ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav

ವಾರಣಾಸಿಯಲ್ಲಿ ʻಒಂದು ವಿಶ್ವ ಕ್ಷಯರೋಗ ಶೃಂಗಸಭೆ 2023ʼ ಉದ್ಘಾಟಿಸಿದ ಗೌರವಾನ್ವಿತ ಪ್ರಧಾನಿ


 ಕ್ಷಯರೋಗದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ರೋಗದ ಹರಡುವಿಕೆಯನ್ನು ತಡೆಗಟ್ಟಲು ʻಟಿಬಿ-ಮುಕ್ತ ಪಂಚಾಯತ್ʼ ಉಪಕ್ರಮ ಮತ್ತು ʻಟಿಬಿ ತಡೆಗಟ್ಟುವ ಚಿಕಿತ್ಸೆಗಾಗಿ ಹೊಸ ಸಂಕ್ಷಿಪ್ತ ನಿಯಮಾವಳಿʼಗೆ ಚಾಲನೆ

ಟಿಬಿ ನಿರ್ಮೂಲನೆಗಾಗಿ ದಣಿವರಿಯದೆ ಕೆಲಸ ಮಾಡಿದ ಆರೋಗ್ಯ ಕಾರ್ಯಕರ್ತರು, ʻನಿ-ಕ್ಷಯ್ ಮಿತ್ರರುʼ ಮತ್ತು ʻಟಿಬಿ ವಿಜೇತರʼ ಕೊಡುಗೆಯನ್ನು ಶ್ಲಾಘಿಸಿದರು 
  
"ಒಂದು ವಿಶ್ವ ಕ್ಷಯರೋಗ ಶೃಂಗಸಭೆ'ಯು  'ವಸುದೈವ ಕುಟುಂಬಕಂ' ಎಂಬ ಭಾರತೀಯ ತತ್ವವನ್ನು ಒಳಗೊಂಡಿದೆ. ಈ ತತ್ವವನ್ನು ಅಳವಡಿಸಿಕೊಳ್ಳುವುದು ಮತ್ತು ಪ್ರತಿಯೊಬ್ಬರೂ ಸಮಾನತೆ ಮತ್ತು ಘನತೆಯಿಂದ ಬದುಕುವ ಹಾಗೂ ಅನಾರೋಗ್ಯ ಮತ್ತು ಟಿಬಿಯಂತಹ ಸಾಂಕ್ರಾಮಿಕ ರೋಗಗಳಿಂದ ಮುಕ್ತವಾದ ಜಗತ್ತನ್ನು ರಚಿಸಲು ಪ್ರಯತ್ನಿಸುವುದು ಅತ್ಯಗತ್ಯವಾಗಿದೆ 

"ನಿ-ಕ್ಷಯ ಮಿತ್ರರುʼ 1,000 ಕೋಟಿ ರೂ.ಗಿಂತ ಹೆಚ್ಚು ಕೊಡುಗೆ ನೀಡಿದ್ದಾರೆ, ಇದು ಟಿಬಿ ಕುರಿತಾಗಿ ವಿಶ್ವದ ಅತಿದೊಡ್ಡ ಸಮುದಾಯ ಉಪಕ್ರಮವಾಗಿದೆ" 
 

"ರಾಷ್ಟ್ರೀಯ ಕ್ಷಯರೋಗ ಸಂಶೋಧನಾ ಸಂಸ್ಥೆಯಂತಹ (ಎನ್ಐಆರ್‌ಟಿ) ʻಐಸಿಎಂಆರ್ʼ ಸಂಸ್ಥೆಗಳು ವಿಶ್ವದ ಅತಿದೊಡ್ಡ ರಾಷ್ಟ್ರೀಯ ಕ್ಷಯರೋಗ ಹರಡುವಿಕೆ ಸಮೀಕ್ಷೆಯನ್ನು ಪೂರ್ಣಗೊಳಿಸಿವೆ, ಇದು ರಾಜ್ಯ ಮಟ್ಟದಲ್ಲಿ ಟಿಬಿ ಹೊರೆಯನ್ನು ಅರ್ಥಮಾಡಿಕೊಳ್ಳಲು ಹಾಗೂ ಉದ್ದೇಶಿತ ಯೋಜನಾ ಮಧ್ಯಸ್ಥಿಕೆಗಳನ್ನು ವಹಿಸಲು ನಮಗೆ ಸಹಾಯ ಮಾಡಿದೆ

"ರಾಜ್ಯ ಮಟ್ಟದ ಪ್ರಮಾಣೀಕರಣ (ಎಸ್ಎನ್‌ಸಿ) ಅಭ್ಯಾಸವನ್ನು ಜಾರಿಗೆ ತಂದ ವಿಶ್ವದ ಏಕೈಕ ದೇಶ ಭಾರತವಾಗಿದೆ, ಇದು ಹೊಸ ವೈಜ್ಞಾನಿಕ ವಿಧಾನವಾಗಿದ್ದು, ಇದರ ಮೂಲಕ ಜಿಲ್ಲೆಗಳಲ್ಲಿ ಟಿಬಿ ನಿರ್ಮೂಲನೆಯ ಪ್ರಗತಿಯನ್ನು ಪರಿಶೀಲಿಸಲಾಗುತ್ತದೆ"

ಡಾ. ಮನ್ಸುಖ್ ಮಾಂಡವೀಯ ಅವರು 2025ರ ವೇಳೆಗೆ ಕ್ಷಯರೋಗವನ್ನು ನಿರ್ಮೂಲನೆ ಮಾಡಲು ಜನ ಆಂದೋಲನ ಮತ್ತು ಜನ ಭಾಗೀದರಿಯ ಮಹತ್ವವನ್ನು ಪುನರುಚ್ಚರಿಸಿದರು

"ನಾವೆಲ್ಲರೂ ದೊಡ್ಡ ಉದ್ದೇಶಕ್ಕಾಗಿ ನಮ್ಮದೇ ಆದ ವಿಶಿಷ್ಟ ಸಾಮರ್ಥ್ಯಗಳಲ್ಲಿ ಕೊಡುಗೆ ನೀಡಿದಾಗ, ನಮ್ಮ ಪ್ರಯತ್ನಗಳು ಫಲಪ್ರದವಾಗುತ್ತವೆ. ಅಂತಹ ಉದ್ಯಮಶೀಲತೆಯ ಮನೋಭಾವದ ಬಗ್ಗೆ ನನಗೆ ವಿಶ್ವಾಸವಿದೆ; ನಾವು 2025ರ ವೇಳೆಗೆ ಟಿಬಿಯನ್ನು ನಿರ್ಮೂಲನೆ ಮಾಡುತ್ತೇವೆ"

ಕ್ಷಯರೋಗ ನಿರ್ಮೂಲನೆಯಲ್ಲಿ ಭಾರತ ಇಡೀ ವಿಶ್ವಕ್ಕೆ ಸ್ಫೂರ್ತಿ ನೀಡುತ್ತಿದೆ. ಪ್ರತಿಯೊಂದು ದೇಶವು ʻನಿ-ಕ್ಷಯ್‌ʼ ಮಿತ್ರ ಉಪಕ್ರಮವನ್ನು ಹೊಂದಿರಬೇಕು. ಇದನ್ನು ರಾಜ್ಯಗಳ ಮಟ್ಟದಲ್ಲೂ, ಪ್ರಾಯೋಗಿಕ ಮಾದರಿಯಲ್ಲಿ ಅಲ್ಲದೆ, ದೊಡ್ಡ ಮಟ್ಟದಲ್ಲಿ ಕೈಗೊಳ್ಳುತ್ತಿರುವ ರೀತಿಗೆ ನಾನು ವಂದಿಸುತ್ತೇನೆ: ಡಾ. ಲೂಸಿಕಾ ಡಿಟಿಯು

