ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಸರಳೀಕರಣ, ಪ್ರೋತ್ಸಾಹ ಮತ್ತು ಭಾರತವನ್ನು ಚಲನಚಿತ್ರದ ತಾಣವಾಗಿ ಪ್ರಚಾರ ಮಾಡುವ ಕುರಿತು ಶಾಂಘೈ ಸಹಕಾರ ಸಂಸ್ಥೆ(ಎಸ್.ಸಿ.ಒ)ಯ ಚಲನಚಿತ್ರೋತ್ಸದ ಸಮಿತಿ ಚರ್ಚಿಸಿತು


ಭಾರತದಲ್ಲಿ ಚಲನಚಿತ್ರ ನಿರ್ಮಾಣವನ್ನು ಉತ್ತೇಜಿಸಲು ಪೂರಕ ಚಲನಚಿತ್ರ ವ್ಯವಸ್ಥೆಗಳನ್ನು ರೂಪಿಸುವ ಕಚೇರಿ ವಿವಿಧ ರಾಜ್ಯಗಳಲ್ಲಿ ರಿಯಾಯಿತಿಗಳನ್ನು ನೀಡಲಿದೆ: ಶ್ರೀ ಪೃಥುಲ್ ಕುಮಾರ್

ಚಿತ್ರಗಳ ಚಿತ್ರೀಕರಣಕ್ಕಾಗಿ ದಕ್ಷಿಣ ಭಾರತದ ನಿರ್ಮಾಪಕರನ್ನು ಉತ್ತರ ಭಾರತಕ್ಕೆ ಕರೆತರುವುದರಿಂದ ನಮ್ಮದು ನಿಜವಾದ ಅಖಿಲ ಭಾರತ  ಉದ್ಯಮವಾಗುತ್ತದೆ: ಶ್ರೀ ಅವಿನಾಶ್ ಧಾಕ್ನೆ

Posted On: 30 JAN 2023 2:17PM by PIB Bengaluru

ಮುಂಬೈನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ (ಎಸ್.ಸಿ.ಒ) ಚಲನಚಿತ್ರೋತ್ಸದ 4 ನೇ ದಿನವು ಭಾರತದಲ್ಲಿ ಚಲನಚಿತ್ರ ನಿರ್ಮಾಣ ಮತ್ತು ವ್ಯವಸ್ಥೆ ಸುಗಮಗೊಳಿಸುವ ಕುರಿತು ಪ್ಯಾನೆಲ್ ಚರ್ಚೆಯೊಂದಿಗೆ ಪ್ರಾರಂಭವಾಯಿತು. ಪ್ರಸಿದ್ಧ ನಿರ್ಮಾಪಕರಾದ ಶ‍್ರೀ ಆಶಿಶ್ ಸಿಂಗ್ ಮತ್ತು ಶ್ರೀ ಅರ್ಫಿ ಲಂಬಾ (ಬಾಂಬೆ ಬರ್ಲಿನ್ ಫಿಲ್ಮ್ ಪ್ರೊಡಕ್ಷನ್ಸ್), ಭಾರತ ಸರ್ಕಾರದ ಜಂಟಿ ಕಾರ್ಯದರ್ಶಿ (ಚಲನಚಿತ್ರಗಳು) ಮತ್ತು ನ್ಯಾಷನಲ್ ಫಿಲ್ಮ್ ಡೆವಲಪ್ಮೆಂಟ್ ಕಾರ್ಪೊರೇಷನ್ ಇದರ ವ್ಯವಸ್ಥಾಪಕ ನಿರ್ದೇಶಕ ಶ್ರೀ ಪೃಥುಲ್ ಕುಮಾರ್ ಮತ್ತು ಮಹಾರಾಷ್ಟ್ರ ಚಲನಚಿತ್ರ, ರಂಗಭೂಮಿ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ನಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಅವಿನಾಶ್ ಢಾಕ್ನೆ ಇವರುಗಳು ಪ್ಯಾನೆಲ್ ಚರ್ಚೆ ಸಮಿತಿಯಲ್ಲಿದ್ದರು.  

