ವಾರ್ತಾ ಮತ್ತು ಪ್ರಸಾರ ಸಚಿವಾಲಯ
54ನೇ ಐಎಫ್ಎಫ್ಐಯಲ್ಲಿ ಪ್ರತಿಷ್ಠಿತ ಗೋಲ್ಡನ್ ಪೀಕಾಕ್ ಪ್ರಶಸ್ತಿಗೆ ಸ್ಪರ್ಧಿಸಲಿರುವ 15 ಚಲನಚಿತ್ರಗಳು
ಭಾರತೀಯ ಚಲನಚಿತ್ರಗಳಾದ 'ಸನಾ', 'ಕಾಂತಾರಾ' ಮತ್ತು 'ಮಿರ್ಬೀನ್' ಪ್ರಶಸ್ತಿಗಾಗಿ ಸ್ಪರ್ಧಿಸಲಿವೆ
ಗೋವಾ, 24 ನವೆಂಬರ್ 2023
ಗೋವಾದಲ್ಲಿ ನಡೆಯುತ್ತಿರುವ 54 ನೇ ಆವೃತ್ತಿಯ ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಆಯ್ದ 15 ಚಲನಚಿತ್ರಗಳು ಪ್ರತಿಷ್ಠಿತ ಗೋಲ್ಡನ್ ಪೀಕಾಕ್ ಪ್ರಶಸ್ತಿಗೆ ಸ್ಪರ್ಧಿಸಲಿವೆ. ಈ ಅಸಾಧಾರಣ ಚಿತ್ರಗಳ ತಾರಾ ಶ್ರೇಣಿಯ ಸಾಲಿನಲ್ಲಿ 12 ಅಂತರರಾಷ್ಟ್ರೀಯ ಮತ್ತು 3 ಭಾರತೀಯ ಚಲನಚಿತ್ರಗಳಿವೆ.
ಚಲನಚಿತ್ರ ನಿರ್ಮಾಣದಲ್ಲಿನ ಉತ್ಕೃಷ್ಟತೆಯನ್ನು ಗುರುತಿಸುವ, ಗೋಲ್ಡನ್ ಪೀಕಾಕ್ ಪ್ರಶಸ್ತಿಯು ವಿಶ್ವದ ಅತ್ಯಂತ ಪ್ರತಿಷ್ಠೆಯ ಚಲನಚಿತ್ರ ಗೌರವಗಳಲ್ಲಿ ಒಂದಾಗಿದೆ. ಈ ವರ್ಷದ ತೀರ್ಪುಗಾರರಲ್ಲಿ ಸ್ಪ್ಯಾನಿಷ್ ಚಲನ ಚಿತ್ರ ಛಾಯಾಗ್ರಾಹಕ ಜೋಸ್ ಲೂಯಿಸ್ ಅಲ್ಕೈನ್, ಫ್ರೆಂಚ್ ಚಲನಚಿತ್ರ ನಿರ್ಮಾಪಕರಾದ ಜೆರೋಮ್ ಪೈಲಾರ್ಡ್ ಮತ್ತು ಕ್ಯಾಥರೀನ್ ಡಸ್ಸಾರ್ಟ್, ಆಸ್ಟ್ರೇಲಿಯಾದ ಚಲನಚಿತ್ರ ನಿರ್ಮಾಪಕ ಹೆಲೆನ್ ಲೀಕೆ ಮತ್ತು ಜನ ಮೆಚ್ಚುಗೆ ಪಡೆದ ಭಾರತೀಯ ಚಲನಚಿತ್ರ ನಿರ್ಮಾಪಕ ಶೇಖರ್ ಕಪೂರ್ ಇದ್ದಾರೆ.
ಈ ವರ್ಷದ ಸ್ಪರ್ಧೆಯು ಈ ಕೆಳಗಿನ ಚಲನಚಿತ್ರಗಳೊಂದಿಗೆ ಅತ್ಯುತ್ತಮವಾದದ್ದನ್ನು ಪ್ರದರ್ಶಿಸುವ ಭರವಸೆ ನೀಡುತ್ತಿರುವುದರಿಂದ ನಿರೀಕ್ಷೆಯೂ ಹೆಚ್ಚಾಗುತ್ತಿದೆ:
1. ವುಮನ್ ಆಫ್ (ಮೂಲ ಶೀರ್ಷಿಕೆ- ಕೊಬಿಟಾ ಝಡ್)

