ಸಂಪುಟ ಕಾರ್ಯಾಲಯ
azadi ka amrit mahotsav

​​​​​​​ಬಂಗಾಳಕೊಲ್ಲಿಯಲ್ಲಿ “ಮಿಚೌಂಗ್” ಚಂಡಮಾರುತ ಸನ್ನಿಹಿತವಾಗುತ್ತಿರುವ ಹಿನ್ನೆಲೆಯಲ್ಲಿ ಸಿದ್ಧತೆಯ ಬಗ್ಗೆ ಪರಿಶೀಲನಾ ಸಭೆ ನಡೆಸಿದ ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿ (ಎನ್ ಸಿಎಂಸಿ)

Posted On: 03 DEC 2023 7:26PM by PIB Bengaluru

ಸಂಪುಟ ಕಾರ್ಯದರ್ಶಿ ಶ್ರೀ ರಾಜೀವ್ ಗೌಬಾ ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿ (ಎನ್‌ಸಿಎಂಸಿ) ಇಂದು ಬಂಗಾಳ ಕೊಲ್ಲಿಯಲ್ಲಿ ಸನ್ನಿಹಿತವಾಗಿರುವ ‘ಮಿಚೌಂಗ್’ ಚಂಡಮಾರುತಕ್ಕೆ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸಚಿವಾಲಯಗಳು /ಇಲಾಖೆಗಳ ಮಾಡಿಕೊಂಡಿರುವ ಸಿದ್ಧತೆಯ  ಪರಿಶೀಲನಾ ಸಭೆ ನಡೆಸಿತು.

ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯ ಮಹಾನಿರ್ದೇಶಕರು ‘ಮಿಚೌಂಗ್’ ಚಂಡಮಾರುತದ ಸದ್ಯದ ಸ್ಥಿತಿಗತಿ ಕುರಿತು ಸಮಿತಿಗೆ ವಿವರಣೆ ನೀಡಿದರು. ಬಂಗಾಳ ಕೊಲ್ಲಿಯ ನೈಋತ್ಯ ಭಾಗದಲ್ಲಿದ್ದ ಚಂಡಮಾರುತವು ಕಳೆದ 06 ಗಂಟೆಗಳಲ್ಲಿ 9 kmph ವೇಗದಲ್ಲಿ ವಾಯುವ್ಯಕ್ಕೆ ಚಲಿಸಿತು ಮತ್ತು ಇಂದು ಅಂತಾರಾಷ್ಟ್ರೀಯ ಕಾಲಮಾನ 1630 ಗಂಟೆಗಳಲ್ಲಿ ಈಶಾನ್ಯಕ್ಕೆ ಅಕ್ಷಾಂಶ 11.8 °  ಮತ್ತು ಪೂರ್ವಕ್ಕೆ ರೇಖಾಂಶ 82.2 ° , ಸುಮಾರು 260 ಕಿಮೀ ಪೂರ್ವ-ಆಗ್ನೇಯಕ್ಕೆ ಸಮೀಪದಲ್ಲಿದೆ. ಪುದುಚೇರಿ, ಚೆನ್ನೈನಿಂದ ಆಗ್ನೇಯಕ್ಕೆ 250 ಕಿ.ಮೀ, ನೆಲ್ಲೂರಿನಿಂದ ದಕ್ಷಿಣ-ಆಗ್ನೇಯಕ್ಕೆ 380 ಕಿ.ಮೀ, ಬಾಪಟ್ಲಾದಿಂದ 490 ಕಿ.ಮೀ ದಕ್ಷಿಣ-ಆಗ್ನೇಯ ಮತ್ತು ಮಚಲಿಪಟ್ಟಣದಿಂದ 500 ಕಿ.ಮೀ ದಕ್ಷಿಣ-ಆಗ್ನೇಯದಲ್ಲಿ ಕೇಂದ್ರೀಕೃತವಾಗಿದೆ.

