ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ
azadi ka amrit mahotsav

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಹಾಯಕ ಸಚಿವ ಶ್ರೀ ಭಗವಂತ್ ಖೂಬಾ ಅವರ ನೇತೃತ್ವದ ಭಾರತೀಯ ನಿಯೋಗವು ನೆದರ್ಲ್ಯಾಂಡ್ಸ್ ನಲ್ಲಿ ನಡೆದ ಎರಡನೇ ʻವಿಶ್ವ ಸ್ಥಳೀಯ ಉತ್ಪಾದನಾ ವೇದಿಕೆʼಯ ಸಭೆಯಲ್ಲಿ ಭಾಗವಹಿಸಿತು


ಭಾರತೀಯ ಔಷಧೀಯ ಕಂಪನಿಗಳು ಕೈಗೆಟುಕುವ ದರದಲ್ಲಿ ಉತ್ತಮ ಗುಣಮಟ್ಟದ ಔಷಧಗಳ ವಿಶ್ವಾಸಾರ್ಹ ಪೂರೈಕೆದಾರರಾಗಿ ಮಾರ್ಪಟ್ಟಿವೆ, ಆ ಮೂಲಕ ವಿಶ್ವಾದ್ಯಂತ ಆರೋಗ್ಯ ರಕ್ಷಣೆಯ ಲಭ್ಯತೆಯನ್ನು ಗಮನಾರ್ಹವಾಗಿ ಸುಧಾರಿಸಿವೆ: ಶ್ರೀ ಭಗವಂತ್ ಖೂಬಾ

Posted On: 07 NOV 2023 12:10PM by PIB Bengaluru

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಹಾಯಕ ಸಚಿವ ಶ್ರೀ ಭಗವಂತ್ ಖೂಬಾ ನೇತೃತ್ವದ ಭಾರತೀಯ ನಿಯೋಗವು ಇಂದು ನೆದರ್ಲ್ಯಾಂಡ್ನ ಹೇಗ್ನಲ್ಲಿ ನಡೆದ ಎರಡನೇ ʻವಿಶ್ವ ಸ್ಥಳೀಯ ಉತ್ಪಾದನಾ ವೇದಿಕೆʼಯ (ಡಬ್ಲ್ಯುಎಲ್ಪಿಎಫ್) ಸಭೆಯಲ್ಲಿ ಭಾಗವಹಿಸಿತು. 2023ರ ನವೆಂಬರ್ 6 ರಿಂದ 8ರವರೆಗೆ ಈ ಸಭೆಯನ್ನು ಆಯೋಜಿಸಲಾಗಿದೆ. ʻವಿಶ್ವ ಸ್ಥಳೀಯ ಉತ್ಪಾದನಾ ವೇದಿಕೆʼಯು ಔಷಧಗಳು ಮತ್ತು ಇತರ ಆರೋಗ್ಯ ತಂತ್ರಜ್ಞಾನಗಳ ಲಭ್ಯತೆಯನ್ನು ಹೆಚ್ಚಿಸುವ ಉದ್ದೇಶದಿಂದ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್) ಉಪಕ್ರಮದ ಭಾಗವಾಗಿ ರಚನೆಗೊಂಡ ವೇದಿಕೆಯಾಗಿದೆ.

ರೋಗನಿರ್ಣಯ ಪ್ರತಿಕ್ರಮಗಳ ಅಭಿವೃದ್ಧಿ ಮತ್ತು ಉತ್ಪಾದನೆಯಲ್ಲಿನ ಅನುಭವಗಳು, ಸವಾಲುಗಳು ಹಾಗೂ ಯಶಸ್ಸನ್ನು ಹಂಚಿಕೊಳ್ಳಲು ಈ ಸಭೆ ನಿರ್ಣಾಯಕ ಅವಕಾಶವನ್ನು ಒದಗಿಸುತ್ತದೆ ಎಂದು ಶ್ರೀ ಖೂಬಾ ಅವರು ತಮ್ಮ ಭಾಷಣದಲ್ಲಿ ಹೇಳಿದರು. ಈ ನಿರ್ಣಾಯಕ ಸಾಧನಗಳಿಗೆ ಲಭ್ಯತೆಯು  ಸುಸ್ಥಿರ ಮತ್ತು ಸಮಾನವಾಗಿರುವಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ನವೀನ ಕಾರ್ಯವಿಧಾನಗಳನ್ನು ಗುರುತಿಸಲು ನಾವು ಮತ್ತಷ್ಟು ಸಹಕಾರದೊಂದಿಗೆ ಕೆಲಸ ಮಾಡಬೇಕಿದೆ ಎಂದು ಅವರು ಹೇಳಿದರು.

