ಕಲ್ಲಿದ್ದಲು ಸಚಿವಾಲಯ
ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್)ನ ಹೊಸ ಸಿಎಸ್ಆರ್ ಉಪಕ್ರಮಗಳನ್ನು ಪ್ರಾರಂಭಿಸಿದ ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ
Posted On:
07 MAR 2024 7:00PM by PIB Bengaluru
ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು ಇಂದು ಕಲ್ಲಿದ್ದಲು ಸಚಿವಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಐಎಲ್‌ನ ಹೊಸ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಉಪಕ್ರಮಗಳಿಗೆ ಚಾಲನೆ ನೀಡಿದರು. ಕಲ್ಲಿದ್ದಲು ಇಲಾಖೆ ಕಾರ್ಯದರ್ಶಿ ಶ್ರೀ ಅಮೃತ್ ಲಾಲ್ ಮೀನಾ (ವಿಡಿಯೋ ಕಾನ್ಫೆರೆನ್ಸ್ ಮೂಲಕ ಭಾಗಿ), ಕಲ್ಲಿದ್ದಲು ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀ ರೂಪಿಂದರ್ ಬ್ರಾರ್, ಸಚಿವಾಲಯದ ಹಿರಿಯ ಅಧಿಕಾರಿಗಳು, ಸಿಐಎಲ್, ಎನ್‌ಎಲ್‌ಸಿಐಎಲ್, ಎಸ್‌ಸಿಸಿಎಲ್ ಅಧಿಕಾರಿಗಳು ಮತ್ತು ಸಿಎಸ್‌ಆರ್ ಪಾಲುದಾರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಿಎಸ್‌ಆರ್‌ನ ಮೊದಲ ಉಪಕ್ರಮದಡಿ 70 ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್‌ರೂಮ್‌ಗಳನ್ನು ಪ್ರಾರಂಭಿಸುವ ಮೂಲಕ ಸಿಐಎಲ್ ಗುಣಮಟ್ಟದ ಶಿಕ್ಷಣದ ಕಡೆಗೆ ತನ್ನ ಬದ್ಧತೆಯನ್ನು ತೋರಿದೆ. ಇದು ಕಳೆದ 31.01.2024 ರಂದು ಜಾರ್ಖಂಡ್‌ನ 11 ಜಿಲ್ಲೆಗಳಿಗೆ ಪ್ರಾರಂಭಿಸಲಾದ ಉಪಕ್ರಮದ ಮುಂದುವರಿಕೆಯ ಭಾಗವಾಗಿದೆ. ಒಟ್ಟು 2.42 ಕೋಟಿ ರೂ. ಮೊತ್ತದ ಈ ಯೋಜನೆಯನ್ನು ಕೇಂದ್ರ ಸರ್ಕಾರದ ಮಿನಿರತ್ನ ಸರ್ಕಾರಿ ಸಾರ್ವಜನಿಕ ಉದ್ದಿಮೆಯಾದ ಇಡಿಸಿಐಎಲ್ (ಇಂಡಿಯಾ) ಲಿಮಿಟೆಡ್ ಮೂಲಕ ಕಾರ್ಯಗತಗೊಳಿಸಲಾಗುತ್ತದೆ. ಈ ಉಪಕ್ರಮವು ವಿದ್ಯಾರ್ಥಿಗಳಲ್ಲಿ ಕಲಿಕೆಯ ಫಲಿತಾಂಶಗಳನ್ನು ಸುಧಾರಿಸುವ ಜತೆಗೆ ಖಾಸಗಿ ಶಾಲೆಗಳಿಗೆ ಹೋಲಿಸಿದರೆ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ನಡುವೆ ಇರುವ ಡಿಜಿಟಲ್ ಸೌಲಭ್ಯದ ಅಂತರವನ್ನು ತಗ್ಗಿಸುವ ನಿರೀಕ್ಷೆ ಇದೆ.
