ವಾರ್ತಾ ಮತ್ತು ಪ್ರಸಾರ ಸಚಿವಾಲಯ
iffi banner
0 3

​​​​​​​ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ-54ರಲ್ಲಿ 'ಪ್ರಭಾವಶಾಲಿ ಪ್ರದರ್ಶನಗಳನ್ನು ನೀಡುವುದರ' ಕುರಿತು ನಟಿ, ರಾಣಿ ಮುಖರ್ಜಿಯವರೊಂದಿಗೆ ಸಂವಾದ ಸಮಾರಂಭ


'ನನ್ನ ಚಿತ್ರಗಳಲ್ಲಿ ಭಾರತೀಯ ಮಹಿಳೆಯರನ್ನು ಪ್ರಬಲವಾದ ಪಾತ್ರಗಳಾಗಿ ಚಿತ್ರಿಸಲು ಪ್ರಯತ್ನಿಸುತ್ತೇನೆ': ರಾಣಿ ಮುಖರ್ಜಿ

ಗೋವಾ, 26 ನವೆಂಬರ್ 2023

ಗೋವಾದಲ್ಲಿ ನಡೆದ 54ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಹಿಂದಿ ಚಲನಚಿತ್ರ ನಟಿ, ರಾಣಿ ಮುಖರ್ಜಿಯವರೊಂದಿಗೆ 'ಆಕರ್ಷಕ ಪ್ರದರ್ಶನಗಳನ್ನು ನೀಡುವುದರ' ಬಗ್ಗೆ ಸಂವಾದ ನಡೆಸಲಾಯಿತು. ಗಲಾಟಾ ಪ್ಲಸ್ ನ ಪ್ರಧಾನ ಸಂಪಾದಕ ಮತ್ತು ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರ ವಿಮರ್ಶಕ ಭಾರದ್ವಾಜ್ ರಂಗನ್ ಅವರು ನಿರ್ವಹಿಸಿದ ಈ ಮುಕ್ತ ಚರ್ಚೆಯಲ್ಲಿ ರಾಣಿ ಮುಖರ್ಜಿಯವರ ವೈಯಕ್ತಿಕ ಜೀವನ ಮತ್ತು ಪ್ರಸಿದ್ಧ ವೃತ್ತಿಜೀವನದ ಬಗ್ಗೆ ಗಹನವಾದ ಮಾತುಕತೆ ಮಾಡಲಾಯಿತು.

ತಮ್ಮ ಸಿನಿಮಾ ಪ್ರಯಾಣದ ಬಗ್ಗೆ ಮಾತನಾಡಿದ ರಾಣಿ ಮುಖರ್ಜಿಯವರು, ತಾವು ಯಾವಾಗಲೂ ಭಾರತೀಯ ಮಹಿಳೆಯರನ್ನು ಪ್ರಬಲವಾದ ಪಾತ್ರಗಳಾಗಿ ಚಿತ್ರಿಸಲು ಪ್ರಯತ್ನಿಸುವುದಾಗಿ ತಿಳಿಸಿದರು. "ಭಾರತದ ಹೊರಗೆ, ನಮ್ಮ ಚಲನಚಿತ್ರಗಳು ಮತ್ತು ಅವುಗಳ ಪಾತ್ರಗಳನ್ನು ಭಾರತೀಯ ಸಂಸ್ಕೃತಿಯ ಪ್ರತೀಕಗಳಾಗಿ ನೋಡಲಾಗುತ್ತದೆ" ಎಂದು ಅವರು ಹೇಳಿದರು.

ನಟರ ಕರಕುಶಲತೆಯ ಬದ್ಧತೆಗೆ ಮಹತ್ವ ನೀಡಿದ ನಟಿ, "ಪ್ರಬಲ ಚಿತ್ರಗಳು ಮತ್ತು ಪಾತ್ರಗಳನ್ನು ನಿರ್ವಹಿಸುವುದು ಬಹಳ ಮುಖ್ಯ. ಕೆಲವೊಮ್ಮೆ ಆ ಸಿನಿಮಾಗಳು ಪ್ರೇಕ್ಷಕರಿಗೆ ಇಷ್ಟವಾಗದಿರಬಹುದು, ಆದರೆ ಸಿನಿಮಾ ಇತಿಹಾಸದಲ್ಲಿ ಅಂತಹ ಚಿತ್ರಗಳು ಮತ್ತು ಪಾತ್ರಗಳು ಸದಾ ನೆನಪಿನಲ್ಲಿ ಉಳಿಯುತ್ತವೆ" ಎಂದು ಹೇಳಿದರು.

