ಗೃಹ ವ್ಯವಹಾರಗಳ ಸಚಿವಾಲಯ

ನವದೆಹಲಿಯಲ್ಲಿ ಮುಕ್ತಾಯಗೊಂಡ ʻವಿಪತ್ತು ಅಪಾಯ ತಗ್ಗಿಸುವ ರಾಷ್ಟ್ರೀಯ ವೇದಿಕೆ’ಯ (ಎನ್‌ಪಿಡಿಆರ್‌ಆರ್) 3ನೇ ಅಧಿವೇಶನದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಪ್ರಧಾನ ಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಭಾಷಣ


ವಿಪತ್ತು ಅಪಾಯ ತಗ್ಗಿಸುವಿಕೆ ಮತ್ತು ನಿರ್ವಹಣೆಯು ಪ್ರಧಾನಮಂತ್ರಿಯವರ ಆಶಯದಂತೆ ಜನಾಂದೋಲನವಾಗಿ ಬದಲಾಗುತ್ತಿದೆ: ಪಿ.ಕೆ.ಮಿಶ್ರಾ

"ಪ್ರಧಾನ ಮಂತ್ರಿಯವರ 10 ಅಂಶಗಳ ಕಾರ್ಯಸೂಚಿಯು ಸ್ಥಳೀಯ ಸಾಮರ್ಥ್ಯಗಳು ಮತ್ತು ಉಪಕ್ರಮಗಳನ್ನು ನಿರ್ಮಿಸುವ ಅಗತ್ಯವನ್ನು, ವಿಶೇಷವಾಗಿ ವಿಪತ್ತು ಅಪಾಯ ನಿರ್ವಹಣೆಯಲ್ಲಿ ಮಹಿಳಾ ನಾಯಕತ್ವವನ್ನು ಒತ್ತಿಹೇಳುತ್ತದೆ"

"ವಿಪತ್ತು ಅಪಾಯ ನಿರ್ವಹಣಾ ವ್ಯವಸ್ಥೆಯನ್ನು ವೃತ್ತಿಪರಗೊಳಿಸುವುದು ಮತ್ತು ಜನರ ಅಗತ್ಯಗಳಿಗೆ ಸ್ಪಂದಿಸುವ ಕಾರ್ಯಕ್ರಮಗಳು ಮತ್ತು ಮಧ್ಯಸ್ಥಿಕೆಗಳನ್ನು ಅಭಿವೃದ್ಧಿಪಡಿಸುವುದು ಮುಂದಿನ ಹಾದಿಯಾಗಿದೆ"

"ಅತ್ಯಂತ ದುರ್ಬಲರನ್ನು ಬೆಂಬಲಿಸಲು ಮತ್ತು ಅವರ ಜೀವನ ಮತ್ತು ಜೀವನೋಪಾಯವನ್ನು ರಕ್ಷಿಸಲು ನಮಗೆ ಸಾಧ್ಯವಾಗದಿದ್ದರೆ, ನಮ್ಮ ಕೆಲಸದ ಸಂಪೂರ್ಣ ಉದ್ದೇಶವು ವಿಫಲವಾಗುತ್ತದೆ" 

1200ಕ್ಕೂ ಹೆಚ್ಚು ವಿಷಯ ತಜ್ಞರು, ವೈದ್ಯರು, ಶಿಕ್ಷಣ ತಜ್ಞರು ಮತ್ತು ಪ್ರತಿನಿಧಿಗಳು ವಿಪತ್ತು ಅಪಾಯ ತಗ್ಗಿಸುವ ಕುರಿತು ಪ್ರಧಾನಿ ಶ್ರೀ ನರೇಂದ್ರ ಮೋದಿ ಮತ್ತು ʻಸೆಂಡೈ ನಿಯಮಾವಳಿʼ(Sendai Framework) ನೀಡಿದ 10 ಅಂಶಗಳ ಕಾರ್ಯಸೂಚಿಯ ಆಧಾರದ ಮೇಲೆ ವಿಪತ್ತು ಅಪಾಯ ಕಡಿಮೆ ಮಾಡುವ ಸಂಬಂಧ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದರು

 

Posted On: 11 MAR 2023 7:38PM by PIB Bengaluru

ವಿಪತ್ತು ಅಪಾಯ ತಗ್ಗಿಸುವ ರಾಷ್ಟ್ರೀಯ ವೇದಿಕೆಯ (ಎನ್ಪಿಡಿಆರ್ಆರ್) 3 ನೇ ಅಧಿವೇಶನವು ಇಂದು ನವದೆಹಲಿಯಲ್ಲಿ ಮುಕ್ತಾಯಗೊಂಡಿತು. ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಶ್ರೀ ಪಿ.ಕೆ.ಮಿಶ್ರಾ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದರು. ಕೇಂದ್ರ ಗೃಹ ವ್ಯವಹಾರಗಳ ಸಹಾಯಕ ಸಚಿವ ಶ್ರೀ ನಿತ್ಯಾನಂದ ರೈ, ಕೇಂದ್ರ ಗೃಹ ಕಾರ್ಯದರ್ಶಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯ ಮತ್ತು ಕಾರ್ಯದರ್ಶಿ (ಉಸ್ತುವಾರಿ),  ಎನ್‌ಡಿಆರ್‌ಎಫ್ ಮಹಾನಿರ್ದೇಶಕರು, ಎಂಎಚ್‌ಎ, ಎನ್‌ಡಿಎಂಎ, ಎನ್‌ಡಿಆರ್‌ಎಫ್, ಎನ್‌ಐಡಿಎಂ ಮತ್ತು ಇತರ ಮಧ್ಯಸ್ಥಗಾರರ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಶ್ರೀ ಪಿ.ಕೆ. ಮಿಶ್ರಾ ಅವರು ಮಾತನಾಡಿ, ʻವಿಪತ್ತು ಅಪಾಯ ತಗ್ಗಿಸುವಿಕೆʼಯ (ಡಿ.ಆರ್.ಆರ್.) ಕುರಿತಾದ ವಿಷಯಗಳನ್ನು ಒಳಗೊಂಡ 19 ಪೂರ್ವಭಾವಿ ಕಾರ್ಯಕ್ರಮಗಳ ಭಾಗವಾಗಿ ದೇಶಾದ್ಯಂತ ಆಯೋಜಿಸಲಾದ ಚರ್ಚೆಯ ವಿಸ್ತೃತ ವ್ಯಾಪ್ತಿ, ಚರ್ಚೆಗಳ ವಿಸ್ತಾರ ಮತ್ತು ಆಳದ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆಶಯದಂತೆ ವಿಪತ್ತು ಅಪಾಯ ತಗ್ಗಿಸುವಿಕೆಯನ್ನು 'ಜನಾಂದೋಲನ'ವನ್ನಾಗಿ ಪರಿವರ್ತಿಸಲಾಗಿದೆ. "ಬದಲಾಗುತ್ತಿರುವ ಹವಾಮಾನದಲ್ಲಿ ಸ್ಥಳೀಯ ಸದೃಢತೆಯನ್ನು ನಿರ್ಮಿಸುವುದು" ಎಂಬ ಈ ಅಧಿವೇಶನದ ವಿಷಯದ ಮಹತ್ವವನ್ನು ಪ್ರಧಾನ ಕಾರ್ಯದರ್ಶಿ ಒತ್ತಿಹೇಳಿದರು. ಏಕೆಂದರೆ ವಿಪತ್ತು ಅಪಾಯಗಳು ಹೆಚ್ಚುತ್ತಿರುವ ಸಮಯದಲ್ಲಿ ವಿಪತ್ತು ಅಪಾಯ ನಿರ್ವಹಣೆಯನ್ನು ಸ್ಥಳೀಕರಿಸುವ ಅಗತ್ಯವನ್ನು  ಇದು ಪ್ರತಿಬಿಂಬಿಸುತ್ತದೆ. ಶ್ರೀ ಮಿಶ್ರಾ ಅವರು ಪ್ರಧಾನಮಂತ್ರಿಯವರ 10 ಅಂಶಗಳ ಕಾರ್ಯಸೂಚಿಯನ್ನು ಉಲ್ಲೇಖಿಸಿದರು. ಇದು ಸ್ಥಳೀಯ ಸಾಮರ್ಥ್ಯಗಳು ಮತ್ತು ಉಪಕ್ರಮಗಳನ್ನು ನಿರ್ಮಿಸುವ ಅಗತ್ಯವನ್ನು ಒತ್ತಿಹೇಳುತ್ತದೆ. ಜೊತೆಗೆ ವಿಶೇಷವಾಗಿ ವಿಪತ್ತು ಅಪಾಯ ನಿರ್ವಹಣೆಯಲ್ಲಿ ಮಹಿಳಾ ನಾಯಕತ್ವವನ್ನು ಸಾರುತ್ತದೆ.  ಅಧಿವೇಶನಗಳ ನಡಾವಳಿಗಳಿಂದ ಕಲಿತು ಪ್ರಧಾನ ಮಂತ್ರಿಯವರ ಹತ್ತು ಅಂಶಗಳ ಕಾರ್ಯಸೂಚಿ ಮತ್ತು ʻಸೆಂಡೈ ನಿಯಮಾವಳಿʼ (Sendai Framework) ಅನುಷ್ಠಾನಕ್ಕೆ ಅನುವು ಮಾಡುತ್ತದೆ ಎಂದು ಅವರು ಹೇಳಿದರು.

