ಪ್ರಧಾನ ಮಂತ್ರಿಯವರ ಕಛೇರಿ

ಅಸ್ಸಾಂನ ಗುವಾಹಟಿಯಲ್ಲಿ 11,000 ಕೋಟಿ ರೂ.ಗಳ ಮೌಲ್ಯದ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಿದ  ಪ್ರಧಾನಮಂತ್ರಿ


ಮಾ ಕಾಮಾಖ್ಯ ದಿವ್ಯ ಲೋಕ ಪರಿಯೋಜನೆಗೆ ಶಂಕುಸ್ಥಾಪನೆ

3400 ಕೋಟಿ ರೂ.ಗೂ ಅಧಿಕ ಮೌಲ್ಯದ ಬಹು ರಸ್ತೆ ಮೇಲ್ದರ್ಜೆಗೇರಿಸುವ ಯೋಜನೆಗಳಿಗೆ ಶಂಕುಸ್ಥಾಪನೆ

ಕ್ರೀಡೆ ಮತ್ತು ವೈದ್ಯಕೀಯ ಮೂಲಸೌಕರ್ಯವನ್ನು ಉತ್ತೇಜಿಸುವ ಯೋಜನೆಗಳಿಗೆ ಶಂಕುಸ್ಥಾಪನೆ

"ಮಾ ಕಾಮಾಖ್ಯ ದರ್ಶನಕ್ಕಾಗಿ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗುವುದರೊಂದಿಗೆ  ಈಶಾನ್ಯದಲ್ಲಿ  ಅಸ್ಸಾಂ ಪ್ರವಾಸೋದ್ಯಮದ ಹೆಬ್ಬಾಗಿಲಾಗಲಿದೆ"

"ನಮ್ಮ ತೀರ್ಥಯಾತ್ರೆಗಳು, ದೇವಾಲಯಗಳು ಮತ್ತು ನಂಬಿಕೆಯ ಸ್ಥಳಗಳು ನಮ್ಮ ನಾಗರಿಕತೆಯ ಸಾವಿರಾರು ವರ್ಷಗಳ ಪ್ರಯಾಣದ ಅಳಿಸಲಾಗದ ಗುರುತುಗಳಾಗಿವೆ"

"ಜೀವನವನ್ನು ಸುಲಭಗೊಳಿಸುವುದು, ಅನುಕೂಲಕರ ವಾತಾವರಣ ನಿರ್ಮಾಣ ಮಾಡುವುದು ಪ್ರಸ್ತುತ ಸರ್ಕಾರದ ಆದ್ಯತೆಯಾಗಿದೆ"

"ಐತಿಹಾಸಿಕ ಪ್ರಸ್ತುತತೆಯ, ಮಹತ್ವದ  ಸ್ಥಳಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹೊಸ ಯೋಜನೆಗಳನ್ನು ಪ್ರಾರಂಭಿಸಲಿದೆ"

"ಮೋದಿ ಭರವಸೆ ಎಂದರೆ ಈಡೇರಿಕೆಯ ಖಾತರಿ"

"ಈ ವರ್ಷ ಮೂಲಸೌಕರ್ಯಕ್ಕಾಗಿ 11 ಲಕ್ಷ ಕೋಟಿ ರೂ.ಗಳನ್ನು ಖರ್ಚು ಮಾಡುವುದಾಗಿ ಸರ್ಕಾರ ಪ್ರಮಾಣ ಮಾಡಿದೆ"

"ಹಗಲು ರಾತ್ರಿ ಕೆಲಸ ಮಾಡುವ ಮೂಲಕ ಮೋದಿ ನೀಡುವ ಭರವಸೆಗಳನ್ನು ಈಡೇರಿಸುವ ಸಂಕಲ್ಪವನ್ನು ಮೋದಿ ಹೊಂದಿದ್ದಾರೆ"

Posted On: 04 FEB 2024 2:27PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಸ್ಸಾಂನ ಗುವಾಹಟಿಯಲ್ಲಿ 11,000 ಕೋಟಿ ರೂಪಾಯಿ ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಗುವಾಹಟಿಯಲ್ಲಿ ಕ್ರೀಡೆ ಹಾಗು ವೈದ್ಯಕೀಯ ಮೂಲಸೌಕರ್ಯ ಮತ್ತು ಸಂಪರ್ಕವನ್ನು ಹೆಚ್ಚಿಸುವ ಯೋಜನೆಗಳು ಪ್ರಮುಖ ಗಮನ ಹರಿಸಿದ ಕ್ಷೇತ್ರಗಳಾಗಿವೆ.

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, 11,000 ಕೋಟಿ ರೂಪಾಯಿ ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಲು ಮತ್ತು ಶಂಕುಸ್ಥಾಪನೆ ಮಾಡಲು ಮಾ ಕಾಮಾಖ್ಯ ದೇವಿಯ ಆಶೀರ್ವಾದದೊಂದಿಗೆ ಇಂದು ಅಸ್ಸಾಂನಲ್ಲಿ ಉಪಸ್ಥಿತರಿರುವಂತಾದುದಕ್ಕೆ  ಕೃತಜ್ಞತೆ ವ್ಯಕ್ತಪಡಿಸಿದರು. ಇಂದಿನ ಅಭಿವೃದ್ಧಿ ಯೋಜನೆಗಳು ಈಶಾನ್ಯ ರಾಜ್ಯಗಳು ಮತ್ತು ಆಗ್ನೇಯ ಏಷ್ಯಾದ ನೆರೆಯ ದೇಶಗಳಿಗೆ ಅಸ್ಸಾಂನ ಸಂಪರ್ಕವನ್ನು ಹೆಚ್ಚಿಸುತ್ತವೆ ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಉದ್ಯೋಗವನ್ನು ಹೆಚ್ಚಿಸುತ್ತವೆ ಹಾಗು ರಾಜ್ಯದಲ್ಲಿ ಕ್ರೀಡಾ ಪ್ರತಿಭೆಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತವೆ ಎಂದು ಅವರು ಹೇಳಿದರು. ಇಂದಿನ ಅಭಿವೃದ್ಧಿ ಯೋಜನೆಗಳಿಂದಾಗಿ ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರ ವಿಸ್ತರಣೆಯಾಗುತ್ತಿರುವುದನ್ನು ಅವರು ಉಲ್ಲೇಖಿಸಿದರು. ಇಂದಿನ ಅಭಿವೃದ್ಧಿ ಯೋಜನೆಗಾಗಿ ಅಸ್ಸಾಂ ಮತ್ತು ಈಶಾನ್ಯ ವಲಯದ ಜನರನ್ನು ಅಭಿನಂದಿಸಿದ ಪ್ರಧಾನ ಮಂತ್ರಿ  ಮೋದಿ, ನಿನ್ನೆ ಸಂಜೆ ಆಗಮಿಸಿದಾಗ ತಮಗೆ ನೀಡಿದ ಆತ್ಮೀಯ ಸ್ವಾಗತಕ್ಕಾಗಿ ಗುವಾಹಟಿ ನಾಗರಿಕರಿಗೆ ಧನ್ಯವಾದ ಅರ್ಪಿಸಿದರು. 

