ವಾರ್ತಾ ಮತ್ತು ಪ್ರಸಾರ ಸಚಿವಾಲಯ

​​​​​​​54ನೇ ಐಎಫ್‌ಎಫ್‌ಐ ಚಿತ್ರೋತ್ಸವದಲ್ಲಿ ಆಕರ್ಷಕ ʼಇನ್‌ ಕಾನ್‌ವರ್ಸೇಷನ್‌' (ಸಂವಾದ)ನಲ್ಲಿ ಮುಕ್ತವಾಗಿ ಮಾತನಾಡಿದ ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಮಧುರ್ ಭಂಡಾರ್ಕರ್


ಚಲನಚಿತ್ರ ನಿರ್ಮಾಣವು ಸಾಹಸಮಯ ಪಯಣವಾಗಿದ್ದು, ಇಲ್ಲಿ ಸೋಲು ಯಶಸ್ಸಿನ ಸಾಧನೆಗೆ ಮೆಟ್ಟಿಲಾಗುತ್ತದೆ: ಮಧುರ್ ಭಂಡಾರ್ಕರ್

Posted On: 22 NOV 2023 6:29PM by PIB Bengaluru

ರಾಷ್ಟ್ರೀಯ ಪ್ರಶಸ್ತಿ ವಿಜೇತ ಭಾರತೀಯ ಚಲನಚಿತ್ರ ನಿರ್ಮಾಣಕಾರ, ಚಿತ್ರಕಥೆಗಾರ ಮತ್ತು ನಿರ್ಮಾಪಕ ಮಧುರ್ ಭಂಡಾರ್ಕರ್ ಅವರು ಇಂದು ಗೋವಾದ ಕಲಾ ಅಕಾಡೆಮಿಯಲ್ಲಿ ನಡೆದಿರುವ 54ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (ಐಎಫ್‌ಎಫ್‌ಐ) ಭಾಗವಾಗಿ ನಡೆದ "ಇನ್‌ ಕಾನ್‌ವರ್ಸೇಷನ್‌" (ಸಂವಾದ)ನಲ್ಲಿ ತಮ್ಮ ಆಕರ್ಷಕ ಮಾತುಗಳ ಮೂಲಕ ಗಮನ ಸೆಳೆದರು. ಚಲನಚಿತ್ರ ವಿಮರ್ಶಕ ಮತ್ತು ವಿಶ್ಲೇಷಕರಾದ ತರಣ್ ಆದರ್ಶ್ ಅವರೊಂದಿಗಿನ ಸಂವಾದದಲ್ಲಿ ತಮ್ಮ ವಿಮರ್ಶಾತ್ಮಕ ಮಾತುಗಳಿಗೆ ಮೆಚ್ಚುಗೆ ಪಡೆದ ನಿರ್ದೇಶಕರು ಸಿನಿಮಾ ಕಲೆ, ಚಲನಚಿತ್ರ ತಯಾರಿಕೆಯ ಸೂಕ್ಷ್ಮತೆಗಳು ಮತ್ತು ಕಥೆ ಹೇಳುವಿಕೆಯನ್ನು ರೂಪಿಸುವ ಸವಾಲುಗಳು ಮತ್ತು ಸ್ಫೂರ್ತಿಯ ಒಳನೋಟಗಳನ್ನು ಹಂಚಿಕೊಂಡರು.

ತಮ್ಮ ವಿಶಿಷ್ಟ ಚಿತ್ರಗಳಿಗೆ ಹೆಸರಾದ ಭಂಡಾರ್ಕರ್ ಅವರು ಗ್ರಹಿಕೆಯ ಒಳನೋಟಗಳ ಒಂದು ಶ್ರೇಣಿಯನ್ನು ಹಂಚಿಕೊಳ್ಳುವ ಜತೆಗೆ ನೈಜವಾಗಿ ಕಥೆ ನಿರೂಪಣೆಯ ಸಾರ ಮತ್ತು ಸಿನಿಮಾ ಸೃಷ್ಟಿಯ ಜಟಿಲತೆಗಳ ಬಗ್ಗೆಯೂ ಬೆಳಕು ಚೆಲ್ಲಿದರು.

