ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಐಐಟಿ ಮದ್ರಾಸ್‌ನಲ್ಲಿ  ನಾವೀನ್ಯತೆ ಸೌಲಭ್ಯ ಕೇಂದ್ರದ ಉದ್ಘಾಟನೆ ಸಂದರ್ಭದಲ್ಲಿ ಉಪ ರಾಷ್ಟ್ರಪತಿಯವರ ಭಾಷಣದ ಪಠ್ಯ (ಆಯ್ದಭಾಗಗಳು)

Posted On: 28 FEB 2023 3:41PM by PIB Bengaluru

ಸ್ವಾತಂತ್ರ್ಯದ 75 ನೇ ವರ್ಷದ ಈ ಅಮೃತ ಕಾಲದಲ್ಲಿ, 2047 ರಲ್ಲಿ ಭಾರತದ ಭವಿಷ್ಯವನ್ನು ರೂಪಿಸುವ ಯೋಧರನ್ನು ಸೃಷ್ಟಿಸಲಿರುವ ಐಐಟಿ ಮದ್ರಾಸ್‌ನ ನಿರ್ದೇಶಕರೇ, ಪ್ರಾಧ್ಯಾಪಕರೇ,

ಹಳೆಯ ವಿದ್ಯಾರ್ಥಿಗಳು ಯಾವುದೇ ಸಂಸ್ಥೆಯ ಬೆನ್ನೆಲುಬು. ಸಂಸ್ಥೆಗಳು ಹಳೆಯ ವಿದ್ಯಾರ್ಥಿಗಳ ಶ್ರಮ, ಅವರ ಪ್ರಶಸ್ತಿಗಳು ಮತ್ತು ಅವರ ಕೊಡುಗೆಗಳ ಮೇಲೆ ಬೆಳೆಯುತ್ತವೆ.

ಎಲ್ಲಾ ಸಂಸ್ಥೆಗಳಲ್ಲಿ ಹಳೆಯ ವಿದ್ಯಾರ್ಥಿಗಳ ರಚನಾತ್ಮಕ ವಿಕಸನಕ್ಕೆ ನಾವು ಕಾರ್ಯವಿಧಾನವನ್ನು ರೂಪಿಸೋಣ. ಆ ಹಳೆಯ ವಿದ್ಯಾರ್ಥಿಗಳ ಸಂಸ್ಥೆಗಳು ನಮ್ಮ ರಾಷ್ಟ್ರೀಯತೆ, ನಮ್ಮ ಆರ್ಥಿಕ ರಾಷ್ಟ್ರೀಯತೆ ಮತ್ತು ನಮ್ಮ ಬೆಳವಣಿಗೆಯ ಪಥದ ಹೊಣೆಯನ್ನು ನೋಡಿಕೊಳ್ಳುತ್ತವೆ.

ಹಳೆಯ ವಿದ್ಯಾರ್ಥಿಗಳ ಒಕ್ಕೂಟವನ್ನು ಹೊಂದುವ ಮೂಲಕ ಎಲ್ಲಾ ಹಳೆಯ ವಿದ್ಯಾರ್ಥಿಗಳಿಗೆ ಆಧುನಿಕ ವೇದಿಕೆಯನ್ನು ನಿರ್ಮಿಸುವಲ್ಲಿ ಈ ಮಹಾನ್ ಸಂಸ್ಥೆಯು ಮುಂದಾಳತ್ವ ವಹಿಸಬೇಕೆಂದು ನಾನು ಬಯಸುತ್ತೇನೆ.

ನಾವೀನ್ಯತೆ ಕೇಂದ್ರದ ಉದ್ಘಾಟನೆಯು ಬದಲಾಗುತ್ತಿರುವ ಪರಿಸರ ವ್ಯವಸ್ಥೆ ಮತ್ತು ಭಾರತವು ವಿಶ್ವಕ್ಕೆ ನೀಡುತ್ತಿರುವ ಹೊಸ ಚಿತ್ರಣವನ್ನು ಸೂಚಿಸುತ್ತದೆ.

ಇಲ್ಲಿ ನೆರೆದಿರುವ ಸಭೆಯು, ಹೆಚ್ಚು ವೈವಿಧ್ಯಮಯ ಭಾರತ ಮತ್ತು ಭಾರತದ ಚೈತನ್ಯವನ್ನು ಪ್ರತಿನಿಧಿಸುತ್ತದೆ. ಇದರಲ್ಲಿ ಶಕ್ತಿ, ಚೈತನ್ಯ ಮತ್ತು ಸಕಾರಾತ್ಮಕತೆ ಇದೆ. ನಾನು ಭಾರತದ ಭವಿಷ್ಯವನ್ನು ಊಹಿಸಬಲ್ಲೆ ಮತ್ತು ಅದು ಎಂದಿಗೂ ಏರುಗತಿಯಲ್ಲಿಯೇ ಇರುತ್ತದೆ.

ಒಂದು ಚಿಕ್ಕ ನಿದರ್ಶನವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ನಾನು ರಾಜಸ್ಥಾನದಲ್ಲಿ ವಕೀಲ ವೃತ್ತಿಯನ್ನು ಪ್ರಾರಂಭಿಸಿದಾಗ ಒಂದು ಹಳ್ಳಿಯ ಸ್ಥಳೀಯ ಕಾನೂನು ಪದವೀಧರರೊಬ್ಬರು ನನ್ನ ಕೊಠಡಿಗೆ ಬಂದರು. ಅವರು ರಿಕ್ಷಾದಲ್ಲಿ ಬಂದಿದ್ದರು. ಈಗ ಅವರು ಬಹಳ ಪ್ರತಿಷ್ಠಿತ ವಕೀಲರಾಗಿದ್ದಾರೆ, ಸಂಸ್ಕೃತಿಯ ಶ್ರೀಮಂತ ಸಂಪ್ರದಾಯಸ್ಥ ಕುಟುಂಬದಿಂದ ಬಂದವರು. ಅವರು ಅದಕ್ಕೂ ಮೊದಲು ಪಟ್ಟಣವನ್ನೇ ನೋಡಿರಲಿಲ್ಲ. ಆ ಯಶಸ್ವಿ ವಕೀಲರಿಗೆ ಎಂತಹ ಸಂತೋಷಕರ ಕ್ಷಣಗಳು ಎಂದರೆ; ಅವರ ಮಗ ಐಐಟಿ ಮದ್ರಾಸ್‌ನಲ್ಲಿ ಸಿವಿಲ್ ಎಂಜಿನಿಯರಿಂಗ್‌ನ ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿ; ಅವರ ಮಗಳು ಐಐಟಿ ಮದ್ರಾಸ್‌ನಲ್ಲಿ ಎಂ.ಎಸ್ಸಿ. ಎರಡನೇ ಸೆಮಿಸ್ಟರ್ ವಿದ್ಯಾರ್ಥಿನಿ.

ನಾವು ಈಗ ನಮ್ಮ ಡಿಜಿಟಲ್ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಸಮರ್ಥವಾಗಿರುವ ಸರ್ಕಾರಿ ನೀತಿಗಳ ಪರಿಸರ ವ್ಯವಸ್ಥೆಯನ್ನು ಹೊಂದಿದ್ದೇವೆ. ನನ್ನ ಪೀಳಿಗೆಯಲ್ಲಿ ನಾವು ಎದುರಿಸಿದ ರೀತಿಯ ಸಮಸ್ಯೆಗಳು ಈಗ ಇಲ್ಲ.

