ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
ಸಿಂಗಾಪುರದ ನಾನ್ಯಾಂಗ್ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಶ್ರೀ ಧರ್ಮೇಂದ್ರ ಪ್ರಧಾನ್ ಭೇಟಿ; ಭಾರತೀಯ ವಿಶ್ವವಿದ್ಯಾಲಯಗಳೊಂದಿಗಿನ ಸಹಯೋಗದ ಸಾಧ್ಯತೆಗೆ ಪುಷ್ಟಿ
ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಸಿಂಗಾಪುರದ ವಿದೇಶಾಂಗ ವ್ಯವಹಾರಗಳ ಸಚಿವರನ್ನು ಭೇಟಿ ಮಾಡಿ, ಕೌಶಲ್ಯ ಅಭಿವೃದ್ಧಿ ಮತ್ತು ಶಿಕ್ಷಣದಲ್ಲಿ ಬಹುಮುಖಿ ದ್ವಿಪಕ್ಷೀಯ ಸಹಕಾರವನ್ನು ಇನ್ನಷ್ಟು ಹೆಚ್ಚಿಸುವುದಕ್ಕೆ ಸಂಬಂಧಿಸಿ ಮಾತುಕತೆ ನಡೆಸಿದರು.
ಶ್ರೀ ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಸಿಂಗಾಪುರ ಭೇಟಿಯ 2 ನೇ ದಿನದಂದು ಹಿರಿಯ ಸಚಿವರು ಮತ್ತು ಸಾಮಾಜಿಕ ನೀತಿಗಳ ಸಮನ್ವಯ ಸಚಿವರನ್ನು ಭೇಟಿಯಾದರು
Posted On:
30 MAY 2023 8:51PM by PIB Bengaluru
ಕೇಂದ್ರ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಇಂದು ಸಿಂಗಾಪುರದ ನಾನ್ಯಾಂಗ್ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದರು. ಸಚಿವರು ಭಾರತೀಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು ಮತ್ತು ಉನ್ನತ ಶಿಕ್ಷಣ, ಸಂಶೋಧನೆ, ನಾವೀನ್ಯತೆ, ಉದ್ಯಮಶೀಲತೆ ಮತ್ತು ತರಗತಿಯ ನಾಲ್ಕು ಗೋಡೆಗಳ ಆಚೆಗೆ ಕಲಿಕೆಯನ್ನು ಕೊಂಡೊಯ್ಯುವ ಮಾರ್ಗಸೂಚಿಯ ಬಗ್ಗೆ ಉತ್ತಮ ಒಳನೋಟಗಳನ್ನು ಪಡೆದರು.
ಸಭಿಕರನ್ನುದ್ದೇಶಿಸಿ ಮಾತನಾಡಿದ ಶ್ರೀ ಪ್ರಧಾನ್ ಅವರು ಎನ್ಇಪಿ ಮತ್ತು ಜ್ಞಾನ ಸಹಯೋಗ ಹಾಗು ದ್ವಿಮುಖ ಚಲನಶೀಲತೆಗೆ ಅದು ತರುವ ಅಪಾರ ಅವಕಾಶಗಳ ಬಗ್ಗೆ ಗಮನ ಸೆಳೆದರು. ಭಾರತೀಯ ವಿಶ್ವವಿದ್ಯಾಲಯಗಳು ಮತ್ತು ನಾನ್ಯಾಂಗ್ ತಾಂತ್ರಿಕ ವಿಶ್ವವಿದ್ಯಾಲಯವು ವಿಶೇಷವಾಗಿ ಕೃತಕ ಬುದ್ಧಿಮತ್ತೆ, ಫಿನ್ ಟೆಕ್, ಸುಸ್ಥಿರತೆ, ಹವಾಮಾನ ಕ್ರಿಯಾ ಕ್ಷೇತ್ರಗಳಲ್ಲಿ ಜಾಗತಿಕ ಅವಕಾಶಗಳನ್ನು ಬಳಸಿಕೊಳ್ಳಲು ಮತ್ತು ನಮ್ಮ ಎರಡೂ ದೇಶಗಳ ಕಲ್ಯಾಣಕ್ಕಾಗಿ ಪಾಲುದಾರರಾಗಬಹುದು ಎಂದು ಅವರು ಹೇಳಿದರು.
