ಪ್ರಧಾನ ಮಂತ್ರಿಯವರ ಕಛೇರಿ
ಕೇರಳದ ಕೊಚ್ಚಿಯಲ್ಲಿ 4,000 ಕೋಟಿ ರೂ.ಗೂ ಅಧಿಕ ಮೌಲ್ಯದ ಮೂಲಸೌಕರ್ಯ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಿ
"ಇಂದು, ಭಾರತವು ಜಾಗತಿಕ ವ್ಯಾಪಾರದ ಪ್ರಮುಖ ಕೇಂದ್ರವಾಗುತ್ತಿದ್ದು, ನಾವು ದೇಶದ ಕಡಲ ಶಕ್ತಿಯನ್ನು ಹೆಚ್ಚಿಸುವತ್ತ ಗಮನ ಹರಿಸುತ್ತಿದ್ದೇವೆ"
"ಬಂದರುಗಳು, ಹಡಗು ಮತ್ತು ಒಳನಾಡಿನ ಜಲಮಾರ್ಗಗಳ ಕ್ಷೇತ್ರಗಳಲ್ಲಿ 'ಸುಗಮ ವ್ಯಾಪಾರ'ವನ್ನು ಹೆಚ್ಚಿಸಲು ಕಳೆದ 10 ವರ್ಷಗಳಲ್ಲಿ ಅನೇಕ ಸುಧಾರಣೆಗಳನ್ನು ಕೈಗೊಳ್ಳಲಾಗಿದೆ"
“ಜಾಗತಿಕ ವ್ಯಾಪಾರದಲ್ಲಿ ಭಾರತದ ಸಾಮರ್ಥ್ಯ ಮತ್ತು ಸ್ಥಾನವನ್ನು ಜಗತ್ತು ಗುರುತಿಸುತ್ತಿದೆ”
ʻವಿಕಸಿತ ಭಾರತʼಕ್ಕಾಗಿ ಭಾರತದ ಕಡಲ ಸಾಮರ್ಥ್ಯವನ್ನು ಹೆಚ್ಚಿಸುವ ಮಾರ್ಗಸೂಚಿಯನ್ನು ʻಕಡಲ ಅಮೃತ್ ಕಾಲ ಯೋಜನೆʼಯು ನಮ್ಮ ಮುಂದಿಡುತ್ತದೆ
"ಕೊಚ್ಚಿಯಲ್ಲಿ ಹೊಸ ʻಡ್ರೈ ಡಾಕ್ʼ ಭಾರತದ ರಾಷ್ಟ್ರೀಯ ಹೆಮ್ಮೆಯಾಗಿದೆ"
"ದೇಶದ ನಗರಗಳಲ್ಲಿ ಆಧುನಿಕ ಮತ್ತು ಹಸಿರು ಜಲ ಸಂಪರ್ಕ ಜಾಲ ನಿರ್ಮಾಣದಲ್ಲಿ ʻಕೊಚ್ಚಿ ಶಿಪ್ ಯಾರ್ಡ್ʼ ಪ್ರಮುಖ ಪಾತ್ರ ವಹಿಸುತ್ತಿದೆ"
Posted On:
17 JAN 2024 2:02PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕೇರಳದ ಕೊಚ್ಚಿಯಲ್ಲಿ 4,000 ಕೋಟಿ ರೂ.ಗೂ ಅಧಿಕ ಮೌಲ್ಯದ ಮೂರು ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಿದರು. ʻಕೊಚ್ಚಿನ್ ಶಿಪ್ ಯಾರ್ಡ್ ಲಿಮಿಟೆಡ್ʼನಲ್ಲಿ(ಸಿಎಸ್‌ಎಲ್) ʻನ್ಯೂ ಡ್ರೈ ಡಾಕ್ʼ(ಎನ್‌ಡಿಡಿ), ʻಸಿಎಸ್‌ಎಲ್ʼನ ಅಂತರರಾಷ್ಟ್ರೀಯ ಹಡಗು ದುರಸ್ತಿ ಘಟಕ (ಐಎಸ್ ಆರ್‌ಎಫ್) ಮತ್ತು ಕೊಚ್ಚಿಯ ಪುದುವೈಪೀನ್‌ನಲ್ಲಿರುವ ʻಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ʼ ಸಂಸ್ಥೆಯ ʻಎಲ್‌ಪಿಜಿʼ ಆಮದು ಟರ್ಮಿನಲ್ ಅನ್ನು ಇಂದು ಪ್ರಧಾನಿ ರಾಷ್ಟ್ರಕ್ಕೆ ಸಮರ್ಪಿಸಿದರು. ಈ ಪ್ರಮುಖ ಮೂಲಸೌಕರ್ಯ ಯೋಜನೆಗಳು ಭಾರತದ ಬಂದರು, ಹಡಗು ಮತ್ತು ಜಲಮಾರ್ಗ ವಲಯವನ್ನು ಪರಿವರ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದಲ್ಲದೆ, ಆ ಕ್ಷೇತ್ರಗಳಲ್ಲಿ ಸಾಮರ್ಥ್ಯರ್ಧನೆ ಮತ್ತು ಸ್ವಾವಲಂಬನೆಯನ್ನು ಸಾಧಿಸುವ ನಿಟ್ಟಿನಲ್ಲಿ ನೆರವಾಗಲಿವೆ. ಆ ಮೂಲಕ ಈ ನಿಟ್ಟಿನಲ್ಲಿ ಪ್ರಧಾನ ಮಂತ್ರಿಯವರ ಆಶಯಕ್ಕೆ ಇವು ಅನುಗುಣವಾಗಿವೆ.
ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಇಂದು ಬೆಳಗ್ಗೆ ದೇವಾಲಯದಲ್ಲಿ ಭಗವಾನ್ ಗುರುವಾಯೂರಪ್ಪನ ದರ್ಶನ ಪಡೆದ ಬಗ್ಗೆ ಮಾತನಾಡಿದರು. ಅಯೋಧ್ಯೆ ಧಾಮದಲ್ಲಿ ಇತ್ತೀಚೆಗೆ ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉದ್ಘಾಟಿಸಿ ಮಾಡಿದ ಭಾಷಣದಲ್ಲಿ ರಾಮಾಯಣಕ್ಕೆ ಸಂಬಂಧಿಸಿದ ಕೇರಳದ ಪವಿತ್ರ ದೇವಾಲಯಗಳ ಉಲ್ಲೇಖಿಸಿದ್ದನ್ನು ಅವರು ಸ್ಮರಿಸಿದರು. ಅಯೋಧ್ಯೆ ಧಾಮದಲ್ಲಿ ಪ್ರಾಣ ಪ್ರತಿಷ್ಠಾಪನೆಗೆ ಕೆಲವೇ ದಿನಗಳ ಮೊದಲು ರಾಮಸ್ವಾಮಿ ದೇವಾಲಯದಲ್ಲಿ ದರ್ಶನ ಮಾಡಲು ಸಾಧ್ಯವಾಗಿದ್ದಕ್ಕಾಗಿ ಅವರು ಕೃತಜ್ಞತೆ ಸಲ್ಲಿಸಿದರು. ಇಂದು ಬೆಳಗ್ಗೆ ಕೇರಳದ ಕಲಾವಿದರ ಸುಂದರವಾದ ಪ್ರಸ್ತುತಿಯು ಕೇರಳದ ಅವಧ್ ಪುರಿಯ ಅನುಭವವನ್ನು ತಂದಿದೆ ಎಂದು ಪ್ರಧಾನಿ ಹೇಳಿದರು.
ʻಅಮೃತಕಾಲʼದ ಸಂದರ್ಭದಲ್ಲಿ ಭಾರತವನ್ನು 'ವಿಕಸಿತ ಭಾರತ'ವನ್ನಾಗಿ ಮಾಡುವ ಪಯಣದಲ್ಲಿ ಪ್ರತಿಯೊಂದು ರಾಜ್ಯದ ಪಾತ್ರವನ್ನು ಪ್ರಧಾನಿ ಒತ್ತಿ ಹೇಳಿದರು. ಹಿಂದಿನ ಕಾಲದಲ್ಲಿ ಭಾರತದ ಸಮೃದ್ಧಿಗೆ ಬಂದರುಗಳ ಪಾತ್ರವನ್ನು ಪಿಎಂ ಮೋದಿ ಸ್ಮರಿಸಿದರು ಮತ್ತು ಭಾರತವು ಹೊಸ ದಾಪುಗಾಲು ಇಡುತ್ತಿರುವ ಸಮಯದಲ್ಲಿ ಮತ್ತು ಜಾಗತಿಕ ವ್ಯಾಪಾರದ ಪ್ರಮುಖ ಕೇಂದ್ರವಾಗುತ್ತಿರುವ ಸಮಯದಲ್ಲಿ ಬಂದರುಗಳಿಗೆ ಇದೇ ರೀತಿಯ ಪ್ರಾಮುಖ್ಯತೆಯನ್ನು ಕಲ್ಪಿಸುವುದಾಗಿ ಪ್ರಧಾನಿ ಹೇಳಿದರು. ಇದರ ಭಾಗವಾಗಿ, ಪ್ರಸ್ತುತ ಕೊಚ್ಚಿಯಂತಹ ಬಂದರು ನಗರಗಳ ಸಾಮರ್ಥ್ಯವನ್ನು ಸುಧಾರಿಸುವಲ್ಲಿ ಸರ್ಕಾರ ಕಾರ್ಯನಿರತವಾಗಿದೆ ಎಂದು ಪ್ರಧಾನಿ ಹೇಳಿದರು. ಬಂದರು ಸಾಮರ್ಥ್ಯದ ಹೆಚ್ಚಳ, ಬಂದರು ಮೂಲಸೌಕರ್ಯದಲ್ಲಿ ಹೂಡಿಕೆ ಹಾಗೂ ʻಸಾಗರಮಾಲಾʼ ಯೋಜನೆಯಡಿ ಬಂದರುಗಳ ನಡುವೆ ಸಂಪರ್ಕ ಸುಧಾರಣೆ ಮಾಡಿರುವುದನ್ನು ಅವರು ಉಲ್ಲೇಖಿಸಿದರು.