ಶ್ರೀ ಮಿಶ್ರಾ ಅವರು ಮಧ್ಯಸ್ಥಗಾರರಿಗೆ ಅನುಸರಿಸಬೇಕಾದ ಎರಡು ಪ್ರಮುಖ ವಿಷಯಗಳನ್ನು ಸೂಚಿಸಿದರು. ಮೊದಲನೆಯದಾಗಿ, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ವಿಪತ್ತು ಅಪಾಯ ನಿರ್ವಹಣಾ ವ್ಯವಸ್ಥೆಯನ್ನು ವೃತ್ತಿಪರಗೊಳಿಸುವುದು ಮತ್ತು ಎರಡನೆಯದಾಗಿ, ಜನರ ಅಗತ್ಯಗಳಿಗೆ ಸ್ಪಂದಿಸುವ ಕಾರ್ಯಕ್ರಮಗಳು ಮತ್ತು ಮಧ್ಯಸ್ಥಿಕೆಗಳನ್ನು ಅಭಿವೃದ್ಧಿಪಡಿಸುವುದು. ಎನ್‌ಡಿಆರ್‌ಎಫ್‌ ಮತ್ತು ಎಸ್‌ಡಿಆರ್‌ಎಫ್‌ ಆಗಮನದೊಂದಿಗೆ ಸಂಭವಿಸಿದ ವಿಪತ್ತು ಪ್ರತಿಕ್ರಿಯೆಯ ವೃತ್ತಿಪರತೆಯ ಮಾದರಿಯಲ್ಲಿ ವಿಪತ್ತು ಸನ್ನದ್ಧತೆ ಮತ್ತು ವಿಪತ್ತು ತಗ್ಗಿಸುವಿಕೆಯನ್ನು ವೃತ್ತಿಪರಗೊಳಿಸಬೇಕಾಗಿದೆ ಎಂದು ಅವರು ಶ್ರೀ ಮಿಶ್ರಾ ಹೇಳಿದರು. ರಾಜ್ಯಗಳು ಸಾಕಷ್ಟು ಸಂಪನ್ಮೂಲಗಳನ್ನು ಹೊಂದಿವೆ ಮತ್ತು ಅವುಗಳನ್ನು ಎನ್‌ಡಿಎಂಎ, ಎನ್ಐಡಿಎಂ ಮತ್ತು ಎನ್‌ಡಿಆರ್‌ಎಫ್‌ ಸಂಘಟಿತ ರೀತಿಯಲ್ಲಿ ಬೆಂಬಲಿಸುತ್ತವೆ ಎಂದು ಅವರು ಹೇಳಿದರು. ವೃತ್ತಿಪರತೆ ಮತ್ತು ಕಾರ್ಯಕ್ರಮ ಅಭಿವೃದ್ಧಿ ಎರಡೂ ಕಾರ್ಯಗಳಿಗೆ ಸಂಪನ್ಮೂಲಗಳ ಲಭ್ಯತೆಯ ಬಗ್ಗೆ ಅವರು ಸಂತೃಪ್ತಿ ವ್ಯಕ್ತಪಡಿಸಿದರು.