21 ನೇ ಶತಮಾನವು ಭಾರತದ ಶತಮಾನವಾಗಲಿದೆ ಎಂದು ಶ್ರೀ ಪ್ರಧಾನ್ ಒತ್ತಿ ಹೇಳಿದರು. ವಿಶ್ವದರ್ಜೆಯ ಜಾಗತಿಕ ವಿಶ್ವವಿದ್ಯಾಲಯಗಳಾದ ಎನ್.ಟಿ.ಯು ಮತ್ತು ಭಾರತೀಯ ವಿಶ್ವವಿದ್ಯಾಲಯಗಳು 21 ನೇ ಶತಮಾನವನ್ನು ಪ್ರೇರೇಪಿಸಲು ಹೊಸ ಮಾದರಿಗಳನ್ನು ರಚಿಸುವುದಕ್ಕಾಗಿ ಸಹಯೋಗಕ್ಕೆ ತೊಡಗಬೇಕು ಮತ್ತು ತಮ್ಮ ಕಾರ್ಯಕ್ರಮಗಳನ್ನು ನಿಕಟಗೊಳಿಸಬೇಕು ಎಂದು ಅವರು ಹೇಳಿದರು.
ಶ್ರೀ ಪ್ರಧಾನ್ ಅವರು ಸಿಂಗಾಪುರದ ವಿದೇಶಾಂಗ ವ್ಯವಹಾರಗಳ ಸಚಿವ ಘನತೆವೆತ್ತ ಶ್ರೀ ವಿವಿಯನ್ ಬಾಲಕೃಷ್ಣನ್ ಅವರನ್ನು ಭೇಟಿಯಾದರು. ಭಾರತ-ಸಿಂಗಾಪುರ ಜ್ಞಾನ ಪಾಲುದಾರಿಕೆಯನ್ನು ಬಲಪಡಿಸುವ ಬಗ್ಗೆ ಮತ್ತು ಕೌಶಲ್ಯ ಅಭಿವೃದ್ಧಿ ಮತ್ತು ಶಿಕ್ಷಣದಲ್ಲಿ ಬಹುಮುಖಿ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿನ ಮಟ್ಟಕ್ಕೆ ಕೊಂಡೊಯ್ಯುವ ಬಗ್ಗೆ ಸಚಿವರು ಫಲಪ್ರದ ಮಾತುಕತೆ ನಡೆಸಿದರು.
ಭಾರತ ಮತ್ತು ಸಿಂಗಾಪುರ ಬಲವಾದ ಐತಿಹಾಸಿಕ, ಸಾಂಸ್ಕೃತಿಕ ಮತ್ತು ನಾಗರಿಕ ಸಂಬಂಧಗಳನ್ನು ಹಂಚಿಕೊಂಡಿವೆ ಎಂದು ಸಭೆಯಲ್ಲಿ ಶ್ರೀ ಪ್ರಧಾನ್ ಹೇಳಿದರು. ಇಂದು ನಮ್ಮ ಸ್ನೇಹವು ಪರಸ್ಪರ ನಂಬಿಕೆ ಮತ್ತು ಗೌರವದಲ್ಲಿ ಬೇರೂರಿದೆ. ಜ್ಞಾನ, ಕೌಶಲ್ಯ ಮತ್ತು ಗಡಿನಾಡಿನ ಕ್ಷೇತ್ರಗಳಲ್ಲಿ ಪಾಲುದಾರಿಕೆಯನ್ನು ಹೆಚ್ಚಿಸುವುದು ನಮ್ಮ ದೀರ್ಘಕಾಲೀನ ಸ್ನೇಹಕ್ಕೆ ಹೊಸ ಆಯಾಮಗಳನ್ನು ನೀಡುತ್ತದೆ ಎಂದು ಅವರು ಹೇಳಿದರು.
ಉಭಯ ದೇಶಗಳ ನಡುವಿನ ವ್ಯೂಹಾತ್ಮಕ ಪಾಲುದಾರಿಕೆ ಮತ್ತು ಸ್ಥಿರ ಸ್ನೇಹವನ್ನು ಗಮನದಲ್ಲಿಟ್ಟುಕೊಂಡು, ಪರಸ್ಪರ ಲಾಭಕ್ಕಾಗಿ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಯಲ್ಲಿ ದ್ವಿಪಕ್ಷೀಯ ಸಹಯೋಗವನ್ನು ಬಲಪಡಿಸಲು ಮತ್ತು ಕೆಲಸದ ಪ್ರಪಂಚದ ಜಾಗತಿಕ ಬೇಡಿಕೆಗಳು ಮತ್ತು ಸವಾಲುಗಳನ್ನು ಪರಿಹರಿಸಲು ಇಬ್ಬರೂ ಸಚಿವರು ಒಪ್ಪಿಕೊಂಡರು.