ಕೊಚ್ಚಿಯಲ್ಲಿ ಇಂದು ಉದ್ಘಾಟನೆಗೊಂಡ ದೇಶದ ಅತಿದೊಡ್ಡ ʻಡ್ರೈ ಡಾಕ್ʼ ಅನ್ನು ಅವರು ಉಲ್ಲೇಖಿಸಿದರು. ಹಡಗು ನಿರ್ಮಾಣ, ಹಡಗು ದುರಸ್ತಿ ಮತ್ತು ಎಲ್‌ಪಿಜಿ ಆಮದು ಟರ್ಮಿನಲ್‌ನಂತಹ ಇತರ ಯೋಜನೆಗಳು ಕೇರಳ ಮತ್ತು ದಕ್ಷಿಣ ಭಾರತದ ಅಭಿವೃದ್ಧಿಗೆ ವೇಗವನ್ನು ನೀಡುತ್ತವೆ ಎಂದು ಪ್ರಧಾನಿ ಹೇಳಿದರು. ʻಕೊಚ್ಚಿ ಶಿಪ್ ಯಾರ್ಡ್ʼ ಮೂಲಕ 'ಮೇಡ್ ಇನ್ ಇಂಡಿಯಾ' ವಿಮಾನವಾಹಕ ನೌಕೆ ʻಐಎನ್‌ಎಸ್ ವಿಕ್ರಾಂತ್ʼ ನಿರ್ಮಾಣದ ಹೆಮ್ಮೆಯನ್ನು ಅವರು ಉಲ್ಲೇಖಿಸಿದರು. ಹೊಸ ಸೌಲಭ್ಯಗಳು ʻಶಿಪ್ ಯಾರ್ಡ್ʼನ ಸಾಮರ್ಥ್ಯವನ್ನು ಅನೇಕ ಪಟ್ಟು ಹೆಚ್ಚಿಸುತ್ತವೆ ಎಂದು ಪ್ರಧಾನಿ ಮಾಹಿತಿ ನೀಡದರು.
ಕಳೆದ 10 ವರ್ಷಗಳಲ್ಲಿ ಬಂದರುಗಳು, ಹಡಗು ಮತ್ತು ಜಲಮಾರ್ಗ ವಲಯದಲ್ಲಿ ಮಾಡಿದ ಸುಧಾರಣೆಗಳನ್ನು ಎತ್ತಿ ತೋರಿದ ಪ್ರಧಾನಿ, ಇದರಿಂದ ಭಾರತದ ಬಂದರುಗಳಿಗೆ ಹೊಸ ಹೂಡಿಕೆ ಹರಿದುಬಂದಿದೆ. ಆ ಮೂಲಕ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ ಎಂದು ಹೇಳಿದರು. ಭಾರತೀಯ ನಾವಿಕರಿಗೆ ಸಂಬಂಧಿಸಿದ ನೀತಿಗಳಲ್ಲಿ ತಂದ ಸುಧಾರಣೆಗಳು ದೇಶದಲ್ಲಿ ನಾವಿಕರ ಸಂಖ್ಯೆಯಲ್ಲಿ ಶೇಕಡಾ 140 ರಷ್ಟು ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಅವರು ಮಾಹಿತಿ ನೀಡಿದರು. ದೇಶದೊಳಗೆ, ಒಳನಾಡಿನ ಜಲಮಾರ್ಗಗಳನ್ನು ಬಳಸಿಕೊಳ್ಳುವ ಮೂಲಕ ಪ್ರಯಾಣಿಕರ ಮತ್ತು ಸರಕು ಸಾಗಣೆಗೆ ಹೆಚ್ಚಿನ ಉತ್ತೇಜನ ದೊರೆತಿದೆ ಎಂದು ಪ್ರಧಾನಿ ಹೇಳಿದರು.
