ಕಲ್ಲಿದ್ದಲು ಸಚಿವಾಲಯ
azadi ka amrit mahotsav

ಮಹಾನದಿ ಕೋಲ್ ಫೀಲ್ಡ್ಸ್ ಲಿಮಿಟೆಡ್ ನಿಂದ 17,000 ಉದ್ಯೋಗಿಗಳಿಗೆ ವರ್ಚುವಲ್ ರಿಯಾಲಿಟಿ ಆಧಾರಿತ ಸುರಕ್ಷತೆ ಮತ್ತು ಕಾರ್ಯಾಚರಣೆ ತರಬೇತಿ


ಕೌಶಲ್ಯ ಮೇಲ್ದರ್ಜೆಗೇರಿಸಲು 6.5 ಕೋಟಿ ರೂ.

2022-23ರಲ್ಲಿ 193 ಮಿಲಿಯನ್ ಟನ್ ಕಲ್ಲಿದ್ದಲು ಉತ್ಪಾದನೆಯನ್ನು ಸಾಧಿಸಿದ ಎಂ.ಸಿ.ಎಲ್.

प्रविष्टि तिथि: 07 JUL 2023 5:51PM by PIB Bengaluru

ಕಲ್ಲಿದ್ದಲು ಸಚಿವಾಲಯದ ಮಹಾನದಿ ಕೋಲ್ ಫೀಲ್ಡ್ಸ್ ಲಿಮಿಟೆಡ್ (ಎಂಸಿಎಲ್) 2026 ರ ವೇಳೆಗೆ ತನ್ನ 17,000 ಉದ್ಯೋಗಿಗಳಿಗೆ ಸುರಕ್ಷತೆ ಮತ್ತು ಕಾರ್ಯಾಚರಣೆ ತರಬೇತಿ ನೀಡಲು ವರ್ಚುವಲ್ ರಿಯಾಲಿಟಿ (ವಿಆರ್) ಆಧಾರಿತ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವನ್ನು ಜಾರಿಗೆ ತಂದಿದೆ. ಕೋಲ್ ಇಂಡಿಯಾ ಅಂಗಸಂಸ್ಥೆಯು ಕಲ್ಲಿದ್ದಲು ಗಣಿಗಾರರಲ್ಲಿ ಕೌಶಲ್ಯ ವರ್ಧನೆಗಾಗಿ 6.5 ಕೋಟಿ ರೂ.ಗಳ ಬಜೆಟ್ ಮೊತ್ತವನ್ನು ನಿಗದಿ ಮಾಡಿದೆ.  

ಸುರಕ್ಷಿತ ಮತ್ತು ಉತ್ಪಾದಕತ್ವದ  ಗಣಿಗಾರಿಕೆ ಕಾರ್ಯಾಚರಣೆಗಳಿಗೆ ನುರಿತ ಕೆಲಸಗಾರರ ಮಹತ್ವವನ್ನು  ಒತ್ತಿ ಹೇಳಿರುವ ಎಂಸಿಎಲ್ ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀ ಓಂ ಪ್ರಕಾಶ್ ಸಿಂಗ್, ಗಣಿಗಾರಿಕೆ ಕ್ಷೇತ್ರದಲ್ಲಿನ ಪ್ರಗತಿ ಮತ್ತು ಹೊಸ ತಂತ್ರಜ್ಞಾನದ ಪರಿಚಯ ಹಾಗು ಅಳವಡಿಕೆಗೆ  ಸರಿಹೊಂದುವಂತೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವ ಮೂಲಕ ನಿಯಮಿತ ತರಬೇತಿ ಮತ್ತು ಕೌಶಲ್ಯಗಳ ಉನ್ನತೀಕರಣದ ಅಗತ್ಯವಿದೆ ಎಂದು ಹೇಳಿದರು.

