ಪರಿಸರ ಮತ್ತು ಅರಣ್ಯ ಸಚಿವಾಲಯ

ಬೆಂಗಳೂರಿನಲ್ಲಿ ನಡೆದ ಮೊದಲ ʻಪರಿಸರ ಹವಾಮಾನ ಸುಸ್ಥಿರ ಕಾರ್ಯಪಡೆ (ಇಸಿಎಸ್‌ಡಬ್ಲ್ಯೂಜಿ) ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಹರ್ದೀಪ್ ಸಿಂಗ್ ಪುರಿ ಅವರು 


ಗುರುತಿಸಲಾದ ಆದ್ಯತೆಗಳಿಗೆ ಸಂಬಂಧಿಸಿದ ಪ್ರಮುಖ ವಿಷಯಗಳಾದ  - ಭೂ ಅವನತಿಯನ್ನು ತಡೆಗಟ್ಟುವುದು, ಪರಿಸರ ವ್ಯವಸ್ಥೆಯ ಪುನಃಸ್ಥಾಪನೆಯನ್ನು ವೇಗಗೊಳಿಸುವುದು, ಜೀವವೈವಿಧ್ಯತೆಯನ್ನು ಸಮೃದ್ಧಗೊಳಿಸುವುದು, ಸಂಪನ್ಮೂಲ ದಕ್ಷತೆ ಮತ್ತು ಆವರ್ತನ ಆರ್ಥಿಕತೆ ಕುರಿತಾಗಿ ಜಿ 20 ದೇಶಗಳು ಚರ್ಚಿಸಿದವು

Posted On: 10 FEB 2023 6:45PM by PIB Bengaluru

ಬೆಂಗಳೂರಿನಲ್ಲಿ ನಡೆದ ʻಪರಿಸರ ಹವಾಮಾನ ಸುಸ್ಥಿರ ಕಾರ್ಯಪಡೆʼಯ (ಇಸಿಎಸ್‌ಡಬ್ಲ್ಯೂಜಿ) ಸಭೆಯ ಎರಡನೇ ದಿನವು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳು ಹಾಗೂ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಶ್ರೀ ಹರ್ದೀಪ್ ಸಿಂಗ್ ಪುರಿ ಅವರ ಉದ್ಘಾಟನಾ ಭಾಷಣದೊಂದಿಗೆ ಪ್ರಾರಂಭವಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು ಯೋಗಕ್ಷೇಮ ಮತ್ತು ಸಮೃದ್ಧಿಯನ್ನು ಉತ್ತೇಜಿಸುವ ಎಲ್ಲರನ್ನೂ ಒಳಗೊಂಡ, ಮಹತ್ವಾಕಾಂಕ್ಷೆಯ ಮತ್ತು ಕ್ರಿಯಾಧಾರಿತ ಕಾರ್ಯಸೂಚಿಗೆ ಬದ್ಧರಾಗಲು ಒಗ್ಗೂಡುವ ಸಮಯ ಬಂದಿದೆ ಎಂದು ಹೇಳಿದರು. ʻಪರಿಸರ ಹವಾಮಾನ ಸುಸ್ಥಿರ ಕಾರ್ಯಪಡೆʼಯ ಸಭೆಯ ಸಮಯದಲ್ಲಿನ ಈ ಚರ್ಚೆಗಳು, ನೈಸರ್ಗಿಕ ಸಂಪನ್ಮೂಲಗಳ ಬಗ್ಗೆ ಮಾಲೀಕತ್ವದಿಂದ ಮನಸ್ಥಿತಿಯನ್ನು ಬದಲಾಯಿಸಿ ಉಸ್ತುವಾರಿ ಮನಸ್ಥಿತಿಯನ್ನು ಬೆಳೆಸಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದರು.  

