ಪ್ರಕಟಣಾ ದಿನಾಂಕ:
24 FEB 2023 1:34PM by PIB Bengaluru
ಗಯಾನಾ ಸಹಕಾರಿ ಗಣರಾಜ್ಯದ ಉಪಾಧ್ಯಕ್ಷರಾದ ಡಾ ಭರ್ರತ್ ಜಗ್ದೇವ್ ಅವರು ಇಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದರು.
ರಾಷ್ಟ್ರಪತಿ ಭವನಕ್ಕೆ ಡಾ ಜಗ್ದೇವ್ ಅವರನ್ನು ಸ್ವಾಗತಿಸಿದ ರಾಷ್ಟ್ರಪತಿಗಳು ಉಭಯ ಕುಶಲೋಪರಿ ನಡೆಸಿದರು. ಗಯಾನಾ ಜೊತೆಗಿನ ಸಂಬಂಧಗಳಿಗೆ ಭಾರತವು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ ಎಂದು ಹೇಳಿದರು. ಗಯಾನಾ, ಕಳೆದ 180 ವರ್ಷಗಳಿಂದ ಭಾರತದ ಸಹೋದರ ಸಹೋದರಿಯರಿಗೆ ತಾಯ್ನಾಡಾಗಿದೆ. ಭಾರತ ಮತ್ತು ಗಯಾನಾವು ಭೌಗೋಳಿಕವಾಗಿ ಭಾರೀ ಅಂತರದಿಂದ ಬೇರ್ಪಟ್ಟಿದ್ದರೂ ಸಹ, ಭೂತಕಾಲದ ವಸಾಹತುಶಾಲಿ ಆಡಳಿತ, ಉಭಯ ದೇಶಗಳ ಕೃಷಿ ಮತ್ತು ಗ್ರಾಮೀಣ ಆಧಾರಿತ ಆರ್ಥಿಕತೆಗಳು ಮತ್ತು ಬಹುಸಾಂಸ್ಕೃತಿಕ ಸಮಾಜ ವ್ಯವಸ್ಥೆ ಮೊದಲಾದ ಅಂಶಗಳಲ್ಲಿ ಸಾಮ್ಯತೆಯನ್ನು ಹೊಂದಿವೆ.
ಭಾರತ ಮತ್ತು ಗಯಾನಾ ನಡುವಿನ ವ್ಯಾಪಾರವು ಪ್ರಗತಿಯ ಹಾದಿಯಲ್ಲಿದೆ ಎಂದು ರಾಷ್ಟ್ರಪತಿಗಳು ಈ ಸಂದರ್ಭದಲ್ಲಿ ಹೇಳಿದರು. 2021-22ರಲ್ಲಿ, ಕೋವಿಡ್ ಸಾಂಕ್ರಾಮಿಕ ರೋಗದ ಹೊರತಾಗಿಯೂ ದ್ವಿಪಕ್ಷೀಯ ವ್ಯಾಪಾರವು ಶೇಕಡಾ 300ರಷ್ಟು ಬೆಳವಣಿಗೆಯನ್ನು ಕಂಡಿದೆ. ದ್ವಿಪಕ್ಷೀಯ ವ್ಯಾಪಾರವನ್ನು ಮತ್ತಷ್ಟು ವೈವಿಧ್ಯಗೊಳಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು.
ಅಭಿವೃದ್ಧಿ ಪಾಲುದಾರಿಕೆಯು ಭಾರತ-ಗಯಾನಾ ಸಂಬಂಧಗಳ ಪ್ರಮುಖ ಆಧಾರಸ್ತಂಭವಾಗಿದೆ ಎಂದು ರಾಷ್ಟ್ರಪತಿಗಳು ಹೇಳಿದರು. ನಮ್ಮ ಭಾರತೀಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರ- ITEC ಕಾರ್ಯಕ್ರಮದ ಅಡಿಯಲ್ಲಿ ಇದುವರೆಗೆ 640 ಕ್ಕೂ ಹೆಚ್ಚು ಗಯಾನದ ಸರ್ಕಾರಿ ಅಧಿಕಾರಿಗಳು ತರಬೇತಿ ಪಡೆದಿದ್ದಾರೆ ಎಂಬುದನ್ನು ವಿಶೇಷವಾಗಿ ಹೇಳಿದರು. ಅವರ ಭೇಟಿಯು ಭಾರತ ಮತ್ತು ಗಯಾನಾ ನಡುವಿನ ಸ್ನೇಹದ ಐತಿಹಾಸಿಕ ಬಾಂಧವ್ಯವನ್ನು ಇನ್ನಷ್ಟು ಗಾಢಗೊಳಿಸುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
*****