ಐಐಟಿ ಮದ್ರಾಸ್ ಒಂದು ಶ್ರೇಷ್ಠ ಸಂಸ್ಥೆಯಾಗಿದ್ದು, ದೇಶದ ಅತ್ಯುನ್ನತ ನಾವೀನ್ಯತಾ ಸಂಸ್ಥೆಯಾಗಿದೆ. ಇದರ 620 ಎಕರೆ ಕ್ಯಾಂಪಸ್ 432 ಜಾತಿಯ ಸಸ್ಯಗಳು ಮತ್ತು ಪ್ರಾಣಿಗಳಿಗೆ ನೆಲೆಯಾಗಿದೆ, 50 ಜಾತಿಯ ಚಿಟ್ಟೆಗಳು ಮತ್ತು ಅಳಿವಿನಂಚಿನಲ್ಲಿರುವ ಬ್ಲ್ಯಾಕ್ ಪ್ಯಾಂಥರ್ ಕೂಡ ಈ ಕ್ಯಾಂಪಸ್‌ನಲ್ಲಿ ಕಂಡುಬರುತ್ತವೆ.

ಕೇವಲ ಒಂದು ವರ್ಷದ ಹಿಂದೆ, ಜುಲೈ 2022 ರಲ್ಲಿ, ನೀವು ವಿಶಿಷ್ಟವಾದ, ವಿನೂತನವಾದ ಆನ್‌ಲೈನ್‌ ಕೋರ್ಸ್ ಅನ್ನು ಪ್ರಾರಂಭಿಸಿದ್ದೀರಿ. ಈ ದೇಶದಲ್ಲಿ ನಾವು ನಿಜವಾಗಿಯೂ ನಮ್ಮ ಪರಿಹಾರಗಳಿಗಾಗಿ ವಿನೂತನವಾಗಿ ಯೋಚಿಸಬೇಕಾಗಿದೆ.

ಹೊಸ ಚಿಂತನೆ ನಮ್ಮ ಡಿಎನ್ಎಯಲ್ಲಿದೆ. ನಾವು ಅದನ್ನು ಸಕ್ರಿಯಗೊಳಿಸಬೇಕಾಗಿದೆ ಮತ್ತು ಅದನ್ನು ಈ ಸಂಸ್ಥೆಯಲ್ಲಿ ಸಕ್ರಿಯಗೊಳಿಸಲಾಗುತ್ತಿದೆ. ಒಂದು ಮಿಲಿಯನ್ ಶಾಲೆಗಳು ಮತ್ತು ಕಾಲೇಜು ವಿದ್ಯಾರ್ಥಿಗಳನ್ನು ತಲುಪುವ ಗುರಿಯ ಈ ಸಂಸ್ಥೆಯು ಆರೋಗ್ಯಕರ ಬೆಳವಣಿಗೆಯ ಕೇಂದ್ರಬಿಂದುವಾಗಿದೆ. ಇದು ಗುರಿಯನ್ನು ಸಾಧಿಸುವುದರಲ್ಲಿ ಸಂದೇಹವೇ ಇಲ್ಲ.

ಸುಧಾ ಗೋಪಾಲ ಕೃಷ್ಣ ಮೆದುಳು ಕೇಂದ್ರದ ಬಗ್ಗೆ ಉಲ್ಲೇಖಿಸಲಾಯಿತು. ಇದು ನಿಜಕ್ಕೂ ಮಾನವನ ಮೆದುಳನ್ನು ನಕ್ಷೆ ಮಾಡುವ ಮಹತ್ವಾಕಾಂಕ್ಷೆಯ ಜಾಗತಿಕ ಯೋಜನೆಯಾಗಿದೆ. ಮೆದುಳಿನ ಮ್ಯಾಪಿಂಗ್ ಮಾನವೀಯತೆಯ ದೊಡ್ಡ ಒಳಿತಿಗೆ ಕಾರಣವಾಗುತ್ತದೆ ಎಂದು ನಾನು ಮತ್ತೊಮ್ಮೆ ಹೇಳುತ್ತೇನೆ.

ಈ ಸಂಸ್ಥೆಯು ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಜ್ಯಾಮಿತೀಯ ಬೆಳವಣಿಗೆಗಾಗಿ ಉತ್ಪನ್ನವನ್ನು ಅಭಿವೃದ್ಧಿಪಡಿಸಿದೆ ಎಂದು ತಿಳಿದು ನನಗೆ ಸಂತಸವಾಗಿದೆ. ಇದು ವ್ಯಕ್ತಿಯಲ್ಲಿ ಜೀನ್ ರೂಪಾಂತರಗಳನ್ನು ಉಂಟುಮಾಡುವ ಕ್ಯಾನ್ಸರ್ ಅನ್ನು ಪತ್ತೆಹಚ್ಚಬಹುದು.

ತಮಾಷೆಗೆ ಹೇಳುವುದಾದರೆ, ಪ್ರಜಾಪ್ರಭುತ್ವದ ಪ್ರಜ್ಞೆಗೆ ಕಡಿವಾಣ ಹಾಕುವ ಚುನಾವಣಾ ಫಲಿತಾಂಶಗಳನ್ನು ಊಹಿಸುವ ಅಂದಾಜು ನಮಗೆ ಬೇಡ. ಕೆಲವು ರೀತಿಯ ಎಕ್ಸಿಟ್ ಪೋಲ್‌ಗಳು ಮತ್ತು ಜನರು ಅಲ್ಲಿ ಇಲ್ಲಿ ಮಾತನಾಡುವ ಮೂಲಕ ಇದು ಸಂಭವಿಸುತ್ತದೆ. ಅದನ್ನು ಕ್ಷೇತ್ರದ ಮತದಾರರಿಗೇ ಬಿಡಲಿ.

ನಾನು ಸಮಕಾಲೀನ ಜಾಗತಿಕ ಸನ್ನಿವೇಶದ ಬಗ್ಗೆ ಮಾತನಾಡುತ್ತೇನೆ. ಇದರಲ್ಲಿ ಭಾರತವು ಬೆಳಗುವ ಧ್ರುವತಾರೆಯಾಗಿದೆ, ಆದ್ದರಿಂದ ಪ್ರಪಂಚದ ಪ್ರತಿಯೊಬ್ಬರಿಂದಲೂ ಪ್ರಶಂಸೆ ಪಡೆಯುತ್ತಿದೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ, ನಮ್ಮ ಆರ್ಥಿಕತೆಯು ನಿಸ್ಸಂದೇಹವಾಗಿ ಪ್ರಕಾಶಮಾನವಾಗಿದೆ, ನಾವು ಅನೇಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಬೆಳವಣಿಗೆಗಿಂತ ಹಲವು ಪಟ್ಟು ಹೆಚ್ಚು ಪ್ರಗತಿ ಕಾಣುವ ನಿರೀಕ್ಷೆಯಿದೆ.

2022 ರ ಸೆಪ್ಟೆಂಬರ್‌ನಲ್ಲಿ ನಾವು ನಮ್ಮ ಹಿಂದಿನ ವಸಾಹತುಶಾಹಿ ಆಡಳಿತಗಾರರನ್ನು ಹಿಂದಿಕ್ಕಿದಾಗ, ಭಾರತವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಯಿತು. ದಶಕದ ಅಂತ್ಯದ ವೇಳೆಗೆ ನಾವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುತ್ತೇವೆ ಎಂಬುದರಲ್ಲಿ ನನಗೆ ಸಂದೇಹವಿಲ್ಲ. ನನ್ನ ಮುಂದಿರುವ 2047 ರ ಯೋಧರೊಂದಿಗೆ, ಆ ಹೊತ್ತಿಗೆ ನಾವು ಉತ್ತುಂಗದಲ್ಲಿರುತ್ಥೆವೆ ಮತ್ತು ಇದನ್ನು ಬೇರೆ ಯಾರೂ ಬದಲಿಸಲು ಸಾಧ್ಯವಿಲ್ಲ.