ತಾವು ಇತ್ತೀಚೆಗೆ ಹಲವು ಧಾರ್ಮಿಕ ಯಾತ್ರಾ ಸ್ಥಳಗಳಿಗೆ ಭೇಟಿ ನೀಡಿದ್ದನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಇಂದು ಕಾಮಾಖ್ಯ ಮಾತೆಯ ಮುಂದೆ ಆಗಮಿಸಿದ್ದಕ್ಕಾಗಿ ಮತ್ತು ಮಾ ಕಾಮಾಖ್ಯ ದಿವ್ಯ ಲೋಕ ಪರಿಯೋಜನಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು. ಯೋಜನೆಯ ಪರಿಕಲ್ಪನೆ ಮತ್ತು ವ್ಯಾಪ್ತಿಯ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನ ಮಂತ್ರಿ  ಮೋದಿ, ಇದು ಪೂರ್ಣಗೊಂಡ ನಂತರ, ಭಕ್ತರಿಗೆ ಪ್ರವೇಶ ಮತ್ತು ಆರಾಮವನ್ನು ಮತ್ತಷ್ಟು ಹೆಚ್ಚಿಸುತ್ತದೆ ಮತ್ತು ಭಕ್ತರ  ಸಂಖ್ಯೆಯನ್ನೂ ಹೆಚ್ಚಿಸುತ್ತದೆ  ಎಂದು ಮಾಹಿತಿ ನೀಡಿದರು.

"ಮಾ ಕಾಮಾಖ್ಯ ದೇವಿಯ ದರ್ಶನಕ್ಕಾಗಿ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳದೊಂದಿಗೆ ಅಸ್ಸಾಂ ಈಶಾನ್ಯದಲ್ಲಿ ಪ್ರವಾಸೋದ್ಯಮದ ಹೆಬ್ಬಾಗಿಲಾಗಲಿದೆ" ಎಂದು ಹೇಳಿದ ಪ್ರಧಾನ ಮಂತ್ರಿ ಅವರು ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಡಾ. ಹಿಮಂತ ಬಿಸ್ವಾ ಶರ್ಮಾ ಅವರ ಪ್ರಯತ್ನಗಳನ್ನು ಶ್ಲಾಘಿಸಿದರು. 
ಭಾರತೀಯ ಧಾರ್ಮಿಕ ಯಾತ್ರಾ ಸ್ಥಳಗಳು ಮತ್ತು ದೇವಾಲಯಗಳ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಈ ಸ್ಥಳಗಳು ಸಾವಿರಾರು ವರ್ಷಗಳಿಂದ ನಮ್ಮ ನಾಗರಿಕತೆಯ ಅಳಿಸಲಾಗದ ಗುರುತನ್ನು ಸಂಕೇತಿಸುತ್ತವೆ ಎಂದು ಒತ್ತಿ ಹೇಳಿದರು,

ಭಾರತವು ಪ್ರತಿಯೊಂದು ಬಿಕ್ಕಟ್ಟನ್ನು ಹೇಗೆ ಎದುರಿಸಿದೆ ಮತ್ತು  ಹಿಡಿದಿಟ್ಟುಕೊಂಡಿದೆ ಎಂಬುದನ್ನು ಅವು ತೋರಿಸುತ್ತವೆ. ಹಿಂದೆ ಸಮೃದ್ಧವೆಂದು ಪರಿಗಣಿಸಲ್ಪಟ್ಟ ನಾಗರಿಕತೆಗಳು ಈಗ ಹೇಗೆ ನಾಶವಾಗಿವೆ ಎಂಬುದನ್ನು ನಾವು ನೋಡಿದ್ದೇವೆ ಎಂದವರು ಹೇಳಿದರು. ಸ್ವಾತಂತ್ರ್ಯಾನಂತರದ ಸರ್ಕಾರಗಳು ರಾಜಕೀಯ ಲಾಭಕ್ಕಾಗಿ ತಮ್ಮದೇ ಆದ ಸಂಸ್ಕೃತಿ ಮತ್ತು ಅಸ್ಮಿತೆಯ ಬಗ್ಗೆ ನಾಚಿಕೆಪಡುವ ಪ್ರವೃತ್ತಿಯನ್ನು ಪ್ರಾರಂಭಿಸಿದವು ಮತ್ತು ಭಾರತದ ಪವಿತ್ರ ಸ್ಥಳಗಳ ಮಹತ್ವವನ್ನು ಅರ್ಥಮಾಡಿಕೊಳ್ಳಲು ವಿಫಲವಾದವು  ಎಂದು ಪ್ರಧಾನಿ ಮೋದಿ ವಿಷಾದಿಸಿದರು. ಕಳೆದ 10 ವರ್ಷಗಳಲ್ಲಿ 'ವಿಕಾಸ' (ಅಭಿವೃದ್ಧಿ) ಮತ್ತು 'ವಿರಾಸತ್' (ಪರಂಪರೆ) ಎರಡನ್ನೂ ಕೇಂದ್ರೀಕರಿಸುವ ನೀತಿಗಳ ಸಹಾಯದಿಂದ ಇದನ್ನು ಸರಿಪಡಿಸಲಾಗಿದೆ ಎಂದು ಅವರು ಹೇಳಿದರು. ಅಸ್ಸಾಂ ಜನರಿಗೆ ಈ ನೀತಿಗಳ ಪ್ರಯೋಜನಗಳನ್ನು ವಿವರಿಸಿದ ಪ್ರಧಾನಿ  ಮೋದಿ, ರಾಜ್ಯದ ಐತಿಹಾಸಿಕ ಮತ್ತು ಆಧ್ಯಾತ್ಮಿಕ ಸ್ಥಳಗಳನ್ನು ಆಧುನಿಕ ಸೌಲಭ್ಯಗಳೊಂದಿಗೆ ಸಂಪರ್ಕಿಸುವ ಮಹತ್ವವನ್ನು ಒತ್ತಿ ಹೇಳಿದರು, ಇದು ಈ ತಾಣಗಳನ್ನು ಸಂರಕ್ಷಿಸುವ ಮತ್ತು ಅಭಿವೃದ್ಧಿಯನ್ನು ವೇಗಗೊಳಿಸುವ ಗುರಿಯನ್ನು ಹೊಂದಿದೆ.

