ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

​​​​​​​ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರವು ಜಾಗತಿಕ ಸಿರಿಧಾನ್ಯಗಳ(ಶ್ರೀ ಅನ್ನ) ಸಮ್ಮೇಳನವನ್ನು ಆಯೋಜಿಸುತ್ತಿದೆ


ಸಿರಿಧಾನ್ಯಗಳ (ಶ್ರೀ ಅನ್ನ)  ರಫ್ತುನ್ನು ಉತ್ತೇಜಿಸಲು ಮತ್ತು ಉತ್ಪಾದಕರಿಗೆ ಮಾರುಕಟ್ಟೆ ಸಂಪರ್ಕವನ್ನು ಹೆಚ್ಚಿಸಲು ಇದನ್ನು ಆಯೋಜಿಸಲಾಗುತ್ತದೆ.

​​​​​​​ಜಗತ್ತನ್ನು ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆಯೊಂದಿಗೆ ಭಾರತವು ಪೋಷಿಸುತ್ತಿದೆ

Posted On: 18 MAR 2023 2:24PM by PIB Bengaluru

ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ, ಭಾರತ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದಡಿಯಲ್ಲಿರುವ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರವು (ಎ.ಪಿ.ಇ.ಡಿ.ಎ..), ಭಾರತದಿಂದ ಸಿರಿಧಾನ್ಯಗಳ ರಫ್ತುನ್ನು ಉತ್ತೇಜಿಸಲು ಮತ್ತು ಉತ್ಪಾದಕರಿಗೆ ಮಾರುಕಟ್ಟೆ ಸಂಪರ್ಕವನ್ನು ಒದಗಿಸಲು ನವದೆಹಲಿಯ ಪುಸಾ ರಸ್ತೆಯಲ್ಲಿರುವ ಎನ್.ಎ.ಎಸ್.ಸಿ. ಸಂಕೀರ್ಣದ ಸುಬ್ರಮಣ್ಯಂ ಸಭಾಂಗಣದಲ್ಲಿ ಇಂದು ಜಾಗತಿಕ ಸಿರಿಧಾನ್ಯ (ಶ್ರೀ ಅನ್ನ) ಸಮ್ಮೇಳನವನ್ನು ಆಯೋಜಿಸಿದೆ.

ದೇಶದ ವಿವಿಧ ಭಾಗಗಳಿಂದ ಸುಮಾರು 100 ಭಾರತೀಯ ಸಿರಿಧಾನ್ಯ ಪ್ರದರ್ಶಕರು ಪಾಲ್ಗೊಂಡಿದ್ದು, ಮತ್ತು ಯು.ಎಸ್.ಎ., ಯು.ಎ.ಇ, ಕುವೈತ್, ಜರ್ಮನಿ, ವಿಯೆಟ್ನಾಂ, ಜಪಾನ್, ಕೀನ್ಯಾ, ಮಲಾವಿ, ಭೂತಾನ್, ಇಟಲಿ ಮತ್ತು ಮಲೇಷ್ಯಾ ಮುಂತಾದ ವಿವಿಧ ದೇಶಗಳಿಂದ ಸುಮಾರು 100 ಅಂತರರಾಷ್ಟ್ರೀಯ ಖರೀದಿದಾರರನ್ನು ಸಮ್ಮೇಳನಕ್ಕೆ ಆಹ್ವಾನಿಸಲಾಗಿದೆ. ಈ ಸಮ್ಮೇಳನವು ಭಾಗವಹಿಸುವವರಲ್ಲಿ ವ್ಯಾಪಾರ ಮತ್ತು ಸಂಪರ್ಕ ಬೆಳೆಸುವ (ನೆಟ್‌ವರ್ಕಿಂಗ್‌) ಅತ್ಯುತ್ತಮ ಅವಕಾಶವನ್ನು ಒದಗಿಸುತ್ತದೆ. ಸಿರಿಧಾನ್ಯ ಆಮದು ಮಾಡಿಕೊಳ್ಳುವ 30 ಸಂಭಾವ್ಯ ದೇಶಗಳನ್ನು ಈ ಸಮ್ಮೇಳನ ಹಾಗೂ ಪ್ರದರ್ಶನಕ್ಕೆ ಭೇಟಿ ನೀಡಲು ತಮ್ಮ ಪ್ರಮುಖ ಖರೀದಿದಾರರನ್ನು ಕಳುಹಿಸಿಕೊಡಲು ಎ.ಪಿ.ಇ.ಡಿ.ಎ. ವಿನಂತಿ ಮಾಡಿಕೊಂಡಿತ್ತು. ಸಿರಿಧಾನ್ಯಗಳ ವಿಶಿಷ್ಟ ಉತ್ಪನ್ನಗಳ 100 ಪ್ರದರ್ಶಕರ ಮಳಿಗೆಗಳನ್ನು ಉಪಯೋಗಿಸಿಕೊಳ್ಳಲು ಸಿರಿಧಾನ್ಯ ಉತ್ಪಾದಕರಿಗೆ ಮನವಿಯನ್ನು ಮಾಡಿಕೊಂಡಿತ್ತು. ಹೆಚ್ಚುವರಿಯಾಗಿ ಪ್ರದರ್ಶನ ಪ್ರದೇಶದಲ್ಲಿ ವಿವಿಧ ವರ್ಗಗಳ ಅಡಿಯಲ್ಲಿ ಎಲ್ಲಾ ಸಿರಿಧಾನ್ಯ ಪ್ರದರ್ಶಕರ ವಿವರಗಳನ್ನು ಡಿಜಿಟಲ್ ಆಗಿ ಪ್ರದರ್ಶಿಸಲಾಗಿದೆ, ಆಮದುದಾರರು ಈ ಭಾರತೀಯ ಸಿರಿಧಾನ್ಯ ಉತ್ಪಾದಕರ ಪಟ್ಟಿಯಿಂದ ನೇರವಾಗಿ ಸಿರಿಧಾನ್ಯಗಳನ್ನು ಪಡೆಯಬಹುದು. ವರ್ಚುವಲ್ ಟ್ರೇಡ್ ಫೇರ್ (ವಿ.ಟಿ.ಎಫ್) 365 ದಿನಗಳವರೆಗೆ 24X7 ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ, ಇದರಲ್ಲಿ ಪ್ರದರ್ಶಕರು ಮತ್ತು ಖರೀದಿದಾರರು ವಿ.ಟಿ.ಎಫ್ ನಲ್ಲಿ ಪ್ರದರ್ಶಿಸಲಾದ ಉತ್ಪನ್ನಗಳ ಆಧಾರದ ಮೇಲೆ ಸಂವಹನ ನಡೆಸಿ ಖರೀದಿಸಬಹುದು.