ವುಮನ್ ಆಫ್ ಚಲನಚಿತ್ರವು 2023ರ ಪೋಲಿಷ್-ಸ್ವೀಡಿಷ್ ನಾಟಕದ (ಹಾಸ್ಯ ಭರಿತ) ಚಲನಚಿತ್ರವಾಗಿದ್ದು, ಮೊರ್ಗೊರ್ಜಾಟಾ ಸ್ಜುಮೊವ್ಸ್ಕಾ ಮತ್ತು ಮಿಚಾಲ್ ಎಂಗ್ಲರ್ಟ್ ಬರೆದು ನಿರ್ದೇಶಿಸಿದ್ದಾರೆ. ಕಮ್ಯುನಿಸಂನಿಂದ ಬಂಡವಾಳಶಾಹಿಗೆ ಪೋಲಿಷ್ ರೂಪಾಂತರದ/ಪರಿವರ್ತನೆಯ ಭೂದೃಶ್ಯದ ವಿರುದ್ಧದ ಹುರುಳನ್ನು ಈ ನಾಟಕ ಒಳಗೊಂಡಿದೆ .
2. ದ ಅದರ್ ವಿಡೋ (ಮೂಲ ಶೀರ್ಷಿಕೆ- ಪಿಲೆಗೇಶ್)

ಇಸ್ರೇಲಿ ನಿರ್ದೇಶಕ ಮಾಯಾನ್ ರಿಪ್ ಅವರ ಚೊಚ್ಚಲ ಚಿತ್ರವು ಆಧುನಿಕ ಒಂಟಿ ಮಹಿಳೆ ಎಲಾ ಬಗೆಗಿನ ಕರಾಳ ಮತ್ತು ಹಾಸ್ಯಮಯ ಕಥೆಯಾಗಿದೆ. 34 ವರ್ಷದ ಎಲಾ ರಂಗಭೂಮಿ ಡ್ರೆಸ್ಸರ್ ಮತ್ತು ಪ್ರೇಯಸಿ, ಆಕೆ ತನ್ನ ಪ್ರೇಮಿಯ ಹಠಾತ್ ಸಾವನ್ನು ಎದುರಿಸಬೇಕಾಗುತ್ತದೆ. ಅವಳು ಅವನ ಶಿವಾವನ್ನು (ಯಹೂದಿ ಶೋಕಾಚರಣೆಗಳು) ನೆರವೇರಿಸಲು ಪ್ರಾರಂಭಿಸುತ್ತಾಳೆ ಮತ್ತು ಅವಳಿಗೆ ನಿಷೇಧಿಸಲಾದ ಜೀವನವನ್ನು ಅನುಸರಿಸುತ್ತಾಳೆ. ಬಹಳ ಅನಿರೀಕ್ಷಿತವಾಗಿ ದುಃಖಕ್ಕೆ ಅವಳು ಈಡಾಗುತ್ತಾಳೆ. ಅಂತಿಮವಾಗಿ ಅವಳು ಶೋಕಿಸುವ ತನ್ನ ನ್ಯಾಯಸಮ್ಮತ ಹಕ್ಕಿಗಾಗಿ ಒತ್ತಾಯಿಸುತ್ತಾಳೆ.
3. ದ ಪಾರ್ಟಿ ಆಫ್ ಫೂಲ್ಸ್ (ಮೂಲ ಶೀರ್ಷಿಕೆ- ಸೆರೆಯಾಳುಗಳು)

ಅರ್ನಾಡ್ ಡೆಸ್ ಪಲ್ಲಿಯರ್ಸ್ ನಿರ್ದೇಶನದ "ಪಾರ್ಟಿ ಆಫ್ ಫೂಲ್ಸ್" ಸ್ತ್ರೀ ಒಗ್ಗಟ್ಟಿನ ಕಥೆಯಾಗಿದ್ದು, ಅವರಿಗಾಗಿ ನಿರ್ದಿಷ್ಟಪಡಿಸಲಾದ ವಿಧಿಯನ್ನು ಹೊರತುಪಡಿಸಿ ಬೇರೆ ಅದೃಷ್ಟದ ಕನಸು ಕಾಣುವ ಮಹಿಳೆಯರನ್ನು ಕುರಿತು ಚಿತ್ರಿಸಿದ ಕಥೆಯಾಗಿದೆ. ತಮ್ಮ ಇಚ್ಛೆಗೆ ವಿರುದ್ಧವಾಗಿ ಅನ್ಯಾಯವಾಗಿ 'ಪಾರ್ಟಿ ಆಫ್ ಫೂಲ್ಸ್' ಗೆ ಬಲವಂತವಾಗಿ ಸೇರ್ಪಡೆಗೊಂಡಿರುವ ಇತರ ಮಹಿಳೆಯರಿಗಿಂತ ಭಿನ್ನವಾಗಿ, ಫೆನ್ನಿ ಇಲ್ಲಿ ಸ್ವಯಂಪ್ರೇರಣೆಯಿಂದ ಬಂದಿದ್ದಾಳೆ. ಅವಳ ಏಕೈಕ ಗುರಿ ತನ್ನ ತಾಯಿಯನ್ನು ಹುಡುಕುವುದು ಮತ್ತು ಜೊತೆಯಾಗಿ ತಪ್ಪಿಸಿಕೊಳ್ಳುವುದು. ಈ ಫ್ರೆಂಚ್ ವೈಶಿಷ್ಟ್ಯದ ಚಿತ್ರವನ್ನು ಫಿಲಿಪ್ ರೂಸೆಲೆಟ್ ಮತ್ತು ಜೊನಾಥನ್ ಬ್ಲೂಮೆಂಟಲ್ ನಿರ್ಮಿಸಿದ್ದಾರೆ.
4. ಮೆಷರ್ಸ್ ಆಫ್ ಮೆನ್ (ಮೂಲ ಶೀರ್ಷಿಕೆ- ಡೆರ್ ವರ್ಮೆಸ್ಸೆನ್ ಮೆನ್ಶ್)