ಚಂಡಮಾರುತ ವಾಯುವ್ಯ ದಿಕ್ಕಿನಲ್ಲಿ ಚಲಿಸುವ ಸಾಧ್ಯತೆಯಿದೆ, ಮತ್ತಷ್ಟು ತೀವ್ರಗೊಂಡು ದಕ್ಷಿಣ ಆಂಧ್ರಪ್ರದೇಶ ಮತ್ತು ಉತ್ತರ ತಮಿಳುನಾಡು ಕರಾವಳಿಯ ಪಕ್ಕದ ಪಶ್ಚಿಮ ಬಂಗಾಳ ಕೊಲ್ಲಿಯನ್ನು ಡಿಸೆಂಬರ್ 4 ರ ಮುಂಜಾನೆ ತಲುಪುವ ಸಾಧ್ಯತೆಯಿದೆ. ಆನಂತರ, ಚಂಡಮಾರುತ ಉತ್ತರಾಭಿಮುಖವಾಗಿ ಬಹುತೇಕ ಸಮಾನಾಂತರವಾಗಿ ಮತ್ತು ದಕ್ಷಿಣ ಆಂಧ್ರಪ್ರದೇಶದ ಕರಾವಳಿಯ ಸಮೀಪದತ್ತ ಚಲಿಸುತ್ತದೆ ಮತ್ತು ಡಿಸೆಂಬರ್ 5 ರ ಮಧ್ಯಾಹ್ನದ ಸಮಯದಲ್ಲಿ ನೆಲ್ಲೂರು ಮತ್ತು ಮಚಲಿಪಟ್ಟಣಂ ನಡುವೆ ದಕ್ಷಿಣ ಆಂಧ್ರಪ್ರದೇಶದ ಕರಾವಳಿಯನ್ನು ದಾಟಿ ಗರಿಷ್ಠ 90-100 kmph ನಿರಂತರ ಗಾಳಿಯ ವೇಗ ಗಂಟೆಗೆ 110 ಕಿ.ಮೀ. ವೇಗವನ್ನು ಚಂಡಮಾರುತ ಪಡೆದುಕೊಳ್ಳಲಿದೆ.

ಸಂಪುಟ ಕಾರ್ಯದರ್ಶಿ, ಐಎಂಸಿ ನೀಡಿರುವ ಇತ್ತೀಚಿನ ಮುನ್ಸೂಚನೆಯಂತೆ ರಾಜ್ಯ ಸರ್ಕಾರಗಳು ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಬಲವಾಗಿ ಪ್ರತಿಪಾದಿಸಿದರು. ಅಲ್ಲದೆ, ಅವರು ಯಾವುದೇ ಜೀವ ಹಾನಿ ಆಗದಂತೆ ಮತ್ತು ಸಕಾಲದಲ್ಲಿ ಸೂಕ್ಷ್ಮ ಪ್ರದೇಶಗಳಿಂದ ಜನರನ್ನು ಸ್ಥಳಾಂತರ ಮಾಡುವ ಪ್ರಕ್ರಿಯೆ ಖಾತ್ರಿಪಡಿಸಬೇಕು ಎಂದು ಅವರು ಒತ್ತಿ ಹೇಳಿದರು.

