ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ
azadi ka amrit mahotsav

ಕರ್ನಾಟಕದ ರಾಮದುರ್ಗದ ಕೋಟೆಯ ಪುನಃಶ್ಚೇತನ: ಸ್ವಚ್ಛತಾ ಪಾಕ್ಷಿಕದಡಿ ಸ್ಫೂರ್ತಿದಾಯಕ ಕಥೆ

Posted On: 27 SEP 2023 5:31PM by PIB Bengaluru

ಮಹಾತ್ಮಾಗಾಂಧೀಜಿ ಅವರ ಜನ್ಮ ದಿನದ ಹಿನ್ನೆಲೆಯಲ್ಲಿ ಸ್ವಚ್ಛ ಭಾರತ ದಿನದ [ಎಸ್.ಬಿ.ಡಿ] ಸಂದರ್ಭದಲ್ಲಿ ಸೆಪ್ಟೆಂಬರ್ 15 ರಿಂದ ಅಕ್ಟೋಬರ್ 2 ರ ವರೆಗೆ ಸ್ವಚ್ಛತೆಯೇ ಸೇವೆ – 2023 ರ ಅಡಿ “ಸ್ವಚ್ಛತಾ ಪಾಕ್ಷಿಕ” ಆಯೋಜಿಸಲಾಗಿದೆ. ಪಾಕ್ಷಿಕ ಸಂದರ್ಭದಲ್ಲಿ ನಗರಗಳ ಕಡಲತಟಗಳು, ಪ್ರವಾಸಿತಾಣಗಳು ಮತ್ತು ಬೆಟ್ಟಗುಡ್ಡಗಳಲ್ಲಿ  ಹಲವಾರು ಸ್ವಚ್ಛತಾ ಅಭಿಯಾನಗಳನ್ನು ಹಮ್ಮಿಕೊಳ್ಳಲಾಗಿದೆ. ಈ ವರೆಗೆ ಈ ಪಾಕ್ಷಿಕದಲ್ಲಿ 9 ಕೋಟಿಗೂ ಹೆಚ್ಚು ಮಂದಿ ನಾಗರಿಕರು ಕೈಜೋಡಿಸಿದ್ದಾರೆ.


 

ಕರ್ನಾಟಕದ ರಾಮದುರ್ಗ ಪುರಸಭೆಯಲ್ಲಿ ‘ಸ್ವಚ್ಛತೆ ಕುರಿತು ಐತಿಹಾಸಿಕ ಅಂದೋಲನ’ ಹಮ್ಮಿಕೊಳ್ಳಲಾಗಿದ್ದು, ಹಲವಾರು ಸ್ವಯಂ ಸೇವಕರು ಸ್ವಚ್ಛತಾ ಅಭಿಯಾನದಡಿ ಪಾಲ್ಗೊಂಡಿದ್ದರು ಮತ್ತು ಪಟ್ಟಣದ ಸುರಕ್ಷತೆ ಹಾಗೂ ಐತಿಹಾಸಿಕ ಕೋಟೆಯನ್ನು ಉತ್ತೇಜಿಸುವ ಉದ್ದೇಶ ಹೊಂದಿದ್ದರು. ಶತಕಗಳ ಕಾಲ ಈ ವಲಯದ ವ್ಯಾಪಾರ ಮತ್ತು ವಾಣಿಜ್ಯ ತಾಣವಾಗಿ ರಾಮದುರ್ಗ ಕೋಟೆ ಕಾರ್ಯನಿರ್ವಹಿಸಿದ ಪರಂಪರೆಯನ್ನು ಹೊಂದಿದೆ. ಆದಾಗ್ಯೂ ಕಾಲಾನಂತರದಲ್ಲಿ ನಿರ್ಲಕ್ಷ್ಯ ಮತ್ತು ಆಧುನಿಕ ಅಭಿವೃದ್ಧಿಯ ಅತಿಕ್ರಮಣದಿಂದಾಗಿ ಈ ಅಮೂಲ್ಯ ಪರಂಪರೆಯನ್ನು ನಾಶಪಡಿಸುವ ಭೀತಿ ಎದುರಾಗಿತ್ತು. ತಮ್ಮ ಪಟ್ಟಣದ ಐತಿಹಾಸಿಕ ಗುರುತು ಸಂರಕ್ಷಿಸುವ ಮಹತ್ವವನ್ನು ಪರಿಗಣಿಸಿದ ರಾಮದುರ್ಗ ಪುರಸಭೆ ಈ ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿತು. ಸ್ವಚ್ಛತಾ ಪಾಕ್ಷಿಕದಡಿ ಬೆಳಗಾವಿ ಜಿಲ್ಲೆಯ ರಾಮದುರ್ಗ ಪುರಸಭೆ ಈ ಐತಿಹಾಸಿಕ ರಾಮದುರ್ಗ ಕೋಟೆಯನ್ನು ಸ್ವಚ್ಛಗೊಳಿಸುವ ಬೃಹತ್ ಅಭಿಯಾನ ಹಮ್ಮಿಕೊಂಡಿತು. ವರ್ಷಗಳಿಂದ ಈ ಐತಿಹಾಸಿಕ ತಾಣ ಅಸಂಖ್ಯಾತ ಜನರ ಹೆಜ್ಜೆಗುರುತುಗಳಿಗೆ ಸಾಕ್ಷಿಯಾಗಿದೆ ಮತ್ತು ‘ಶತ್ರು’ [ಕನ್ನಡ ಚಲನಚಿತ್ರ] ನಂತಹ ಚಲನಚಿತ್ರ ಚಿತ್ರೀಕರಣ ಕೂಡ ಇಲ್ಲಿ ಮಾಡಲಾಗಿತ್ತು.