"ಸರ್ವರ ಪ್ರಯತ್ನ (ಸಬ್ ಕಾ ಪ್ರಯಾಸ್) ಉತ್ತಮ ಫಲಿತಾಂಶಗಳನ್ನು ನೀಡುತ್ತದೆ," ಎಂದು ಹೇಳಿದ ಪ್ರಧಾನಮಂತ್ರಿಯವರು, ಕಳೆದ 10 ವರ್ಷಗಳಲ್ಲಿ ಭಾರತೀಯ ಬಂದರುಗಳು ಎರಡಂಕಿ ವಾರ್ಷಿಕ ಬೆಳವಣಿಗೆಯನ್ನು ಸಾಧಿಸಿವೆ ಎಂದರು. 10 ವರ್ಷಗಳ ಹಿಂದಿನವರೆಗೂ, ಹಡಗುಗಳು ಬಂದರುಗಳಲ್ಲಿ ಸಾಕಷ್ಟು ಸಮಯ ಕಾಯಬೇಕಾಗಿತ್ತು ಮತ್ತು ಸರಕುಗಳನ್ನು ಇಳಿಸಲು ಬಹಳ ಸಮಯ ತೆಗೆದುಕೊಳ್ಳುತ್ತಿತ್ತು. ಆದರೆ, "ಇಂದು, ಪರಿಸ್ಥಿತಿ ಬದಲಾಗಿದೆ" ಎಂದು ಪ್ರಧಾನಿ ಹೇಳಿದರು. ಹಡಗು ಸಂಚಾರದ ಸಮಯದ ವಿಷಯಕ್ಕೆ ಬಂದಾಗ ಭಾರತವು ಅನೇಕ ಅಭಿವೃದ್ಧಿ ಹೊಂದಿದ ದೇಶಗಳನ್ನು ಮೀರಿಸಿದೆ ಎಂದು ಅವರು ಮಾಹಿತಿ ನೀಡಿದರು.
ʻಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ʼಗೆ ಸಂಬಂಧಿಸಿದಂತೆ ಭಾರತದ ʻಜಿ-20ʼ ಅಧ್ಯಕ್ಷತೆಯ ಸಮಯದಲ್ಲಿ ಸಹಿ ಹಾಕಲಾದ ಒಪ್ಪಂದಗಳ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಿ ಮೋದಿ, "ಜಾಗತಿಕ ವ್ಯಾಪಾರದಲ್ಲಿ ಭಾರತದ ಸಾಮರ್ಥ್ಯ ಮತ್ತು ಸ್ಥಾನವನ್ನು ಜಗತ್ತು ಗುರುತಿಸುತ್ತಿದೆ" ಎಂದು ಹೇಳಿದರು. ʻಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ʼ ಯೋಜನೆಯು ಭಾರತದ ಕರಾವಳಿ ಆರ್ಥಿಕತೆಗೆ ಉತ್ತೇಜನ ನೀಡುವ ಮೂಲಕ ʻವಿಕಸಿತ ಭಾರತʼ ನಿರ್ಮಾಣವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಇತ್ತೀಚೆಗೆ ಪ್ರಾರಂಭಿಸಲಾದ ʻಕಡಲ ಅಮೃತ್ ಕಾಲʼ ಯೋಜನೆಯ ಬಗ್ಗೆಯೂ ಪ್ರಸ್ತಾಪಿಸಿದ ಪ್ರಧಾನಿ, ಈ ಯೋಜನೆಯು ʻವಿಕಸಿತ ಭಾರತʼಕ್ಕಾಗಿ ಭಾರತದ ಕಡಲ ಸಾಮರ್ಥ್ಯವನ್ನು ಬಲಪಡಿಸುವ ಮಾರ್ಗಸೂಚಿಯನ್ನು ನಮ್ಮ ಮುಂದಿಡುತ್ತದೆ ಎಂದರು. ದೇಶದಲ್ಲಿ ಬೃಹತ್ ಬಂದರುಗಳು, ಹಡಗು ನಿರ್ಮಾಣ ಮತ್ತು ಹಡಗು ದುರಸ್ತಿ ಮೂಲಸೌಕರ್ಯಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಸರ್ಕಾರದ ಪ್ರಯತ್ನಗಳನ್ನು ಅವರು ಪುನರುಚ್ಚರಿಸಿದರು.
ಹೊಸ ʻಡ್ರೈ ಡಾಕ್ʼ ಭಾರತದ ರಾಷ್ಟ್ರೀಯ ಹೆಮ್ಮೆಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಇದು ದೊಡ್ಡ ಹಡಗುಗಳನ್ನು ನಿಲ್ಲಿಸಲು ಅನುವು ಮಾಡಿಕೊಡುವುದಲ್ಲದೆ, ಹಡಗು ನಿರ್ಮಾಣ ಮತ್ತು ಹಡಗು ದುರಸ್ತಿ ಕಾರ್ಯಗಳನ್ನು ಇಲ್ಲಿ ಸಾಧ್ಯವಾಗಿಸುತ್ತದೆ. ಜೊತೆಗೆ, ವಿದೇಶಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಮತ್ತು ವಿದೇಶಿ ವಿನಿಮಯವನ್ನು ಉಳಿಸುತ್ತದೆ ಎಂದು ಅವರು ಮಾಹಿತಿ ನೀಡಿದರು.