ಭಾರತದ ಬೆಳವಣಿಗೆಯನ್ನು ತಡೆಯಲಾಗದು. ಇದು ಏರುಗತಿಯ ಪಥದಲ್ಲಿ ಮುಂದುವರಿಯುತ್ತದೆ. ಆಗ್ನೇಯ ಮತ್ತು ಪಶ್ಚಿಮದಲ್ಲಿರುವ ಜಾಗತಿಕ ಒತ್ತಡದ ಸನ್ನಿವೇಶದ ಹೊರತಾಗಿಯೂ, ಭಾರತವು ಬೆಳೆಯತುತ್ತಲೇ ಇದೆ. ನಮ್ಮ ಭಾರತವು ಅವಕಾಶಗಳ ಭೂಮಿಯಾಗಿದೆ, ಹೂಡಿಕೆ ಮತ್ತು ಅವಕಾಶಕ್ಕಾಗಿ ಜಾಗತಿಕ ತಾಣವಾಗಿದೆ.

ಈಗ ಭಾರತ ಮಾತನಾಡಿದರೆ, ಇಡೀ  ಜಗತ್ತೇ ಕೇಳುತ್ತದೆ.

ಭಾರತದ ಪ್ರಧಾನಿಯವರ ಎರಡು ಹೇಳಿಕೆಗಳನ್ನು ಗಮನಿಸಿ. (ಎ) ಭಾರತ ಎಂದಿಗೂ ವಿಸ್ತರಣೆಯಲ್ಲಿ ತೊಡಗಿಲ್ಲ ಮತ್ತು ಇದು ವಿಸ್ತರಣೆಯ ಯುಗವಲ್ಲ. (ಬಿ) ಯುದ್ಧವು ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ಜಗತ್ತಿನಲ್ಲಿರುವ ಸಮಸ್ಯೆಗಳನ್ನು ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಪರಿಹರಿಸಿಕೊಳ್ಳಬೇಕು.

ಕಾರ್ಯತಂತ್ರದ ಸನ್ನದ್ಧತೆಯು ಅತ್ಯುತ್ತಮ ರಕ್ಷಣಾ ತಂತ್ರವಾಗಿದೆ ಮತ್ತು ಆರ್ಥಿಕ ಸನ್ನದ್ಧತೆಯ ಒಂದು ದೊಡ್ಡ ಅಂಶವೆಂದರೆ ಆರ್ಥಿಕ ರಾಷ್ಟ್ರೀಯತೆ. ನಮ್ಮ ಆರ್ಥಿಕ ರಾಷ್ಟ್ರೀಯತೆಯ ಬಗ್ಗೆ ಚಿಂತನಶೀಲರಾಗುವಂತೆ ಮತ್ತು ಕಾಳಜಿ ವಹಿಸುವಂತೆ ಜನರನ್ನು ಪ್ರೇರೇಪಿಸಬೇಕು ಮತ್ತು ಉತ್ತೇಜಿಸಬೇಕು.

ದೀಪಾವಳಿ ಕೆ ದಿಯೆ ಔರ್ ಪತಂಗ್, ಬಹರ್ ಸೆ ಆನೆ ಚಾಹಿಯೇ ಕ್ಯಾ? ಔರ್ ಪತಾಕೆ ತೊ ಯಹಿ ಬನ್ ಸಕ್ತೇ ಹೈ; (ನಾವು ದೀಪಾವಳಿಗೆ ಮಣ್ಣಿನ ದೀಪಗಳು ಮತ್ತು ಗಾಳಿಪಟಗಳಂತಹ ವಸ್ತುಗಳನ್ನು ಇತರ ದೇಶಗಳಿಂದ ಆಮದು ಮಾಡಿಕೊಳ್ಳಬೇಕೇ?)

ನಾನು 1989ರಲ್ಲಿ ಸಂಸತ್ತಿಗೆ ಆಯ್ಕೆಯಾಗಿ ಕೇಂದ್ರ ಸಚಿವನಾಗುವ ಸಂದರ್ಭ ಬಂದಿತ್ತು. ನಾವು ಆಗ 20 ಪಕ್ಷಗಳೊಂದಿಗೆ ಸರ್ಕಾರವನ್ನು ನಡೆಸುತ್ತಿದ್ದೆವು ನಂತರ ಮೂರು ದಶಕಗಳ ಕಾಲ ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರಗಳಿದ್ದವು. ಆದರೆ 2014 ರಲ್ಲಿ ಒಂದು ಅಪೂರ್ವ ಕ್ಷಣ ಬಂದಿತು. ಮೂರು ದಶಕಗಳ ನಂತರ ಭಾರತದ ರಾಜಕೀಯ ಮತ್ತು ದೇಶವು ಒಂದೇ ಪಕ್ಷದ ಸರ್ಕಾರವನ್ನು ಹೊಂದಿದ ಸಂದರ್ಭ. ಅದು ವಿಭಿನ್ನ ದಿಕ್ಕಿನಲ್ಲಿ ಚಲಿಸಲು ಪ್ರಾರಂಭಿಸಿದ ಸಮಯ, ಗುಣಾತ್ಮಕವಾಗಿ, ಅಂತರ್ಗತ ಬೆಳವಣಿಗೆಯು ಪ್ರೋತ್ಸಾಹ ಪಡೆಯಿತು ಮತ್ತು 2019 ರಲ್ಲಿ ಮತದಾರರ ನಂಬಿಕೆಯ ನವೀಕೃತ ಸಮರ್ಥನೆ ದೊರೆಯಿತು.

ಭಾರತದ ಬೆಳವಣಿಗೆಯ ನೀಲನಕ್ಷೆ ಈಗ ಕಾಗದದಲ್ಲಿ ಮಾತ್ರ ಉಳಿದಿಲ್ಲ. ಇದನ್ನು ವಾಸ್ತವದಲ್ಲಿ ಕಾರ್ಯಗತಗೊಳಿಸಲಾಗುತ್ತಿದೆ. ನಾವು ಜಾಗತಿಕ ನಾವೀನ್ಯತಾ ಸೂಚ್ಯಂಕದಲ್ಲಿ 40 ಸ್ಥಾನಗಳಷ್ಟು ಜಿಗಿದಿದ್ದೇವೆ ಮತ್ತು ಇದು ಸಂಶೋಧನೆ ಮತ್ತು ಪೇಟೆಂಟ್‌ಗಳ ಸಲ್ಲಿಕೆಯಲ್ಲಿ ಪ್ರತಿಫಲಿಸುತ್ತಿದೆ, ಇದರ ಬಗ್ಗೆ ಬೇರೆಯವರಿಗಿಂತ ಈ ಸಂಸ್ಥೆಗೆ ಹೆಚ್ಚು ತಿಳಿದಿದೆ. ಭಾರತವು 80,000 ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳೊಂದಿಗೆ ಮತ್ತು ವಿಶ್ವದ ಅತಿ ಹೆಚ್ಚು ಯುನಿಕಾರ್ನ್‌ಗಳೊಂದಿಗೆ ಮೂರನೇ ಅತಿದೊಡ್ಡ ಸ್ಟಾರ್ಟಪ್ ಪರಿಸರ ವ್ಯವಸ್ಥೆಯನ್ನು ಹೊಂದಿದೆ.