Posted On: 24 MAR 2023 2:56PM by PIB Bengaluru

"ಭಾರತದ ಪ್ರಯತ್ನಗಳು ಕ್ಷಯರೋಗದ ವಿರುದ್ಧದ ಜಾಗತಿಕ ಸಮರಕ್ಕೆ ಹೊಸ ಮಾದರಿಯಾಗಿದೆ," ಎಂದು ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು. ʻಜನ ಭಾಗಿದಾರಿʼ ಸ್ಫೂರ್ತಿಯೊಂದಿಗೆ ಕ್ಷಯರೋಗ ನಿರ್ಮೂಲನೆಗಾಗಿ ಸಮರೋಪಾದಿಯಲ್ಲಿ ಒಟ್ಟಾಗಿ ಕೆಲಸ ಮಾಡುವಂತೆ ನಾಗರಿಕರನ್ನು ಒತ್ತಾಯಿಸಿದರು. ವಾರಾಣಸಿಯಲ್ಲಿ ʻಒಂದು ವಿಶ್ವ ಕ್ಷಯರೋಗ ಶೃಂಗಸಭೆ-2023ʼ ಉದ್ಘಾಟಿಸಿ ಅವರು ಮಾತನಾಡಿದರು. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಮನ್ಸುಖ್ ಮಾಂಡವೀಯ, ಉತ್ತರ ಪ್ರದೇಶದ ರಾಜ್ಯಪಾಲರಾದ ಶ್ರೀಮತಿ ಆನಂದಿಬೆನ್ ಪಟೇಲ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಹಾಯಕ ಸಚಿವೆ ಡಾ.ಭಾರತಿ ಪ್ರವೀಣ್ ಪವಾರ್, ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ.ವಿ.ಕೆ.ಪಾಲ್, ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿಗಳಾದ ಶ್ರೀ ಬ್ರಜೇಶ್ ಪಾಠಕ್, ನೈಜೀರಿಯಾ ಆರೋಗ್ಯ ಸಚಿವ ಶ್ರೀ ಇಮಾನ್ಯುಯೆಲ್ ಒಸಾಗಿ ಎಹ್‌ನೈರ್‌ ನಿರೆ.  ಬ್ರೆಜಿಲ್‌ನ ಉಪ ಆರೋಗ್ಯ ಸಚಿವ ಶ್ರೀ ಎಥೆಲ್ ಲಿಯೊನಾರ್ ನೊಯಾ ಮ್ಯಾಸಿಯಲ್, ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ನಿರ್ದೇಶಕ ಡಾ.ಪೂನಮ್ ಖೇತ್ರಪಾಲ್ ಸಿಂಗ್ ಮತ್ತು ʻಸ್ಟಾಪ್ ಟಿಬಿʼ ಕಾರ್ಯನಿರ್ವಾಹಕ ನಿರ್ದೇಶಕಿ ಡಾ.ಲೂಸಿಕಾ ಡಿಟಿಯು ಅವರು ಶೃಂಗಸಭೆಯಲ್ಲಿ ಉಪಸ್ಥಿತರಿದ್ದರು. 

 ವಿವಿಧ ರಾಜ್ಯಗಳ ರಾಜ್ಯಪಾಲರು, ರಾಜ್ಯ ಆರೋಗ್ಯ ಕಾರ್ಯದರ್ಶಿಗಳು ಮತ್ತು ರಾಜ್ಯಗಳ ರಾಷ್ಟ್ರೀಯ ಹೆಲ್ತ್‌ ಮಿಷನ್‌ (ಎನ್‌ಎಚ್‌ಎಂ) ವ್ಯವಸ್ಥಾಪಕ ನಿರ್ದೇಶಕರು ಆನ್‌ಲೈನ್‌ ಮೂಲಕ ಭಾಗಿಯಾದರು. ಕಾರ್ಪೊರೇಟ್‌ಗಳು, ಕೈಗಾರಿಕೆಗಳು, ನಾಗರಿಕ ಸಮಾಜಿಕ ಸಂಸ್ಥೆಗಳು, ಎನ್‌ಜಿಒಗಳು ಮತ್ತು ʻಟಿಬಿ ಚಾಂಪಿಯನ್‌ʼಗಳ ಪ್ರತಿನಿಧಿಗಳು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ, 2030ರ ಜಾಗತಿಕ ಗುರಿಗಿಂತ ಐದು ವರ್ಷ ಮುಂಚಿತವಾಗಿ, 2025ರ ವೇಳೆಗೆ ಹೆಚ್ಚಿನ ಹೊರೆಯ ಸಾಂಕ್ರಾಮಿಕ ರೋಗವನ್ನು ತೊಡೆದುಹಾಕುವ ಭಾರತದ ಬದ್ಧತೆಯನ್ನು ಪುನರುಚ್ಚರಿಸಲಾಯಿತು. 2018ರ ಮಾರ್ಚ್ ನಲ್ಲಿ ನಡೆದ ʻದೆಹಲಿ ಎಂಡ್ ಟಿಬಿ ಶೃಂಗಸಭೆʼಯಲ್ಲಿ ಗೌರವಾನ್ವಿತ ಪ್ರಧಾನಿಯವರು ಈ ದೃಷ್ಟಿಕೋನವನ್ನು ಮೊದಲ ಬಾರಿಗೆ ವ್ಯಕ್ತಪಡಿಸಿದ್ದರು. 

ಪ್ರಧಾನಮಂತ್ರಿಯವರು 2025ರ ವೇಳೆಗೆ ಭಾರತವನ್ನು ಕ್ಷಯ ಮುಕ್ತವಾಗಿಸುವ ನಿಟ್ಟಿನಲ್ಲಿ ದೇಶದ ಪ್ರಯತ್ನಗಳ ಸಂಕಲನವಾದ "ವಾರ್ಷಿಕ ಭಾರತ ಟಿಬಿ ವರದಿ 2023" ಅನ್ನು ಅನಾವರಣಗೊಳಿಸಿದರು. ಶ್ವಾಸಕೋಶದ ಕ್ಷಯರೋಗ ಕುರಿತ ಹೆಚ್ಚುವರಿ ತರಬೇತಿ ಮಾಡ್ಯೂಲ್‌ಗೆ ಅವರು ಚಾಲನೆ ನೀಡಿದರು. ಭಾರತದಲ್ಲಿ ಸಾರ್ವಜನಿಕ ಮತ್ತು ಖಾಸಗಿ ವಲಯದ ದ್ವಿತೀಯ ಮತ್ತು ತೃತೀಯ ಹಂತದ ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನೀಡಲು ಈ ಮಾಡ್ಯೂಲ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಕ್ಷಯರೋಗದ ಬಗ್ಗೆ ಜಾಗೃತಿ ಮೂಡಿಸಲು, ರೋಗಕ್ಕೆ ಅಂಟಿಕೊಂಡಿರುವ ಕಳಂಕವನ್ನು ತೊಡೆದುಹಾಕಲು ಮತ್ತು ಸೇವೆಗಳ ಮೇಲ್ವಿಚಾರಣೆ ಹಾಗೂ ಸುಧಾರಣೆಗೆ ನೆರವಾಗಲು 2.5 ಲಕ್ಷಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳ ಬೆಂಬಲವನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ʻಟಿಬಿ ಮುಕ್ತ ಪಂಚಾಯತ್ʼ ಉಪಕ್ರಮಕ್ಕೆ ಪ್ರಧಾನಿ ಚಾಲನೆ ನೀಡಿದರು. ಸಕ್ರಿಯ ಕ್ಷಯರೋಗದ ಬೆಳವಣಿಗೆಯನ್ನು ತಡೆಗಟ್ಟಲು ʻಹೊಸ ಚಿಕಿತ್ಸಾ ರೋಗತಡೆ ಥೆರಪಿʼಯನ್ನು ಸಹ ಪ್ರಾರಂಭಿಸಲಾಯಿತು. ಜೊತೆಗೆ, ಟಿಬಿ ಪೀಡಿತ ಕುಟುಂಬಗಳ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಕುಟುಂಬ ಕೇಂದ್ರಿತ ಆರೈಕೆ ಮಾದರಿಯನ್ನು ಸಹ ಘೋಷಿಸಲಾಯಿತು. 