ಈ ಸಮ್ಮೇಳನವು ಡಿಜಿಟಲ್ ವೇದಿಕೆಯಲ್ಲಿ ಮುಖ್ಯ ಭಾಷಣ , ಪ್ರದರ್ಶನ ಮತ್ತು ಪ್ರಸ್ತುತಿಗಳನ್ನು ಒಳಗೊಂಡಂತೆ ಮಾಹಿತಿಯುಕ್ತ ವಿವಿಧ ಕಾರ್ಯಕಲಾಪಗಳ ಸರಣಿಯನ್ನು ಒಳಗೊಂಡಿರುತ್ತದೆ. ಈ ಕಾರ್ಯಕಲಾಪಗಳು ಸಿರಿಧಾನ್ಯ ಮತ್ತು ಅದರ ಮೌಲ್ಯವರ್ಧಿತ ಉತ್ಪನ್ನಗಳು, ಸಂಸ್ಕರಣೆ, ಪ್ಯಾಕೇಜಿಂಗ್ ಮತ್ತು ರಫ್ತು ಸಾಮರ್ಥ್ಯದ ವಿವಿಧ ಅಂಶಗಳ ಮೇಲೆ ಕೇಂದ್ರೀಕರಿಸುತ್ತವೆ, ಇದು ಪ್ರದರ್ಶಕರು ಮತ್ತು ಖರೀದಿದಾರರಿಗೆ ಮೌಲ್ಯಯುತವಾದ ಒಳನೋಟಗಳನ್ನು ಹಾಗೂ ವ್ಯವಹಾರಿಕ ಅವಕಾಶಗಳನ್ನು ಒದಗಿಸುತ್ತದೆ.