ಐಐಟಿ ಮತ್ತು ಐಐಎಂನಂತಹ ಪ್ರಮುಖ ಶಿಕ್ಷಣ ಸಂಸ್ಥೆಗಳ ವಿಸ್ತರಣೆಯನ್ನು ಉಲ್ಲೇಖಿಸಿದ ಅವರು, ಈ ಮೊದಲು ಅವುಗಳನ್ನು ದೊಡ್ಡ ನಗರಗಳಲ್ಲಿ ಮಾತ್ರ ಸ್ಥಾಪಿಸಲಾಗುತ್ತಿತ್ತು. ಆದಾಗ್ಯೂ, ಈಗ ಐಐಟಿಗಳು, ಐಐಎಂಗಳು ಮತ್ತು ಎ.ಐ.ಐ.ಎಂ.ಗಳ  ಜಾಲವು ದೇಶಾದ್ಯಂತ ಹರಡಿದೆ, ಅಸ್ಸಾಂನಲ್ಲಿ ಒಟ್ಟು ವೈದ್ಯಕೀಯ ಕಾಲೇಜುಗಳ ಸಂಖ್ಯೆ ಈ ಹಿಂದೆ 6 ರಷ್ಟಿತ್ತು, ಇದು ಈಗ 12 ಕ್ಕೆ ಏರಿದೆ. ರಾಜ್ಯವು ಕ್ರಮೇಣ ಈಶಾನ್ಯದಲ್ಲಿ ಕ್ಯಾನ್ಸರ್ ಚಿಕಿತ್ಸೆಯ ಕೇಂದ್ರವಾಗಲಿದೆ ಎಂದು ಅವರು ಪ್ರತಿಪಾದಿಸಿದರು. 

ಬಡವರಿಗೆ 4 ಕೋಟಿ ಪಕ್ಕಾ ಮನೆಗಳನ್ನು ನಿರ್ಮಿಸುವುದು, ನಳ್ಳಿ ನೀರಿನ  ಸಂಪರ್ಕ, ವಿದ್ಯುತ್, ಉಜ್ವಲ ಯೋಜನೆಯಡಿ ಅಡುಗೆ ಅನಿಲ ಸಂಪರ್ಕ ಮತ್ತು ಸ್ವಚ್ಛ ಭಾರತ್ ಅಡಿಯಲ್ಲಿ ಶೌಚಾಲಯಗಳ ನಿರ್ಮಾಣವನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, "ಜೀವನವನ್ನು ಸುಲಭಗೊಳಿಸುವುದು ಪ್ರಸ್ತುತ ಸರ್ಕಾರದ ಆದ್ಯತೆಯಾಗಿದೆ" ಎಂದು ಹೇಳಿದರು.

ಪರಂಪರೆಯ ಜೊತೆಗೆ ಅಭಿವೃದ್ಧಿಯತ್ತ ಸರ್ಕಾರ ಗಮನ ಹರಿಸಿರುವುದು ಭಾರತದ ಯುವಜನರಿಗೆ ಭಾರಿ ಪ್ರಯೋಜನವನ್ನು ನೀಡಿದೆ ಎಂದು ಪ್ರಧಾನಿ ಮೋದಿ ಒತ್ತಿಹೇಳಿದರು. ದೇಶದಲ್ಲಿ ಪ್ರವಾಸೋದ್ಯಮ ಮತ್ತು ತೀರ್ಥಯಾತ್ರೆಗಳ ಬಗ್ಗೆ ಹೆಚ್ಚುತ್ತಿರುವ ಉತ್ಸಾಹದತ್ತ ಬೆಟ್ಟು ಮಾಡಿದ  ಪ್ರಧಾನಮಂತ್ರಿಯವರು, ಕಾಶಿ ಕಾರಿಡಾರ್ ಪೂರ್ಣಗೊಂಡ ನಂತರ ವಾರಣಾಸಿಗೆ ದಾಖಲೆಯ ಭಕ್ತರ ಆಗಮನದ ಬಗ್ಗೆ ಮಾಹಿತಿ ನೀಡಿದರು. “ ಕಳೆದ ವರ್ಷ 8.50 ಕೋಟಿ ಜನರು ಕಾಶಿಗೆ, 5 ಕೋಟಿಗೂ ಹೆಚ್ಚು ಜನರು ಉಜ್ಜೈನಿಯ ಮಹಾಕಾಲ್ ಲೋಕಕ್ಕೆ ಭೇಟಿ ನೀಡಿದ್ದಾರೆ ಮತ್ತು 19 ಲಕ್ಷಕ್ಕೂ ಹೆಚ್ಚು ಭಕ್ತರು ಕೇದಾರಧಾಮಕ್ಕೆ ಭೇಟಿ ನೀಡಿದ್ದಾರೆ ಎಂದೂ ಅವರು ಮಾಹಿತಿ ಒದಗಿಸಿದರು. ರಾಮ ಮಂದಿರದ ಪ್ರಾಣ ಪ್ರತಿಷ್ಠೆಯ  ನಂತರ ಕಳೆದ 12 ದಿನಗಳಲ್ಲಿ ಅಯೋಧ್ಯೆ 24 ಲಕ್ಷಕ್ಕೂ ಹೆಚ್ಚು ಜನರಿಗೆ ಸಾಕ್ಷಿಯಾಗಿದೆ ಎಂದು ಪ್ರಧಾನಿ ಮೋದಿ ಉಲ್ಲೇಖಿಸಿದರು.