ಪ್ರಪಂಚದ ಬೆಳವಣಿಗೆಯು ಕೆಲವೊಮ್ಮೆ ಪಿರಮಿಡ್ ಆಕಾರದಲ್ಲಿ ಇರುತ್ತದೆ. ಅಂದರೆ ನಗರ ಕೇಂದ್ರಗಳು ಬೆಳವಣಿಗೆಯ ಪ್ರಯೋಜನವನ್ನು ಪಡೆಯುತ್ತವೆ. ಹಿಂದುಳಿದ ಜಿಲ್ಲೆಗಳು, ಜಿಲ್ಲಾಧಿಕಾರಿಗಳು ಹುದ್ದೆಯ ಅಧಿಕಾರ ಸ್ವೀಕರಿಸಲು ಹಿಂದೇಟು ಹಾಕುತ್ತಿದ್ದ ಮಹತ್ವಾಕಾಂಕ್ಷೆಯ ಜಿಲ್ಲೆಗಳು ಇದೀಗ ಅವರಿಗೆ ನೆಚ್ಚಿನ ಪೋಸ್ಟಿಂಗ್ ತಾಣಗಳಾಗಿವೆ, ಇದಕ್ಕೆ ಕಾರಣ ಅಭಿವೃದ್ಧಿ. ಸುಮಾರು 40,000 ಕೋಟಿ ರೂಪಾಯಿಗಳ ಒಟ್ಟು ಮೌಲ್ಯಮಾಪನದೊಂದಿಗೆ 300 ಕ್ಕೂ ಹೆಚ್ಚು ಸ್ಟಾರ್ಟ್-ಅಪ್‌ಗಳಿಗೆ ಆಸರೆಯಾಗಿರುವ ಇನ್‌ಕ್ಯುಬೇಶನ್ ಸೆಲ್‌ನೊಂದಿಗೆ ಐಐಟಿ ಮದ್ರಾಸ್‌ನ ವಿಶ್ವಾಸಾರ್ಹ ಕಾರ್ಯಕ್ಷಮತೆಯನ್ನು ಕಂಡು ನನಗೆ ತುಂಬಾ ಸಂತೋಷವಾಗಿದೆ ಮತ್ತು ತೃಪ್ತಿಯಾಗಿದೆ.

ಇದು ಐಐಟಿ ಪದವೀಧರರಲ್ಲಿ ಉದ್ಯೋಗಾಕಾಂಕ್ಷಿಗಳಾಗುವ ಬದಲು ದೇಶದಲ್ಲಿ ಉದ್ಯೋಗ ಸೃಷ್ಟಿಕರ್ತರಾಗುವ ಮನೋಭಾವವನ್ನಾಗಿ ಬದಲಾಯಿಸಿದೆ. ಸ್ನೇಹಿತರೇ, ನಾವು ಕಾರ್ಪೊರೇಟ್ ಜಗತ್ತನ್ನು ನೋಡಿದಾಗ, ಭಾರತೀಯರು ಅಗ್ರಸ್ಥಾನದಲ್ಲಿದ್ದಾರೆ ಮತ್ತು ಭವಿಷ್ಯದ ಬಗ್ಗೆ ಯೋಚಿಸುವ ನಿರ್ದೇಶಕರಂತಹ ದಾರ್ಶನಿಕ ಅಧ್ಯಾಪಕರು ಯಶಸ್ಸಿಗೆ ಕಾರಣವಾಗುತ್ತಾರೆ. ಅವರು ತಮ್ಮ ಕನಸುಗಳನ್ನು ಮತ್ತು ರಾಷ್ಟ್ರದ ಕಲ್ಯಾಣದ ಆಕಾಂಕ್ಷೆಗಳನ್ನು ನಿಮ್ಮ ಮೂಲಕ ಈಡೇರಿಸುತ್ತಾರೆ. ಹಾಗಾಗಿ ನಾನು 2047 ರ ಯೋಧರು ಎಂದು ಕರೆದ ನಮ್ಮಲ್ಲಿ ಕೆಲವರು ನೀವು ಏನು ಮಾಡುತ್ತೀರಿ ಮತ್ತು ಯಾವ ಸಾಧನೆಯನ್ನು ಪ್ರದರ್ಶಿಸುತ್ತೀರಿ ಎಂದು ಜಗತ್ತು ಮೆಚ್ಚುಗೆಯಿಂದ ನೋಡುತ್ತಿರುತ್ತದೆ. ನಮ್ಮಲ್ಲಿ ಕೆಲವರು ಇಲ್ಲಿ ಇಲ್ಲದಿರಬಹುದು. ಆದರೆ ನಾನು ಆತ್ಮವಿಶ್ವಾಸದಿಂದ ಹೇಳಬಲ್ಲೆ, ವಿಶ್ವದ ಯಾವುದೇ ಯುವ ಮಾನವ ಸಂಪನ್ಮೂಲ ಭಾರತೀಯರೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ ಮತ್ತು ಈಗ ಉತ್ತಮವಾದುದನ್ನು ನಾವು ಹೊಂದಿದ್ದೇವೆ.

ಸ್ವಾಮಿ ವಿವೇಕಾನಂದರು 19 ನೇ ಶತಮಾನದಲ್ಲಿ ಜನಪ್ರಿಯಗೊಳಿಸಿದ ಘೋಷಣೆಯನ್ನು ನಾನು ನೆನಪಿಸಿಕೊಳ್ಳುತ್ತೇನೆ. ನಾನು ರಾಜಸ್ಥಾನದ ಝುಂಝುನು ಜಿಲ್ಲೆಗೆ ಸೇರಿದವನು, ಅಲ್ಲಿ ಸ್ವಾವಿ ವಿವೇಕಾನಂದರು ಕೆಲಸ ಮಾಡಿದ್ದರು ಮತ್ತು ನಾನು ಪಶ್ಚಿಮ ಬಂಗಾಳ ರಾಜ್ಯದ ರಾಜ್ಯಪಾಲ ಆಗಿದ್ದೆ, ಅಲ್ಲಿ ಸ್ವಾಮೀಜಿ ಅವರು ಪ್ರಭಾವಶಾಲಿ ಕೆಲಸಗಳನ್ನು ಮಾಡಿದರು ಮತ್ತು ನನ್ನ ಪತ್ನಿ ಜೊತೆಯಲ್ಲಿ ಚಿಕಾಗೋಗೆ ಹೋಗಿದ್ದೆ. ಅಲ್ಲಿ ಸ್ವಾಮೀಜಿ ಅವರು ಜಗತ್ತಿಗೆ ತಮ್ಮ ಪ್ರಸಿದ್ಧ ಭಾಷಣವನ್ನು ಮಾಡಿದ್ದರು. ‘ಎದ್ದೇಳಿ ಎದ್ದೇಳಿ ಮತ್ತು ಗುರಿ ಮುಟ್ಟುವವರೆಗೆ ನಿಲ್ಲಬೇಡಿ’ಎಂಬ ಸ್ವಾಮೀಜಿಯ ಸಂದೇಶವನ್ನು ನಾನು ಇಲ್ಲಿ ಉಲ್ಲೇಖಿಸುತ್ತೇನೆ. ನಿಜವಾಗಿ ಹೇಳಬೇಕೆಂದರೆ ಇದು ಸ್ವಾಮೀಜಿಯವರ ಚಿಂತನಾ ಕ್ರಮದಿಂದ ಹುಟ್ಟಿಕೊಂಡ ಘೋಷಣೆಯಲ್ಲ.