ಶ್ರೀ ಪ್ರಧಾನ್ ಅವರು ಹಿರಿಯ ಸಚಿವ ಮತ್ತು ಸಾಮಾಜಿಕ ನೀತಿಗಳ ಸಮನ್ವಯ ಸಚಿವರಾದ ಗೌರವಾನ್ವಿತ ಶ್ರೀ ಥರ್ಮನ್ ಷಣ್ಮುಗರತ್ನಂ ಅವರನ್ನು ಭೇಟಿಯಾದರು. ಶ್ರೀ ಥರ್ಮನ್ ಷಣ್ಮುಗರತ್ನಂ ಅವರು ಮೇ 2019 ರಿಂದ ಸಿಂಗಾಪುರದಲ್ಲಿ ಹಿರಿಯ ಸಚಿವರಾಗಿದ್ದಾರೆ, ಹಲವಾರು ವರ್ಷಗಳ ಕಾಲ ಉಪ ಪ್ರಧಾನ ಮಂತ್ರಿಯಾಗಿ ಮತ್ತು ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಸಿಂಗಾಪುರದ ಜನರಲ್ಲಿ ಜೀವನಪರ್ಯಂತ ಕಲಿಕೆ ಮತ್ತು ಉದ್ಯೋಗ ಹೆಚ್ಚಳಕ್ಕೆ ವ್ಯಾಪಕ ಅವಕಾಶಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ 2014 ರಲ್ಲಿ ಪ್ರಾರಂಭಿಸಲಾದ 'ಸ್ಕಿಲ್ ಫ್ಯೂಚರ್' ಕಾರ್ಯಕ್ರಮದ ನೇತೃತ್ವವನ್ನು ಶ್ರೀ ಥರ್ಮನ್ ವಹಿಸಿ ಮುನ್ನಡೆಸಿದ್ದಾರೆ.
ನಂತರ, ಶ್ರೀ ಪ್ರಧಾನ್ ಅವರು ಸಿಂಗಾಪುರದ ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಬರುವ ಮಾಧ್ಯಮಿಕ ನಂತರದ ಸಂಸ್ಥೆಯಾದ ತಾಂತ್ರಿಕ ಶಿಕ್ಷಣ ಸಂಸ್ಥೆ ಸಿಂಗಾಪುರಕ್ಕೂ ಭೇಟಿ ನೀಡಿದರು.
ಅಲ್ಲಿ ಮಾತನಾಡಿದ ಪ್ರಧಾನ್ ಅವರು, ಮಾಡುವ ಮತ್ತು ಅನುಭವಿಸುವ ಮೂಲಕ ಸಮಗ್ರ ಕಲಿಕೆಯನ್ನು ಕೇಂದ್ರೀಕರಿಸಿ, ಐಟಿಇ ಸಂಸ್ಥೆಯು ವಿದ್ಯಾರ್ಥಿಗಳು ಮತ್ತು ವಯಸ್ಕರಿಗೆ ಉದ್ಯೋಗಾರ್ಹತೆ ಮತ್ತು ಜೀವನಪರ್ಯಂತ ಕಲಿಕೆಗಾಗಿ ಕೌಶಲ್ಯಗಳು, ಜ್ಞಾನ ಮತ್ತು ಮೌಲ್ಯಗಳನ್ನು ಪಡೆಯಲು ಅವಕಾಶಗಳನ್ನು ಸೃಷ್ಟಿಸುತ್ತಿದೆ ಎಂದು ಹೇಳಿದರು. ಕಡ್ಡಾಯ ಉದ್ಯಮ ಇಂಟರ್ನ್ಶಿಪ್, ಕೆಲಸ ಮತ್ತು ಅಧ್ಯಯನದ ನಡುವಿನ ಚಲನಶೀಲತೆ ಮತ್ತು ಬಲವಾದ ಉದ್ಯಮ-ಶೈಕ್ಷಣಿಕ ಬಾಂಧವ್ಯ ಐಟಿಇಯ ಪ್ರಮುಖ ಅಂಶಗಳಾಗಿವೆ.
****
(Release ID: 1928489)
Visitor Counter : 137