ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ದಿಲ್ಲಿಯಲ್ಲಿ ವೇಗ ಪಡೆದುಕೊಂಡ ವಿಕಸಿತ ಭಾರತ ಸಂಕಲ್ಪ ಯಾತ್ರೆ 


ಇಂದು ಹೊಸದಿಲ್ಲಿಯ ಎನ್ ಡಿಎಂಸಿ ಸಿವಿಕ್ ಸೆಂಟರ್ ನಲ್ಲಿ ನಡೆದ ವಿ.ಬಿ.ಎಸ್. ವೈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಶ್ರೀಮತಿ ಸ್ಮೃತಿ ಜುಬಿನ್ ಇರಾನಿ ಮತ್ತು ಶ್ರೀ ಪಿಯೂಷ್ ಗೋಯಲ್ ಅವರು ಭಾಗವಹಿಸಿದರು

ಕೇಂದ್ರ ಸಚಿವ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಅವರು ವಿ.ಬಿ.ಎಸ್.ವೈ ಕಾರ್ಯಕ್ರಮದಲ್ಲಿ ಭಾಗವಹಿಸಿದರು

Posted On: 16 DEC 2023 8:02PM by PIB Bengaluru

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಶ್ರೀಮತಿ ಸ್ಮೃತಿ ಜುಬಿನ್ ಇರಾನಿ, ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಮತ್ತು ಜವಳಿ ಸಚಿವ ಶ್ರೀ ಪಿಯೂಷ್ ಗೋಯಲ್ ಮತ್ತು ಮಾಜಿ ಸಂಸದ ಶ್ರೀ ಬೈಜಯಂತ್ ಜಯ್ ಪಾಂಡಾ ಅವರು ಇಂದು ಹೊಸದಿಲ್ಲಿಯ  ಎನ್ ಡಿಎಂಸಿ ಸಿವಿಕ್ ಸೆಂಟರ್ ನಲ್ಲಿ ನಡೆದ ವಿಬಿಎಸ್ ವೈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜೊತೆಗೆ, ಕೇಂದ್ರ ನಾಗರಿಕ ವಿಮಾನಯಾನ ಮತ್ತು ಉಕ್ಕು ಸಚಿವ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಹಾಗು ಸಂಸದ ರಮೇಶ್ ಭಿದುರಿ ಅವರು ದಕ್ಷಿಣ ದಿಲ್ಲಿಯಲ್ಲಿ ನಡೆದ ವಿ.ಬಿ.ಎಸ್.ವೈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಮತ್ತು ಕೇಂದ್ರ ವಿದೇಶಾಂಗ ವ್ಯವಹಾರಗಳು ಹಾಗು ಸಂಸ್ಕೃತಿ ಇಲಾಖೆ ಸಹಾಯಕ ಸಚಿವೆ ಶ್ರೀಮತಿ ಮೀನಾಕ್ಷಿ ಲೇಖಿ ಚಾಣಕ್ಯಪುರಿಯಲ್ಲಿ ನಡೆದ ವಿ.ಬಿ.ಎಸ್.ವೈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಎನ್ ಡಿಎಂಸಿ ಸಿವಿಕ್ ಸೆಂಟರ್ ನಲ್ಲಿ ಶ್ರೀಮತಿ ಸ್ಮೃತಿ ಜುಬಿನ್ ಇರಾನಿ ಅವರು ವಿಕಸಿತ ಭಾರತ ಸಂಕಲ್ಪವನ್ನು ಬೋಧಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀ ಗೋಯಲ್, ವಿ.ಬಿ.ಎಸ್.ವೈ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುತ್ತದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಖಾತರಿ (ಗ್ಯಾರಂಟಿ) ಭರವಸೆಗಳನ್ನು ಸಾಮಾನ್ಯ ಜನರಿಗೆ ತಲುಪಿಸುವ ಪ್ರತಿಜ್ಞೆ ಮಾಡಿದ್ದಾರೆ ಎಂದು ಹೇಳಿದರು. ಮುದ್ರಾ ಯೋಜನೆ, ಪಿಎಂ ಸ್ವನಿಧಿ, ಆಯುಷ್ಮಾನ್ ಭಾರತ್, ಉಜ್ವಲ ಯೋಜನೆ ಮುಂತಾದ ಕಲ್ಯಾಣ ಯೋಜನೆಗಳನ್ನು ಎಲ್ಲರಿಗೂ ತಲುಪಿಸುವ ಗುರಿಯನ್ನು ಈ ಯಾತ್ರೆ ಹೊಂದಿದೆ. 'ಮೋದಿ ಕಿ ಗ್ಯಾರಂಟಿ' ವ್ಯಾನ್ ಗಳು ದೇಶಾದ್ಯಂತ ಸಂಚರಿಸುತ್ತಿವೆ, ಕಲ್ಯಾಣ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ಕೊಂಡೊಯ್ಯುತ್ತಿವೆ ಎಂದು ಅವರು ಹೇಳಿದರು.

