ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ
ಬಡತನ ನಿವಾರಣೆ, ಶೂನ್ಯ ಹಸಿವು, ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮ, ಗುಣಮಟ್ಟದ ಶಿಕ್ಷಣ, ಲಿಂಗ ಸಮಾನತೆ, ಶುದ್ಧ ನೀರು ಮತ್ತು ನೈರ್ಮಲ್ಯದಂತಹ ಹಲವಾರು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (ಎಸ್ಡಿಜಿ) ಪ್ರಮುಖವಾಗಿ ಪರಿಗಣಿಸಿರುವುದಕ್ಕಾಗಿ ಭಾರತದ ಜಿ -20 ಅಧ್ಯಕ್ಷತೆಗೆ ವಿಶ್ವಸಂಸ್ಥೆ ಶ್ಲಾಘನೆ
ವಾಸ್ತವದಲ್ಲಿ ಭಾರತದ ಜಿ -20 ಅಧ್ಯಕ್ಷತೆಯು ಎಸ್ಡಿಜಿ -20 ಅಧ್ಯಕ್ಷತೆಯಾಗಿ ಮಾರ್ಪಟ್ಟಿದೆ, ಏಕೆಂದರೆ ಭಾರತವು ಹಣಕಾಸಿನ ಕಂದಕವನ್ನು ಮುಚ್ಚಲು ಬಲಿಷ್ಟವಾದ ಧ್ವನಿಯನ್ನು ಎತ್ತುತ್ತಿದೆ ಎಂದು ಯುಎನ್ ರೆಸಿಡೆಂಟ್ ಕೋಆರ್ಡಿನೇಟರ್ ಶ್ರೀ ಶೋಂಬಿ ಶಾರ್ಪ್ ಬಣ್ಣನೆ
ಬಾಂಗ್ಲಾದೇಶ ಮತ್ತು ಅರುಣಾಚಲ ಪ್ರದೇಶದ ನಾಗರಿಕ ಸೇವೆಯ ಅಧಿಕಾರಿಗಳ 57 ನೇ ಸಾಮರ್ಥ್ಯ ವರ್ಧನೆ ಕಾರ್ಯಕ್ರಮದ ಜಂಟಿ ಸಮಾರೋಪ ಅಧಿವೇಶನವನ್ನುದ್ದೇಶಿಸಿ ಶ್ರೀ ಶೋಂಬಿ ಶಾರ್ಪ್ ಭಾಷಣ
2070 ರ ವೇಳೆಗೆ ನಿವ್ವಳ ಶೂನ್ಯ ಇಂಗಾಲಕ್ಕೆ ಬದ್ಧವಾಗಿರುವುದರಿಂದ ವಿಶ್ವಸಂಸ್ಥೆಯು ಭಾರತದ ಹಸಿರು ಪರಿವರ್ತನೆಯನ್ನು ಬೆಂಬಲಿಸುತ್ತದೆ ಎಂದು ಶೋಂಬಿ ಶಾರ್ಪ್
ರಾಷ್ಟ್ರೀಯ ಉತ್ತಮ ಆಡಳಿತ ಕೇಂದ್ರದ (ಎನ್ಸಿಜಿಜಿ) ಡಿಜಿ ಶ್ರೀ ಭರತ್ ಲಾಲ್ ಅವರು ತಮ್ಮ ಭಾಷಣದಲ್ಲಿ, ಯಾವುದೇ ನಾಗರಿಕ ಸೇವೆಯ ಅಂತಿಮ ಗುರಿ ಸಾಮಾನ್ಯ ಜನರ ಜೀವನದ ಗುಣಮಟ್ಟದಲ್ಲಿ ಬದಲಾವಣೆ ತರುವುದಾಗಿರಬೇಕು ಎಂದು ಹೇಳಿದರು.