ಜರ್ಮನ್ ನಿರ್ದೇಶಕ ಲಾರ್ಸ್ ಕ್ರೌಮ್ 19 ನೇ ಶತಮಾನದ ಬರ್ಲಿನ್ ನಲ್ಲಿ ಹೆರೆರೊ ಮತ್ತು ನಾಮಾ ಬುಡಕಟ್ಟು ಜನಾಂಗದವರ ನರಮೇಧದ ಬಗ್ಗೆ ಚಿತ್ತ ಕಲಕುವ ಚಲನಚಿತ್ರವನ್ನು ಮಾಡಿದ್ದಾರೆ. ಜರ್ಮನ್ ಜನಾಂಗಶಾಸ್ತ್ರಜ್ಞ ಅಲೆಕ್ಸಾಂಡರ್ ಹಾಫ್ಮನ್, ಬರ್ಲಿನ್ ಎಥ್ನೋಲಾಜಿಕಲ್ ಮ್ಯೂಸಿಯಂಗಾಗಿ ಕಲೆ ಮತ್ತು ತಲೆಬುರುಡೆಗಳನ್ನು ಸಂಗ್ರಹಿಸಲು ಹಿಂದಿನ ವಸಾಹತು "ಜರ್ಮನ್ ನೈಋತ್ಯ ಆಫ್ರಿಕಾ (ಈಗ ನಮೀಬಿಯಾ)" ಗೆ ಪ್ರಯಾಣಿಸುತ್ತಾನೆ ಮತ್ತು ನಿಧಾನವಾಗಿ ವೃತ್ತಿಜೀವನದ ಲಾಭಕ್ಕಾಗಿ ತನ್ನ ನೈತಿಕತೆಯ ಕುರಿತಾದ ನಿಷ್ಠೆಯನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತಾನೆ, ಜರ್ಮನಿಯ ಇತಿಹಾಸವು ಕತ್ತಲೆಗೆ ಸರಿಯುತ್ತಿರುವಾಗ ಆತ ಬಿಳಿಯರ ಪ್ರಾಬಲ್ಯವನ್ನು ವಿರೋಧಿಸಲು ವಿಫಲನಾಗುತ್ತಾನೆ.
5. ಲುಬೊ

ಲುಬೊ 2023 ರ ಇಟಾಲಿಯನ್-ಸ್ವಿಸ್ ನಾಟಕ ಚಿತ್ರವಾಗಿದ್ದು, ಜಾರ್ಜಿಯೊ ಡಿರಿಟ್ಟಿ ನಿರ್ದೇಶಿಸಿದ್ದಾರೆ. ಲುಬೊ ಒಬ್ಬ ಅಲೆಮಾರಿ, ಬುಸ್ಕರ್ (ಸಾರ್ವಜನಿಕ ಸ್ಥಳಗಳಲ್ಲಿ ಮನೋರಂಜನೆ ನೀಡಿ ಸಂಪಾದನೆ ಮಾಡುವ ಕಲೆಗಾರ). 1939 ರಲ್ಲಿ ಜರ್ಮನ್ ಆಕ್ರಮಣದ ಅಪಾಯದಿಂದ ದೇಶದ ಗಡಿಗಳನ್ನು ರಕ್ಷಿಸಲು ಈತನನ್ನು ಸ್ವಿಸ್ ಸೈನ್ಯಕ್ಕೆ ಕರೆಸಿಕೊಳ್ಳಲಾಯಿತು. ಸ್ವಲ್ಪ ಸಮಯದ ನಂತರ, ಜೆಂಡರ್ ಮೆರಿಗಳು (ಇವರು ಅರೆ ಸೈನಿಕ ಅಧಿಕಾರಿಗಳು) ತಮ್ಮ ಮೂರು ಸಣ್ಣ ಮಕ್ಕಳನ್ನು ಕರೆದೊಯ್ಯುವುದನ್ನು ತಡೆಯುವ ಪ್ರಯತ್ನದಲ್ಲಿ ತನ್ನ ಹೆಂಡತಿ ಸತ್ತಿದ್ದಾಳೆ ಎಂಬುದನ್ನು ಅವನು ಕಂಡುಕೊಳ್ಳುತ್ತಾನೆ. ಲುಬೊ ತನ್ನ ಮಕ್ಕಳನ್ನು ಮರಳಿ ಪಡೆಯುವವರೆಗೆ ಮತ್ತು ತನ್ನ ಕಥೆಗೆ ಹಾಗು ತನ್ನಂತಹ ಎಲ್ಲಾ ಹೊರಗಿನವರ ಕಥೆಗೆ ನ್ಯಾಯ ಸಿಗುವವರೆಗೂ ಎಂದಿಗೂ ಶಾಂತಿ ಸಿಗುವುದಿಲ್ಲ ಎಂಬ ಭಾವನೆಯನ್ನು ಬೆಳೆಸಿಕೊಂಡಿರುತ್ತಾನೆ.
6. ಹಾಫ್ಮನ್ಸ್ ಫೇರಿ ಟೇಲ್ಸ್ (ಮೂಲ ಶೀರ್ಷಿಕೆ: ಸ್ಕಾಜ್ಕಿ ಗೊಫ್ಮಾನಾ)