ಇದೇ ಸಂದರ್ಭದಲ್ಲಿ ʼಸಿಐಎಲ್ - ಕೋಲ್ ಇಂಡಿಯಾ ಲೋಕ ಸೇವಾ ಪ್ರೋತ್ಸಾಹನ್ ಯೋಜನೆʼ ಎಂಬ ಹೊಸ ಸಿಎಸ್ಆರ್ ಯೋಜನೆಗೂ ಚಾಲನೆ ನೀಡಲಾಯಿತು. 2024ರಿಂದ 2026ರ ಅವಧಿಯಲ್ಲಿ ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವಾ/ ಅರಣ್ಯ ಸೇವಾ ಪರೀಕ್ಷೆಗಳಲ್ಲಿ ಪೂರ್ವಭಾವಿ ಪರೀಕ್ಷೆ ಉತ್ತೀರ್ಣರಾದ ಗಣಿಬಾಧಿತ ಪ್ರದೇಶಗಳ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಹಾಗೂ ಮಹಿಳಾ/ ತೃತೀಯ ಲಿಂಗಿ ಅಭ್ಯರ್ಥಿಗಳಿಗೆ 1 ಲಕ್ಷ ರೂ. ಆರ್ಥಿಕ ನೆರವು ಒದಗಿಸುವುದು ಯೋಜನೆಯ ಉದ್ದೇಶ. ಈ ಆರ್ಥಿಕ ನೆರವು ಪಡೆಯಬಯಸುವ ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯ 8 ಲಕ್ಷ ರೂ.ಗಿಂತಲೂ ಕಡಿಮೆ ಇರಬೇಕು. ಯುಪಿಎಸ್‌ಸಿ 2024ರಲ್ಲಿ ನಡೆಸುವ ನಾಗರಿಕ ಸೇವಾ/ ಅರಣ್ಯ ಸೇವಾ ಪೂರ್ವಭಾವಿ ಪರೀಕ್ಷೆಗಳ ಫಲಿತಾಂಶ ಪ್ರಕಟಗೊಂಡ ಬಳಿಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಲಿದೆ. ಕೋಲ್ ಇಂಡಿಯಾ ಲಿಮಿಟೆಡ್‌ನ ಅಂಗಸಂಸ್ಥೆಯಾದ ಕೇಂದ್ರೀಯ ಗಣಿ ಯೋಜನೆ ಮತ್ತು ವಿನ್ಯಾಸ ಸಂಸ್ಥೆ ಲಿಮಿಟೆಡ್ (ಸೆಂಟ್ರಲ್ ಮೈನ್ ಪ್ಲಾನಿಂಗ್ ಆಂಡ್ ಡಿಸೈನ್ ಇನ್‌ಸ್ಟಿಟ್ಯೂಟ್ ಲಿಮಿಟೆಡ್- ಸಿಎಂಪಿಡಿಐ) ಅಭಿವೃದ್ಧಿಪಡಿಸಿದ ನಿರ್ದಿಷ್ಟ ಪೋರ್ಟಲ್ ಮೂಲಕ ಇಡೀ ಅರ್ಜಿ ಸ್ವೀಕೃತಿ ಪ್ರಕ್ರಿಯೆಯನ್ನು ನಡೆಯಲಿದೆ. ಇದೇ ವೇಳೆ, ನಿರ್ದಿಷ್ಟ ಪೋರ್ಟಲ್ ಸಹ ಪ್ರಾರಂಭಿಸಲಾಯಿತು.