ಈ ಪ್ರದರ್ಶನ ಕಾರ್ಯಕ್ರಮವು ಸಿರಿಧಾನ್ಯ ಉದ್ಯಮದ ಮೇಲೆ ಗಮನಾರ್ಹ ಪರಿಣಾಮವನ್ನು ಉಂಟುಮಾಡುವ ನಿರೀಕ್ಷೆಯಿದೆ, ಜಾಗತಿಕ ಮಾರುಕಟ್ಟೆಯಲ್ಲಿ ಅದರ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಮತ್ತಷ್ಟು ಉತ್ತೇಜಿಸುತ್ತದೆ. ಸಿರಿಧಾನ್ಯ ಮತ್ತು ಅದರ ಮೌಲ್ಯವರ್ಧಿತ ಉತ್ಪನ್ನಗಳಿಗೆ ನೇರ ಮಾರುಕಟ್ಟೆ ಮತ್ತು ರಫ್ತು ಅವಕಾಶಗಳನ್ನು ಅನ್ವೇಷಿಸಲು ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಖರೀದಿದಾರರು, ರಫ್ತುದಾರರು, ಪ್ರಗತಿಪರ ಬೆಳೆಗಾರರು, ಸಿರಿಧಾನ್ಯಗಳ ಎಫ್.ಪಿ.ಒ.ಗಳ ನಡುವಿನ ಬಿ2ಬಿ ಸಭೆಗಳಿಗೆ ಎ.ಪಿ.ಇ.ಡಿ.ಎ.  ಆಯೋಜಿಸಿದ ಈ ವಿಶೇಷ ಸಮ್ಮೇಳನವು  ಉತ್ತಮ ವೇದಿಕೆಯನ್ನು ಒದಗಿಸುತ್ತಿದೆ.  

2021-22ರಲ್ಲಿ ಭಾರತದ ಸಿರಿಧಾನ್ಯ ರಫ್ತು 64 ಮಿಲಿಯನ್ ಯು.ಎಸ್. ಡಾಲರ್  ಆಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 2023 ರ ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ಸಿರಿಧಾನ್ಯ ರಫ್ತಿನಲ್ಲಿ 12.5% ರಷ್ಟು ಹೆಚ್ಚಳವಾಗಿದೆ. ಕಳೆದ ದಶಕದಲ್ಲಿ ಸಿರಿಧಾನ್ಯ ರಫ್ತುನಲ್ಲಿ ಮಹತ್ತರ ಬದಲಾವಣೆಯನ್ನು ಕಂಡಿದೆ. 2011-12ರಲ್ಲಿ ಪ್ರಮುಖ ಆಮದು ರಾಷ್ಟ್ರಗಳೆಂದರೆ ಯು.ಎಸ್.ಎ., ಆಸ್ಟ್ರೇಲಿಯಾ, ಜಪಾನ್, ಬೆಲ್ಜಿಯಂ ಇತ್ಯಾದಿಗಳು ಆಗಿದ್ದವು ಆದರೆ,  2021-22 ರಲ್ಲಿ ಬೇಡಿಕೆಗಳು ನೇಪಾಳ (6.09 ಮಿಲಿಯನ್ ಯು.ಎಸ್. ಡಾಲರ್ ), ಯು.ಎ.ಇ. ( 4.84 ಮಿಲಿಯನ್ ಯು.ಎಸ್. ಡಾಲರ್  ), ಸೌದಿ ಅರೇಬಿಯಾ ( 3.84 ಮಿಲಿಯನ್ ಯು.ಎಸ್. ಡಾಲರ್) ಗಳಿಗೆ ವರ್ಗಾಯಿಸಲ್ಪಟ್ಟವು. ಕೀನ್ಯಾ, ಪಾಕಿಸ್ತಾನ ಕೂಡ ಕಳೆದ ದಶಕದಲ್ಲಿ ಭಾರತದ ಸಂಭಾವ್ಯ ಆಮದು ತಾಣಗಳಲ್ಲಿ ಸೇರಿವೆ. ಭಾರತದ ಸಿರಿಧಾನ್ಯ ರಫ್ತಿನ ಪ್ರಸ್ತುತ ಅಗ್ರಗಣ್ಯ ಹತ್ತು ಹೆಸರುಗಳ (ಟಾಪ್-ಟೆನ್) ಪಟ್ಟಿಯಲ್ಲಿರುವ ಇತರ ಏಳು ದೇಶಗಳೆಂದರೆ ಲಿಬಿಯಾ, ಟುನೀಶಿಯಾ, ಮೊರಾಕೊ, ಯು.ಕೆ., ಯೆಮೆನ್, ಓಮನ್ ಮತ್ತು ಅಲ್ಜೀರಿಯಾಗಳಾಗಿವೆ. ಭಾರತವು ಜಗತ್ತಿನಾದ್ಯಂತ 139 ದೇಶಗಳಿಗೆ ಸಿರಿಧಾನ್ಯಯನ್ನು ರಫ್ತು ಮಾಡುತ್ತಿದೆ. ಭಾರತೀಯ ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳ ರಫ್ತು ಪ್ರಪಂಚದಾದ್ಯಂತ ಹರಡಿದೆ.  