ಈ ಚಿತ್ರವನ್ನು ಜಾರ್ಜಿಯನ್ ಮೂಲದ ರಷ್ಯಾದ ನಿರ್ದೇಶಕಿ ಟೀನಾ ಬರ್ಕಲಾಯಾ ನಿರ್ದೇಶಿಸಿದ್ದಾರೆ. 2000 ದ ದಶಕದ ಆರಂಭದಲ್ಲಿ, ಸೋವಿಯತ್ ಯುಗವು ಪಾಶ್ಚಿಮಾತ್ಯ ವಿಡಂಬನೆಯಾಗಿ ಕರಗಿ ಮಸುಕಾಗುತ್ತಿದ್ದ ಕಾಲಘಟ್ಟದಲ್ಲಿ ಈ ಚಿತ್ರವು ವಿಟಾಲಿಯೊಂದಿಗಿನ ಮದುವೆಯಲ್ಲಿ ಸಿಕ್ಕಿಬಿದ್ದ ಅಂಜುಬುರುಕ ಮಹಿಳೆ ನಡೆಜ್ಡಾ ಅವರನ್ನು ಅಪಾರ್ಟ್ಮೆಂಟಿಗಾಗಿ ಶೋಷಿಸುವ ಕಥೆಯನ್ನು ಚಿತ್ರಿಸುತ್ತದೆ. ಅವಳು ಬಹಳ ಬೇಡಿಕೆಯ ಕೈ ರೂಪದರ್ಶಿಯಾಗಿ (ಹ್ಯಾಂಡ್ ಮಾಡೆಲ್) ಹೊರಹೊಮ್ಮುತ್ತಾಳೆ, ಮತ್ತು ತನ್ನ ಜೀವನವನ್ನು ನಾಟಕೀಯವಾಗಿ ಮರುರೂಪಿಸಿಕೊಳ್ಳುತ್ತಾಳೆ.
7. ಎಂಡ್ ಲೆಸ್ ಬಾರ್ಡರ್ಸ್ (ಮೂಲ ಶೀರ್ಷಿಕೆ: ಮರ್ಜಾಯೆ ಬಿ ಪಯಾನ್)

ಅಬ್ಬಾಸ್ ಅಮಿನಿ ನಿರ್ದೇಶನದ ಎಂಡ್ಲೆಸ್ ಬಾರ್ಡರ್ಸ್ ಒಂದು ಕುತೂಹಲಕಾರಿ ಮನಮೋಹಕ ನಾಟಕವಾಗಿದ್ದು, ಇದರಲ್ಲಿ ಅಕ್ಷರಶಃ ಎಲ್ಲೆಡೆಯೂ ಅಪಾಯ ಅಡಗಿರುತ್ತದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉದಯವು ಜನಾಂಗೀಯ ಮತ್ತು ಬುಡಕಟ್ಟು ಯುದ್ಧಗಳ ಬೆಂಕಿಯನ್ನು ಉದ್ದೀಪಿಸಿದೆ. ದೇಶಭ್ರಷ್ಟ ಇರಾನಿನ ಶಿಕ್ಷಕ ಅಹ್ಮದ್, ಅಫ್ಘಾನಿಸ್ತಾನದ ಹಜಾರಾ ಕುಟುಂಬದೊಂದಿಗೆ ಪರಿಚಯವಾಗುತ್ತಾನೆ ಮತ್ತು ಈ ಪ್ರದೇಶದಲ್ಲಿ ಪೂರ್ವಾಗ್ರಹ ಮತ್ತು ಪಿಡುಗಿನ ನಿಜವಾದ ಮುಖವನ್ನು ನೋಡುತ್ತಾನೆ. ನಿಷೇಧಿತ ಪ್ರೀತಿಯು ಅವನನ್ನು ತನ್ನ ಸ್ವಂತ ಜೀವನದಲ್ಲಿ ಪ್ರೀತಿ ಮತ್ತು ಧೈರ್ಯದ ಕೊರತೆಯನ್ನು ಕಂಡುಕೊಳ್ಳುವಂತೆ ಮಾಡುತ್ತದೆ.
8. ಡೈ ಬಿಫೋರ್ ಡೆತ್ (ಮೂಲ ಶೀರ್ಷಿಕೆ: ಉಮ್ರಿ ಪ್ರಿಜೆ ಸ್ಮೃತಿ)