ಕೇಂದ್ರ ನಾಗರಿಕ ವಿಮಾನಯಾನ ಮತ್ತು ಉಕ್ಕು ಸಚಿವ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಅವರು ದಕ್ಷಿಣ ದಿಲ್ಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಸಚಿವರು, ಯಾತ್ರೆಯ ಗುರಿ ಮತ್ತು ಉದ್ದೇಶದ ಬಗ್ಗೆ ಮಾತನಾಡಿದರು. "ಆತ್ಮನಿರ್ಭರ ಭಾರತವನ್ನು ನಿರ್ಮಿಸುವ ನಿಟ್ಟಿನಲ್ಲಿ ಈ ಯಾತ್ರೆಯು ಒಂದು ದಿಟ್ಟ ಹೆಜ್ಜೆಯಾಗಿದೆ" ಎಂದು ಅವರು ಹೇಳಿದರು.

ಶ್ರೀಸಾಮಾನ್ಯರ ಕಲ್ಯಾಣಕ್ಕಾಗಿ ರೂಪಿಸಲಾದ ಯೋಜನೆಗಳು ಅರ್ಹ ಮತ್ತು ಸರಿಯಾದ ಕೈಗಳಿಗೆ ತಲುಪುವುದನ್ನು ಐಇಸಿ ವ್ಯಾನ್ ಖಾತ್ರಿಪಡಿಸುತ್ತಿದೆ ಎಂದು ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದರು. ಯೋಜನೆಗಳ 100% ಪರಿಪೂರ್ಣತೆಯನ್ನು ಖಚಿತಪಡಿಸಿಕೊಳ್ಳುವುದು ಯಾತ್ರೆಯ ಉದ್ದೇಶ ಮತ್ತು ಗುರಿಯಾಗಿದೆ, ಅಂದರೆ ಯೋಜನೆಗಳ ಪ್ರಯೋಜನಗಳು ರಾಷ್ಟ್ರದ ಪ್ರತಿಯೊಬ್ಬ ಫಲಾನುಭವಿಗೆ ತಲುಪಿವೆ ಎಂದು ಅವರು ಹೇಳಿದರು.

ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಬಗ್ಗೆ ಮಾತನಾಡಿದ ಸಚಿವರು, ಪ್ರಧಾನಿ ಮೋದಿ ನೀಡಿದ ಖಾತರಿಗಳನ್ನು ಇನ್ನೂ ಪಡೆಯದವರಿಗೆ ಮಾಹಿತಿ ನೀಡುವುದು ಮತ್ತು ಸಹಾಯ ಮಾಡುವುದು ಸರ್ಕಾರದ ಕರ್ತವ್ಯ ಎಂದು ಒತ್ತಿ ಹೇಳಿದರು. "ದೇಶದ ಬಡವರಿಗೆ ದೇಶದ ಸಂಪನ್ಮೂಲಗಳ ಮೇಲೆ ಮೊದಲ ಹಕ್ಕು ಇದೆ" ಎಂದು ಅವರು ಹೇಳಿದರು. ಪಿಎಂಜಿಕೆಎವೈ ಅಡಿಯಲ್ಲಿ 80 ಕೋಟಿಗೂ ಹೆಚ್ಚು ಜನರು ಉಚಿತ ಪಡಿತರವನ್ನು ಪಡೆಯುತ್ತಿದ್ದಾರೆ, 4 ಕೋಟಿಗೂ ಹೆಚ್ಚು ಜನರು ಪಕ್ಕಾ ಮನೆಗಳನ್ನು ಪಡೆದಿದ್ದಾರೆ ಮತ್ತು ಜಲ ಜೀವನ್ ಮಿಷನ್ ಅಡಿಯಲ್ಲಿ 13 ಕೋಟಿಗೂ ಹೆಚ್ಚು ಮನೆಗಳು ನಳ್ಳಿ (ಕೊಳವೆ) ಮೂಲಕ ಉಚಿತ ನೀರಿನ ಸಂಪರ್ಕವನ್ನು ಪಡೆದಿವೆ ಎಂದು ಅವರು ವಿವರಿಸಿದರು.

ಚಾಣಕ್ಯಪುರಿಯಲ್ಲಿ ನಡೆದ ವಿ.ಬಿ.ಎಸ್.ವೈ. ಕಾರ್ಯಕ್ರಮದಲ್ಲಿ ಭಾರತ ಸರ್ಕಾರದ ವೈವಿಧ್ಯಮಯ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿರುವ ರಾಷ್ಟ್ರೀಯ ಮಿಷನ್ ಅನ್ನು ಮುನ್ನಡೆಸುವಲ್ಲಿ ಕೇಂದ್ರ ವಿದೇಶಾಂಗ ವ್ಯವಹಾರಗಳು ಮತ್ತು ಸಂಸ್ಕೃತಿ ರಾಜ್ಯ ಸಚಿವೆ ಶ್ರೀಮತಿ ಮೀನಾಕ್ಷಿ ಲೇಖಿ ಮುಂಚೂಣಿ ಪಾತ್ರ ವಹಿಸಿದರು. ಈ ಸಂದರ್ಭದಲ್ಲಿ ಶ್ರೀಮತಿ ಲೇಖಿ ಅವರು ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (ಪಿಎಂಜೆಎವೈ), ಪೋಷಣ್ ಅಭಿಯಾನ ಮತ್ತು ಪಿಎಂ ಉಜ್ವಲ ಯೋಜನೆಯಂತಹ ಪ್ರಮುಖ ಉಪಕ್ರಮಗಳ ಬಗ್ಗೆ  ಉತ್ಸಾಹದಿಂದ ಪ್ರಚಾರ ಮಾಡಿದರು. ಈ ಸಾಮೂಹಿಕ ಪ್ರಯತ್ನವು ಎಲ್ಲರನ್ನೂ ಒಳಗೊಳ್ಳುವ ಅಂತರ್ಗತ ಬೆಳವಣಿಗೆ ಮತ್ತು ನಾಗರಿಕ ಸಬಲೀಕರಣದೆಡೆಗೆ ದೃಢವಾದ ನಿರಂತರ ಸಮರ್ಪಣಾ ಭಾವಕ್ಕೆ  ಸಾಕ್ಷಿಯಾಗಿದೆ, ಉಜ್ವಲ ಸಾಮೂಹಿಕ ಭವಿಷ್ಯಕ್ಕಾಗಿ ಪರಿವರ್ತನೆ ತರುವಂತಹ  ಉಪಕ್ರಮಗಳಲ್ಲಿ ವ್ಯಾಪಕ ಭಾಗವಹಿಸುವಿಕೆ ಮತ್ತು ಗ್ರಹಿಕೆಯನ್ನು ಖಚಿತಪಡಿಸಿಕೊಳ್ಳಲು ಅದು ಶ್ರಮಿಸುತ್ತಿದೆ ಎಂದವರು ಹೇಳಿದರು.

