ಪ್ರವಾಸೋದ್ಯಮ ಸಚಿವಾಲಯ

2023 ರ ಮಾರ್ಚ್ 17 ಮತ್ತು 18 ರಂದು ಭಾರತವು ಕಾಶಿಯಲ್ಲಿ ಶಾಂಘೈ ಸಹಕಾರ ಸಂಸ್ಥೆ (ಎಸ್.ಸಿ.ಒ) ಪ್ರವಾಸೋದ್ಯಮ ಸಚಿವರ ಸಭೆ (ಟಿಎಂಎಂ) ಯನ್ನು  ಆಯೋಜಿಸಲಿದೆ.


2023ರ ಮಾರ್ಚ್ 17ರಂದು ಪ್ರವಾಸೋದ್ಯಮ ಸಚಿವರ ಸಭೆಯಲ್ಲಿ ಪ್ರವಾಸೋದ್ಯಮ ಜಂಟಿ ಕ್ರಿಯಾ ಯೋಜನೆಯನ್ನು ಅಂಗೀಕರಿಸಲಾಗುವುದು.

Posted On: 13 MAR 2023 6:08PM by PIB Bengaluru

ಶಾಂಘೈ ಸಹಕಾರ ಸಂಘಟನೆಯ (ಎಸ್. ಸಿ.ಒ) ಪ್ರವಾಸೋದ್ಯಮ ಸಚಿವರ ಸಭೆಯನ್ನು (ಟಿಎಂಎಂ) ಭಾರತವು 2023 ರ ಮಾರ್ಚ್ 17 ಮತ್ತು 18 ರಂದು ಕಾಶಿಯಲ್ಲಿ (ವಾರಣಾಸಿ) ಆಯೋಜಿಸಲಿದೆ. ಪ್ರಸ್ತುತ ಭಾರತವು ಶಾಂಘೈ ಸಹಕಾರ ಸಂಘಟನೆಯ (ಎಸ್ ಸಿಒ) ಅಧ್ಯಕ್ಷ ರಾಷ್ಟ್ರವಾಗಿದೆ.

 ಟಿಎಂಎಂ.ನಲ್ಲಿ ಎಸ್.ಸಿ.ಒ ಸದಸ್ಯ ರಾಷ್ಟ್ರಗಳ ನಡುವೆ ಪ್ರವಾಸೋದ್ಯಮದಲ್ಲಿ ಸಹಕಾರ ಅಭಿವೃದ್ಧಿಯ ಪ್ರವಾಸೋದ್ಯಮ ಜಂಟಿ ಕ್ರಿಯಾ ಯೋಜನೆಯನ್ನು ಅಂಗೀಕರಿಸಲಾಗುವುದು. ಟಿಎಂಎಂಗೆ ಮುಂಚಿತವಾಗಿ 2023 ರ ಮಾರ್ಚ್ 14 ಮತ್ತು 15 ರಂದು 2 ನೇ ಪ್ರವಾಸೋದ್ಯಮ ತಜ್ಞರ ಕಾರ್ಯ ಗುಂಪಿನ ಸಭೆ ನಡೆಯಲಿದೆ, ಇದು 2023 ರ ಮಾರ್ಚ್ 17 ರಂದು ಎಸ್.ಸಿ.ಒ ಪ್ರವಾಸೋದ್ಯಮ ಸಚಿವರ ಸಭೆಯಲ್ಲಿ ಅಂಗೀಕರಿಸುವುದಕ್ಕೆ ಮಂಡನೆಯಾಗುವ ಪ್ರವಾಸೋದ್ಯಮ ಜಂಟಿ ಕ್ರಮವನ್ನು ಚರ್ಚಿಸಿ ಅಂತಿಮಗೊಳಿಸುತ್ತದೆ.

