ಕೃಷಿ ಸಚಿವಾಲಯ
ಕೆಂಪು ಈರುಳ್ಳಿಯ ದರ ಕುಸಿತ ವರದಿಗಳು ಬರುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಕೆಂಪು ಈರುಳ್ಳಿ (ಖಾರಿಫ್) ಖರೀದಿಗಾಗಿ ಮತ್ತು ಏಕಕಾಲದಲ್ಲಿ ರವಾನೆ ಹಾಗು ಗ್ರಾಹಕ ಕೇಂದ್ರಗಳಿಗೆ ಮಾರಾಟ ಮಾಡುವುದಕ್ಕಾಗಿ ಮಾರುಕಟ್ಟೆಯಲ್ಲಿ ತಕ್ಷಣ ಮಧ್ಯಪ್ರವೇಶಿಸುವಂತೆ ಕೇಂದ್ರವು ನಾಫೆಡ್ ಮತ್ತು ನ್ಯಾಷನಲ್ ಕನ್ಸ್ಯೂಮರ್ ಕೋ-ಆಪರೇಟಿವ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (ಭಾರತೀಯ ರಾಷ್ಟ್ರೀಯ ಗ್ರಾಹಕರ ಸಹಕಾರಿ ಒಕ್ಕೂಟ ಲಿಮಿಟೆಡ್-ಎನ್ಸಿಸಿಎಫ್) ಗೆ ನಿರ್ದೇಶನ ನೀಡಿದೆ.
ಫೆಬ್ರವರಿ 24 ರಿಂದ ಕಳೆದ ಹತ್ತು ದಿನಗಳಲ್ಲಿ ನಾಫೆಡ್ ಸುಮಾರು 4000 ಮೆಟ್ರಿಕ್ ಟನ್ನಿನಷ್ಟನ್ನು ಕ್ವಿಂಟಲ್ ಗೆ 900 ರೂ.ಗಿಂತ ಹೆಚ್ಚಿನ ದರದಲ್ಲಿ ನೇರವಾಗಿ ರೈತರಿಂದ ಖರೀದಿಸಿದೆ ಎಂದು ವರದಿಯಾಗಿದೆ.
Posted On:
07 MAR 2023 8:01PM by PIB Bengaluru
ಕೆಂಪು ಈರುಳ್ಳಿ (ಖಾರಿಫ್)ಯನ್ನು ಖರೀದಿಸಲು ಮಾರುಕಟ್ಟೆಯಲ್ಲಿ ತಕ್ಷಣ ಮಧ್ಯಪ್ರವೇಶಿಸುವಂತೆ ಕೇಂದ್ರವು ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (ನಾಫೆಡ್) ಮತ್ತು ಭಾರತೀಯ ರಾಷ್ಟ್ರೀಯ ಗ್ರಾಹಕರ ಸಹಕಾರಿ ಒಕ್ಕೂಟ ಲಿಮಿಟೆಡ್ (ಎನ್ಸಿಸಿಎಫ್) ಗೆ ನಿರ್ದೇಶನ ನೀಡಿದೆ. ಕೆಂಪು ಈರುಳ್ಳಿಯ ದರ ಕುಸಿತದ ವರದಿಗಳು ಬರುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಬಳಕೆದಾರ ಕೇಂದ್ರಗಳಿಗೆ ಮಾರಾಟ ಮಾಡಲು ಮತ್ತು ಏಕ ಕಾಲದಲ್ಲಿ ರವಾನೆ ಮಾಡಲು ಈ ಕ್ರಮಕ್ಕೆ ಕೇಂದ್ರ ಸೂಚನೆ ನೀಡಿದೆ.
ನಾಫೆಡ್ ತಕ್ಷಣವೇ ಕಾರ್ಯಪ್ರವೃತ್ತವಾಗಿ 2023 ರ ಫೆಬ್ರವರಿ 24 ರಂದು ಖರೀದಿಯನ್ನು ಪ್ರಾರಂಭಿಸಿತು ಮತ್ತು ಕಳೆದ ಹತ್ತು ದಿನಗಳಲ್ಲಿ ರೈತರಿಂದ ನೇರವಾಗಿ ಕ್ವಿಂಟಾಲಿಗೆ 900 ರೂ.ಗಿಂತ ಹೆಚ್ಚಿನ ದರದಲ್ಲಿ ಸುಮಾರು 4000 ಮೆಟ್ರಿಕ್ ಟನ್ ಖರೀದಿಸಿದೆ ಎಂದು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ.