ಸಹಾಯಕ ಸಚಿವರಾದ ಶ್ರೀಮತಿ ಲೇಖಿ ಅವರು ತಮ್ಮ ಭಾಷಣದಲ್ಲಿ, ಪ್ರಧಾನಿ ಮೋದಿಯವರ ನಾಯಕತ್ವವು ಜಾರಿಗೆ ತಂದ ಪರಿವರ್ತನಾತ್ಮಕ ಉಪಕ್ರಮಗಳನ್ನು ಪ್ರಮುಖವಾಗಿ ಪ್ರಸ್ತಾವಿಸಿದರು. ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ, ಅನಿಲ ಸಿಲಿಂಡರ್ ಗಳು, ಆಧಾರ್ ನವೀಕರಣಗಳು, ಸಾಲಗಳು ಮತ್ತು ಬ್ಯಾಂಕ್ ಖಾತೆಗಳಂತಹ ಅಗತ್ಯ ಸೌಲಭ್ಯಗಳನ್ನು ಪಡೆಯುವುದು ಜನರಿಗೆ ಹೆಚ್ಚು ಸುಲಭ ಸಾಧ್ಯವಾಗಿದೆ ಎಂದು ಅವರು ಹೇಳಿದರು. ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆಯ ಮೂಲಕ ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಿದ ಅವರು, 'ಮೋದಿಯವರ ಖಾತರಿಗಳ ಭರವಸೆಯ ಅಡಿಯಲ್ಲಿ, ಯಾರೂ ಕೂಡಾ ಅದರಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ನಮ್ಮ ಗುರಿಯಾಗಿದೆ' ಎಂಬುದನ್ನು ಒತ್ತಿ ಹೇಳಿದರು.

ಬೀಮಾ ಯೋಜನೆ ಮತ್ತು ಪಿಂಚಣಿ ಯೋಜನೆಯಂತಹ ಪ್ರಮುಖ ಸರ್ಕಾರಿ ಯೋಜನೆಗಳನ್ನು ಕುರಿತ ಚರ್ಚೆಯನ್ನು ಸಚಿವರು ಇನ್ನಷ್ಟು ವಿಸ್ತಾರವಾಗಿ ಪ್ರಸ್ತಾಪಿಸಿದರು, 60 ವರ್ಷಗಳನ್ನು ದಾಟಿದ ಬಳಿಕ  ವ್ಯಕ್ತಿಗಳು/ಜನರು  ತಮ್ಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳಬೇಕಾದ ಅಗತ್ವವನ್ನೂ ಅವರು  ಒತ್ತಿ ಹೇಳಿದರು. ಈ ಉಪಕ್ರಮಗಳನ್ನು ವಿ.ಬಿ.ಎಸ್.ವೈ.ನ ಧ್ಯೇಯದೊಂದಿಗೆ ಜೋಡಿಸಿ, ಪ್ರತಿಯೊಬ್ಬ ವ್ಯಕ್ತಿಯನ್ನು ಸಬಲೀಕರಣಗೊಳಿಸುವ, ಸಮುದಾಯ ಕಲ್ಯಾಣ ಮತ್ತು ಸಕ್ರಿಯ ಭಾಗವಹಿಸುವಿಕೆಯ ಸಾಮೂಹಿಕ ಮನೋಭಾವವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸಚಿವರು ಪರಿಣಾಮಕಾರಿಯಾಗಿ ಉತ್ಸಾಹದಿಂದ ಮಾತನಾಡಿದರು. ಸರ್ಕಾರದ ಉಪಕ್ರಮಗಳ ಪರಿವರ್ತಕ ಪರಿಣಾಮವನ್ನು ಶ್ರೀಮತಿ ಲೇಖಿ ಒತ್ತಿ ಹೇಳಿದರು, ವಿಶೇಷವಾಗಿ ಅನಿಲ ಸಿಲಿಂಡರ್ ಗಳಂತಹ ಮೂಲಭೂತ ಅವಶ್ಯಕತೆಗಳನ್ನು ಪಡೆದುಕೊಳ್ಳುವಂತಹ ಪ್ರಕ್ರಿಯೆಗಳನ್ನು ಸುವ್ಯವಸ್ಥಿತಗೊಳಿಸುವ ಬಗ್ಗೆಯೂ ಅವರು ಪ್ರಸ್ತಾಪಿಸಿದರು. ಈ ಸಂದರ್ಭದಲ್ಲಿ ಅಲ್ಲಿ ಹಾಕಲಾಗಿದ್ದ  ಬ್ಯಾಂಕ್ ಸ್ಟಾಲ್ ಗಳ ಪ್ರಯೋಜನವನ್ನು ಪಡೆಯಲು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರನ್ನು  ಪ್ರೋತ್ಸಾಹಿಸಿದ ಅವರು, ಬ್ಯಾಂಕ್ ಖಾತೆಗಳನ್ನು ತೆರೆಯುವ ಮತ್ತು ಈ ಪ್ರಯೋಜನಕಾರಿ ಯೋಜನೆಗಳನ್ನು ಬಳಸಿಕೊಳ್ಳುವ ಮಹತ್ವವನ್ನು ಒತ್ತಿ ಹೇಳಿದರು.