ಈ ಚಿತ್ರವನ್ನು ಅಹ್ಮದ್ ಇಮಾಮೊವಿಕ್ (ಬೋಸ್ನಿಯಾ ಮತ್ತು ಹರ್ಜೆಗೋವಿನಾ) ನಿರ್ದೇಶಿಸಿದ್ದಾರೆ. ಸುಂದರನಾದ ಸ್ತ್ರೀರೋಗತಜ್ಞ ಜ್ಲಾಟನ್ ತೀವ್ರ ಅನಾರೋಗ್ಯಕ್ಕೆ ಒಳಗಾಗುತ್ತಾನೆ ಮತ್ತು ನಿರ್ಗಮಿಸಲು ಸ್ವಲ್ಪ ಸಮಯವಷ್ಟೇ ಉಳಿದಿದೆ. ಇದು ತಾನು ಮಾಡಿದ ಗರ್ಭಪಾತಗಳಿಗೆ ಶಿಕ್ಷೆ ಎಂದು ಮನವರಿಕೆಯಾದ ಬಳಿಕ ಅವನು ತನ್ನ ಬಿಕ್ಕಟ್ಟುಗಳಿಗೆ/ ಸಂಘರ್ಷಗಳಿಗೆ ಉತ್ತರಗಳನ್ನು ಹುಡುಕುವ ನಿಟ್ಟಿನಲ್ಲಿ ಪ್ರಯಾಣವನ್ನು ಪ್ರಾರಂಭಿಸುತ್ತಾನೆ. ಜ್ಲಾಟನ್ ಒಂದು ಹುಟ್ಟಲಿರುವ ಜೀವವನ್ನು ಉಳಿಸುವುದರಿಂದ ಮಗು ಜನಿಸುತ್ತಿದ್ದಂತೆ ಅಂತಿಮ ಕ್ಷಣಗಳು ಸಾವಿನ ಮೇಲೆ ಜೀವನದ ವಿಜಯವಾಗಿ ಬದಲಾಗುತ್ತವೆ.
9. ಬೋಸ್ನಿಯನ್ ಪಾಟ್ (ಮೂಲ ಶೀರ್ಷಿಕೆ: ಬೊಸಾನ್ಸ್ಕಿ ಲೋನಾಕ್)

ಕ್ರೊಯೇಷಿಯಾದ ನಿರ್ದೇಶಕ ಪಾವೊ ಮರಿಂಕೊವಿಕ್ ತಮ್ಮ ಮೇರುಕೃತಿಯೊಂದಿಗೆ ಐಎಫ್ಎಫ್ಐಗೆ ಮರಳಿದ್ದಾರೆ. ಇದು ಆಸ್ಟ್ರಿಯಾದಲ್ಲಿ ವಾಸಿಸುವ ಬೋಸ್ನಿಯನ್ ಬರಹಗಾರನ ಕಥೆಯಾಗಿದ್ದು, ಕಠಿಣ ವಲಸೆ ನಿಯಮಗಳು ಮತ್ತು ಅವನ ಸ್ವಂತ ನಿರ್ಲಕ್ಷ್ಯದಿಂದಾಗಿ ವಾಸದ ಪರವಾನಗಿ ಇಲ್ಲದೆ ಅಲ್ಲಿ ಉಳಿಯುತ್ತಾನೆ. ಗಡೀಪಾರು ಮಾಡದಿರಬೇಕಾದರೆ, ಫಾರೂಕ್ ಅವರು ಆಸ್ಟ್ರಿಯಾದ ಸಮಾಜಕ್ಕೆ ಸಾಂಸ್ಕೃತಿಕ ಕೊಡುಗೆ ನೀಡಿರುವುದನ್ನು ಅಧಿಕಾರಿಗಳಿಗೆ ಸಾಬೀತುಪಡಿಸಬೇಕು. ರಂಗಭೂಮಿಗೆ ಫಾರೂಕ್ ಮರಳಿ ಬರಲು ಹಿಂಜರಿಯುತ್ತಿರುವುದರಿಂದ ಮುಂದೆ ಸಂಭವಿಸುವ ಸಾಹಸಕೃತ್ಯವೊಂದು ಅವನ ಜೀವನವನ್ನು ಪರಿವರ್ತಿಸಬಹುದು ಮತ್ತು ನಿಜವಾಗಿಯೂ ಮುಖ್ಯವಾದುದು ಏನು ಎಂಬುದನ್ನು ಅರಿತುಕೊಳ್ಳಲು ಆತನ ಮೇಲೆ ಒತ್ತಡ ತರಲೂಬಹುದು.
10. ಬ್ಲಾಗಾಸ್ ಲೆಸ್ಸನ್ಸ್ (ಮೂಲ ಶೀರ್ಷಿಕೆ: ಯುರೋಟ್ಸೈಟ್ ನಾ ಬ್ಲಾಗಾ)