ಇದು 40 ಖರೀದಿ ಕೇಂದ್ರಗಳನ್ನು ತೆರೆದಿದೆ, ಅಲ್ಲಿ ರೈತರು ತಮ್ಮ ದಾಸ್ತಾನುಗಳನ್ನು ಮಾರಾಟ ಮಾಡಬಹುದು ಮತ್ತು ತಮ್ಮ ಪಾವತಿಯನ್ನು ಆನ್ ಲೈನ್ ನಲ್ಲಿ ಪಡೆಯಬಹುದು. ಖರೀದಿ ಕೇಂದ್ರಗಳಿಂದ ದಿಲ್ಲಿ, ಕೋಲ್ಕತಾ, ಗುವಾಹಟಿ, ಭುವನೇಶ್ವರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಮತ್ತು ಕೊಚ್ಚಿಗೆ ದಾಸ್ತಾನನ್ನು ಸಾಗಿಸಲು ನಾಫೆಡ್ ವ್ಯವಸ್ಥೆಗಳನ್ನು ಮಾಡಿದೆ.
2022-23ರಲ್ಲಿ ಈರುಳ್ಳಿಯ ಅಂದಾಜು ಉತ್ಪಾದನೆ ಸುಮಾರು 318 ಎಲ್ಎಂಟಿ ಆಗಿದ್ದು, ಕಳೆದ ವರ್ಷದ 316.98 ಎಲ್ಎಂಟಿ ಉತ್ಪಾದನೆಯ ಪ್ರಮಾಣಕ್ಕಿಂತ ಹೆಚ್ಚಾಗಿದೆ. ಬೇಡಿಕೆ ಮತ್ತು ಪೂರೈಕೆಯಲ್ಲಿನ ಸ್ಥಿರತೆ ಮತ್ತು ರಫ್ತು ಸಾಮರ್ಥ್ಯದಿಂದಾಗಿ ಬೆಲೆಗಳು ಸ್ಥಿರವಾಗಿ ಉಳಿದಿವೆ. ಆದಾಗ್ಯೂ, ಫೆಬ್ರವರಿ ತಿಂಗಳಲ್ಲಿ ಕೆಂಪು ಈರುಳ್ಳಿಯ ಬೆಲೆಯಲ್ಲಿ ಕುಸಿತ ಕಂಡುಬಂದಿದೆ, ವಿಶೇಷವಾಗಿ ಮಹಾರಾಷ್ಟ್ರ ರಾಜ್ಯದಲ್ಲಿ ಮಾದರಿ ದರವು ಪ್ರತಿ ಕ್ವಿಂಟಾಲಿಗೆ 500-700 ರೂ.ಗೆ ಇಳಿದಿದೆ. ಇತರ ರಾಜ್ಯಗಳಲ್ಲಿ ಒಟ್ಟು ಹೆಚ್ಚಿದ ಉತ್ಪಾದನೆಯಿಂದಾಗಿ ದೇಶದ ಪ್ರಮುಖ ಉತ್ಪಾದಕ ಜಿಲ್ಲೆಯಾದ ನಾಸಿಕ್ ನಿಂದ ಪೂರೈಕೆಯಾಗುವ ನೀರುಳ್ಳಿಯ ಮೇಲಿನ ಅವಲಂಬನೆ ಕಡಿಮೆಯಾಗಿರುವುದು ಈ ಕುಸಿತಕ್ಕೆ ಕಾರಣವಾಗಿದೆ ಎಂದು ತಜ್ಞರು ಹೇಳುತ್ತಾರೆ.
ಎಲ್ಲಾ ರಾಜ್ಯಗಳಲ್ಲಿ ಈರುಳ್ಳಿಯನ್ನು ಬಿತ್ತನೆ ಮಾಡಲಾಗುತ್ತದೆ, ಆದಾಗ್ಯೂ, ದೇಶದಲ್ಲಿ ಮಹಾರಾಷ್ಟ್ರವು ಸುಮಾರು 43% ಉತ್ಪಾದನಾ ಪಾಲುದಾರಿಕೆಯನ್ನು ಹೊಂದುವ ಮೂಲಕ ಪ್ರಮುಖ ಉತ್ಪಾದಕ ರಾಜ್ಯವಾಗಿದೆ. ರಾಷ್ಟ್ರೀಯ ಉತ್ಪಾದನೆಯಲ್ಲಿ ಮಧ್ಯಪ್ರದೇಶ 16%, ಕರ್ನಾಟಕ ಮತ್ತು ಗುಜರಾತ್ ಸುಮಾರು 9% ಪಾಲುದಾರಿಕೆಯನ್ನು ಹೊಂದುವ ಮೂಲಕ ಪ್ರಮುಖ ಉತ್ಪಾದಕ ರಾಜ್ಯಗಳಲ್ಲಿ ಸೇರಿವೆ. ಇದನ್ನು ವರ್ಷಕ್ಕೆ ಮೂರು ಬಾರಿ ಕೊಯ್ಲು ಮಾಡಲಾಗುತ್ತದೆ. ಖಾರಿಫ್, ವಿಳಂಬ ಖಾರಿಫ್ ಮತ್ತು ರಾಬಿ ಇದರ ಬೆಳೆ ಋತುಗಳು.