ಈ ಘೋಷಣೆಯು ನಮ್ಮ ನಾಗರಿಕತೆಯ ತತ್ವದಲ್ಲಿಯೇ ಹುದುಗಿದೆ. ನೀವು ಅದರ ಮೂಲವನ್ನು ಪತ್ತೆಹಚ್ಚಿದರೆ ಅದು ಉಪನಿಷತ್ತುಗಳಲ್ಲಿದೆ ಎಂಬುದನ್ನು ನೀವು ಕಂಡುಕೊಳ್ಳುತ್ತೀರಿ. ನಿಮ್ಮಲ್ಲಿ ಇದರ ಬಗ್ಗೆ ಓದಲು ಉತ್ಸುಕರಾಗಿರುವವರು, ಉಪನಿಷತ್ತುಗಳನ್ನು ತಿಳಿದುಕೊಳ್ಳಲು ಸ್ವಲ್ಪ ಸಮಯವನ್ನು ಮೀಸಲಿಡಬೇಕು ಎಂದು ನಾನು ಎಲ್ಲಾ ಯುವ ಮನಸ್ಸುಗಳಿಗೆ ಮನವಿ ಮಾಡುತ್ತೇನೆ. ಇದು ನಿಮ್ಮ ಮೆದುಳನ್ನು ಚುರುಕುಗೊಳಿಸುತ್ತದೆ ಮತ್ತು ಸಮಾಜದ ಕಲ್ಯಾಣಕ್ಕಾಗಿ ಜ್ಞಾನವನ್ನು ಗಳಿಸಲು ಸಹಾಯ ಮಾಡುತ್ತದೆ.

ಸ್ನೇಹಿತರೇ, ಗೋಡೆಯ ಮೇಲಿನ ಬರಹವನ್ನು ನಾವು ಏಕೆ ನೋಡುವುದಿಲ್ಲ ಎಂದು ನಾನು ಕೆಲವೊಮ್ಮೆ ಚಿಂತೆ ಮಾಡುತ್ತೇನೆ? ನಮ್ಮ ವ್ಯವಸ್ಥೆಯನ್ನು ಹಾಳುಮಾಡುವ, ನಮ್ಮ ಪ್ರಜಾಪ್ರಭುತ್ವಕ್ಕೆ ಕಳಂಕ ತರುವ, ನಮ್ಮ ಯಶಸ್ಸನ್ನು ಕಡಿಮೆ ಮಾಡುವ ಕೆಲವು ಧ್ವನಿಗಳನ್ನು ನಾವು ಏಕೆ ಅನುಮತಿಸುತ್ತೇವೆ? ನಾವು ಭಾರತೀಯರು ಎಂಬುದಕ್ಕೆ ಹೆಮ್ಮೆ ಪಡಬೇಕು. ನಮ್ಮ ಸಾಧನೆಗಳ ಬಗ್ಗೆ ನಮಗೆ ಹೆಮ್ಮೆ ಇರಬೇಕು. ಜಗತ್ತು ಮೆಚ್ಚುತ್ತಿದೆ ಮತ್ತು ಆದರೆ ನಮ್ಮಲ್ಲಿನ ಕೆಲವರು ಪ್ರಶ್ನಿಸುತ್ತಿದ್ದಾರೆ.

ಭಾರತವು ಭೂಮಿಯ ಮೇಲಿನ ಅತಿದೊಡ್ಡ ಪ್ರಜಾಪ್ರಭುತ್ವ ಮತ್ತು ಪ್ರಜಾಪ್ರಭುತ್ವದ ತಾಯಿಯಾಗಿದೆ. ಭಾರತವು ಅತ್ಯಂತ ಕ್ರಿಯಾಶೀಲ ಪ್ರಜಾಪ್ರಭುತ್ವವಾಗಿದೆ ಎಂದು ನಾನು ಧೈರ್ಯವಾಗಿ ಹೇಳುತ್ತೇನೆ. ಉದಾತ್ತತೆ ಮತ್ತು ಪ್ರಜಾಪ್ರಭುತ್ವದ ಪ್ರಜ್ಞೆಯನ್ನು ಒಳಗೊಂಡಿರುವ ಎಲ್ಲವನ್ನೂ ನಾವು ಹೊಂದಿದ್ದೇವೆ.

ಮಿಂಚಿನ ವೇಗದಲ್ಲಿ ಕಾರ್ಯನಿರ್ವಹಿಸುವ ನ್ಯಾಯಾಂಗವು ಭೂಮಿಯ ಮೇಲೆ ಎಲ್ಲಿದೆ ಎಂದು ಹೇಳಿ. ಅದನ್ನು ಕಂಡುಹಿಡಿಯಿರಿ, ನಿಮಗೆ ಯಾವುದೂ ಸಿಗುವುದಿಲ್ಲ. ನಮ್ಮ ನ್ಯಾಯಾಂಗವು ನಮ್ಮ ಪ್ರಜಾಪ್ರಭುತ್ವಕ್ಕೆ ಹೊಸ ಹೆಸರನ್ನು ನೀಡಲು ಮಿಂಚಿನ ವೇಗದಲ್ಲಿ ಕಾರ್ಯನಿರ್ವಹಿಸಿದೆ.. ದೊಡ್ಡದನ್ನು ಯೋಜಿಸುವ, ದೊಡ್ಡದನ್ನು ಕಾರ್ಯಗತಗೊಳಿಸುವ ಕಾರ್ಯಾಂಗವನ್ನು ಭೂಮಿಯ ಮೇಲೆ ನೀವು ಮತ್ತೆಲ್ಲೂ ಕಾಣಲಾರಿರಿ.

220 ಕೋಟಿ ಲಸಿಕೆ ಡೋಸ್‌ಗಳ ಬಗ್ಗೆ ಕಲ್ಪಿಸಿಕೊಳ್ಳಿ, ಜನರು ಎಲ್ಲಾ ರೀತಿಯ ಸಮಸ್ಯೆಗಳನ್ನು ಎತ್ತುತ್ತಾರೆ, ಯಾವದೇ ಚಿಂತನಾ ಕ್ರಮವಿಲ್ಲದೆ, ರಾಷ್ಟ್ರವನ್ನು ನಂಬದೆ, ಕಾರ್ಯಕ್ರಮವನ್ನು ವಿಫಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ.

ಆದರೆ ನಾವು ಕೋವಿಡ್ ಅನ್ನು ಸೋಲಿಸಿದ್ದೇವೆ. 220 ಕೋಟಿ ಲಸಿಕೆಗಳು ನಿಮ್ಮ ಮೊಬೈಲ್‌ನಲ್ಲಿ ಡಿಜಿಟಲ್ ಮಾದರಿಯಲ್ಲಿ ಪ್ರಮಾಣೀಕರಿಸಲ್ಪಟ್ಟಿವೆ. ಅಭಿವೃದ್ಧಿ ಹೊಂದಿದ ಪಾಶ್ಚಿಮಾತ್ಯ ದೇಶಗಳು ಸೇರಿದಂತೆ ವಿಶ್ವದ ಯಾವುದೇ ದೇಶವು ಇದನ್ನು ಮಾಡಲು ಸಾಧ್ಯವಾಗಿಲ್ಲ.

ಇತರ ಸಮಸ್ಯೆಗಳೂ ಇವೆ. ನಾನು ಸಂಸದನಾಗಿದ್ದಾಗ ಯಾರಿಗಾದರೂ 50 ಅಡುಗೆ ಅನಿಲ ಸಂಪರ್ಕ ನೀಡಬಹುದಿತ್ತು. ಮತ್ತು ಈಗ 150 ಮಿಲಿಯನ್ ಅನಿಲ ಸಂಪರ್ಕಗಳನ್ನು ಅಗತ್ಯವಿರುವ ಕುಟುಂಬಗಳಿಗೆ ನೀಡಲಾಗಿದೆ. ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿರುವ ಈ ಪ್ರಮಾಣವನ್ನು  ನೋಡಿ. ಆದರೂ ನಮ್ಮ ಅಭಿವೃದ್ಧಿ ಸೂಚ್ಯಂಕದತ್ತ ಬೆರಳು ಮಾಡಿ ತೋರಿಸಲು ನಾವು ಜನರಿಗೆ ಅವಕಾಶ ನೀಡುತ್ತೇವೆ. ಯುವ ಮನಸ್ಸುಗಳು ಅಂತಹವರನ್ನು ವಾಸ್ತವ ಸಂಗತಿಗಳ ಮೂಲಕ ಪ್ರಶ್ನಿಸಬೇಕು. ಇದು ನಮ್ಮ ದೇಶ, ನಮ್ಮ ಸಾಧನೆ, ನಮ್ಮ ಗೆಲುವು. ನಮ್ಮಲ್ಲಿ ಸ್ಫೂರ್ತಿಯೇ ಇರದ ಕೆಲವರು ಇವುಗಳನ್ನು ವಿಫಲಗೊಳಿಸಲು ನಾವು ಬಿಡುವುದಿಲ್ಲ.