21ನೇ ಶತಮಾನವು ಆಗಾಗ್ಗೆ ಸಾಂಕ್ರಾಮಿಕ ರೋಗಗಳು ಮತ್ತು ಕೋವಿಡ್-19 ನಂತಹ ಸಾಂಕ್ರಾಮಿಕವನ್ನು ಕಂಡಿದೆ. ಇದು ಜಾಗತಿಕ ಪೂರೈಕೆ ಸರಪಳಿಯಲ್ಲಿ ಇರುವ ದುರ್ಬಲತೆ ಹಾಗೂ ಗುಣಮಟ್ಟದ ವೈದ್ಯಕೀಯ ಸೌಲಭ್ಯಗಳನ್ನು ಪಡೆಯುವಲ್ಲಿ ಇರುವ ಅಸಮಾನತೆಯನ್ನು ಬಹಿರಂಗಪಡಿಸಿದೆ ಎಂದು ಸಚಿವರು ಹೇಳಿದರು. ರೋಗನಿರ್ಣಯ ಸಾಧನಗಳ ಅಸಮರ್ಪಕ ಲಭ್ಯತೆಯಿಂದಾಗಿ ಸಾಂಕ್ರಾಮಿಕವು ಏಕಾಏಕಿ ಉಲ್ಬಣಗೊಳ್ಳಲು ಕಾರಣವಾಯಿತು. ಅಂತಹ ಸಾಧನಗಳ ಜಾಗತಿಕ ಲಭ್ಯತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಸುಸ್ಥಿರ ಹಾಗೂ ಅಗ್ಗದ ದರದ ರೋಗನಿರ್ಣಯ ಉಪಕ್ರಮಗಳಿಗಾಗಿ ವಿವಿಧ ದೇಶಗಳ ನಡುವೆ ಸಹಕಾರ ಹೆಚ್ಚಳದ ಅಗತ್ಯವನ್ನು ಇದು ಒತ್ತಿ ಹೇಳುತ್ತದೆ. ನವೀನ ಪರಿಹಾರಗಳನ್ನು ಒದಗಿಸುವಲ್ಲಿ ಸಮಾನತೆಯನ್ನು ಸಾಧಿಸಲು ವಿವಿಧ ಕ್ಷೇತ್ರಗಳ ನಡುವಿನ ಸಹಯೋಗದ ಮಹತ್ವವೇನೆಂದು ವಿಶ್ವಾದ್ಯಂತದ ದೇಶಗಳು ಅರಿತುಕೊಂಡಿವೆ ಎಂದು ಹೇಳಿದರು.