ಅನೇಕ ಪ್ರಶಸ್ತಿ ವಿಜೇತ ಚಲನಚಿತ್ರಗಳು ಮತ್ತು ಸಾಕ್ಷ್ಯಚಿತ್ರಗಳೊಂದಿಗೆ, ತಮ್ಮ ಖ್ಯಾತಿಯನ್ನು ವಿಸ್ತರಿಸಿಕೊಂಡಿರುವ ಬಲ್ಗೇರಿಯಾದ ನಿರ್ದೇಶಕ ಸ್ಟೀಫನ್ ಕೊಮಂಡರೆವ್ ಅವರು ಬ್ಲಾಗಾದ ಪಾಠಗಳೊಂದಿಗೆ ( ಬ್ಲಾಗಾಸ್ ಲೆಸ್ಸನ್ಸ್ ) ಐಎಫ್ಎಫ್ಐಗೆ ಬರುತ್ತಿದ್ದಾರೆ. ಬ್ಲಾಗಾ ಇತ್ತೀಚೆಗೆ ವಿಧವೆಯಾದ ಎಪ್ಪತ್ತು ವರ್ಷದ ಮಾಜಿ ಶಿಕ್ಷಕಿ ಮತ್ತು ದೃಢವಾದ ನೈತಿಕತೆಯ ಮಹಿಳೆ. ತನ್ನ ಗಂಡನ ಸಮಾಧಿಗಾಗಿ ಆಕೆ ಉಳಿಸಿದ ಹಣವನ್ನು ಟೆಲಿಫೋನ್ ವಂಚಕರು (ಸ್ಕ್ಯಾಮರ್ಗಳು) ದೋಚಿದಾಗ ಆಕೆ ತಾನೇ ಸ್ವತಃ ವಂಚಕಿಯಾಗಿ (ಸ್ಕ್ಯಾಮರ್ ) ಪರಿವರ್ತನೆಗೊಳ್ಳುತ್ತಾಳೆ. ಅವಳ ನೈತಿಕ ದಿಕ್ಸೂಚಿ ನಿಧಾನವಾಗಿ ತನ್ನ ಪ್ರಭಾವವನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತದೆ.
11. ಅಸೋಗ್ (ASOG)

ಸೀನ್ ಡೆವ್ಲಿನ್ ಮೊದಲ ತಲೆಮಾರಿನ ಫಿಲಿಪಿನೋ-ಚೈನೀಸ್-ಐರಿಶ್ ಕೆನಡಿಯನ್ ಚಲನಚಿತ್ರ ನಿರ್ಮಾಪಕ ಮತ್ತು ಹಾಸ್ಯನಟ. ಅಸೋಗ್ ಎಂಬುದು ಸಾಕ್ಷ್ಯಚಿತ್ರ ಅಂಶಗಳನ್ನು ಒಳಗೊಂಡ ವಿಶಿಷ್ಟ ನಿರೂಪಣೆಯಾಗಿದ್ದು, 40 ವರ್ಷದ ಬೈನರಿ ಅಲ್ಲದ ಶಿಕ್ಷಕ (ಗಂಡು ಮತ್ತು ಹೆಣ್ಣು ಎಂಬ ಎರಡು ಲಿಂಗತ್ವಕ್ಕೆ ಒಳಪಡದ ಆದರೆ ಪ್ರತ್ಯೇಕ ಲಿಂಗತ್ವದ ಅಸ್ಮಿತೆಯನ್ನು ಹೊಂದಿರುವ ಶಿಕ್ಷಕ) ಮತ್ತು ಚಂಡಮಾರುತದಲ್ಲಿ ಬದುಕುಳಿದ ರೇ ಅವರನ್ನು ಖ್ಯಾತಿಯ ಹಾದಿಯಲ್ಲಿ ಪ್ರಯಾಣಿಸುವುದನ್ನು ಚಿತ್ರಿಸುತ್ತದೆ. ಅತಿವಾಸ್ತವಿಕ ಹಾಸ್ಯ ಮತ್ತು ಸಾಮಾಜಿಕ ಬಿಂಬದ ವಾಸ್ತವಿಕತೆಯೊಂದಿಗೆ, ಚಲನಚಿತ್ರ ನಿರ್ಮಾಪಕ ಸೀನ್ ಡೆವ್ಲಿನ್ ಹವಾಮಾನ ಬದಲಾವಣೆ, ಎಲ್ಜಿಬಿಟಿಕ್ಯೂ + ಸಮಸ್ಯೆಗಳನ್ನು ವಿಶ್ಲೇಷಿಸುತ್ತಾರೆ/ ಅನ್ವೇಷಿಸುತ್ತಾರೆ.
12. ಆಂಡ್ರಗೋಜಿ (ಮೂಲ ಶೀರ್ಷಿಕೆ: ಬುಡಿ ಪೆಕರ್ಟಿ)

