ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಅಕ್ಟೋಬರ್ 1ರಂದು ತೆಲಂಗಾಣಕ್ಕೆ ಭೇಟಿ ನೀಡಲಿರುವ ಪ್ರಧಾನಮಂತ್ರಿಯವರು


ತೆಲಂಗಾಣದಲ್ಲಿ 13,500 ಕೋಟಿ ರೂ.ಗೂ ಅಧಿಕ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ರಾಷ್ಟ್ರಕ್ಕೆ ಸಮರ್ಪಿಸಲಿರುವ ಪ್ರಧಾನಮಂತ್ರಿ

ನಾಗ್ಪುರ- ವಿಜಯವಾಡ ಆರ್ಥಿಕ ಕಾರಿಡಾರ್ ಗೆ ಸಂಬಂಧಿಸಿದ ಪ್ರಮುಖ ರಸ್ತೆ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿ

ಭಾರತ್ ಮಾಲಾ ಪರಿಯೋಜನೆಯ ಅಡಿಯಲ್ಲಿ ಅಭಿವೃದ್ಧಿಪಡಿಸಲಾದ ಹೈದರಾಬಾದ್-ವಿಶಾಖಪಟ್ಟಣಂ ಕಾರಿಡಾರ್ ಗೆ ಸಂಬಂಧಿಸಿದ ರಸ್ತೆ ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿರುವ ಪ್ರಧಾನಮಂತ್ರಿ

ಪ್ರಧಾನಮಂತ್ರಿಯವರು ಪ್ರಮುಖ ತೈಲ ಮತ್ತು ಅನಿಲ ಕೊಳವೆ ಮಾರ್ಗ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿ ರಾಷ್ಟ್ರಕ್ಕೆ ಸಮರ್ಪಣೆ ಮಾಡಲಿದ್ದಾರೆ 

ಹೈದರಾಬಾದ್ (ಕಾಚಿಗುಡ) – ರಾಯಚೂರು ರೈಲು ಸೇವೆಯನ್ನು ಪ್ರಧಾನಮಂತ್ರಿಯವರು ಉದ್ಘಾಟನೆ ಮಾಡಿ, ಹಸಿರು ನಿಶಾನೆ ತೋರಲಿದ್ದಾರೆ

Posted On: 29 SEP 2023 2:15PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು 2023ರ ಅಕ್ಟೋಬರ್ 1ರಂದು ತೆಲಂಗಾಣಕ್ಕೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 2:15ರ ಸುಮಾರಿಗೆ ಪ್ರಧಾನಮಂತ್ರಿಯವರು ಮೆಹಬೂಬ್ ನಗರಕ್ಕೆ ತಲುಪಲಿದ್ದು, ಅವರು ರಸ್ತೆ, ರೈಲು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಮತ್ತು ಉನ್ನತ ಶಿಕ್ಷಣದಂತಹ ಪ್ರಮುಖ ಕ್ಷೇತ್ರಗಳಲ್ಲಿ 13,500 ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ ಅನೇಕ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ, ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ರೈಲು ಸೇವೆಗೂ ಹಸಿರು ನಿಶಾನೆಯನ್ನು ತೋರಲಿದ್ದಾರೆ.

