ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಗ್ರಾಮೀಣ ಸಮುದಾಯಗಳ ವಿದ್ಯುತ್ ಶಕ್ತಿಯ ಅಗತ್ಯಗಳಿಗಾಗಿ ನವೀಕರಿಸಬಹುದಾದ ಇಂಧನ ಮೈಕ್ರೋಗ್ರಿಡ್ ವಿದ್ಯುತ್ ಸ್ಥಾವರಕ್ಕೆ ಎಂಇಐಟಿವೈ ಕಾರ್ಯದರ್ಶಿ ಶ್ರೀ ಅಲ್ಕೇಶ್ ಕುಮಾರ್ ಶರ್ಮಾ ಅವರಿಂದ ಚಾಲನೆ
Posted On:
10 AUG 2023 8:23PM by PIB Bengaluru
ರಾಷ್ಟ್ರೀಯ ವಿದ್ಯುತ್ ವಿದ್ಯುನ್ಮಾನ ತಂತ್ರಜ್ಞಾನ ಮಿಷನ್ (ಎನ್ಎಎಂಪಿಇಟಿ) ಕಾರ್ಯಕ್ರಮದ ಭಾಗವಾಗಿ ತಿರುವನಂತಪುರಂನ ಸಿ-ಡ್ಯಾಕ್ ಅಭಿವೃದ್ಧಿಪಡಿಸಿದ ಗ್ರಾಮೀಣ ಸಮುದಾಯಗಳ ವಿದ್ಯುತ್ ಶಕ್ತಿ ಅಗತ್ಯಗಳಿಗಾಗಿರುವ ಸ್ಥಳೀಯ ತಂತ್ರಜ್ಞಾನವನ್ನು ಒಳಗೊಂಡ ಹೈಬ್ರಿಡ್ ಹಸಿರು ಶಕ್ತಿ ಮೈಕ್ರೋಗ್ರಿಡ್ ವ್ಯವಸ್ಥೆಯನ್ನು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (ಎಂಇಐಟಿವೈ) ಕಾರ್ಯದರ್ಶಿ ಶ್ರೀ ಅಲ್ಕೇಶ್ ಕುಮಾರ್ ಶರ್ಮಾ ಅವರು ಇಂದು ಕೊಟ್ಟೂರಿನ ಆನೆ ಪುನರ್ವಸತಿ ಕೇಂದ್ರದಲ್ಲಿ (ಇಆರ್ಸಿ) ಕಾರ್ಯಾರಂಭಗೊಳಿಸಿದರು.
ಸಭಿಕರನ್ನುದ್ದೇಶಿಸಿ ಮಾತನಾಡಿದ ಶ್ರೀ ಅಲ್ಕೇಶ್ ಕುಮಾರ್ ಶರ್ಮಾ, "ಸಿ-ಡ್ಯಾಕ್ ಮೂಲಕ ವಿಶಿಷ್ಟ ತಂತ್ರಜ್ಞಾನ ಅಭಿವೃದ್ಧಿ ಮತ್ತು ಬಳಕೆಯ ನಿಯೋಜನೆಗಳನ್ನು ಸಾಕಾರಗೊಳಿಸಲು ಎಂಇಐಟಿವೈ ಆದ್ಯತೆ ನೀಡುತ್ತಿದೆ ಮತ್ತು ಅಗಾಧ ಪ್ರಯತ್ನಗಳನ್ನು ಈ ನಿಟ್ಟಿನಲ್ಲಿ ಮಾಡುತ್ತಿದೆ. ವಿಶ್ವಾಸಾರ್ಹ ಹಸಿರು ಶಕ್ತಿ ಆಧಾರಿತ ಮೈಕ್ರೋಗ್ರಿಡ್ ಇಆರ್ ಸಿಯಲ್ಲಿನ ಪಶುವೈದ್ಯಕೀಯ ಆಸ್ಪತ್ರೆ ವ್ಯವಸ್ಥೆಗಳಲ್ಲಿಯ ನಿರ್ಣಾಯಕ ವ್ಯವಸ್ಥೆಗಳಿಗೆ ವಿದ್ಯುತ್ ಪರಿಹಾರವನ್ನು ಒದಗಿಸುತ್ತಿದೆ. ನಾವು ನಮ್ಮ ಪ್ರಯತ್ನಗಳನ್ನು ಉನ್ನತ ಕಾರ್ಯಕ್ಷಮತೆ ಮತ್ತು ಪರಿಣಾಮಕಾರಿ ತಂತ್ರಜ್ಞಾನ ಹಾಗೂ ವ್ಯವಸ್ಥೆಯ ಅಭಿವೃದ್ಧಿಗಳತ್ತ ಕೇಂದ್ರೀಕರಿಸಬೇಕು ಮತ್ತು ಅದಕ್ಕೆ ಆದ್ಯ ಗಮನ ನೀಡಬೇಕು ಎಂದರು. ವ್ಯಾಪಕ ನಿಯೋಜನೆಗಳ ಮೂಲಕ ತಂತ್ರಜ್ಞಾನವನ್ನು ದೂರದ ದುರ್ಗಮ ಪ್ರದೇಶಗಳಲ್ಲಿರುವ ಸಮುದಾಯಗಳಿಗೆ ವಿಸ್ತರಿಸಲಾಗುವುದು ಎಂದೂ ಅವರು ಈ ಸಂದರ್ಭದಲ್ಲಿ ಹೇಳಿದರು.