ಅಂತಾರಾಷ್ಟ್ರೀಯ ಹಡಗು ದುರಸ್ತಿ ಘಟಕದ ಉದ್ಘಾಟನೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಇದು ಕೊಚ್ಚಿಯನ್ನು ಭಾರತ ಮತ್ತು ಏಷ್ಯಾದ ಅತಿದೊಡ್ಡ ಹಡಗು ದುರಸ್ತಿ ಕೇಂದ್ರವಾಗಿ ಪರಿವರ್ತಿಸಲಿದೆ ಎಂದರು. ʻಐಎನ್ಎಸ್ ವಿಕ್ರಾಂತ್ʼ ತಯಾರಿಕೆಯಲ್ಲಿ ಅನೇಕ ಸಣ್ಣ ಉದ್ಯಮಗಳು (ಎಂಎಸ್ಎಂಇ) ಒಗ್ಗೂಡುತ್ತಿರುವ ಉದಾಹರಣೆಯನ್ನು ವಿವರಿಸಿದ ಪ್ರಧಾನಮಂತ್ರಿಯವರು, ಇಂತಹ ಬೃಹತ್ ಹಡಗು ನಿರ್ಮಾಣ ಮತ್ತು ದುರಸ್ತಿ ಸೌಲಭ್ಯಗಳ ಉದ್ಘಾಟನೆಯೊಂದಿಗೆ ಸಣ್ಣ ಕೈಗಾರಿಕೆಗಳಿಗೆ ಹೊಸ ಪರಿಸರ ವ್ಯವಸ್ಥೆ ಸೃಷ್ಟಿಯಾಗುವ ವಿಶ್ವಾಸ ವ್ಯಕ್ತಪಡಿಸಿದರು. ಹೊಸ ʻಎಲ್‌ಪಿಜಿʼ ಆಮದು ಟರ್ಮಿನಲ್ ಕೊಚ್ಚಿ, ಕೊಯಮತ್ತೂರು, ಈರೋಡ್, ಸೇಲಂ, ಕೋಯಿಕ್ಕೋಡ್, ಮದುರೈ ಮತ್ತು ತಿರುಚ್ಚಿಯ ʻಎಲ್‌ಪಿಜಿʼ ಅಗತ್ಯಗಳನ್ನು ಪೂರೈಸುತ್ತದೆ. ಜೊತೆಗೆ, ಕೈಗಾರಿಕೆಗಳು ಇತರ ಆರ್ಥಿಕ ಅಭಿವೃದ್ಧಿ ಚಟುವಟಿಕೆಗಳಿಗೆ ಅನುವುದು ಮಾಡುತ್ತದೆ. ಈ ಪ್ರದೇಶಗಳಲ್ಲಿ ಹೊಸ ಉದ್ಯೋಗಗಳ ಸೃಷ್ಟಿಗೂ ನೆರವಾಗುತ್ತದೆ ಎಂದು ಅವರು ಹೇಳಿದರು.