ಆಂಡ್ರಗೋಜಿ 2023 ರ ನಾಟಕ ಚಿತ್ರವಾಗಿದ್ದು, ವ್ರೇಗಾಸ್ ಭಾನುತೇಜ ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಶಾ ಇನೆ ಫೆಬ್ರಿಯಾಂಟಿ ಶಾಲಾ ಶಿಕ್ಷಕಿಯಾಗಿ ನಟಿಸಿದ್ದಾರೆ, ಅವರು ತಂತಿ ತುಂಡರಿಸುವ (ಲೈನ್-ಕಟ್ಟರ್) ವ್ಯಕ್ತಿಯ ಜೊತೆ ಜಗಳಾಡುವ ವೀಡಿಯೊ ವೈರಲ್ ಆದ ನಂತರ ಅವರ ಖ್ಯಾತಿ ಮತ್ತು ವೃತ್ತಿಜೀವನದ ಭವಿಷ್ಯವು ಅಪಾಯಕ್ಕೆ ಸಿಲುಕುತ್ತದೆ.
13. ಕಾಂತಾರ (2022)

ರಿಷಬ್ ಶೆಟ್ಟಿ ಕನ್ನಡ ಚಿತ್ರರಂಗದ ನಟ ಮತ್ತು ನಿರ್ದೇಶಕ. ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಅವರ ಬ್ಲಾಕ್ ಬಸ್ಟರ್ 'ಕಾಂತಾರ’ ದಕ್ಷಿಣ ಕನ್ನಡದ ಕಾಲ್ಪನಿಕ ಹಳ್ಳಿಯ ಕಥೆ. ಈ ಚಿತ್ರವು ಮಾನವರು ಮತ್ತು ಪ್ರಕೃತಿಯ ನಡುವಿನ ಸೈದ್ಧಾಂತಿಕ ಸಂಘರ್ಷವನ್ನು ಅನ್ವೇಷಿಸುತ್ತದೆ. ಬುಡಕಟ್ಟು ಜನರು ಅನುಸರಿಸುವ ಕೆಲವು ಪದ್ಧತಿಗಳು ಮತ್ತು ಧಾರ್ಮಿಕ ಆಚರಣೆಗಳು ಪ್ರಕೃತಿ ಮಾತೆಗೆ ಅಪಾಯವನ್ನುಂಟುಮಾಡುತ್ತವೆ ಎಂದು ಭಾವಿಸುವ ಅರಣ್ಯ ಅಧಿಕಾರಿಯಿಂದ ಅರಣ್ಯದೊಂದಿಗೆ ವಾಸಿಸುವ ಬುಡಕಟ್ಟು ಜನಾಂಗದ ಸಹಬಾಳ್ವೆಗೆ ಅಡ್ಡಿಯಾಗುತ್ತದೆ. ಮುಖ್ಯ ಪಾತ್ರವಾದ ಶಿವನು ತನ್ನ ಅಸ್ತಿತ್ವದೊಂದಿಗೆ ಹಳ್ಳಿಯಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಪುನಃಸ್ಥಾಪಿಸಲು ಸಾಧ್ಯವಾಗುತ್ತದೆಯೇ ಎಂಬುದು ಚಿತ್ರದ ತಿರುಳು.
14. ಸನಾ (2023)