ಸಿರಿಧಾನ್ಯ ಮತ್ತು ಅದರ ಮೌಲ್ಯವರ್ಧಿತ ಉತ್ಪನ್ನಗಳ ಜಾಗತಿಕ ಪೂರೈಕೆ ಸರಪಳಿಯಲ್ಲಿ ಪ್ರಮುಖ ಪಾಲುದಾರನಾಗಿ ಜಗತ್ತನ್ನು ಮುನ್ನಡೆಸುವ ಸಾಮರ್ಥ್ಯವನ್ನು ಇಂದು ಭಾರತವು ಹೊಂದಿದೆ. ರಾಷ್ಟ್ರದ ಕೃಷಿ ಉತ್ಪನ್ನಗಳ ರಫ್ತು ಪ್ರಚಾರದ ಆದೇಶದೊಂದಿಗೆ ಮುಂಚೂಣಿಯಲ್ಲಿರುವ ಎ.ಪಿ.ಇ.ಡಿ.ಎ.  ಸಂಸ್ಥೆಯು ಪೌಷ್ಟಿಕಾಂಶದ ಸಿರಿಧಾನ್ಯ ಗುಂಪಿನಿಂದ ಈ ವಿಶಿಷ್ಟ ಉತ್ಪನ್ನಗಳನ್ನು ಆಯ್ಕೆ ಮಾಡಿದೆ ಮತ್ತು ಜಾಗತಿಕ ಸಿರಿಧಾನ್ಯ ಕ್ರಾಂತಿಯನ್ನು ತರುವ ಗುರಿಯನ್ನು ಜಾಗತಿಕ ಮಾರುಕಟ್ಟೆಯಲ್ಲಿ ಪ್ರದರ್ಶಿಸುತ್ತದೆ. ಇಟಲಿಯ ರೋಮ್‌ ನಲ್ಲಿರುವ ತನ್ನ ಪ್ರಧಾನಕೇಂದ್ರದಲ್ಲಿ ಎಫ್‌.ಎ.ಒ. ಆಯೋಜಿಸಿದ್ದ ಇಂಟರ್ನ್ಯಾಷನಲ್ ಇಯರ್ ಆಫ್ ಮಿಲೆಟ್ಸ್ 2023 ರ ಉದ್ಘಾಟನಾ ಸಮಾರಂಭದಲ್ಲಿ ವಿವಿಧ ಬಗೆಯ ಸಿರಿಧಾನ್ಯ ಮತ್ತು ಮೌಲ್ಯವರ್ಧಿತ ಸಿರಿಧಾನ್ಯ ಉತ್ಪನ್ನಗಳನ್ನು ಎ.ಪಿ.ಇ.ಡಿ.ಎ.  ಪ್ರದರ್ಶಿಸಿತು. ಜಕಾರ್ತ, ಮೆಡಾನ್, ನೇಪಾಳ, ಬ್ರಸೆಲ್ಸ್, ಬೆಲ್ಜಿಯಂನಲ್ಲಿ ಸಿರಿಧಾನ್ಯ ರಫ್ತು ಪ್ರಚಾರಕ್ಕಾಗಿ ಖರೀದಿದಾರ-ಮಾರಾಟಗಾರರ ಸಭೆಯನ್ನು ಎ.ಪಿ.ಇ.ಡಿ.ಎ. ಆಯೋಜಿಸಿದೆ. ಇದರ ಜೊತೆಗೆ, ಮಲೇಷ್ಯಾ, ಇ.ಯು., ಯು.ಎ.ಇ, ಮಲೇಷ್ಯಾ, ಜಪಾನ್ ಮತ್ತು ಅಲ್ಜೀರಿಯಾದೊಂದಿಗೆ ವರ್ಚುವಲ್ ಖರೀದಿದಾರರ ಮಾರಾಟಗಾರರ ಸಭೆಯನ್ನು ಕೂಡಾ ಎ.ಪಿ.ಇ.ಡಿ.ಎ. ಮೂಲಕ ಆಯೋಜಿಸಲಾಗಿದೆ.

ಗಲ್ಫುಡ್ 2023 ಪ್ರದರ್ಶನದ  ಸಂದರ್ಭದಲ್ಲಿ ವಿಶೇಷವಾದ ಸಿರಿಧಾನ್ಯ ಗ್ಯಾಲರಿಯನ್ನು ಸ್ಥಾಪಿಸಲಾಯಿತು, ಇದರಲ್ಲಿ ಸ್ಟಾರ್ಟ್‌ಅಪ್‌ಗಳು, ಹೊಸ ಉದ್ಯಮಿಗಳು, ಎಫ್.ಪಿ.ಒ.ಗಳು, ರಫ್ತುದಾರರು, ಮಹಿಳಾ ಉದ್ಯಮಿಗಳು ತಮ್ಮ ಸಿರಿಧಾನ್ಯ ಉತ್ಪನ್ನಗಳನ್ನು ಪ್ರದರ್ಶಿಸಿದರು. ಪ್ರಪಂಚದಾದ್ಯಂತದ ಆಮದುದಾರರು ಮತ್ತು 125 ದೇಶಗಳಿಂದ 5000 ಕಂಪನಿಗಳು ಪ್ರದರ್ಶನದಲ್ಲಿ ಭಾಗವಹಿಸುವ ಮೂಲಕ ಭಾರತೀಯ ಸಿರಿಧಾನ್ಯ ಮತ್ತು ಅದರ ಮೌಲ್ಯವರ್ಧಿತ ಉತ್ಪನ್ನಗಳಿಗೆ ವ್ಯಾಪಕ ಪ್ರಚಾರವನ್ನು ನೀಡಿದರು.