ಮಾ ಕಾಮಾಖ್ಯ  ದಿವ್ಯ ಲೋಕ ಪರಿಯೋಜನೆ ಪೂರ್ಣಗೊಂಡ ನಂತರ ಇದೇ ರೀತಿಯ ದೃಶ್ಯ ಇಲ್ಲಿ ಅನಾವರಣಗೊಳ್ಳಲಿದೆ ಎಂದು ಅವರು ಪುನರುಚ್ಚರಿಸಿದರು. 

ರಿಕ್ಷಾ ಎಳೆಯುವವರಾಗಿರಲಿ, ಟ್ಯಾಕ್ಸಿ ಚಾಲಕರಾಗಿರಲಿ, ಹೋಟೆಲ್ ಮಾಲೀಕರಾಗಿರಲಿ ಅಥವಾ ಬೀದಿ ಬದಿ ವ್ಯಾಪಾರಿಯಾಗಿರಲಿ, ಯಾತ್ರಾರ್ಥಿಗಳು ಮತ್ತು ಭಕ್ತರ ಒಳಹರಿವಿನಿಂದ ಕಡುಬಡವರ ಜೀವನೋಪಾಯಕ್ಕೂ ಉತ್ತೇಜನ ಸಿಗುತ್ತದೆ ಎಂದು ಹೇಳಿದ ಪ್ರಧಾನಿ, ಈ ವರ್ಷದ ಬಜೆಟ್ ನಲ್ಲಿ ಪ್ರವಾಸೋದ್ಯಮದ ಮೇಲೆ ಸರ್ಕಾರ ಗಮನ ಹರಿಸಿರುವ ಬಗ್ಗೆ ಮಾಹಿತಿ ನೀಡಿದರು. "ಐತಿಹಾಸಿಕ ಪ್ರಸ್ತುತತೆಯ ಸ್ಥಳಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹೊಸ ಯೋಜನೆಗಳನ್ನು ಪ್ರಾರಂಭಿಸಲಿದೆ" ಎಂದು ಪ್ರಧಾನ ಮಂತ್ರಿ ಮೋದಿ ಹೇಳಿದರು, ಈ ನಿಟ್ಟಿನಲ್ಲಿ ಈಶಾನ್ಯ ರಾಜ್ಯಗಳ ಮುಂದೆ ಇರುವ ಹಲವಾರು ಅವಕಾಶಗಳನ್ನು ಎತ್ತಿ ತೋರಿಸಿದ ಅವರು, ಇದರಿಂದಾಗಿ   ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಸರ್ಕಾರ ವಿಶೇಷ ಒತ್ತು ನೀಡುತ್ತಿದೆ ಎಂದೂ  ಹೇಳಿದರು.

ಕಳೆದ 10 ವರ್ಷಗಳಲ್ಲಿ ಈಶಾನ್ಯದಲ್ಲಿ ದಾಖಲೆಯ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡಿರುವುದನ್ನು ಉಲ್ಲೇಖಿಸಿದ ಪ್ರಧಾನಿ, ಈ ಪ್ರದೇಶದ ಸೌಂದರ್ಯವು ಇದಕ್ಕೂ ಮೊದಲು ಅಸ್ತಿತ್ವದಲ್ಲಿದ್ದರೂ, ಹಿಂದಿನ ಸರ್ಕಾರಗಳು ತೋರಿಸಿದ ನಿರ್ಲಕ್ಷ್ಯದಿಂದಾಗಿ ಹಿಂಸಾಚಾರ ಮತ್ತು ಸಂಪನ್ಮೂಲಗಳ ಕೊರತೆಯಿಂದಾಗಿ ಪ್ರವಾಸಿಗರ ಸಂಖ್ಯೆ ಅತ್ಯಂತ ಕಡಿಮೆ ಇತ್ತು ಎಂದು ಹೇಳಿದರು. ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಪ್ರಯಾಣಿಸಲು ಗಂಟೆಗಟ್ಟಲೆ ಕಾಲ ತೆಗೆದುಕೊಳ್ಳುತ್ತಿದ್ದ ಪ್ರದೇಶದಲ್ಲಿ ಇದ್ದ ಕಳಪೆ ವಾಯು, ರೈಲು ಮತ್ತು ರಸ್ತೆ ಸಂಪರ್ಕವನ್ನು ಉಲ್ಲೇಖಿಸಿದರು. ಈಗ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಡಬಲ್ ಇಂಜಿನ್ ಸರ್ಕಾರವಿದೆ ಎಂದು ಪ್ರಧಾನಿ ಮೋದಿ ಹೇಳಿದರು.  