2026 ರ ವೇಳೆಗೆ 300 ಮಿಲಿಯನ್ ಟನ್ (ಎಂಟಿ) ಕಲ್ಲಿದ್ದಲು ಉತ್ಪಾದನೆಯನ್ನು ಸಾಧಿಸಲು ಮತ್ತು ಕೋಲ್ ಇಂಡಿಯಾ ಲಿಮಿಟೆಡ್ ಗೆ ಒಂದು ಬಿಲಿಯನ್ ಟನ್ ಉತ್ಪಾದನೆಯ ಗುರಿಯನ್ನು ಸಾಧಿಸಲು ಅನುವು ಮಾಡಿಕೊಡಲು ಕಾರ್ಯಾಚರಣೆ ಚಟುವಟಿಕೆಗಳಲ್ಲಿ ತೊಡಗಿರುವ ಕಾರ್ಮಿಕರ ತಾಂತ್ರಿಕ ಕೌಶಲ್ಯಗಳನ್ನು ಮೇಲ್ದರ್ಜೆಗೆ ಏರಿಸಲು ಎಂಸಿಎಲ್ ಯೋಜಿಸಿದೆ.  ಕಾರ್ಮಿಕರಿಗೆ ವಿಆರ್ ಆಧಾರಿತ ತರಬೇತಿಯು ವೆಚ್ಚ ಮತ್ತು ಸಮಯವನ್ನು ಉಳಿಸುತ್ತದೆ, ಹಾಗು ಪ್ರಶಿಕ್ಷಣಾರ್ಥಿಗಳು ಗಳಿಸಿದ ಕೌಶಲ್ಯಗಳ ಬಗ್ಗೆ ನಿಷ್ಪಕ್ಷಪಾತ ಮತ್ತು ಸ್ವಯಂ-ರೂಪಿತ ಹಿಮ್ಮಾಹಿತಿಯನ್ನು ಒದಗಿಸುತ್ತದೆ.

ವ್ಯಾಪಾರ ಪ್ರಕ್ರಿಯೆಗಳಲ್ಲಿ ಡಿಜಿಟಲೀಕರಣದ ಒಂದು ಹೆಜ್ಜೆಯಾಗಿ ಪ್ರಾರಂಭಿಸಲಾದ, ಸುಮಾರು 17,000 ಇಲಾಖಾ ಮತ್ತು ಗುತ್ತಿಗೆ ನೌಕರರಿಗೆ ನೀಡಲಾಗುವ ವಿಆರ್ ಆಧಾರಿತ ತರಬೇತಿಯು  ಈ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುವ 18 ತರಬೇತಿ ಮಾಡ್ಯೂಲ್ ಗಳಿಗೆ ಒಂದು ಪ್ರಮುಖ ಉಪಕ್ರಮವಾಗಿ ಒದಗಿ ಬರಲಿದೆ.

ವ್ಯಾಪಾರ ಪ್ರಕ್ರಿಯೆಗಳಲ್ಲಿ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸಲು ಕೋಲ್ ಇಂಡಿಯಾ ಲಿಮಿಟೆಡ್ ನ ಪ್ರಮುಖ ಸಂಸ್ಥೆಯಾದ  ಎಂಸಿಎಲ್, ಸಂಘಟಿತ ಪ್ರಯತ್ನಗಳು ಮತ್ತು ಸಂಶೋಧನೆ ಹಾಗು ಅಭಿವೃದ್ಧಿ ಸಂಸ್ಥೆಗಳು ಮತ್ತು ಉದ್ಯಮ ತಜ್ಞರೊಂದಿಗೆ ಜ್ಞಾನ ಹಂಚಿಕೆಯ ಮೂಲಕ ವ್ಯವಹಾರ ಕಾರ್ಯಾಚರಣೆಗಳನ್ನು ಆಧುನೀಕರಿಸುವ ಪ್ರಕ್ರಿಯೆಯಲ್ಲಿದೆ.

****

ಎಂಸಿಎಲ್ ನ ಇನ್ನೋವೇಶನ್ ಸೆಲ್, ಸೇಫ್ಟಿ & ರೆಸ್ಕ್ಯೂ, (ಅನ್ವೇಷಣಾ ಘಟಕ, ಸುರಕ್ಷೆ ಮತ್ತು ರಕ್ಷಣಾ ವಿಭಾಗ)  ಎಲೆಕ್ಟ್ರಿಕಲ್ & ಮೆಕ್ಯಾನಿಕಲ್, ಉತ್ಖನನ ಹಾಗು  ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಷನ್ ವಿಭಾಗಗಳು ಜಂಟಿಯಾಗಿ ಕಾರ್ಯರೂಪಕ್ಕೆ ತರುತ್ತಿರುವ  ಈ ಉಪಕ್ರಮವು 3 ಡಿ ಸಿಮ್ಯುಲೇಟೆಡ್ ವಿಆರ್-ಪ್ಲಾಟ್ ಫಾರ್ಮ್ ಗಳಲ್ಲಿ ಅಡೆ-ತಡೆರಹಿತ ತರಬೇತಿಯನ್ನು ಸಂಯೋಜಿಸಲು ಉದ್ದೇಶಿಸಿದೆ.  ಇದು ಕಲ್ಲಿದ್ದಲು ಗಣಿಗಳು ಅಥವಾ ಕಾರ್ಯಾಗಾರಗಳಲ್ಲಿ ಕೆಲಸಗಳನ್ನು ಕೈಗೆತ್ತಿಕೊಳುವ  ಮೊದಲು ಕಾರ್ಮಿಕರಿಗೆ ಸುರಕ್ಷಿತ ತರಬೇತಿ ವಾತಾವರಣವನ್ನು ಒದಗಿಸುತ್ತದೆ, ಆರಂಭಿಕ ತರಬೇತಿ ಮತ್ತು ಸೇರ್ಪಡೆಯಲ್ಲಿ ಅಪಾಯಕಾರಿ ಚಟುವಟಿಕೆಗಳಿಗೆ ನೇರವಾಗಿ ಒಡ್ಡಿಕೊಳ್ಳುವ ಸಾಧ್ಯತೆಯನ್ನು ತಗ್ಗಿಸುತ್ತದೆ.