ಶ್ರೀ ಪುರಿ ಅವರ ಹೇಳಿಕೆಗಳನ್ನು ಪುನರುಚ್ಚರಿಸಿದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಕಾರ್ಯದರ್ಶಿ ಶ್ರೀಮತಿ ಲೀನಾ ನಂದನ್ ಅವರು ಪರಿಸರ, ಸುಸ್ಥಿರತೆ ಮತ್ತು ಹವಾಮಾನ ಬದಲಾವಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಸಮಗ್ರವಾಗಿ ಪರಿಹರಿಸುವ ನಿಟ್ಟಿನಲ್ಲಿ ʻಇಸಿಎಸ್‌ಡಬ್ಲ್ಯೂಜಿʼ ಮೂರು ಪ್ರಮುಖ ಆದ್ಯತೆಗಳ ಮೇಲೆ ಗಮನ ಕೇಂದ್ರೀಕರಿಸಲಿದೆ. ಜೊತೆಗೆ ʻಜಿ 20ʼ ಒಕ್ಕೂಟದ ಇತರ ಪ್ರಧಾನ ಕಾರ್ಯಪಡೆಗಳೊಂದಿಗೆ ನಿಕಟ ಸಹಯೋಗದೊಂದಿಗೆ ಕೆಲಸ ಮಾಡಲಿದೆ ಎಂದು ಹೇಳಿದರು. ಈ ನಿಟ್ಟಿನಲ್ಲಿ ಕೇಂದ್ರ ಸಚಿವರು ಮತ್ತು ಕಾರ್ಯದರ್ಶಿಯ ಹೇಳಿಕೆಗೆ ʻಟ್ರಾಯ್‌ಕಾʼ(ಇಂಡೋನೇಷ್ಯಾ ಮತ್ತು ಬ್ರೆಜಿಲ್) ಪ್ರತಿನಿಧಿಗಳು ಸಹಮತ ವ್ಯಕ್ತಪಡಿಸಿದರು.

 

ಉದ್ಘಾಟನಾ ಅಧಿವೇಶನದ ನಂತರ ಜೀವವೈವಿಧ್ಯತೆ ಮತ್ತು ಭೂ ಅವನತಿ ಕುರಿತು ತಾಂತ್ರಿಕ ಗೋಷ್ಠಿ ನಡೆಯಿತು. ಗಣಿಗಾರಿಕೆ ಪೀಡಿತ ಪ್ರದೇಶಗಳ ಪುನಃಸ್ಥಾಪನೆ, ಕಾಡ್ಗಿಚ್ಚು ಪೀಡಿತ ಪ್ರದೇಶಗಳ ಪುನಃಸ್ಥಾಪನೆ, ಪ್ರಭೇದ ಆಧಾರಿತ ಸಂರಕ್ಷಣೆಯ ಮೂಲಕ ಆವಾಸಸ್ಥಾನದ ಪರಿಸರ ಮರುಸ್ಥಾಪನೆ ಹಾಗೂ ʻಜಾಗತಿಕ ಜೀವವೈವಿಧ್ಯ ನೀತಿ -2022ʼಕ್ಕೆ ಅನುಗುಣವಾಗಿ ಜೀವವೈವಿಧ್ಯ ಸಂರಕ್ಷಣೆ ಮತ್ತು ಸಮೃದ್ಧೀಕರಣದ ಬಗ್ಗೆ ಗೋಷ್ಠಿಯಲ್ಲಿ ಚರ್ಚೆಗಳು ನಡೆದವು. ʻಮರುಭೂಮೀಕರಣ ಎದುರಿಸಲು ವಿಶ್ವಸಂಸ್ಥೆಯ ಒಡಂಬಡಿಕೆ (ಯುಎನ್‌ಸಿಸಿಡಿ), ʻಭಾರತೀಯ ಅರಣ್ಯ ನಿರ್ವಹಣಾ ಸಂಸ್ಥೆʼ (ಐಐಎಫ್ಎಂ), ʻಭಾರತೀಯ ವನ್ಯಜೀವಿ ಸಂಸ್ಥೆʼ (ಡಬ್ಲ್ಯುಐಐ) ಮತ್ತು ʻರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರʼ (ಎನ್‌ಬಿಎ) ಸೇರಿದಂತೆ ಹೆಸರಾಂತ ಜಾಗತಿಕ ಮತ್ತು ಭಾರತೀಯ ಸಂಸ್ಥೆಗಳ ಪ್ರಮುಖ ತಜ್ಞರು ಸಂಬಂಧಿತ ವಿಷಯಗಳ ಬಗ್ಗೆ ತಮ್ಮ ದೃಷ್ಟಿಕೋನಗಳನ್ನು ಹಂಚಿಕೊಂಡರು. 
 