ಬಾಂಗ್ಲಾದೇಶ ಮತ್ತು ಅರುಣಾಚಲ ಪ್ರದೇಶದ ನಾಗರಿಕ ಸೇವೆಯ ಅಧಿಕಾರಿಗಳು ಎನ್ಸಿಜಿಜಿಯಲ್ಲಿ ಕಲಿತ ಕೆಲವು ಕೌಶಲ್ಯಗಳು ಅಥವಾ ಉತ್ತಮ ಪದ್ಧತಿಗಳನ್ನು ಕಾರ್ಯಗತಗೊಳಿಸಲು ಸಾಧ್ಯವಾದರೆ, ಅದರಿಂದ ಆಡಳಿತದಲ್ಲಿ ಪ್ರಮುಖ ಪರಿವರ್ತನೆಯನ್ನು ತರಲು ಸಾಧ್ಯ ಎಂದು ಶ್ರೀ ಲಾಲ್ ಅಭಿಮತ
Posted On:
10 MAR 2023 6:11PM by PIB Bengaluru
ಬಡತನ ನಿವಾರಣೆ, ಶೂನ್ಯ ಹಸಿವು, ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮ, ಗುಣಮಟ್ಟದ ಶಿಕ್ಷಣ, ಲಿಂಗ ಸಮಾನತೆ, ಶುದ್ಧ ನೀರು ಮತ್ತು ನೈರ್ಮಲ್ಯದಂತಹ ಹಲವಾರು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (ಎಸ್ಡಿಜಿ) ಪ್ರಮುಖವಾಗಿ ಪರಿಗಣಿಸಿರುವುದಕ್ಕಾಗಿ ವಿಶ್ವಸಂಸ್ಥೆಯು ಭಾರತದ ಜಿ -20 ಅಧ್ಯಕ್ಷತೆಯನ್ನು ಶ್ಲಾಘಿಸಿದೆ.

ಬಾಂಗ್ಲಾದೇಶ ಮತ್ತು ಅರುಣಾಚಲ ಪ್ರದೇಶದ ನಾಗರಿಕ ಸೇವೆಯ ಅಧಿಕಾರಿಗಳ 57 ನೇ ಸಾಮರ್ಥ್ಯ ವರ್ಧನೆ ಕಾರ್ಯಕ್ರಮದ ಜಂಟಿ ಸಮಾರೋಪ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಯುಎನ್ ರೆಸಿಡೆಂಟ್ ಕೋಆರ್ಡಿನೇಟರ್ ಶ್ರೀ ಶೋಂಬಿ ಶಾರ್ಪ್ ಅವರು ವಾಸ್ತವವಾಗಿ ಭಾರತದ ಜಿ -20 ಅಧ್ಯಕ್ಷತೆಯು ಎಸ್ಡಿಜಿ -20ರ ಅಧ್ಯಕ್ಷತೆಯಾಗಿ ಮಾರ್ಪಟ್ಟಿದೆ ಎಂದರು.
ದೀರ್ಘ ಕಾಲಾವಧಿಯ ಅಂತರದ ನಂತರ, ಇಂಡೋನೇಷ್ಯಾ, ಭಾರತ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದಂತಹ ನಾಲ್ಕು ಉದಯೋನ್ಮುಖ ಆರ್ಥಿಕತೆಗಳು ಅಭಿವೃದ್ಧಿಶೀಲ ರಾಷ್ಟ್ರಗಳ ಸಮಸ್ಯೆಗಳನ್ನು ಮುನ್ನೆಲೆಗೆ ತರಲು ಮತ್ತು ಜಾಗತಿಕ ದಕ್ಷಿಣದ ಧ್ವನಿಯಾಗಲು ಜಿ -20 ಅಧ್ಯಕ್ಷತೆಯನ್ನು ಪರಿಣಾಮಕಾರಿ ರೀತಿಯಲ್ಲಿ ಮುನ್ನಡೆಸುತ್ತಿವೆ ಎಂದು ಶೋಂಬಿ ಶಾರ್ಪ್ ಅಭಿಪ್ರಾಯಪಟ್ಟರು. ಭಾರತದ ಜಿ -20 ನಾಯಕತ್ವವನ್ನು ಅನುಸರಿಸಿ ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ನ್ಯೂಯಾರ್ಕಿನಲ್ಲಿ ಎಸ್ಡಿಜಿ ಶೃಂಗಸಭೆ ನಡೆಯಲಿದೆ ಎಂದು ಅವರು ಹೇಳಿದರು. ಡಿಡಿಜಿ-17 ಗುರಿಗಳ ಮಧ್ಯಂತರ ಪರಾಮರ್ಶೆಗೆ ಈ ಹಸ್ತಲಾಘವ ಬಹು ಮುಖ್ಯ ಎಂದು ಅವರು ಅಭಿಪ್ರಾಯಪಟ್ಟರು.