ಸರ್ಕಾರವು ಈ ಪ್ರದೇಶದ ಅಭಿವೃದ್ಧಿ ವೆಚ್ಚವನ್ನು 4 ಪಟ್ಟು ಹೆಚ್ಚಿಸಿದೆ ಎಂದು ಪ್ರಧಾನ ಮಂತ್ರಿ  ಮೋದಿ ಮಾಹಿತಿ ನೀಡಿದರು. 2014ರ ಮೊದಲು ಮತ್ತು ನಂತರದ ಸ್ಥಿತಿಯ ಬಗ್ಗೆ ಹೋಲಿಕೆ ಮಾಡಿದ ಪ್ರಧಾನ ಮಂತ್ರಿ ಅವರು ರೈಲ್ವೆ ಹಳಿಗಳ ಉದ್ದವನ್ನು 1900 ಕಿಲೋಮೀಟರ್ ಗಿಂತಲೂ ಹೆಚ್ಚು ಹೆಚ್ಚಿಸಲಾಗಿದೆ, ರೈಲ್ವೆ ಬಜೆಟ್ ಸುಮಾರು 400 ಪ್ರತಿಶತದಷ್ಟು ಹೆಚ್ಚಿಸಲಾಗಿದೆ ಮತ್ತು 2014 ರವರೆಗೆ ಇದ್ದ 10,000 ಕಿಲೋಮೀಟರ್ ಗೆ ಹೋಲಿಸಿದರೆ ಕಳೆದ 10 ವರ್ಷಗಳಲ್ಲಿ 6,000 ಕಿಲೋಮೀಟರ್ ಹೊಸ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲಾಗಿದೆ ಎಂದು ಪ್ರಧಾನಿ ಹೇಳಿದರು. ಇಂದಿನ ಯೋಜನೆಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಇದು ಇಟಾನಗರಕ್ಕೆ ಸಂಪರ್ಕವನ್ನು ಬಲಪಡಿಸುತ್ತದೆ ಎಂದರು.

ಬಡವರು, ಮಹಿಳೆಯರು, ಯುವಜನರು ಮತ್ತು ರೈತರಿಗೆ ಮೂಲಭೂತ ಸೌಲಭ್ಯಗಳನ್ನು ಖಾತರಿಪಡಿಸುವ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ, "ಮೋದಿ ಅವರ ಖಾತರಿ ಎಂದರೆ ಈಡೇರಿಕೆಯ ಖಾತರಿ" ಎಂದು ಹೇಳಿದರು.

ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆಯನ್ನು ಮತ್ತು   ಸರ್ಕಾರದ ಯೋಜನೆಗಳಿಂದ ವಂಚಿತರಾದವರಿಗೆ ಪ್ರಯೋಜನಗಳನ್ನು ತಲುಪಿಸುವ ಕಾರ್ಯವನ್ನು ನಿರ್ವಹಿಸುವ 'ಮೋದಿಯ ಖಾತರಿ ವಾಹನ'ದ ಬಗ್ಗೆಯೂ ಅವರು ಪ್ರಸ್ತಾಪಿಸಿದರು. "ದೇಶಾದ್ಯಂತ ಸುಮಾರು 20 ಕೋಟಿ ಜನರು ವಿಕಾಸ್ ಭಾರತ್ ಸಂಕಲ್ಪ ಯಾತ್ರೆಯಲ್ಲಿ ನೇರವಾಗಿ ಭಾಗವಹಿಸಿದ್ದಾರೆ. ಅಸ್ಸಾಂನ ಬಹಳ ದೊಡ್ಡ  ಸಂಖ್ಯೆಯ ಜನರು ಸಹ ಇದರ ಪ್ರಯೋಜನಗಳನ್ನು ಪಡೆದಿದ್ದಾರೆ" ಎಂದು ಅವರು ಹೇಳಿದರು.

ಕೇಂದ್ರದ ಚಿಂತನೆಯನ್ನು, ದೃಷ್ಟಿಕೋನವನ್ನು ಹಂಚಿಕೊಂಡ ಪ್ರಧಾನಮಂತ್ರಿಯವರು, ಪ್ರತಿಯೊಬ್ಬ ನಾಗರಿಕನ ಜೀವನವನ್ನು ಸರಳೀಕರಿಸುವ, ಸುಲಭಗೊಳಿಸುವ  ಬದ್ಧತೆಯನ್ನು ಪುನರುಚ್ಚರಿಸಿದರು, ಈ ಬದ್ಧತೆಯು ಈ ವರ್ಷದ ಬಜೆಟ್ ಘೋಷಣೆಗಳಲ್ಲಿಯೂ ಪ್ರತಿಬಿಂಬಿತವಾಗಿದೆ ಎಂದು ಅವರು ಹೇಳಿದರು. ಈ ವರ್ಷ ಮೂಲಸೌಕರ್ಯಕ್ಕಾಗಿ 11 ಲಕ್ಷ ಕೋಟಿ ರೂ.ಗಳನ್ನು ಖರ್ಚು ಮಾಡುವುದಾಗಿ ಸರ್ಕಾರ ಭರವಸೆ ನೀಡಿದೆ, ಮೂಲಸೌಕರ್ಯಕ್ಕಾಗಿ ಮಾಡುವ ಈ ರೀತಿಯ ವೆಚ್ಚವು ಹೆಚ್ಚಿನ ಉದ್ಯೋಗವನ್ನು ಸೃಷ್ಟಿಸುತ್ತದೆ ಮತ್ತು ಅಭಿವೃದ್ಧಿಗೆ ವೇಗವನ್ನು ನೀಡುತ್ತದೆ ಎಂದ ಅವರು 2014 ಕ್ಕಿಂತ ಮೊದಲು 10 ವರ್ಷಗಳಲ್ಲಿ ಅಸ್ಸಾಂನ ಒಟ್ಟು ಮೂಲಸೌಕರ್ಯ ಬಜೆಟ್ 12 ಲಕ್ಷ ಕೋಟಿ ರೂ.ಗಳಷ್ಟಿತ್ತು ಎಂಬುದರತ್ತ  ಗಮನಸೆಳೆದರು.