ತಮಿಳುನಾಡು, ಒಡಿಶಾ, ಪುದುಚೇರಿ  ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಆಂಧ್ರಪ್ರದೇಶ ಕಂದಾಯ ಮತ್ತು ವಿಪತ್ತು ನಿರ್ವಹಣೆಯ ವಿಶೇಷ ಮುಖ್ಯ ಕಾರ್ಯದರ್ಶಿ ಅವರು ಕೈಗೊಂಡಿರುವ ಪೂರ್ವಭಾವಿ ಸಿದ್ಧತಾ ಕ್ರಮಗಳನ್ನು ಸಮಿತಿಗೆ ವಿವರಿಸಿದರು. ತಗ್ಗು ಪ್ರದೇಶಗಳನ್ನು ಗುರುತಿಸಲಾಗಿದ್ದು, ಪರಿಹಾರ ಕೇಂದ್ರಗಳಿಗೆ ಜನರನ್ನು ಸ್ಥಳಾಂತರಿಸಲು ಆರಂಭಿಸಲಾಗಿದೆ ಎಂದು ಸಮಿತಿಗೆ ತಿಳಿಸಲಾಯಿತು. ಎಸ್‌ಎಂಎಸ್ ಮತ್ತು ಹವಾಮಾನ ಮಾಹಿತಿ (ಬುಲಿಟಿನ್) ಗಳ ಮೂಲಕ ಸ್ಥಳೀಯ ಭಾಷೆಗಳಲ್ಲಿ ಎಚ್ಚರಿಕೆ ಸಂದೇಶಗಳನ್ನು ನೀಡಲಾಗುತ್ತಿದೆ. ಸಮುದ್ರದಲ್ಲಿದ್ದ ಮೀನುಗಾರರು ಮತ್ತು ಹಡಗುಗಳು ಸುರಕ್ಷಿತ ಸ್ಥಳಕ್ಕೆ ಮರಳಿವೆ. ಅಗತ್ಯ ವಸ್ತುಗಳನ್ನು ದಾಸ್ತಾನು ಮಾಡಲಾಗಿದೆ. ಸ್ಥಳೀಯ ಆಡಳಿತವು ದಿನದ 24 ಗಂಟೆ ನಿಗಾ ವಹಿಸಿದೆ ಮತ್ತು ಪರಿಸ್ಥಿತಿಯ ಮೇಲ್ವಿಚಾರಣೆಗಾಗಿ ಸಾಕಷ್ಟು ಸಂಖ್ಯೆಯ ಅಧಿಕಾರಿಗಳನ್ನು ನಿಯೋಜಿಸಿದೆ

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್ ಡಿಆರ್ ಎಫ್) ತಮಿಳುನಾಡು, ಆಂಧ್ರ ಪ್ರದೇಶ ಮತ್ತು ಪುದುಚೇರಿಗೆ 21 ತಂಡಗಳನ್ನು ನಿಯೋಜಿಸಲಾಗಿದೆ ಮತ್ತು 8 ಹೆಚ್ಚುವರಿ ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿ (ರಿಸರ್ವ್ ) ಇಡಲಾಗಿದೆ. ಕರಾವಳಿ ಪಡೆ, ಸೇನೆ ಮತ್ತು ನೌಕರೆಯ ರಕ್ಷಣಾ ಮತ್ತು ಪರಿಹಾರ ತಂಡಗಳು ಹಡಗು ಮತ್ತು ಹೆಲಿಕಾಪ್ಟರ್‌ ಗಳ ಸಹಿತ ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ.

ಕೇಂದ್ರ ಸರ್ಕಾರದ ಸಂಸ್ಥೆಗಳು ಮತ್ತು ತಮಿಳುನಾಡು, ಆಂಧ್ರಪ್ರದೇಶ, ಒಡಿಶಾ ಮತ್ತು ಪುದುಚೇರಿ ಸರ್ಕಾರಗಳ ಸಿದ್ಧತಾ ಕ್ರಮಗಳನ್ನು ಪರಿಶೀಲಿಸಿದ ಬಳಿಕ ಸಂಪುಟ ಕಾರ್ಯದರ್ಶಿ, ಎಲ್ಲಾ ಬಗೆಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಿ ಹೇಳಿದರು. ಯಾವುದೇ ಪ್ರಾಣಹಾನಿಯಾಗದಂತೆ ನೋಡಿಕೊಳ್ಳಬೇಕು ಹಾಗೂ ಆಸ್ತಿಪಾಸ್ತಿ ಹಾನಿಯನ್ನು ಕಡಿಮೆ ಮಾಡುವ ಗುರಿ ಹೊಂದಬೇಕು ಎಂದರು. ಜನರ ಸ್ಥಳಾಂತರ ಕಾರ್ಯವನ್ನು ಸಕಾಲದಲ್ಲಿ ಪೂರ್ಣಗೊಳಿಸಬೇಕು. ಸ್ಥಳೀಯ ಭಾಷೆಗಳಲ್ಲಿ ಸಕಾಲಿಕ ಎಚ್ಚರಿಕೆಗಳನ್ನು ನೀಡಬೇಕು ಎಂದು ಅವರು ನಿರ್ದೇಶನ ನೀಡಿದರು.