ದೇಶಾದ್ಯಂತ ಅತ್ಯಾಧುನಿಕ ರಸ್ತೆ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಯ ಬಗೆಗಿನ ಪ್ರಧಾನ ಮಂತ್ರಿಯವರ ದೃಷ್ಟಿಕೋನಕ್ಕೆ ಪ್ರಚೋದನೆ ನೀಡುವ ನಿಟ್ಟಿನಲ್ಲಿ, ಬಹು-ರಸ್ತೆ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ, ಅದನ್ನು ರಾಷ್ಟ್ರಕ್ಕೆ ಸಮರ್ಪಣೆ ಮಾಡುವ ಕಾರ್ಯವನ್ನೂ ಈ ಸಮಯದಲ್ಲಿ ಮಾಡಲಾಗುವುದು. ಪ್ರಧಾನಮಂತ್ರಿಯವರು ನಾಗ್ಪುರ- ವಿಜಯವಾಡ ಆರ್ಥಿಕ ಕಾರಿಡಾರ್ ನ ಭಾಗವಾಗಿರುವ ಪ್ರಮುಖ ರಸ್ತೆ ಯೋಜನೆಗಳಿಗೆ ಶಂಕುಸ್ಥಾಪನೆಯನ್ನೂ ನೆರವೇರಿಸಲಿದ್ದಾರೆ. ವಾರಂಗಲ್ ನಿಂದ ರಾಷ್ಟ್ರೀಯ ಹೆದ್ದಾರಿ 163 ಜಿಯ ಖಮ್ಮಮ್ ವಿಭಾಗದವರೆಗೆ 108 ಕಿ.ಮೀ ಉದ್ದದ 'ಪ್ರವೇಶ-ನಿಯಂತ್ರಿತ ಚತುಷ್ಪಥ ಗ್ರೀನ್ ಫೀಲ್ಡ್ ಹೆದ್ದಾರಿ' ಮತ್ತು ರಾಷ್ಟ್ರೀಯ ಹೆದ್ದಾರಿ -163 ಜಿಯ ಖಮ್ಮಮ್ ನಿಂದ ವಿಜಯವಾಡ ವಿಭಾಗದವರೆಗೆ 90 ಕಿ.ಮೀ ಉದ್ದದ 'ಪ್ರವೇಶ-ನಿಯಂತ್ರಿತ ಚತುಷ್ಪಥ ಗ್ರೀನ್ ಫೀಲ್ಡ್ ಹೆದ್ದಾರಿ' ಕೂಡಾ ಈ ಯೋಜನೆಗಳಲ್ಲಿ ಸೇರಿವೆ. ಈ ರಸ್ತೆ ಯೋಜನೆಗಳನ್ನು ಒಟ್ಟು 6400 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಈ ಯೋಜನೆಗಳು ವಾರಂಗಲ್ ಮತ್ತು ಖಮ್ಮಮ್ ನಡುವಿನ ಪ್ರಯಾಣದ ದೂರವನ್ನು ಸುಮಾರು 14 ಕಿ.ಮೀ ಮತ್ತು ಖಮ್ಮಮ್ ಮತ್ತು ವಿಜಯವಾಡ ನಡುವೆ ಸುಮಾರು 27 ಕಿ.ಮೀ. ಕಡಿಮೆ ಮಾಡಲಿದೆ. 

ಪ್ರಧಾನಮಂತ್ರಿಯವರು ರಾಷ್ಟ್ರೀಯ ಹೆದ್ದಾರಿ 365ಬಿಬಿಯ ಖಮ್ಮಮ್ ವಿಭಾಗದವರೆಗಿನ 59 ಕಿ.ಮೀ ಉದ್ದದ ಸೂರ್ಯಪೇಟೆಯಿಂದ ಖಮ್ಮಮ್ ವಿಭಾಗದವರೆಗೆ ಚತುಷ್ಪಥ ರಸ್ತೆ ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.  ಸುಮಾರು 2,460 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ಈ ಯೋಜನೆಯು ಹೈದರಾಬಾದ್-ವಿಶಾಖಪಟ್ಟಣಂ ಕಾರಿಡಾರ್ ನ ಒಂದು ಭಾಗವಾಗಿದೆ. ಇದನ್ನು ಭಾರತ್ ಮಾಲಾ ಪರಿಯೋಜನೆಯ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದು ಖಮ್ಮಮ್ ಜಿಲ್ಲೆ ಮತ್ತು ಆಂಧ್ರಪ್ರದೇಶದ ಕರಾವಳಿ ಪ್ರದೇಶಗಳಿಗೆ ಉತ್ತಮ ಸಂಪರ್ಕವನ್ನು ಒದಗಿಸುತ್ತದೆ.

