ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜುಲೈ 18 ರಂದು ಪ್ರಧಾನಮಂತ್ರಿ ಪೋರ್ಟ್ ಬ್ಲೇರ್‌ನ ವೀರ್ ಸಾವರ್ಕರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಏಕೀಕೃತ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ


ನಿಸರ್ಗದಿಂದ ಪ್ರೇರಿತವಾದ, ವಾಸ್ತುಶಿಲ್ಪದ ವಿನ್ಯಾಸವು ಸಮುದ್ರ ಮತ್ತು ದ್ವೀಪಗಳನ್ನು ಚಿತ್ರಿಸುವ ಚಿಪ್ಪಿನ ಆಕಾರದ ರಚನೆಯನ್ನು ಹೋಲುತ್ತದೆ.`

ದ್ವೀಪಗಳ ಪರಿಸರದ ಮೇಲೆ ನಕಾರಾತ್ಮಕ ಪ್ರಭಾವ ತಗ್ಗಿಸುವುದನ್ನು ಖಚಿತಪಡಿಸಿಕೊಳ್ಳಲು ಬಹು ಸಮರ್ಥನೀಯತೆಯ ವೈಶಿಷ್ಟ್ಯಗಳಿವೆ

ನೂತನ ಏಕೀಕೃತ ಟರ್ಮಿನಲ್ ಕಟ್ಟಡವು ವಾರ್ಷಿಕ ಸುಮಾರು 50 ಲಕ್ಷ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದ್ದು, ಈ ಪ್ರದೇಶದಲ್ಲಿ ಪ್ರವಾಸೋದ್ಯಮ ಮತ್ತು ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಿರುತ್ತದೆ

Posted On: 17 JUL 2023 11:23AM by PIB Bengaluru

ಜುಲೈ 18 ರಂದು ಬೆಳಿಗ್ಗೆ 10:30 ಕ್ಕೆ ಪೋರ್ಟ್ ಬ್ಲೇರ್‌ನ ವೀರ್ ಸಾವರ್ಕರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡವನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ.

ಸಂಪರ್ಕ ಮೂಲಸೌಕರ್ಯವನ್ನು ವೃದ್ಧಿಸುವುದು ಸರ್ಕಾರದ ಪ್ರಮುಖ ಗುರಿಯಾಗಿದೆ. ಸುಮಾರು 710 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡದ ಉದ್ಘಾಟನೆಯು ದ್ವೀಪ ಕೇಂದ್ರಾಡಳಿತ ಪ್ರದೇಶಕ್ಕೆ  ಸಂಪರ್ಕವನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಒಟ್ಟು ಸುಮಾರು 40,800 ಚದರ ಮೀಟರ್‌ನ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ, ಹೊಸ ಟರ್ಮಿನಲ್ ಕಟ್ಟಡವು ವಾರ್ಷಿಕ ಸುಮಾರು 50 ಲಕ್ಷ ಪ್ರಯಾಣಿಕರನ್ನು ನಿರ್ವಹಿಸುವ  ಸಾಮರ್ಥ್ಯವನ್ನು ಹೊಂದಿದೆ. ಪೋರ್ಟ್ ಬ್ಲೇರ್ ವಿಮಾನ ನಿಲ್ದಾಣದಲ್ಲಿ ರೂ. 80 ಕೋಟಿ ವೆಚ್ಚದಲ್ಲಿ ಎರಡು ಬೋಯಿಂಗ್-767-400 ಮತ್ತು ಎರಡು ಏರ್‌ಬಸ್-321 ಮಾದರಿಯ ವಿಮಾನಗಳಿಗೆ ಸೂಕ್ತವಾದ ಅಪ್ರಾನ್ ಅನ್ನು ಸಹ ನಿರ್ಮಿಸಲಾಗಿದೆ, ಇದರಿಂದಾಗಿ ಪ್ರಸ್ತುತ ಏಕಕಾಲದಲ್ಲಿ ಹತ್ತು ವಿಮಾನಗಳ ನಿಲುಗಡೆಗೆ ವಿಮಾನ ನಿಲ್ದಾಣವು ಸಿದ್ಧವಾಗಿದೆ.