ಬಂದರು, ಹಡಗು ಮತ್ತು ಜಲಮಾರ್ಗಗಳು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಮತ್ತು ಭಾರತೀಯ ಕರಾವಳಿ ಕಾವಲು ಪಡೆಗಳಿಗೆ ಕಡಲಾಚೆಯ ಘಟಕಗಳಲ್ಲಿ ನಿಯೋಜಿಸಲಾದ ಎಲ್ಲಾ ದೋಣಿಗಳು / ಹಡಗುಗಳು ಮತ್ತು ಮಾನವ ಸಂಪನ್ಮೂಲವನ್ನು ತಕ್ಷಣವೇ ಅಪಾಯ ಮುಕ್ತ ಪ್ರದೇಶಕ್ಕೆ ಸ್ಥಳಾಂತರಿಸಬೇಕು ಎಂದು ಸಂಪುಟ ಕಾರ್ಯದರ್ಶಿ ನಿರ್ದೇಶನ ನೀಡಿದರು.  ತಮಿಳುನಾಡು, ಆಂಧ್ರಪ್ರದೇಶ, ಒಡಿಶಾ ಮತ್ತು ಪುದುಚೇರಿ ಸರ್ಕಾರಗಳಿಗೆ ಅಗತ್ಯಕ್ಕೆ ಅನುಗುಣವಾಗಿ ಸಾಕಷ್ಟು ಸಂಖ್ಯೆಯ ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗುವುದು ಮತ್ತು ಯಾವುದೇ ಸಹಾಯಕ್ಕಾಗಿ ಎಲ್ಲಾ ಕೇಂದ್ರ ಎಲ್ಲ ಸಂಸ್ಥೆಗಳು ಲಭ್ಯವಿರುತ್ತವೆ ಎಂದು ಅವರು ಭರವಸೆ ನೀಡಿದರು

ತಮಿಳುನಾಡು, ಒಡಿಶಾ ಮತ್ತು ಪುದುಚೇರಿ ಮುಖ್ಯ ಕಾರ್ಯದರ್ಶಿ, ಆಂಧ್ರ ಪ್ರದೇಶದ ಕಂದಾಯ ಮತ್ತು ವಿಪತ್ತು ನಿರ್ವಹಣೆಯ ವಿಶೇಷ ಮುಖ್ಯ ಕಾರ್ಯದರ್ಶಿ, ಕೇಂದ್ರ ಗೃಹ ಕಾರ್ಯದರ್ಶಿ, ಮೀನುಗಾರಿಕೆ ಇಲಾಖೆ ಕಾರ್ಯದರ್ಶಿ, ಇಂಧನ ಸಚಿವಾಲಯದ ಕಾರ್ಯದರ್ಶಿ, ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯದ ಕಾರ್ಯದರ್ಶಿ, ದೂರಸಂಪರ್ಕ ಇಲಾಖೆ ಕಾರ್ಯದರ್ಶಿ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಹೆಚ್ಚುವರಿ ಕಾರ್ಯದರ್ಶಿ, ಎನ್ ಡಿಎಂಎ ಸದಸ್ಯ ಕಾರ್ಯದರ್ಶಿ, ಐಎಂಡಿ ಮಹಾನಿರ್ದೇಶಕರು, ಕರಾವಳಿ ಪಡೆಯ ಮಹಾನಿರ್ದೇಶಕರು, ಸಿಐಎಸ್ ಸಿ, ಐಡಿಎಸ್, ಐಜಿ, ಎನ್ ಡಿಆರ್ ಎಫ್  ಮತ್ತು ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

*****


(Release ID: 1982314) Visitor Counter : 273