2 ನೇ ಇಡಬ್ಲ್ಯೂಜಿ ಸಭೆಯಲ್ಲಿ ಚರ್ಚಿಸಲಾಗುವ ಜಂಟಿ ಕ್ರಿಯಾ ಯೋಜನೆಯಲ್ಲಿ ಎಸ್.ಸಿ.ಒ.  ಪ್ರವಾಸೋದ್ಯಮ ಬ್ರಾಂಡ್ ಉತ್ತೇಜನ, ಪ್ರವಾಸೋದ್ಯಮದಲ್ಲಿ ಎಸ್.ಸಿ.ಒ. ಸದಸ್ಯ ರಾಷ್ಟ್ರಗಳ ಸಾಂಸ್ಕೃತಿಕ ಪರಂಪರೆಯನ್ನು ಉತ್ತೇಜಿಸುವುದು, ಪ್ರವಾಸೋದ್ಯಮದಲ್ಲಿ ಮಾಹಿತಿ ಮತ್ತು ಡಿಜಿಟಲ್ ತಂತ್ರಜ್ಞಾನದ ಹಂಚಿಕೆ ಮತ್ತು ವಿನಿಮಯ, ವೈದ್ಯಕೀಯ ಮತ್ತು ಆರೋಗ್ಯ ಪ್ರವಾಸೋದ್ಯಮದಲ್ಲಿ ಪರಸ್ಪರ ಸಹಕಾರವನ್ನು ಉತ್ತೇಜಿಸುವುದು, ಸೇವೆಗಳ ಗುಣಮಟ್ಟವನ್ನು ಸುಧಾರಿಸುವುದು ಸೇರಿವೆ. 2023 ರ ಮಾರ್ಚ್ 17 ರಂದು ಕಾಶಿಯಲ್ಲಿ ನಡೆಯಲಿರುವ ಎಸ್.ಸಿ.ಒ.  ಪ್ರವಾಸೋದ್ಯಮ ಸಚಿವರ ಸಭೆಯಲ್ಲಿ ಜಂಟಿ ಕ್ರಿಯಾ ಯೋಜನೆಯನ್ನು ಅಂಗೀಕರಿಸಲಾಗುವುದು.

ಭಾರತವು 2023 ರ ಎಸ್.ಸಿ.ಒ (ಶಾಂಘೈ ಸಹಕಾರ ಸಂಘಟನೆಯ) ಅಧ್ಯಕ್ಷತೆಯನ್ನು ವಹಿಸಿಕೊಂಡಿದೆ. ಭಾರತದ ಅಧ್ಯಕ್ಷತೆಯಲ್ಲಿ ಪ್ರವಾಸೋದ್ಯಮ ಟ್ರ್ಯಾಕ್ ಚಟುವಟಿಕೆಗಳ ಭಾಗವಾಗಿ, ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯವು (i) ಎಸ್.ಎ.ಟಿ.ಟಿ.ಇ. (ದಕ್ಷಿಣ ಏಷ್ಯಾದ ಪ್ರಯಾಣ ಮತ್ತು ಪ್ರವಾಸೋದ್ಯಮ ವಿನಿಮಯ) ಸಂದರ್ಭದಲ್ಲಿ 2023 ರ ಫೆಬ್ರವರಿ 9 ರಿಂದ 11 ರವರೆಗೆ ಎಸ್.ಸಿ.ಒ ಪ್ರವಾಸೋದ್ಯಮ ಮಾರ್ಟ್(ಮಾರುಕಟ್ಟೆ ಕೇಂದ್ರ)  (ii), 2023 ರ ಮಾರ್ಚ್ 13 ರಿಂದ 18 ರವರೆಗೆ ಎಸ್. ಸಿ.ಒ ತಜ್ಞರ ಮಟ್ಟದ ಪ್ರವಾಸೋದ್ಯಮ ಕಾರ್ಯ ಗುಂಪಿನ ಸಭೆ ಮತ್ತು ಕಾಶಿ (ವಾರಣಾಸಿ) ಯಲ್ಲಿ ಎಸ್ ಸಿಒ ಪ್ರವಾಸೋದ್ಯಮ ಸಚಿವರ ಸಭೆ ಮತ್ತು (3) ಮುಂಬೈನಲ್ಲಿ ಎಸ್ ಸಿಒ ಆಹಾರ ಮೇಳ (ಉತ್ಸವ)ದಂತಹ ವಿವಿಧ ಚಟುವಟಿಕೆಗಳನ್ನು ಯೋಜಿಸಿದೆ.