ಭಾರತದಲ್ಲಿನ ಔಷಧೀಯ ಉದ್ಯಮವು ಜಾಗತಿಕವಾಗಿ ಅತಿದೊಡ್ಡದಾಗಿದೆ ಮತ್ತು ಭಾರತಕ್ಕೆ 'ವಿಶ್ವದ ಫಾರ್ಮಸಿ' ಎಂಬ ಬಿರುದನ್ನು ಗಳಿಸಿಕೊಟ್ಟಿದೆ ಎಂದು ಶ್ರೀ ಖೂಬಾ ಮಾಹಿತಿ ನೀಡಿದರು. ಭಾರತೀಯ ಔಷಧೀಯ ಕಂಪನಿಗಳು ಕೈಗೆಟುಕುವ ದರದಲ್ಲಿ ಉತ್ತಮ ಗುಣಮಟ್ಟದ ಔಷಧಗಳ ವಿಶ್ವಾಸಾರ್ಹ ಪೂರೈಕೆದಾರರಾಗಿ ಮಾರ್ಪಟ್ಟಿವೆ, ಆ ಮೂಲಕ ವಿಶ್ವಾದ್ಯಂತ ಆರೋಗ್ಯ ರಕ್ಷಣೆಯ ಲಭ್ಯತೆಯನ್ನು ಗಮನಾರ್ಹವಾಗಿ ಸುಧಾರಿಸಿವೆ. ಭಾರತವು ಜಾಗತಿಕ ಲಸಿಕೆ ಪೂರೈಕೆಯಲ್ಲಿ ಸರಿಸುಮಾರು 60% ರಷ್ಟು ಪಾಲು ಹೊಂದಿದೆ. ಜೆನೆರಿಕ್ ಔಷಧಗಳ ರಫ್ತುಗಳಲ್ಲಿ 20-22% ರಷ್ಟು ಪಾಲನ್ನು ಹೊಂದಿದೆ. ಅಲ್ಲದೆ, ತನ್ನ ಔಷಧೀಯ ರಫ್ತುಗಳ ಮೂಲಕ 200ಕ್ಕೂ ಹೆಚ್ಚು ದೇಶಗಳಿಗೆ ಸೇವೆ ಸಲ್ಲಿಸುತ್ತಿದೆ ಎಂದು ಸಚಿವರು ಹೇಳಿದರು. ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವಲ್ಲಿ ಹಲವಾರು ಭಾರತೀಯ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸಿವೆ. ಇದು ಸಂಶೋಧನಾ ಮನಸ್ಥಿತಿಗೆ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಅಂತಿಮವಾಗಿ ಆರೋಗ್ಯ ಕ್ಷೇತ್ರವನ್ನು ಸುಧಾರಿಸುತ್ತಿದೆ ಎಂದರು.

ಸರ್ಕಾರವು ಧನಸಹಾಯ, ಮಾರ್ಗದರ್ಶನ, ಇನ್ಕ್ಯುಬೇಷನ್ ಸ್ಪೇಸ್ ಇತ್ಯಾದಿಗಳನ್ನು ಒದಗಿಸುತ್ತಿದೆ. ಜೊತೆಗೆ ಆವಿಷ್ಕಾರಗಳು ಸಮಯೋಚಿತವಾಗಿ ವಾಣಿಜ್ಯ ಉದ್ಯಮಗಳಾಗಿ ಪರಿವರ್ತನೆಯಾಗುವುದನ್ನು ಖಚಿತಪಡಿಸಿಕೊಳ್ಳಲು ಶೈಕ್ಷಣಿಕ ಮತ್ತು ಉದ್ಯಮದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಸಚಿವರು ಹೇಳಿದರು.