ಹಸಿರು ತಂತ್ರಜ್ಞಾನ ಸಾಮರ್ಥ್ಯದಲ್ಲಿ ʻಕೊಚ್ಚಿ ಶಿಪ್ ಯಾರ್ಡ್ʼನ ಅಗ್ರಗಣ್ಯ ಸ್ಥಾನ ಮತ್ತು 'ಮೇಕ್ ಇನ್ ಇಂಡಿಯಾ' ಹಡಗುಗಳ ತಯಾರಿಕೆಯಲ್ಲಿ ಅದರ ಪ್ರಾಮುಖ್ಯತೆಯನ್ನು ಪ್ರಧಾನಿ ಉಲ್ಲೇಖಿಸಿದರು. ʻಕೊಚ್ಚಿ ವಾಟರ್ ಮೆಟ್ರೋʼಗಾಗಿ ತಯಾರಿಸಿದ ವಿದ್ಯುತ್ ಹಡಗುಗಳನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು. ಅಯೋಧ್ಯೆ, ವಾರಣಾಸಿ, ಮಥುರಾ ಮತ್ತು ಗುವಾಹಟಿಗೆ ʻಎಲೆಕ್ಟ್ರಿಕ್ ಹೈಬ್ರಿಡ್ ಪ್ಯಾಸೆಂಜರ್ ದೋಣಿʼಗಳನ್ನು ಇಲ್ಲಿ ನಿರ್ಮಿಸಲಾಗುತ್ತಿದೆ. "ದೇಶದ ನಗರಗಳಲ್ಲಿ ಆಧುನಿಕ ಹಾಗೂ ಹಸಿರು ಜಲ ಸಂಪರ್ಕ ಜಾಲ ನಿರ್ಮಾಣದಲ್ಲಿ ʻಕೊಚ್ಚಿ ಶಿಪ್ ಯಾರ್ಡ್ʼ ಪ್ರಮುಖ ಪಾತ್ರ ವಹಿಸುತ್ತಿದೆ," ಎಂದು ಅವರು ಹೇಳಿದರು. ಇಲ್ಲಿ ನಾರ್ವೆ ದೇಶಕ್ಕಾಗಿ ಶೂನ್ಯ-ಹೊರಸೂಸುವಿಕೆಯ ಎಲೆಕ್ಟ್ರಿಕ್ ಸರಕು ದೋಣಿಗಳನ್ನು ತಯಾರಿಸಲಾಗುತ್ತಿದೆ ಮತ್ತು ವಿಶ್ವದ ಮೊದಲ ಹೈಡ್ರೋಜನ್ ಇಂಧನ ಆಧರಿತ ಫೀಡರ್ ಕಂಟೇನರ್ ಹಡಗಿನ ಕೆಲಸ ಪ್ರಗತಿಯಲ್ಲಿದೆ ಎಂದು ಅವರು ಉಲ್ಲೇಖಿಸಿದರು. "ಭಾರತವನ್ನು ಹೈಡ್ರೋಜನ್ ಇಂಧನ ಆಧಾರಿತ ಸಾರಿಗೆಯತ್ತ ಕೊಂಡೊಯ್ಯುವ ನಮ್ಮ ಧ್ಯೇಯವನ್ನು ʻಕೊಚ್ಚಿ ಶಿಪ್ ಯಾರ್ಡ್ʼ ಮತ್ತಷ್ಟು ಬಲಪಡಿಸುತ್ತಿದೆ. ಶೀಘ್ರದಲ್ಲೇ ದೇಶವು ದೇಶೀಯ ಹೈಡ್ರೋಜನ್ ಇಂಧನ ಆಧರಿತ ದೋಣಿಯನ್ನು ಪಡೆಯಲಿದೆ ಎಂಬ ವಿಶ್ವಾಸ ನನಗಿದೆ," ಎಂದು ಪ್ರಧಾನಿ ಮೋದಿ ಹೇಳಿದರು.
ನೀಲಿ ಆರ್ಥಿಕತೆ ಮತ್ತು ಬಂದರು ಆಧಾರಿತ ಅಭಿವೃದ್ಧಿಯಲ್ಲಿ ಮೀನುಗಾರರ ಸಮುದಾಯದ ಪಾತ್ರವನ್ನು ಪ್ರಧಾನಿ ಒತ್ತಿ ಹೇಳಿದರು. ಕಳೆದ 10 ವರ್ಷಗಳಲ್ಲಿ ಮೀನು ಉತ್ಪಾದನೆ ಮತ್ತು ರಫ್ತಿನಲ್ಲಿ ಹಲವು ಪಟ್ಟು ಹೆಚ್ಚಳವಾಗಿದೆ. ʻಪ್ರಧಾನಮಂತ್ರಿ ಮತ್ಸ್ಯ ಸಂಪದʼ ಯೋಜನೆ ಅಡಿಯಲ್ಲಿ ಹೊಸ ಮೂಲಸೌಕರ್ಯ ಯೋಜನೆಗಳ ಅಭಿವೃದ್ಧಿ, ಆಳ ಸಮುದ್ರ ಮೀನುಗಾರಿಕೆ ನಡೆಸಲು ಆಧುನೀಕರಿಸಿದ ದೋಣಿಗಳಿಗೆ ಕೇಂದ್ರ ಸರ್ಕಾರ ನೀಡುವ ಸಬ್ಸಿಡಿ ಮತ್ತು ರೈತರ ಮಾದರಿಯಲ್ಲಿ ಮೀನುಗಾರರಿಗೆ ನೀಡಲಾದ ʻಕಿಸಾನ್ ಕ್ರೆಡಿಟ್ ಕಾರ್ಡ್ʼಗಳು ಈ ಹೆಚ್ಚಳಕ್ಕೆ ಕಾರಣ ಎಂದು ಶ್ರೀ ಮೋದಿ ಹೇಳಿದರು. ಸಮುದ್ರಾಹಾರ ಸಂಸ್ಕರಣಾ ಕ್ಷೇತ್ರದಲ್ಲಿ ಭಾರತದ ಕೊಡುಗೆಗಳನ್ನು ಹೆಚ್ಚಿಸಲು ಸರ್ಕಾರ ಉತ್ತೇಜನ ನೀಡುತ್ತಿದೆ, ಇದು ಮೀನುಗಾರರ ಆದಾಯದಲ್ಲಿ ಭಾರಿ ಹೆಚ್ಚಳಕ್ಕೆ ಕಾರಣವಾಗುತ್ತದೆ ಮತ್ತು ಅವರ ಜೀವನವನ್ನು ಸುಲಭಗೊಳಿಸುತ್ತದೆ ಎಂದು ಅವರು ಹೇಳಿದರು. ಕೇರಳದ ತ್ವರಿತ ಅಭಿವೃದ್ಧಿಗೆ ಆಶಯ ವ್ಯಕ್ತಪಡಿಸುವ ಮೂಲಕ ಪ್ರಧಾನಮಂತ್ರಿಯವರು ತಮ್ಮ ಮುಕ್ತಾಯಗೊಳಿಸಿದರು ಮತ್ತು ಹೊಸ ಮೂಲಸೌಕರ್ಯ ಯೋಜನೆಗಳನ್ನು ಪಡೆದದ್ದಕ್ಕಾಗಿ ನಾಗರಿಕರನ್ನು ಅಭಿನಂದಿಸಿದರು.
