ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಕ್ರಿಮಿನಲ್ ಕಾನೂನುಗಳಿಗೆ ಸಮಗ್ರ ತಿದ್ದುಪಡಿಗಳ ಪ್ರಕ್ರಿಯೆಯನ್ನು ಪ್ರಾರಂಭಿಸಿದ ಸರಕಾರ

Posted On: 14 MAR 2023 4:03PM by PIB Bengaluru

ಗೃಹ ವ್ಯವಹಾರಗಳ ಇಲಾಖೆಗೆ  ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಯು ತನ್ನ 146 ನೇ ವರದಿಯಲ್ಲಿ ದೇಶದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಸಮಗ್ರ ಮರುಪರಿಶೀಲನೆಯ ಅಗತ್ಯವಿದೆ ಎಂದು ಶಿಫಾರಸು ಮಾಡಿತ್ತು. ಈ ಹಿಂದೆ ಸಂಸದೀಯ ಸ್ಥಾಯಿ ಸಮಿತಿಯು ತನ್ನ 111 ಮತ್ತು 128 ನೇ ವರದಿಗಳಲ್ಲಿ ಆಯಾ ಕಾಯ್ದೆಗಳಲ್ಲಿ ಆಂಶಿಕ ತಿದ್ದುಪಡಿಗಳನ್ನು ತರುವ ಬದಲು ಸಂಸತ್ತಿನಲ್ಲಿ ಸಮಗ್ರ ಶಾಸನವನ್ನು ಮಂಡಿಸುವ ಮೂಲಕ ದೇಶದ ಕ್ರಿಮಿನಲ್ ಕಾನೂನನ್ನು ಸುಧಾರಿಸುವ ಮತ್ತು ತರ್ಕಬದ್ಧಗೊಳಿಸುವ ಅಗತ್ಯವನ್ನು ಒತ್ತಿಹೇಳಿತ್ತು. ಎಲ್ಲರಿಗೂ ಕೈಗೆಟುಕುವ ಮತ್ತು ತ್ವರಿತ ನ್ಯಾಯವನ್ನು ಒದಗಿಸಲು, ಜನ ಕೇಂದ್ರಿತ ಕಾನೂನು ರಚನೆಯನ್ನು ರೂಪಿಸಲು ದೇಶದ ಅಪರಾಧ ಕಾನೂನುಗಳಲ್ಲಿ ಸಮಗ್ರ ಬದಲಾವಣೆಗಳನ್ನು ಮಾಡುವ ಉದ್ದೇಶದಿಂದ, ಸರ್ಕಾರವು ಕ್ರಿಮಿನಲ್ ಕಾನೂನುಗಳಿಗೆ ಸಮಗ್ರ ತಿದ್ದುಪಡಿಗಳ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ, ಅಂದರೆ ಭಾರತೀಯ ದಂಡ ಸಂಹಿತೆ, 1860, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ, 1973 ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆ. 1872. ಇವುಗಳಿಗೆ  ಎಲ್ಲಾ ಭಾಗೀದಾರರೊಂದಿಗೆ  ಸಮಾಲೋಚಿಸಿ ಸಮಗ್ರ ತಿದ್ದುಪಡಿಯನ್ನು ತರುವ ಪ್ರಕ್ರಿಯೆ ಇದಾಗಿದೆ.

ಅಪರಾಧ ಕಾನೂನುಗಳಲ್ಲಿ ಸುಧಾರಣೆಗಳನ್ನು ಸಲಹೆ ಮಾಡಲು  ದಿಲ್ಲಿಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಉಪಕುಲಪತಿಗಳ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಗಿತ್ತು.  ಕ್ರಿಮಿನಲ್ ಕಾನೂನುಗಳ ಸಮಗ್ರ ತಿದ್ದುಪಡಿಗಳಿಗೆ ಸಂಬಂಧಿಸಿದಂತೆ ರಾಜ್ಯಪಾಲರು, ರಾಜ್ಯಗಳ ಮುಖ್ಯಮಂತ್ರಿಗಳು, ಲೆಫ್ಟಿನೆಂಟ್ ಗವರ್ನರ್ (ಎಲ್ಜಿಗಳು) ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಾರರು, ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳು, ವಿವಿಧ ಹೈಕೋರ್ಟುಗಳ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳು, ಬಾರ್ ಕೌನ್ಸಿಲ್ ಆಫ್ ಇಂಡಿಯಾ, ವಿವಿಧ ರಾಜ್ಯಗಳ ಬಾರ್ ಕೌನ್ಸಿಲ್, ವಿವಿಧ ವಿಶ್ವವಿದ್ಯಾಲಯಗಳು / ಕಾನೂನು ಸಂಸ್ಥೆಗಳು ಮತ್ತು ಎಲ್ಲಾ ಸಂಸತ್ ಸದಸ್ಯರಿಂದ ಗೃಹ ಸಚಿವಾಲಯವು ಸಲಹೆಗಳನ್ನು ಕೋರಿದೆ. ಸಮಿತಿಯ ಶಿಫಾರಸುಗಳು ಮತ್ತು ಎಲ್ಲಾ ಭಾಗೀದಾರರಿಂದ  ಪಡೆದ ಸಲಹೆಗಳನ್ನು ಗಣನೆಗೆ ತೆಗೆದುಕೊಂಡು ಸಮಗ್ರ ಶಾಸನವನ್ನು ತರಲು ಸರ್ಕಾರ ಬದ್ಧವಾಗಿದೆ. ಭಾಗೀದಾರರ ವಿಭಿನ್ನ ದೃಷ್ಟಿಕೋನಗಳ ವಿಸ್ತಾರ ವ್ಯಾಪ್ತಿಯನ್ನು  ಗಮನಿಸಿದಾಗ ಅಂತಹ ಕಾನೂನುಗಳ ಶಾಸನವು ಅತ್ಯಂತ ಸಂಕೀರ್ಣ ಮತ್ತು ಸುದೀರ್ಘ ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ. ಇಡೀ ಪ್ರಕ್ರಿಯೆಯ  ಕಾರ್ಯವಿಧಾನವು ಸುದೀರ್ಘವಾಗಿದ್ದು, ಕಾಲಾವಕಾಶ ಅವಶ್ಯವಿರುವುದರಿಂದ  ಈ ಶಾಸಕಾಂಗ ಪ್ರಕ್ರಿಯೆಗೆ ಯಾವುದೇ ಕಾಲಮಿತಿಯನ್ನು ನಿಗದಿಪಡಿಸುವುದು  ಸಾಧ್ಯವಿಲ್ಲ.

ಗೃಹ ವ್ಯವಹಾರಗಳ ಸಹಾಯಕ  ಸಚಿವ ಶ್ರೀ ಅಜಯ್ ಕುಮಾರ್ ಮಿಶ್ರಾ ಅವರು ಇಂದು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ ಲಿಖಿತ ಉತ್ತರದಲ್ಲಿ ಈ ವಿಷಯ ತಿಳಿಸಿದ್ದಾರೆ.

****


(Release ID: 1906817) Visitor Counter : 209


Read this release in: English , Tamil , Telugu