 ರಾಮದುರ್ಗದ ರಾಜಮನೆತನದ ನಾಯಕ ಶ್ರೀ ಸುರೇಶ್ ಪತ್ತೆಪುರ್ ಅವರ ದೂರದೃಷ್ಟಿಯ ನಾಯಕತ್ವದಡಿ ಸಾರ್ವಜನಿಕರು ಮತ್ತು ಕಾಲೇಜು ವಿದ್ಯಾರ್ಥಿಗಳು ಜೊತೆಗೂಡಿ ಸ್ವಚ್ಛತಾ ಅಭಿಯಾನದಡಿ ಪಾಲ್ಗೊಳ್ಳುವ ಕುರಿತಾದ ಅದ್ಭುತ ಕಲ್ಪನೆ ಮೂಡಿ ಬಂತು. ಈ ಕಾರಣಕ್ಕಾಗಿ 150 ಕ್ಕೂ ಅಧಿಕ ಸ್ವಯಂ ಸೇವಕರು ಅಚಲ ಉತ್ಸಾಹದೊಂದಿಗೆ ರಾಮದುರ್ಗ ಕೋಟೆಯನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಕೈಜೋಡಿಸಿದರು. ಇವರೆಲ್ಲರ ಬದ್ಧತೆ ಕೇವಲ ಸ್ವಚ್ಛತೆಯಾಗಿರಲಿಲ್ಲ, ಬದಲಿಗೆ ಕಸಮುಕ್ತ ತಾಣವನ್ನಾಗಿ ಪರಿವರ್ತಿಸುವ ಭರವಸೆಯ ಪರಿವರ್ತನೆಗೆ ಇವರ ಶ್ರಮ ಸಾರ್ಥಕವಾಯಿತು. ಎಲ್ಲರೂ ಒಟ್ಟಿಗೆ ಅವಿರತವಾಗಿ ಅವಶೇಷಗಳನ್ನು ತೆರವುಗೊಳಿಸುವ, ಕಸ ತೆಗೆಯುವ ಮತ್ತು ಕೋಟೆಯನ್ನು ಮತ್ತೆ ಗತವೈಭವಕ್ಕೆ ಮರುಸ್ಥಾಪಿಸುವ ಉತ್ಸುಕತೆಯಿಂದ ಕಾರ್ಯನಿರ್ವಹಿಸಿದರು.

  

ಸ್ಥಳೀಯರು, ಕಾಲೇಜು ವಿದ್ಯಾರ್ಥಿಗಳು ಮತ್ತು ಇತರನ್ನು “ಸ್ವಚ್ಛತೆಯೇ ಸೇವೆ” ಅಭಿಯಾನದಡಿ ವಿನೂತನವಾಗಿ ಸೇರ್ಪಡೆಯಾಗುವಂತೆ ಅವರು ಮಾಡಿದರು. ಇದಕ್ಕಾಗಿ ಸ್ವಾತಂತ್ರ್ಯ ಯೋಧರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸುವುದು ಸೇರಿದಂತೆ ಇನ್ನಿತರೆ ಚಟುವಟಿಕೆಗಳನ್ನು ಕೈಗೊಳ್ಳಲಾಯಿತು. ಅಂತಿಮವಾಗಿ ಒಟ್ಟುಗೂಡಿದ ಸಮುದಾಯ ಏನನ್ನು ಸಾಧಿಸಬಹುದು ಎಂಬುದಕ್ಕೆ ಪ್ರಕಾಶಮಾನವಾದ ರಾಮದುರ್ಗ ಐತಿಹಾಸಿಕ ಕೋಟೆ ಸಾಕ್ಷಿಯಾಯಿತು. ಸ್ವಚ್ಛತೆಯ ಆಂದೋಲನ ಕೋಟೆಯನ್ನು ಶುಚಿಗೊಳಿಸುವುದಷ್ಟೇ ಅಲ್ಲದೇ ರಾಮದುರ್ಗದ ಗತಕಾಲಕ್ಕೆ ಮತ್ತೆ ಜೀವಕಳೆ ತುಂಬಿತು ಮತ್ತು ಐತಿಹಾಸಿಕ ಮಹತ್ವದ ದ್ವೀಪವಾಗಿ ಭವಿಷ್ಯದಲ್ಲಿ ತನ್ನ ಸ್ಥಾನವನ್ನು ಇದು ಭದ್ರಪಡಿಸಿಕೊಂಡಿತು.