ಸ್ನೇಹಿತರೇ ನಾನು ನನ್ನ ಎರಡು ಆಲೋಚನೆಗಳನ್ನು ಇಲ್ಲಿರುವ ಯುವ ಮನಸ್ಸುಗಳೊಂದಿಗೆ ಮತ್ತು ಹೊರಗೆ ಪ್ರೇಕ್ಷಕರಾಗಿರುವವರೊಂದಿಗೆ ಹಂಚಿಕೊಳ್ಳುತ್ತೇನೆ.

ಎಂದಿಗೂ ವಿಸರ್ಜನೆಯಾಗದ, ಶಾಶ್ವತವಾದ, ಹಿರಿಯರ ಸದನವಾದ ರಾಜ್ಯಸಭೆಗೆ ನಾನು ಸಭಾಪತಿ. ಅಧ್ಯಕ್ಷ, ಈಗ ನಮಗೆ ಒಂದು ಮಾದರಿ ಇದೆ. ಸಂವಿಧಾನ ರಚನಾ ಸಭೆಯು ಮೂರು ವರ್ಷಗಳ ಕಾಲ ಚರ್ಚೆಯಲ್ಲಿ ತೊಡಗಿತು, ನೀವು ಅಲ್ಲಿ ಯಾವುದೇ ಅಡ್ಡಿ, ಯಾವುದೇ ಗೊಂದಲ ನೋಡಿದ್ದೀರಾ, ಯಾರಾದರೂ ಸದನದ ಬಾವಿಗೆ ಹೋಗಿದ್ದನ್ನು ನೋಡಿದ್ದೀರಾ, ಇಲ್ಲ.

ನಮ್ಮ ಸಂಸ್ಥಾಪಕರು, ಸಂವಿಧಾನ ರಚನಾಕಾರು ಯಾವುದೇ ಘೋಷಣೆಗಳನ್ನು ಕೂಗದೆ, ಗೊಂದಲಕ್ಕೀಡಾಗದೆ, ಸದನದ ಬಾವಿಗೆ ಹೋಗದೆ, ಸಭಾಪತಿಗೆ ಸವಾಲು ಹಾಕದೆ ಸಂವಿಧಾನಾತ್ಮಕ ವಿಷಯಗಳು, ವಿವಾದಾತ್ಮಕ ವಿಷಯಗಳು, ಸಮಸ್ಯೆಗಳ ಬಗ್ಗೆ ನಿರ್ಧರಿಸುವುದಾದರೆ, ನಾವು ಈಗ ಅದನ್ನು ಏಕೆ ಮಾಡಬೇಕು? ಈ ಪ್ರಜಾಪ್ರಭುತ್ವದ ಮಂದಿರವು ಸಂವಾದ, ಚರ್ಚೆ ಮತ್ತು ಸಮಾಲೋಚನೆಗಾಗಿ ಇದೆ. ಇದಿರುವುದು ದದ್ದಲ ಮತ್ತು ಅಡಚಣೆ ಮಾಡುವುದಕ್ಕೆ ಅಲ್ಲ. ಈ ನಡವಳಿಕೆಯ ಬಗ್ಗೆ ನಿಮ್ಮಲ್ಲಿ ಯಾವುದೇ ಪ್ರತಿಕ್ರಿಯೆ ಉಂಟಾಗುವುದಿಲ್ಲ ಎಂದು ನನಗೆ ಆಶ್ಚರ್ಯವಾಗುತ್ತದೆ. ಇದರ ಬಗ್ಗೆ ಯಾವುದೇ ಪತ್ರಿಕೆಯ ಸಂಪಾದಕೀಯದಲ್ಲಿ ಬಂದಿಲ್ಲ, ಬುದ್ಧಿಜೀವಿಗಳು ಮತ್ತು ಪತ್ರಕರ್ತರು ಅದರ ಬಗ್ಗೆ ಮಾತನಾಡುವುದನ್ನು ನಾನು ನೋಡಿಲ್ಲ, ಈ ಬಗ್ಗೆ ಜನರ ಚಳುವಳಿಯನ್ನು ನಾನು ನೋಡಿಲ್ಲ. ಈ ದೇಶದ ಸಾರ್ವಜನಿಕರು ಸದನದಲ್ಲಿ ಅಡ್ಡಿಪಡಿಸುವುದನ್ನು ಹೇಗೆ ಅನುಮೋದಿಸುತ್ತಾರೆ?

ತೆರಿಗೆದಾರರ ಕೋಟ್ಯಂತರ ಹಣ ಪ್ರತಿ ದಿನದ ಕಾರ್ಯಚಟುವಟಿಕೆಗೆ ಖರ್ಚಾಗುತ್ತದೆ. ಸಂಸತ್ತು ಎಂದರೆ ಕಾರ್ಯಾಂಗವನ್ನು ಹೊಣೆಗಾರರನ್ನಾಗಿ ಮಾಡುವುದು, ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡುವುದು. ಆದ್ದರಿಂದ ಪ್ರಜಾಪ್ರಭುತ್ವ, ಸಂಸತ್ತು ಮತ್ತು ಶಾಸಕಾಂಗದ ದೇವಾಲಯಗಳ ಶುದ್ಧತೆ ಮತ್ತು ಪಾವಿತ್ರ್ಯವು ಹಾಳಾಗದಂತೆ ಪರಿಸರ ವ್ಯವಸ್ಥೆಯನ್ನು ರಚಿಸಲು ಪ್ರತಿಯೊಂದು ಸಂವಹನ ವಿಧಾನದ ಮೂಲಕ, ಸಾಮಾಜಿಕ ಮಾಧ್ಯಮ ಅಥವಾ ಇತರ ಯಾವುದೇ ವಿಧಾನದಲ್ಲಿ ಸಹಾಯ ಮಾಡಲು ನಾನು ನಿಮ್ಮೆಲ್ಲರಲ್ಲಿ ಮನವಿ ಮಾಡುತ್ತೇನೆ. ಅಲ್ಲಿ ನಾವು ಚರ್ಚೆ, ಸಂವಾದ, ಮಾತುಕತೆ ಮತ್ತು ಚರ್ಚೆ ನಡೆಸೋಣ. ಇದು ಅಭಿವ್ಯಕ್ತಿಗಳ ಮುಕ್ತ ವಿನಿಮಯದ ಸ್ಥಳವಾಗಿದೆ. ನನಗೆ ನಿಮ್ಮ ಬೆಂಬಲ ಬೇಕು. ನನಗೆ ಯುವ ಮನಸ್ಸುಗಳ ಬೆಂಬಲ ಬೇಕು ಮತ್ತು ನೀವು ಅದನ್ನು ಮಾಡಲು ನಿರ್ಧರಿಸಿದರೆ, ಅದು ಜನಾಂದೋಲನವಾಗುತ್ತದೆ ಎಂದು ನನಗೆ ತಿಳಿದಿದೆ. ಅದಕ್ಕಾಗಿಯೇ ಜನಪ್ರತಿನಿಧಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ.