ʻರಾಷ್ಟ್ರೀಯ ರೋಗ ನಿಯಂತ್ರಣ ಮತ್ತು ಹೈ ಕಂಟೇನ್ಮೆಂಟ್ ಪ್ರಯೋಗಾಲಯʼಕ್ಕೆ  ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಿದರು. ವಾರಣಾಸಿಯಲ್ಲಿ ʻಮೆಟ್ರೋಪಾಲಿಟನ್ ಸಾರ್ವಜನಿಕ ಆರೋಗ್ಯ ಕಣ್ಗಾವಲು ಘಟಕʼದ ಸ್ಥಳವನ್ನು ಉದ್ಘಾಟಿಸಿದರು. 

ಯೋಜನೆಗೆ ಸಂಬಂಧಿಸಿದ ಪ್ರಮುಖ ಸೂಚ್ಯಂಕಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ ರಾಜ್ಯಗಳು ಮತ್ತು ಜಿಲ್ಲೆಗಳಿಗೆ ಪ್ರಧಾನಮಂತ್ರಿಯವರು ಪ್ರಶಸ್ತಿ ಪ್ರದಾನ ಮಾಡಿದರು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿಭಾಗದಲ್ಲಿ ಕರ್ನಾಟಕ ಮತ್ತು ಕೇಂದ್ರಾಡಳಿತ ಪ್ರದೇಶವಾದ ಜಮ್ಮು-ಕಾಶ್ಮೀರ  ಪ್ರಶಸ್ತಿಗೆ ಭಾಜನವಾದವು. ನೀಲಗಿರಿ (ತಮಿಳುನಾಡು), ಪುಲ್ವಾಮಾ (ಜಮ್ಮು-ಕಾಶ್ಮೀರ) ಮತ್ತು ಅನಂತ್‌ನಾಗ್‌ಗೆ (ಜಮ್ಮು-ಕಾಶ್ಮೀರ) ಜಿಲ್ಲಾ ಮಟ್ಟದ ಪ್ರಶಸ್ತಿಗಳನ್ನು ನೀಡಲಾಯಿತು. 

ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, 'ಒಂದು ವಿಶ್ವ ಕ್ಷಯರೋಗ ಶೃಂಗಸಭೆ'ಯು 'ವಸುದೈವ ಕುಟುಂಬಕಂ' ಎಂಬ ಭಾರತೀಯ ತಾತ್ವಿಕ ತತ್ವವನ್ನು ಸಾಕಾರಗೊಳಿಸುತ್ತದೆ. 'ಇಡೀ ಜಗತ್ತು ಒಂದು ಕುಟುಂಬ' ಎಂಬುದು ಎಂದರ್ಥ. ನಾವು ಈ ತತ್ವವನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಪ್ರತಿಯೊಬ್ಬರೂ ಸಮಾನತೆ ಮತ್ತು ಘನತೆಯಿಂದ ಬದುಕುವಂತಹ ಹಾಗೂ ಟಿಬಿಯಂತಹ ಸಾಂಕ್ರಾಮಿಕ ರೋಗ ಮತ್ತು ಅನಾರೋಗ್ಯದಿಂದ ಮುಕ್ತವಾದ ಜಗತ್ತನ್ನು ಸೃಷ್ಟಿಸಲು ಶ್ರಮಿಸುವುದು ಅತ್ಯಗತ್ಯವಾಗಿದೆ ಹೇಳಿದರು. 

2025ರ ವೇಳೆಗೆ ಕ್ಷಯರೋಗವನ್ನು ನಿರ್ಮೂಲನೆ ಮಾಡಲು ಭಾರತ ತೊಟ್ಟಿರುವ ದಿಟ್ಟ ಬದ್ಧತೆಯು,  ಭಾರತವು ಸವಾಲಿನಿಂದ ಎಂದಿಗೂ ವಿಚಲಿತವಾಗುವುದಿಲ್ಲ, ಬದಲಿಗೆ ಬಲವಾದ ಮತ್ತು ದೃಢವಾದ ಪ್ರತಿಕ್ರಿಯೆಯನ್ನು ಪ್ರಾರಂಭಿಸುತ್ತದೆ ಎಂಬುದನ್ನು ಜಗತ್ತಿಗೆ ತೋರಿಸಿದೆ ಎಂದು ಪ್ರಧಾನಿ ಹೇಳಿದರು. ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಹಿನ್ನಡೆಯ ಹೊರತಾಗಿಯೂ, ದೇಶವು ಬಲವಾಗಿ ಚೇತರಿಸಿಕೊಂಡಿದೆ ಮತ್ತು ಕ್ಷಯರೋಗ ಪ್ರಕರಣ ಪತ್ತೆ ವಿಚಾರದಲ್ಲಿ ಸಾಂಕ್ರಾಮಿಕ ಪೂರ್ವ ಮಟ್ಟವನ್ನು ಮೀರಿದೆ ಎಂದು ಅವರು ಮಾಹಿತಿ ನೀಡಿದರು. 

ಕಾಲಕಾಲಕ್ಕೆ ಕೋವಿಡ್ ಸಾಂಕ್ರಾಮಿಕವನ್ನು ಎದುರಿಸುವ ಕೆಲಸಕ್ಕೆ ನಿಯೋಜನೆಗೊಂಡರೂ, ಕ್ಷಯರೋಗಕ್ಕಾಗಿ ದಣಿವರಿಯದೆ ದುಡಿದ ಆರೋಗ್ಯ ಕಾರ್ಯಕರ್ತರ ಕೊಡುಗೆಯನ್ನು ಮೋದಿ ಶ್ಲಾಘಿಸಿದರು. ಉತ್ತಮ ಕೆಲಸವನ್ನು ಮುಂದುವರಿಸುವಂತೆ ಮನವಿ ಮಾಡಿದ ಅವರು, ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಮಾಡಿದಂತೆಯೇ ಕ್ಷಯರೋಗಕ್ಕೆ ಅದೇ ʻ5 ಟಿʼ ವಿಧಾನವನ್ನು (ಟ್ರೇಸ್, ಟೆಸ್ಟ್, ಟ್ರ್ಯಾಕ್, ಟ್ರೀಟ್ ಮತ್ತು ಟೆಕ್ನಾಲಜಿ) ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು. 