ವಿದೇಶದಲ್ಲಿರುವ ಭಾರತೀಯ ರಾಯಭಾರಿಗಳ ಸಹಯೋಗದೊಂದಿಗೆ ಎ.ಪಿ.ಇ.ಡಿ.ಎ. ಸಂಸ್ಥೆಯು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಭಾರತೀಯ ಸಿರಿಧಾನ್ಯಗಳನ್ನು ಪ್ರಚಾರ ಮಾಡಿತು. ಸಿರಿಧಾನ್ಯ ಉತ್ಪನ್ನಗಳನ್ನು ವಿವಿಧ ಸ್ಟಾರ್ಟ್ ಅಪ್‌ಗಳಿಂದ ಪಡೆಯಲಾಗಿದೆ ಮತ್ತು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಪ್ರಚಾರಕ್ಕಾಗಿ ದೋಹಾ, ಕತಾರ್, ಇಟಲಿ, ಉಜ್ಬೇಕಿಸ್ತಾನ್, ಬಹ್ರೇನ್, ಮಲೇಷ್ಯಾ, ರಷ್ಯಾ, ಟೋಕಿಯೊ, ಇಂಡೋನೇಷ್ಯಾ, ರಿಪಬ್ಲಿಕ್ ಆಫ್ ಕೊರಿಯಾ ಸೌದಿ ಅರೇಬಿಯಾ, ಪರ್ತ್, ಡೆನ್ಮಾರ್ಕ್, ಅರ್ಜೆಂಟೀನಾ, ಈಜಿಪ್ಟ್, ಕೆನಡಾ, ಗ್ವಾಟೆಮಾಲಾ, ಅಲ್ಜೀರಿಯಾ ಮತ್ತು ಚೀನಾ ಮುಂತಾದ ವಿವಿಧ ದೇಶಗಳಲ್ಲಿನ ಭಾರತದ ರಾಯಭಾರ ಕಚೇರಿಗೆ ಕಳುಹಿಸಲಾಗಿದೆ.

ಜಾಗತಿಕ ವ್ಯಾಪ್ತಿಯನ್ನು ವಿಸ್ತರಿಸುವ ಅವಿಸ್ಮರಣೀಯ ಪ್ರಯತ್ನಗಳೊಂದಿಗೆ 2025 ರ ವೇಳೆಗೆ 100 ಮಿಲಿಯನ್ ಯು.ಎಸ್. ಡಾಲರ್ ಗುರಿಗಳನ್ನು ಸಾಧಿಸಲು ಸಿರಿಧಾನ್ಯ ಮತ್ತು ಅದರ ಮೌಲ್ಯವರ್ಧಿತ ಉತ್ಪನ್ನಗಳೊಂದಿಗೆ ಜಾಗತಿಕ ವ್ಯಾಪ್ತಿಯನ್ನು ವಿಸ್ತರಿಸಲು ಎ.ಪಿ.ಇ.ಡಿ.ಎ. ಸಂಸ್ಥೆಯು  ದೃಢವಾದ ವ್ಯೂಹಾತ್ಮಕ ಕಾರ್ಯತಂತ್ರವನ್ನು ರೂಪಿಸಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಶ್ರೀ ಅನ್ನ ಎಂದು ಜನಪ್ರಿಯವಾಗಿರುವ ಪೌಷ್ಟಿಕಾಂಶ ಪೂರಿತ ಶ್ರೀಮಂತ ಭಾರತೀಯ ಸಿರಿಧಾನ್ಯಗಳ ವೈವಿಧ್ಯಮಯ ಅನನ್ಯ ಪ್ರಕಾರಗಳೊಂದಿಗೆ - ಭಾರತವು ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷ 2023 ರಲ್ಲಿ ಮುನ್ನಡೆಯುತ್ತಿದೆ.