"ತಂತ್ರಜ್ಞಾನ ಮೌಲ್ಯಮಾಪನಕ್ಕಾಗಿ ಅರಣ್ಯ ಇಲಾಖೆಯ ಉಪಕ್ರಮ ಮತ್ತು ಬೆಂಬಲ ಶ್ಲಾಘನೀಯ. ಇಲ್ಲಿ ಕಾಡು ಪ್ರಾಣಿಗಳ ಪುನರ್ವಸತಿಯಲ್ಲೂ ಹಸಿರು ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಲಾಗುತ್ತಿದೆ. ಇಂತಹ ಸುಧಾರಿತ ತಂತ್ರಜ್ಞಾನಗಳನ್ನು ಸಮಾಜಕ್ಕೆ ವಿಶೇಷವಾಗಿ ಯುವ ಪೀಳಿಗೆ ಮತ್ತು ಶಾಲಾ ಮಕ್ಕಳಿಗೆ ತಲುಪಿಸಲು ಈ ವ್ಯವಸ್ಥೆಯನ್ನು ಬಳಸಲಾಗುವುದು ಎಂದೂ ಶ್ರೀ ಅಲ್ಕೇಶ್ ಕುಮಾರ್ ಶರ್ಮಾ ಹೇಳಿದರು.
ಮೈಕ್ರೋಗ್ರಿಡ್: ನವೀಕರಿಸಬಹುದಾದ ಇಂಧನ ಮೈಕ್ರೋಗ್ರಿಡ್ ಒಂದು ಸ್ವತಂತ್ರ, ಸ್ಥಳೀಯ ಮತ್ತು ಸ್ವಯಂ-ನಿಯಂತ್ರಿತ ಇಂಧನ ಶಕ್ತಿ ವ್ಯವಸ್ಥೆಯಾಗಿದ್ದು, ನವೀಕರಿಸಬಹುದಾದ ಇಂಧನ ಮೂಲಗಳನ್ನು ಅದು ಪ್ರಾಥಮಿಕ ಉತ್ಪಾದನಾ ಮೂಲಗಳನ್ನಾಗಿ ಹೊಂದಿದೆ. ನವೀಕರಿಸಬಹುದಾದ ಇಂಧನ ಮೈಕ್ರೋಗ್ರಿಡ್ ನ ಪ್ರಮುಖ ಘಟಕಗಳು ಸ್ಥಳೀಯ ಮತ್ತು ಸುಸ್ಥಿರ ರೀತಿಯಲ್ಲಿ ವಿದ್ಯುತ್ ಶಕ್ತಿಯನ್ನು ಉತ್ಪಾದಿಸಲು, ಸಂಗ್ರಹಿಸಲು, ನಿರ್ವಹಿಸಲು ಮತ್ತು ವಿತರಿಸಲು ಒಟ್ಟಾಗಿ ಕೆಲಸ ಮಾಡುವ ವಿವಿಧ ಘಟಕಗಳು ಮತ್ತು ವ್ಯವಸ್ಥೆಗಳನ್ನು ಒಳಗೊಂಡಿವೆ. ಮೈಕ್ರೋಗ್ರಿಡ್ ಅದರ ಆಫ್-ಗ್ರಿಡ್ ಕಾರ್ಯಾಚರಣೆಯ ವಿಧಾನದಲ್ಲಿ, ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ಪರಿಸರದ ಮೇಲಿನ ಪರಿಣಾಮವನ್ನು ಕಡಿಮೆ ಮಾಡಲು ನವೀಕರಿಸಬಹುದಾದ ಶಕ್ತಿಯ ಬಳಕೆಗೆ ಆದ್ಯತೆ ನೀಡುತ್ತದೆ ಮತ್ತು ನಿರ್ದಿಷ್ಟ ಪ್ರದೇಶ ಅಥವಾ ಸಮುದಾಯದೊಳಗೆ ವಿದ್ಯುತ್ತನ್ನು