ರಾಷ್ಟ್ರೀಯ ಉತ್ಪಾದನೆಗೆ ಸುಮಾರು 72-75% ನಷ್ಟು ಕೊಡುಗೆ ನೀಡುವುದರಿಂದ ಮತ್ತು ಮಾರ್ಚ್ ನಿಂದ ಮೇ ತಿಂಗಳುಗಳಲ್ಲಿ ಕೊಯ್ಲು ಮಾಡಲ್ಪಡುವುದರಿಂದ ರಾಬಿಯ ಕೊಯಿಲು ಅತ್ಯಂತ ಮುಖ್ಯವಾಗಿದೆ. ರಾಬಿ ಫಸಲಿನ ಶೆಲ್ಫ್ ಜೀವಿತಾವಧಿಯು (ಬಾಳಿಕೆ ಅವಧಿ) ಅತ್ಯಧಿಕ ಮತ್ತು ಅದನ್ನು ಹೆಚ್ಚು ಕಾಲ ಸಂಗ್ರಹಿಸಿಡಬಹುದಾಗಿದೆ, ಆದರೆ ಖಾರಿಫ್ ಮತ್ತು ಕೊನೆಯ (ವಿಳಂಬ) ಖಾರಿಫ್ ಬೆಳೆಗಳು ನೇರ ಬಳಕೆಗಾಗಿವೆ ಮತ್ತು ಸಂಗ್ರಹಾರ್ಹವಲ್ಲ. ಈರುಳ್ಳಿ ಕೊಯಿಲಿನ ಕಾಲಾವಧಿಯಿಂದಾಗಿ ದೇಶದಲ್ಲಿ ವರ್ಷಪೂರ್ತಿ ತಾಜಾ / ಸಂಗ್ರಹಿಸಿದ ಈರುಳ್ಳಿಯ ನಿಯಮಿತ ಪೂರೈಕೆ ಸಾಧ್ಯವಾಗಿದೆ. ಆದರೆ ಕೆಲವೊಮ್ಮೆ ಹವಾಮಾನ ವೈಪರೀತ್ಯದಿಂದಾಗಿ, ಸಂಗ್ರಹಿಸಿದ, ದಾಸ್ತಾನು ಮಾಡಿಟ್ಟ ಈರುಳ್ಳಿ ಹಾಳಾಗುತ್ತದೆ ಅಥವಾ ಬಿತ್ತನೆ ಮಾಡಿದ ಪ್ರದೇಶವು ಹಾನಿಗೊಳಗಾಗುತ್ತದೆ, ಇದರಿಂದ ಪೂರೈಕೆಯಲ್ಲಿ ನಿರ್ಬಂಧಗಳು ಏರ್ಪಡುತ್ತವೆ ಮತ್ತು ಇದು ದೇಶೀಯ ಬೆಲೆಗಳ ಏರಿಕೆಗೆ ಕಾರಣವಾಗುತ್ತದೆ.
ಇಂತಹ ಸವಾಲುಗಳನ್ನು ಎದುರಿಸಲು, ಪೂರೈಕೆ ಸರಪಳಿಯನ್ನು ಸುಗಮವಾಗಿಡಲು ಭಾರತ ಸರ್ಕಾರವು ಈರುಳ್ಳಿಯನ್ನು ಬಫರ್ ಆಗಿ (ಕಾಪು ದಾಸ್ತಾನು) ಸಂಗ್ರಹಿಸಲು ಮತ್ತು ಖರೀದಿಸಲು ಬೆಲೆ ಸ್ಥಿರೀಕರಣ ನಿಧಿಯನ್ನು ಸ್ಥಾಪಿಸಿದೆ.