ಈ ಭೇಟಿಯ ವೇಳೆ ಪ್ರಧಾನಮಂತ್ರಿಯವರು '37 ಕಿ.ಮೀ. ಉದ್ದದ ಜಕ್ಲೇರ್- ಕೃಷ್ಣಾ ಹೊಸ ರೈಲು ಮಾರ್ಗ'ವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. 500 ಕೋಟಿ ರೂ.ಗಿಂತ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾದ ಈ ಹೊಸ ರೈಲು ಮಾರ್ಗವು ಹಿಂದುಳಿದ ಜಿಲ್ಲೆಯಾದ ನಾರಾಯಣಪೇಟೆಯ ಪ್ರದೇಶಗಳನ್ನು ಮೊದಲ ಬಾರಿಗೆ ಭಾರತೀಯ ರೈಲ್ವೆ ನಕ್ಷೆಗೆ ಸೇರಿಸಲಿದೆ. ಕೃಷ್ಣ ನಿಲ್ದಾಣದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಹೈದರಾಬಾದ್ (ಕಾಚಿಗುಡ) - ರಾಯಚೂರು - ಹೈದರಾಬಾದ್ (ಕಾಚಿಗುಡ) ರೈಲು ಸೇವೆಗೆ ಪ್ರಧಾನಿ ಹಸಿರು ನಿಶಾನೆ ತೋರಲಿದ್ದಾರೆ. ಈ ರೈಲು ಸೇವೆಯು ತೆಲಂಗಾಣದ ಹೈದರಾಬಾದ್, ರಂಗಾರೆಡ್ಡಿ, ಮೆಹಬೂಬ್ ನಗರ, ನಾರಾಯಣಪೇಟೆ ಜಿಲ್ಲೆಗಳನ್ನು ಕರ್ನಾಟಕದ ರಾಯಚೂರು ಜಿಲ್ಲೆಯೊಂದಿಗೆ ಸಂಪರ್ಕಿಸುತ್ತದೆ. ಈ ಸೇವೆಯು ಹಿಂದುಳಿದ ಜಿಲ್ಲೆಗಳಾದ ಮೆಹಬೂಬ್ ನಗರ ಮತ್ತು ನಾರಾಯಣಪೇಟೆಯ ಹಲವಾರು ಹೊಸ ಪ್ರದೇಶಗಳಿಗೆ ಮೊದಲ ಬಾರಿಗೆ ರೈಲು ಸಂಪರ್ಕವನ್ನು ಒದಗಿಸುತ್ತದೆ. ಈ ಸೇವೆಯು ಇಲ್ಲಿನ ಪ್ರದೇಶದ ವಿದ್ಯಾರ್ಥಿಗಳು, ದೈನಂದಿನ ಪ್ರಯಾಣಿಕರು, ಕಾರ್ಮಿಕರು ಮತ್ತು ಸ್ಥಳೀಯ ಕೈಮಗ್ಗ ಉದ್ಯಮಿಗಳಿಗೆ ಪ್ರಯೋಜನಕಾರಿಯಾಗಲಿದೆ.