ಮತ್ತು ನಿಮ್ಮನ್ನು ಅಲ್ಲಿಗೆ ಕಳುಹಿಸುವ ಜನರು, ಕಾರ್ಯಕ್ಷಮತೆಗಾಗಿ ನಿಮ್ಮ ಕಡೆಗೆ ನೋಡುವ ಜನರು, ಅಡ್ಡಿ ಅಥವಾ ಅಡಚಣೆಯನ್ನು ಅನುಮೋದಿಸುವುದಿಲ್ಲ.

ಪ್ರಜಾಪ್ರಭುತ್ವದ ಮಂದಿರದ ಶುದ್ಧತೆಯನ್ನು ಕಾಪಾಡುವುದು ನನ್ನ ದುರದೃಷ್ಟಕರವಾದ ಆದರೆ ಸಾಂವಿಧಾನಿಕ ಬಾಧ್ಯತೆಯ ಕೆಲಸವಾಗಿದೆ. ನಾನು ತುಂಬಾ ತಾಳ್ಮೆಯ ಮನುಷ್ಯ. ನಾನು ತುಂಬಾ ಮನವೊಲಿಸುತ್ತೇನೆ. ಆದರೆ ನಾನು ಭಾರತೀಯ ಸಂವಿಧಾನಕ್ಕೆ ಧಕ್ಕೆ ತರಬಹುದೇ?  ಮ್ಮ ಆಕಾಂಕ್ಷೆಗಳಿಗೆ ಧಕ್ಕೆ ಮಾಡಬಹುದೇ? ನಾನು ನಿಮ್ಮ ಕನಸುಗಳನ್ನು ಕಮರಿಸಬಹುದೇ? ನಾನು ನಿಮ್ಮ ಕಾಲಾಳಾಗುತ್ತೇನೆ. ಆದರೆ ಅದಕ್ಕಾಗಿ ನೀವು ಮುಂದೆ ಬರಬೇಕು ಎಂದು ನಾನು ಬಯಸುತ್ತೇನೆ ಮತ್ತು ನಾನು ನಿಮ್ಮಿಂದ ನಿರೀಕ್ಷಿಸುವುದು ಇದನ್ನೇ.

ಎರಡನೆಯದಾಗಿ, ಕೆಲವು ಸಂಪಾದಕೀಯಗಳ ಬಗ್ಗೆ ನಾನು ಪ್ರತಿಕ್ರಿಯಿಸುತ್ತೇನೆ. ಕ್ರಿಮಿನಲ್ ಮೊಕದ್ದಮೆಗಳಿಂದ ಸದಸ್ಯರನ್ನು ರಕ್ಷಿಸಲು ಸಂವಿಧಾನದ 105 ನೇ ವಿಧಿಯಲ್ಲಿ ಅವಕಾಶವಿದೆ. ಇದೊಂದು ದೊಡ್ಡ ಸವಲತ್ತು. ಸಂಸದರೊಬ್ಬರು ಏನೇನೋ ಮಾತನಾಡುತ್ತಾರೆ ಮತ್ತು 140 ಕೋಟಿ ಜನರಿಗೆ ನೋವುಂಟು ಮಾಡುತ್ತಾರೆ, ಆದರೂ, ಸಂವಿಧಾನವು ನ್ಯಾಯಾಲಯಕ್ಕೆ ಹೋಗುವಂತಿಲ್ಲ ಎಂದು ಹೇಳುತ್ತದೆ. ಮಾನನಷ್ಟ ಮೊಕದ್ದಮೆ ಹಾಕುವಂತಿಲ್ಲ, ಕ್ರಿಮಿನಲ್ ಮೊಕದ್ದಮೆ ಹೂಡುವಂತಿಲ್ಲ ಎಂದು ಹೇಳುತ್ತದೆ. ಅದು ಸಂಸತ್ತಿನ ಸದಸ್ಯರಿಗೆ ನೀಡಿದ ಅಭಿವ್ಯಕ್ತಿಯ ಸವಲತ್ತು. ಆದರೆ ಈ ಸವಲತ್ತಿಎಗೆ ಯಾವುದೇ  ಜವಾಬ್ದಾರಿಯಿಲ್ಲವೇ, ಹೊಣೆಗಾರಿಕೆಯಿಲ್ಲವೇ? ಈ ಸವಲತ್ತು ಸದನದಲ್ಲಿ ಏನನ್ನಾದರೂ ಹಂಚಿಕೊಳ್ಳಲು ಪರವಾನಗಿಯಾಗಿದೆಯೇ? ಇಲ್ಲ.

ಸಂಸತ್ತು 140 ಕೋಟಿ ಜನರ ಘನತೆಯನ್ನು ಕಾಪಾಡಬೇಕು, ಆದ್ದರಿಂದ ಅದು ಯಾವುದೇ ಪರಿಶೀಲಿಸದ ಮಾಹಿತಿಯ, ಆರೋಪಗಳ, ನಿರ್ಲಕ್ಷ್ಯದ ಗೊಡ್ಡುಹರಟೆಗಳ ಅಖಾಡಾ ಅಥವಾ ಡಂಪಿಂಗ್ ಸ್ಥಳವಲ್ಲ.‌

ಆದ್ದರಿಂದ ನಾನು ಒಂದು ಮನವಿಯನ್ನು ಮಾಡಿದ್ದೇನೆ, ಯಾವುದೇ ಮಾಹಿತಿಯನ್ನು ಸದನದಲ್ಲಿಡಬಹುದು, ಅದು ಸಂಪೂರ್ಣವಾಗಿರಬೇಕು ಮತ್ತು ಅಭಿವ್ಯಕ್ತಿಪೂರ್ಣವಾಗಿರಬೇಕು. ಅದು ಪ್ರಜಾಪ್ರಭುತ್ವದ ಪ್ರಜ್ಞೆ. ಆದರೆ ಇದು ಒಂದು ಷರತ್ತಿನೊಂದಿಗೆ ಇರುತ್ತದೆ. ಅದೆಂದರೆ, ನೀವು ಆ ಮಾಹಿತಿಯನ್ನು ದೃಢೀಕರಿಸಬೇಕು. ನೀವು ಮಾಹಿತಿಯ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಮತ್ತು ಅದು ತಪ್ಪೆಂದು ಕಂಡುಬಂದರೆ, ನಾವು ಸಂಸತ್ತಿನಲ್ಲಿ 'ಹಕ್ಕು ಚ್ಯುತಿ' ಎಂಬ ವ್ಯವಸ್ಥೆಯನ್ನು ಹೊಂದಿದ್ದೇವೆ ಎಂಬುದು ತಿಳಿದಿರಬೇಕು.

ಯುವ ಮನಸ್ಸುಗಳು, ನನ್ನ ಪತ್ರಕರ್ತ ಮಿತ್ರರು ಇದನ್ನು ಅರ್ಥಮಾಡಿಕೊಳ್ಳಬೇಕೆಂದು ನಾನು ಬಯಸುತ್ತೇನೆ. ನಾನು ಕೆಲವು ಸಂಪಾದಕೀಯಗಳನ್ನು ನೋಡಿದ್ದೇನೆ ಮತ್ತು ಅವುಗಳಿಂದ ನೋವು ಅನುಭವಿಸಿದ್ದೇನೆ. ಅವರು ಸಂವಿಧಾನ ಸಭೆಯ ಚರ್ಚೆಗಳನ್ನು ನೋಡಬೇಕು. ಅವರು ಜಾಗತಿಕ ಸನ್ನಿವೇಶವನ್ನು ನೋಡಬೇಕು. ಹಕ್ಕು ಚ್ಯುತಿಗಾಗಿ ಯಾರನ್ನಾದರೂ ನಿಷೇಧಿಸವುದು ಹೋಗುವುದು ಅಭಿವ್ಯಕ್ತಿಗೆ ಅಡ್ಡಿಯಾಗುವುದಿಲ್ಲ. ಇದು ದೃಢೀಕರಿಸದ ಮತ್ತು ನಿರ್ಲಕ್ಷ್ಯದ ಮಾಹಿತಿಯನ್ನು ಡಂಪ್‌ ಮಾಡಲು ಸಂಸತ್ತಿನ ವೇದಿಕೆಯನ್ನು ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯುತ್ತಿದೆ.