“ಫಿಲ್ಮ್ ಫೆಸಿಲಿಟೇಶನ್ ಆಫೀಸ್ (ಎಫ್.ಎಫ್.ಒ) ಶೂಟಿಂಗ್ ಸ್ಥಳಗಳ ಕ್ಯಾಟಲಾಗ್ ಅನ್ನು ಒದಗಿಸುತ್ತದೆ ಮತ್ತು ಭಾರತದಲ್ಲಿ ಚಲನಚಿತ್ರ ನಿರ್ಮಾಣವನ್ನು ಉತ್ತೇಜಿಸಲು ಮತ್ತು ಪ್ರೋತ್ಸಾಹಿಸಲು ವಿವಿಧ ರಾಜ್ಯಗಳಲ್ಲಿ ರಿಯಾಯಿತಿಗಳನ್ನು ನೀಡುತ್ತದೆ.“ ಎಂದು ಜಂಟಿ ಕಾರ್ಯದರ್ಶಿ ಶ್ರೀ ಪೃಥುಲ್ ಕುಮಾರ್ ಅವರು ಸಂಸ್ಥೆಯ ಪಾತ್ರವನ್ನು ವಿವರಿಸಿದರು.

   

ಶ್ರೀ ಅವಿನಾಶ್ ಧಾಕ್ನೆ ಅವರು ಮಾತನಾಡುತ್ತಾ, ಮಹಾರಾಷ್ಟ್ರದ ಅಮರಾವತಿ, ಮೆಲ್ಘಾಟ್‌ ನಂತಹ ಪರಿಚಯರಹಿತ ಪ್ರದೇಶಗಳಲ್ಲಿ ಚಿತ್ರೀಕರಣದ ಸ್ಥಳಗಳನ್ನು ಪ್ರಚಾರ ಮಾಡಲು ಇತರ ರಾಜ್ಯಗಳಿಗೆ ಮನವಿ ಮಾಡಿದರು. ಹಳ್ಳಿ ಚಿತ್ರೀಕರಣದ ಸ್ಥಳಗಳನ್ನು ಆಯ್ಕೆ ಮಾಡುವ ಮೂಲಕ ಗ್ರಾಮ ಪ್ರವಾಸೋದ್ಯಮವನ್ನು ಪುನರುಜ್ಜೀವನಗೊಳಿಸುವ ಕಲ್ಪನೆಯನ್ನು ಅವರು ವಿವರಿಸಿದರು. “ನಮ್ಮ ಉದ್ಯಮವನ್ನು ನಿಜವಾದ ಅಖಿಲ ಭಾರತ ಉದ್ಯಮವನ್ನಾಗಿ ಮಾಡಲು ನಗದು ಪ್ರೋತ್ಸಾಹ ಮತ್ತು ದಕ್ಷಿಣ ಭಾರತದ ನಿರ್ಮಾಪಕರನ್ನು ಉತ್ತರ ಭಾರತದ ರಾಜ್ಯಗಳಲ್ಲಿ ಚಿತ್ರೀಕರಣಕ್ಕೆ ಆಕರ್ಷಿಸಿ ಕರೆತರುವ ಅವಶ್ಯಕತೆಯಿದೆ” ಎಂದು ಅವರು ಹೇಳಿದರು.  

   

ಎಫ್‌.ಎಫ್‌.ಒ. ಒದಗಿಸುವ ಸೌಲಭ್ಯಗಳಾದ ವಿವಿಧ ರಿಯಾಯಿತಿಗಳು ಮತ್ತು ವಿವಿಧ ಸ್ಥಳಗಳ ಕ್ಯಾಟಲಾಗ್‌ಗಳು ಚಿತ್ರೀಕರಣವನ್ನು ನಿಖರ ಹಾಗೂ ಸುಲಭಗೊಳಿಸುವುದರಿಂದಾಗಿ ಇವುಗಳನ್ನು ನಿರ್ಮಾಪಕರು ಖಂಡಿತಾ ಬಯಸುತ್ತಾರೆ ಎಂದು ನಿರ್ಮಾಪಕ ಶ್ರೀ ಆಶಿಶ್ ಸಿಂಗ್ ಅವರು ಹೇಳಿದರು. ನಟ/ನಿರ್ದೇಶಕರ ಶುಲ್ಕ, ಸಿಬ್ಬಂದಿ ವೆಚ್ಚದ ಮೇಲಿನ ರಿಯಾಯಿತಿಗಳು ಇತ್ಯಾದಿಗಳ ಮೇಲೆ ರಿಯಾಯಿತಿಗಳನ್ನು ನೀಡುವ ಮೂಲಕ ಆಸ್ಟ್ರಿಯಾ ಮತ್ತು ಯು.ಕೆ. ದೇಶಗಳು ಹೇಗೆ ಆಕರ್ಷಕ ವಿದೇಶಿ ಚಿತ್ರೀಕರಣದ ಸ್ಥಳಗಳಾಗಿವೆ ಎಂಬುದನ್ನು ಅವರು ವಿವರಿಸಿದರು. ಉಭಯ ದೇಶಗಳ ನಡುವೆ ಸಹ-ಉತ್ಪಾದನೆಯನ್ನು ಉತ್ತೇಜಿಸಲು ಯು.ಕೆ. ಸರ್ಕಾರದೊಂದಿಗಿನ ತೆರಿಗೆ ಒಪ್ಪಂದಗಳನ್ನು ಬಳಸಿಕೊಳ್ಳುವಂತೆ ಶ್ರೀ ಆಶಿಶ್ ಸಿಂಗ್ ಅವರು ಸಲಹೆ ನೀಡಿದರು.