ಹೈದರಾಬಾದ್ ಮೂಲದ ವರ್ಚುವಲ್ ರಿಯಾಲಿಟಿ ಟೆಕ್ನಾಲಜಿ ಕಂಪನಿಯಾದ ಮೆಸರ್ಸ್ ಕಾನ್ಕಾಕ್ಟ್ ಹ್ಯೂಮನ್ ರಿಸೋರ್ಸ್ ಪ್ರಾಕ್ಟೀಷನರ್ಸ್ (ಸಿ.ಎಚ್.ಆರ್.ಪಿ-ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ  ಸರಕಾರಿ ಇ-ಮಾರ್ಕೆಟ್ ಪ್ಲೇಸ್  (ಸರಕಾರಿ ಮಾರುಕಟ್ಟೆ ಸ್ಥಳ-ಜಿಇಎಂ) ನಲ್ಲಿ ಸ್ಪರ್ಧಾತ್ಮಕ ಬಿಡ್ಡಿಂಗ್ ಮೂಲಕ ಸಿಮ್ಯುಲೇಟೆಡ್ ಪರಿಸರದ ಅಭಿವೃದ್ಧಿ ಮತ್ತು ಬ್ಲಾಸ್ಟಿಂಗ್, ಗಣಿ ಪರಿವೀಕ್ಷಣೆ, ವಿದ್ಯುತ್ ಸುರಕ್ಷತೆ, ಸಂಚಾರ ಸಿಮ್ಯುಲೇಶನ್, ಎಂಜಿನ್ / ಪ್ರಸರಣ ನಿರ್ವಹಣೆ ಮುಂತಾದ ಕ್ಷೇತ್ರಗಳಲ್ಲಿ ತರಬೇತಿ ಕಾರ್ಯಕ್ರಮವನ್ನು ನಡೆಸಲು ಈ ಕೆಲಸವನ್ನು ವಹಿಸಲಾಗಿದೆ.

ಒಡಿಶಾದ ಸುಂದರ್ಗಢ, ಜಾರ್ಸುಗುಡ ಮತ್ತು ಅಂಗುಲ್ ಜಿಲ್ಲೆಗಳಲ್ಲಿ ಗಣಿಗಾರಿಕೆ ಕಾರ್ಯಾಚರಣೆಗಳನ್ನು ಹೊಂದಿರುವ ಕೋಲ್ ಇಂಡಿಯಾ ಲಿಮಿಟೆಡಿನ  ಅತಿ ಹೆಚ್ಚು ಕಲ್ಲಿದ್ದಲು ಉತ್ಪಾದಿಸುವ ಅಂಗಸಂಸ್ಥೆಯಾದ ಎಂಸಿಎಲ್, ಕಳೆದ ಹಣಕಾಸು ವರ್ಷದಲ್ಲಿ ಅಂದರೆ 2022-23ರಲ್ಲಿ 193 ಮಿಲಿಯನ್ ಟನ್ ಕಲ್ಲಿದ್ದಲನ್ನು ಉತ್ಪಾದಿಸಿತ್ತು ಮತ್ತು ವಿದ್ಯುತ್ ಸ್ಥಾವರಗಳಿಗೆ ದಾಖಲೆಯ 148 ಮಿಲಿಯನ್ ಟನ್ ಕಲ್ಲಿದ್ದಲನ್ನು ರವಾನಿಸಿತ್ತು.


(रिलीज़ आईडी: 1938182) आगंतुक पटल : 114
इस विज्ञप्ति को इन भाषाओं में पढ़ें: Odia , English , Urdu , हिन्दी , Telugu