ಕಳೆದ 10 ವರ್ಷಗಳಲ್ಲಿ ಪ್ರತಿ ಮನೆಗೂ ವಿದ್ಯುತ್ ಪೂರೈಕೆಗೆ ಸರ್ಕಾರ ಒತ್ತು ನೀಡಿದೆ ಎಂಬುದನ್ನು  ಪ್ರಧಾನಿ ಪುನರುಚ್ಚರಿಸಿದರು. ಮೇಲ್ಛಾವಣಿ ಸೌರ ಯೋಜನೆಯನ್ನು ಪ್ರಾರಂಭಿಸುವುದರೊಂದಿಗೆ ವಿದ್ಯುತ್ ಬಿಲ್ ಗಳನ್ನು ಶೂನ್ಯಕ್ಕೆ ಇಳಿಸಲು ಈ ವರ್ಷದ ಬಜೆಟ್ ನಲ್ಲಿ ತೆಗೆದುಕೊಂಡ ನಿರ್ಧಾರದ ಬಗ್ಗೆ ಅವರು ಮಾಹಿತಿ ನೀಡಿದರು, ಅಲ್ಲಿ ಸರ್ಕಾರವು ಒಂದು ಕೋಟಿ ಕುಟುಂಬಗಳಿಗೆ ಸೌರ ಮೇಲ್ಛಾವಣಿಗಳನ್ನು ಸ್ಥಾಪಿಸಲು ಸಹಾಯ ಮಾಡುತ್ತದೆ. “ ಇದರೊಂದಿಗೆ, ಅವರ ವಿದ್ಯುತ್ ಬಿಲ್ ಸಹ ಶೂನ್ಯವಾಗಿರುತ್ತದೆ ಮತ್ತು ಸಾಮಾನ್ಯ ಕುಟುಂಬಗಳು ತಮ್ಮ ಮನೆಯಲ್ಲಿ ವಿದ್ಯುತ್ ಉತ್ಪಾದಿಸುವ ಮೂಲಕ ಸಂಪಾದಿಸಲು ಸಾಧ್ಯವಾಗುತ್ತದೆ”  ಎಂದೂ  ಅವರು ಹೇಳಿದರು.

ದೇಶದಲ್ಲಿ 2 ಕೋಟಿ ಲಖ್ಪತಿ ದೀದಿಗಳನ್ನು ಸೃಷ್ಟಿಸುವ ಖಾತರಿಯ ಬಗ್ಗೆ ಗಮನ ಸೆಳೆದ ಪ್ರಧಾನಿ  ಮೋದಿ, ಕಳೆದ ವರ್ಷ ಈ ಸಂಖ್ಯೆ 1 ಕೋಟಿಗೆ ತಲುಪಿದೆ ಮತ್ತು ಈ ವರ್ಷದ ಬಜೆಟ್ಟಿನಲ್ಲಿ ಈಗ 3 ಕೋಟಿ ಲಖ್ಪತಿ ದೀದಿಗಳ ಗುರಿಯನ್ನು ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು. ಅಸ್ಸಾಂನ ಲಕ್ಷಾಂತರ ಮಹಿಳೆಯರು ಸಹ ಇದರಿಂದ ಪ್ರಯೋಜನ ಪಡೆಯಲಿದ್ದಾರೆ ಎಂದು ಅವರು ಹೇಳಿದರು. ಸ್ವಸಹಾಯ ಗುಂಪುಗಳಿಗೆ ಸಂಬಂಧಿಸಿದ ಎಲ್ಲಾ ಮಹಿಳೆಯರಿಗೆ ಹೊಸ ಅವಕಾಶಗಳು ಮತ್ತು ಆಯುಷ್ಮಾನ್ ಯೋಜನೆಯಲ್ಲಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರನ್ನು ಸೇರಿಸುವ ಬಗ್ಗೆಯೂ ಅವರು ಪ್ರಸ್ತಾಪಿಸಿದರು.

"ಹಗಲು ರಾತ್ರಿ ದುಡಿಯುವ ಮತ್ತು ನೀಡುವ ಭರವಸೆಗಳನ್ನು ಈಡೇರಿಸುವ ಸಂಕಲ್ಪವನ್ನು ಮೋದಿ ಹೊಂದಿದ್ದಾರೆ" ಎಂದು ಪ್ರಧಾನಿ ಉದ್ಗರಿಸಿದರು, ಈಶಾನ್ಯವು ಮೋದಿಯವರ ಖಾತರಿಯಲ್ಲಿ ನಂಬಿಕೆ ಹೊಂದಿದೆ ಎಂದೂ ಅವರು ಹೇಳಿದರು. ಒಂದು ಕಾಲದಲ್ಲಿ ಹಿಂಸಾಚಾರದಿಂದ ತೊಂದರೆಗೊಳಗಾದ ಮತ್ತು ಹಾನಿಗೊಳಗಾದ ಅಸ್ಸಾಂನ ಪ್ರದೇಶಗಳಲ್ಲಿ ಶಾಶ್ವತ ಶಾಂತಿಯನ್ನು ಸ್ಥಾಪಿಸಲಾಗುತ್ತಿದೆ ಮತ್ತು ರಾಜ್ಯಗಳ ನಡುವಿನ ಗಡಿ ವಿವಾದಗಳನ್ನು ಪರಿಹರಿಸಲಾಗುತ್ತಿದೆ ಎಂದು ಅವರು ಹೇಳಿದರು. "10 ಕ್ಕೂ ಹೆಚ್ಚು ಪ್ರಮುಖ ಶಾಂತಿ ಒಪ್ಪಂದಗಳಿಗೆ ಇಲ್ಲಿ ಸಹಿ ಹಾಕಲಾಗಿದೆ" ಎಂದು ಅವರು ಮಾಹಿತಿ ನೀಡಿದರು, ಈಶಾನ್ಯದ ಸಾವಿರಾರು ಯುವಜನರು ಹಿಂಸಾಚಾರದ ಮಾರ್ಗವನ್ನು ತ್ಯಜಿಸಿದ್ದಾರೆ ಮತ್ತು ಕಳೆದ ಕೆಲವು ವರ್ಷಗಳಲ್ಲಿ ಅಭಿವೃದ್ಧಿಯನ್ನು ಆರಿಸಿಕೊಂಡಿದ್ದಾರೆ ಎಂದರು. ಈ ಪೈಕಿ ಅಸ್ಸಾಂನ 7,000 ಕ್ಕೂ ಹೆಚ್ಚು ಯುವಜನರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ್ದಾರೆ ಮತ್ತು ದೇಶದ ಅಭಿವೃದ್ಧಿಯಲ್ಲಿ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುವ ಪ್ರತಿಜ್ಞೆ ಮಾಡಿದ್ದಾರೆ ಎಂದು ಅವರು ಹೇಳಿದರು. ಅನೇಕ ಜಿಲ್ಲೆಗಳಲ್ಲಿ ಎಎಫ್ಎಸ್ ಪಿಎಯನ್ನು ತೆಗೆದುಹಾಕಿರುವುದರತ್ತ ಬೆಟ್ಟು ಮಾಡಿದ  ಅವರು, ಹಿಂಸಾಚಾರದಿಂದ ಬಾಧಿತವಾದ ಪ್ರದೇಶಗಳನ್ನು ಸರ್ಕಾರದ ಬೆಂಬಲದೊಂದಿಗೆ ಜನರ ಆಕಾಂಕ್ಷೆಗಳಿಗೆ ಅನುಗುಣವಾಗಿ ಇಂದು ಅಭಿವೃದ್ಧಿಪಡಿಸಲಾಗುತ್ತಿದೆ ಎಂದೂ ಹೇಳಿದರು.