ಭಾರತವು ತನ್ನ ʻಜಿ-20ʼ ಅಧ್ಯಕ್ಷತೆಯ ಅಡಿಯಲ್ಲಿ ಜಾಗತಿಕ ಪ್ರಾಧಾನ್ಯತೆಯ ಕಾಳಜಿಗಳನ್ನು ಆರೋಗ್ಯ ಆದ್ಯತೆಗಳಾಗಿ ಗುರುತಿಸಿದೆ ಎಂದು ಶ್ರೀ ನರೇಂದ್ರ ಮೋದಿ ಒತ್ತಿ ಹೇಳಿದರು. "ಡಿಜಿಟಲ್ ಪರಿಹಾರಗಳನ್ನು ಬಳಸಿಕೊಂಡು ಆರೋಗ್ಯ ಸೇವೆಗಳ ಪರಿಣಾಮಕಾರಿತ್ವ ಮತ್ತು ತಲುಪುವಿಕೆಯನ್ನು ಸುಧಾರಿಸುವುದು; ಔಷಧೀಯ ಅಭಿವೃದ್ಧಿ ಮತ್ತು ಉತ್ಪಾದನಾ ಸಾಮರ್ಥ್ಯಗಳನ್ನು ಹೆಚ್ಚಿಸಲು ಸಹಕಾರವನ್ನು ಬಲಪಡಿಸುವುದು; ವೈರಾಣು ಪ್ರತಿರೋಧಕತೆಯನ್ನು ಎದುರಿಸುವುದು; ʻಒಂದು ಆರೋಗ್ಯʼದ ಮೇಲೆ ಗಮನ ಕೇಂದ್ರೀಕರಣ ಇವುಗಳಲ್ಲಿ ಸೇರಿವೆ. ಇವೆಲ್ಲವೂ ಟಿಬಿ ವಿರುದ್ಧದ ಭಾರತದ ಮತ್ತು ವಿಶ್ವದ ಹೋರಾಟದೊಂದಿಗೆ ಬಲವಾದ ಹೊಂದಾಣಿಕೆ ಹೊಂದಿವೆ," ಎಂದು ಅವರು ಹೇಳಿದರು. 

ಶ್ರೀ ನರೇಂದ್ರ ಮೋದಿ ಅವರು ಭಾರತದ ʻರಾಷ್ಟ್ರೀಯ ಕ್ಷಯ ನಿರ್ಮೂಲನಾ ಕಾರ್ಯಕ್ರಮʼದ(ಎನ್‌ಟಿಇಪಿ) ಅದ್ಭುತ ಯಶಸ್ಸಿನ ಬಗ್ಗೆ ಸಭಿಕರಿಗೆ ಮಾಹಿತಿ ನೀಡಿದರು. "ರಾಷ್ಟ್ರೀಯ ಕ್ಷಯರೋಗ ಸಂಶೋಧನಾ ಸಂಸ್ಥೆ(ಎನ್‌ಐಆರ್‌ಟಿ)ಯಂತಹ ʻಐಸಿಎಂಆರ್ʼ ಸಂಸ್ಥೆಗಳು ವಿಶ್ವದ ಅತಿದೊಡ್ಡ ರಾಷ್ಟ್ರೀಯ ಕ್ಷಯರೋಗ ಹರಡುವಿಕೆ ಸಮೀಕ್ಷೆಯನ್ನು ಪೂರ್ಣಗೊಳಿಸಿವೆ. ಇದು ರಾಜ್ಯ ಮಟ್ಟದಲ್ಲಿ ಟಿಬಿ ಹೊರೆಯನ್ನು ಅರ್ಥಮಾಡಿಕೊಳ್ಳಲು ಹಾಗೂ ಉದ್ದೇಶಿತ ಯೋಜನಾ ಮಧ್ಯಸ್ಥಿಕೆ ವಹಿಸಲು ನಮಗೆ ಸಹಾಯ ಮಾಡಿದೆ," ಎಂದು ಅವರು ಹೇಳಿದರು. ʻರಾಜ್ಯ ಮಟ್ಟದ ಪ್ರಮಾಣೀಕರಣʼ (ಎಸ್ಎನ್‌ಸಿ) ಅಭ್ಯಾಸವನ್ನು ಜಾರಿಗೆ ತಂದ ವಿಶ್ವದ ಏಕೈಕ ದೇಶ ಭಾರತ ಎಂದು ಅವರು ಒತ್ತಿ ಹೇಳಿದರು. ಇದು ಹೊಸ ವೈಜ್ಞಾನಿಕ ವಿಧಾನವಾಗಿದ್ದು, ಇದರ ಮೂಲಕ ಜಿಲ್ಲೆಗಳಲ್ಲಿ ಕ್ಷಯ ರೋಗ ನಿರ್ಮೂಲನೆಯ ಪ್ರಗತಿ ಪರಿಶೀಲಸಲಾಗುತ್ತದೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಟಿಬಿ ರೋಗಿಗಳಿಗೆ ನೇರ ಲಾಭ ವರ್ಗಾವಣೆ (ಡಿಬಿಟಿ) ಯೋಜನೆಯಡಿ 75 ಲಕ್ಷಕ್ಕೂ ಹೆಚ್ಚು ಕ್ಷಯ ರೋಗಿಗಳಿಗೆ 2,000 ಕೋಟಿ ರೂ.ಗಿಂತ ಹೆಚ್ಚು ಹಣವನ್ನು ನೇರವಾಗಿ ವರ್ಗಾಯಿಸಲಾಗಿದೆ ಎಂದು ತಿಳಿಸಿದರು.

 ʻನಿ-ಕ್ಷಯ್‌ ಮಿತ್ರʼರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಒಗ್ಗೂಡಿದ ಮತ್ತು ಕ್ಷಯರೋಗದಿಂದ ಹೊರಬರಲು ರೋಗಿಗಳಿಗೆ ಹೆಚ್ಚುವರಿ ಪೌಷ್ಠಿಕಾಂಶ ಮತ್ತು ಭಾವನಾತ್ಮಕ ಬೆಂಬಲವನ್ನು ಒದಗಿಸಿದ ನಾಗರಿಕರು, ಉದ್ಯಮಿಗಳು, ನಾಗರಿಕ ಸಮಾಜ ಮತ್ತು ಎನ್‌ಜಿಒಗಳ ಕೊಡುಗೆಯನ್ನು ಪ್ರಧಾನಿ ಶ್ಲಾಘಿಸಿದರು. "ನಿ-ಕ್ಷಯ್‌ ಮಿತ್ರʼರು 1,000 ಕೋಟಿ ರೂ.ಗಿಂತ ಹೆಚ್ಚು ಕೊಡುಗೆ ನೀಡಿದ್ದಾರೆ. ಇದು ಕ್ಷಯರೋಗಕ್ಕೆ ವಿಶ್ವದ ಅತಿದೊಡ್ಡ ಸಮುದಾಯ ಉಪಕ್ರಮವಾಗಿದೆ" ಎಂದು ಹೇಳಿದರು. "ಈ ರೀತಿಯ ಜನರ ಭಾಗವಹಿಸುವಿಕೆಯು (ಜನ್‌ ಭಾಗೀದಾರಿ) ಸಾಮೂಹಿಕ ಆಂದೋಲನದ ರೂಪವನ್ನು ಪಡೆಯುತ್ತಿದೆ. ಅಲ್ಲದೆ, ನೈಜ ಪ್ರಜಾಪ್ರಭುತ್ವದ ಮತ್ತು ʻಸಬ್‌ ಸಾಥ್, ಸಬ್‌ ಕಾ ವಿಕಾಸ್, ಸಬ್‌ ಕಾ ಸ್ವಸ್ಥʼ ತತ್ವಕ್ಕೆ ಉದಾಹರಣೆಯಾಗಿದೆ ಎಂದರು.

