ರಾಷ್ಟ್ರಪತಿಗಳ ಕಾರ್ಯಾಲಯ

ಯುಕೋ ಬ್ಯಾಂಕ್‌ ನ 80 ವರ್ಷಗಳ ಆಚರಣೆಯಲ್ಲಿ ರಾಷ್ಟ್ರಪತಿ ಭಾಗಿ 

Posted On: 28 MAR 2023 1:54PM by PIB Bengaluru

ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು ಮಾರ್ಚ್ 28, 2023ರಂದು ಕೋಲ್ಕತ್ತಾದಲ್ಲಿ ಯುಕೋ ಬ್ಯಾಂಕ್‌ನ 80 ವರ್ಷಗಳ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ರಾಷ್ಟ್ರಪತಿಗಳು ಯುಕೋ ಬ್ಯಾಂಕ್‌ನ 50 ಹೊಸ ಶಾಖೆಗಳನ್ನು ವರ್ಚುವಲ್ ಮೂಲಕ ಉದ್ಘಾಟಿಸಿದರು. ಯುಕೊ ಬ್ಯಾಂಕ್‌ನ ಸಿಎಸ್‌ಆರ್ ಉಪಕ್ರಮದ ಅಡಿಯಲ್ಲಿ ಒಡಿಶಾದ ರೈರಂಗಪುರದಲ್ಲಿ ಶ್ರೀ ಅರಬಿಂದೋ ಸಮಗ್ರ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರದ ನವೀಕರಣಕ್ಕೆ ಇದೇ ಸಂದರ್ಭದಲ್ಲಿ ರಾಷ್ಟ್ರಪತಿಗಳು ಅಡಿಪಾಯ ಹಾಕಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಗಳು, ಯುಕೋ ಬ್ಯಾಂಕ್ 1943 ರಲ್ಲಿ ಪ್ರಾರಂಭವಾದಾಗಿನಿಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಕೃಷಿ, ಕೈಗಾರಿಕೆ, ವ್ಯಾಪಾರ, ಮೂಲಸೌಕರ್ಯ ಮತ್ತು ಸಮಾಜ ಕಲ್ಯಾಣ ಮೊದಲಾದ ಕ್ಷೇತ್ರಗಳಲ್ಲಿ ಸಾಲ ಮತ್ತು ಆರ್ಥಿಕ ಸೇವೆಗಳನ್ನು ಒದಗಿಸುವ ಮೂಲಕ ನಮ್ಮ ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು.  ಇದು ಸರ್ಕಾರದ ವಿವಿಧ ಯೋಜನೆಗಳು ಮತ್ತು ಉಪಕ್ರಮಗಳನ್ನು ಬೆಂಬಲಿಸುವ ಮೂಲಕ ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡಿದೆ. ಮುಂಬರುವ ವರ್ಷಗಳಲ್ಲಿ ಯುಕೋ ಬ್ಯಾಂಕ್ ತನ್ನ ಪರಂಪರೆ ಮತ್ತು ಖ್ಯಾತಿಯನ್ನು ಮತ್ತಷ್ಟು ಎತ್ತಿಹಿಡಿಯಲಿದೆ. ಬದಲಾವಣೆ ಮತ್ತು ನಾವೀನ್ಯವನ್ನು ಅಳವಡಿಸಿಕೊಳ್ಳುವಾಗ ಅದರ ಪ್ರಮುಖ ಮೌಲ್ಯಗಳು ಮತ್ತು ತತ್ವಗಳಿಗೆ ಬದ್ಧವಾಗಿರುತ್ತದೆ ಎಂದು ರಾಷ್ಟ್ರಪತಿ ವಿಶ್ವಾಸ ವ್ಯಕ್ತಪಡಿಸಿದರು. 

ಬ್ಯಾಂಕ್‌ಗಳಿಗೆ ಎರಡು ಪ್ರಮುಖ ಜವಾಬ್ದಾರಿಗಳಿವೆ ಎಂದು ರಾಷ್ಟ್ರಪತಿಯವರು ವಿವರಿಸಿದರು. ಮೊದಲನೆಯದಾಗಿ, ಅವರು ಸಾರ್ವಜನಿಕ ಹಣದ ರಕ್ಷಕರಾಗಿರಬೇಕು. ಎರಡನೆಯದಾಗಿ, ಅವರು ನಾಳೆಗಾಗಿ ಸ್ವತ್ತುಗಳನ್ನು ರಚಿಸಲು ಇಂದಿನ ಉಳಿತಾಯವನ್ನು ಬಳಸುತ್ತಾರೆ. ಈ ಎರಡು ಜವಾಬ್ದಾರಿಗಳನ್ನು ಸಮತೋಲನಗೊಳಿಸುವುದು ಪ್ರತಿ ಬ್ಯಾಂಕ್‌ಗೆ ಸವಾಲಾಗಿದೆ. ಸರಿಯಾದ ಸಮತೋಲನ ಕಾಪಾಡಿಕೊಳ್ಳುವಲ್ಲಿ ವಿಫಲವಾಗಿ ಕೆಲವೊಮ್ಮೆ ಪ್ರಪಂಚದ ವಿವಿಧ ಭಾಗಗಳಲ್ಲಿ ಆರ್ಥಿಕ ಅಸಮತೋಲನ, ಸಮಸ್ಯೆಗಳಿಗೆ ಕಾರಣವಾಗಿದೆ. ಬ್ಯಾಂಕ್‌ಗಳಲ್ಲಿ ತಮ್ಮ ಹಣವನ್ನು ಉಳಿಸುವ ಲಕ್ಷಾಂತರ ಜನರು ತಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಲು ಬ್ಯಾಂಕುಗಳು ಕರ್ತವ್ಯ ಬದ್ಧವಾಗಿರಬೇಕು. ಯುಕೋ ಬ್ಯಾಂಕ್‌ನ ವೃತ್ತಿಪರ ಸಿಬ್ಬಂದಿ ಮತ್ತು ಎಚ್ಚರಿಕೆಯ ನಾಯಕತ್ವವು ಈ ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದರು. 

ಜನರು ತಮ್ಮ ಹಣವನ್ನು ಪಡೆಯುವ ಮತ್ತು ನಿರ್ವಹಿಸುವ ವಿಧಾನವನ್ನು ಫಿನ್-ಟೆಕ್ ಪರಿವರ್ತಿಸುತ್ತಿದೆ ಎಂದು ರಾಷ್ಟ್ರಪತಿಯವರು ಹೇಳಿದರು. ಭಾರತದಲ್ಲಿ, ವ್ಯಾಪಕವಾದ ಫಿನ್-ಟೆಕ್ ಅಳವಡಿಕೆಯು, ಬಡವರು ಮತ್ತು ದೂರದ ಕುಗ್ರಾಮಗಳಲ್ಲಿ ನೆಲೆಸಿರುವ ಜನರು ತಮ್ಮನ್ನು ಸಶಕ್ತಗೊಳಿಸುವ ಮತ್ತು ಸಾಮಾಜಿಕ ನ್ಯಾಯವನ್ನು ಒದಗಿಸುವ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಮುಕ್ತರಾಗಿದ್ದಾರೆ ಎಂಬುದಕ್ಕೆ ಪುರಾವೆಯಾಗಿದೆ. ಇಂದು, ಯುಪಿಐ-UPI ಜಾಗತಿಕವಾಗಿ ಅತ್ಯಂತ ಯಶಸ್ವಿ ಫಿನ್-ಟೆಕ್ ಆವಿಷ್ಕಾರಗಳಲ್ಲಿ ಒಂದಾಗಿದೆ ಎಂದು ವ್ಯಾಪಕವಾಗಿ ಪರಿಗಣಿಸಲಾಗಿದೆ ಎಂದು ಹೇಳಿದರು.

ರಾಷ್ಟ್ರಪತಿಗಳ ಸಂಪೂರ್ಣ ಭಾಷಣವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

****



(Release ID: 1911629) Visitor Counter : 95