ಎಸ್.ಸಿ.ಒ.ದ ಎಂಟು ಸದಸ್ಯ ರಾಷ್ಟ್ರಗಳು ವಿಶ್ವ ಜನಸಂಖ್ಯೆಯ ಸುಮಾರು 42% ಮತ್ತು ಜಾಗತಿಕ ಜಿಡಿಪಿಯ 25% ನ್ನು ಪ್ರತಿನಿಧಿಸುತ್ತವೆ. ಈ ಪ್ರದೇಶಗಳಲ್ಲಿ  ಅಪಾರ ಪ್ರವಾಸೋದ್ಯಮ ಸಾಮರ್ಥ್ಯವಿದೆ, ಇದನ್ನು ಎಸ್ ಸಿಒ ರಾಷ್ಟ್ರಗಳ ಬಗ್ಗೆ ಜಾಗೃತಿ ಹೆಚ್ಚಿಸುವ ಮೂಲಕ ಉತ್ತೇಜಿಸಬಹುದು. ಎಸ್ ಸಿಒ ಸದಸ್ಯ ರಾಷ್ಟ್ರಗಳು, ವೀಕ್ಷಕರು ಮತ್ತು ಪಾಲುದಾರರ ಒಟ್ಟು ಸಾಂಸ್ಕೃತಿಕ ಪರಂಪರೆಯಲ್ಲಿ 207 ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳು ಸೇರಿವೆ. ಈ ಪ್ರದೇಶದ ಈ ವಿಶಿಷ್ಟ ಉತ್ಪನ್ನವನ್ನು ಪ್ರದರ್ಶಿಸಲು, ಎಸ್ ಸಿಒ ಸದಸ್ಯ ರಾಷ್ಟ್ರಗಳು ಪ್ರತಿ ವರ್ಷ ಒಂದು ನಗರವನ್ನು (ಎಸ್ಸಿಒ ಸದಸ್ಯ ರಾಷ್ಟ್ರಗಳಿಂದ) ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ರಾಜಧಾನಿಯಾಗಿ ಪರಿಗಣಿಸಲು ನಿರ್ಧರಿಸಿವೆ. ಈ ಉಪಕ್ರಮದ ಅಡಿಯಲ್ಲಿ "ಕಾಶಿ" (ವಾರಣಾಸಿ) ಯನ್ನು  ಎಸ್ ಸಿಒದ ಮೊದಲ ಸಾಂಸ್ಕೃತಿಕ ರಾಜಧಾನಿಯಾಗಿ ಗೊತ್ತುಪಡಿಸಲಾಗಿದೆ ಎಂಬುದು ಒಂದು ಆಸಕ್ತಿಕರ ಉಲ್ಲೇಖನೀಯ ಸಂಗತಿಯಾಗಿದೆ. 

ಶಾಂಘೈ ಸಹಕಾರ ಸಂಘಟನೆ (ಎಸ್.ಸಿ.ಒ.) 2001 ರ ಜೂನ್ 15ರಂದು ಶಾಂಘೈನಲ್ಲಿ ಸ್ಥಾಪಿತವಾದ ಅಂತರ ಸರ್ಕಾರಿ ಸಂಸ್ಥೆಯಾಗಿದೆ. ಎಸ್.ಸಿ.ಒ.  ಪ್ರಸ್ತುತ ಎಂಟು ಸದಸ್ಯ ರಾಷ್ಟ್ರಗಳನ್ನು (ಚೀನಾ, ಭಾರತ, ಕಜಕಿಸ್ತಾನ್, ಕಿರ್ಗಿಸ್ತಾನ್, ರಷ್ಯಾ, ಪಾಕಿಸ್ತಾನ, ತಜಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್), ಪೂರ್ಣ ಸದಸ್ಯತ್ವವನ್ನು ಸ್ವೀಕರಿಸಲು ಆಸಕ್ತಿ ಹೊಂದಿರುವ ನಾಲ್ಕು ವೀಕ್ಷಕ ರಾಷ್ಟ್ರಗಳು (ಅಫ್ಘಾನಿಸ್ತಾನ, ಬೆಲಾರಸ್, ಇರಾನ್ ಮತ್ತು ಮಂಗೋಲಿಯಾ) ಮತ್ತು ಆರು "ಸಂವಾದ ಪಾಲುದಾರರು" (ಅರ್ಮೇನಿಯಾ, ಅಜೆರ್ಬೈಜಾನ್, ಕಾಂಬೋಡಿಯಾ, ನೇಪಾಳ, ಶ್ರೀಲಂಕಾ ಮತ್ತು ಟರ್ಕಿ)ಗಳನ್ನು  ಒಳಗೊಂಡಿದೆ.

****



(Release ID: 1906715) Visitor Counter : 182


Read this release in: English , Urdu , Hindi , Punjabi