ಗುರಿಗಳನ್ನು ನಿಗದಿ ಮಾಡುವ  ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಿ, ಹಿಂದಿನ ಸರ್ಕಾರಗಳು ಉದ್ದೇಶಗಳ ಕೊರತೆಯನ್ನು ಹೊಂದಿದ್ದವು ಮತ್ತು ಕಠಿಣ ಪರಿಶ್ರಮ ಹಾಕಲು ವಿಫಲವಾದವು ಎಂದು ಪ್ರತಿಪಾದಿಸಿದರು. ಈಶಾನ್ಯ ಭಾರತವು ಪೂರ್ವ ಏಷ್ಯಾದಂತೆಯೇ ಅಭಿವೃದ್ಧಿ ಹೊಂದುವುದು, ಉತ್ತರ ಮತ್ತು ಪೂರ್ವ ಏಷ್ಯಾದಲ್ಲಿ ವಿಸ್ತೃತ ಸಂಪರ್ಕವನ್ನು ಸುಗಮಗೊಳಿಸುವುದು ತಮ್ಮ  ದೂರದೃಷ್ಟಿಯಾಗಿದೆ. ದಕ್ಷಿಣ ಏಷ್ಯಾ ಉಪ ಪ್ರಾದೇಶಿಕ ಆರ್ಥಿಕ ಸಹಕಾರದ ಅಡಿಯಲ್ಲಿ ರಾಜ್ಯದ ಹಲವಾರು ರಸ್ತೆಗಳನ್ನು ಮೇಲ್ದರ್ಜೆಗೇರಿಸಲು ಸಜ್ಜಾಗಿದ್ದು, ಈಶಾನ್ಯವನ್ನು ವ್ಯಾಪಾರ ಕೇಂದ್ರವಾಗಿ ಪರಿವರ್ತಿಸಲಾಗುವುದು ಎಂದರು. ಪೂರ್ವ ಏಷ್ಯಾದಂತೆಯೇ ತಮ್ಮ ವಲಯದ ಅಭಿವೃದ್ಧಿಗೆ ಸಾಕ್ಷಿಯಾಗಬೇಕೆಂಬ ಈಶಾನ್ಯದ ಯುವಜನರ ಆಕಾಂಕ್ಷೆಗಳನ್ನು ಪ್ರಧಾನಿ ಒಪ್ಪಿಕೊಂಡರು, ಈ ಕನಸನ್ನು ನನಸಾಗಿಸುವ ತಮ್ಮ ಸಂಕಲ್ಪವನ್ನು ವ್ಯಕ್ತಪಡಿಸಿದರು.

ಭಾರತ ಮತ್ತು ಅದರ ನಾಗರಿಕರಿಗೆ ಸಂತೋಷದ ಮತ್ತು ಸಮೃದ್ಧ ಜೀವನದ ಗುರಿ ಇಂದು ನಡೆಯುತ್ತಿರುವ ಎಲ್ಲಾ ಅಭಿವೃದ್ಧಿ ಕಾರ್ಯಗಳ ಹಿಂದಿನ ಮುಖ್ಯ ಅಂಶವಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. "ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ. ವಿಕಸಿತ ಭಾರತ್ 2047 ನಮ್ಮ ಗುರಿ " ಎಂದ ಪ್ರಧಾನ ಮಂತ್ರಿ ಅವರು  ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳು ಈ ನಿಟ್ಟಿನಲ್ಲಿ ವಹಿಸಬೇಕಾದ ಬೃಹತ್ ಪಾತ್ರವನ್ನು ಪುನರುಚ್ಚರಿಸಿ ತಮ್ಮ ಮಾತುಗಳನ್ನು  ಮುಕ್ತಾಯಗೊಳಿಸಿದರು. 

ಅಸ್ಸಾಂ ರಾಜ್ಯಪಾಲ ಶ್ರೀ ಗುಲಾಬ್ ಚಂದ್ ಕಟಾರಾಯ್, ಅಸ್ಸಾಂ ಮುಖ್ಯಮಂತ್ರಿ ಡಾ. ಹಿಮಂತ ಬಿಸ್ವಾ ಶರ್ಮಾ ಮತ್ತು ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗಗಳು ಮತ್ತು ಆಯುಷ್ ಸಚಿವ ಶ್ರೀ ಸರ್ಬಾನಂದ ಸೋನೊವಾಲ್  ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಯಾತ್ರಾ ಸ್ಥಳಗಳಿಗೆ ಭೇಟಿ ನೀಡುವ ಜನರಿಗೆ ವಿಶ್ವದರ್ಜೆಯ ಸೌಲಭ್ಯಗಳನ್ನು ಒದಗಿಸುವುದು ಪ್ರಧಾನ ಮಂತ್ರಿಯವರ ಪ್ರಮುಖ ಆದ್ಯತೆಯ  ಕ್ಷೇತ್ರವಾಗಿದೆ. ಈ ಪ್ರಯತ್ನದ ಮತ್ತೊಂದು ಹೆಜ್ಜೆಯಾಗಿ, ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಿದ ಪ್ರಮುಖ ಯೋಜನೆಗಳಲ್ಲಿ ಮಾ ಕಾಮಾಖ್ಯ ದಿವ್ಯ ಪರಿಯೋಜನ (ಮಾ ಕಾಮಾಕ್ಯ ಪ್ರವೇಶ ಕಾರಿಡಾರ್) ಸೇರಿದೆ, ಇದನ್ನು ಈಶಾನ್ಯ ವಲಯಕ್ಕಾಗಿ ಇರುವ  ಪ್ರಧಾನ ಮಂತ್ರಿಗಳ ಅಭಿವೃದ್ಧಿ ಉಪಕ್ರಮ (ಪಿಎಂ-ಡಿವೈನ್) ಯೋಜನೆಯಡಿ ಮಂಜೂರು ಮಾಡಲಾಗಿದೆ. ಇದು ಕಾಮಾಖ್ಯ ದೇವಾಲಯಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ವಿಶ್ವದರ್ಜೆಯ ಸೌಲಭ್ಯಗಳನ್ನು ಒದಗಿಸುತ್ತದೆ.