2040ರ ವೇಳೆಗೆ ಅವನತಿ ಹೊಂದಿದ ಭೂಮಿಯ ಪ್ರಮಾಣವನ್ನು 50% ರಷ್ಟು ಕಡಿಮೆ ಮಾಡುವ ʻಜಿ 20ʼ ಗುರಿಯನ್ನು ಸಾಧಿಸುವ ಕ್ರಮವನ್ನು ವೇಗಗೊಳಿಸುವ ಬಗ್ಗೆ ಚರ್ಚೆಯಲ್ಲಿ ಗಮನ ಹರಿಸಲಾಯಿತು. ʻಭೂ ಅವನತಿಯ ಬಗ್ಗೆ ಜಿ-20 ನೀತಿʼಯನ್ನು ಬಳಸಿಕೊಂಡು ʻಭೂ ಅವನತಿಯನ್ನು ಕಡಿಮೆ ಮಾಡುವ ಜಿ-20 ಜಾಗತಿಕ ಉಪಕ್ರಮʼವನ್ನು (ಜಿಐಆರ್‌ಎಲ್‌ಡಿ) ವೇಗವರ್ಧನೆಗೊಳಿಸಿ ಈ ಗುರಿಗಳನ್ನು ಸಾಧಿಸುವ ಬಗ್ಗೆ ಚರ್ಚಿಸಲಾಯಿತು. ಅವನತಿ ಹೊಂದಿದ ಭೂದೃಶ್ಯಗಳ ಪರಿಸರ ಪುನಃಸ್ಥಾಪನೆಗಾಗಿ ಉತ್ತಮ ಕಾರ್ಯವಿಧಾನಗಳು, ತಂತ್ರಜ್ಞಾನ ಮತ್ತು ನಾವೀನ್ಯತೆಗಳನ್ನು ಹಂಚಿಕೊಳ್ಳುವಲ್ಲಿ ದೇಶಗಳ ನಡುವೆ ಸಹಯೋಗದ ಮಹತ್ವವನ್ನು ಕಾರ್ಯಪಡೆಯು ಒತ್ತಿಹೇಳಿತು. ಇದರ ನಂತರ ಜಿ 20 ದೇಶಗಳು, ಆಹ್ವಾನಿತ ದೇಶಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ವಿಷಯ ತಜ್ಞರ ಪ್ರತಿನಿಧಿಗಳು ಒಂದು ಸುತ್ತಿನ ಚರ್ಚೆ ನಡೆಸಿದರು. ಅವನತಿಹೊಂದಿದ ಭೂದೃಶ್ಯಗಳ ಪರಿಸರ-ಪುನಃಸ್ಥಾಪನೆಯ ಬಗ್ಗೆ ಆಸಕ್ತಿದಾಯಕ ಚರ್ಚೆಗೆ ಅಧಿವೇಶನ ಸಾಕ್ಷಿಯಾಯಿತು. 

ಸಂಪನ್ಮೂಲ ದಕ್ಷತೆ ಮತ್ತು ಆವರ್ತನ ಆರ್ಥಿಕತೆಯನ್ನು ಉತ್ತೇಜಿಸುವ ತಾಂತ್ರಿಕ ಗೋಷ್ಠಿಯೊಂದಿಗೆ ದಿನದ ದ್ವಿತೀಯಾರ್ಧವು ಪ್ರಾರಂಭವಾಯಿತು. ತಾಂತ್ರಿಕ ಸಹಕಾರವನ್ನು ಹೆಚ್ಚಿಸಲು, ವಿಚಾರಗಳ ವಿನಿಮಯಕ್ಕಾಗಿ ಮತ್ತು ಅಪಾಯರಹಿತ ಹಣಕಾಸು ಕ್ರೋಢೀಕರಣಕ್ಕಾಗಿ ಪ್ರಮುಖ ಕೈಗಾರಿಕೆಗಳ ನಡುವೆ ಜಾಗತಿಕ ಪಾಲುದಾರಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ʻಜಿ 20 ಸಂಪನ್ಮೂಲ ದಕ್ಷತೆ ಮತ್ತು ಆವರ್ತನ ಆರ್ಥಿಕ ಉದ್ಯಮ ಒಕ್ಕೂಟʼವನ್ನು ರಚಿಸುವ ಬಗ್ಗೆ ಪ್ರತಿನಿಧಿಗಳು ಚರ್ಚಿಸಿದರು. ಉಕ್ಕು ವಲಯದಲ್ಲಿ ಆವರ್ತನೆಯನ್ನು ಉತ್ತೇಜಿಸುವ ಕರಡು ತಾಂತ್ರಿಕ ದಾಖಲೆಗಳ ಬಗ್ಗೆ ಚರ್ಚಿಸಲಾಯಿತು. ಇದರ ಭಾಗವಾಗಿ, ಹೊಸದಾಗಿ ಗಣಿಗಾರಿಕೆಯಿಂದ ತೆಗೆದ ನೈಸರ್ಗಿಕ ಸಂಪನ್ಮೂಲಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಜಾಗತಿಕವಾಗಿ ಉಕ್ಕು ತಯಾರಿಕೆಯಲ್ಲಿ ಮರುಬಳಕೆ ಪದಾರ್ಥದ ಪಾಲನ್ನು 30% ರಿಂದ 50% ಕ್ಕೆ ಹೆಚ್ಚಿಸುವ ಅಗತ್ಯವನ್ನು ಒತ್ತಿಹೇಳಲಾಯಿತು. 
 