ಅವರೊಂದಿಗಿನ ಸಂಭಾಷಣೆಯಲ್ಲಿ ನೈಜತೆ ಮತ್ತು ಸಿನಿಮಾದ ನಡುವಿನ ಸಂವಹನದ ಬಗ್ಗೆ ಒತ್ತಿ ಹೇಳಿದರು. “ಸಿನಿಮಾ ಒಂದು ಕಲ್ಪನೆಯಿಂದ ಹುಟ್ಟುತ್ತದೆ. ನೈಜ ಸಿನಿಮಾ ಚಿತ್ರರಂಗದಲ್ಲಿ ಮಹತ್ವದ ಸ್ಥಾನ ಪಡೆದಿರುತ್ತದೆ. ನೈಜ ಚಲನಚಿತ್ರಗಳಿಗೆ ಪ್ರೇಕ್ಷಕರೊಂದಿಗೆ ಆಳವಾಗಿ ಪ್ರತಿಧ್ವನಿಸುವ ಶಕ್ತಿ ಇರುತ್ತದೆ. ಕಲಾತ್ಮಕ ಮತ್ತು ವಾಣಿಜ್ಯಿಕವಾಗಿ ಪ್ರಭಾವ ಬೀರುವ ದ್ವಂದ್ವವನ್ನು ನಿರೂಪಿಸುತ್ತಿದೆ,ʼʼ ಎಂದು ವಿಶ್ಲೇಷಿಸಿದರು.

ಚಲನಚಿತ್ರ ನಿರ್ಮಾಣದಲ್ಲಿ ಸಂಶೋಧನೆಯ ಮಹತ್ವವನ್ನು ಒತ್ತಿ ಹೇಳಿದ ಭಂಡಾರ್ಕರ್‌ ಅವರು ಸಂಶೋಧನೆಯು ತಮ್ಮ ಕಲೆಯ ಮೂಲಾಧಾರವೆಂದು ಪ್ರತಿಪಾದಿಸಿದರು. "ಸಂಶೋಧನೆಯು ಚಲನಚಿತ್ರ ನಿರ್ಮಾಣದ ವಿಶಿಷ್ಟ ಮಾರಾಟ ಅಂಶ (ಯುಎಸ್‌ಪಿ- ಯುನಿಕ್‌ ಸೆಲ್ಲಿಂಗ್‌ ಪಾಯಿಂಟ್‌) ಆಗಿರುತ್ತದೆ. ಇದು ಕಥೆ ನಿರೂಪಣೆಯನ್ನು ಶ್ರೀಮಂತಗೊಳಿಸುವ ಅಡಿಪಾಯವಾಗಿದ್ದು, ನಿರೂಪಣೆಗೆ ಆಳ ಮತ್ತು ದೃಢೀಕರಣದ ಖಾತರಿ ನೀಡುತ್ತದೆ,ʼʼ ಎಂದು ಹೇಳಿದರು.

ಚಲನಚಿತ್ರ ನಿರ್ಮಾಪಕರು ಎದುರಿಸುತ್ತಿರುವ ಸವಾಲುಗಳು ಅದರಲ್ಲೂ ವಿಶೇಷವಾಗಿ ಹಣಕಾಸು ಮತ್ತು ಸೃಜನಶೀಲ ಸ್ವಾತಂತ್ರ್ಯ ಕುರಿತಂತೆ ಮಾತನಾಡಿದ ಭಂಡಾರ್ಕರ್ ಅವರು, “ಬಾಕ್ಸ್‌ ಆಫೀಸ್‌ನಲ್ಲಿ ಸಿನಿಮಾ ಯಶಸ್ಸಿಗೆ ಯಾವುದೇ ಸಿದ್ಧ ಸೂತ್ರವೆಂಬುದಿಲ್ಲ. ಹಣಕಾಸು ಮತ್ತು ವಿಷಯದ ಸ್ವಾತಂತ್ರ್ಯವು ಅಸಾಧಾರಣ ಸವಾಲುಗಳನ್ನು ತಂದೊಡ್ಡುತ್ತದೆ. ಆದಾಗ್ಯೂ, ಮಹತ್ವಾಕಾಂಕ್ಷಿ ಚಲನಚಿತ್ರ ನಿರ್ಮಾಪಕರು ದೃಢವಿಶ್ವಾಸದಿಂದ ಮುನ್ನುಗ್ಗಬೇಕು,ʼʼ ಎಂದು ಸಲಹೆ ನೀಡಿದರು.