ಪ್ರಧಾನಮಂತ್ರಿಯವರು 3400 ಕೋಟಿ ರೂ.ಗೂ ಅಧಿಕ ಮೌಲ್ಯದ ಬಹು ರಸ್ತೆ ಮೇಲ್ದರ್ಜೆಗೇರಿಸುವ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು, ಇದರ ಅಡಿಯಲ್ಲಿ ದಕ್ಷಿಣ ಏಷ್ಯಾ ಉಪ ವಲಯ ಆರ್ಥಿಕ ಸಹಕಾರ (ಎಸ್ಎಎಸ್ಇಸಿ) ಕಾರಿಡಾರ್ ಸಂಪರ್ಕದ ಭಾಗವಾಗಿ 38 ಸೇತುವೆಗಳು ಸೇರಿದಂತೆ 43 ರಸ್ತೆಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಪ್ರಧಾನಮಂತ್ರಿಯವರು ದೋಲಾಬರಿಯಿಂದ ಜಮುಗುರಿ ಮತ್ತು ಬಿಸ್ವಾನಾಥ್ ಚರಿಯಾಲಿಯಿಂದ ಗೋಹ್ಪುರ್ ಎಂಬ ಎರಡು ಚತುಷ್ಪಥ ಯೋಜನೆಗಳನ್ನು ಉದ್ಘಾಟಿಸಿದರು. ಈ ಯೋಜನೆಗಳು ಇಟಾನಗರಕ್ಕೆ ಸಂಪರ್ಕವನ್ನು ಸುಧಾರಿಸಲು ಸಹಾಯ ಮಾಡುತ್ತವೆ ಮತ್ತು ಪ್ರದೇಶದ ಒಟ್ಟಾರೆ ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸುತ್ತವೆ.

ಈ ಪ್ರದೇಶದ ಅದ್ಭುತ ಕ್ರೀಡಾ ಸಾಮರ್ಥ್ಯವನ್ನು ಬಳಸಿಕೊಳ್ಳಲು, ರಾಜ್ಯದಲ್ಲಿ ಕ್ರೀಡಾ ಮೂಲಸೌಕರ್ಯವನ್ನು ಹೆಚ್ಚಿಸುವ ಯೋಜನೆಗಳಿಗೆ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಿದರು. ಚಂದ್ರಾಪುರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ ಮತ್ತು ನೆಹರೂ ಕ್ರೀಡಾಂಗಣವನ್ನು ಫಿಫಾ ಗುಣಮಟ್ಟದ ಫುಟ್ಬಾಲ್ ಕ್ರೀಡಾಂಗಣವಾಗಿ ಮೇಲ್ದರ್ಜೆಗೇರಿಸುವುದು ಈ ಯೋಜನೆಗಳಲ್ಲಿ ಸೇರಿವೆ.

ಪ್ರಧಾನಮಂತ್ರಿಯವರು ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮೂಲಸೌಕರ್ಯ ಅಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಿದರು. ಇದಲ್ಲದೆ, ಕರೀಂಗಂಜ್ ನಲ್ಲಿ ವೈದ್ಯಕೀಯ ಕಾಲೇಜಿನ ಅಭಿವೃದ್ಧಿಗೆ ಅವರು ಅಡಿಪಾಯ ಹಾಕಿದರು.

A significant day for Assam! The projects being launched today will add momentum to the state's growth journey. https://t.co/mzIGHwhnCM

— Narendra Modi (@narendramodi) February 4, 2024

अयोध्या में भव्य आयोजन के बाद मैं अब यहां मां कामाख्या के द्वार पर आया हूं।

आज मुझे यहां मां कामाख्या दिव्यलोक परियोजना का शिलान्यास करने का सौभाग्य प्राप्त हुआ: PM @narendramodi pic.twitter.com/H6GklHsoPF

— PMO India (@PMOIndia) February 4, 2024

हमारे तीर्थ, हमारे मंदिर, हमारी आस्था के स्थान, ये सिर्फ दर्शन करने की स्थली ही नहीं हैं।

ये हज़ारों वर्षों की हमारी सभ्यता की यात्रा की अमिट निशानियां हैं: PM @narendramodi pic.twitter.com/1IG55iQRi3

— PMO India (@PMOIndia) February 4, 2024

हमारा लक्ष्य हर नागरिक का जीवन आसान बनाने का है: PM @narendramodi pic.twitter.com/ZvxJBijEiR

— PMO India (@PMOIndia) February 4, 2024

लक्ष्य है, भारत और भारतीयों का सुखी और समृद्ध जीवन।

लक्ष्य है, भारत को दुनिया की तीसरी बड़ी आर्थिक ताकत बनाने का।

लक्ष्य है, 2047 तक भारत को विकसित राष्ट्र बनाने का। pic.twitter.com/RZUNe3OTpz

— PMO India (@PMOIndia) February 4, 2024

***



(Release ID: 2002458) Visitor Counter : 64