮ್ಮ ಸಮುದಾಯಕ್ಕೆ ಹಾಗೂ ನಿಮ್ಮ ಪ್ರದೇಶಕ್ಕೆ ಆದರ್ಶಪ್ರಾಯರಾಗಿದ್ದೀರಿ. ನಿಮ್ಮ ಕಾರ್ಯ ಸ್ಥಾನಗಳಲ್ಲಿಯೂ ನೀವು ಯಾವಾಗಲೂ ಆದರ್ಶಪ್ರಾಯರಾಗಿರುತ್ತೀರಿ. ಹಾಗಾಗಿ ನಿಮ್ಮ ಕೆಲಸ ಮತ್ತು ಬದ್ಧತೆಯಿಂದ ಇತರರನ್ನು ಪ್ರೇರೇಪಿಸಿ ಮತ್ತು ನಿಮ್ಮ ಸುತ್ತಲಿರುವವರ ಜೀವನದಲ್ಲಿ ಧನಾತ್ಮಕ ಬದಲಾವಣೆ ತರಲು ಶ್ರಮಿಸಿ.

ಧನ್ಯವಾದ. ಜೈ ಹಿಂದ್!

*****



(Release ID: 2017400) Visitor Counter : 31


Read this release in: English , Urdu , Hindi , Odia