2015 ರಲ್ಲಿ ವಿಶ್ವಸಂಸ್ಥೆಯ 192 ಸದಸ್ಯ ರಾಷ್ಟ್ರಗಳು 2030 ರ ಕಾರ್ಯಸೂಚಿಯ ಭಾಗವಾಗಿ 17 ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಅಂಗೀಕರಿಸಿದ್ದನ್ನು ನೆನಪಿಸಿಕೊಳ್ಳಬಹುದು. ಬಡತನ ನಿವಾರಣೆ, ಶೂನ್ಯ ಹಸಿವು, ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮ, ಗುಣಮಟ್ಟದ ಶಿಕ್ಷಣ, ಲಿಂಗ ಸಮಾನತೆ, ಶುದ್ಧ ನೀರು ಮತ್ತು ನೈರ್ಮಲ್ಯ, ಕೈಗೆಟುಕುವ ಮತ್ತು ಶುದ್ಧ ಇಂಧನ, ಯೋಗ್ಯ, ಉತ್ತಮ ಕೆಲಸ ಮತ್ತು ಆರ್ಥಿಕ ಬೆಳವಣಿಗೆ, ಕೈಗಾರಿಕೆ, ನಾವೀನ್ಯತೆ, ಅನ್ವೇಷಣೆ ಮತ್ತು ಮೂಲಸೌಕರ್ಯಗಳು ಈ ಗುರಿಗಳಲ್ಲಿ ಕೆಲವು.

2070 ರ ವೇಳೆಗೆ ನಿವ್ವಳ ಶೂನ್ಯ ಇಂಗಾಲಕ್ಕೆ ಬದ್ಧವಾಗಿರುವುದರಿಂದ ವಿಶ್ವಸಂಸ್ಥೆಯು ಭಾರತದ ಹಸಿರು ಪರಿವರ್ತನೆಯನ್ನು ಬೆಂಬಲಿಸುತ್ತದೆ ಎಂದು ಶೋಂಬಿ ಶಾರ್ಪ್ ಹೇಳಿದರು. ಡಿಜಿಟಲ್ ಪರಿವರ್ತನೆ, ಕಡಿಮೆ ಇಂಗಾಲದ ಆರ್ಥಿಕ ಮಾದರಿ ಮತ್ತು ಲಿಂಗ ಸಮಾನತೆ ಹಾಗು ಮಹಿಳಾ ಸಬಲೀಕರಣದೊಂದಿಗೆ ಮಹಿಳಾ ನೇತೃತ್ವದ ಆಡಳಿತವು ಭಾರತದ ಗರಿಷ್ಟ ಬೆಳವಣಿಗೆಯ ಮಾದರಿಯ ಕೆಲವು ಪ್ರಮುಖ ಅಂಶಗಳಾಗಿವೆ ಎಂದೂ ಅವರು ಹೇಳಿದರು.
ವಿಶ್ವವು ಇಂಧನ, ಆಹಾರ ಮತ್ತು ರಸಗೊಬ್ಬರದಂತಹ ಹಲವಾರು ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ ಮತ್ತು ಬಡ ದೇಶಗಳಲ್ಲಿನ ಬಡ ಸಮುದಾಯಗಳು, ವಿಶೇಷವಾಗಿ ದಕ್ಷಿಣ ಏಷ್ಯಾದಲ್ಲಿ ಇಂತಹ ಬಿಕ್ಕಟ್ಟಿನ ಪರಿಣಾಮವನ್ನು ಹೆಚ್ಚು ಅನುಭವಿಸುತ್ತಿವೆ ಎಂದು ಶ್ರೀ ಶೋಂಬಿ ಶಾರ್ಪ್ ಒತ್ತಿ ಹೇಳಿದರು.
ಬಾಂಗ್ಲಾದೇಶ ಮತ್ತು ಅರುಣಾಚಲ ಪ್ರದೇಶದ ನಾಗರಿಕ ಸೇವೆಯ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಶ್ರೀ ಶೋಂಬಿ ಶಾರ್ಪ್, ಸಾಮಾನ್ಯ ಮತ್ತು ಬಡವರಿಗೆ ಭರವಸೆಯ ಮತ್ತು ದಕ್ಷ ಸೇವೆಗಳನ್ನು ತಲುಪಿಸುವುದು ಯಾವುದೇ ಸೇವೆಯ ಸಾರ ಮತ್ತು ನೈತಿಕತೆಯಾಗಿದೆ ಎಂದು ಹೇಳಿದರು.