ಉತ್ಪಾದಿಸಿ, ಸಂಗ್ರಹಿಸುತ್ತದೆ ಮತ್ತು ವಿತರಿಸುತ್ತದೆ. ಆನ್-ಗ್ರಿಡ್ ಕಾರ್ಯಾಚರಣೆಯ ವಿಧಾನದಲ್ಲಿ, ಮೈಕ್ರೋಗ್ರಿಡ್ ಬಳಕೆ ಜಾಲ (ಯುಟಿಲಿಟಿ ಗ್ರಿಡ್) ದೊಂದಿಗೆ ಸಂವಹನ ನಡೆಸಿ ಮತ್ತು ಸ್ಥಳೀಯವಾಗಿ ಅಗತ್ಯವಿರುವುದಕ್ಕಿಂತ ಹೆಚ್ಚಿನ ಉತ್ಪಾದನೆಯನ್ನು ಹೊಂದಿದ್ದರೆ ವಿದ್ಯುತ್ ರಫ್ತು ಮಾಡಲು ಸಮರ್ಥವಾಗಿರುತ್ತದೆ.
ಇಆರ್ ಸಿಯಲ್ಲಿ ಅನುಷ್ಠಾನಕ್ಕೆ ತರಲಾದ ಮೈಕ್ರೋಗ್ರಿಡ್ ಯೋಜನೆಯಲ್ಲಿ, ಸಿಲಿಕಾನ್ ಕಾರ್ಬೈಡ್ ಬಳಸಿ ವಿಶಿಷ್ಟವಾದ 25 ಕಿಲೋವ್ಯಾಟ್ ಪವರ್ ಕಂಡೀಷನಿಂಗ್ ಯುನಿಟ್ (ಪಿಸಿಯು) ತಂತ್ರಜ್ಞಾನ, 50 ಕಿಲೋಹರ್ಟ್ಸ್ ನಲ್ಲಿ ಕಾರ್ಯನಿರ್ವಹಿಸುವ ವೈಡ್ ಬ್ಯಾಂಡ್ ಗ್ಯಾಪ್ (ಡಬ್ಲ್ಯೂಬಿಜಿ) ಅರೆವಾಹಕ ಸಾಧನ (ಸೆಮಿ ಕಂಡಕ್ಟರ್)ದೊಂದಿಗೆ ಬೃಹತ್ 50 ಹೆರ್ಟ್ಜ್ ವಿದ್ಯುತ್ ಪರಿವರ್ತಕ (ಟ್ರಾನ್ಸ್ ಫಾರ್ಮರ್) ಅವಶ್ಯಕತೆಯನ್ನು ನಿವಾರಿಸಿ ಇಡೀ ವ್ಯವಸ್ಥೆಯನ್ನು ತುಂಬಾ ಸಣ್ಣ ಗಾತ್ರದಲ್ಲಿ ಅಡಕಗೊಂಡಿರುವಂತೆ ಮಾಡುತ್ತದೆ. ಮತ್ತು ದೂರದ ದುರ್ಗಮ ಸ್ಥಳದಲ್ಲಿ ಕಂಟೇನರ್ ಆಧಾರಿತ ನಿಯೋಜನೆ ಕೂಡಾ ಇದರಿಂದ ಸಾಧ್ಯವಾಗುತ್ತದೆ. ಈ ತಂತ್ರಜ್ಞಾನವನ್ನು ಸಿಡಿಎಸಿ ಅಭಿವೃದ್ಧಿಪಡಿಸಿದೆ.
ಎಂಇಐಟಿವೈನ ಅಧಿಕಾರಿ ಡಾ.ಓಂ ಕೃಷ್ಣ ಸಿಂಗ್, ವಿಜ್ಞಾನಿ 'ಡಿ'; ಎಂಇಐಟಿವೈನ ಇತರ ಗಣ್ಯರು; ತಿರುವನಂತಪುರಂನ ಸಿ-ಡ್ಯಾಕ್ ಮತ್ತು ಕೇರಳ ಸರ್ಕಾರದ ಅರಣ್ಯ ಇಲಾಖೆ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
*****
(Release ID: 1947666)
Visitor Counter : 100