ಆರೋಗ್ಯ ರಕ್ಷಣೆಯಲ್ಲಿ ಪರಿವರ್ತನೆಯನ್ನು ತಂದಿರುವ ಕುರಿತಂತೆ  ಪ್ರಸ್ತಾಪಿಸಿದ ಶ್ರೀಮತಿ ಲೇಖಿ ಅವರು ಕ್ಷಯರೋಗ (ಟಿಬಿ) ಮತ್ತು ರೋಗಿಗಳ ಆರೈಕೆಗೆ ಅಗತ್ಯವಾದ ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ  ಅರಿವು ಮೂಡಿಸಬೇಕಾದ ಅವಶ್ಯಕತೆಯನ್ನು ಪ್ರತಿಪಾದಿಸಿದರು.  ಪೌಷ್ಠಿಕಾಂಶದ ಬೆಂಬಲ ಮತ್ತು ಚಿಕಿತ್ಸೆಗೆ ಅಗತ್ಯವಾದ ಔಷಧಿಗಳಿಗೆ ಸಂಬಂಧಿಸಿದಂತೆ ಇರುವ  ಸೌಲಭ್ಯಗಳನ್ನು ಒಳಗೊಂಡಿರುವ ಪ್ರಧಾನ ಮಂತ್ರಿ ಮತ್ತು ಸರ್ಕಾರ ನೀಡುವ ಸಮಗ್ರ ಆರೋಗ್ಯ ಯೋಜನೆಗಳ ಬಗ್ಗೆ ಅವರು ಸಭಿಕರಿಗೆ ಅರಿವು ಮೂಡಿಸಿದರು. ಆರೋಗ್ಯಕ್ಕೆ ಸಂಬಂಧಿಸಿ ಮುಂಜಾಗರೂಕತಾ  ಕ್ರಮಗಳ ಅಗತ್ಯವನ್ನು  ಪ್ರತಿಪಾದಿಸಿದ ಅವರು, ಆರೋಗ್ಯ ಶಿಬಿರಗಳಲ್ಲಿ ಭಾಗವಹಿಸುವಂತೆ ಮತ್ತು ಆರೋಗ್ಯ ತಪಾಸಣೆ ಮತ್ತು ಜಾಗೃತಿಗಾಗಿ ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐಇಸಿ) ವ್ಯಾನ್ ಗಳನ್ನು ಬಳಸುವಂತೆ ಆಗ್ರಹಿಸಿದರು. ಈ ಉಪಕ್ರಮಗಳನ್ನು "ವ್ಯಕ್ತಿಗಳ ಯೋಗಕ್ಷೇಮಕ್ಕೆ ಅಗತ್ಯವಾದ ಆರೋಗ್ಯ ಜ್ಞಾನ ಮತ್ತು ಸಂಪನ್ಮೂಲಗಳೊಂದಿಗೆ ಸಬಲೀಕರಣಗೊಳಿಸುವಂತೆವಿನ್ಯಾಸಗೊಳಿಸಲಾಗಿದೆ" ಎಂದೂ  ಅವರು ಹೇಳಿದರು.