ಕ್ಷಯರೋಗ ನಿರ್ಮೂಲನೆಗಾಗಿ ಜಾಗತಿಕ ಪ್ರತಿಕ್ರಿಯೆಯನ್ನು ಮುನ್ನಡೆಸುವಲ್ಲಿ ಭಾರತ ವಹಿಸುತ್ತಿರುವ ವಿಶಿಷ್ಟ ಸ್ಥಾನವನ್ನು ಒತ್ತಿ ಪ್ರಧಾನಿ ಹೇಳಿದರು. ತಂತ್ರಜ್ಞಾನ, ಡಿಜಿಟಲ್ ಆವಿಷ್ಕಾರಗಳು, ದತ್ತಾಂಶ ವಿಜ್ಞಾನ ಮತ್ತು ಸಾಂಕ್ರಾಮಿಕ ರೋಗಶಾಸ್ತ್ರದಲ್ಲಿ ಭಾರತದ ಶಕ್ತಿಯ ಬಗ್ಗೆ ವಿಶೇಷವಾಗಿ ಉಲ್ಲೇಖಿಸಿದರು. ʻನಿ-ಕ್ಷಯ್‌ʼ ಪೋರ್ಟಲ್‌ನಂತಹ ಭಾರತೀಯ ಆವಿಷ್ಕಾರಗಳ ಬಗ್ಗೆ ಅವರು ಗಮನಸೆಳೆದರು. ಇದು ಪ್ರತಿ ಟಿಬಿ ರೋಗಿಗಳ ಸಂಪೂರ್ಣ ಆರೈಕೆಯನ್ನು ಖಾತರಿಪಡಿಸುವ ಅನುಕರಣೀಯ ಮಾದರಿಯಾಗಿದೆ. ಇದು ಟಿಬಿ ತಡೆಗಟ್ಟುವ ಹೊಸ ಕ್ಷಿಪ್ರ ಚಿಕಿತ್ಸಾ ವಿಧಾನವಾಗಿದೆ. ಇದರ ಅಡಿಯಲ್ಲಿ 12 ವಾರಗಳವರೆಗೆ ವಾರಕ್ಕೆ ಒಮ್ಮೆ ಮಾತ್ರ ಔಷಧಗಳನ್ನು ತೆಗೆದುಕೊಂಡರೆ ಸಾಕು. ಈ ಹಿಂದಿನ ಚಿಕಿತ್ಸಾ ವಿಧಾನದಂತೆ 6 ತಿಂಗಳವರೆಗೆ ಪ್ರತಿದಿನ ಒಂದು ಔಷಧದ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಪ್ರಧಾನಿ ಮಾಹಿತಿ ನೀಡಿದರು.

ತಾಂತ್ರಿಕ ಸಾಧನಗಳು, ರೋಗನಿರ್ಣಯಗಳು, ಔಷಧಗಳ ಒದಗಣೆ ಜೊತೆಗೆ, ಇತರ ದೇಶಗಳಿಗೆ ಬೆಂಬಲ ನೀಡಲು ಮತ್ತು ಕ್ಷಯರೋಗವನ್ನು ಕೊನೆಗಾಣಿಸಲು ದೂರದೃಷ್ಟಿಯ ಜಾಗತಿಕ ಕಾರ್ಯತಂತ್ರವನ್ನು ರೂಪಿಸಲು ಸಹಾಯ ಮಾಡುವುದಾಗಿ ಪ್ರಧಾನಿ ಘೋಷಿಸಿದರು, "ನಮಗೆ ಇಡೀ ಜಗತ್ತು ನಮ್ಮ ಕುಟುಂಬವಾಗಿದೆ ಮತ್ತು ನಿಮಗೆ ಅಗತ್ಯವಿರುವ ಯಾವುದೇ ಬೆಂಬಲಕ್ಕಾಗಿ ನಾವು ಇದ್ದೇವೆ" ಎಂದು ಹೇಳಿದರು. ʻಸುಸ್ಥಿರ ಅಭಿವೃದ್ಧಿ ಗುರಿʼಗಳನ್ನು(ಎಸ್‌ಡಿಜಿ) ಸಾಧಿಸುವ ನಿಟ್ಟಿನಲ್ಲಿ ಟಿಬಿ ವಿರುದ್ಧದ ಪ್ರಯತ್ನಗಳನ್ನು ತೀವ್ರಗೊಳಿಸುವ ಅವರು ವಿಶ್ವ ನಾಯಕರಿಗೆ ಮನವಿ ಮಾಡಿದರು. 

 ಆರೋಗ್ಯ ಕ್ಷೇತ್ರದಲ್ಲಿ ಭಾರತ ಸಾಧಿಸಿರುವ ಕೆಲವು ಮಹತ್ವದ ದಾಪುಗಾಲುಗಳ ಬಗ್ಗೆಯೂ ಪ್ರಧಾನಮಂತ್ರಿ ಅವರು ಬೆಳಕು ಚೆಲ್ಲಿದರು. ಸಮಗ್ರ ಪ್ರಾಥಮಿಕ ಆರೋಗ್ಯ ರಕ್ಷಣೆಗಾಗಿ ಉಚಿತ ಅಗತ್ಯ ಔಷಧಗಳು, ರೋಗನಿರ್ಣಯ ಮತ್ತು ಟೆಲಿಮೆಡಿಸಿನ್ ಸೇವೆಗಳನ್ನು ಒಳಗೊಂಡ 1.5 ಲಕ್ಷಕ್ಕೂ ಹೆಚ್ಚು ʻಆಯುಷ್ಮಾನ್ ಭಾರತ್– ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರʼಗಳನ್ನು ಭಾರತದಲ್ಲಿ ಸ್ಥಾಪಿಸಲಾಗಿದೆ ಎಂದು ಅವರು ಉಲ್ಲೇಖಿಸಿದರು. 500 ದಶಲಕ್ಷಕ್ಕೂ ಹೆಚ್ಚು ಜನರಿಗೆ ದೇಶದ ಎಲ್ಲಾ ಭಾಗಗಳಲ್ಲಿ ಗುಣಮಟ್ಟದ ಆರೋಗ್ಯ ರಕ್ಷಣೆಯನ್ನು ಒದಗಿಸಲು ಪರಿಚಯಿಸಲಾದ ʻಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆʼ ಸೇರಿದಂತೆ ಕೆಲವು ನವೀನ ಯೋಜನೆಗಳ ಬಗ್ಗೆಯೂ ಪ್ರಸ್ತಾಪಿಸಿದರು. ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ ಅಡಿಯಲ್ಲಿ ದೇಶಾದ್ಯಂತ ಉಚಿತ ದ್ವಿತೀಯ ಮತ್ತು ತೃತೀಯ ಆರೈಕೆಗೆ ನೀಡುತ್ತದೆ. ಅಲ್ಲದೆ, "ಹಲವಾರು ಹೊಸ ಲಸಿಕೆಗಳನ್ನು ಪರಿಚಯಿಸುವುದರೊಂದಿಗೆ ನಮ್ಮ 5 ವರ್ಷದೊಳಗಿನ ಶಿಶು ಮರಣ ಪ್ರಮಾಣವು 1000 ಜೀವಂತ ಜನನಗಳಿಗೆ 32ಕ್ಕೆ ಇಳಿದಿದೆ. ಇದು 2014ರಲ್ಲಿ 45ರದ್ಟಿತ್ತು.  ತಾಯಿಯ ಮರಣ ಅನುಪಾತದಲ್ಲೂ(ಎಂಎಂಆರ್) (ಪ್ರತಿ ಲಕ್ಷ ಜೀವಂತ ಜನನಗಳಿಗೆ 130 ರಿಂದ 97) 33 ಅಂಶಗಳ ಭಾರಿ ಕುಸಿತವಾಗಿದೆ; 8 ರಾಜ್ಯಗಳು ಈಗಾಗಲೇ ʻಎಂಎಂಆರ್‌ʼಗೆ ಸಂಬಂಧಿಸಿದ ʻಸುಸ್ಥಿರ ಅಭಿವೃದ್ಧಿ ಗುರಿʼಗಳನ್ನು ಸಾಧಿಸಿವೆ (ಇದೇ ಅವಧಿಯಲ್ಲಿ ಪ್ರತಿ ಲಕ್ಷ ಜೀವಂತ ಜನನಗಳಿಗೆ 70/ ಕ್ಕಿಂತ ಕಡಿಮೆ). ʻಮಿಷನ್ ಇಂದ್ರಧನುಷ್ʼ ಯೋಜನೆಯ ರೋಗನಿರೋಧಕ ಲಸಿಕೆಗಳ ವ್ಯಾಪ್ತಿ ಭಾರಿ ಹೆಚ್ಚಳಕ್ಕೆ ಕಂಡಿದೆ," ಎಂದು ಅವರು ಹೇಳಿದರು. 