ಭಾರತವು ಸಿರಿಧಾನ್ಯಗಳ ನವೀನ ಮೌಲ್ಯವರ್ಧಿತ ಉತ್ಪನ್ನಗಳ ಶ್ರೇಣಿಯೊಂದಿಗೆ ಪೌಷ್ಟಿಕಾಂಶದ ಸಿರಿಧಾನ್ಯಗಳ ವೈವಿಧ್ಯಮಯ ಪ್ರಕಾರಗಳನ್ನು  ಪ್ರವರ್ಧಮಾನಕ್ಕೆ ತರುತ್ತಿದೆ. ಭಾರತೀಯ ಸಿರಿಧಾನ್ಯ ಸಂಶೋಧನಾ ಸಂಸ್ಥೆ ಮತ್ತು ಆಯಾ ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳ ಸಹಯೋಗದೊಂದಿಗೆ ಸಿರಿಧಾನ್ಯ ಆಧಾರಿತ ಮೌಲ್ಯವರ್ಧಿತ ಉತ್ಪನ್ನಗಳ ಶ್ರೇಣಿಯನ್ನು ಅಭಿವೃದ್ಧಿಪಡಿಸಲು 200 ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳನ್ನು ಉತ್ತೇಜನ ಕೊಡಲಾಗಿದೆ.  ತಿನ್ನಲು ಸಿದ್ಧವಾಗಿರುವ, ಅಡುಗೆ ಮಾಡಲು ಸಿದ್ಧವಾಗಿರುವ ಮತ್ತು ಪೂರೈಕೆ ಮಾಡಲು ಸಿದ್ಧವಾಗಿರುವ, ಊಟ ಮಾಡಲು ಲಭ್ಯವಾಗುವ ರೀತಿಯಲ್ಲಿ ಎಲ್ಲಾ ವಯಸ್ಸಿನವರಿಗೆ ಸೂಕ್ತವಾದ ಆರೋಗ್ಯಕರ ಆಹಾರವಾಗಿ ನಾನಾ ತರದ ಉತ್ಪನ್ನಗಳ ವೈವಿಧ್ಯತೆಯಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ.

ಭಾರತವು ಅತಿ ಹೆಚ್ಚು ಸಿರಿಧಾನ್ಯ ಉತ್ಪಾದಿಸುವ ದೇಶವಾಗಿದೆ. ಸಿರಿಧಾನ್ಯ ಬೆಳೆಯುವ ಪ್ರಮುಖ ರಾಜ್ಯಗಳಾದ ರಾಜಸ್ಥಾನ, ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ಮಧ್ಯಪ್ರದೇಶ ಇತ್ಯಾದಿಗಳಲ್ಲಿ ಉತ್ಪಾದಿಸುವ ವ್ಯಾಪಕ ಶ್ರೇಣಿಯ ಸಿರಿಧಾನ್ಯಗಳಿಂದ ದೇಶವು ಸಮೃದ್ಧವಾಗಿದೆ. ಭಾರತವು 17.96 ಮಿಲಿಯನ್ ಮೆಟ್ರಿಕ್ ಟನ್ ಸಿರಿಧಾನ್ಯ ಉತ್ಪಾದಿಸುತ್ತದೆ. ಭಾರತದಲ್ಲಿ ಬೆಳೆಯುವ ಸಿರಿಧಾನ್ಯ ಎಂದರೆ ಸಜ್ಜೆ (ಬಾಜ್ರಾ), ಜೋಳ, ರಾಗಿ, ಹಾರಕ, ಕೊರಲೆ, ನವಣೆ, ಊದಲು ಮತ್ತು ಸಣ್ಣ ಸಿರಿಧಾನ್ಯಗಳಾದ ಪ್ರೊಸೊ, ಕೊಡೋ, ಲಿಟಲ್, ಫಾಕ್ಸ್‌ಟೇಲ್, ಬ್ರೌನ್‌ಟಾಪ್, ಬಾರ್ನ್ಯಾರ್ಡ್, ಅಮರಂಥಸ್ ಹಾಗೂ ಬಕ್‌ವೀಟ್ ಗಳಾಗಿವೆ. ಭಾರತ ಸರ್ಕಾರವು ತನ್ನ ರಾಷ್ಟ್ರೀಯ ಆಹಾರ ಭದ್ರತಾ ಮಿಷನ್‌ನ ಭಾಗವಾಗಿ ಸಿರಿಧಾನ್ಯ ಉತ್ಪಾದನೆಯನ್ನು ಉತ್ತೇಜಿಸುತ್ತಿದೆ. ಈ ಅಂಶಗಳ ಪರಿಣಾಮವಾಗಿ, ಮುಂಬರುವ ವರ್ಷಗಳಲ್ಲಿ ಭಾರತದಲ್ಲಿ ಸಿರಿಧಾನ್ಯ ಉತ್ಪಾದನೆಯು ಗಣನೀಯವಾಗಿ ಬೆಳೆಯುವುದನ್ನು ನಿರೀಕ್ಷಿಸಲಾಗಿದೆ.