ಕೇರಳ ರಾಜ್ಯಪಾಲ ಶ್ರೀ ಆರಿಫ್ ಮೊಹಮ್ಮದ್ ಖಾನ್, ಕೇರಳ ಮುಖ್ಯಮಂತ್ರಿ ಶ್ರೀ ಪಿಣರಾಯಿ ವಿಜಯನ್; ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವ ಶ್ರೀ ಸರ್ಬಾನಂದ ಸೋನೊವಾಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿನ್ನೆಲೆ
ಕೊಚ್ಚಿಯ ʻಕೊಚ್ಚಿನ್ ಶಿಪ್ ಯಾರ್ಡ್ ಲಿಮಿಟೆಡ್ʼನ(ಸಿಎಸ್ಎಲ್) ಹಾಲಿ ಆವರಣದಲ್ಲಿ ಸುಮಾರು 1,800 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ʻಹೊಸ ಡ್ರೈ ಡಾಕ್ʼ, ನವ ಭಾರತದ ಎಂಜಿನಿಯರಿಂಗ್ ಪರಾಕ್ರಮವನ್ನು ಪ್ರತಿಬಿಂಬಿಸುವ ಪ್ರಮುಖ ಯೋಜನೆಯಾಗಿದೆ. 75/60 ಮೀಟರ್ ಅಗಲ, 13 ಮೀಟರ್ ಆಳ ಮತ್ತು 9.5 ಮೀಟರ್ ವರೆಗಿನ ಡ್ರಾಫ್ಟ್ ಹೊಂದಿರುವ 310 ಮೀಟರ್ ಉದ್ದದ ಈ ʻಸ್ಟೆಪ್ಡ್ ಡ್ರೈ ಡಾಕ್ʼ ಈ ಪ್ರದೇಶದ ಅತಿದೊಡ್ಡ ಸಮುದ್ರ ಮೂಲಸೌಕರ್ಯಗಳಲ್ಲಿ ಒಂದಾಗಿದೆ. ಹೊಸ ʻಡ್ರೈ ಡಾಕ್ʼ ಯೋಜನೆಯು ಭಾರಿ ನೆಲದ ಲೋಡಿಂಗ್ ಅನ್ನು ಒಳಗೊಂಡಿದೆ. ಇದು 70,000 ಟನ್ ತೂಕ ಹೊತ್ತ ಭವಿಷ್ಯದ ವಿಮಾನವಾಹಕ ನೌಕೆಗಳು ಹಾಗೂ ದೊಡ್ಡ ವಾಣಿಜ್ಯ ಹಡಗುಗಳಂತಹ ವ್ಯೂಹಾತ್ಮಕ ಸ್ವತ್ತುಗಳನ್ನು ನಿರ್ವಹಿಸುವಲ್ಲಿ ಭಾರತದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ತುರ್ತು ರಾಷ್ಟ್ರೀಯ ಅಗತ್ಯಗಳಿಗಾಗಿ ವಿದೇಶಗಳ ಮೇಲಿನ ಭಾರತದ ಅವಲಂಬನೆಯನ್ನು ತಪ್ಪಿಸಲು ಸಾಧ್ಯವಾಗಲಿದೆ.