 ಕೋವಿಡ್ ಸಾಂಕ್ರಾಮಿಕ ಎದುರಿಸುವ ವಿಚಾರದಲ್ಲಿ ಭಾರತ ಅನುಸರಿಸಿದ ವಿಶ್ವದಲ್ಲೇ ಅತ್ಯುತ್ತಮ ಕಾರ್ಯವಿಧಾನದ ಬಗ್ಗೆ ಒತ್ತಿ ಹೇಳಿದ ಪ್ರಧಾನಿ, "ನಮ್ಮ ಲಸಿಕೆ ಉತ್ಪಾದನಾ ಸಾಮರ್ಥ್ಯ ಹಾಗೂ ಔಷಧ ಉದ್ಯಮಗಳು ಕೋವಿಡ್ ಲಸಿಕೆ ಮತ್ತು ಟಿಬಿ ಔಷಧಗಳ ಜಾಗತಿಕ ಬೇಡಿಕೆ ಪೂರೈಕೆಯನ್ನು ಖಾತರಿಪಡಿಸಿವೆ. ನಮ್ಮ ಔಷಧ ಉದ್ಯಮವು ಟಿಬಿ ಔಷಧಗಳ ಜಾಗತಿಕ ಬೇಡಿಕೆಯ ಸುಮಾರು 80% ಅನ್ನು ಪೂರೈಸುತ್ತದೆ ಮತ್ತು ಈಗ ನಮ್ಮ ಆವಿಷ್ಕಾರಕರು ಜಗತ್ತಿಗೆ ದೇಶೀಯ ಆಣ್ವಿಕ ರೋಗನಿರ್ಣಯ ತಂತ್ರಜ್ಞಾನವನ್ನು ನೀಡಿದ್ದಾರೆ. ಭಾರತದಲ್ಲಿ ಸಂಶೋಧಕರು ಮತ್ತು ವಿಜ್ಞಾನಿಗಳು ಟಿಬಿಗೆ ಲಸಿಕೆ ಪಡೆಯಲು ಶ್ರಮಿಸುತ್ತಿದ್ದಾರೆ ಎಂದು ಅವರು ಹೇಳಿದರು. 

 ಕ್ಷಯರೋಗವನ್ನು ಸೋಲಿಸಿದ್ದಕ್ಕಾಗಿ ಮತ್ತು ಕ್ಷಯರೋಗದ ವಿರುದ್ಧ ಹೋರಾಡಲು ಇತರ ಸಹ ನಾಗರಿಕರಿಗೆ ಸಹಾಯ ಮಾಡಿದ್ದಕ್ಕಾಗಿ ʻಟಿಬಿ ವಿಜೇತʼರನ್ನು ಅಭಿನಂದಿಸುವ ಮೂಲಕ ಪ್ರಧಾನಮಂತ್ರಿಯವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು. ಟಿಬಿ ನಿರ್ಮೂಲನೆಗಾಗಿ ದಣಿವರಿಯದ ಪ್ರಯತ್ನಗಳಿಗಾಗಿ ಅವರು ಆರೋಗ್ಯ ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸಿದರು, "ಅವರು ಆರೋಗ್ಯ ವ್ಯವಸ್ಥೆಯ ಬೆನ್ನೆಲುಬು - ಟಿಬಿ ವಿರುದ್ಧದ ಈ ಸಮರದಲ್ಲಿ ರೋಗಿಗಳೊಂದಿಗೆ ಮುಂಚೂಣಿ ಸ್ಥಾನದಲ್ಲಿ ನಿಂತಿದ್ದಾರೆ," ಎಂದು ಹೇಳಿದರು. 

 ಡಾ. ಮನ್ಸುಖ್ ಮಾಂಡವಿಯಾ ಅವರು ಟಿಬಿ ಕಾರ್ಯಕ್ರಮದ ಯಶಸ್ಸನ್ನು ಶ್ಲಾಘಿಸಿದರು ಮತ್ತು ಕೋವಿಡ್-19 ಸಾಂಕ್ರಾಮಿಕಕ್ಕೆ ದೇಶದ ಪ್ರತಿಕ್ರಿಯೆಯನ್ನು ಗಮನದಲ್ಲಿಟ್ಟುಕೊಂಡು 2025ರ ವೇಳೆಗೆ ಟಿಬಿ ನಿರ್ಮೂಲನೆ ಮಾಡುವ ವಿಶ್ವಾಸವನ್ನು ವ್ಯಕ್ತಪಡಿಸಿದರು. ʻಒಂದು ಭೂಮಿ, ಒಂದು ಆರೋಗ್ಯʼ ನೀತಿಯು ಗೌರವಾನ್ವಿತ ಪ್ರಧಾನ ಮಂತ್ರಿಯವರ ಆಶಯಕ್ಕೆ ಅನುಗುಣವಾಗಿದೆ. ಅವರು ದೇಶಗಳ ನಡುವೆ ಹೆಚ್ಚಿನ ಸಹಕಾರಕ್ಕಾಗಿ ಪ್ರಮುಖ ಧ್ವನಿಯಾಗಿದ್ದಾರೆ ಎಂದು ಸಚಿವರು ಉಲ್ಲೇಖಿಸಿದರು.
  
ʻನಿ-ಕ್ಷಯ್‌ ಮಿತ್ರʼ ಉಪಕ್ರಮವನ್ನು ಪ್ರಾರಂಭಿಸಿದ ಕೇವಲ 15 ದಿನಗಳ ಅವಧಿಯಲ್ಲಿ, 50,000ಕ್ಕೂ ಹೆಚ್ಚು ಜನರು ʻನಿ-ಕ್ಷಯ್‌ ಮಿತ್ರʼರಾಗಲು ಅರ್ಜಿ ಸಲ್ಲಿಸಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವರು ಒತ್ತಿ ಹೇಳಿದರು. ಟಿಬಿ ನಿರ್ಮೂಲನೆ ಮತ್ತು ಜನಾಂದೋಲನಕ್ಕಾಗಿ ತಳಮಟ್ಟದ ಕಾರ್ಯತಂತ್ರಗಳ ಅಗತ್ಯವನ್ನು ಒತ್ತಿಹೇಳಿದ ಡಾ.ಮಾಂಡವಿಯಾ, "ನಾವೆಲ್ಲರೂ ದೊಡ್ಡ ಉದ್ದೇಶಕ್ಕಾಗಿ ನಮ್ಮದೇ ಆದ ವಿಶಿಷ್ಟ ಸಾಮರ್ಥ್ಯಗಳಲ್ಲಿ ಕೊಡುಗೆ ನೀಡಿದಾಗ, ನಮ್ಮ ಪ್ರಯತ್ನಗಳು ಫಲಪ್ರದವಾಗುತ್ತವೆ. ಅಂತಹ ಉದ್ಯಮಶೀಲತೆಯ ಮನೋಭಾವದಿಂದ ನನಗೆ ವಿಶ್ವಾಸವಿದೆ; ನಾವು 2025 ರ ವೇಳೆಗೆ ಟಿಬಿಯನ್ನು ನಿರ್ಮೂಲನೆ ಮಾಡುತ್ತೇವೆ ಎಂದರು. 