ನಾವು ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷ 2023 ರ ಸಂಭ್ರಮದಲ್ಲಿ ಮುಂದುವರಿಯುತ್ತಿರುವಂತೆ, ಭಾರತವು ಸಿರಿಧಾನ್ಯ ಪಿಜ್ಜಾ ಬೇಸ್, ಸಿರಿಧಾನ್ಯ ಐಸ್ ಕ್ರೀಮ್‌ಗಳು, ಐಸ್ ಕ್ರೀಮ್ ಕೋನ್‌ಗಳು ಮತ್ತು ಸಿರಿಧಾನ್ಯ ಕಪ್‌ಗಳು, ಸಿರಿಧಾನ್ಯ ಕೇಕ್ ಮತ್ತು ಸಿರಿಧಾನ್ಯ ಬ್ರೌನಿಗಳು, ಬೆಳಗಿನ ಉಪಾಹಾರ ಧಾನ್ಯಗಳು, ಸಾಂಪ್ರದಾಯಿಕ ಭಾರತೀಯ ದೋಸೆಗಳಿಂದ ಹಿಡಿದು ವಿಶಿಷ್ಟವಾದ ಸಿರಿಧಾನ್ಯ ಮೌಲ್ಯವರ್ಧಿತ ಉತ್ಪನ್ನಗಳಿಂದ ಸಮೃದ್ಧವಾಗಿದೆ. ಸಿರಿಧಾನ್ಯ ಅವಲಕ್ಕಿ (ಪೋಹಾ), ಸಿರಿಧಾನ್ಯ ಉಪ್ಪಿಟ್ಟು(ಉಪ್ಮಾ), ಪಾಸ್ಟಾ, ನೂಡಲ್ಸ್ ಸಿರಿಧಾನ್ಯ  ಹಾಗೂ ಹಾಲು, ಚಹಾ, ಜೊತೆಗೆ ಸೇವಿಸಬಹುದಾದ ಸಿರಿಧಾನ್ಯ ಉತ್ಪನ್ನಗಳು, ಟೀ ಕಪ್‌ಗಳು ಪರಿಸರ ಸ್ನೇಹಿಯಾಗಿದ್ದು ಅವುಗಳನ್ನು ನೇರವಾಗಿ ಸೇವಿಸಬಹುದು ಅಥವಾ ಫೀಡ್ / ಮೇವಾಗಿ ಬಳಸಬಹುದು.  

