ಕೃಷಿ ಸಚಿವಾಲಯ
azadi ka amrit mahotsav

ನ್ಯಾನೋ ರಸಗೊಬ್ಬರಕ್ಕೆ ಉತ್ತೇಜನ

Posted On: 02 MAR 2023 7:13PM by PIB Bengaluru

ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ಹಾಗೂ ರಸಗೊಬ್ಬರ ಇಲಾಖೆಗಳ ಕಾರ್ಯದರ್ಶಿಗಳ ಸಹ ಅಧ್ಯಕ್ಷತೆಯಲ್ಲಿ 2023ರ ಮಾರ್ಚ್‌ 01ರಂದು ಐಸಿಎಆರ್‌ ಹಾಗೂ ರಾಜ್ಯ ಸರ್ಕಾರಗಳ ಪ್ರತಿನಿಧಿಗಳ ಸಭೆಯೊಂದು ನಡೆಯಿತು. ಮಣ್ಣಿನ ಆರೋಗ್ಯ ಹಾಗೂ ಉತ್ಪಾದಕತೆ ಸುಧಾರಣೆಗಾಗಿ ಸಮಗ್ರ ಪೋಷಕಾಂಶ ನಿರ್ವಹಣೆಗೆ ಉತ್ತೇಜನ ನೀಡಲು ಭಾರತ ಸರಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರಧಾನವಾಗಿ ಪ್ರಸ್ತಾಪವಾಯಿತು. ಹಾಗೆಯೇ ಮಣ್ಣಿನ ಕಾರ್ಡ್‌ನ ಶಿಫಾರಸಿನ ಅನ್ವಯ ರಾಸಾಯನಿಕ, ಸಾವಯವ, ಜೈವಿಕ ಗೊಬ್ಬರ ಹಾಗೂ ಇತರೆ ಹೊಸ ಸುಧಾರಿತ ರಸಗೊಬ್ಬರಗಳ ಸೂಕ್ತ ಮಿಶ್ರಣದ ಉತ್ತೇಜನೆಗೆ ಒತ್ತು ನೀಡುವಂತೆಯೂ ರಾಜ್ಯಗಳಿಗೆ ಸಲಹೆ ನೀಡಲಾಯಿತು.

ಇತ್ತೀಚಿನ ವರ್ಷಗಳಲ್ಲಿ ಮಾರುಕಟ್ಟೆಗೆ ನ್ಯಾನೋ ರಸಗೊಬ್ಬರವನ್ನು ಪರಿಚಯಿಸಲಾಗಿದ್ದು, ಐಸಿಎಆರ್ ಕೈಗೊಂಡ ಪ್ರಯೋಗಾರ್ಥ ಪರೀಕ್ಷೆಗಳಿಗೆ ಉತ್ತೇಜನಕಾರಿ ಫಲಿತಾಂಶ ಸಿಗುತ್ತಿರುವುದು ಕಾಣುತ್ತಿದೆ. ನ್ಯಾನೋ ರಸಗೊಬ್ಬರ ಬಳಕೆ ಜತೆಗೆ ಇತರೆ ಆವಿಷ್ಕಾರಕ ರಸಗೊಬ್ಬರಗಳಾದ ಸಲ್ಫರ್‌ ಲೇಪಿತ ಯೂರಿಯಾ, ಟ್ರಿಪಲ್‌ ಸೂಪರ್‌ ಪಾಸ್ಪೇಟ್‌ (ಟಿಎಸ್‌ಪಿ), ಕಾಕಂಬಿಯಿಂದ ತಯಾರಾದ ಪೊಟ್ಯಾಷ್‌ (ಪೊಟ್ಯಾಷ್‌ ಡಿರೈವ್ಡ್‌ ಫ್ರಮ್‌ ಮೊಲಾಸಸ್‌- ಪಿಡಿಎಂ) ಹಾಗೂ ಜೈವಿಕ ಗೊಬ್ಬರ ಬಳಕೆಯನ್ನು ಉತ್ತೇಜಿಸುವಂತೆ ಸಭೆಯಲ್ಲಿ ರಾಜ್ಯಗಳಿಗೆ ಸಲಹೆ ನೀಡಲಾಯಿತು.
ಐಸಿಎಆರ್‌ನ ಅಡಿಷನಲ್‌ ಡೈರೆಕ್ಟರ್‌ ಜನರಲ್‌ ಅವರು ಗಾತ್ರ ಆಧಾರಿತ ಗುಣಾಂಶಗಳು, ಹೆಚ್ಚಿನ ಮೇಲ್ಮೈ ಪರಿಮಾಣ ಅನುಪಾತ ಹಾಗೂ ವಿಶೇಷ ಆಪ್ಟಿಕಲ್‌ ಗುಣಲಕ್ಷಣಗಳಿಂದಾಗಿ ಬೆಳೆಗಳ ಪೋಷಣೆಗೆ ನ್ಯಾನೋ ರಸಗೊಬ್ಬರವು ಭರವಸೆ ಹೆಚ್ಚಿಸಿದೆ ಎಂದು ಒತ್ತು ಹೇಳಿದರು.

ಐಸಿಎಆರ್‌ ನಾನಾ ಪ್ರದೇಶ, ವಾತಾವರಣದಲ್ಲಿನ ಹಲವು ಬೆಳೆಗಳಿಗೆ ನಾನಾ ಪ್ರಮಾಣದಲ್ಲಿ ನ್ಯಾನೋ ರಸಗೊಬ್ಬರ ಬಳಕೆ ಪ್ರಯೋಗವನ್ನು ಕೈಗೊಂಡಿದೆ. ಹಾಗೆಯೇ ನ್ಯಾನೋ ರಸಗೊಬ್ಬರ ಬಳಕೆಗೆ ಪೂರಕವಾದ ಅಭ್ಯಾಸದ ಪ್ಯಾಕೇಜ್‌ಗಳನ್ನು ಸಿದ್ಧಪಡಿಸುವ ಪ್ರಕ್ರಿಯೆಯಲ್ಲೂ ತೊಡಗಿಸಿಕೊಂಡಿರುವುದು ರೈತರು ಈ ರೀತಿಯ ಸುಧಾರಿತ ರಸಗೊಬ್ಬರಗಳ ಬಳಕೆಗೆ ಮುಂದಾಗಲು ಸಹಕಾರಿಯಾಗಿದೆ. ನ್ಯಾನೋ ರಸಗೊಬ್ಬರ ಬಳಕೆಯಿಂದ ಇಳುವರಿ ಹಾಗೂ ಗುಣಮಟ್ಟದಲ್ಲಿ ಉತ್ತಮ ಫಲಿತಾಂಶ ಕಂಡುಬಂದಿರುವುದಾಗಿ ರೈತರು ತಿಳಿಸಿರುವ ಅಂಶವನ್ನು ಕೆಲ ರಾಜ್ಯಗಳು ಗಮನಕ್ಕೆ ತಂದಿವೆ. ಹಾಗೆಯೇ ಸಮಗ್ರ ಪೋಷಕಾಂಶ ನಿರ್ವಹಣೆ ಹಾಗೂ ನ್ಯಾನೋ ಯೂರಿಯಾ ಬಳಕೆಗೆ ಉತ್ತೇಜಿಸುವ ನಿಟ್ಟಿನಲ್ಲಿ ಪ್ರಯತ್ನವನ್ನು ಮುಂದುವರಿಸಿವೆ.

****


(Release ID: 1903813) Visitor Counter : 181


Read this release in: English , Urdu , Hindi , Telugu