ಜಾರ್ಖಂಡ್ ಕಲ್ಲಿದ್ದಲು ಗಣಿಗಾರಿಕೆಗೆ ಪ್ರಮುಖ ರಾಜ್ಯವಾಗಿದ್ದು, ಕೋಲ್ ಇಂಡಿಯಾ ಲಿಮಿಟೆಡ್‌ನ ಹಲವಾರು ಕಲ್ಲಿದ್ದಲು ಗಣಿ ಚಟುವಟಿಕೆಗಳ ನೆಲೆಯಾಗಿದೆ. ಆ ಹಿನ್ನೆಲೆಯಲ್ಲಿ "ನನ್ಹಾ ಸಾ ದಿಲ್" ಎಂಬ ಹೊಸ ಯೋಜನೆಗೂ ಗೌರವಾನ್ವಿತ ಕಲ್ಲಿದ್ದಲು ಸಚಿವರು ಚಾಲನೆ ನೀಡಿದರು. ಈ ಯೋಜನೆಯಡಿ ಅಗತ್ಯವಿರುವವರಿಗೆ ಜನ್ಮಜಾತ ಹೃದಯ ಸಂಬಂಧಿ ಕಾಯಿಲೆಗೆ (ಸಿಎಚ್‌ಡಿ) ಶಸ್ತ್ರಚಿಕಿತ್ಸೆ ಸೌಲಭ್ಯ ಕಲ್ಪಿಸುವ ಸಮಗ್ರ ಉಪಕ್ರಮವಾಗಿದೆ. ಶಸ್ತ್ರಚಿಕಿತ್ಸೆ ವೆಚ್ಚ ದುಬಾರಿ ಎಂಬ ಕಾರಣಕ್ಕೆ ಸದ್ಯ ಸಿಎಚ್‌ಡಿ ಸಮಸ್ಯೆಯಿಂದ ಬಳಲುತ್ತಿರುವ 2.40 ಲಕ್ಷ ಮಕ್ಕಳ ಪೈಕಿ ಶೇ. 5ರಷ್ಟು ಮಕ್ಕಳಷ್ಟೇ ಚಿಕಿತ್ಸೆ ಪಡೆಯುತ್ತಿವೆ. ಮರಣ ಪ್ರಮಾಣದಲ್ಲಿ ಜನ್ಮಜಾತ ಹೃದಯ ಸಂಬಂಧಿ ಸಮಸ್ಯೆಯಿಂದ ಸಾವಿಗೀಡಾಗುತ್ತಿರುವವರ ಪ್ರಮಾಣ ಮೂರನೇ ಒಂದರಷ್ಟಿದೆ. ಆರಂಭಿಕ ಪತ್ತೆಯಿಂದ ಶೀಘ್ರವಾಗಿ ಗುಣಪಡಿಸಲು ಅವಕಾಶವಾಗಲಿದೆ. ಆ ಹಿನ್ನೆಲೆಯಲ್ಲಿ ಯೋಜನೆಯಡಿ ಜಾರ್ಖಂಡ್‌ನ 4 ಜಿಲ್ಲೆಗಳ 176 ಗ್ರಾಮ/ಬ್ಲಾಕ್ ಮಟ್ಟ ಮತ್ತು 16 ಜಿಲ್ಲಾ ಮಟ್ಟದ ಶಿಬಿರಗಳ ಮೂಲಕ ಒಟ್ಟು 18000 ಮಕ್ಕಳನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಗುತ್ತದೆ. ತಪಾಸಣೆ ವೇಳೆ ಕಾಯಿಲೆ ದೃಢಪಟ್ಟ ಮಕ್ಕಳಿಗೆ ಯೋಜನೆಯಡಿ ಶಸ್ತ್ರಚಿಕಿತ್ಸೆಗೆ ನೆರವು ಒದಗಿಸಲಾಗುತ್ತದೆ. ಒಟ್ಟು 9.37 ಕೋಟಿ ರೂ. ವೆಚ್ಚದಲ್ಲಿ ಯೋಜನೆಯಡಿ ಧನ್ಬಾದ್, ರಾಂಚಿ, ಹಜಾರಿಬಾಗ್ ಮತ್ತು ಗಿರಿದಿಹ್ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಕೈಗೊಳ್ಳುವುದು ಹಾಗೂ ಅದರ ಪ್ರಭಾವದ ಆಧಾರದ ಮೇಲೆ ಮುಂದಿನ ಕ್ರಮ ವಹಿಸಲಿದೆ. ಈ ವೇಳೆ ಮಕ್ಕಳ ಹೃದ್ರೋಗ ಚಿಕಿತ್ಸೆಗೆ ಸಂಬಂಧ ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಗೆ ತರಬೇತಿ ಸಿಗುವುದು ಯೋಜನೆಯ ಹೆಚ್ಚುವರಿ ಪ್ರಯೋಜನವೆನಿಸಿದೆ. ʼಬಿಲ್ಲಿಂಗ್ ಕೌಂಟರ್‌ಗಳಿಲ್ಲದ ಆಸ್ಪತ್ರೆಗಳು' ಮಾದರಿಯ ಅಡಿಯಲ್ಲಿ ಉಚಿತ ಆರೋಗ್ಯ ಸೇವೆಗಳನ್ನು ಒದಗಿಸುತ್ತಿರುವ ಶ್ರೀ ಸತ್ಯ ಸಾಯಿ ಹೆಲ್ತ್ ಆ್ಯಂಡ್ ಎಜುಕೇಶನ್ ಟ್ರಸ್ಟ್ (ಎಸ್‌ಎಸೆಎಸ್ಎಚ್‌ಇಟಿ) ಮೂಲಕ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಎಸ್‌ಎಸ್‌ಎಸ್‌ಎಚ್‌ಇಟಿ ಈವರೆಗೆ 28,000 ಮಕ್ಕಳ ಹೃದಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದೆ.
