ಇಂಧನ ಸಚಿವಾಲಯ

​​​​​​​ಬೆಂಗಳೂರಿನ ಐಐಎಸ್ಸಿಯಲ್ಲಿ ಬಹುಶಿಸ್ತೀಯ ಇಂಧನ ಸಂಶೋಧನಾ ಸಂಸ್ಥೆ (ಐಸಿಇಆರ್ )ನ ಹೊಸ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಕೇಂದ್ರ ಇಂಧನ ಸಚಿವ ಶ್ರೀ ಆರ್ .ಕೆ.ಸಿಂಗ್


​​​​​​​ಇಂಧನ ಹಣಕಾಸು ನಿಗಮ ಹೂಡಿಕೆ ಮಾಡಿರುವ 60.74 ಕೋಟಿ ಮೊತ್ತದ ಈ ಯೋಜನೆ ವೈಜ್ಞಾನಿಕ ಪ್ರಗತಿಯಲ್ಲಿ ಮಹತ್ವದ ಹೆಜ್ಜೆ: ಕಟ್ಟಡ 2026ರ ಮಾರ್ಚ್ ಗೆ ಪೂರ್ಣ

Posted On: 28 DEC 2023 7:36PM by PIB Bengaluru

ಕೇಂದ್ರ ಇಂಧನ ಮತ್ತು ಹೊಸ ಹಾಗೂ ನವೀಕರಿಸಬಹುದಾದ ಇಂಧನ ಸಚಿವ ಶ್ರೀ ಆರ್. .ಕೆ. ಸಿಂಗ್ ಅವರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯಲ್ಲಿ ಇಂದು ಬಹುಶಿಸ್ತೀಯ ಇಂಧನ ಸಂಶೋಧನಾ ಸಂಸ್ಥೆ (ಐಸಿಇಆರ್ )ನ ಹೊಸ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಭವಿಷ್ಯದ ಇಂಧನ ಸಂಶೋಧನೆ ಮತ್ತು ಸುಸ್ಥಿರ ತಂತ್ರಜ್ಞಾನಗಳನ್ನು ರೂಪಿಸುವಲ್ಲಿ ಈ ಕಾರ್ಯಕ್ರಮ ಅತ್ಯಂತ ಮಹತ್ವದ ಹೆಜ್ಜೆಯಾಗಿದೆ.  

ಐಸಿಇಆರ್ ಸಂಶೋಧನಾ ಉಪಕ್ರಮಗಳು ಹಸಿರು ಹೈಡ್ರೋಜನ್, ಎಸ್ ಸಿಒ2, ಪವರ್ ಮತ್ತು ಟರ್ಬೈನ್‌ಗಾಗಿ ನೆಟ್ ಝೀರೋ ತಂತ್ರಜ್ಞಾನ ಅಭಿವೃದ್ಧಿ, ಶುದ್ಧ ಕಲ್ಲಿದ್ದಲು ತಂತ್ರಜ್ಞಾನ, ಹೈಡ್ರೋಜನ್ ಮತ್ತು ಇತರ ಜೈವಿಕ ಇಂಧನಗಳ ಉತ್ಪಾದನೆಯಂತಹ ಹಸಿರು ಇಂಧನ ತಂತ್ರಜ್ಞಾನಗಳ ಮೇಲೆ ಮಹತ್ವದ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ಒಳಗೊಂಡಂತೆ ನವೀಕರಿಸಬಹುದಾದ ಇಂಧನ ವಲಯಗಳ ನಾನಾ ಆಯಾಮಗಳ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸುತ್ತವೆ.  ಜತೆಗೆ ಬಯೋಮಾಸ್, ಅಡ್ವಾನ್ಸ್ ಬ್ಯಾಟರಿಗಳು ಮತ್ತು ಇಂಧನ ಸಂಗ್ರಹ ವ್ಯವಸ್ಥೆಗಳು ಮತ್ತು ಸುಸ್ಥಿರ ತಂತ್ರಜ್ಞಾನಗಳಿಗೂ ಒತ್ತು ನೀಡುತ್ತಿದೆ.