"ಪ್ರಸ್ತುತ, ಸ್ಥಳೀಯ ಉತ್ಪಾದನೆಯು ಗಮನಾರ್ಹ ಸವಾಲುಗಳನ್ನು ಎದುರಿಸುತ್ತಿದೆ. ಏಕೆಂದರೆ ಇಲ್ಲಿ ಯಾವುದೇ ಸಂಶೋಧನೆಯೊಂದನ್ನು ಉತ್ಪನ್ನವಾಗಿ ಪರಿವರ್ತಿಸುವ ನಿರ್ಣಾಯಕ ಸಮಸ್ಯೆಯು ಪರಿಹಾರವಾಗಬೇಕಿದೆ. ಈ ನಿಟ್ಟಿನಲ್ಲಿ ತಂತ್ರಜ್ಞಾನ ವರ್ಗಾವಣೆಯ ಕೊರತೆಯು ಅತಿದೊಡ್ಡ ತಡೆಗೋಡೆಯಾಗಿದೆ. ಪ್ರಮಾಣೀಕರಣ, ಉತ್ಪಾದನೆ ಮತ್ತು ವಿತರಣೆ ಸಹ ಇದಕ್ಕೆ ಕಠಿಣ ಅಡೆತಡೆಗಳೆನಿಸಿವೆ. ನವೀನ ಆರೋಗ್ಯ ತಂತ್ರಜ್ಞಾನಗಳನ್ನು ಮಾರುಕಟ್ಟೆಗೆ ತರಲು ಪರಿಣಾಮಕಾರಿ ಸಮನ್ವಯದ ಅಗತ್ಯವಿದೆ. ನಿಯಂತ್ರಕ ವ್ಯವಸ್ಥೆಗಳಲ್ಲಿ ಸಾಮರ್ಥ್ಯ ವರ್ಧನೆ ಮತ್ತು ನುರಿತ ತಾಂತ್ರಿಕ ಮಾನವಶಕ್ತಿಯು ಅತ್ಯಂತ  ಅಗತ್ಯ ಅಂಶಗಳಾಗಿವೆ. ಈ ವೇದಿಕೆಯು ಮಾರುಕಟ್ಟೆ, ಪ್ರಾದೇಶಿಕ ಉತ್ಪಾದನೆಯ ಹೆಚ್ಚಳ, ಪರಿಣಾಮಕಾರಿ ಸಂಗ್ರಹಣೆ ಮತ್ತು ವಿತರಣಾ ವ್ಯವಸ್ಥೆಗಳು ಹಾಗೂ ಆರೋಗ್ಯ ತುರ್ತು ಪರಿಸ್ಥಿತಿಗಳಲ್ಲಿ ಪರಿಣಾಮಕಾರಿ ಸಮನ್ವಯಕ್ಕಾಗಿ ಅಸ್ತಿತ್ವದಲ್ಲಿರುವ ಮೂಲಸೌಕರ್ಯಗಳನ್ನು ಮರುಬಳಕೆ ಮಾಡುವತ್ತ ಗಮನ ಹರಿಸಬೇಕು. ಆವಿಷ್ಕಾರಗಳ ಪ್ರಯೋಜನಗಳು ಹೆಚ್ಚು ಅಗತ್ಯವಿರುವವರನ್ನು ತಲುಪುತ್ತವೆ ಮತ್ತು ಅಗತ್ಯವಾದ ಆರೋಗ್ಯ ಉತ್ಪನ್ನಗಳ ಸಮಾನ ಲಭ್ಯತೆಯನ್ನು ಖಾತರಿಪಡಿಸುತ್ತವೆ ಎಂದು ಖಚಿತಪಡಿಸಿಕೊಳ್ಳಲು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಅವು ತಲುಪುವಂತೆ ನೋಡಿಕೊಳ್ಳಬೇಕಿದೆ," ಎಂದು ಸಚಿವರು ಹೇಳಿದರು.

ತಮ್ಮ ಭೇಟಿಯ ವೇಳೆ, ಶ್ರೀ ಖೂಬಾ ಅವರು ಸುರಿನಾಮ್ನ ಸಾರ್ವಜನಿಕ ಆರೋಗ್ಯ ಸಚಿವ ಡಾ. ಅಮರ್ ಎನ್. ರಮಾಧಿನ್ ಅವರನ್ನು ಭೇಟಿ ಮಾಡಿ ಗುಣಮಟ್ಟದ ಆರೋಗ್ಯ ಸೇವೆಗಳ ಬಗ್ಗೆ ಚರ್ಚಿಸಿದರು. ʻಶ್ರೀಗಂಧ ಹಾಲೆಂಡ್ ಕನ್ನಡ ಬಳಗʼದ ʻಕನ್ನಡ ರಾಜ್ಯೋತ್ಸವ-2023ʼ ಆಚರಣೆಯಲ್ಲಿ ಭಾಗವಹಿಸಲು ಅವರು ʻಐನ್ದೋವೆನ್ʼಗೆ ಭೇಟಿ ನೀಡಿದರು.

*****


(Release ID: 1975347) Visitor Counter : 108