ಶ್ರೀ ಯೋಗಿ ಆದಿತ್ಯನಾಥ್ ಅವರು ಮಾತನಾಡಿ, ʻಒಂದು ವಿಶ್ವ, ಕ್ಷಯರೋಗ ಶೃಂಗಸಭೆʼಗೆ ವಾರಣಾಸಿಯನ್ನು ಸ್ಥಳವಾಗಿ ಆಯ್ಕೆ ಮಾಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಕ್ಷಯ ಮುಕ್ತ ಭಾರತ ಗುರಿಯನ್ನು ಸಾಧಿಸಲು ಗ್ರಾಮ ಪ್ರಧಾನರ ಬೆಂಬಲವನ್ನು ಪಡೆಯಲು ʻಟಿಬಿ-ಮುಕ್ತ ಪಂಚಾಯತ್ʼ ಉಪಕ್ರಮವನ್ನು ಪ್ರಾರಂಭಿಸಿದ್ದಕ್ಕಾಗಿ ಅವರು ಗೌರವಾನ್ವಿತ ಪ್ರಧಾನಿಯವರಿಗೆ ಧನ್ಯವಾದ ಅರ್ಪಿಸಿದರು. 

ವಿಶ್ವದ ಸಾವಿರ ವರ್ಷಗಳಷ್ಟು ಹಳೆಯದಾದ ಕ್ಷಯರೋಗದ ಬಗ್ಗೆ ಚರ್ಚಿಸಲು ಸಾವಿರಾರು ವರ್ಷಗಳಷ್ಟು ಹಳೆಯದಾದ ನಗರದಲ್ಲಿ ಶೃಂಗಸಭೆ ನಡೆಯುತ್ತಿದೆ ಎಂದು ಡಾ. ಲೂಸಿಕಾ ಡಿಟಿಯು ಹೇಳಿದರು. ಭಾರತದಲ್ಲಿ ಕ್ಷಯರೋಗದ ಹೊರೆ ಹೆಚ್ಚಾಗಿದೆ. ಆದರೆ ರೋಗವನ್ನು ತೊಡೆದುಹಾಕಲು ಉತ್ತಮ ಯೋಜನೆ, ಮಹತ್ವಾಕಾಂಕ್ಷೆ ಮತ್ತು ಇಚ್ಛಾಶಕ್ತಿಯನ್ನು ಭಾರತ ಹೊಂದಿದೆ ಎಂದು ಅವರು ಹೇಳಿದರು. ಜಿ -20 ಅಧ್ಯಕ್ಷತೆಯಲ್ಲಿ ಭಾರತ ಅನುಸರಿಸುತ್ತಿರುವ ಜಾಗತಿಕ ಕಲ್ಯಾಣ ನಡೆಯ ಬಗ್ಗೆ ಅವರು ಒತ್ತಿಹೇಳಿದರು. ʻಒಂದು ವಿಶ್ವ ಒಂದು ಆರೋಗ್ಯʼ ಎಂಬ ವಿಷಯದ ಮಹತ್ವವನ್ನು ವಿವರಿಸಿದರು. ಭಾರತದಂತಹ ದೇಶಗಳ ಪ್ರಯತ್ನದಿಂದಾಗಿ, ಕ್ಷಯರೋಗಕ್ಕೆ ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆಯದ ಜನರ ಸಂಖ್ಯೆ ಇತಿಹಾಸದಲ್ಲಿ ಮೊದಲ ಬಾರಿಗೆ 3 ದಶಲಕ್ಷಕ್ಕಿಂತ ಕಡಿಮೆಯಾಗಿದೆ ಎಂದು ಅವರು ಮಾಹಿತಿ ನೀಡಿದರು. ಕ್ಷಯ ರೋಗ ನಿರ್ಮೂಲನೆಯಲ್ಲಿ ಭಾರತ ವಿಶ್ವಕ್ಕೆ ಸ್ಫೂರ್ತಿ ನೀಡುತ್ತಿದೆ. ಪ್ರತಿಯೊಂದು ದೇಶವು ʻನಿ-ಕ್ಷಯ್‌ ಮಿತ್ರʼ ಉಪಕ್ರಮವನ್ನು ಹೊಂದಿರಬೇಕು. ರಾಜ್ಯಗಳ ಮಟ್ಟದಲ್ಲಿಯೂ ಇದು ಪ್ರಾಯೋಗಿಕ ಹಂತದಲ್ಲಿ ಅಲ್ಲದೆ, ಪೂರ್ಣ ಪ್ರಮಾಣದಲ್ಲಿ  ನಡೆಯುತ್ತಿರುವ ರೀತಿಗೆ ನಾನು ವಂದಿಸುತ್ತೇನೆ," ಎಂದು ಅವರು ಹೇಳಿದರು. 

ಪ್ರಧಾನ ಮಂತ್ರಿಯವರ ನಾಯಕತ್ವದಲ್ಲಿ ಭಾರತವು 2025ರ ವೇಳೆಗೆ ಕ್ಷಯರೋಗವನ್ನು ಕೊನೆಗೊಳಿಸುವ ಹಾದಿಯಲ್ಲಿದೆ ಎಂದು ಹೇಳಿದ ಡಾ.ದಿಟಿಯು, ಜಾಗತಿಕ ಗುರಿಗಿಂತ ಐದು ವರ್ಷ ಮುಂಚಿತವಾಗಿ ನಿರ್ಮೂಲನೆ ಗುರಿಯತ್ತ ಕೆಲಸ ಮಾಡುವಲ್ಲಿ ಭಾರತದ ಮುಂದಾಳತ್ವವನ್ನು ಗುರುತಿಸಿದರು. "ಭಾರತವು ಈ ನಿಟ್ಟಿನಲ್ಲಿ ನಂಬಲಾಗದಷ್ಟು ನಾಯಕತ್ವವನ್ನು ಪ್ರದರ್ಶಿಸಿದೆ ಮತ್ತು ಸರಕಾರದ ಬಲವಾದ ಸಂಕಲ್ಪ ಮತ್ತು ಬದ್ಧತೆಯನ್ನು ಪ್ರತಿಬಿಂಬಿಸುವ ಹಲವಾರು ಅದ್ಭುತ ಉಪಕ್ರಮಗಳನ್ನು ಪರಿಚಯಿಸಿದೆ," ಎಂದರು. ಕ್ಷಯರೋಗವನ್ನು ನಿಭಾಯಿಸುವಲ್ಲಿ ಭಾರತದ ಪ್ರಮಾಣವನ್ನು ಅವರು ಶ್ಲಾಘಿಸಿದರು ಮತ್ತು 2025ರ ವೇಳೆಗೆ ಭಾರತವು ಕ್ಷಯರೋಗವನ್ನು ಕೊನೆಗೊಳಿಸುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಸೆಪ್ಟೆಂಬರ್ 22 ರಂದು ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಟಿಬಿ ಕುರಿತು ವಿಶ್ವಸಂಸ್ಥೆಯ ಉನ್ನತ ಮಟ್ಟದ ಸಭೆ ನಡೆಯುತ್ತಿರುವ ಬಗ್ಗೆಯೂ ಅವರು ಮಾಹಿತಿ ನೀಡಿದರು. ಈ ಸಭೆಯಲ್ಲಿ ಪ್ರಧಾನಿಯ ಉಪಸ್ಥಿತಿಯನ್ನು ಅವರು ಕೋರಿದರು. ಟಿಬಿ ವಿರುದ್ಧದ ಈ ಹೋರಾಟದಲ್ಲಿ ಇತರ ವಿಶ್ವ ನಾಯಕರನ್ನು ಮುನ್ನಡೆಸಬೇಕು ಮತ್ತು ಪ್ರೇರೇಪಿಸಬೇಕು ಎಂದು ಅವರು ಪ್ರಧಾನಿಯನ್ನು ಒತ್ತಾಯಿಸಿದರು. "ಜಾಗತಿಕ ಮಟ್ಟದಲ್ಲಿ ಮುಂದಾಳತ್ವ ವಹಿಸಲು ಮತ್ತು ವಿಶ್ವದ ನಾನಾ ಸರಕಾರಗಳಿಂದ ರೋಗ ನಿರ್ಮೂಲನೆಗೆ ಆದ್ಯತೆಯನ್ನು ಖಚಿತಪಡಿಸಿಕೊಳ್ಳಲು ಜಗತ್ತು ಭಾರತದತ್ತ ನೋಡುತ್ತಿದೆ" ಎಂದು ಅವರು ಹೇಳಿದರು. 