ರಾಷ್ಟ್ರೀಯ ಉತ್ತಮ ಆಡಳಿತ ಕೇಂದ್ರದ (ಎನ್ಸಿಜಿಜಿ) ಡಿಜಿ ಶ್ರೀ ಭರತ್ ಲಾಲ್ ಅವರು ತಮ್ಮ ಭಾಷಣದಲ್ಲಿ, ಯಾವುದೇ ನಾಗರಿಕ ಸೇವೆಯ ಅಂತಿಮ ಗುರಿ ಸಾಮಾನ್ಯ ಜನರ ಜೀವನದ ಗುಣಮಟ್ಟದಲ್ಲಿ ಬದಲಾವಣೆ ತರುವುದಾಗಿರಬೇಕು ಎಂದು ಹೇಳಿದರು. ಬಾಂಗ್ಲಾದೇಶ ಮತ್ತು ಅರುಣಾಚಲ ಪ್ರದೇಶದ ನಾಗರಿಕ ಸೇವೆಯ ಅಧಿಕಾರಿಗಳು ಎನ್ಸಿಜಿಜಿಯಲ್ಲಿ ಕಲಿತ ಕೆಲವು ಕೌಶಲ್ಯಗಳು ಅಥವಾ ಉತ್ತಮ ಅಭ್ಯಾಸಗಳನ್ನು ಕಾರ್ಯಗತಗೊಳಿಸಲು ಸಾಧ್ಯವಾದರೆ, ಅದು ಆಡಳಿತದಲ್ಲಿ ಪ್ರಮುಖ ಪರಿವರ್ತನೆಯನ್ನು ತರುತ್ತದೆ ಎಂದೂ ನುಡಿದರು ಮತ್ತು ಈ ನಿಟ್ಟಿನಲ್ಲಿ ಕಾರ್ಯಪ್ರವೃತರಾಗುವಂತೆ ಅಧಿಕಾರಿಗಳನ್ನು ಆಗ್ರಹಿಸಿದರು.
ದಕ್ಷ ಸಾರ್ವಜನಿಕ ಸೇವಾ ವಿತರಣೆಯನ್ನು ಒದಗಿಸುವಲ್ಲಿ ನಾಗರಿಕ ಸೇವೆಯ ಅಧಿಕಾರಿಗಳ ನಿರ್ಣಾಯಕ ಪಾತ್ರವನ್ನು ಶ್ರೀ ಭರತ್ ಲಾಲ್ ಅವರು ಒತ್ತಿ ಹೇಳಿದರು ಮತ್ತು ಮೂಲಸೌಕರ್ಯ, ಸೇವೆಗಳು ಹಾಗು ಸೌಲಭ್ಯಗಳನ್ನು ಸುಧಾರಿಸುವ ಮೂಲಕ ನಾಗರಿಕರು ತಮ್ಮ ಸಾಮರ್ಥ್ಯವನ್ನು ಅರಿತುಕೊಳ್ಳಲು ಅನುವು ಮಾಡಿಕೊಡುವ ವಾತಾವರಣವನ್ನು ಸೃಷ್ಟಿಸುವ ಮಹತ್ವವನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ಅಧಿಕಾರಿಗಳು ತಮ್ಮ ಅನುಭವಗಳು ಮತ್ತು ಕಲಿಕೆಗಳನ್ನು ಹಂಚಿಕೊಳ್ಳಬೇಕೆಂದೂ ಡಿಜಿ ಅವರು ಆಗ್ರಹಿಸಿದರು, ಇದರಿಂದ ಇತರ ಅಧಿಕಾರಿಗಳು ಜನರ ಪ್ರಯೋಜನಕ್ಕಾಗಿ ಅವುಗಳನ್ನು ಮತ್ತಷ್ಟು ಉತ್ತಮಗೊಳಿಸಬಹುದು ಮತ್ತು ಇತರ ಪ್ರದೇಶಗಳಲ್ಲಿ ಕಾರ್ಯಗತಗೊಳಿಸಬಹುದು ಎಂದವರು ಅಭಿಪ್ರಾಯಪಟ್ಟರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಸಾರ್ವಜನಿಕ ಸೇವಾ ವಿತರಣೆಯನ್ನು ಖಾತ್ರಿಪಡಿಸುವಲ್ಲಿ ಮತ್ತು ನಾಗರಿಕರ ಜೀವನದ ಗುಣಮಟ್ಟವನ್ನು ಸುಧಾರಿಸುವಲ್ಲಿ ಭಾರತವು ಪ್ರಮುಖ ಪರಿವರ್ತನೆಯನ್ನು ಮೈಗೂಢಿಸಿಕೊಳ್ಳುತ್ತಿರುವುದರತ್ತ ಶ್ರೀ ಭರತ್ ಲಾಲ್ ಗಮನಸೆಳೆದರು. ಪಾರದರ್ಶಕತೆ, ಉತ್ತರದಾಯಿತ್ವ ಮತ್ತು ಎಲ್ಲರನ್ನೂ ಒಳಗೊಳ್ಳುವುವಂತಹ ಉತ್ತಮ ಆಡಳಿತಕ್ಕಾಗಿ ಪ್ರಧಾನ ಮಂತ್ರಿಯವರ ಚಿಂತನೆಯನ್ನು, ದೃಷ್ಟಿಕೋನವನ್ನು ಬಲಪಡಿಸಲು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಪ್ರಚುರಪಡಿಸುತ್ತಿರುವ 'ವಸುದೈವ ಕುಟುಂಬಕಂ' ತತ್ವಕ್ಕೆ ಅನುಗುಣವಾಗಿ ಭಾರತ ಮತ್ತು ನೆರೆಯ ದೇಶಗಳಲ್ಲಿ ನಾಗರಿಕ ಸೇವೆಯ ಅಧಿಕಾರಿಗಳ ನಡುವೆ ಸಹಯೋಗ ಮತ್ತು ಕಲಿಕೆಯನ್ನು ಉತ್ತೇಜಿಸಲು ಎನ್ಸಿಜಿಜಿ ಬದ್ಧವಾಗಿದೆ ಎಂದರು.
ಬಾಂಗ್ಲಾದೇಶ (57 ನೇ ಬ್ಯಾಚ್ ನ 40 ಮಂದಿ ಪ್ರತಿನಿಧಿಗಳು) ಮತ್ತು ಅರುಣಾಚಲ ಪ್ರದೇಶ (2 ನೇ ಬ್ಯಾಚ್ನ 29 ಮಂದಿ ಪ್ರತಿನಿಧಿಗಳು) ದ ನಾಗರಿಕ ಸೇವಾ ಅಧಿಕಾರಿಗಳಿಗಾಗಿ ಫೆಬ್ರವರಿ 28 ರಂದು ಮುಸ್ಸೋರಿ ಕ್ಯಾಂಪಸ್ಸಿನ ನ್ಯಾಷನಲ್ ಸೆಂಟರ್ ಫಾರ್ ಗುಡ್ ಗವರ್ನೆನ್ಸ್ (ಎನ್ಸಿಜಿಜಿ) ನಲ್ಲಿ ಪ್ರಾರಂಭವಾದ ಎರಡು ಸಾಮರ್ಥ್ಯ ವರ್ಧನೆ ಕಾರ್ಯಕ್ರಮಗಳು ಭಾಗವಹಿಸಿದವರಿಗೆ ಪ್ರಮಾಣಪತ್ರಗಳ ವಿತರಣೆಯೊಂದಿಗೆ ಇಂದು ಸಮಾರೋಪಗೊಂಡವು. ಜ್ಞಾನ ಮತ್ತು ಅನುಭವ ಹಂಚಿಕೆಗೆ ಅನುಕೂಲವಾಗುವಂತೆ ಎನ್ಸಿಜಿಜಿ ಜಂಟಿ ಅಧಿವೇಶನಗಳನ್ನು ಆಯೋಜಿಸಿತ್ತು. ನಾಗರಿಕ ಸೇವೆಯ ಅಧಿಕಾರಿಗಳಿಗಾಗಿ ಎನ್ಸಿಜಿಜಿಯ ಸಾಮರ್ಥ್ಯ ವರ್ಧನೆ ಉಪಕ್ರಮಗಳು ಉತ್ತಮ ಆಡಳಿತವನ್ನು ಉತ್ತೇಜಿಸುವ, ಸೇವಾ ವಿತರಣೆಯನ್ನು ಹೆಚ್ಚಿಸುವ ಮತ್ತು ಕಟ್ಟಕಡೆಯ ವ್ಯಕ್ತಿಯನ್ನು ತಲುಪುವ ಮೂಲಕ ನಾಗರಿಕರ ಜೀವನದ ಗುಣಮಟ್ಟವನ್ನು ಸುಧಾರಿಸುವ ಗುರಿಯನ್ನು ಹೊಂದಿವೆ.

*****
(Release ID: 1905951)