ಸುಧಾಂಶು ಸರಿಯಾ ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕ. ಚಲನ ಚಿತ್ರೋತ್ಸವಗಳಲ್ಲಿ ವ್ಯಾಪಕವಾಗಿ ಮೆಚ್ಚುಗೆ ಪಡೆದ 'ಲವ್' ಎಂಬ ಕ್ವೀರ್ ರೋಡ್-ಟ್ರಿಪ್ ಪ್ರಣಯದೊಂದಿಗೆ ಅವರು ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ, ಮುಂಬೈನಲ್ಲಿ ಕೆಲಸ ಮಾಡುತ್ತಿರುವ 28 ವರ್ಷದ ಹಣಕಾಸು ಸಲಹೆಗಾರ ಸನಾ ತಾನು ಗರ್ಭಿಣಿ ಎಂದು ಕಂಡುಕೊಳ್ಳುತ್ತಾಳೆ. ಗರ್ಭಪಾತದ ಕುರಿತಾದ ತನ್ನ ನಿರ್ಧಾರದ ಬಗ್ಗೆ ಸಂಪೂರ್ಣವಾಗಿ ಸ್ಪಷ್ಟವಾಗಿರುವ ಸನಾ, ಗರ್ಭಪಾತವನ್ನು ಮಾಡಿಕೊಳ್ಳುವ ವಾಸ್ತವಿಕವಾದ ಪ್ರಕ್ರಿಯೆಯು ತನ್ನ ಜೀವನವನ್ನು ಮರು ಮೌಲ್ಯಮಾಪನ ಮಾಡಲು ಮತ್ತು ಆಕೆ ಮಾಡುತ್ತಿರುವ ಆಯ್ಕೆಗಳು ನಿಜವಾಗಿಯೂ ಆಕೆಯದೇ ಆಗಿವೆಯೇ ಎಂಬುದನ್ನು ಆಳವಾಗಿ ಪರಿಶೀಲಿಸಲು ಒತ್ತಾಯಿಸುತ್ತದೆ.
15. ಮಿರ್ಬೀನ್ (2023)

ಮೃದುಲ್ ಗುಪ್ತಾ ನಿರ್ದೇಶನದ ಮತ್ತು ಧನಿರಾಮ್ ಟಿಸ್ಸೊ ನಿರ್ಮಿಸಿದ ಕರ್ಬಿ ಚಲನಚಿತ್ರ 'ಮಿರ್ಬೀನ್' ಫೀಚರ್ ಫಿಲ್ಮ್ ವಿಭಾಗದಲ್ಲಿ ಆಯ್ಕೆಯಾಗಿದೆ, ಪ್ರತಿಷ್ಠಿತ ವೇದಿಕೆಯಲ್ಲಿ ಸ್ಥಾನ ಪಡೆದ ಅಸ್ಸಾಂನ ಏಕೈಕ ಚಿತ್ರ ಇದಾಗಿದೆ.
ಮಿರ್ಬೀನ್ ಈ ಕಥೆಯ ಕೇಂದ್ರ ಪಾತ್ರ. ಆಕೆಯ ಬಾಲ್ಯದಲ್ಲಿ, ಅವಳ ಅಜ್ಜಿ ಸೆರ್ಡಿಹುನ್ (ಕರ್ಬಿ ಬುಡಕಟ್ಟು ನಂಬಿಕೆಗಳಲ್ಲಿ ಜವಳಿ ದೇವರು) ನ ಕಾಲ್ಪನಿಕ ಕಥೆಗಳೊಂದಿಗೆ ಏನಾದರೂ ಮಾಡುವ ಕನಸನ್ನು ಅವಳಲ್ಲಿ ತುಂಬುತ್ತಾಳೆ, ಇದು ಅವಳ ಮನಸ್ಸಿನಲ್ಲಿ ಜೀವನವನ್ನು ಅರ್ಥಪೂರ್ಣವಾಗಿಸುವ ಬಯಕೆ ಮೊಳಕೆಯೊಡೆಯುವಂತೆ ಮಾಡುತ್ತದೆ. ಆದರೆ ಒಡಹುಟ್ಟಿದವರ ಕೊಲೆ, ಘರ್ಷಣೆಗಳು ಮತ್ತು ಜನಾಂಗೀಯ ಸಂಘರ್ಷಗಳು 2005 ರಲ್ಲಿ ಇಡೀ ಕಾರ್ಬಿ ಭೂಮಿಯನ್ನು ರಕ್ತಸಿಕ್ತವಾಗಿಸುತ್ತವೆ ಮತ್ತು ಆಕೆಯ ಜೀವನವೂ ಅಸ್ತವ್ಯಸ್ತಗೊಳ್ಳುತ್ತದೆ.
ಅತ್ಯುತ್ತಮ ಚಲನಚಿತ್ರಗಳನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಿರುವ ಬಗ್ಗೆ ಸಂಗ್ರಹಿಸಿದ ಮಾಹಿತಿಯು ವೈವಿಧ್ಯಮಯ ಪ್ರಕಾರಗಳು, ಶೈಲಿಗಳು ಮತ್ತು ಸಾಂಸ್ಕೃತಿಕ ಅಭ್ಯಾಸಗಳನ್ನು ಪ್ರತಿನಿಧಿಸುತ್ತದೆ, ಇದು ಜಾಗತಿಕ ಚಲನಚಿತ್ರ ಭೂದೃಶ್ಯದ ಆಳ-ಅಗಲವನ್ನು ಪ್ರತಿಬಿಂಬಿಸುತ್ತದೆ.
ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ನೋಡಿ:
https://iffigoa.org/international-cinema-curated-sections/international-competition/en
*****
(Release ID: 1980315)