ನಟರ ಬಹುಮುಖ ಪ್ರತಿಭೆಯ ಮಹತ್ವವನ್ನು ಒತ್ತಿ ಹೇಳಿದ ರಾಣಿ ಮುಖರ್ಜಿಯವರು, ಅದರ ಮಹತ್ವವನ್ನು ವಿವರಿಸಿದರು. "ಒಬ್ಬ ನಟ ಬಹುಮುಖ ಪ್ರತಿಭೆಯನ್ನು ಹೊಂದಿದ್ದರೆ, ಅವರು ಜೀವನದ ವಿವಿಧ ಆಯಾಮಗಳನ್ನು ಚಿತ್ರಿಸಬಹುದು. ನನ್ನ ಪಾತ್ರಗಳನ್ನು ನಾನು ಹೆಚ್ಚು ವೈವಿಧ್ಯಮಯವಾಗಿಸಲು ಸಾಧ್ಯವಾದರೆ, ಅದು ಪ್ರೇಕ್ಷಕರಿಗೆ ಮತ್ತು ನನಗೆ ಹೆಚ್ಚು ಆಸಕ್ತಿದಾಯಕವಾಗಿರುತ್ತದೆ. ಪಾತ್ರಗಳಲ್ಲಿನ ಈ ವೈವಿಧ್ಯತೆಯು ನನಗೆ ಸ್ಫೂರ್ತಿ ನೀಡುತ್ತದೆ" ಎಂದು ಅವರು ಹೇಳಿದರು.

ಪಾತ್ರೀಯ ಚಿತ್ರಣದ ಜಟಿಲತೆಗಳ ಬಗ್ಗೆ ವಿವರಿಸಿದ ರಾಣಿ ಮುಖರ್ಜಿಯವರು, "ಹಲವು ನಿರ್ದಿಷ್ಟ ಪಾತ್ರಗಳನ್ನು ನಿರ್ವಹಿಸಲು, ನಟರು ತಮ್ಮ ದೈಹಿಕ ಗುಣಲಕ್ಷಣಗಳನ್ನು ಸರಿಯಾಗಿ ಗ್ರಹಿಸಲು ನಿಜ ಜೀವನದ ಜನರನ್ನು ಭೇಟಿಯಾಗುತ್ತಾರೆ. ಆದರೆ ನಟರು, ಜನರ ಮಾನಸಿಕ ಭಾವನೆಗಳ ಸೂಕ್ಷ್ಮತೆಯನ್ನು ತಿಳಿದುಕೊಳ್ಳುವುದು ಸಹ ಮುಖ್ಯ. ಚಲನಚಿತ್ರದಲ್ಲಿ ದೃಶ್ಯವನ್ನು ಪ್ರತಿಬಿಂಬಿಸುವ ಅಂಶವೆಂದರೆ ತೆರೆಮರೆಯ ಹಿಂದಿನ ಭಾವನೆಗಳು. ಪ್ರೇಕ್ಷಕರ ಹೃದಯವನ್ನು ತಲುಪಲು ಭಾವನೆಗಳನ್ನು ಚಿತ್ರಿಸುವುದು ಬಹಳ ಮುಖ್ಯ" ಎಂದು ಹೇಳಿದರು.

ಚಿತ್ರೋದ್ಯಮದಲ್ಲಿ ವಯಸ್ಸಿನ ಬಗ್ಗೆ ಮಾತನಾಡಿದ ಪ್ರಸಿದ್ಧ ನಟಿ, ಪ್ರೇಕ್ಷಕರು ತಮ್ಮನ್ನು ಸ್ವೀಕರಿಸಲು ಪಾತ್ರಧಾರಿಗಳು ತಮ್ಮ ವಯಸ್ಸನ್ನು ಒಪ್ಪಿ, ತಮ್ಮ ವಯಸ್ಸಿಗೆ ಸರಿಹೊಂದುವ ಪಾತ್ರಗಳನ್ನು ನಿರ್ವಹಿಸಬೇಕೆಂದು ಅಭಿಪ್ರಾಯಪಟ್ಟರು. ತಮಗೆ ಚಿತ್ರೋದ್ಯಮದಲ್ಲಿನ ವಯಸ್ಸು ಮತ್ತು ಇತರ ಅಡೆತಡೆಗಳನ್ನು ನಿರ್ವಹಿಸಲು ಪ್ರೇಕ್ಷಕರು ಸಹಾಯ ಮಾಡಿದರು ಎಂದು ಹೇಳಿದರು.

ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ಹಂಚಿಕೊಂಡ ರಾಣಿಯವರು, "ನಾನು ವಯಸ್ಸಿಗೆ ಹೆಚ್ಚು ಪ್ರಾಮುಖ್ಯತೆ ನೀಡುವುದಿಲ್ಲ. ನನ್ನ ಪಾತ್ರಗಳಿಗೆ ನ್ಯಾಯ ಒದಗಿಸಲು ಪ್ರಯತ್ನಿಸುತ್ತೇನೆ. ನೀವು ಸಿನಿಮಾದಲ್ಲಿ ಪಾತ್ರಕ್ಕೆ ತಕ್ಕಂತೆ ಕಾಣುತ್ತಿದ್ದರೆ, ಜನರು ಪಾತ್ರವನ್ನು ನಂಬುವಂತೆ ಮಾಡುವ ನಿಮ್ಮ ಪ್ರಯತ್ನದಲ್ಲಿ ನಿಮಗೆ ಐವತ್ತು ಪ್ರತಿಶತ ಗೆಲುವು ಖಚಿತ" ಎಂದರು.

ತಮ್ಮ ಸಿನಿಪಯಣದ ಬಗ್ಗೆ ಸಂತೃಪ್ತಿಯನ್ನು ವ್ಯಕ್ತಪಡಿಸುತ್ತಾ, ಪ್ರಸಿದ್ಧ ನಟಿ ಇದುವರಗಿನ ತಮ್ಮ ಸಿನೆಮಾ ಜೀವನದ ಯಾವುದೇ ಪಾತ್ರಗಳನ್ನು ಮಾಡಲು ಎಂದಿಗೂ ವಿಷಾದಿಸುವುದಿಲ್ಲ ಎಂದು ತಿಳಿಸಿದರು. ಆದರೆ ದಿನಾಂಕಗಳ ಸಂಘರ್ಷದಿಂದಾಗಿ ಅಮೀರ್ ಖಾನ್ ಅವರ ಮೊದಲ ನಿರ್ಮಾಣದ ಚಿತ್ರ 'ಲಗಾನ್' ನಲ್ಲಿ ನಟಿಸಲು ಸಾಧ್ಯವಾಗದಿದ್ದದ್ದು ದುರದೃಷ್ಟಕರ ಎಂದು ಹೇಳಿದರು.

'ಕುಚ್ ಕುಚ್ ಹೋತಾ ಹೈ' ಚಿತ್ರದ 'ಟೀನಾ ಮಲ್ಹೋತ್ರಾ'ದಿಂದ ಹಿಡಿದು 'ಕಭಿ ಅಲ್ವಿದಾ ನಾ ಕೆಹ್ನಾ' ಚಿತ್ರದ 'ಮಾಯಾ ತಲ್ವಾರ್' ಮತ್ತು 'ಮಿಸೆಸ್ ಚಟರ್ಜಿ ವರ್ಸಸ್ ನಾರ್ವೆ' ಚಿತ್ರದಲ್ಲಿನ 'ದೇವಿಕಾ ಚಟರ್ಜಿ' ವರೆಗೆ ರಾಣಿ ಮುಖರ್ಜಿಯವರು ನೂರಾರು ಸುಂದರ ಪಾತ್ರಗಳೊಂದಿಗೆ ಪ್ರೇಕ್ಷಕರನ್ನು ಮೋಡಿ ಮಾಡಿದ್ದಾರೆ. ಅವರು ನಿರ್ವಹಿಸಿದ ನೆಚ್ಚಿನ ಪಾತ್ರದ ಪ್ರಶ್ನೆಗೆ, 'ಬ್ಲ್ಯಾಕ್' ಚಿತ್ರದಲ್ಲಿನ ಪಾತ್ರವು ತನ್ನ ಹೃದಯಕ್ಕೆ ಹತ್ತಿರವಾಗಿದೆ ಎಂದು ಅವರು ತಿಳಿಸಿದರು, ಈ ಪಾತ್ರವು ಅವರನ್ನು ಪರಿವರ್ತಿಸಿ, ಉತ್ತಮ ಮಾನವರಾಗಲು ಸಹಾಯ ಮಾಡಿತು. "'ಬ್ಲ್ಯಾಕ್' ಚಿತ್ರದಲ್ಲಿನ 'ಮಿಚೆಲ್ ಮೆಕ್ನಾಲಿ' ಪಾತ್ರವು ನನಗೆ ಸ್ಫೂರ್ತಿ ನೀಡುವುದಲ್ಲದೆ ನನ್ನ ನಟನೆಗೆ ಸವಾಲಾಗಿತ್ತು. 'ಮೆಹಂದಿ' ಚಿತ್ರದಲ್ಲಿನ ಪಾತ್ರವು ನನಗೆ ಪ್ರಬುದ್ದತೆಯನ್ನು ನೀಡಿತು" ಎಂದು ಅವರು ಹೇಳಿದರು.

 

* * *

iffi reel

(Release ID: 1980309) Visitor Counter : 150