ಚಲನಚಿತ್ರ ನಿರ್ಮಾಣದ ನೈಜ ಸ್ವರೂಪದ ಬಗ್ಗೆಯೂ ಪ್ರಸ್ತಾಪಿಸಿದ ಭಂಡಾರ್ಕರ್ ಅವರು ವೈಫಲ್ಯವು ಸೃಜನಶೀಲ ಪ್ರಕ್ರಿಯೆಯ ಅವಿಭಾಜ್ಯ ಅಂಗವಾಗಿದೆ ಎಂದು ಪ್ರತಿಪಾದಿಸಿದರು. "ಸಿನಿಮಾ ನಿರ್ಮಾಣವು ನೈಜ ಪಯಣವಾಗಿದ್ದು, ಅಲ್ಲಿ ವೈಫಲ್ಯವು ಯಶಸ್ಸಿನ ಮೆಟ್ಟಿಲುಗಳಾಗಿ ಪರಿವರ್ತನೆಯಾಗುತ್ತವೆ. ಉನ್ನತ ವಿಷಯವನ್ನು ರೂಪಿಸುವಲ್ಲಿಯೂ ಇದು ಅನಿವಾರ್ಯವಾಗಿದೆ," ಎಂದು ತಿಳಿಸಿದರು.

ಉದಯೋನ್ಮುಖ ಚಲನಚಿತ್ರ ನಿರ್ಮಾಪಕರಿಗೆ ಅಮೂಲ್ಯವಾದ ಸಲಹೆಗಳನ್ನು ನೀಡಿದ ಭಂಡಾರ್ಕರ್ ಅವರು ಬದ್ಧತೆ ಹಾಗೂ ಆತ್ಮವಿಶ್ವಾಸದ ಮಹತ್ವವನ್ನು ಒತ್ತಿ ಹೇಳಿದರು. "ಚಲನಚಿತ್ರ ನಿರ್ಮಾಣದಲ್ಲಿ ಸೃಜನಾತ್ಮಕ ತೃಪ್ತಿಯು ಅಚಲವಾದ ದೃಢತೆಯನ್ನು ಬಯಸುತ್ತದೆ. ಇದು ಸುಲಭದ ಮಾರ್ಗವಲ್ಲ. ಆದರೆ ಚಿತ್ರಕತೆ ಹಾಗೂ ತಮ್ಮನ್ನೇ ಸಂಪೂರ್ಣವಾಗಿ ನಂಬುವುದು ಬಹಳ ಮುಖ್ಯ" ಎಂದು ಅವರು ಕಿವಿಮಾತು ಹೇಳಿದರು.

ಸಾಕಷ್ಟು ಮೆಚ್ಚುಗೆ ಪಡೆದ ನಿರ್ದೇಶಕರಾದ ಭಂಡಾರ್ಕರ್‌ ತಮ್ಮ ಸ್ಫೂರ್ತಿಯ ಅಂಶಗಳ ಬಗ್ಗೆ ಮಾಹಿತಿ ಹಂಚಿಕೊಂಡರು. "ನಾನು ನನ್ನ ಚಲನಚಿತ್ರಗಳಿಗೆ ಸಮಾಜದಿಂದ ಸ್ಫೂರ್ತಿ ಪಡೆಯುತ್ತೇನೆ. ಸಮಾಜದ ನಾಡಿಮಿಡಿತವನ್ನು ಅರ್ಥಮಾಡಿಕೊಂಡು ಅದನ್ನು ಪರದೆಯ ಮೇಲೆ ಮೂಡಿಸುವುದು ನೈಜ ನಿರೂಪಣೆಗೆ ಹೆಚ್ಚಿನ ಉತ್ತೇಜನ ನೀಡುತ್ತದೆ," ಎಂದು ಹೇಳಿದರು.

ಸಂವಾದದಲ್ಲಿ ಕೊನೆಯದಾಗಿ ಭಂಡಾರ್ಕರ್ ಅವರು ಪರಿಣಾಮಕಾರಿ ಸಿನಿಮಾವನ್ನು ರೂಪಿಸುವಲ್ಲಿ ತೊಡಗಿಸಿಕೊಳ್ಳುವ ಚಿತ್ರಕಥೆಯ ಮಹತ್ವವನ್ನು ಒತ್ತಿ ಹೇಳಿದರು. "ಒಂದು ಆಕರ್ಷಕ ಚಿತ್ರಕಥೆಯು ಉತ್ತಮ ಚಲನಚಿತ್ರದ ಹೃದಯ ಬಡಿತವಾಗಿರುತ್ತದೆ. ಸಿನಿಮಾದ ಪ್ರಖರತೆಯ ಸಾರವನ್ನು ಹಿಡಿದಿಟ್ಟುಕೊಂಡಿರುತ್ತದೆ" ಎಂದು ಹೇಳಿದರು.

*****



(Release ID: 1979069) Visitor Counter : 95


Read this release in: English , Urdu , Marathi , Hindi