ಕಾಕತಾಳೀಯವೆಂದರೆ ಮಹಾತ್ಮಾ ಗಾಂಧೀಜಿ ಅವರ ಜಯಂತಿ ಹಿನ್ನೆಲೆಯಲ್ಲಿ ಅಕ್ಟೋಬರ್ 1 ರಂದು ಬೆಳಿಗ್ಗೆ 10ಕ್ಕೆ ಒಂದು ಗಂಟೆ ಕಾಲ ಸ್ವಚ್ಛತೆಗಾಗಿ ಶ್ರಮದಾನ ಮಾಡುವಂತೆ ಎಲ್ಲಾ ನಾಗರಿಕರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ ಮತ್ತು ಸ್ವಚ್ಛತಾ ಅಭಿಯಾನವನ್ನು ಮುಂದುವರೆಸಿದ್ದಾರೆ. ಸಾರ್ವಜನಿಕ ಪ್ರದೇಶವಾದ ಬೀದಿಗಳು, ನೆರೆಹೊರೆ ಪ್ರದೇಶಗಳು, ಪಾರ್ಕ್ ಗಳು, ನದಿಗಳು ಮತ್ತು ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಕೊಡುಗೆಯ ಮಹತ್ವವನ್ನು ಅವರು ಒತ್ತಿ ಹೇಳಿದ್ದಾರೆ. ಸಾರ್ವಜನಿಕ ಪ್ರದೇಶಗಳಾದ ಮಾರುಕಟ್ಟೆಗಳು, ರೈಲ್ವೆ ಹಳಿಗಳು, ಜಲಮೂಲಗಳು, ಪ್ರವಾಸಿತಾಣಗಳು ಮತ್ತು ಧಾರ್ಮಿಕ ಪ್ರದೇಶಗಳಲ್ಲಿ ಎಲ್ಲಾ ರೀತಿಯ ಜನ ಸಮೂಹ ಸ್ವಚ್ಛತಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತೆ ಅವರು ಜನರನ್ನು ಉತ್ತೇಜಿಸಿದ್ದಾರೆ. ಪಟ್ಟಣಗಳು, ಗ್ರಾಮ ಪಂಚಾಯತ್ ಗಳು ಮತ್ತು ಸರ್ಕಾರದ ಹಲವಾರು ವಲಯಗಳಲ್ಲಿ ಸ್ವಚ್ಛತಾ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು ಮತ್ತು ಆಸಕ್ತ ಸಂಘ ಸಂಸ್ಥೆಗಳು ಸ್ವಚ್ಛತಾ ಚಟುವಟಿಕೆಯಲ್ಲಿ ಭಾಗಿಯಾಗಲು ಆನ್ ಲೈನ್ ಮೂಲಕ ಕೋರಿಕೆ ಸಲ್ಲಿಸಬಹುದು. ಸ್ವಚ್ಛತಾ ಚಟುವಟಿಕೆ ಕುರಿತ ಮಾಹಿತಿ ಸ್ವಚ್ಛತಾ ಹಿ ಸೇವಾ – ನಾಗರಿಕ ಪೋರ್ಟಲ್ ನಲ್ಲಿ ಲಭ್ಯವಿದೆ. ಈ ಪೋರ್ಟಲ್ ಗೆ ನಾಗರಿಕರು ತಮ್ಮ ಸ್ವಚ್ಛತಾ ಕಾರ್ಯಕ್ರಮದ ಚಿತ್ರಗಳನ್ನು ಅಪ್ ಲೋಡ್ ಮಾಡಬಹುದಾಗಿದೆ ಮತ್ತು ಈ ಮೂಲಕ ಸ್ವಚ್ಛತಾ ರಾಯಭಾರಿಗಳು ಸಹ ಆಗಬಹುದು. ಹೆಚ್ಚಿನ ಮಾಹಿತಿಗೆ ಇಲ್ಲಿಗೆ ಭೇಟಿ ಕೊಡಿ https://swachhatahiseva.com

******


(Release ID: 1961461) Visitor Counter : 118


Read this release in: English , Urdu , Hindi