ಇದರೊಂದಿಗೆ ಐಸಿಇಆರ್ ನಲ್ಲಿ ಹೊಸ ಅಧ್ಯಾಯ ಆರಂಭವಾಗಿದ್ದು, ಅದು ಗೌರವಾನ್ವಿತ ಪ್ರಧಾನ ಮಂತ್ರಿ ಅವರ ತಾಂತ್ರಿಕವಾಗಿ ಸಬಲೀಕರಣಗೊಂಡ ಮತ್ತು ಸ್ವಾವಲಂಬಿ ಭಾರತ ನಿರ್ಮಾಣದ ಕನಸನ್ನು ಸಾಕಾರಗೊಳಿಸಲು ಜ್ಞಾನ, ಕುತೂಹಲ ಮತ್ತು ಸಾಮೂಹಿಕ ಪ್ರಯತ್ನದೊಂದಿಗೆ ಮಹತ್ವದ ವೈಜ್ಞಾನಿಕ ಸಂಶೋಧನೆಗಳು ಹಾಗೂ ಪರಿವರ್ತನಾತ್ಮಕ ಬದಲಾವಣೆಗೆ ಕಾರಣವಾಗಲಿದೆ.

ಇಂಧನ ಹಣಕಾಸು ನಿಗಮ (ಪಿಎಫ್ ಸಿ) ತನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್‌ ಆರ್) ಉಪಕ್ರಮದ ಅಡಿಯಲ್ಲಿ ಈ ಯೋಜನೆಯನ್ನು ಬೆಂಬಲಿಸುತ್ತದೆ. ಉದ್ದೇಶಿತ ಹೊಸ ಕಟ್ಟಡವು ಪ್ರಸ್ತುತ ಐಸಿಇಆರ್ ಅನ್ನು ಹೊಂದಿರುವ ಹಳೆಯ ಮೂಲಸೌಕರ್ಯ ಬದಲಿಸುವ ಗುರಿಯನ್ನು ಹೊಂದಿದೆ, ಜತೆಗೆ ಇದು ತಳಮಹಡಿ ಜೊತೆಗೆ ಮೂರು ಮಹಡಿಗಳನ್ನು ಒಳಗೊಂಡ ಆಧುನಿಕ, ತಾಂತ್ರಿಕವಾಗಿ ಸುಧಾರಿತ ಸೌಲಭ್ಯವನ್ನು ಒದಗಿಸುತ್ತದೆ. ಇದು ಪ್ರಯೋಗಾಲಯಗಳು, ತರಗತಿ ಕೊಠಡಿಗಳು, ವಿಚಾರ ಸಂಕಿರಣ ಕೊಠಡಿಗಳು, ಸಭಾಂಗಣಗಳು, ಗ್ರಂಥಾಲಯ ಮತ್ತು ಕಂಪ್ಯೂಟೇಷನಲ್ ಸೌಲಭ್ಯಗಳನ್ನು ಒಳಗೊಂಡಿರುತ್ತದೆ.

ಪಿಎಫ್‌ಸಿಯು ಈ ಯೋಜನೆಗೆ 60.74 ಕೋಟಿ ರೂ.ಗಳ ಆರ್ಥಿಕ ಸಹಾಯವನ್ನು ಮಂಜೂರು ಮಾಡಿದೆ. ಸಿಪಿಡಬ್ಲೂಡಿ ತನ್ನ ನಿರ್ಮಾಣ ಕಾರ್ಯವನ್ನು 2026ರ ಮಾರ್ಚ್ ತಿಂಗಳೊಳಗೆ ಪೂರ್ಣಗೊಳಿಸಲು ನಿಗದಿಪಡಿಸಿದೆ.

ಕರ್ನಾಟಕ ಸರ್ಕಾರದ ಇಂಧನ ಸಚಿವರಾದ ಶ್ರೀ ಕೆ.ಜೆ. ಜಾರ್ಜ್, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಶ್ರೀ ಪಿ.ಸಿ. ಮೋಹನ್, ಬೆಂಗಳೂರು ಲೋಕಸಭಾ ದಕ್ಷಿಣ ಕ್ಷೇತ್ರದ ಸಂಸದರಾದ ಶ್ರೀ ತೇಜಸ್ವಿ ಸೂರ್ಯ, ಕರ್ನಾಟಕ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶ್ರೀ ಗೌರವ್ ಗುಪ್ತಾ, ಪಿಎಫ್ ಸಿಯ ನಿರ್ದೇಶಕರು (ವಾಣಿಜ್ಯ) ಶ್ರೀ ಮನೋಜ್ ಶರ್ಮಾ ಮತ್ತು ಪಿಎಫ್‌ಸಿ, ಸಿಎಸ್ಆರ್ ನ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ ಅಲಿ ಶಾ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

*****



 



(Release ID: 1991327) Visitor Counter : 88


Read this release in: English , Urdu , Hindi