ಹಿನ್ನೆಲೆ: 

ವಿಶ್ವದ ಇತರೆ ದೇಶಗಳು 2030ರ ವೇಳೆಗೆ ಕ್ಷಯ ಸಂಬಂಧಿತ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (ಎಸ್‌ಡಿಜಿ) ಸಾಧಿಸುವ ಗುರಿಯನ್ನು ಹೊಂದಿವೆ. ಆದರೆ, ಭಾರತವು 2025ರ ವೇಳೆಗೇ ದೇಶದಿಂದ ಕ್ಷಯ (ಟಿಬಿ) ನಿರ್ಮೂಲನೆ ಮಾಡುವ ಮೂಲಕ ಐದು ವರ್ಷ ಮುಂಚಿತವಾಗಿ ಈ ಗುರಿಯನ್ನು ಸಾಧಿಸಬೇಕು ಎಂದು ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾರ್ಚ್ 2018ರಲ್ಲಿ ಸಂಕಲ್ಪ ಮಾಡಿದರು.  ತಮ್ಮ ಉತ್ತಮ ದೂರದೃಷ್ಟಿ ಮತ್ತು ನಾಯಕತ್ವದ ಮೂಲಕ ಕ್ಷಯರೋಗವನ್ನು ನಿರ್ಮೂಲನೆ ಮಾಡಲು ನವೀನ ಕಾರ್ಯವಿಧಾನಕ್ಕೆ ಗೌರವಾನ್ವಿತ ಪ್ರಧಾನ ಮಂತ್ರಿಗಳು ಕರೆ ನೀಡಿದರು. ಇದಾದ ಕೆಲವೇ ದಿನಗಳಲ್ಲಿ, ʻರಾಷ್ಟ್ರೀಯ ಟಿಬಿ ನಿರ್ಮೂಲನಾ ಕಾರ್ಯಕ್ರಮʼ (ಎನ್‌ಟಿಇಪಿ) ತನ್ನ ಕಾರ್ಯತಂತ್ರವನ್ನು ಪರಿಷ್ಕರಿಸಿತು ಮತ್ತು ವಿವಿಧ ರೋಗಿ ಕೇಂದ್ರಿತ ಯೋಜನೆಗಳು ಮತ್ತು ಉಪಕ್ರಮಗಳನ್ನು ಪರಿಚಯಿಸಿತು. 2022ರಲ್ಲಿ, ಭಾರತದಲ್ಲಿ ಅತ್ಯಧಿಕ ಟಿಬಿ ರೋಗಿಗಳನ್ನು ಪತ್ತೆ ಮಾಡಲಾಯಿತು - ʻ2022ರಲ್ಲಿ, 24.22 ಲಕ್ಷ ಟಿಬಿ ಪ್ರಕರಣಗಳು ಪತ್ತೆಯಾದವು. 2013 ರಲ್ಲಿ ವರದಿಯಾದ 14 ಲಕ್ಷ ರೋಗಿಗಳಿಗೆ ಹೋಲಿಸಿದರೆ ಹೆಚ್ಚಿದ ರೋಗ ಪತ್ತೆಯು ಪ್ರತಿ ರೋಗಿಯನ್ನು ತಲುಪುವಲ್ಲಿ ಭಾರತದ ಕಾರ್ಯಕ್ರಮದ ಪರಿಣಾಮಕಾರಿತ್ವವನ್ನು ಸೂಚಿಸುತ್ತದೆ. ಖಾಸಗಿ ವಲಯದ ತೊಡಗಿಸಿಕೊಳ್ಳುವಿಕೆ, ಸಕ್ರಿಯ ಪ್ರಕರಣ ಪತ್ತೆ, ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳ ಮೂಲಕ ಸೇವೆಗಳ ವಿಕೇಂದ್ರೀಕರಣ, ಸಮುದಾಯ ತೊಡಗಿಸಿಕೊಳ್ಳುವಿಕೆ ಮತ್ತು ʻನಿ-ಕ್ಷಯ್‌ ಪೋಷಣ್ʼ ಯೋಜನೆಯಂತಹ ಕಾರ್ಯತಂತ್ರಗಳು ಭಾರತದ ಟಿಬಿ ನಿರ್ವಹಣಾ ಪ್ರಯತ್ನಗಳನ್ನು ಪರಿವರ್ತಿಸಿವೆ ಮತ್ತು ಅದನ್ನು ರೋಗಿ ಕೇಂದ್ರಿತವನ್ನಾಗಿ ಮಾಡಿವೆ. 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ  ಮತ್ತು ʻಸ್ಟಾಪ್ ಟಿಬಿ ಪಾರ್ಟ್‌ನರ್‌ಶಿಪ್‌ʼ ಆಯೋಜಿಸಿದ್ದ ʻಒಂದು ವಿಶ್ವ ಕ್ಷಯರೋಗ ಶೃಂಗಸಭೆʼಯು, ದೇಶವು ಜಿ 20 ರಾಷ್ಟ್ರಗಳನ್ನು ಮುನ್ನಡೆಸುತ್ತಿರುವ ಸಮಯದಲ್ಲಿ ಭಾರತದ ಟಿಬಿ ಕಲಿಕೆಯನ್ನು ಜಗತ್ತಿಗೆ ಪ್ರದರ್ಶಿಸಲು ಅವಕಾಶ ಒದಗಿಸಿತು. ಈ ಸಂದರ್ಭದಲ್ಲಿ ನಡೆದ ಚರ್ಚೆಗಳು ಭಾರತವು ತನ್ನ ಟಿಬಿ ನಿರ್ಮೂಲನೆ ಪ್ರತಿಕ್ರಿಯೆಯನ್ನು ಬಲಪಡಿಸಲು ಪರಿಚಯಿಸಿದ ಪ್ರಮುಖ ಕಾರ್ಯತಂತ್ರಗಳನ್ನು ಬೆಳಕಿಗೆ ತರಲು ಸಹಾಯ ಮಾಡಿತು. ಶೃಂಗಸಭೆಯ ನಂತರ, ದೇಶದ ಪ್ರತಿನಿಧಿಗಳು ʻಆಯುಷ್ಮಾನ್ ಭಾರತ್ - ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರʼಗಳು ಮತ್ತು ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ, ಕ್ಷಯರೋಗ ಆರೈಕೆಯನ್ನು ವಿಕೇಂದ್ರೀಕರಿಸಲು ಮತ್ತು ಅದನ್ನು ಜನರಿಗೆ ಹತ್ತಿರವಾಗಿಸಲು ಭಾರತದಲ್ಲಿ ಜಾರಿಗೆ ತರಲಾಗುತ್ತಿರುವ ನವೀನ ವಿಧಾನಗಳ ಬಗ್ಗೆ ತಿಳಿದುಕೊಂಡರು. 
ಕಾರ್ಯಕ್ರಮವನ್ನು ವೀಕ್ಷಿಸಲು ಇಲ್ಲಿ ಕ್ಲಿಕ್‌ ಮಾಡಿ:

https://www.youtube.com/watch?v=ulCtyxszN_k 


**


(Release ID: 1910768) Visitor Counter : 321


Read this release in: English , Urdu , Hindi , Manipuri