"ನನ್ಹಾ ಸಾ ದಿಲ್" ಯೋಜನೆಯು ಸಿಐಎಲ್‌ನ ವಿಶಿಷ್ಟವಾದ ಪ್ರಮುಖ ಯೋಜನೆಯಾ "ತಲಸ್ಸೇಮಿಯಾ ಬಾಲ ಸೇವಾ ಯೋಜನೆ" ಯಶೋಗಾಥೆಯ ಮುಂದುವರಿದ ಭಾಗವಾಗಿದೆ. ಈ ಯೋಜನೆಯಡಿ 500 ಅಸ್ಥಿಮಜ್ಜೆ ಕಸಿಗಳನ್ನು ಯಶಸ್ವಿಯಾಗಿ ನಡೆಸಿರುವುದು ಮೈಲಿಗಲ್ಲು ಎನಿಸಿದೆ. ಕೋಲ್ ಇಂಡಿಯಾ ಲಿಮಿಟೆಡ್ 2017ರಲ್ಲಿ ಅಸ್ಥಿಮಜ್ಜೆ ಕಸಿ ಕಾರ್ಯಾಚರಣೆಗಳನ್ನು ಬೆಂಬಲಿಸುವ ಮೂಲಕ ತಲಸ್ಸೇಮಿಯಾ ಚಿಕಿತ್ಸೆಗಾಗಿ ಸಿಎಸ್‌ಆರ್ ಯೋಜನೆಯನ್ನು ಕೈಗೆತ್ತಿಕೊಂಡ ಮೊದಲ ಸರ್ಕಾರಿ ಸಾರ್ವಜನಿಕ ಉದ್ದಿಮೆಯಾಗಿದೆ. ಅರ್ಹರಿಗೆ ಅಸ್ಥಿಮಜ್ಜೆ ಚಿಕಿತ್ಸೆಗಾಗಿ ತಲಾ 10 ಲಕ್ಷ ರೂ. ನೆರವು ನೀಡಲಾಗುತ್ತದೆ. ಕುಟುಂಬದ ವಾರ್ಷಿಕ ಆದಾಯ 8 ಲಕ್ಷ ರೂ.ಗಿಂತ ಕಡಿಮೆ ಇರುವವರು ಈ ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. 70 ಕೋಟಿ ರೂ. ವೆಚ್ಚದ ಯೋಜನೆಯು ಸದ್ಯಕ್ಕೆ 3ನೇ ಹಂತದಲ್ಲಿದೆ. ಇತ್ತೀಚೆಗೆ, ಯೋಜನೆಯಡಿಯಲ್ಲಿ 500ನೇ ಅಸ್ಥಿಮಜ್ಜೆ ಕಸಿ ಚಿಕಿತ್ಸೆ ಪೂರ್ಣಗೊಂಡಿದೆ. ಪ್ರಸ್ತುತ ದೇಶಾದ್ಯಂತ ಇರುವ 11 ಪ್ರಮುಖ ಆಸ್ಪತ್ರೆಗಳು ಈ ಕಾರ್ಯಕ್ರಮದಲ್ಲಿ ಪಾಲುದಾರಿಕೆ ಹೊಂದಿವೆ. ಒಟ್ಟಾರೆ ಮಾರ್ಗದರ್ಶಿ ಚೌಕಟ್ಟನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಒದಗಿಸುತ್ತದೆ. ʼತಲಸ್ಸೇಮಿಕ್ ಇಂಡಿಯಾʼ ಹೆಸರಿನ ಎನ್‌ಜಿಒ ಕಳೆದ 25 ವರ್ಷಗಳಿಂದ ತಲಸ್ಸೇಮಿಯಾ ಚಿಕಿತ್ಸಾ ಕ್ಷೇತ್ರದಲ್ಲಿ ಪಾಲುದಾರ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿವೆ. ಈ ಯೋಜನೆಯು 2024ರ ಜನವರಿಯಲ್ಲಿ "ಇಂಧನ, ಶಕ್ತಿ ಮತ್ತು ಇಂಧನʼ ವಲಯದ ಸಿಆರ್‌ಎಸ್ ವಿಭಾಗದಡಿ ಪ್ರತಿಷ್ಠಿತ ಅಂತಾರಾಷ್ಟ್ರೀಯ 'ಗ್ರೀನ್ ವರ್ಲ್ಡ್ ಎನ್ವಿರಾನ್ಮೆಂಟ್ ಅವಾರ್ಡ್'ಗೆ ಪಾತ್ರವಾಗಿದೆ.