ಇದರ ಬಗ್ಗೆ ಗಂಭೀರವಾಗಿ ಯೋಚಿಸಬೇಕೆಂದು ನಾನು ನಿಮ್ಮೆಲ್ಲರಲ್ಲಿ ಮನವಿ ಮಾಡುತ್ತೇನೆ. ನನ್ನ ಯುವ ಸ್ನೇಹಿತರೇ, ಎರಡು ಸರಳ ಅಂಶಗಳ ಬಗ್ಗೆ ಮಾತನಾಡಿ ನನ್ನ ಮಾತು ಮುಗಿಸುತ್ತೇನೆ. ನಮ್ಮಲ್ಲಿ ದೃಢವಾದ ನ್ಯಾಯಾಲಯ ವ್ಯವಸ್ಥೆ ಇದೆ. ಗೌರವಾನ್ವಿತ ಪ್ರಧಾನ ಮಂತ್ರಿ ಸೇರಿದಂತೆ ಉನ್ನತ ಮತ್ತು ಶಕ್ತಿಶಾಲಿಗಳಿಗೆ ವಿಷಯಗಳ ಅರಿವಿದೆ. ಎರಡು ದಶಕಗಳ ಕಾಲ, ಈ ಸಮಸ್ಯೆಯನ್ನು ನ್ಯಾಯಾಂಗ ವಲಯದಲ್ಲಿ ಚರ್ಚಿಸಲಾಯಿತು, ಎಲ್ಲಾ ಹಂತಗಳಲ್ಲಿ ಕೂಲಂಕಷವಾಗಿ ತನಿಖೆ ನಡೆಸಲಾಯಿತು. ದೇಶದ ಸರ್ವೋಚ್ಛ ನ್ಯಾಯಾಲಯ, ಅತಿದೊಡ್ಡ ಪ್ರಜಾಪ್ರಭುತ್ವಗಳ ಅತ್ಯುನ್ನತ ನ್ಯಾಯಾಲಯ 2022 ರಲ್ಲಿ ಅಂತಿಮವಾಗಿ ತೀರ್ಪು ನೀಡಿತು ಮತ್ತು ಒಂದು ಸಾಕ್ಷ್ಯಚಿತ್ರದ ಮೂಲಕ ಕಥೆಯೊಂದನ್ನು ತೇಲಿಬಿಡಲಾಗಿದೆ. ಇದು ಅಭಿವ್ಯಕ್ತಿ ಎಂದು ಕೆಲವರು ಹೇಳುತ್ತಾರೆ. ಹಾಗಾದರೆ ಅಭಿವ್ಯಕ್ತಿಯ ಹೆಸರಿನಲ್ಲಿ ನೀವು ಸುಪ್ರೀಂ ಕೋರ್ಟ್‌ ಅನ್ನು ಧಿಕ್ಕರಿಸಬಹುದೇ. ಎರಡು ದಶಕಗಳ ಸಂಪೂರ್ಣ ತನಿಖೆಯನ್ನು ನೀವು ಧಿಕ್ಕರಿಸಬಹುದೇ? ಇದು ಬೇರೆ ರೀತಿಯ ರಾಜಕೀಯವಾಗಿದೆ. ಜನರು ಬೇರೆ ರೀತಿಯಲ್ಲಿ ರಾಜಕೀಯವನ್ನು ಮಾಡಲು ಆರಂಭಿಸಿದಾಗ, ಇಲ್ಲಿರುವ ಮತ್ತು ಹೊರಗಿರುವ ಯುವ ಮನಸ್ಸುಗಳು ಅವರಿಗೆ ಸವಾಲು ಹಾಕಲು ಬೌದ್ಧಿಕವಾಗಿ ಸಜ್ಜುಗೊಂಡಿವೆ.

ಯಾರೋ ಒಬ್ಬರು ಸ್ವಲ್ಪ ಹಣದ ಬಲವನ್ನು ಬಳಸುತ್ತಾರೆ, ಅವರಿಗೆ ಕೆಲವು ಬೆಂಬಲಿಗರಿದ್ದಾರೆ, ಅವರಿಗೆ ಕೆಲವು ಫಲಾನುಭವಿಗಳಿದ್ದಾರೆ, ಅವರಿಗೆ ಕೆಲವು ಹಣಕಾಸಿನ ಬೆಂಬಲ ನೀಡುವವರಿದ್ದಾರೆ ಮತ್ತು ಅವರು ನಮ್ಮ ದೇಶದ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಾರೆ. ವಿವೇಕವಿರುವ ಮನಸ್ಸು ನಮ್ಮನ್ನು ನೆರೆಹೊರೆಯವರಿಲ್ಲದ ದಕ್ಷಿಣದ ದೇಶದೊಂದಿಗೆ ಹೇಗೆ ಹೋಲಿಸುತ್ತದೆ? ಎಂದು ನನಗೆ ಗಾಬರಿಯಾಯಿತು, ನೋವು ಅನುಭವಿಸಿದೆ.

ಆದ್ದರಿಂದ ನೀವು ಈ ದೇಶವನ್ನು 2047 ಕ್ಕೆ ಕೊಂಡೊಯ್ಯಬೇಕಾದರೆ, ನಮ್ಮ ದೇಶದ ಪಿತಾಮಹರ ನಂಬಿಕೆಯನ್ನು ಸಂರಕ್ಷಿಸಬೇಕಾದರೆ, ದಯವಿಟ್ಟು ಎಚ್ಚರದಿಂದಿರಿ ಎಂದು ನಾನು ನಿಮಗೆ ಮನವಿ ಮಾಡುತ್ತೇನೆ. ಇದಕ್ಕೆ ವಿರುದ್ಧವಾಗಿ ರಾಜಕೀಯವನ್ನು ಮಾಡುವವರ ವಿರುದ್ದ ಹೋರಾಡಬೇಕು, ಅವರನ್ನು ತಟಸ್ಥಗೊಳಿಸಬೇಕು ಮತ್ತು ಅವರು ನಿಮ್ಮ ತರ್ಕಸಮ್ಮತವಾದ ಪ್ರಶ್ನೆಯನ್ನು ಎದುರಿಸಬೇಕು.

ಇಲ್ಲಿಗೆ ಬಂದಿರುವುದು ನನಗೆ ಮತ್ತೊಮ್ಮೆ ಸಂತೋಷ ಮತ್ತು ಆನಂದ ನೀಡಿದೆ. ಇದು ಎಂದಿಗೂ ನೆನಪಿನಲ್ಲುಳಿಯುವ ಸಂದರ್ಭವಾಗಿದೆ. ದೆಹಲಿಯಲ್ಲಿ ನನ್ನ ಅತಿಥಿಗಳಾಗಲು ಮತ್ತು ದೆಹಲಿ ಹಾಗೂ ಸಂಸತ್ತನ್ನು ನೋಡಲು ಬರುವ ಮದ್ರಾಸ್‌ ಐಐಟಿಯನ್ನರ ಗುಂಪಿಗೆ ಆತಿಥ್ಯ ವಹಿಸಲು ನಾನು ತುಂಬಾ ಸಂತೋಷಪಡುತ್ತೇನೆ.

ತುಂಬಾ ಧನ್ಯವಾದಗಳು.

*****

 

 

 


(Release ID: 1903278) Visitor Counter : 123


Read this release in: English , Urdu , Hindi , Tamil