ದೇಶದಲ್ಲಿ ಲಾಜಿಸ್ಟಿಕ್ಸ್ ದಕ್ಷತೆಯನ್ನು ಸುಧಾರಿಸುವ ಪ್ರಧಾನ ಮಂತ್ರಿಯವರ ದೃಷ್ಟಿಕೋನಕ್ಕೆ ಅನುಗುಣವಾಗಿ, ಪ್ರಮುಖ ತೈಲ ಮತ್ತು ಅನಿಲ ಪೈಪ್ ಲೈನ್ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ರಾಷ್ಟ್ರಕ್ಕೆ ಸಮರ್ಪಣೆಯನ್ನು ಈ ಕಾರ್ಯಕ್ರಮದ ಸಮಯದಲ್ಲಿ ನೆರವೇರಿಸಲಾಗುವುದು. ಪ್ರಧಾನಮಂತ್ರಿಯವರು 'ಹಾಸನ-ಚೆರ್ಲಪಲ್ಲಿ ಎಲ್ ಪಿಜಿ ಪೈಪ್ ಲೈನ್ ಯೋಜನೆ'ಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಸುಮಾರು 2170 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ಎಲ್ ಪಿಜಿ ಪೈಪ್ ಲೈನ್ ಕರ್ನಾಟಕದ ಹಾಸನದಿಂದ ಹೈದರಾಬಾದ್ ಉಪನಗರವಾದ ಚೆರ್ಲಪಲ್ಲಿಯವರೆಗೆ ಎಲ್ ಪಿಜಿ ಸಾರಿಗೆ ಮತ್ತು ವಿತರಣೆಯ ಸುರಕ್ಷಿತ, ವೆಚ್ಚ-ಪರಿಣಾಮಕಾರಿ ಮತ್ತು ಪರಿಸರ ಸ್ನೇಹಿ ಎಲ್ ಪಿಜಿ ಸಾರಿಗೆ ವಿಧಾನವನ್ನು ಒದಗಿಸುತ್ತದೆ. ಕೃಷ್ಣಪಟ್ಟಣಂನಿಂದ ಹೈದರಾಬಾದ್ (ಮಲಕಾಪುರ) ವರೆಗಿನ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ನ ಬಹು ಉತ್ಪನ್ನ ಪೆಟ್ರೋಲಿಯಂ ಪೈಪ್ ಲೈನ್ ಗೆ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ 425 ಕಿಲೋಮೀಟರ್ ಪೈಪ್ ಲೈನ್ ಅನ್ನು 1940 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುವುದು. ಈ ಪೈಪ್ ಲೈನ್ ಇಲ್ಲಿನ ಪ್ರದೇಶದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಸುರಕ್ಷಿತ, ವೇಗದ, ಪರಿಣಾಮಕಾರಿ ಮತ್ತು ಪರಿಸರ ಸ್ನೇಹಿ ಎಲ್ ಪಿಜಿ ಸಾರಿಗೆ ವಿಧಾನವನ್ನು ಒದಗಿಸುತ್ತದೆ. 

ಪ್ರಧಾನಮಂತ್ರಿಯವರು ಹೈದರಾಬಾದ್ ವಿಶ್ವವಿದ್ಯಾಲಯದ ಐದು ಹೊಸ ಕಟ್ಟಡಗಳಾದ ಸ್ಕೂಲ್ ಆಫ್ ಎಕನಾಮಿಕ್ಸ್; ಸ್ಕೂಲ್ ಆಫ್ ಮ್ಯಾಥಮ್ಯಾಟಿಕ್ಸ್ ಮತ್ತು ಸ್ಟ್ಯಾಟಿಸ್ಟಿಕ್ಸ್; ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್; ಲೆಕ್ಚರ್ ಹಾಲ್ ಕಾಂಪ್ಲೆಕ್ಸ್-III;  ಮತ್ತು ಸರೋಜಿನಿ ನಾಯ್ಡು ಸ್ಕೂಲ್ ಆಫ್ ಆರ್ಟ್ಸ್ ಅಂಡ್ ಕಮ್ಯುನಿಕೇಷನ್ (ಅನೆಕ್ಸ್) ಅನ್ನು ಉದ್ಘಾಟಿಸಲಿದ್ದಾರೆ. ಇದು ಹೈದರಾಬಾದ್ ವಿಶ್ವವಿದ್ಯಾಲಯದ ಮೂಲಸೌಕರ್ಯವನ್ನು ಮೇಲ್ದರ್ಜೆಗೇರಿಸಿ ವಿದ್ಯಾರ್ಥಿಗಳು ಮತ್ತು ಬೋಧಕರಿಗೆ ಸುಧಾರಿತ ಸೌಲಭ್ಯಗಳು ಮತ್ತು ಸವಲತ್ತುಗಳನ್ನು ಒದಗಿಸುವ ನಿಟ್ಟಿನಲ್ಲಿ ಒಂದು ದಿಟ್ಟ ಹೆಜ್ಜೆಯಾಗಿದೆ.

****


(Release ID: 1962085) Visitor Counter : 102