ಈ ಪ್ರಮುಖ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಜಾಗೃತಿಯನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸುವಲ್ಲಿ ಮತ್ತು ಉತ್ತೇಜಿಸುವಲ್ಲಿ ಸರ್ಕಾರದ ಸಮರ್ಪಣೆಗೆ ಶ್ರೀಮತಿ ಲೇಖಿ ಅವರ ಉಪಸ್ಥಿತಿಯು ಒಂದು ಸಾಕ್ಷಿಯಾಯಿತು. ನಗರ ಸ್ಥಳೀಯ ಸಂಸ್ಥೆಗಳು ಮತ್ತು ಜಿಲ್ಲಾಡಳಿತಗಳು ನಿರ್ವಹಿಸಿದ ಪ್ರಮುಖ ಪಾತ್ರವನ್ನು ಅವರು ಶ್ಲಾಘಿಸಿದರು, ಈ ಅಗತ್ಯ ಉಪಕ್ರಮಗಳಲ್ಲಿ ಸಾರ್ವಜನಿಕ ಪಾಲ್ಗೊಳ್ಳುವಿಕೆ ಮತ್ತು ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಅವುಗಳ ನಿರ್ಣಾಯಕ ಪ್ರಯತ್ನಗಳನ್ನು ಅವರು ಉಲ್ಲೇಖಿಸಿದರು. 

ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆಯು ಜನರೆಡೆಗೆ ತೆರಳುವ ಮೂಲಕ ತನ್ನ  ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿರುವಾಗ, ಸಹಾಯಕ  ಸಚಿವರಾದ  ಲೇಖಿ ಅವರ ಬೆಂಬಲದ ಮಾತುಗಳು ಮತ್ತು ಪಾಲ್ಗೊಳ್ಳುವಿಕೆಯು   ಇಂತಹ ತಳಮಟ್ಟದ ಉಪಕ್ರಮಗಳ ಪರಿವರ್ತಕ ಪರಿಣಾಮವನ್ನು ಮತ್ತಷ್ಟು ಒತ್ತಿಹೇಳುತ್ತದೆ. ಅವರ ದೃಢವಾದ ಬೆಂಬಲವು ತಿಳುವಳಿಕೆಯುಳ್ಳ ಮತ್ತು ಎಲ್ಲರನ್ನೂ ಒಳಗೊಳ್ಳುವ ಅಂತರ್ಗತ ಸಮಾಜವನ್ನು ರೂಪಿಸುವಲ್ಲಿ ಅಗತ್ಯವಾದ ನಿರಂತರ ಬದ್ಧತೆಯನ್ನು ಒತ್ತಿಹೇಳುತ್ತದೆ. ಪ್ರಸ್ತುತ ಚಾಲ್ತಿಯಲ್ಲಿರುವ ಈ ಸಾಮೂಹಿಕ ಪ್ರಯತ್ನವು ಹೆಚ್ಚು ಸಮೃದ್ಧ ಮತ್ತು ಸಮಾನತೆಯ ಭಾರತದತ್ತ ಒಂದು ಹಾದಿಯನ್ನು ರೂಪಿಸುತ್ತದೆ, ಅದು ಎಲ್ಲರಿಗೂ ಉಜ್ವಲ ಭವಿಷ್ಯದ ಸಾಮೂಹಿಕ ಆಕಾಂಕ್ಷೆಯನ್ನು ಅನುರಣಿಸುತ್ತದೆ.

***

 


(Release ID: 1987594) Visitor Counter : 111


Read this release in: English , Urdu , Hindi , Telugu