A group of people sitting at a tableDescription automatically generated with medium confidence

ವಿಶ್ವದಾದ್ಯಂತ ದೊಡ್ಡ ಮಟ್ಟದಲ್ಲಿ ʻವಿಸ್ತೃತ ಉತ್ಪಾದಕ ಜವಾಬ್ದಾರಿʼ(ಇಪಿಆರ್) ಅನುಷ್ಠಾನದ ಬಗ್ಗೆ ಮತ್ತೊಂದು ಪ್ರಮುಖ ಚರ್ಚೆ ನಡೆಯಿತು. ಪ್ಲಾಸ್ಟಿಕ್ ಪ್ಯಾಕೇಜಿಂಗ್, ಇ-ತ್ಯಾಜ್ಯ, ತ್ಯಾಜ್ಯ ಟೈರ್‌ಗಳು ಮತ್ತು ತ್ಯಾಜ್ಯ ಬ್ಯಾಟರಿಗಳಿಗೆ ಸಂಬಂಧಿಸಿದಂತೆ ಭಾರತದ ಅತ್ಯುತ್ತಮ ಮಾರುಕಟ್ಟೆ ಆಧಾರಿತ ʻಇಪಿಆರ್ʼ ಕಾರ್ಯವಿಧಾನಗಳ ಬಗ್ಗೆ ಚರ್ಚಿಸಲಾಯಿತು. ಪದಾರ್ಥಗಳ ಬಳಕೆಯಲ್ಲಿ ಜೀವರಾಶಿಯ ಪಾಲನ್ನು ಹೆಚ್ಚಿಸುವ ತುರ್ತು ಅಗತ್ಯವನ್ನು ಆವರ್ತನ ಜೈವಿಕ ಆರ್ಥಿಕತೆಯ ಕುರಿತಾದ ಚರ್ಚೆಯಲ್ಲಿ ಒತ್ತಿ ಹೇಳಲಾಯಿತು. ʻಅಗ್ಗದ ಸಾರಿಗೆಗಾಗಿ ಸುಸ್ಥಿರ ಪರ್ಯಾಯʼ(ಎಸ್ಎಟಿಎಟಿ), ʻಗೋಬರ್ಧನ್ʼ ಮತ್ತು 20% ಎಥೆನಾಲ್ ಮಿಶ್ರಿತ ಪೆಟ್ರೋಲ್ ಕಾರ್ಯಕ್ರಮದ ಮೂಲಕ ಆವರ್ತನ ಜೈವಿಕ ಆರ್ಥಿಕತೆಯನ್ನು ಉತ್ತೇಜಿಸುವ ಭಾರತದ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಸಹ ಪ್ರಸ್ತುತಪಡಿಸಲಾಯಿತು. 
 