ಇಡ್ಲಿ, ದೋಸೆ, ಇಡಿಯಪ್ಪಂ, ರೊಟ್ಟಿ, ಪುಟ್ಟು, ಉಪ್ಮಾ, ಗಂಜಿ, ಚಪಾತಿ, ಪ್ಯಾನ್‌ಕೇಕ್‌ಗಳು, ವರ್ಮಿಸೆಲ್ಲಿ ಉಪ್ಮಾ, ಪಾಸ್ತಾ, ನೂಡಲ್ಸ್, ಮೆಕರೋನಿ, ರವೆ/ಸೂಜಿ, ಮ್ಯೂಸ್ಲಿ, ಇನ್‌ಸ್ಟಂಟ್ ಮಿಕ್ಸ್‌ ಗಳಂತಹ ಸಿರಿಧಾನ್ಯಗಳೊಂದಿಗೆ ಬಹಳಷ್ಟು ಮೌಲ್ಯವರ್ಧಿತ ಉತ್ಪನ್ನಗಳನ್ನು ರಚಿಸಲಾಗಿದೆ. ಬೆಳಗಿನ ಉಪಾಹಾರವಾಗಿ ಮುದ್ದೆ, ಹಲ್ವ, ಅತಿರಸಂ, ಕೇಸರಿ, ಪೌಷ್ಠಿಕಾಂಶದ ಉಂಡೆ, ಪಾಯಸ/ಖೀರ್‌ ಸಿಹಿತಿಂಡಿ, ವಡ, ಪಕೋಡ, ಮುರುಕು, ಬೇಲ್‌ಪುರಿ, ಬೋಳಿ, ಹಪ್ಪಳ, ಮಿಶ್ರಣಕ್ಕೆ ಸಿದ್ಧ, ಚಕ್ಕೆ, ಪಫ್‌ಗಳು, ಸಿರಿಧಾನ್ಯ ಲಡ್ಡು, ಸಿರಿಧಾನ್ಯ ರಸ್ಕ್‌ಗಳು ಮತ್ತು ಕೆಲವು ಖಾದ್ಯಗಳು. ಬ್ರೆಡ್, ಕೇಕ್, ಕುಕೀಸ್, ಸೂಪ್ ಸ್ಟಿಕ್‌ಗಳು, ತಿನ್ನಬಹುದಾದ ಬಿಸ್ಕತ್ತು ಕಪ್‌ಗಳು, ಹೆಲ್ತ್ ಬಾರ್‌ಗಳು, ಸ್ಪ್ರೆಡ್‌ಗಳು, ಮಫಿನ್‌ಗಳು, ಇತ್ಯಾದಿ ಸಿರಿಧಾನ್ಯ ಆಧಾರಿತ ಬೇಕರಿ ಉತ್ಪನ್ನಗಳು. ಬಿಯರ್, ಸೂಪ್‌ಗಳು, ಮಾಲ್ಟೆಡ್ ಸಿರಿಧಾನ್ಯ ಆಧಾರಿತ ಪಾನೀಯ, ಮೊಳಕೆಯೊಡೆದ ಸಿರಿಧಾನ್ಯ ಪಾನೀಯ ಮಿಶ್ರಣ, ಮಲ್ಟಿಗ್ರೇನ್ ಪಾನೀಯ ಮಿಶ್ರಣ, ಪಾನೀಯಗಳನ್ನು ಕುಡಿಯಲು ಸಿದ್ಧ ಸಿರಿಧಾನ್ಯಯೊಂದಿಗೆ ಸಹ ಉತ್ಪನ್ನಗಳಾಗಿ ಭಕ್ಷ-ಪಾನೀಯಗಳನ್ನು ರಚಿಸಲಾಗಿದೆ. ಇವುಗಳ ಜೊತೆಗೆ, ಸಿರಿಧಾನ್ಯಯಿಂದ ರಚಿಸಲಾದ ಇತರ ಕೆಲವು ಆಹಾರ ಪದಾರ್ಥಗಳು ಬಿರಿಯಾನಿ, ವಿನಿಂಗ್ ಆಹಾರಗಳು/ಶಿಶು ಆಹಾರಗಳು, ಚಾಟ್ ಮಿಶ್ರಣಗಳು ಇತ್ಯಾದಿಗಳನ್ನೂ ತಯಾರಿಸಲಾಗಿದೆ.

ಎ.ಪಿ.ಇ.ಡಿ.ಎ. ಸಂಸ್ಥೆಯು  ಭಾರತವು ನೀಡುವ ಪೌಷ್ಟಿಕ ಸಿರಿಧಾನ್ಯಗಳನ್ನು ಜಗತ್ತಿಗೆ ತೋರಿಸಿದೆ. ಸಿರಿಧಾನ್ಯ ಉತ್ತೇಜನದ ಉಪಕ್ರಮಗಳು ಸಿರಿಧಾನ್ಯ ರಫ್ತು ಹೆಚ್ಚಳವನ್ನು ತೋರಿಸುವ ಧನಾತ್ಮಕ ಪರಿಣಾಮ ಬೀರಿದೆ. ಭಾರತವನ್ನು ಪ್ರಮುಖ ಉತ್ಪಾದಕರಿಂದ ಸಿರಿಧಾನ್ಯಗಳ ಪ್ರಮುಖ ಜಾಗತಿಕ ರಫ್ತುದಾರರಿಗೆ ಕೊಂಡೊಯ್ಯಲು ಸಜ್ಜಾಗುತ್ತಿದೆ, ದೇಶಾದ್ಯಂತ ಲಕ್ಷಾಂತರ ಭಾರತೀಯ ರೈತರಿಗೆ ಸಮೃದ್ಧ ಭವಿಷ್ಯಕ್ಕಾಗಿ ಕೊಡುಗೆ ನೀಡುತ್ತಿದೆ ಮತ್ತು ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆಯನ್ನು ಸಾಧಿಸಲು ಅಮೂಲ್ಯವಾದ ಸೇರ್ಪಡೆಗಳನ್ನು ಮಾಡುತ್ತಿದೆ. ಭಾರತೀಯ ಸಿರಿಧಾನ್ಯಗಳ ಒಳ್ಳೆಯಗಣಲಕ್ಷಣಗಳನ್ನು ಜಾಗತಿಕ ಗ್ರಾಹಕರಿಗೆ ತಲುಪಿಸುವ ನೂತನ ಪ್ರಯತ್ನಗಳು ಇದೀಗ ಪ್ರಾರಂಭವಾಗಿದೆ.

***(Release ID: 1908392) Visitor Counter : 207