ನಿಸರ್ಗದಿಂದ ಸ್ಫೂರ್ತಿ ಪಡೆದು, ನಿರ್ಮಿಸಲಾದ ವಿಮಾನ ನಿಲ್ದಾಣದ ಟರ್ಮಿನಲ್‌ನ ವಾಸ್ತುಶಿಲ್ಪ ವಿನ್ಯಾಸವು ಚಿಪ್ಪಿನ ಆಕಾರದ ರಚನೆಯನ್ನು ಹೊಂದಿದ್ದು ಸಮುದ್ರ ಮತ್ತು ದ್ವೀಪಗಳನ್ನು ಬಿಂಬಿಸುತ್ತದೆ. ಶಾಖ ಹೀರಿಕೊಳ್ಳುವಿಕೆಯನ್ನು ತಗ್ಗಿಸಲು ಡಬಲ್ ಇನ್ಸುಲೇಟೆಡ್ ರೂಫಿಂಗ್ ಸಿಸ್ಟಮ್, ಕಟ್ಟಡದ ಒಳಗೆ ಕೃತಕ ಬೆಳಕಿನ ಅವಶ್ಯಕತೆಯನ್ನು ತಗ್ಗಿಸಲು ಹಗಲಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೈಸರ್ಗಿಕ ಸೂರ್ಯನ ಬೆಳಕಿನ ಗರಿಷ್ಠ ಒಳಹರಿವಿಗೆ ಸ್ಕೈಲೈಟ್‌ಗಳು, ಎಲ್ಇಡಿ ಲೈಟಿಂಗ್, ಶಾಖ ತಗ್ಗಿಸುವ ಗೇನ್ ಗ್ಲೇಜಿಂಗ್ ಮುಂತಾದ ಹಲವಾರು ಸಮರ್ಥನೀಯ ವೈಶಿಷ್ಟ್ಯಗಳನ್ನು ಹೊಸ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡವು ಹೊಂದಿದೆ. ಇಲ್ಲಿ ನಿರ್ಮಿಸಲಾದ ಭೂಮಿಯಡಿಯ ನೀರಿನ ತೊಟ್ಟಿಯಲ್ಲಿ ಮಳೆನೀರಿನ ಸಂಗ್ರಹಣೆ, 100% ಸಂಸ್ಕರಿಸಿದ ತ್ಯಾಜ್ಯನೀರಿನೊಂದಿಗೆ ಆನ್-ಸೈಟ್ ಕೊಳಚೆ ನೀರು ಸಂಸ್ಕರಣಾ ಘಟಕ ಮತ್ತು 500 ಕಿಲೊ ವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಸ್ಥಾವರವು ದ್ವೀಪಗಳ ಪರಿಸರದ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದನ್ನು ತಗ್ಗಿಸುವುದನ್ನು ಖಾತ್ರಿಪಡಿಸುವುದು ಟರ್ಮಿನಲ್ ಕಟ್ಟಡದ ಕೆಲವು ವೈಶಿಷ್ಟ್ಯಗಳಾಗಿವೆ.

ಅಂಡಮಾನ್ ಮತ್ತು ನಿಕೋಬಾರ್‌ನ ಪ್ರಾಚೀನ ದ್ವೀಪಗಳಿಗೆ ದ್ವಾರದಂತೆ, ಪೋರ್ಟ್ ಬ್ಲೇರ್ ಪ್ರವಾಸಿಗರಿಗೆ ಜನಪ್ರಿಯ ತಾಣವಾಗಿದೆ. ವಿಶಾಲವಾದ ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡವು ವಾಯು ಸಂಚಾರವನ್ನು ವೃದ್ಧಿಸುತ್ತದೆ ಮತ್ತು ಈ ಪ್ರದೇಶದಲ್ಲಿ ಪ್ರವಾಸೋದ್ಯಮ ಹೆಚ್ಚಳಕ್ಕೆ ಸಹಕಾರಿಯಾಗಿದೆ. ಇದು ಸ್ಥಳೀಯರಿಗೆ ಉದ್ಯೋಗಾವಕಾಶಗಳ ಸೃಷ್ಟಿಗೆ ಪುಷ್ಟಿ ನೀಡುವುದರ ಜೊತೆಗೆ ಪ್ರದೇಶದ ಆರ್ಥಿಕತೆಯನ್ನು ವೃದ್ಧಿಸಲು ಸಹಾಯ ಮಾಡುತ್ತದೆ.

****


(Release ID: 1940185) Visitor Counter : 112