ಭಾರತವು ಎಲ್ಲಾ ರೀತಿಯ ಚಿತ್ರೀಕರಣದ ಸ್ಥಳಗಳನ್ನು ಹೊಂದಿದ್ದರೂ ಕೂಡಾ, ಉತ್ತರ ಭಾರತದ ಕೆಲವಡೆ ಹಾಗೂ ಈಶಾನ್ಯ ಭಾರತದಂತಹ ದೂರದ ಸ್ಥಳಗಳಲ್ಲಿ ಮೂಲಭೂತ ಮೂಲಸೌಕರ್ಯಗಳ ಕೊರತೆಯು ಇನ್ನೂ ಮುಂದುವರಿಯುತ್ತದೆ ಎಂದು ಶ‍್ರೀ ಅರ್ಫಿ ಲಂಬಾ ತಿಳಿಸಿದರು. ಆದ್ದರಿಂದ ಸುಧಾರಿತ ಸಾಗಾಟ ವ್ಯವಸ್ಥೆ(ಲಾಜಿಸ್ಟಿಕ್ಸ್), ಸಿಬ್ಬಂದಿ ಸೌಲಭ್ಯ ಇತ್ಯಾದಿಗಳ ರೂಪದಲ್ಲಿ ಚಿತ್ರೀಕರಣದ ಸುಗಮ ಹಾಗೂ ಸೌಕರ್ಯಗಳ ಸುಲಭ ಲಭ್ಯತೆಯನ್ನು ರೂಪಿಸುವ ಅಗತ್ಯವನ್ನು ಅವರು ವಿವರಿಸಿದರು.

ಭಾರತದಲ್ಲಿ ಚಲನಚಿತ್ರ ನಿರ್ಮಾಣದಲ್ಲಿ ವಿ.ಎಫ್.ಎಕ್ಸ್.ನ ಉದಯೋನ್ಮುಖ ಪಾತ್ರವನ್ನು ಶ್ರೀ ಪೃಥುಲ್ ಕುಮಾರ್  ಅವರು ದೃಶ್ಯಮೂಲಕ ತೋರಿಸುವುದರೊಂದಿಗೆ ಅಧಿವೇಶನವು ಮುಕ್ತಾಯವಾಯಿತು. ಇನ್ವೆಸ್ಟ್ ಇಂಡಿಯಾ ಪೋರ್ಟಲ್ ಅನ್ನು ಉತ್ತೇಜಿಸುವುದು, ವಿದೇಶಿ ರಾಯಭಾರ ಕಚೇರಿಗಳೊಂದಿಗೆ ಅದನ್ನು ಸಂಯೋಜಿಸುವುದು ಮತ್ತು ಭಾರತವನ್ನು ಚಿತ್ರೀಕರಣದ ತಾಣವಾಗಿ ಪ್ರಚಾರ ಮಾಡಲು ರಾಷ್ಟ್ರೀಯ ಏಕ ಗವಾಕ್ಷಿ ಅನುಮತಿಯನ್ನು ಒದಗಿಸುವಂತಹ ಸರ್ಕಾರದ ಕ್ರಮಗಳನ್ನು ಅವರು ಈ ಸಂದರ್ಭದಲ್ಲಿ ವಿವರಿಸಿದರು.

******


(Release ID: 1894818) Visitor Counter : 137


Read this release in: English , Hindi , Marathi , Tamil