ದಿನದ ಕಾರ್ಯಕ್ರಮದ ಸಮಾರೋಪದಲ್ಲಿ ಜಿ 20 ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀಮತಿ ಈನಮ್ ಗಂಭೀರ್ ಅವರು ʻಲೈಫ್‌ʼ(Lifestyle for Environment-LiFE), ಮತ್ತು `ಹಸಿರು ಅಭಿವೃದ್ಧಿ ಒಪ್ಪಂದ’ದ ಬಗ್ಗೆ ಪ್ರಸ್ತುತಿಯನ್ನು ನೀಡಿದರು.  ಪರಿಸರ ಮತ್ತು ಹವಾಮಾನ ಬದಲಾವಣೆಯ ಗುರಿಗಳೊಂದಿಗೆ ನಂಟು ಹೊಂದಿರುವ ʻಅಭಿವೃದ್ಧಿ ಕಾರ್ಯಪಡೆ ಮತ್ತು ಇತರ ಕಾರ್ಯಪಡೆಗಳೊಂದಿಗೆ ʻಇಸಿಎಸ್‌ಡಬ್ಲ್ಯೂಜಿʼ ನಿಕಟವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಒತ್ತಿ ಹೇಳಿದರು.  ಇದರಿಂದ ಹವಾಮಾನ ಬದಲಾವಣೆ ಮತ್ತು ಪರಿಸರ ಅವನತಿಯನ್ನು ನಿಭಾಯಿಸಲು ಸಮಗ್ರ ಪರಿಹಾರಗಳನ್ನು ಒದಗಿಸಲು ಸಾಧ್ಯವಾಗಲಿದೆ ಎಂದರು. ಎಲ್ಲಾ ಹವಾಮಾನ ಮತ್ತು ಪರಿಸರ ಸಂಬಂಧಿತ ವಿಷಯಗಳ ಬಗ್ಗೆ ಸಮಗ್ರ ದೃಷ್ಟಿಕೋನವನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲಾ ಕಾರ್ಯಪಡೆಗಳ ನಡುವೆ ಸುಗಮ ಸಮನ್ವಯವನ್ನು ಸಾಧಿಸಲು ಕಾರ್ಯವಿಧಾನಗಳನ್ನು ಸಹ ಅಳವಡಿಸಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು. 
 

 

ಸಂಜೆ ನಡೆಯುವ ಭೋಜನಕೂಟದಲ್ಲಿ ಪ್ರತಿನಿಧಿಗಳು ಭಾಗವಹಿಸಲಿದ್ದು, ಅಲ್ಲಿ ಅವರು ಭಾರತದ ಸಾಂಪ್ರದಾಯಿಕ ಪಾಕಪದ್ಧತಿಗಳನ್ನು ಸವಿಯಲಿದ್ದಾರೆ. ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಪ್ರದರ್ಶನಗಳಿಗೆ ಗಣ್ಯರು ಸಾಕ್ಷಿಯಾಗಲಿದ್ದಾರೆ. ಕಾಲಾನಂತರದಲ್ಲಿ ʻಜಿ 20ʼ ಒಕ್ಕೂಟದ ಸಾಮೂಹಿಕ ಪ್ರಯತ್ನಗಳನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಸ್ಪಷ್ಟ ಫಲಿತಾಂಶಗಳನ್ನು ಪಡೆಯಲು ಜಿ 20 ವೇದಿಕೆಯ ಶಕ್ತಿಯನ್ನು ಬಳಸಿಕೊಳ್ಳಲು ಹಾಗೂ ಭವಿಷ್ಯದ ಅಧ್ಯಕ್ಷ ರಾಷ್ಟ್ರಗಳು ಇವುಗಳನ್ನು ಮುಂದಕ್ಕೆ ಕೊಂಡೊಯ್ಯುವ ಭರವಸೆಯೊಂದಿಗೆ ಸಭೆಯು ಸಂಪನ್ನಗೊಂಡಿತು. ಭಾರತ ಅಧ್ಯಕ್ಷತೆ ಅಡಿಯಲ್ಲಿ ಈ ನಿಟ್ಟಿನಲ್ಲಿ ತನ್ನ ಬದ್ಧತೆಯನ್ನು ʻಇಸಿಎಸ್‌ಡಬ್ಲ್ಯೂಜಿʼ ಪುನರುಚ್ಚರಿಸಿತು. 

****(Release ID: 1898165) Visitor Counter : 144


Read this release in: English , Urdu , Hindi