ಕೋಲ್ ಇಂಡಿಯಾ ಲಿಮಿಟೆಡ್ ಈ ರೀತಿಯ ಸಿಎಸ್‌ಆರ್ ಉಪಕ್ರಮಗಳ ಮೂಲಕ ಸಮಾಜದಲ್ಲಿ ಅಗತ್ಯವಿರುವ ಜನರ ಜೀವನದಲ್ಲಿ ಸೌಲಭ್ಯ ಕಲ್ಪಿಸುವ ಮೂಲಕ ಮರಳಿ ಸಂತೋಷ ಮೂಡಿಸುತ್ತಿದೆ. ದೇಶದಲ್ಲಿನ ಅತಿ ದೊಡ್ಡ ಕಾರ್ಪೊರೇಟ್ ಖರ್ಚುದಾರರಲ್ಲಿ ಸ್ಥಿರವಾಗಿ ಕಾಣಿಸಿಕೊಂಡಿರುವ ಕಂಪನಿಯು ತನ್ನ ಅಂಗಸಂಸ್ಥೆಗಳನ್ನು ಒಳಗೊಂಡಂತೆ 2014-15ರಿಂದ 2022-23ರವರೆಗಿನ ಒಂಬತ್ತು ವರ್ಷಗಳ ಅವಧಿಯಲ್ಲಿ ಸಿಎಸ್‌ಆರ್‌ನಡಿ 5000 ಕೋಟಿ ರೂ.ಗಳನ್ನು ಆರೋಗ್ಯ, ನೈರ್ಮಲ್ಯ ಮತ್ತು ಪೋಷಣೆ, ಶಿಕ್ಷಣ ಮತ್ತ ಜೀವನೋಪಾಯ, ಗ್ರಾಮೀಣಾಭಿವೃದ್ಧಿ, ಕ್ರೀಡಾ ಚಟುವಟಿಕೆಗೆ ಉತ್ತೇಜನ, ಪರಿಸರ ಸಂರಕ್ಷಣೆ, ವಿಪತ್ತು ನಿರ್ವಹಣೆ ಕ್ಷೇತ್ರಗಳಲ್ಲಿ ವಿನಿಯೋಗಿಸಿದೆ. ಆರೋಗ್ಯ, ಶಿಕ್ಷಣ, ಕೌಶಲ್ಯ ಹಾಗೂ ಕ್ರೀಡಾ ಕ್ಷೇತ್ರಕ್ಕೆ ಒತ್ತು ನೀಡಿ ಫಲಾನುಭವಿಗಳ ಜೀವನ ಮಟ್ಟ ಸುಧಾರಣೆಗೆ ಮಹತ್ವದ ಪ್ರಯತ್ನ ನಡೆಸಿದ ಕಲ್ಲಿದ್ದಲು ಸಚಿವಾಲಯದ ಕಾರ್ಯದರ್ಶಿ ಶ್ರೀ ಮೀನಾ ಅವರ ನೇತೃತ್ವದ ತಂಡದ ಕಾರ್ಯವನ್ನು ಗೌರವಾನ್ವಿತ ಕೇಂದ್ರ ಸಚಿವರು ಶ್ಲಾಘಿಸಿದ್ದಾರೆ.
****
(Release ID: 2012559)
Visitor Counter : 73