ಸುಮಾರು 970 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ʻಅಂತರರಾಷ್ಟ್ರೀಯ ಹಡಗು ದುರಸ್ತಿ ಘಟಕʼ(ಐಎಸ್ಆರ್‌ಎಫ್) ಯೋಜನೆಯು 6000 ಟನ್ ಸಾಮರ್ಥ್ಯದ ಹಡಗು ಲಿಫ್ಟ್ ವ್ಯವಸ್ಥೆ, ವರ್ಗಾವಣೆ ವ್ಯವಸ್ಥೆ, ಆರು ಕಾರ್ಯಾಗಾರಗಳು ಮತ್ತು ಸುಮಾರು 1,400 ಮೀಟರ್ ಬೆರ್ತ್ ಅನ್ನು ಹೊಂದಿದೆ. ಇದು 130 ಮೀಟರ್ ಉದ್ದದ 7 ಹಡಗುಗಳಿಗೆ ಏಕಕಾಲದಲ್ಲಿ ಸ್ಥಳಾವಕಾಶ ಕಲ್ಪಿಸುತ್ತದೆ. ʻಐಎಸ್ಆರ್‌ಎಫ್ʼ ಕೊಚ್ಚಿ ಶಿಪ್ ಯಾರ್ಡ್ ಲಿಮಿಟೆಡ್‌ನ ಹಾಲಿ ಹಡಗು ದುರಸ್ತಿ ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ ಮತ್ತು ವಿಸ್ತರಿಸುತ್ತದೆ. ಜೊತೆಗೆ ಕೊಚ್ಚಿಯನ್ನು ಜಾಗತಿಕ ಹಡಗು ದುರಸ್ತಿ ಕೇಂದ್ರವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ.
ಕೊಚ್ಚಿಯ ಪುದುವೈಪೀನ್‌ನಲ್ಲಿರುವ ʻಇಂಡಿಯನ್ ಆಯಿಲ್ʼ ಸಂಸ್ಥೆಯ ʻಎಲ್‌ಪಿಜಿʼ ಆಮದು ಟರ್ಮಿನಲ್ ಅನ್ನು ಸುಮಾರು 1,236 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ. 15400 ಮೆಟ್ರಿಕ್ ಟನ್ ಶೇಖರಣಾ ಸಾಮರ್ಥ್ಯ ಹೊಂದಿರುವ ಈ ಟರ್ಮಿನಲ್, ಈ ಪ್ರದೇಶದ ಲಕ್ಷಾಂತರ ಮನೆಗಳು ಮತ್ತು ವ್ಯವಹಾರಗಳಿಗೆ ಎಲ್‌ಜಿಯ ಸ್ಥಿರ ಪೂರೈಕೆಯನ್ನು ಖಚಿತಪಡಿಸುತ್ತದೆ. ಈ ಯೋಜನೆಯು ಎಲ್ಲರಿಗೂ ಕೈಗೆಟುಕುವ ದರದಲ್ಲಿ ಇಂಧನವನ್ನು ಖಾತರಿಪಡಿಸುವ ಭಾರತದ ಪ್ರಯತ್ನಗಳನ್ನು ಮತ್ತಷ್ಟು ಬಲಪಡಿಸುತ್ತದೆ.
ಈ 3 ಯೋಜನೆಗಳ ಕಾರ್ಯಾರಂಭದೊಂದಿಗೆ, ರಾಷ್ಟ್ರದ ಹಡಗು ನಿರ್ಮಾಣ ಮತ್ತು ದುರಸ್ತಿ ಸಾಮರ್ಥ್ಯ ಹಾಗೂ ಪೂರಕ ಕೈಗಾರಿಕೆಗಳು ಸೇರಿದಂತೆ ಇಂಧನ ಮೂಲಸೌಕರ್ಯಗಳ ಬೆಳವಣಿಗೆಗೆ ಉತ್ತೇಜನ ಸಿಗಲಿದೆ. ಈ ಯೋಜನೆಗಳು ಆಮದು-ರಫ್ತು ವ್ಯಾಪಾರವನ್ನು ಹೆಚ್ಚಿಸುತ್ತವೆ, ಸರಕುಸಾಗಣೆ ವೆಚ್ಚವನ್ನು ಕಡಿಮೆ ಮಾಡುತ್ತವೆ, ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುತ್ತವೆ, ಸ್ವಾವಲಂಬನೆಯನ್ನು ನಿರ್ಮಿಸುತ್ತವೆ ಮತ್ತು ಹಲವಾರು ದೇಶೀಯ ಮತ್ತು ಅಂತರರಾಷ್ಟ್ರೀಯ ವ್ಯಾಪಾರ ಅವಕಾಶಗಳನ್ನು ಸೃಷ್ಟಿಸುತ್ತವೆ.
***
(Release ID: 1996994)
Visitor Counter : 147
Read this release in:
English
,
Urdu
,
Marathi
,
Hindi
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam