ಉಪರಾಷ್ಟ್ರಪತಿಗಳ ಕಾರ್ಯಾಲಯ

‘ಆರೋಗ್ಯ ತಂತ್ರಜ್ಞಾನ ಮೌಲ್ಯಮಾಪನ ಕುರಿತ 2ನೇ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಉಪರಾಷ್ಟ್ರಪತಿಯವರ ಭಾಷಣದ ಪಠ್ಯ – (ಆಯ್ದ ಭಾಗಗಳು)

Posted On: 10 MAR 2023 1:45PM by PIB Bengaluru

ಆರೋಗ್ಯ ತಂತ್ರಜ್ಞಾನ ಮೌಲ್ಯಮಾಪನ ಕುರಿತ 2ನೇ ಅಂತಾರಾಷ್ಟ್ರೀಯ ವಿಚಾರ ಸಂಕಿರಣ – ‘ಐಎಸ್‌ಹೆಚ್‌ಟಿಎ-2023ʼ ಜೊತೆ ಸಹಯೋಗ ಹೊಂದಲು ಅತೀವ ಸಂತಸವಾಗುತ್ತಿದೆ. ಹೆಸರಾಂತ ಆರೋಗ್ಯ ಸಂಶೋಧಕರು, ವೈದ್ಯಕೀಯ ಶಿಕ್ಷಣ ತಜ್ಞರು, ನೀತಿ ನಿರೂಪಕರು, ಸಾಮಾಜಿಕ ವಿಜ್ಞಾನಿಗಳು, ಉದ್ಯಮ ಪಾಲುದಾರರು ಇದರಲ್ಲಿ ಭಾಗವಹಿಸುತ್ತಿದ್ದಾರೆ.

ಎಲ್ಲರಿಗೂ ಗುಣಮಟ್ಟದ ಆರೋಗ್ಯ ರಕ್ಷಣೆಯ ಲಭ್ಯತೆ, ಕೈಗೆಟುಕುವಿಕೆ ಮತ್ತು ಪ್ರವೇಶವನ್ನು ಖಾತ್ರಿಪಡಿಸುವುದು ʻಐಎಸ್‌ಹೆಚ್‌ಟಿಎʼದಲ್ಲಿ ನಿಮ್ಮ ಧ್ಯೇಯವಾಗಿದೆ.

ಈ ಕೈಗೆಟುಕುವಿಕೆಯನ್ನು ಗಮನದಲ್ಲಿಟ್ಟುಕೊಂಡು, ನಮ್ಮ ಪ್ರಧಾನ ಮಂತ್ರಿಯವರು ʻಆಯುಷ್ಮಾನ್ ಭಾರತ್ʼ ಯೋಜನೆಯನ್ನು ಹೊರತಂದರು. ಇದು  ವಿಶ್ವದ ಅತಿದೊಡ್ಡ, ಹೆಚ್ಚು ಪಾರದರ್ಶಕ ಮತ್ತು ಪರಿಣಾಮಕಾರಿ ವ್ಯವಸ್ಥೆಯಾಗಿದೆ. ಇದು ಈ ದೇಶದ 1.4 ಶತಕೋಟಿ ಜನರಿಗೆ ಪರಿಣಾಮಕಾರಿಯಾಗಿ ಪ್ರಯೋಜನವನ್ನು ನೀಡುತ್ತಿದೆ. ಇದರ ಮೂಲಕ ದೊರೆಯುವ ಕೈಗೆಟುಕುವ ದರದ ವೈದ್ಯಕೀಯ ವೆಚ್ಚ ಸೌಲಭ್ಯವು ಪಿರಮಿಡ್ ಅಲ್ಲದ ಆದರೆ ಎಲ್ಲರಿಗೂ ಪ್ರಯೋಜನವಾಗುವ ವ್ಯವಸ್ಥೆಯೊಂದರ ವಿಕಸನವನ್ನು ಸೃಷ್ಟಿಸಿದೆ. ʻಆಯುಷ್ಮಾನ್ ಭಾರತ್ʼ ಕಾರಣದಿಂದಾಗಿ, ನಾವು ದೇಶದಲ್ಲಿ ಅರೆವೈದ್ಯಕೀಯ ಕೇಂದ್ರಗಳು, ರೋಗನಿರ್ಣಯ ಕೇಂದ್ರಗಳು ಮತ್ತು ವೈದ್ಯಕೀಯ ಕಾಲೇಜುಗಳು, ನರ್ಸಿಂಗ್ ಕಾಲೇಜುಗಳು ಮತ್ತು ಚಿಕಿತ್ಸಾಲಯಗಳ ಬೆಳವಣಿಗೆಯನ್ನು ಹೊಂದಿದ್ದೇವೆ. ಇದು ಆರ್ಥಿಕವಾಗಿ ದುರ್ಬಲರಾಗಿರುವವರ ಜೀವನವನ್ನು ಸುಧಾರಿಸುತ್ತದೆ. ಅವರು ತಮ್ಮ ದುಬಾರಿ ವೈದ್ಯಕೀಯ ವೆಚ್ಚದ ಕಾರಣದಿಂದಾಗಿ ತೊಂದರೆ ಅನುಭವಿಸುವಂತಾದರೆ, ಅವರ ಮಕ್ಕಳ ಬೆಳವಣಿಗೆಗೆ ತೊಂದರೆಯಾಗುತ್ತದೆ. ಕುಟುಂಬದ ಆರ್ಥಿಕತೆಯು ಅಸ್ತವ್ಯಸ್ತಗೊಳ್ಳುತ್ತದೆ.

ತಂತ್ರಜ್ಞಾನವು ಕ್ರಾಂತಿಕಾರಿಯಾದುದು, ಅದೊಂದು ಒಂದು ತಿರುವು. 1989ರಲ್ಲಿ, ನಾನು ಕೇಂದ್ರ ಸಚಿವನಾಗಿದ್ದಾಗ, ಅದಕ್ಕೂ 2 ವರ್ಷಗಳ ಮೊದಲು, ನನ್ನ ತಂದೆ ಹೃದಯಾಘಾತಕ್ಕೆ ಒಳಗಾದರು. ಆಂಜಿಯೋಗ್ರಾಮ್ ಚಿಕಿತ್ಸೆ ಕೊಡಿಸಲು ನಾನು ಪರದಾಡಬೇಕಾಯಿತು. ಏಕೆಂದರೆ ಆಗ ಕೇವಲ ಎರಡು ನಗರಗಳಲ್ಲಿ ಮಾತ್ರ ಇದು ಲಭ್ಯವಿತ್ತು. ಕೊನೆಗೆ ನಾನು ಅವರನ್ನು ಚಿಕಿತ್ಸೆಗಾಗಿ ದೇಶದ ಹೊರಗೆ, ಬ್ರಿಟನ್‌ಗೆ ಕರೆದೊಯ್ಯಬೇಕಾಯಿತು. ಆದರೆ, ಈಗ ಈ ಎಲ್ಲ ಸೌಲಭ್ಯಗಳು ಈ ದೇಶದಲ್ಲಿ ವಿಭಾಗೀಯ ಮಟ್ಟದಲ್ಲಿ ಮತ್ತು ಅತ್ಯುನ್ನತ ಗುಣಮಟ್ಟದಲ್ಲಿ ಲಭ್ಯವಿದೆ. ತಂತ್ರಜ್ಞಾನವು ನಿಜವಾಗಿಯೂ ಉತ್ತಮ ಆರೋಗ್ಯ ಮತ್ತು ಸಂತೋಷದ ಕಡೆಗೆ ಕ್ರಾಂತಿಕಾರಿ ಬದಲಾವಣೆ ತಂದಿದೆ.

ಎಲ್ಲರಿಗೂ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು, ನಾವು ಈಗ ಹಳ್ಳಿಗಳಲ್ಲಿಯೂ ಆರೋಗ್ಯ ಕೇಂದ್ರಗಳನ್ನು ಹೊಂದಿದ್ದೇವೆ. ಇದು ದೊಡ್ಡ ಮೈಲಿಗಲ್ಲಿನ ಸಾಧನೆಯಾಗಿದೆ.
ಆರೋಗ್ಯ ತಂತ್ರಜ್ಞಾನ ಮೌಲ್ಯಮಾಪನದ ಈ ಅಂತರರಾಷ್ಟ್ರೀಯ ವಿಚಾರ ಸಂಕಿರಣವು ಮೌಲ್ಯಮಾಪನ ಆಧಾರಿತವಾಗಿದೆ. ಆರೋಗ್ಯ ಮತ್ತು ಸಂತೋಷ ಕುರಿತಾದ ವಿಶ್ವ ವ್ಯವಹಾರವನ್ನು ಭದ್ರಪಡಿಸುವಲ್ಲಿ ಇದು ಬಹಳ ಮಹತ್ವದ ಪಾತ್ರ ವಹಿಸಲಿದೆ ಎಂಬ ಖಾತರಿ ನನಗಿದೆ. 

ʻಸ್ವಚ್ಛ ಭಾರತʼ ಅಭಿಯಾನದಂತಹ ಕಾರ್ಯಕ್ರಮಗಳು ಭಾರತದ ಸನ್ನಿವೇಶವನ್ನು ಬದಲಾಯಿಸಿವೆ. ಈಗ ಪ್ರತಿ ಮನೆಯಲ್ಲೂ ಶೌಚಾಲಯವಿದೆ. ನಾವು ಎಂದಿಗೂ ಯೋಚಿಸದ ಅಥವಾ ಊಹಿಸದ ರೀತಿಯಲ್ಲಿ, ಈಗ ನಾವು ಎಲ್ಲ ಮನೆಗಳಲ್ಲಿ ಶುದ್ಧ ಕುಡಿಯುವ ನೀರನ್ನು ಪಡೆಯುವ ಹಾದಿಯಲ್ಲಿದ್ದೇವೆ. ಕೈಗಾರಿಕಾ ಬೆಳವಣಿಗೆ, ನವೋದ್ಯಮಗಳು ಮತ್ತು ಉದ್ಯಮಶೀಲತೆ ಬೆಳೆದಿದೆ. ಜೊತೆಗೆ ಇದು ಜನರಿಗೆ ಆರೋಗ್ಯ ಮತ್ತು ಸಂತೋಷವನ್ನು ಪಡೆಯಲು ಸಾಮೂಹಿಕ ಆಂದೋಲನವನ್ನು ಸೃಷ್ಟಿಸುತ್ತಿದೆ.

ಕೋವಿಡ್-19 ಅನ್ನು ಭಾರತ ನಿರ್ವಹಿಸಿದ ರೀತಿ ನಿಸ್ಸಂದೇಹವಾಗಿ ಅತ್ಯುತ್ತಮ ಕಾರ್ಯವಿಧಾನಗಳಿಗೆ ಉದಾಹರಣೆಯಾಗಿದೆ. ʻಜನತಾ ಕರ್ಫ್ಯೂʼ ಒಂದು ನವೀನ ಕಲ್ಪನೆಯಾಗಿದ್ದು, ಅದನ್ನು ಬಹಳ ಯಶಸ್ವಿಯಾಗಿ ಜಾರಿಗೆ ತರಲಾಯಿತು. ಇಡೀ ದೇಶವು ಕೋವಿಡ್ ಯೋಧರನ್ನು ಹುರಿದುಂಬಿಸಲು ಒಗ್ಗೂಡಿತು. ಏಕೆಂದರೆ ಅವರು ಜನರ ಜೀವವನ್ನು ಉಳಿಸಲು ತಮ್ಮ ಪ್ರಾಣವನ್ನು ತ್ಯಾಗ ಮಾಡಲು ಸಿದ್ಧರಿದ್ದರು. ಅವರನ್ನು ಗೌರವಿಸಲು ನಾವು ದೀಪಗಳನ್ನು ಬೆಳಗಿಸಿದ್ದೇವೆ.

ಭಾರತವು ನವೀನವಾಗಿ ಲಸಿಕೆಗಳನ್ನು ಉತ್ಪಾದಿಸಿದ್ದನ್ನು ಜಗತ್ತು ಗುರುತಿಸುತ್ತದೆ. ನಾನು ವಿದೇಶಕ್ಕೆ ಹೋದಾಗ ಇದನ್ನು ಕಂಡು ಸಂತೋಷವಾಯಿತು. ಭಾರತವು 220 ಕೋಟಿ ಜನರಿಗೆ ಲಸಿಕೆ ನೀಡಿತು ಮತ್ತು ಅದನ್ನು ಡಿಜಿಟಲ್ ಮ್ಯಾಪಿಂಗ್‌ನಲ್ಲಿ ಇರಿಸಿದೆ. ಭಾರತವು ʻಮೈತ್ರಿʼ ಲಸಿಕೆ ಉಪಕ್ರಮದ ಮೂಲಕ ಇತರ ದೇಶಗಳಿಗೆ ನೆರವು ನೀಡುತ್ತಿದೆ ಮತ್ತು ಇದು ನಮ್ಮ ಹಳೆಯ ನೀತಿಯನ್ನು ಪ್ರತಿಬಿಂಬಿಸುತ್ತದೆ.

ದೇಶಾದ್ಯಂತ 1.5 ಲಕ್ಷಕ್ಕೂ ಹೆಚ್ಚು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇದು ಉದ್ಯಮಿಗಳಿಗೆ ಮತ್ತು ನುರಿತ ಮಾನವ ಸಂಪನ್ಮೂಲಕ್ಕೆ ಭಾರಿ ಅವಕಾಶಗಳನ್ನು ಸೃಷ್ಟಿಸುತ್ತಿದೆ. ಇದು ಆರ್ಥಿಕ ಬೆಳವಣಿಗೆಗೆ ಕ್ರಾಂತಿಕಾರಿಯಾಗಿ ವರ್ತಿಸುತ್ತದೆ.

ʻಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ʼ ಅಡಿಯಲ್ಲಿ 33.8 ಕೋಟಿ ಆಯುಷ್ಮಾನ್ ಭಾರತ್ ಆರೋಗ್ಯ ಖಾತೆಗಳನ್ನು ಸೃಷ್ಟಿಸಲಾಗಿದೆ ಮತ್ತು ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಅಡಿಯಲ್ಲಿ 50 ಕೋಟಿ ಫಲಾನುಭವಿಗಳಿದ್ದಾರೆ.

ಒಬ್ಬ ಸಾಮಾನ್ಯ ಮನುಷ್ಯನಿಗೆ ಕೈಗೆಟುಕುವ ಔಷಧವು ನಿರ್ಣಾಯಕ ಪರಿಣಾಮವನ್ನು ಬೀರುತ್ತದೆ. ಜೆನೆರಿಕ್ ಔಷಧಿಗಳ ಲಭ್ಯತೆಯನ್ನು ಹೆಚ್ಚಿಸಲು ದೇಶಾದ್ಯಂತ ಸ್ಥಾಪಿಸಲಾದ 9000ಕ್ಕೂ ಹೆಚ್ಚು ʻಜನೌಷಧ ಕೇಂದ್ರʼಗಳ ಮೂಲಕ ಇದು ಸಾಧ್ಯವಾಗಿದೆ.

ಕ್ಯಾನ್ಸರ್ ನಿರೋಧಕ ಔಷಧಗಳ ಬೆಲೆ ನಿಯಂತ್ರಣದಿಂದಾಗಿ ಕ್ಯಾನ್ಸರ್ ರೋಗಿಗಳಿಗೆ ವರ್ಷಕ್ಕೆ ಕನಿಷ್ಠ 200 ಕೋಟಿ ರೂ. ಉಳಿತಾಯವಾಗುತ್ತಿದೆ. ಗೌರವಾನ್ವಿತ ಆರೋಗ್ಯ ಸಚಿವರು ಕೈಗೊಂಡ ಪೂರ್ವಭಾವಿ ಮತ್ತು ಸಕಾರಾತ್ಮಕ ಕ್ರಮಗಳಿಂದಾಗಿ ಇದು ಸಾಧ್ಯವಾಗಿದೆ. 

ಜನರಿಗೆ ದಕ್ಷ ಸೇವೆಗಳನ್ನು ಒದಗಿಸಲು ನಾವು ತಂತ್ರಜ್ಞಾನವನ್ನು ಬಳಸುತ್ತಿದ್ದು, ಈ ನಿಟ್ಟಿನಲ್ಲಿ  ಭಾರತವು ವಿಶ್ವದಲ್ಲೇ ಒಂದು ಅತ್ಯುತ್ತಮ ಉದಾಹರಣೆಯಾಗಿದೆ. ಈ ಮೊದಲು ನಿಮ್ಮ ಬಿಲ್‌ಗಳ ಪಾವತಿಯನ್ನು ಮಾಡಲು ಉದ್ದನೆಯ ಸರತಿ ಸಾಲುಗಳು ಇದ್ದವು. ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿ ಮಾಡಲಾಗಿದೆ ಮತ್ತು ಭಾರತದ ʻರಾಷ್ಟ್ರೀಯ ಟೆಲಿಮೆಡಿಸಿನ್ ಸೇವೆʼಯಾದ ʻಇ-ಸಂಜೀವಿನಿʼ ಮೂಲಕ 8 ಕೋಟಿಗೂ ಹೆಚ್ಚು ಟೆಲಿ ಸಮಾಲೋಚನೆಗಳನ್ನು ನಡೆಸಲಾಗಿದೆ.

50 ಮತ್ತು 60ರ ದಶಕದಲ್ಲಿ ಕ್ಷಯರೋಗವು ಕೊಲೆಗಾರನಾಗಿತ್ತು. ಆದರೆ ಈಗ ಯಾವುದೇ ರೋಗಿಯು ಹೋಗಿ ತನಗೆ ಕ್ಷಯರೋಗವಿದೆ ಎಂದು ಹೇಳಿದರೆ, ಆತನಿಗೆ ಅಥವಾ ಆಕೆಗೆ ಒಂಬತ್ತು ತಿಂಗಳ ಕಿಟ್ ನೀಡಲಾಗುತ್ತದೆ. ಇದು ಗುಣಾತ್ಮಕ ಬದಲಾವಣೆಯಾಗಿದೆ.

ಪದವಿ ಮತ್ತು ಸ್ನಾತಕೋತ್ತರ ವೈದ್ಯಕೀಯ ಕಾಲೇಜುಗಳಲ್ಲಿ ಸೀಟುಗಳ ಸಂಖ್ಯೆಯನ್ನು ದ್ವಿಗುಣಗೊಳಿಸಲಾಗಿದೆ.

ಭಾರತವು ಎರಡು ಮಹಾನ್ ಪರಿಕಲ್ಪನೆಗಳ ಆಧಾರದ ಮೇಲೆ ಹಿಂದೆಂದಿಗಿಂತಲೂ ಈ ಸಮಯದಲ್ಲಿ ಎತ್ತರೆತ್ತರಕ್ಕೆ ಏರುತ್ತಿದೆ. ಅವುಗಳನ್ನು ನಮ್ಮ ಪ್ರಧಾನಿ ಎತ್ತಿ ತೋರಿಸಿದ್ದಾರೆ - ನಾವು ವಿಸ್ತರಣಾವಾದದ ಯುಗದಲ್ಲಿಲ್ಲ ಮತ್ತು ಯುದ್ಧವು ಯಾವುದೇ ಸಮಸ್ಯೆಗೆ ಪರಿಹಾರವಲ್ಲ ಎಂದು ಅವರು ಜಗತ್ತಿನ ಮುಂದೆ ಸಾರಿದ್ದಾರೆ.

ನಾನು ಎಲ್ಲ ಪಾಲುದಾರರನ್ನು, ವಿಶ್ವ ಆರೋಗ್ಯ ಸಂಸ್ಥೆ ಮತ್ತು ನಾಯಕರನ್ನು ಒತ್ತಾಯಿಸುವುದೇನೆಂದರೆ, ನಾವು ಈ ಜಗತ್ತನ್ನು ಆರೋಗ್ಯಕರ ಮತ್ತು ಸಂತೋಷವಾಗಿಸಬೇಕಾದರೆ, ನಾವು ಪರಿಸರ ದೇಶದ ವ್ಯವಸ್ಥೆಗೆ ಬದ್ಧರಾಗಿರಬೇಕು. ನಮ್ಮ ದೇಶವು ಸಾವಿರಾರು ವರ್ಷಗಳಿಂದ ಈ ಪರಿಸರ ವ್ಯವಸ್ಥೆಯನ್ನು ವಿಕಸನಗೊಳಿಸಿದೆ, ಅದೇ, 'ವಸುಧೈವ ಕುಟುಂಬಕಂ'.

ಮಾನಸಿಕ ಅಸ್ವಸ್ಥತೆಗಳು, ಒತ್ತಡದ ಕೆಲಸದ ಪರಿಸ್ಥಿತಿಗಳು ಮತ್ತು ಕೆಲಸದ ಸ್ಥಳದಲ್ಲಿನ ಉದ್ವಿಗ್ನತೆಯಂತಹ ಕೆಲವು ವಿಷಯಗಳನ್ನು ನಾವೇ ಸೃಷ್ಟಿಸುತ್ತೇವೆ; ನಾವು ಸ್ಪರ್ಧಾತ್ಮಕ ಓಟದಲ್ಲಿದ್ದೇವೆ. ಈ ಸಮಸ್ಯೆಗಳ ಬಗ್ಗೆ ಯೋಚಿಸೋಣ ಮತ್ತು ಜನರಲ್ಲಿ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ಒತ್ತಡದ ಮಟ್ಟವನ್ನು ಕಡಿಮೆ ಮಾಡಲು ಕೆಲಸ ಮಾಡೋಣ.

***



(Release ID: 1905933) Visitor Counter : 101


Read this release in: English , Urdu , Hindi