ಕಳೆದ ವರ್ಷ, ಗ್ರಾಹಕ ವ್ಯವಹಾರಗಳ ಇಲಾಖೆಯ ನಿರ್ದೇಶನದ ಮೇರೆಗೆ ಬಫರ್ ಸ್ಟಾಕಿಂಗ್ಗಾಗಿ (ಕಾಪು ದಾಸ್ತಾನಿಗಾಗಿ) ನಾಫೆಡ್ 2.51 ಎಲ್ಎಂಟಿ ರಾಬಿ ಈರುಳ್ಳಿಯನ್ನು ಖರೀದಿಸಿತು. ಸಮಯೋಚಿತ ಮತ್ತು ಮಾಪನಾಂಕಿತ, ಲೆಕ್ಕಾಚಾರಯುಕ್ತ ಬಿಡುಗಡೆಯಿಂದಾಗಿ ಬೆಲೆಗಳು ಅಸಹಜವಾಗಿ ಹೆಚ್ಚಾಗದಂತೆ ನೋಡಿಕೊಳ್ಳಲಾಯಿತು. ದಾಸ್ತಾನು ಮಾಡಲಾದ ಈರುಳ್ಳಿಯನ್ನು ದೇಶಾದ್ಯಂತ ಬಿಡುಗಡೆ ಮಾಡಲಾಯಿತು, ಸುಗಮ ಪೂರೈಕೆಯನ್ನು ಖಚಿತಪಡಿಸಲಾಯಿತು. ಈ ವರ್ಷವೂ, ಗ್ರಾಹಕ ವ್ಯವಹಾರಗಳ ಇಲಾಖೆ 2.5 ಎಲ್ಎಂಟಿಯನ್ನು ಬಫರ್ ಸ್ಟಾಕ್ (ಕಾಪು ದಾಸ್ತಾನಾಗಿ ) ಆಗಿ ಇರಿಸಲು ನಿರ್ಧರಿಸಿದೆ.
ಈರುಳ್ಳಿಯ ಬಹುತೇಕ ಪ್ರಮಾಣದ ದಾಸ್ತಾನು ತೆರೆದ ಹೊಲಗಳಲ್ಲಿ, ತೆರೆದ ಗಾಳಿಯಾಡುವ ರಚನೆಗಳಲ್ಲಿ (ಚಾವ್ಲ್) ಸಂಗ್ರಹಿಸಲ್ಪಡುವುದರಿಂದ ಈ ರೀತಿಯ ದಾಸ್ತಾನಿನಲ್ಲಿ ಅದರದೇ ಆದ ಸವಾಲುಗಳಿವೆ. ಆದ್ದರಿಂದ, ವೈಜ್ಞಾನಿಕ ರೀತಿಯ ಶೀತಲೀಕೃತ ದಾಸ್ತಾನು ವ್ಯವಸ್ಥೆಯ (ಕೋಲ್ಡ್ ಚೈನ್ ) ಅವಶ್ಯಕತೆಯಿದೆ, ಇದು ಈರುಳ್ಳಿಯ ದೀರ್ಘಾವಧಿಯ ಬಾಳಿಕೆಯ ನಿಟ್ಟಿನಲ್ಲಿ ಪ್ರಸ್ತುತ ಪ್ರಾಯೋಗಿಕ ಹಂತದಲ್ಲಿದೆ. ಇಂತಹ ಮಾದರಿಗಳ ಯಶಸ್ಸಿನಿಂದಾಗಿ ಇತ್ತೀಚೆಗೆ ಕಂಡುಬಂದಂತಹ ಬೆಲೆ ಏರಿಳಿತಗಳನ್ನು ತಪ್ಪಿಸಲು ಸಹಾಯವಾಗುತ್ತದೆ. ಮಾರುಕಟ್ಟೆ ವೀಕ್ಷಕರು ರಫ್ತು ನೀತಿಯಲ್ಲಿ ಸ್ಥಿರತೆಯನ್ನು ಸಲಹೆ ಮಾಡುತ್ತಿದ್ದಾರೆ, ಏಕೆಂದರೆ ಇದು ಭಾರತೀಯ ಈರುಳ್ಳಿಗೆ ಉತ್ತಮ ರಫ್ತು ಮಾರುಕಟ್ಟೆಯನ್ನು ಖಚಿತಪಡಿಸುತ್ತದೆ.
ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯು ರಾಜ್ಯ ಸರ್ಕಾರಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ ಮತ್ತು ಮಾರುಕಟ್ಟೆಯ ಮೇಲೆ ನಿಕಟ ನಿಗಾ ಇಟ್ಟಿದೆ ಎಂದು ತಿಳಿದುಬಂದಿದೆ, ಇದರಿಂದಾಗಿ ರೈತರ ಅನುಕೂಲಕ್ಕಾಗಿ ಅಗತ್ಯವಿದ್ದರೆ ಹೆಚ್ಚುವರಿ ಮಧ್ಯಪ್ರವೇಶಗಳನ್ನು ಮಾಡಲಾಗುತ್ತದೆ.
*****
(Release ID: 1905098)