ʻಸೆಂಡೈ ನಿಯಮಾವಳಿಯʼ ನಿಧಾನಗತಿಯ ಪ್ರಗತಿಯ ಬಗ್ಗೆ ಮಧ್ಯಸ್ಥಗಾರರನ್ನು ಎಚ್ಚರಿಸುವ ಮೂಲಕ ಪ್ರಧಾನ ಕಾರ್ಯದರ್ಶಿ ಮಾತು ಮುಗಿಸಿದರು. ʻಸೆಂಡೈ ನಿಯಮಾವಳಿಯʼ ಎಂಟನೇ ವಾರ್ಷಿಕೋತ್ಸವವು ಒಂದು ವಾರದಲ್ಲಿ ನಡೆಯಲಿದೆ. "ಈ 15 ವರ್ಷಗಳ ನಿಯಮಾವಳಿಗಳ ಅನುಷ್ಠಾನಕ್ಕೆ ನಿಗದಿಪಡಿಸಲಾದ ಅರ್ಧಕ್ಕಿಂತ ಹೆಚ್ಚು ಸಮಯ ಕಳೆದಿದೆ ಆದರೂ ʻಸೆಂಡೈʼ ಗುರಿಗಳನ್ನು ಸಾಧಿಸಲು ಜಗತ್ತು ವಿಫಲವಾಗಿದೆ. ಹೆಚ್ಚು ಸದೃಢ ಸಮುದಾಯಗಳೊಂದಿಗೆ ಸುರಕ್ಷಿತ ದೇಶ ಮತ್ತು ಸುರಕ್ಷಿತ ಪ್ರಪಂಚದತ್ತ ಕೆಲಸ ಮಾಡಲು ವಿಪತ್ತು ಅಪಾಯ ನಿರ್ವಹಣೆಯನ್ನು ಹೆಚ್ಚು ಪರಿಣಾಮಕಾರಿಗೊಳಿಸಬೇಕು. ಹೆಚ್ಚು ಸ್ಪಂದಿಸುವ ವ್ಯವಸ್ಥೆಯನ್ನು ರಚಿಸಲು ನಾವು ನಮ್ಮನ್ನು ಮತ್ತೆ ಸಮರ್ಪಿಸಿಕೊಳ್ಳಬೇಕು," ಎಂದು ಅವರು ಕರೆ ನೀಡಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶುಕ್ರವಾರ ʻಎನ್.ಪಿ.ಡಿ.ಆರ್.ಆರ್ʼನ 3ನೇ ಅಧಿವೇಶನವನ್ನು ಉದ್ಘಾಟಿಸಿದರು. ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವಿಪತ್ತು ಅಪಾಯ ತಗ್ಗಿಸುವ ಕ್ಷೇತ್ರದಲ್ಲಿ ನವೀನ ವಿಚಾರಗಳು, ಉಪಕ್ರಮಗಳು, ಪರಿಕರಗಳು ಮತ್ತು ತಂತ್ರಜ್ಞಾನಗಳನ್ನು ಪ್ರದರ್ಶಿಸುವ ವಸ್ತುಪ್ರದರ್ಶನವನ್ನೂ ಪ್ರಧಾನಿ ಉದ್ಘಾಟಿಸಿದರು. 100ಕ್ಕೂ ಹೆಚ್ಚು ಪ್ರದರ್ಶಕರು ಈ ಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ. ಇದು ಈಗ 13 ಮಾರ್ಚ್ 2023 ರವರೆಗೆ ಸಾರ್ವಜನಿಕರಿಗೆ ತೆರೆದಿರುತ್ತದೆ. ಈ ಪ್ರದರ್ಶನವು ʻಡಿಆರ್‌ಆರ್‌ʼ ಕ್ಷೇತ್ರದಲ್ಲಿನ ವಿವಿಧ ಉಪಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲು ಅತ್ಯುತ್ತಮ ವೇದಿಕೆಯಾಗಿದೆ.

 ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್ಎ), ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ), ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್‌) ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ (ಎನ್ಐಡಿಎಂ) ಜಂಟಿಯಾಗಿ 3 ನೇ ಎನ್.ಪಿ.ಡಿ.ಆರ್.ಆರ್ ಅನ್ನು ಆಯೋಜಿಸಿದ್ದವು. ಎನ್.ಪಿ.ಡಿ.ಆರ್.ಆರ್ ನಾಲ್ಕು ಪೂರ್ಣ ಅಧಿವೇಶನಗಳು, ಒಂದು ಮಂತ್ರಿಮಂಡಲ ಅಧಿವೇಶನ ಮತ್ತು ಎಂಟು ವಿಷಯಾಧಾರಿತ ಅಧಿವೇಶನಗಳನ್ನು ಒಳಗೊಂಡಿತ್ತು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೀಡಿದ ವಿಪತ್ತು ಅಪಾಯ ತಗ್ಗಿಸುವ 10 ಅಂಶಗಳ ಕಾರ್ಯಸೂಚಿ ಮತ್ತು ʻಸೆಂಡೈ ನಿಯಮಾವಳಿʼ ಆಧಾರದ ಮೇಲೆ ಎರಡು ದಿನಗಳಲ್ಲಿ 1200 ಕ್ಕೂ ಹೆಚ್ಚು ವಿಷಯ ತಜ್ಞರು, ವೈದ್ಯರು, ಶಿಕ್ಷಣ ತಜ್ಞರು ಮತ್ತು ಪ್ರತಿನಿಧಿಗಳು ವಿಪತ್ತು ಅಪಾಯ ತಗ್ಗಿಸುವ ಕುರಿತಾದ ಎಲ್ಲಾ ಬಗೆಯ ವಿಷಯಗಳ ಬಗ್ಗೆ ಚರ್ಚಿಸಿದರು. 

ಸ್ವಾತಂತ್ರ್ಯದ ʻಅಮೃತ ಕಾಲʼದ ಸಂದರ್ಭದಲ್ಲಿ ಈ ಸಭೆ ನಡೆಯಿತು ಮತ್ತು ಎನ್.ಪಿ.ಡಿ.ಆರ್.ಆರ್‌.ನ 3ನೇ ಅಧಿವೇಶನದ ಚರ್ಚೆಯು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ವಿಷನ್ -2047 ರ ಅಡಿಯಲ್ಲಿ 2030 ರ ವೇಳೆಗೆ ಭಾರತವನ್ನು ವಿಪತ್ತು ಸದೃಢವನ್ನಾಗಿ ಮಾಡಲು ಸರಕಾರಕ್ಕೆ ನೆರವಾಗಲಿದೆ. 

***



(Release ID: 1906169) Visitor Counter : 136


Read this release in: Hindi , English , Urdu , Manipuri